ಅಂಕಸಮುದ್ರವೆಂಬ ಪಕ್ಷಿಕಾಶಿ

ರಂಗನತಿಟ್ಟು ಪಕ್ಷಿಧಾಮಕ್ಕೆ ಸಿಗುತ್ತಿರುವ ಗಮನ, ಪ್ರಾಮುಖ್ಯ, ಅನುದಾನ, ಮತ್ತು ಹೆದ್ದಾರಿಯ ಆಕರ್ಷಣೆ ಇಲ್ಲದಿದ್ದರೂ ಅಂಕಸಮುದ್ರ ಪಕ್ಷಿತಜ್ಞರಿಗೆ, ವೀಕ್ಷಕರಿಗೆ ಮತ್ತು ಅಧ್ಯಯನಶೀಲರಿಗೆ ಅತ್ಯುತ್ತಮ ಸ್ಥಳ.

-ಡಾ. ಎಸ್. ಶಿಶುಪಾಲ

ಬಳ್ಳಾರಿ ಜಿಲ್ಲೆ ಬಿರುಬಿಸಿಲಿನ ಪ್ರದೇಶವೆಂದು ಹೆಸರುವಾಸಿ. ಬಹಳಷ್ಟು ವರ್ಷಗಳಿಂದ ಗಣಿ ಕೈಗಾರಿಕೆಗಾಗಿ ಖ್ಯಾತಿ/ಕುಖ್ಯಾತಿ ಪಡೆದಿದ್ದರೂ ತನ್ನದೇ ವಿಶಿಷ್ಟ ಪರಿಸರದಿಂದ ಹಲವಾರು ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನವಾಗಿದೆ. ಈ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನೂರಾರು ಗ್ರಾಮಗಳು ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನಿಂದಾವೃತ. ಮಳೆಗಾಲದಲ್ಲಿ ಅಣೆಕಟ್ಟು ತುಂಬಿದರೆ ಸಾವಿರಾರು ಎಕರೆ ಪ್ರದೇಶವೆಲ್ಲಾ ನೀರಿನಲ್ಲಿ ಮುಚ್ಚಿ ಹೋಗಿರುತ್ತದೆ. ಕ್ರಮೇಣ ಅಣೆಕಟ್ಟಿನ ನೀರು ಕಡಿಮೆಯಾದಂತೆ ಹಿನ್ನೀರು ಕಡಿಮೆಯಾಗಿ ಅ ಜಾಗವೆಲ್ಲ ಕೃಷಿಗೆ ಬಳಕೆಯಾಗುತ್ತದೆ. 

ಚಳಿಗಾಲದ ಬೆಳೆಗಳಾದ ಅವರೆ, ಕಡ್ಲೆ, ತೊಗರಿ ಮುಂತಾದವುಗಳನ್ನು ಬೆಳೆಯುತ್ತಾರೆ. ಹಿನ್ನೀರಿನ ಕೆಸರಿನಲ್ಲಿ ಪಾಚಿಗಳು, ಮೃದ್ವಂಗಿಗಳು, ಕಪ್ಪೆಚಿಪ್ಪುಗಳು, ಕೆಸರುಹುಳುಗಳ ಉತ್ಪಾದನೆಯಾಗುತ್ತದೆ. ದೇಶ-ವಿದೇಶಗಳಿಂದ ನೂರಾರು ಪಕ್ಷಿ ಪ್ರಭೇದಗಳು ಸಾವಿರಾರು ಸಂಖ್ಯೆಯಲ್ಲಿ ದಾಂಗುಡಿಯಿಡುತ್ತವೆ. ಹಿನ್ನೀರಿಗೆ ಅನತಿ ದೂರದಲ್ಲಿರುವ ಒಂದು ಕೆರೆಯೆ ಅಂಕಸಮುದ್ರ. ಸುಮಾರು 240 ಎಕರೆ ವಿಸ್ತೀರ್ಣವಿದ್ದ ಕೆರೆಯಾದರೂ ಹೆಸರು ಮಾತ್ರ ಸಮುದ್ರ!

ಅಲ್ಲಲ್ಲಿ ಕೆರೆ ಒತ್ತುವರಿಯಾಗಿದೆ. ಅರಣ್ಯ ಇಲಾಖೆಯೇ ಇನ್ನು ಕೆರೆ ಕಬಳಿಸದಂತೆ ಕೆಲಸ ಮಾಡುತ್ತಿದೆ. ಕೆರೆಯ ತುಂಬೆಲ್ಲ ಒಣಗಿ ನಿಂತಿರುವ ಜಾಲಿ ಮತ್ತಿತರೆ ಗಿಡಗಳು. ಬೇಸಿಗೆಯಲ್ಲಿ ಒಂದು ತೊಟ್ಟು ನೀರಿರುವುದಿಲ್ಲ. ಮಳೆಗಾಲದಲ್ಲಿ ಅಲ್ಪಸ್ವಲ್ಪ ನೀರು ಬಂದರೂ ಕೆರೆ ತುಂಬದು. ಆದರೆ ಸ್ಥಳಿಯ ಉತ್ಸಾಹಿಗಳು, ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆಯ ಸಹಕಾರದಿಂದ ಹಿನ್ನೀರಿನಿಂದ ಕೆರೆ ತುಂಬಿಸುವ ಎರ್ಪಾಡು ಆಗಿದೆ.

ಇದು ಅರಣ್ಯ ಇಲಾಖೆಯಿಂದ ಅಧಿಕೃತ ಮುದ್ರೆ ಇರುವ ಪಕ್ಷಿಧಾಮ. ಚಳಿಗಾಲದಲ್ಲಿ ಇಲ್ಲಿಗೆ ಬರುವ ಪಕ್ಷಿ ಸಂಕುಲ ಅಸದಳ. ವಿದೇಶಗಳಿಂದ ಬರುವ ವಲಸೆ ಹಕ್ಕಿಗಳ ದಂಡೇ ಇಲ್ಲಿ ನೆರೆಯುತ್ತದೆ. ಕೆರೆಯ ಮಧ್ಯೆ ಒಣಗಿ ನಿಂತಿರುವ ಮರಗಳು ಕೆಲವು ಪ್ರಭೇದದ ಹಕ್ಕಿಗಳಿಗೆ ಗೂಡು ಮಾಡಿ ಮರಿಗಳನ್ನು ಬೆಳೆಸಲು ಪ್ರಶಸ್ತ ಪರಿಸರವಿದೆ. ಜನರ ಮತ್ತು ವಾಹನಗಳ ಓಡಾಟವಿಲ್ಲದೆ ವಲಸೆ ಹಕ್ಕಿಗಳಿಗೆ ಸುರಕ್ಷಿತ ತಾಣವೆನಿಸಿದೆ. ಹತ್ತಿರದಲ್ಲೇ ಇರುವ ಹಿನ್ನೀರು ಮತ್ತು ಸುತ್ತಲಿನ ಕೃಷಿ ಭೂಮಿ ಹಕ್ಕಿಗಳಿಗೆ ಅಗತ್ಯ ಆಹಾರವಾದ ಕಾಳು-ಕಡ್ಡಿ ಮತ್ತು ಹುಳು-ಹುಪ್ಪಟೆಗಳನ್ನು ಒದಗಿಸುತ್ತವೆ.

ಚಳಿಗಾಲವಾದರೂ ಬೆಚ್ಚಗಿನ ವಾತಾವರಣ ಬಹುತೇಕ ಹಕ್ಕಿಗಳಿಗೆ ಸೂಕ್ತ. ಅಂಕಸಮುದ್ರ ಪಕ್ಷಿಧಾಮದಲ್ಲಿ ಅರಣ್ಯ ಇಲಾಖೆಯಿಂದ ವಾಚ್ ಟವರ್ ಮಾಡಿದ್ದಾರೆ. ಅಲ್ಲದೆ ಸ್ಥಳೀಯ ಯುವಕ ರಾಜುರವರನ್ನು ಮಾರ್ಗದರ್ಶಕನ್ನಾಗಿ ನೇಮಿಸಲಾಗಿದೆ. ಇಲ್ಲಿ ಇರುವ/ಬರುವ ಎಲ್ಲ ಹಕ್ಕಿಗಳ ವಿವರ ತಿಳಿದುಕೊಳ್ಳಲು ರಾಜು ಸೂಕ್ತ ವ್ಯಕ್ತಿ. ಇವರು ಇಲ್ಲಿ ಸುಮಾರು 120ಕ್ಕೂ ಹೆಚ್ಚು ಹಕ್ಕಿ ಪ್ರಭೇದಗಳನ್ನು ಗುರುತಿಸಿದ್ದಾರೆ.

ಸ್ಥಳೀಯ ಹಕ್ಕಿಗಳೆಂದರೆ ಗುಳುಮುಳುಕ (Little Grebe), ಹೆಜ್ಜಾರ್ಲೆ (Pelican), ನೀರುಕಾಗೆಗಳು (Cormorants), ಹಾವಕ್ಕಿ (Darter), ಬೆಳ್ಳಕ್ಕಿಗಳು (Egrets), ಕೊಳದ ಬಕ (Pond heron), ಇರುಳು ಬಕ (Night heron), ನಾಮದ ಕೋಳಿ (Coot), ಸಿಳ್ಳೆಬಾತು (Whistling duck), ವರಟೆ (Spot-billed duck), ನವಿಲು, ಹುಂಡು ಕೋಳಿ (Water hen), ಜಂಬು ಕೋಳಿ (Moorhen), ಬೆಳವ (Dove), ಗೂಬೆಗಳು, ಗೀಜಗಗಳು (Wever), ಕಳ್ಳಿಪೀರ (Bee eaters), ಮರಗಾಲು ಹಕ್ಕಿ (Stilt), ನೆಲಗುಬ್ಬಿಗಳು (Larks), ಮುನಿಯಗಳು, ಮಿಂಚುಳ್ಳಿ (Kingfishers) ಮುಂತಾದವುಗಳು.

ವಲಸೆ ಹಕ್ಕಿಗಳೆಂದರೆ ಬಣ್ಣದ ಕೊಕ್ಕರೆ (Painted Stork), ಕೆಂಬರಲುಗಳು (Ibis), ಬಾಯ್ಕಳಕ ಕೊಕ್ಕರೆ (Open-bill), ಚಮಚದ ಕೊಕ್ಕು (Spoonbill), ಬ್ರಾಹ್ಮೀ ಬಾತು (Ruddy shelduck), ನಾಮದ ಬಾತು (Wigeon), ಕೆಂಪು ರೆಕ್ಕೆಯ ಬಾತು (Gadwall), ಬಿಳಿಹುಬ್ಬಿನ ಬಾತು (Garganey), ಗುಬುಟು ಕೊಕ್ಕಿನ ಬಾತು (Knob-billed duck), ಚಲುಕ ಬಾತು (Northern shoveler), ಸೋಲಾರಿ ಹಕ್ಕಿ (Teal), ವಿವಿಧ ಗೊರವಗಳು (Plovers/Sandpipers), ಉಲ್ಲಂಕಿಗಳು (Snipe), ಕೆಂಪುತಲೆ ಬಾತು (Pochard) ಮುಂತಾದವುಗಳು.

ಇವುಗಳಲ್ಲಿ ಹಲವು ಹಕ್ಕಿಗಳು ಇಲ್ಲಿಯೇ ಗೂಡು ಮಾಡಿ ಸಂತಾನಾಭಿವೃದ್ಧಿ ಮಾಡುತ್ತವೆ.  ಕೆಲವೊಮ್ಮೆ ಬೆಳಗಾದೊಡನೆ ಬಾಯ್ಕಳಕಗಳು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಂದ ಹಿನ್ನೀರಿಗೆ ಹೊರಡುವ ದೃಶ್ಯ ವರ್ಣಿಸದಳ. ಅಲ್ಲಲ್ಲಿ ಹೆರ್ಜಾಲೆಗಳ ಗೂಡುಗಳನ್ನು ಮತ್ತು ಮರಿಗಳ ಆರೈಕೆಯನ್ನು ನೋಡಬಹುದು. ಹಾಗೆಯೆ ಬಣ್ಣದ ಕೊಕ್ಕರೆಗಳು ಕಾಲು ಮುಳುಗುವಷ್ಟು ನೀರಿನಲ್ಲಿ ಗಬಗಬನೆ ಆಹಾರ ತಿನ್ನುವುದನ್ನು ನೋಡಲು ಕಣ್ಣೆರಡು ಸಾಲದು.

ಚಮಚೆಕೊಕ್ಕಿನ ಹಕ್ಕಿಗಳಂತೂ ನೀರಿನಲ್ಲಿ ಸಿಗುವ ಮೀನು ಮುಂತಾದವುಗಳನ್ನು ಹುಡುಕುತ್ತಿರುತ್ತವೆ. ವಿವಿಧ ಬಾತುಗಳು ಸಡಗರದಿಂದ ಅತ್ತಿತ್ತ ತೇಲುತ್ತಾ ಈಜುತ್ತಿರುತ್ತವೆ.  ಬೆಳಿಗ್ಗೆಯೇ ಹೋದರೆ ವಿವಿಧ ಹಕ್ಕಿಗಳ ದಿನಚರಿಯನ್ನು ನೋಡಿ ಮನಸ್ಸು ಆಹ್ಲಾದಗೊಳ್ಳುವುದು.  ಅದೃಷ್ಟವಿದ್ದರೆ ಹತ್ತಿರದ ಹಿನ್ನೀರಿನಲ್ಲಿ ರಾಜಹಂಸಗಳ ದರ್ಶನವಾಗುವುದು. ಇಲ್ಲಿಗೆ ಬರಲು ನವೆಂಬರ್ ನಿಂದ ಮಾರ್ಚ್ ಸೂಕ್ತ ಸಮಯ. ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲ. ಈ ಕೆರೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಹಗರಬೊಮ್ಮನಹಳ್ಳಿಯ ಉತ್ಸಾಹಿ ಯುವಕರಾದ ವಿಜಯ್ ಇಟ್ಟಗಿ ಮತ್ತು ಅನಂದ ಬಾಬುರವರ ಕೊಡುಗೆ ಅಪಾರ. ಇವರು ಇಲ್ಲಿಗೆ ನೀರು ತರುವಲ್ಲಿ ಭಗೀರಥ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಸುತ್ತಮುತ್ತಲಿನ ಶಾಲೆ ಮಕ್ಕಳಿಗೆ ಹಕ್ಕಿಗಳ ಪರಿಚಯವನ್ನು ಮಾಡುವುದರೊಂದಿಗೆ ಪರಿಸರ ಕಾಳಜಿಯ ಕಾರ್ಯಕ್ರಮಗಳನ್ನು ಸಹ ನಡೆಸುತ್ತಾರೆ.

ಉತ್ತರ ಕರ್ನಾಟಕ ಪ್ರದೇಶದಲ್ಲಿರುವುದರಿಂದ ಹೆಚ್ಚಿನ ಜನರಿಗೆ ಇಲ್ಲಿನ ಅದ್ಭುತ ಲೋಕದ ಪರಿಚಯವಿಲ್ಲ. ರಾಜ್ಯದ ರಂಗನತಿಟ್ಟು ಪಕ್ಷಿಧಾಮಕ್ಕೆ ಸಿಗುತ್ತಿರುವ ಗಮನ, ಪ್ರಾಮುಖ್ಯ, ಅನುದಾನ, ಮತ್ತು ಹೆದ್ದಾರಿಯ ಆಕರ್ಷಣೆ ಇಲ್ಲದಿದ್ದರೂ ಅಂಕಸಮುದ್ರ ಪಕ್ಷಿತಜ್ಞರಿಗೆ, ವೀಕ್ಷಕರಿಗೆ ಮತ್ತು ಅಧ್ಯಯನಶೀಲರಿಗೆ ಅತ್ಯುತ್ತಮ ಸ್ಥಳ. ಜೊತೆಗೆ ಸಮೀಪದಲ್ಲೇ ಉತ್ತರಕರ್ನಾಟಕದ ಜೋಳದ ರೊಟ್ಟಿ ಊಟವನ್ನು ಸವಿಯಬಹುದು. ಯಾವುದೇ ಪ್ರವೇಶ ಶುಲ್ಕವಿಲ್ಲ. ಇಲ್ಲಿನ ಭೇಟಿಗೆ ಸ್ಥಳಿಯ ಪಕ್ಷಿ ಮಾರ್ಗದರ್ಶಕರಾದ ರಾಜು ಅವರನ್ನು (ಮೊ: 8151909278) ಸಂಪರ್ಕಿಸಬಹುದು.

ಅಂಕಸಮುದ್ರಕ್ಕೆ ದಾರಿ

ಹರಿಹರ-ಹೊಸಪೇಟೆ ನಡುವೆ ಹಗರಿಬೊಮ್ಮನಹಳ್ಳಿ ಬರುತ್ತದೆ. ಹರಿಹರದಿಂದ 80 ಕಿ.ಮೀ. ದೂರ ಮತ್ತು ಹೊಸಪೇಟೆಯಿಂದ 40 ಕಿ.ಮೀ. ದೂರವಿದ್ದು ಬಳ್ಳಾರಿಯಿಂದ 120 ಕಿ.ಮೀ. ದೂರದಲ್ಲಿದೆ. ಬೆಂಗಳೂರು ಮತ್ತು ಮೈಸೂರಿನಿಂದ ಹರಿಹರಕ್ಕೆ ಅಥವ ಹೊಸಪೇಟೆಗೆ ನೇರ ರೈಲುಗಳು ಲಭ್ಯ. ಇತ್ತೀಚೆಗೆ ಪ್ರಾರಂಭಿಸಿದ ಹರಿಹರ-ಕೊಟ್ಟೂರು ರೈಲು ಹಗರಿಬೊಮ್ಮನಹಳ್ಳಿ ಮುಖಾಂತರವೇ ಹೋಗುತ್ತದೆ. ಹಗರಿಬೊಮ್ಮನಹಳ್ಳಿಯಿಂದ ಕೇವಲ 13 ಕಿ.ಮೀ. ದೂರದಲ್ಲಿ ಅಂಕಸಮುದ್ರ ಪಕ್ಷಿಧಾಮವಿದೆ.

ಹರಿಹರ ಮತ್ತು ಹೊಸಪೇಟೆಯಿಂದ ಹಗರಿಬೊಮ್ಮನಹಳ್ಳಿಗೆ ಹಲವಾರು ಬಸ್ಸುಗಳು ಸಿಗುತ್ತವೆ.  ಹಗರಿಬೊಮ್ಮನಹಳ್ಳಿಯಿಂದ ಆಟೋ ಪ್ರಯಾಣ ಸಾಧ್ಯ. ಅರಣ್ಯ ಇಲಾಖೆಯಿಂದ ಪಕ್ಷಿಧಾಮವೆಂದು ಗುರುತಿಸಲ್ಪಟ್ಟಿದ್ದರೂ ಪ್ರವಾಸಿಗರಿಗೆ ಯಾವುದೇ ಸೌಲಭ್ಯವಿಲ್ಲ. ಊಟ-ವಸತಿಗೆ ಹಗರಿಬೊಮ್ಮನಹಳ್ಳಿಗೆ ಬರಬೇಕು. ಬುತ್ತಿ ಕಟ್ಟಿಕೊಂಡು ಹೋದರು ಆದೀತು.

Leave a Reply

Your email address will not be published.