ಅಂಚಿಗೆ ತಳ್ಳಲ್ಪಡುತ್ತಿರುವ ಸಮುದಾಯವಾಗಿ ಭಾರತೀಯ ಮುಸ್ಲಿಮರು

ಲಿಂಡ್ಸೆ ಮೇಜ್ಲ್ಯಾಂಡ್

ಅನುವಾದ: ಡಾ.ಜ್ಯೋತಿ

ಲೇಖಕಿ ಲಿಂಡ್ಸೆ ಮೈಜ್ಲ್ಯಾಂಡ್, ಅಮೆರಿಕನ್ ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ಸಂಬಂಧ ಹಾಗು ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ; ಚೀನಿ ಭಾಷೆಯನ್ನು ಕೂಡ ಅಧ್ಯಯನ ಮಾಡಿದ್ದಾರೆ, ಅಮೆರಿಕಾದ `ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ (ಅಈಖ)’ ಹೆಸರಿನ ಸ್ವತಂತ್ರ ಮಾಹಿತಿ ಸಂಸ್ಥೆಗಾಗಿ, ಏಷ್ಯಾದ ಬೆಳೆವಣಿಗೆಗಳ ಕುರಿತಂತೆ ಬರೆಯುತ್ತಾರೆ. ಏಷ್ಯಾದ ಕುರಿತು ವಿಶೇಷ ತಿಳಿವಳಿಕೆ ಹೊಂದಿರುವ ಲಿಂಡ್ಸೆ, ಸಂಸ್ಥೆ ಸೇರುವ ಮೊದಲು ಅಮೆರಿಕಾದ ಪ್ರಸಿದ್ಧ ಸುದ್ದಿಸಂಸ್ಥೆಯಾದ `ಟೆಗ್ನಕ್ಕಾಗಿ ಬ್ರೇಕಿಂಗ್ ನ್ಯೂಸ್ ಹಾಗೂ `ವೋಕ್ಸ್ಗಾಗಿ ವಿಶ್ವಸುದ್ದಿಯನ್ನು ವರದಿ ಮಾಡುತ್ತಿದ್ದರು. ಅವರು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸಿ.ಎಫ್.ಆರ್. ಜಾಲತಾಣದಲ್ಲಿ ಬರೆದ ಲೇಖನವಿದು.

1921ರಲ್ಲಿ, ಅಮೆರಿಕಾದ ನ್ಯೂಯಾರ್ಕ್ನಲ್ಲಿ ಸ್ಥಾಪನೆಯಾದ, `ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್‘, ಒಂದು ಲಾಭರಹಿತ ಸ್ವತಂತ್ರ ಸಂಸ್ಥೆಯಾಗಿದ್ದು, ಅಮೆರಿಕಾ ಮತ್ತು ಇನ್ನಿತರ ದೇಶಗಳ ವಿದೇಶಿ ನೀತಿಯ ಕುರಿತು ವಿಶೇಷ ಅಧ್ಯಯನ ಮಾಡಿ, ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುತ್ತದೆ. ಇದು, ವಿವಿಧ ದೇಶಗಳ ನಡುವಿನ ಅಂತಾರಾಷ್ಟ್ರೀಯ ಸಂಬಂಧಗಳ ಕುರಿತಂತೆ ಮಾಧ್ಯಮಗಳೊಂದಿಗೆ ನಿರಂತರವಾಗಿ ಸಂವಹನ ನಡೆಸುತ್ತದೆ ಹಾಗೂ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತದೆ. ಸಂಸ್ಥೆಯ ಸದಸ್ಯರಲ್ಲಿ ವೃತ್ತಿನಿರತ ರಾಜಕಾರಣಿಗಳು, ಅಧಿಕಾರಿಗಳು, ವಕೀಲರು, ಪ್ರಾಧ್ಯಾಪಕರು, ಮಾಧ್ಯಮದವರೂ ಇದ್ದಾರೆ. ಇಲ್ಲಿಯವರೆಗೆ, ಸಂಸ್ಥೆ ನಡೆಸಿರುವ ಅಂತಾರಾಷ್ಟ್ರೀಯ ಸಮಸ್ಯೆಗಳ ಚರ್ಚೆ ಮತ್ತು ಶಿಫಾರಸ್ಸುಗಳು, ಹಲವಾರು ದೇಶಗಳ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರಿವೆ.

ತಜ್ಞರ ಅನಿಸಿಕೆಯಂತೆ, ದಶಕಗಳಿಂದ ನಾನಾ ರೀತಿಯ ತಾರತಮ್ಯ ಎದುರಿಸುತ್ತಾ ಬಂದಿರುವ ಭಾರತದ ಮುಸ್ಲಿಂ ಸಮುದಾಯ, ಪ್ರಸಕ್ತ ಹಿಂದೂ ರಾಷ್ಟ್ರೀಯವಾದಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಇನ್ನಷ್ಟು ದಯನೀಯ ಸ್ಥಿತಿಗೆ ತಲುಪಿದೆ.

ಮುಖ್ಯಾಂಶಗಳು:

  • ಸದ್ಯ, ಸುಮಾರು 20 ಕೋಟಿ ಮುಸ್ಲಿಮರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಇದು, ಬಹುಸಂಖ್ಯಾತ ಹಿಂದೂ ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಜನಸಮೂಹವಾಗಿದೆ.

  • ಕಳೆದ ಹಲವು ದಶಕಗಳಿಂದ, ಮುಸ್ಲಿಂ ಸಮುದಾಯ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ತಾರತಮ್ಯ ಎದುರಿಸುತ್ತಿದೆ. ಜೊತೆಗೆ, ಅದೊಂದು ಆರ್ಥಿಕ ಮತ್ತು ರಾಜಕೀಯ ಶಕ್ತಿಯಾಗಿ ಬೆಳೆಯಲು ವಿವಿಧ ಅಡೆತಡೆಗಳನ್ನು ಎದುರಿಸುತ್ತಿದೆ. ಅದಲ್ಲದೆ, ಮಿತಿಮೀರಿದ ಕೋಮು ದಳ್ಳುರಿಗೆ ಮುಸ್ಲಿಮರು ಬಲಿಯಾಗುತ್ತಿದ್ದಾರೆ.

  • ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಆಡಳಿತ ಪಕ್ಷವು ಮುಸ್ಲಿಮರ ಹಕ್ಕುಗಳನ್ನು ಮೊಟಕುಗೊಳಿಸಲು ಮುಂದಾಗಿದೆ. ವಿಶೇಷವಾಗಿ, ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ, ನೆರೆ ದೇಶಗಳ ಮುಸ್ಲಿಮೇತರ ವಲಸಿಗರಿಗೆ ತ್ವರಿತಗತಿಯ ಪೌರತ್ವವನ್ನು ನೀಡುತ್ತಿದೆ.

ಪ್ರಸ್ತಾವನೆ:

ಭಾರತವಿಂದು, ಸುಮಾರು 20 ಕೋಟಿ ಮುಸ್ಲಿಮರಿಗೆ ವಾಸಸ್ಥಾನವಾಗಿದೆ. ಇದು ವಿಶ್ವದ ಅತಿದೊಡ್ಡ ಮುಸ್ಲಿಂ ಜನ ಸಮುದಾಯಗಳಲ್ಲಿ ಒಂದಾಗಿದ್ದರೂ ಕೂಡ, ಬಹುಸಂಖ್ಯಾತ ಹಿಂದೂ ದೇಶದಲ್ಲಿ ಅಲ್ಪಸಂಖ್ಯಾತರೆಂದು ಪರಿಗಣಿಸಲ್ಪಟ್ಟಿದ್ದಾರೆ. ಭಾರತದ ಸ್ವಾತಂತ್ರ್ಯಾ ನಂತರ, ಸಾಂವಿಧಾನಿಕ ರಕ್ಷಣೆಯ ಹೊರತಾಗಿಯೂ ಕೂಡ, ಮುಸ್ಲಿಮರು ನಿರಂತರವಾಗಿ ಧಾರ್ಮಿಕ ತಾರತಮ್ಯತೆ, ಪೂರ್ವಗ್ರಹ ಮತ್ತು ಹಿಂಸೆಯನ್ನು ಎದುರಿಸುತ್ತಿದ್ದಾರೆ.

2014ರಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ, ಹಿಂದೂ ರಾಷ್ಟ್ರೀಯವಾದಿ ಕಾರ್ಯಸೂಚಿಯ ಆಧಾರದ ಬಲದಿಂದ ಅಧಿಕಾರಕ್ಕೆ ಬಂದ ಮೇಲೆ, ದೇಶದಲ್ಲಿ ಮುಸ್ಲಿಂ ವಿರೋಧಿ ಭಾವನೆ ಹೆಚ್ಚಾಗಿದೆ ಎಂದು ತಜ್ಞರು ಹೇಳುತ್ತಾರೆ. 2019ರಲ್ಲಿ, ಮೋದಿ ಸರಕಾರ ಪುನರ್ ಆಯ್ಕೆಯಾದ ನಂತರವಂತೂ, ಮುಸ್ಲಿಮರ ಹಕ್ಕುಗಳನ್ನು ಅನರ್ಹಗೊಳಿಸುವ ಉದ್ದೇಶದಿಂದ, ವಿವಾದಾತ್ಮಕ ನೀತಿಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಇಂತಹ ಕ್ರಮಗಳು ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಹುಟ್ಟುಹಾಕಿದೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರಿ ಖಂಡನೆಗೆ ಒಳಗಾಗಿದೆ.

ಭಾರತದಲ್ಲೀಗ ಎಷ್ಟು ಮುಸ್ಲಿಮರಿದ್ದಾರೆ?

ಭಾರತವು, ವಿವಿಧ ಧಾರ್ಮಿಕ, ಜನಾಂಗೀಯ ಮತ್ತು ಭಾಷಾ ವೈವಿಧ್ಯತೆಯನ್ನೊಳಗೊಂಡ ದೇಶವಾಗಿದೆ. ಇಲ್ಲಿರುವ ಅಂದಾಜು ಇಪ್ಪತ್ತು ಕೋಟಿ ಮುಸ್ಲಿಮರಲ್ಲಿ ಹೆಚ್ಚಿನವರು ಸುನ್ನಿಗಳು. ಇವರು, ದೇಶದ ಒಟ್ಟು ಜನಸಂಖ್ಯೆಯ 15 ಶೇಕಡಾದಷ್ಟಿದ್ದಾರೆ. ಹಿಂದುಗಳು ಸುಮಾರು 80 ಶೇಕಡಾದಷ್ಟಿದ್ದಾರೆ. ದೇಶದ ಮುಸ್ಲಿಂ ಸಮುದಾಯಗಳು, ಭಾಷೆ, ಜಾತಿ, ಜನಾಂಗೀಯತೆ, ರಾಜಕೀಯ ಮತ್ತು ಆರ್ಥಿಕ ನೆಲೆಗಳಲ್ಲಿ ವ್ಯತ್ಯಯ ಹೊಂದಿದ್ದು, ವೈವಿಧ್ಯತೆಯನ್ನು ಹಾಗೆಯೇ ಉಳಿಸಿಕೊಂಡು ಬಂದಿವೆ.

ಭಾರತ ವಿಭಜನೆಯ ಪ್ರಭಾವ:

ಭಾರತದಲ್ಲಿರುವ ಹಿಂದು ಮತ್ತು ಮುಸ್ಲಿಮರ ನಡುವಿನ ವೈಷಮ್ಯವನ್ನು 1947 ಭಾರತ ವಿಭಜನೆಯ ದಿನಗಳಿಂದ ಗುರುತಿಸಬಹುದೆಂದು ವಿದ್ವಾಂಸರು ಹೇಳುತ್ತಾರೆ. ಎರಡನೆಯ ಮಹಾಯುದ್ಧದ ನಂತರ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಿದ ಬ್ರಿಟಿಷರು, ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಅತ್ಯಗತ್ಯವಾದ ಸಂಪನ್ಮೂಲ ಕೊರತೆಯನ್ನು ಎದುರಿಸಿ, ಭಾರತ ಉಪಖಂಡವನ್ನು ತೊರೆಯಲು ನಿರ್ಧರಿಸಿದರು. ಸಮಯದಲ್ಲಿ, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ದೇಶದ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿತು ಹಾಗೂ ಬ್ರಿಟಿಷರ ಆಡಳಿತದ ವಿರುದ್ಧ ಅಸಹಕಾರ ಚಳುವಳಿಗಳನ್ನು ಸಂಘಟಿಸಿತು. ಮಧ್ಯೆ, ಮುಹಮ್ಮದ್ ಅಲಿ ಜಿನ್ನಾ ನೇತೃತ್ವದ ಅಖಿಲ ಭಾರತ ಮುಸ್ಲಿಂ ಲೀಗ್ ಪಕ್ಷ, ಮುಸ್ಲಿಮರಿಗಾಗಿ ಪ್ರತ್ಯೇಕ ದೇಶದ ಬೇಡಿಕೆ ಮುಂದಿಟ್ಟಿತು.

1947ರಲ್ಲಿ, ಬ್ರಿಟಿಷ್ ನ್ಯಾಯಾಧೀಶರೊಬ್ಬರು ತರಾತುರಿಯಲ್ಲಿ, ಹಿಂದೂ ಬಹುಸಂಖ್ಯಾತ ಪ್ರದೇಶವನ್ನು ಭಾರತವೆಂದು ಮತ್ತು ಮುಸ್ಲಿಂ ಬಹುಸಂಖ್ಯಾತ ಪ್ರದೇಶವನ್ನು ಪಾಕಿಸ್ತಾನವೆಂದು (ಇಂದಿನ ಬಾಂಗ್ಲಾದೇಶ ಸೇರಿದಂತೆ) ಘೋಷಿಸಿದರು. ಇದಕ್ಕನುಸಾರವಾಗಿ ನಡೆದ ದೇಶದ ವಿಭಜನೆಯು, ಮಾರಣಾಂತಿಕ ಕೋಮುಗಲಭೆಗಳಿಗೆ ಕಾರಣವಾಯಿತು. ರೀತಿ, ಮುಸ್ಲಿಮರು ಪಾಕಿಸ್ತಾನಕ್ಕೆ, ಹಿಂದೂಗಳು ಮತ್ತು ಸಿಖ್ಖರು ಭಾರತಕ್ಕೆ ಸಾಮೂಹಿಕವಾಗಿ ವಲಸೆ ಹೊರಟರು. ಇದರಲ್ಲಿ ಬದುಕುಳಿದವರು ಇಂದಿಗೂ ಕೂಡ, ಭಾರತ ಹಾಗೂ ಪಾಕಿಸ್ತಾನದ ನಿರಾಶ್ರಿತರನ್ನು ಹೊತ್ತೊಯ್ದ ರಕ್ತಸಿಕ್ತ ರೈಲುಗಳ ದೃಶ್ಯಾವಳಿಗಳನ್ನು ನೆನಪಿಸಿಕೊಳ್ಳುತ್ತಾರೆ. ದೇಶವ್ಯಾಪಿ ಕೋಮುಗಲಭೆಯಿಂದಾಗಿ, ಪಟ್ಟಣಗಳು ಸುಟ್ಟು ಬೂದಿಯಾದವು ಹಾಗೂ ದೇಹಗಳು ಬೀದಿಗೆ ಎಸೆಯಲ್ಪಟ್ಟವು. ಇತಿಹಾಸಕಾರರ ಅಂದಾಜಿನ ಪ್ರಕಾರ, ಸುಮಾರು ಎರಡು ಲಕ್ಷದಿಂದ, ಇಪ್ಪತ್ತು ಲಕ್ಷ ಜನರು ಕೋಮುಗಲಭೆಯಲ್ಲಿ ಕೊಲ್ಲಲ್ಪಟ್ಟರು.

ನೂರಾರು ವರ್ಷಗಳಿಂದ ಸಹಬಾಳ್ವೆ ನಡೆಸಿದ್ದ ಹಿಂದೂಮುಸ್ಲಿಂ ಸಮುದಾಯಗಳು, ಏಕೆ ಹೀಗೆ ಪರಸ್ಪರ ವೈರಿಗಳಂತೆ ಮಾರಣಾಂತಿಕವಾಗಿ ದಾಳಿ ಮಾಡಿದವು ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ. ಕೆಲವು ತಜ್ಞರು, ಬ್ರಿಟಿಷರ ವಿಭಜನಾತ್ಮಕ ತಂತ್ರವನ್ನು ದೂಷಿಸುತ್ತಾರೆ. ಯಾಕೆಂದರೆ, ಬ್ರಿಟಿಷ್ ಸರಕಾರವು, ಒಟ್ಟು ಜನಸಂಖ್ಯೆಯ ಸುಮಾರು 25 ಶೇಕಡವಿದ್ದ ಮುಸ್ಲಿಂ ಅಲ್ಪಸಂಖ್ಯಾತರಿಗೆ ಕೆಲವು ವಿಶೇಷ ಚುನಾವಣಾ ಸವಲತ್ತುಗಳನ್ನು ಒದಗಿಸಿತು. ಇನ್ನು ಕೆಲವು ವಿಶ್ಲೇಷಕರು, ಹಿಂದು ಮತ್ತು ಮುಸ್ಲಿಂ ರಾಜಕೀಯ ಚಳವಳಿಗಳು ಪ್ರತ್ಯೇಕವಾಗಿ ಧಾರ್ಮಿಕ ಸ್ವರೂಪ ಪಡೆದಿದ್ದರಿಂದ ಉಂಟಾದ ಉದ್ವಿಗ್ನತೆಯ ಪರಿಣಾಮವೆಂದು ಗುರುತಿಸುತ್ತಾರೆ.

ದೇಶದ ವಿಭಜನೆಯ ನಂತರ ಸುಮಾರು 3.5 ಕೋಟಿ ಮುಸ್ಲಿಮರು ಭಾರತದಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದರು. ಕೆಲವರು, ತಮ್ಮ ಸಂಬಂಧಿಕರೊಂದಿಗೆ ಇಲ್ಲಿಯೇ ಉಳಿದುಕೊಳ್ಳಲು ಬಯಸಿದರೆ, ಇನ್ನು ಕೆಲವರು, ಇಲ್ಲಿರುವ ತಮ್ಮ ಆಸ್ತಿಪಾಸ್ತಿಯನ್ನು ಉಳಿಸಿಕೊಳ್ಳಲು ಇಚ್ಛಿಸಿದರು. ಹೀಗೆ ವಿವಿಧ ಕಾರಣಗಳಿಗಾಗಿ, ಇಲ್ಲಿಯೇ ಉಳಿದುಕೊಳ್ಳುವ ಆಯ್ಕೆ ಮಾಡಿಕೊಂಡರು. ಅನೇಕ ಮುಸ್ಲಿಮರು, ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರ ರಚನೆಯನ್ನು ಕೂಡ ವಿರೋಧಿಸಿದರು.

ಸಂವಿಧಾನ ಮತ್ತು ಧಾರ್ಮಿಕ ಸಹಿಷ್ಣುತೆ:

ಸುಮಾರು ಎಪ್ಪತ್ತು ವರ್ಷಗಳ ಇತಿಹಾಸವಿರುವ ಭಾರತದ ಸಂವಿಧಾನವು ಸಾಮಾಜಿಕ ಸಮಾನತೆಯ ತತ್ವವನ್ನು ಪ್ರತಿಪಾದಿಸುತ್ತದೆ. 1976ರಲ್ಲಿ, “ಜಾತ್ಯತೀತಪದವನ್ನು ಸಂವಿಧಾನದ ಪ್ರಸ್ತಾವನೆಗೆ ಸೇರಿಸಲಾಯಿತು. ಆದರೆ, ಸಂವಿಧಾನವು, ರಾಷ್ಟ್ರೀಯ ಹಕ್ಕುಪತ್ರಗಳಂತೆ, ಧರ್ಮ ಮತ್ತು ಸರಕಾರವನ್ನು ಸ್ಪಷ್ಟವಾಗಿ ಬೇರ್ಪಡಿಸುವುದಿಲ್ಲ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷದ ನಾಯಕರುಗಳು, ದೇಶದ ಸಮಸ್ತ ನಾಗರಿಕರು ಮತ್ತು ಧರ್ಮಗಳು ಸಮಾನವೆಂದು ಪರಿಗಣಿಸುವ ಭಾರತವನ್ನು ಪ್ರತಿಪಾದಿಸಿದರು. ಭೇದಭಾವವಿಲ್ಲದ, ಜಾತ್ಯತೀತ ರಾಷ್ಟ್ರದ ಕನಸು ಕಂಡ ಗಾಂಧಿಯನ್ನು, 1948ರಲ್ಲಿ ಹಿಂದೂ ರಾಷ್ಟ್ರೀಯವಾದಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ. ಅನಂತರದ ದಿನಗಳಲ್ಲಿ, ಭಾರತದ ಮೊದಲ ಪ್ರಧಾನಿ ನೆಹರು ಕೂಡ, ದೇಶ ವಿಭಜನೆಯ ನಂತರ ಸಂಭವಿಸಿದ ಕೋಮುಗಲಭೆ ಇನ್ನೊಮ್ಮೆ ಮರುಕಳಿಸದಿರಲು, ಜಾತ್ಯತೀತತೆ ಅಗತ್ಯವೆಂದು ಮನಗಂಡು, ಶಾಂತಿಯುತ ಸಮಾಜ ನಿರ್ಮಿಸಲು ಪ್ರಯತ್ನಿಸಿದರು. ಹಾಗೆಯೇ, ನೆಹರು, ಧರ್ಮದ ಹೆಸರಿನಲ್ಲಿ ದೇಶ ವಿಭಜಿಸಲು ಪ್ರಯತ್ನಿಸುತ್ತಿರುವ ಹಿಂದೂ ಸಂಘಟನೆಗಳನ್ನು, ರಾಷ್ಟ್ರದ ಐಕ್ಯತೆಗೆ ಬೆದರಿಕೆಯೆಂದು ಪರಿಗಣಿಸಿದರು.

ಹಿಂದೂ ರಾಷ್ಟ್ರೀಯವಾದಿಗಳು ಅಧಿಕಾರಕ್ಕೆ ಬಂದ ಹಿನ್ನೆಲೆ:

1920 ದಶಕದಲ್ಲಿ ಭಾರತೀಯ ಲೇಖಕ ಮತ್ತು ರಾಜಕಾರಣಿ ವಿ.ಡಿ.ಸಾವರ್ಕರ್ ಅವರು ತಮ್ಮ ಪುಸ್ತಕ `ಹಿಂದುತ್ವ: ಹಿಂದೂ ಎಂದರೇನು?” ದಲ್ಲಿ ಹಿಂದೂ ರಾಷ್ಟ್ರೀಯವಾದವನ್ನು ಪ್ರಪ್ರಥಮ ಬಾರಿಗೆ ಪ್ರತಿಪಾದಿಸಿದರು. ಹಿಂದೂ ರಾಷ್ಟ್ರೀಯವಾದಿಗಳು, ಹಿಂದೂಗಳನ್ನು ಮಣ್ಣಿನ ಮಕ್ಕಳುಎಂದು ಅರ್ಥೈಸುತ್ತಾರೆ. ಏಕೆಂದರೆ, ಹಿಂದೂಗಳ ಹೆಚ್ಚಿನ ಧಾರ್ಮಿಕ ಪವಿತ್ರ ಸ್ಥಳಗಳು ಭಾರತದಲ್ಲಿದೆ. ಆದರೆ, ಕ್ರಿಶ್ಚಿಯನ್ನರ ಮತ್ತು ಮುಸ್ಲಿಮರ ಪವಿತ್ರ ಸ್ಥಳಗಳು ದೇಶದ ಗಡಿಯಾಚೆಗಿವೆ. ಸಾಮಾನ್ಯವಾಗಿ, ರಾಷ್ಟ್ರೀಯವಾದಿಗಳು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಪೂರಕ ನೀತಿಗಳನ್ನು ಸುಲಭವಾಗಿ ಪ್ರಚಾರಗೊಳಿಸುತ್ತಾರೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಹಿಂದೂಗಳ ವಂಶಸ್ಥರು ಮೂಲತಃ ಇಲ್ಲಿನವರೇ ಎನ್ನುವ ವಾಸ್ತವ ಅಂಶದ ಹೊರತಾಗಿಯೂ, ಭಾರತೀಯ ಮುಸ್ಲಿಮರನ್ನು ವಿದೇಶಿಯರಂತೆ ಸಂಶಯಾಸ್ಪದವಾಗಿ ಅನೇಕರು ನೋಡುತ್ತಾರೆ. ಹಿಂದೂ ರಾಷ್ಟ್ರೀಯವಾದಿಗಳು, ದೇಶದ ವಿಭಜನೆ ಮತ್ತು ಪಾಕಿಸ್ತಾನದ ಸ್ಥಾಪನೆಯನ್ನು, ಮುಸ್ಲಿಮರ ವಿಶ್ವಾಸದ್ರೋಹದ ಪ್ರತೀಕವೆಂಬಂತೆ ಪರಿಗಣಿಸುತ್ತಾರೆ.

1980 ದಶಕದಲ್ಲಿ ಸಂಭವಿಸಿದ ಕೆಲವು ರಾಜಕೀಯ ಉದ್ವಿಗ್ನತೆಗಳು ಭಾರತದ ಜಾತ್ಯತೀತ ಮಾದರಿಯನ್ನು ಶಕ್ತಿಹೀನವನ್ನಾಗಿಸಿತು. ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು 1977 ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ, ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಧಾರ್ಮಿಕ ವಿಭಜನೆಯನ್ನು ಬಳಸಿಕೊಂಡರು. 1984 ರಲ್ಲಿ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾದ ಇಂದಿರಾ ಗಾಂಧಿಯವರ ನಂತರ, ಅವರ ಮಗ ರಾಜೀವ್ ಗಾಂಧಿ ಉತ್ತರಾಧಿಕಾರಿಯಾದರು. ಅವರು ಹಿಂದುಗಳನ್ನು ಓಲೈಸುವ ಕಾರ್ಯಕ್ಕೆ ತೊಡಗಿದರು. ಲೇಖಕ ಕಾಂಚನ್ ಚಂದ್ರ ಹೇಳುವಂತೆ, “ಕಾಂಗ್ರೆಸ್ ಪಕ್ಷ ಹಲವು ದಶಕಗಳಿಂದ ನಿರಂತರವಾಗಿ ಬಹುಸಂಖ್ಯಾತ ಹಿಂದೂಗಳ ಓಲೈಕೆ ಮಾಡುತ್ತಾ ಬಂದುದರಿಂದ, ಬಿಜೆಪಿಯ ಆಕ್ರಮಣಕಾರಿ ಹಿಂದುತ್ವ ಬೆಳೆಯಲು ಸಹಕಾರಿಯಾಯಿತು.”

1980ರಲ್ಲಿ ಸ್ಥಾಪನೆಯಾದ ಬಿಜೆಪಿ ತನ್ನ ಮೂಲವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್), ಎಂಬ ಹಿಂದುತ್ವವಾದಿ ಸ್ವಯಂಸೇವಕ ಸಂಘಟನೆಯೊಂದಿಗೆ ಗುರುತಿಸಿಕೊಳ್ಳುತ್ತದೆ. 1998 ಚುನಾವಣೆಯಲ್ಲಿ ಬಿಜೆಪಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದಿತು. ಆದರೆ, 2004ರಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರ ಮರಳಿ ಪಡೆಯುವವರೆಗೂ, ಬಿಜೆಪಿ, ತನ್ನ ನೇತೃತ್ವದ ಒಕ್ಕೂಟದಲ್ಲಿ ಸಾಮರಸ್ಯತೆ ಉಳಿಸಿಕೊಳ್ಳುವ ಸಲುವಾಗಿ, ತನ್ನ ಮೂಲ ಸಿದ್ಧಾಂತದ ಕೆಲವು ವಿವಾದಾತ್ಮಕ ಅಂಶಗಳನ್ನು ಮೂಲೆಗೆ ಸರಿಸಿತ್ತು. ಇವುಗಳಲ್ಲಿ ವಿಶೇಷವಾಗಿ ಹೆಸರಿಸುವಂತಹದ್ದು; ಮುಸ್ಲಿಂ ಬಹುಸಂಖ್ಯಾತರಾಗಿರುವ ವಿವಾದಿತ ಪ್ರದೇಶ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದು, ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುವುದು ಮತ್ತು ಏಕರೂಪ ನಾಗರಿಕ ಸಂಹಿತೆಯ ಮೂಲಕ ಎಲ್ಲಾ ನಾಗರಿಕರು ಒಂದೇ ರೀತಿಯ ವೈಯಕ್ತಿಕ ಕಾನೂನುಗಳನ್ನು ಹೊಂದುವಂತೆ ಮಾಡುವುದು (ಪ್ರಸ್ತುತ, ಮುಸ್ಲಿಮರಿಗೆ ಮದುವೆ ಮತ್ತು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವೈಯಕ್ತಿಕ ಕಾನೂನು ಅಸ್ತಿತ್ವದಲ್ಲಿದೆ).

2014ರಲ್ಲಿ, ಲೋಕಸಭೆಯಲ್ಲಿ ಬಿಜೆಪಿ ಏಕ ಪಕ್ಷವಾಗಿ ಪ್ರಥಮ ಬಾರಿಗೆ ಬಹುಮತವನ್ನು ಗಳಿಸಿತು. ಪಕ್ಷವು, ಶ್ರೀ ನರೇಂದ್ರ ಮೋದಿಯನ್ನು ಪ್ರಧಾನ ಮಂತ್ರಿಯನ್ನಾಗಿ ಆಯ್ಕೆಮಾಡಿತು. 2019ರಲ್ಲಿ, ಪುನಃ ಬಿಜೆಪಿ, ಮುಸ್ಲಿಂ ವಿರೋಧಿ ಪ್ರಚಾರದ ನೆಲೆಯಲ್ಲಿ ಬಹುಮತವನ್ನು ಪಡೆದುಕೊಂಡಿತು. 2024ರಲ್ಲಿ ತನ್ನ ಅವಧಿ ಪೂರ್ಣಗೊಳಿಸುವ ಸರ್ಕಾರವು, ತನ್ನ ಐದು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಗಜಾಲಾ ಜಮೀಲ್ ಹೇಳುವಂತೆ, “ಮೋದಿ ಸರ್ಕಾರ ಮುಸ್ಲಿಮರನ್ನು ಸಂಪೂರ್ಣವಾಗಿ ಹೊರಗಿಡುವ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದೆ. ಪ್ರಸಕ್ತ, ಹೆಚ್ಚಿನ ಸಂಸ್ಥೆಗಳಲ್ಲಿ ಮುಸ್ಲಿಂ ವಿರೋಧಿ ಭಾವನೆ ಹೆಚ್ಚಾಗುತ್ತಿದೆ.”

ಮುಸ್ಲಿಮರು ಎದುರಿಸುತ್ತಿರುವ ತಾರತಮ್ಯ:

ಭಾರತದಲ್ಲಿ, ಮುಸ್ಲಿಮರು ಉದ್ಯೋಗ, ಶಿಕ್ಷಣ, ವಸತಿ ಇತ್ಯಾದಿ ನೆಲೆಗಳಲ್ಲಿ ನಿರಂತರವಾಗಿ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ಅವರೊಂದು ರಾಜಕೀಯ ಶಕ್ತಿಯಾಗಿ ಬೆಳೆಯಲು ಮತ್ತು ಆರ್ಥಿಕ ಪ್ರಾಬಲ್ಯ ಸಾಧಿಸಲು ನಾನಾ ರೀತಿಯ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಆರೋಗ್ಯ ಸುರಕ್ಷತೆ ಮತ್ತು ಇತರ ಮೂಲಭೂತ ಸೇವೆಗಳು ಅವರಿಗೆ ಸುಲಭವಾಗಿ ದಕ್ಕುತ್ತಿಲ್ಲ. ಇದಲ್ಲದೆ, ಸಾಂವಿಧಾನಿಕ ರಕ್ಷಣೆಗಳ ಹೊರತಾಗಿಯೂ, ತಾರತಮ್ಯತೆವನ್ನು ಅನುಭವಿಸಿ, ಅದಕ್ಕೆ ನ್ಯಾಯ ಪಡೆಯಲು ಹೆಣಗಾಡುತ್ತಾರೆ.

2019ರಲ್ಲಿ, ಸೇವಾ ಸಂಸ್ಥೆ `ಕಾಮನ್ ಕಾಸ್ನಡೆಸಿದ ವಿಶ್ಲೇಷಣಾ ವರದಿ ಹೇಳುವಂತೆ, ದೇಶದಲ್ಲಿರುವ ಸರಿಸುಮಾರು ಅರ್ಧದಷ್ಟು ಪೆÇಲೀಸ್ ಪಡೆ, ಮುಸ್ಲಿಮರ ವಿರುದ್ಧದ ಅಪರಾಧಗಳಲ್ಲಿ ಮಧ್ಯಪ್ರವೇಶಿಸುವ ಸಾಧ್ಯತೆ ಬಹಳ ಕಡಿಮೆ. ವಿಶ್ಲೇಷಕರು ಗಮನಿಸಿದಂತೆ, ಮುಸ್ಲಿಮರ ಮೇಲೆ ದಾಳಿ ಮಾಡುವವರಿಗೆ ಕಠಿಣ ಶಿಕ್ಷೆಯಾಗುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ, ನ್ಯಾಯಾಲಯಗಳು ಮತ್ತು ಸರ್ಕಾರಿ ಸಂಸ್ಥೆಗಳು, ಮುಸ್ಲಿಂ ವಿರೋಧಿ ಹಿಂಸಾಚಾರದಲ್ಲಿ ಭಾಗವಹಿಸಿದ ಹಲವಾರು ಹಿಂದೂಗಳ ಅಪರಾಧ ಪ್ರಕರಣಗಳನ್ನು ರದ್ದುಗೊಳಿಸಿರುವುದನ್ನು ನಾವು ಕಾಣಬಹುದು.

2006ರಲ್ಲಿ, ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು, ಭಾರತದ ಮುಸ್ಲಿಂ ಸಮಾಜಕ್ಕೆ ಸಂಬಂಧಿಸಿದ `ಸಾಚಾರ್ ಸಮಿತಿ ವರದಿಎನ್ನುವ ಮಹತ್ವದ ಅಧ್ಯಯನವನ್ನು ಆಯೋಜಿಸಿತ್ತು. ಇದು, ದೇಶದಲ್ಲಿರುವ ಅನೇಕ ಮತೀಯ ಅಸಮಾನತೆಗಳನ್ನು ಗುರುತಿಸಿತು. ಆದರೆ, ಸರಕಾರ ಮಾತ್ರ ಅದರ ಹೆಚ್ಚಿನ ಶಿಫಾರಸುಗಳನ್ನು ಕಾರ್ಯಗತಗೊಳಿಸಲು ವಿಫಲವಾಯಿತು.

ವಿವಾದಾತ್ಮಕ ಮುಸ್ಲಿಂ ವಿರೋಧಿ ಕ್ರಮಗಳು:

ಡಿಸೆಂಬರ್ 2019ರಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಭಾರತೀಯ ಸಂಸತ್ತು ಅಂಗೀಕರಿಸಿ, ಪ್ರಧಾನಿ ಮೋದಿ ಅದಕ್ಕೆ ಸಹಿ ಹಾಕಿ, ಜಾರಿಗೆ ತರಲಾಯಿತು. ಕಾಯ್ದೆಯು, ನೆರೆ ದೇಶಗಳಾದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ, ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ವಲಸಿಗರಿಗೆ ಪೌರತ್ವವನ್ನು ತ್ವರಿತವಾಗಿ ನೀಡಲು ಅನುವು ಮಾಡಿಕೊಡುತ್ತದೆ. ಮುಸ್ಲಿಮರನ್ನು ಮಾತ್ರ ಹೊರತುಪಡಿಸಿರುವುದು, ಅಲ್ಲದೆ, ಪೌರತ್ವ ನೀಡಲು ಧಾರ್ಮಿಕ ಮಾನದಂಡವನ್ನು ಅನ್ವಯಿಸಿರುವ ಕಾರಣ, ಕಾನೂನು ತಾರತಮ್ಯವಾಗಿದೆ ಎಂದು ವಿಮರ್ಶಕರು ಹೇಳುತ್ತಾರೆ. ಮೂರು ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ಕಿರುಕುಳವನ್ನು ಎದುರಿಸುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲು, ಕಾನೂನನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮೋದಿ ಸರ್ಕಾರ ವಾದಿಸುತ್ತಿದೆ.

ಬಿಜೆಪಿ ತನ್ನ 2019 ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ(ಓಖಅ) ಯನ್ನು ಪೂರ್ಣಗೊಳಿಸುವ ಭರವಸೆ ನೀಡಿದೆ. ಇದರ ಇತಿಹಾಸಕ್ಕೆ ಹೋದರೆ, ಅಸ್ಸಾಂ ರಾಜ್ಯದ ಒಂದು ವಿಶಿಷ್ಟ ಪ್ರಕರಣದಲ್ಲಿ ಅಲ್ಲಿನ ನಿವಾಸಿಗಳು ಭಾರತೀಯ ಪ್ರಜೆಗಳೇ ಅಥವಾ ನೆರೆಯ ಬಾಂಗ್ಲಾದೇಶದಿಂದ ವಲಸೆ ಬಂದವರೇ ಎಂದು ನಿರ್ಧರಿಸಲು ಎನ್ಆರ್ಸಿಯನ್ನು 1950ರಲ್ಲಿ ರಚಿಸಲಾಗಿತ್ತು. 2019ರಲ್ಲಿ, ಅಸ್ಸಾಂ ಸರ್ಕಾರವು ಇದನ್ನು ನವೀಕರಿಸಿ, ಸುಮಾರು ಇಪ್ಪತ್ತು ಲಕ್ಷ ಜನರನ್ನು ಹೊರಗಿಟ್ಟಿತು. ಒಂದು ವೇಳೆ, ಎನ್ಆರ್ಸಿಯನ್ನು ರಾಷ್ಟ್ರವ್ಯಾಪಿ ಜಾರಿಗೆ ತಂದರೆ, ಎಲ್ಲಾ ಭಾರತೀಯರು ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾಗುತ್ತದೆ. ವಿಮರ್ಶಕರು ಹೇಳುವಂತೆ, ಇದು ಅನೇಕ ಮುಸ್ಲಿಮರನ್ನು ಗಡಿಪಾರು ಮಾಡಿಸಬಹುದು. ಏಕೆಂದರೆ, ಅವರಲ್ಲಿ ಅನೇಕರು ಅಗತ್ಯ ದಾಖಲೆಗಳಿಲ್ಲದ ಕಾರಣ, ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ ತ್ವರಿತಗತಿಯ ಪೌರತ್ವಕ್ಕೆ ಅರ್ಹರಾಗಿರುವುದಿಲ್ಲ. ಅದಲ್ಲದೆ, ಮ್ಯಾನ್ಮಾರ್ ನಲ್ಲಿ ಕಿರುಕುಳ ಎದುರಿಸುತ್ತಿರುವ ಮುಸ್ಲಿಂ ರೋಹಿಂಗ್ಯಾ ನಿರಾಶ್ರಿತರನ್ನೂ ಸಹ ಸರ್ಕಾರ ಗಡಿಪಾರು ಮಾಡಿದೆ.

ಇದೇ ವೇಳೆ, ಭಾರತದ ಏಕೈಕ ಮುಸ್ಲಿಂ ಬಹುಸಂಖ್ಯಾತ ರಾಜ್ಯ, ಜಮ್ಮು ಮತ್ತು ಕಾಶ್ಮೀರದ ಅಸ್ತಿತ್ವವನ್ನೇ ಬುಡಮೇಲು ಮಾಡುವ ಪ್ರಯತ್ನ, ಬಿಜೆಪಿ ಸರಕಾರ ಮಾಡಿದೆ. ಆಗಸ್ಟ್ 2019 ರಲ್ಲಿ, ಮೋದಿ ಸರ್ಕಾರವು ವಿವಾದಿತ ಪ್ರದೇಶವನ್ನು ಎರಡು ಭಾಗಗಳಾಗಿ ವಿಭಜಿಸಿ, ಅದರ ವಿಶೇಷ ಸಾಂವಿಧಾನಿಕ ಸ್ವಾಯತ್ತತೆಯನ್ನು ಕಸಿದುಕೊಂಡಿತು. ಇದನ್ನು ಜಾರಿಗೊಳಿಸುವಾಗ, ಸರ್ಕಾರವು ಪ್ರದೇಶದಲ್ಲಿ ತಿಂಗಳುಗಟ್ಟಲೆ ಇಂಟರ್ನೆಟ್ ಮತ್ತು ಮೊಬೈಲ್ ಸೇವೆಗಳನ್ನು ಕಡಿತಗೊಳಿಸಿತು. ಅಲ್ಲದೆ, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಮತ್ತು ಪ್ರತ್ಯೇಕತಾವಾದಿಗಳು ಸೇರಿದಂತೆ ಸಾವಿರಾರು ಜನರನ್ನು ಗೃಹಬಂಧನದಲ್ಲಿರಿಸಿತು.

ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ, ಭಾರತೀಯ ಕೋಮು ಸಂಘರ್ಷದ ವಿಶ್ಲೇಷಕ ಅಶುತೋಷ್ ವಶ್ರ್ನೆ ಹೇಳುವಂತೆ, `ಹಿಂದೂ ರಾಷ್ಟ್ರೀಯವಾದಿಗಳು ಅಧಿಕಾರದಲ್ಲಿ ಮುಂದುವರಿದಂತೆ, ಮುಸ್ಲಿಮರ ಸ್ಥಾನಮಾನದಲ್ಲಿ ಹೆಚ್ಚಿನ ಬದಲಾವಣೆಗಳಾಗಲಿವೆ. ಕಾಲಕಳೆದಂತೆ, ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವುದು ಕೂಡ ಕಷ್ಟ ಸಾಧ್ಯವಾಗಬಹುದು“.

ಹಿಂಸಾತ್ಮಕ ಕೋಮು ಗಲಭೆಗಳ ಹಿನ್ನೋಟ:

1. 1992 ಬಾಬ್ರಿ ಮಸೀದಿ ಧ್ವಂಸ ಪ್ರಕರಣ:

ಅಯೋಧ್ಯೆಯ ಬಾಬ್ರಿ ಮಸೀದಿಯ ವಿವಾದ, ದೇಶದಲ್ಲಿ ಹಲವು ದಶಕಗಳ ಕೋಮು ಸಂಘರ್ಷಕ್ಕೆ ಕಾರಣವಾಗಿದೆ. ಹಿಂದೂಗಳು ಹೇಳುವಂತೆ, ಹದಿನಾರನೇ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ಮುಸ್ಲಿಂ ದಂಡನಾಯಕನೊಬ್ಬ, ಹಿಂದೂ ದೇವರಾದ ರಾಮನ ಜನ್ಮಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಿದ. 1992 ರಲ್ಲಿ ಹಿಂದೂ ಕರಸೇವಕರು ಮಸೀದಿಯನ್ನು ಧ್ವಂಸಗೊಳಿಸಿದರು. ಘಟನೆಯ ನಂತರ ನಡೆದ ಗಲಭೆಯಲ್ಲಿ, ಸುಮಾರು, ಮೂರು ಸಾವಿರ ಜನರು(ಅವರಲ್ಲಿ ಹೆಚ್ಚಿನವರು ಮುಸ್ಲಿಮರು) ಸಾವನ್ನಪ್ಪಿದರು. ಇದು ದೇಶದ ವಿಭಜನೆಯ ನಂತರ ನಡೆದ ಅತ್ಯಂತ ಭೀಕರ ಧಾರ್ಮಿಕ ಸಂಘರ್ಷ. 2020 ರಲ್ಲಿ, ಸುಪ್ರೀಂ ಕೋರ್ಟ್ ಅದರ ನಿರ್ಮಾಣಕ್ಕೆ ಅನುಮೋದನೆ ಕೊಟ್ಟ ನಂತರ, ಪ್ರಧಾನಿ ಮೋದಿ, ಸ್ಥಳದಲ್ಲಿ ಹೊಸ ಹಿಂದೂ ದೇವಾಲಯದ ಶಂಕುಸ್ಥಾಪನೆ ನೆರವೇರಿಸಿದರು.

2. 2002 ಗುಜರಾತ್ ಗಲಭೆ:

ಅಯೋಧ್ಯೆಯಿಂದ ಗುಜರಾತಿಗೆ ಹೋಗುತ್ತಿದ್ದ ರೈಲಿನ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಹತ್ತಾರು ಮಂದಿ ಹಿಂದೂ ಯಾತ್ರಿಕರು ಸಾವನ್ನಪ್ಪಿದ ಘಟನೆಯ ನಂತರ, ದೇಶಾದ್ಯಂತ ಕೋಮು ಘರ್ಷಣೆಗಳು ಪ್ರಾರಂಭವಾದವು. ಹಿಂದೂ ಸಂಘಟನೆಗಳು, ಬೆಂಕಿ ಹಚ್ಚಿದವರು ಮುಸ್ಲಿಮರೆಂದು ಆಪಾದಿಸುತ್ತಾ, ಗುಜರಾತಿನಾದ್ಯಂತ ನೂರಾರು ಮುಸ್ಲಿಮರನ್ನು ಕೊಂದರು, ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರಗೈದರು ಮತ್ತು ಮುಸ್ಲಿಂ ವ್ಯಾಪಾರ ಹಾಗು ಪ್ರಾರ್ಥನಾ ಸ್ಥಳಗಳನ್ನು ನಾಶಪಡಿಸಿದರು. ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು, ಹಿಂಸಾಚಾರವನ್ನು ತಡೆಯಲು ಸಾಕಷ್ಟು ಕೆಲಸ ಮಾಡಿಲ್ಲವೆಂದು ಆರೋಪಿಸಿ, ಪ್ರತಿಪಕ್ಷದ ರಾಜಕಾರಣಿಗಳು, ಮಾನವ ಹಕ್ಕು ಸಂಘಟನೆಗಳು ಮತ್ತು ಅಮೆರಿಕಾದ ರಾಜಕೀಯ ಪ್ರತಿನಿಧಿಗಳು ಟೀಕಿಸಿದರು. ಅನಂತರ, ಭಾರತ ಸರ್ಕಾರ ನಡೆಸಿದ ತನಿಖೆ ಕೂಡ ರೈಲಿನಲ್ಲಿ ಘಟಿಸಿದ ಬೆಂಕಿ ಆಕಸ್ಮಿಕವೆಂದು ಹೇಳಿದೆ. ಆದರೆ, ಕೆಲವು ವಿವಾದಾತ್ಮಕ ವರದಿಗಳು ಇದೊಂದು ಪಿತೂರಿಯೆಂದು ಕೂಡ ಹೇಳಿವೆ.

3. 2013 ಮುಜಾಫರ್ ನಗರ ಗಲಭೆ:

ಮುಜಾಫರ್ ನಗರದ ಹೊರವಲಯದಲ್ಲಿ, ಮುಸ್ಲಿಂ ಪುರುಷರೊಂದಿಗಿನ ವಾಗ್ವಾದದಲ್ಲಿ ಇಬ್ಬರು ಹಿಂದೂ ಪುರುಷರು ಮೃತಪಟ್ಟ ನಂತರ ನಡೆದ ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯಲ್ಲಿ ಅರವತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಅಂದಾಜು ಐವತ್ತು ಸಾವಿರ ಜನರು (ಅವರಲ್ಲಿ ಹೆಚ್ಚಿನವರು ಮುಸ್ಲಿಮರು) ಹಿಂಸೆಯಿಂದಾಗಿ ಓಡಿಹೋದರು. ಅನೇಕರು ತಿಂಗಳುಗಳವರೆಗೆ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದರು. ಇನ್ನು ಕೆಲವರು ಮನೆಗೆ ಮರಳಲೇ ಇಲ್ಲ.

4. ಮುಸ್ಲಿಂ ವಿರೋಧಿ ಬಣಗಳು:

ಇತ್ತೀಚಿನ ವರ್ಷಗಳಲ್ಲಿ, ದೊಡ್ಡ ಪ್ರಮಾಣದ ಹಿಂಸಾಚಾರಗಳು ವಿರಳವಾಗಿದ್ದರೂ, ಮುಸ್ಲಿಮರ ಮೇಲಿನ ದಾಳಿಗಳು ಆಗಾಗ್ಗೆ ಸಂಭವಿಸುತ್ತವೆ. ಹಿಂದೂ ಜಾಗರಣ ಸಂಘಟನೆಗಳ ದಾಳಿಗಳು ಸಾಮಾನ್ಯವಾಗಿದೆ. ಭಾರತದ ಸುಪ್ರೀಂ ಕೋರ್ಟ್ ಕೂಡ ಕುರಿತು ಏಚ್ಚರಿಸಿದೆ. ಮುಸ್ಲಿಂ ವಿರೋಧಿ ಹಿಂಸೆಯು ಸಾಮಾನ್ಯವಾಗಿ, ಹಿಂದೂಗಳು ಪವಿತ್ರವೆಂದು ಪರಿಗಣಿಸುವ ಹಸುಗಳನ್ನು ಅಕ್ರಮವಾಗಿ ಸಾಗಿಸುವ ಅಥವಾ ಕೊಲ್ಲುವ ವದಂತಿಗಳ ಮೇಲೆ ದಾಳಿ ನಡೆಯುತ್ತದೆ. 2019 ಮಾನವ ಹಕ್ಕು ವರದಿಯ ಪ್ರಕಾರ, ಕನಿಷ್ಠ ನಲವತ್ನಾಲ್ಕು ಜನರು(ಅವರಲ್ಲಿ ಹೆಚ್ಚಿನವರು ಮುಸ್ಲಿಮರು), ಗೋರಕ್ಷಕರೆಂದು ಕರೆಯಲ್ಪಡುವವರಿಂದ ಕೊಲ್ಲಲ್ಪಟ್ಟಿದ್ದಾರೆ. ಹಾಗೆಯೇ, “ಲವ್ ಜಿಹಾದ್ಆರೋಪದ ಮೇಲೆ ಮುಸ್ಲಿಂ ಪುರುಷರ ಮೇಲೆ ದಾಳಿ ಮಾಡಲಾಗುತ್ತದೆ. ಅಂದರೆ, ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಪ್ರೀತಿಸಿ, ಮದುವೆಯಾಗಿ ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಅಪವಾದದ ಮೇಲೆ ದಾಳಿಗಳು ನಡೆಯುತ್ತವೆ.

5. 2020 ದೆಹಲಿ ಹಿಂಸಾಚಾರ:

2020 ಮಾರ್ಚ್ ನಲ್ಲಿ, ಮುಸ್ಲಿಮರು ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದಾಗ ಹಿಂಸಾಚಾರ ಭುಗಿಲೆದ್ದಿತು. ದಶಕಗಳ ನಂತರ ನಡೆದ ಭೀಕರ ಕೋಮುಗಲಭೆಯಲ್ಲಿ ಸುಮಾರು ಐವತ್ತು ಜನರು ಕೊಲ್ಲಲ್ಪಟ್ಟರು(ಅವರಲ್ಲಿ ಹೆಚ್ಚಿನವರು ಮುಸ್ಲಿಮರು). ಕೆಲವು ಬಿಜೆಪಿ ರಾಜಕಾರಣಿಗಳು ಹಿಂಸೆಯನ್ನು ಪ್ರಚೋದಿಸಲು ಸಹಾಯ ಮಾಡಿದರು. ಹಿಂದೂ ಸಂಘಟನೆಗಳು ಮುಸ್ಲಿಮರ ಮೇಲೆ ದಾಳಿ ಮಾಡುತ್ತಿರುವುದನ್ನು ತಡೆಯಲು ಪೆÇಲೀಸರು ಮಧ್ಯೆ ಪ್ರವೇಶಿಸಿಲ್ಲವೆಂದು ಕೂಡ ವರದಿಯಾಗಿದೆ.

ವಿಶ್ಲೇಷಕರು ಹೇಳುವಂತೆ, ಸಾಮಾನ್ಯವಾಗಿ ಬಿಜೆಪಿ ನಾಯಕರುಗಳು ಕೋಮುಗಲಭೆಯ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ದ್ವೇಷಪೂರಿತ ತಪ್ಪು ಮಾಹಿತಿಗಳು ಮುಸ್ಲಿಮರ ವಿರುದ್ಧದ ಹಿಂಸೆಯನ್ನು ಪೆÇ್ರೀತ್ಸಾಹಿಸಿವೆ. ಕೊರೊನ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ, ಮುಸ್ಲಿಮರು ವೈರಸ್ ಹರಡುತ್ತಿದ್ದರೆಂದು ಗುಲ್ಲೆಬ್ಬಿಸಿ, ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವ ಕರೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.

ಜಾತ್ಯತೀತತೆ ರಕ್ಷಿಸುವವರು ಯಾರು?

ಹಿಂದೂಗಳಲ್ಲಿ ಮುಸ್ಲಿಂ ವಿರೋಧಿ ಭಾವನೆ ಹೆಚ್ಚಾಗುತ್ತಿದ್ದರೂ ಸಹ, ಎಲ್ಲಾ ಹಿಂದುಗಳು ಮುಸ್ಲಿಂ ವಿರೋಧಿಯಲ್ಲ ಮತ್ತು ಬಿಜೆಪಿಗೆ ಮತ ಹಾಕಿದ ಎಲ್ಲ ಜನರು ಮುಸ್ಲಿಂ ವಿರೋಧಿಗಳಲ್ಲ ಎಂಬುದನ್ನು ತಜ್ಞರು ಒಪ್ಪುತ್ತಾರೆ. ಮುಸ್ಲಿಮರು ಮತ್ತು ಹಿಂದೂಗಳನ್ನು ಒಳಗೊಂಡಂತೆ, ಕಾರ್ಯಕರ್ತರು, ಕಾನೂನು ವಿದ್ವಾಂಸರು ಮತ್ತು ವಿದ್ಯಾರ್ಥಿಗಳು, ಭಾರತದ ಜಾತ್ಯತೀತತೆಯನ್ನು ದುರ್ಬಲಗೊಳಿಸುವ ಬಿಜೆಪಿಯ ಕ್ರಮಗಳ ವಿರುದ್ಧ ಹೋರಾಡಿದ್ದಾರೆ.

ವಿಶೇಷವಾಗಿ, ಪೌರತ್ವ ತಿದ್ದುಪಡಿ ಕಾಯ್ದೆಯು ವ್ಯಾಪಕ ಪ್ರತಿಭಟನೆಗಳನ್ನು ಹುಟ್ಟುಹಾಕಿದೆ. ಅದರ ಅಂಗೀಕಾರದ ನಂತರ, ಅನೇಕ ಮುಸ್ಲಿಮರು ಸೇರಿದಂತೆ ವಿದ್ಯಾರ್ಥಿ ಕಾರ್ಯಕರ್ತರು ಪ್ರದರ್ಶನಗಳನ್ನು ಆಯೋಜಿಸಿದರು. ಪ್ರತಿಭಟನೆ 2020 ಆರಂಭದವರೆಗೂ ಮುಂದುವರೆಯಿತು. ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ನಾವು ಕಾನೂನನ್ನು ಜಾರಿಗೊಳಿಸುವುದಿಲ್ಲವೆಂದು ಹೇಳಿದರು. ಸಂವಿಧಾನದ ಅಭಿಲಾಷೆಯನ್ನು ಉಲ್ಲಂಘಿಸಿದ ಕಾನೂನನ್ನು ಖಂಡಿಸಿ ಸುಮಾರು ಎರಡು ಸಾವಿರ ಶಿಕ್ಷಣ ತಜ್ಞರು ಮತ್ತು ವೃತ್ತಿಪರರು, ಸಹಿ ಆಂದೋಲನ ಆರಂಭಿಸಿದರು. ಕೆಲವು ಕಾನೂನು ವಿದ್ವಾಂಸರು ಭಾರತದ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದರು ಹಾಗೂ ಕಾನೂನು ಅಸಾಂವಿಧಾನಿಕವೆಂದು ವಾದಿಸಿದರು. ಅನಿವಾಸಿ ಭಾರತೀಯರು ಕೂಡ ಇದನ್ನು ವಿರೋಧಿಸಿದರು.

ತಾರತಮ್ಯಕ್ಕೆ ಜಗತ್ತಿನ ಪ್ರತಿಕ್ರಿಯೆ:

ಕಾಶ್ಮೀರದಲ್ಲಿನ ಬೆಳವಣಿಗೆಗಳು ಮತ್ತು ಪೌರತ್ವ ತಿದ್ದುಪಡಿ ಕಾಯಿದೆಯನ್ನು ಉಲ್ಲೇಖಿಸಿ, ಅನೇಕ ವಿದೇಶಿ ಸರ್ಕಾರಗಳು ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಬಿಜೆಪಿಯ ಮುಸ್ಲಿಂ ತಾರತಮ್ಯ ನೀತಿಯನ್ನು ಖಂಡಿಸಿವೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯು, ಕಾನೂನನ್ನು ತಾರತಮ್ಯವೆಂದು ಘೋಷಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಕಾಯ್ದೆ ಜನರನ್ನು ದೇಶಭ್ರಷ್ಟರನ್ನಾಗಿಸಬಹುದು ಎಂದು ಕಳವಳ ವ್ಯಕ್ತಪಡಿಸಿದರು. ಹಲವಾರು ಮುಸ್ಲಿಂಬಹುಸಂಖ್ಯಾತ ರಾಷ್ಟ್ರಗಳು ಮತ್ತು ಅರಬ್ ರಾಜತಾಂತ್ರಿಕರು ಭಾರತದಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೆೀಬಿಯಾದ ವಿರುದ್ಧ ಧ್ವನಿಯೆತ್ತಿದ್ದಾರೆ. ಐವತ್ತೇಳು ಸದಸ್ಯ ರಾಷ್ಟ್ರಗಳ ಸಮೂಹವಾದ ಇಸ್ಲಾಮಿಕ್ ಸಹಕಾರದ ಸಂಘಟನೆ (I) ಭಾರತದಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೆೀಬಿಯಾತಡೆಯಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿತು.

ಅಮೆರಿಕಾ ಕೂಡ, ಮೋದಿ ಸರ್ಕಾರದ ತಾರತಮ್ಯ ನೀತಿಯನ್ನು ತರಾಟೆಗೆ ತೆಗೆದುಕೊಂಡಿದೆ. ಆದರೆ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ವಿಷಯದಲ್ಲಿ ಮೌನವಾಗಿದ್ದಾರೆ ಮತ್ತು ಮೋದಿಯೊಂದಿಗೆ ಆತ್ಮೀಯ ಸಂಬಂಧವನ್ನು ಮುಂದುವರಿಸಿದ್ದಾರೆ. ಫೆಬ್ರವರಿ 2020ರಲ್ಲಿ ಟ್ರಂಪ್ ಭಾರತಕ್ಕೆ ಭೇಟಿ ನೀಡಿದಾಗ, ಮೋದಿಯ ಧಾರ್ಮಿಕ ಸಹಿಷ್ಣುತೆಯನ್ನು ಶ್ಲಾಘಿಸಿದರು ಮತ್ತು ದೆಹಲಿಯಲ್ಲಿ ನಡೆದ ಹಿಂಸಾಚಾರದ ಪ್ರಸ್ತಾಪ ಮಾಡಲಿಲ್ಲ. ಮತ್ತೊಂದೆಡೆ, `ಯುಎಸ್ ಕಮಿಷನ್ ಆನ್ ಇಂಟರ್ ನ್ಯಾಷನಲ್ ರಿಲಿಜಿಯಸ್ ಫ್ರೀಡಂಹೆಸರಿನ ಸ್ವತಂತ್ರ ಸಂಸ್ಥೆ, ತನ್ನ 2020 ವರದಿಯಲ್ಲಿ ಭಾರತವನ್ನು ಪ್ರಕ್ಷುಬ್ಧತೆ ಹೊಂದಿರುವ ದೇಶವೆಂದು ವರ್ಗೀಕರಿಸಿದೆ ಹಾಗೂ ಅತ್ಯಂತ ಕೆಳಗಿನ ಸ್ಥಾನ ಕೊಟ್ಟಿದೆ. ಆಯೋಗವು, ಕೋಮು ಸಂಘರ್ಷ ಸಂಬಂಧವಾಗಿ ಅಧಿಕಾರದೆ ದುರುಪಯೋಗ ಮಾಡುತ್ತಿರುವ ಭಾರತೀಯ ಅಧಿಕಾರಿಗಳನ್ನು ಬಹಿಷ್ಕರಿಸುವಂತೆ ಅಮೆರಿಕಾದ ಸರ್ಕಾರವನ್ನು ಒತ್ತಾಯಿಸಿತು. ಹಾಗೆಯೇ, ಕಾಂಗ್ರೆಸ್ ಪಕ್ಷದ ಸದಸ್ಯರು ಕೂಡ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಕೃಪೆ: ತಿತಿತಿ.ಛಿಜಿಡಿ.oಡಿg

Leave a Reply

Your email address will not be published.