ಅಂತರ್ಜಾತಿ ವಿವಾಹ ಪರಿಹಾರವಲ್ಲ

-ಎಲ್.ಚಿನ್ನಪ್ಪ

ಬಹುಪಾಲು ವಿದ್ವಾಂಸರು ಭಾರತ ಸಮಾಜದಲ್ಲಿ ಜಾತಿಯೇ ಕೇಂದ್ರಬಿಂದು ಎಂದು ವಿವರಿಸುತ್ತಾ ಪ್ರಜಾಸತ್ತಾತ್ಮಕ ರಾಜಕೀಯದ ಮೂಲ ತತ್ವವಾದ ರಾಜಕೀಯ ಸಮಾನತೆಗೆ ಜಾತಿ ವ್ಯವಸ್ಥೆ ಅಡ್ಡಿಯಾಗಿದೆ ಎಂದು ಪ್ರತಿಪಾದಿಸುತ್ತಾರೆ.

ಜನಸಾಮಾನ್ಯರ ದೃಷ್ಟಿಯಲ್ಲಿ ರಾಜಕೀಯ ಎಂದರೆ, ಯಾವ ಮಾರ್ಗವನ್ನಾದರೂ ಹಿಡಿದು ಸಾರ್ವಜನಿಕ ಅಧಿಕಾರವನ್ನು ಪಡೆಯುವ ತಂತ್ರಗಾರಿಕೆ ಎನ್ನುವ ನೆಗಟಿವ್ ಭಾವನೆ ಬೇರೂರಿದೆ. ಜೊತೆಗೆ ಸರಕಾರವು ಒಂದೊದು ಜಾತಿಗೂ ಒಂದೊಂದು ಸವಲತ್ತು ನೀಡುತ್ತ ಜಾತಿಯ ಕರ್ಮಕಾಂಡವನ್ನು ಮತ್ತಷ್ಟು ಪೋಷಿಸುತ್ತಿದೆ. ಜಾತೀಯತೆಯನ್ನು ಪೋಷಿಸಿವುದರಲ್ಲಿ ಮಠಮಾನ್ಯಗಳದು ದೊಡ್ಡ ಪಾತ್ರ. ಬುದ್ಧಿ ಜೀವಿಗಳಾದ ಮಠಾಧೀಶರು ಸ್ವಾರ್ಥ ಬಿಟ್ಟರೆ, ಧರ್ಮಪೀಠಗಳಿಗೆ ತ್ಯಾಗದ ಮೌಲ್ಯ ಉಪದೇಶಿಸುವ ಅರ್ಹತೆ ಅವರಿಗೆ ಬಂದೀತು. ಜಾತಿಯ ಹೆಸರಲ್ಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಮಠಾಧೀಶರು ಇಂದು ಸರಕಾರವನ್ನೇ ನಿಯಂತ್ರಿಸುವಷ್ಟರ ಮಟ್ಟಿಗೆ ಪ್ರಬಲರಾಗಿದ್ದಾರೆ. ಸರಕಾರದಿಂದ ಅನುದಾನ ಗಿಟ್ಟಿಸುವ ಹಲವು ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದು ಪ್ರಜೆಗಳಿಂದ ತೆರಿಗೆ ರೂಪದಲ್ಲಿ ಹರಿದು ಬರುತ್ತಿರುವ ಹಣ ಇಂದು ಮಠಾಗಳ ಬೊಕ್ಕಸ ತುಂಬುತ್ತಿದೆ.

ಬೇರೆ ಧರ್ಮಗಳಲ್ಲಿ ಒಳಪಂಗಡಗಳಿದ್ದರೂ, ಹಿಂದೂ ಧರ್ಮಕ್ಕೆ ಈ ಜಾತೀಯತೆ ಒಂದು ಸಾಂಕ್ರಾಮಿಕ ಪಿಡುಗು. ನಾವು ಕಂಡಂತೆ ಅನೇಕ ಸಮಾಜ ಸುಧಾರಕರು, ಸಂತರು, ದಾರ್ಶನಿಕರು ಇದರ ವಿರುದ್ಧ ಹೋರಾಟ ನಡೆಸಿದ್ದರೂ ಭಾರತದಿಂದ ಜಾತೀಯತೆಯನ್ನು ಓಡಿಸಲು ಸಾಧ್ಯವಾಗಿಲ್ಲ. ಈ ಜಾತೀಯತೆ ಸಮಾಜದ ಕೆಳವರ್ಗದವರನ್ನೇ ಹೆಚ್ಚು ಶೋಷಣೆ ಮಾಡುತ್ತ ಬಂದಿದೆ. ಇಂದು ರಾಜಕೀಯದಲ್ಲಂತೂ ಹೇಸಿಗೆ ಹುಟ್ಟಿಸುವಷ್ಟು ಜಾತಿಯ ಪ್ರಭಾವ ಮೇರೆ ಮೀರಿ ಮೆರೆದಿದೆ. ಜಾತಿ ಎಂಬುದನ್ನು ಬಹಳ ಅನುಕೂಲಸಿಂಧುವಾಗಿ ಬಳಸಿಕೊಳ್ಳುತ್ತಿರುವವರೇ, ನಮ್ಮ ರಾಜಕಾರಣಿಗಳು. ನೆಮ್ಮದಿಯಿಂದ ಬದುಕುವ ಜನರ ಮಧ್ಯೆ ಜಾತಿ ಎಂಬ ವಿಷ ಬೀಜವನ್ನು ಬಿತ್ತುವುದೇ ಕೆಲವು ರಾಜಕಾರಣಿಗಳ ಕೆಲಸ. ಸಮಾಜದಲ್ಲಿ ಸುಶಿಕ್ಷಿತರು ವಿದ್ಯಾವಂತರು ಎನಿಸಿಕೊಂಡ ಬಹುಪಾಲು ಮಂದಿ ಜಾತಿ ಎಂಬ ವಿಷ ವರ್ತುಲದೊಳಗೆ ಸಿಲುಕಿ ತ್ರಿಶಂಕು ಸ್ಥಿತಿಯಲ್ಲಿ ಒದ್ದಾಡುತ್ತಿರುವುದನ್ನು ನಮ್ಮ ಸುತ್ತ-ಮುತ್ತ ದಿನನಿತ್ಯ ಕಾಣುತ್ತಿದ್ದೇವೆ.

ಸಮಾಜದಲ್ಲಿ ಜಾತಿ ಪ್ರಾಬಲ್ಯ ಕ್ಷೀಣಿಸಲು ಬ್ರಾಹ್ಮಣ-ಶೂದ್ರ ಜಾತಿಗಳು ದೊಡ್ಡ ಪ್ರಮಾಣದಲ್ಲಿ ಒಗ್ಗೂಡಬೇಕು, ಅಂತರ್ಜಾತಿ ವಿವಾಹಗಳು ಹೆಚ್ಚಾಗಿ ಜರುಗಬೇಕು ಎಂದು ಸಮಾಜ ಚಿಂತಕರು. ಮೇಧಾವಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರೂ ಸಮಾಜ ಒಂದಿಷ್ಟೂ ಬದಲಾಗಿಲ್ಲ. ನಮ್ಮ ಜಡ್ಡುಗಟ್ಟಿದ ಸಮಾಜವು ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವುದಿಲ್ಲ ಮತ್ತು ಒಪ್ಪಿಕೊಳ್ಳುವುದಿಲ್ಲ. ಅಪ್ಪಿ ತಪ್ಪಿ ಅಂತರ್ಜಾತಿ ವಿವಾಹವಾದವರು ಮುಂದೆ ಅವರ ಮಕ್ಕಳು ಅವರಿಗೆ ಅನುಕೂಲವಾದ ಜಾತಿಯಲ್ಲಿ ಗುರುತಿಸಿಕೊಳ್ಳುತ್ತಾರೆ. ಕೇವಲ ಅಂತರ್ಜಾತಿ ವಿವಾಹದಿಂದ ಜಾತೀಯತೆ ಅಳಿಯದು. ಭಾರತದಲ್ಲಿ ಜಾತಿ ಭೇದ, ಪಾಶ್ಚಾತ್ಯ ದೇಶಗಳಲ್ಲಿ ವರ್ಣ ಭೇದ ಇವೆರಡೂ ಅಳಿಯುವುದು ಅಷ್ಟು ಸುಲಭವಲ್ಲ.

ಸಮಾನ ನಾಗರಿಕ ಸಂಹಿತೆ ಜಾರಿಗೆ ತರಬೇಕು, ಮೀಸಲಾತಿ ಇಲ್ಲದೆ ಪ್ರತಿಭೆಗೆ ಮನ್ನಣೆ ನೀಡಬೇಕು ಎಂದು ವಾದಿಸುವ ಪಕ್ಷಗಳೇ ತಮ್ಮ ಅಭ್ಯರ್ಥಿಗಳನ್ನು ಆಯ್ಕೆಮಾಡುವಾಗ, ಸಚಿವ ಸ್ಥಾನ ನೀಡಬೇಕಾದಾಗ, ನಿಗಮ ಮಂಡಳಿಗೆ ನೇಮಕಮಾಡುವಾಗ ಮತ್ತು ಇನ್ನಿತರೆ ಎಲ್ಲಾ ಸಂದರ್ಭಗಳಲ್ಲಿ ಜಾತಿಯ ಲೆಕ್ಕಾಚಾರದಿಂದಲೇ ಆಯ್ಕೆಗಳು ನಡೆಯುತ್ತವೆ. ಇದು ಪ್ರಜಾಪ್ರಭುತ್ವ ತತ್ವಕ್ಕೆ ಎಸಗಿದ ಘೋರ ಅಪಚಾರ. ಇದುವರೆಗೆ ಸರಕಾರವು ರಾಜಕೀಯ ಪಕ್ಷಗಳು, ಹಿಂದುಳಿದವರು, ದಲಿತರು, ಅಲ್ಪ ಸಂಖ್ಯಾತರು ಎಂದು ವಿಂಗಡಿಸುತ್ತ ಅವರಿಗಾಗಿ ಪ್ರತ್ಯೇಕ ಘಟಕಗಳನ್ನು ಸ್ಥಾಪಿಸುತ್ತಾ ಅವರಿಗಾಗಿಯೇ ಅದ್ದೂರಿ ಸಮಾವೇಶಗಳನ್ನು ನಡೆಸುತ್ತ ಓಟಿಗಾಗಿ ಅವರನ್ನೆಲ್ಲ ಓಲೈಸುತ್ತಾ ಬಂದಿದೆ. ಇದರಿಂದ ಜಾತೀಯತೆ ತೊಲಗದೆ ಇನ್ನಷ್ಟು ವಿಘಟಿಸುವ ಕ್ರಿಯೆಗಳಿಗೆ ಚಾಲನೆ ನೀಡಿದÀಂತಾಗಿದೆ. ಜಾತೀಯತೆಯ ಪ್ರಭಾವದಿಂದಾಗಿ ದೇಶದ ಪ್ರತಿಭೆಗಳಿಗೆ ಸೂಕ್ತ ಮನ್ನಣೆ ದೊರೆಯದೆ, ವಿದೇಶಗಳತ್ತ ಮುಖಮಾಡುವ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ

ರಾಜ್ಯ ಸರಕಾರ ಈಗಾಗಲೇ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಮರಾಠಾ ಅಭಿವೃದ್ಧಿ ನಿಗಮ ಮತ್ತು ಆರ್ಯವೈಶ್ಯ ಅಭಿವೃದ್ಧಿ ನಿಗಮಗಳನ್ನು ಸ್ಥಾಪನೆ ಮಾಡಿದೆ. ಜಾತಿಗೊಂದು ಮಠ, ಮಠಕೊಬ್ಬ ಮಠಾಧೀಶ ಎನ್ನುವುದು ಮೌಢ್ಯತೆಯ ಪರಮಾವಧಿಯೇ ಸರಿ. ಸರಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ಮುಂದೆ ಕೋರ್ಟ್ ಏನು ಆದೇಶ ನೀಡುವುದೋ ಕಾದು ನೋಡಬೇಕಾಗಿದೆ. ಹೀಗೆ ಸರಕಾರ ಎಲ್ಲಾ ಜಾತಿವರ್ಗದವರಿಗೂ ಒಂದೊಂದು ನಿಗಮ-ಮಂಡಳಿಯನ್ನು ಸ್ಥಾಪಿಸುತ್ತಾ ಹೊರಟರೆ, ದೇಶದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಜಾತಿವರ್ಗದವರಿಗೆ ಪ್ರತ್ಯೇಕ ನಿಗಮ-ಮಂಡಳಿಗಳು ಸ್ಥಾಪನೆ ಯಾಗಬೇಕಾಗುತ್ತದೆ.    

ದೇಶ ಸ್ವತಂತ್ರಗೊಂಡು 75 ವರ್ಷಗಳು ಕಳೆದು ಪ್ಲಾಟಿನಂ ಮಹೋತ್ಸವದತ್ತ ಮುನ್ನುಗ್ಗುತ್ತಿದ್ದರೂ ಜಾತೀಯತೆ ಮತ್ತು ಅಸ್ಪøಶ್ಯತೆಯನ್ನು ತೊಲಗಿಸುವ ಪ್ರಾಮಾಣಿಕ ಪ್ರಯತ್ನ ಇನ್ನೂ ಆಗಿಲ್ಲ. ‘ಅಸ್ಪøಶ್ಯತೆ ತೊಲಗಬೇಕು, ಸಮಾನತೆ ಮೂಡಬೇಕು’ ಎಂದು ಗಾಂಧಿ ಹೇಳಿದ ಮಾತುಗಳಿಗೆ ಕಿಂಚಿತ್ ಬೆಲೆಯೂ ಇಲ್ಲವಾಗಿದೆ. ಜಾತಿಗಳು ಅಳಿದು ಅಸ್ಪøಶ್ಯತೆ ಮಾಯವಾಗಿ ಎಲ್ಲರಲ್ಲಿ ಸಮಾನತೆ ಎಂದು ಮೂಡುವುದೋ ಅಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೊಂದು ನಿಜವಾದ ಅರ್ಥ ಬಂದೀತು.

Leave a Reply

Your email address will not be published.