
ಸಮಾಜಮುಖಿ ಪತ್ರಿಕೆಯ ವತಿಯಿಂದ ಇದೇ 2025ರ ನವೆಂಬರ್ 8 ಮತ್ತು 9 ಶನಿವಾರ-ಭಾನುವಾರಗಳಂದು ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ ಹೆಸರಿನಲ್ಲಿ ಸಾಹಿತ್ಯ ಸಂಭ್ರಮವೊಂದನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿ ನಡೆಸಲಾಗುತ್ತಿರುವ ಈ ಸಮಾವೇಶದಲ್ಲಿ ನಾಡಿನ ಎಲ್ಲ ಹಿರಿಯ-ಕಿರಿಯ ಸಾಹಿತಿ ಬರಹಗಾರರನ್ನು ಒಳಗೊಳ್ಳಲಾಗುತ್ತಿದೆ. ಅಂತೆಯೇ ಎಲ್ಲ ಸಾಹಿತ್ಯಾಸಕ್ತರು ಹಾಗೂ ಸಾಹಿತ್ಯದ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುತ್ತಿದೆ. ಆದರೆ ಯಾವುದೇ ಮಂತ್ರಿ-ಶಾಸಕ-ಅಧಿಕಾರಿಗಳನ್ನು ಅವರ ಹುದ್ದೆಯ ಕಾರಣಕ್ಕೆ ಕರೆಯುವುದಿಲ್ಲ. ವೈಯಕ್ತಿಕ ನೆಲೆಯಲ್ಲಿ ಹಾಗೂ ಸಾಹಿತ್ಯಾಸಕ್ತಿಯಿಂದ ಬರುವ ಯಾರಿಗೂ ತಡೆಯಿಲ್ಲ.
ಕಳೆದ ಎಂಟು ವರ್ಷಗಳಿಂದ ಸಮಾಜಮುಖಿ ಪ್ರಕಾಶನದಿಂದ ಹೊರಹೊಮ್ಮುತ್ತಿರುವ ಚಿಂತನಶೀಲ ಸಮಾಜಮುಖಿ ಮಾಸಪತ್ರಿಕೆ, ನಡೆದು ನೋಡು ಕರ್ನಾಟಕ ಕಾರ್ಯಕ್ರಮ, ಸಮಾಜಮುಖಿ ರಂಗಬಳಗ, ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತು, ಯುವಜನರಿಗಾಗಿ ವಿಚಾರಕ್ರಾಂತಿಯ ಹಗಲಿರುಳು ಮತ್ತು ಸತ್ಯಮೇವ ಜಯತೇ ಶಿಬಿರ ಕಾರ್ಯಾಗಾರಗಳು, ವಾರ್ಷಿಕ ಕಥಾಸ್ಪರ್ಧೆ, ವಾರ್ಷಿಕ ವೈಚಾರಿಕ ಲೇಖನ ಸ್ಪರ್ಧೆ, ಹಲವು ಪುಸ್ತಕ ಪ್ರಕಾಶನ ಹಾಗೂ ವಿಚಾರ ಸಂಕಿರಣಗಳು ಸಮಾಜಮುಖಿ ಬಳಗವನ್ನು ನಾಡಿನ ಅಂತಃಕರಣ ಹಾಗೂ ಸಾಕ್ಷಿ ಪ್ರಜ್ಞೆಗಳಾಗಿಸಿವೆ.
ಬಳಗದ ದಿಟ್ಟ ವೈಚಾರಿಕ ಹಾಗೂ ನಿಷ್ಪಕ್ಷಪಾತ ನಿಲುವುಗಳು ಶ್ಲಾಘನೆಗೆ ಹಾಗೂ ಎಲ್ಲರ ಗೌರವಕ್ಕೆ ಪಾತ್ರವಾಗಿವೆ. ವಿಶ್ವಾಸಾರ್ಹತೆಯ ಸೂಜಿಗಲ್ಲಾಗಿಸಿವೆ. ಆದಾಗ್ಯೂ ಕನ್ನಡ ಸಾಹಿತ್ಯ ಸಂದರ್ಭವನ್ನು ಮರು ವಿಶ್ಲೇಷಿಸಿ ಸೃಜನಶೀಲ ಹಾಗೂ ವೈಚಾರಿಕ ಸಾಹಿತ್ಯಗಳೆರಡರಲ್ಲಿ ತೊಡಗಿಸಿಕೊಂಡಿರುವ ಕನ್ನಡ ಬರಹಗಾರರಿಗೆ ಸ್ಫೂರ್ತಿ-ಚೈತನ್ಯ-ಇಂಬು ನೀಡುವಂತಹ ಮೂರ್ತ ವೇದಿಕೆಯೊಂದರ ಅಗತ್ಯವಿದೆ. ಸಾಹಿತ್ಯ ಸಮ್ಮೇಳನದ ನಿಜ ಅಗತ್ಯ ಮತ್ತು ಉದ್ದೇಶಗಳನ್ನು ಈಡೇರಿಸುವಂತಹ ಸಂಭ್ರಮವೊಂದನ್ನು ಆಯೋಜಿಸಬೇಕಿದೆ. ಕನ್ನಡದ ಎಲ್ಲ ಆರೋಗ್ಯವಂತ ಹಾಗೂ ಕ್ರಿಯಾಶೀಲ ಮನಸ್ಸುಗಳನ್ನು ವರ್ಷದಲ್ಲಿ ಒಮ್ಮೆಯಾದರೂ ಒಂದೆಡೆ ಸೇರಿಸಿ ಸಮಾಲೋಚನೆಗೆ ತೊಡಗಿಸಬೇಕಾಗಿದೆ. ಮುಂದಿನ ದಶಕಗಳಲ್ಲಿ ಕನ್ನಡ, ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ಬೆಳವಣಿಗೆ- ಸ್ಥಿತಿಗತಿ-ಸ್ಥಾನಮಾನಗಳನ್ನು ಚರ್ಚಿಸಬೇಕಾಗಿದೆ.
ಸಾಹಿತ್ಯ ಕೃಷಿ ಮತ್ತು ಜೀವನಾನುಭವದ ಅರ್ಹತೆಯ ಮೇಲೆಯೇ ಆಯ್ಕೆ ಮಾಡುವ, ಮನ್ನಣೆ ನೀಡುವ ಈ ಸಮ್ಮೇಳನದಲ್ಲಿ ಕನ್ನಡದ ಪ್ರಸ್ತುತ ಬಿಕ್ಕಟ್ಟುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸುವ ಉದ್ದೇಶವಿದೆ. ನಾಡಿನ ಹಿರಿಯ ಗಣ್ಯರೆಲ್ಲರು ಪಾಲ್ಗೊಳ್ಳುವ ಗೋಷ್ಠಿಗಳಲ್ಲಿ ವಿಷಯದ ವಿಷಮತೆಯ ಅನಾವರಣದ ಜೊತೆಗೆ ಪರಿಹಾರ ಗುರುತಿಸುವ ಸ್ಪಷ್ಟ ಯತ್ನದೆಡೆಗೆ ಚರ್ಚೆ ಆಯೋಜಿಸುವ ಗುರಿಯಿದೆ. ಮುಖ್ಯ ವೇದಿಕೆಯ ಜೊತೆಗೆ ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ಚರ್ಚೆ-ಕಾರ್ಯಾಗಾರ-ವಿಷಯ ಮಂಡನೆ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ವೈಚಾರಿಕ, ಸೃಜನಶೀಲ, ಶಾಸ್ತ್ರೀಯ, ಕನ್ನಡೇತರ ಹಾಗೂ ಸಾಹಿತ್ಯೇತರ ವಿಷಯಗಳ ಬಗ್ಗೆ ಗೋಷ್ಠಿ, ಕಮ್ಮಟ ಹಾಗೂ ಯುವ ಬರಹಗಾರರಿಗೆ ತರಬೇತಿ ಏರ್ಪಡಿಸಲಾಗುವುದು. ಸಾಹಿತ್ಯ ಸೃಷ್ಟಿಯನ್ನು ಕಟುವಾಗಿ ವಿಮರ್ಶೆ ಮಾಡುವ ಹಾಗೂ ಕಾಳು-ಜೊಳ್ಳನ್ನು ಬೇರ್ಪಡಿಸುವ ವಿಧಾನಕ್ಕೆ ಮನ್ನಣೆ ನೀಡಲಾಗುವುದು. ಸಾಹಿತಿಗಳಿಗೆ ಹಣೆಪಟ್ಟಿ ನೀಡುವ ಬದಲಿಗೆ ಅವರ ಪ್ರತಿಯೊಂದು ಕೃತಿಯ ಸ್ವತಂತ್ರ ಮೌಲ್ಯಮಾಪನ ಮಾಡಬೇಕೆನ್ನುವ ನಿಲುವಿಗೆ ಬದ್ಧವಾಗಿರುವುದು.
ಇಂತಹ ‘ಸಮಾಜಮುಖಿ’ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರಿಗೂ ಸೂಕ್ತ ವ್ಯವಸ್ಥೆ ಮಾಡಲು ಮುಂಚಿತವಾಗಿ ಆನ್‌ಲೈನ್ ನೋಂದಣಿ ಕಡ್ಡಾಯ ಮಾಡಿದೆ. ಭಾಗವಹಿಸುವಿಕೆ, ಎರಡು ದಿನ ಊಟ, ತಿಂಡಿ, ಕಾಫಿ ಇತ್ಯಾದಿಗಳ ಮೇಲಿನ ವೆಚ್ಚಕ್ಕೆ ಎಲ್ಲ ಪ್ರತಿನಿಧಿಗಳಿಗೆ ರೂ.300 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಆಹ್ವಾನಿತ ಗಣ್ಯ-ಹಿರಿಯ ಸಾಹಿತಿಗಳಿಗೆ ಪ್ರವಾಸ ವೆಚ್ಚ ಹಾಗೂ ಭತ್ಯೆ ನೀಡಲಾಗುವುದು. ಬೆಂಗಳೂರಿನ ಹೊರಗಿನ ಆಹ್ವಾನಿತ ಗಣ್ಯರಿಗೆ ವಸತಿ ಸೌಲಭ್ಯ ಒದಗಿಸಲಾಗುವುದು. ಕನ್ನಡ ಸಾಹಿತ್ಯದ ಪದವಿ-ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಕನ್ನಡ ಸಾಹಿತ್ಯ ಪ್ರಾಧ್ಯಾಪಕರಿಗೆ ‘ಕಾರ್ಯಭಾರ ನಿಮಿತ್ತ’ ಸೌಲಭ್ಯ ನೀಡಲು ಪ್ರಯತ್ನಿಸಲಾಗುವುದು. ಸಮ್ಮೇಳನವನ್ನು ಕನ್ನಡ ಸಾಹಿತ್ಯ ಜಗತ್ತಿಗೆ ಕನ್ನಡಿ ಹಿಡಿಯುವ ಮತ್ತು ದಾರಿದೀಪವಾಗುವ ರೀತಿಯಲ್ಲಿ ಆಯೋಜಿಸಲಾಗುವುದು.