ಅಂಬೇಡ್ಕರ್ ಸ್ಕೂಲ್‍ಗೆ ಆದ ಗತಿ ಬೆಂಗಳೂರು ಕೇಂದ್ರ ವಿವಿಗೂ ಕಾದಿದೆಯೇ?

ಅಂಬೇಡ್ಕರ್ ಶಾಲೆಗಾದ ಗತಿ ಬೆಂಗಳೂರು ಕೇಂದ್ರ ವಿವಿಗೆ ಸಹ ಬರಬಾರದು ಎಂಬ ನಮ್ಮ ಕಾಳಜಿಗೆ ಕುಮಾರಸ್ವಾಮಿ ಸ್ಪಂದಿಸುತ್ತಾರೆಂಬ ಆಶಯವಿದೆ. ಇಲ್ಲವಾದಲ್ಲಿ ಕರ್ನಾಟಕದ ತೆರಿಗೆ ಆದಾಯದ ನೂರಿನ್ನೂರು ಕೋಟಿ ರೂಗಳು ಪೋಲಾಗುವುದು ಗ್ಯಾರಂಟಿ.

ಸಾಮಾನ್ಯವಾಗಿ ರಾಜ್ಯ ಮುಂಗಡಪತ್ರದಲ್ಲಿ ಉನ್ನತ ಶಿಕ್ಷಣದ ಬಗ್ಗೆ ಔಪಚಾರಿಕ ಉಲ್ಲೇಖವಿರುತ್ತದೆ. ಈ ವಲಯಕ್ಕೆ ನೀಡಿರುವ ಅನುದಾನದ ಮೊತ್ತದ ಜೊತೆಗೆ ಕರ್ನಾಟಕದ ಯಾವುದಾದರೊಂದು ಜಿಲ್ಲೆಯಲ್ಲಿ ಹೊಸ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಘೋಷಣೆಯಿರುತ್ತದೆ. ಆದರೆ 2019-20ರ ಆಯವ್ಯಯಪತ್ರದಲ್ಲಿ ಎರಡು ವಿಶೇಷ ಉಲ್ಲೇಖಗಳಿವೆ. ಈ ಎರಡನ್ನೂ ಹೇಗಿತ್ತೋ ಹಾಗೆಯೇ ಇಲ್ಲಿ ಉದ್ಧರಿಸಲಾಗಿದೆ.

“125. ನಮ್ಮ ಸರ್ಕಾರವು ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರವನ್ನು ಸುಧಾರಿಸಲು ಉದ್ದೇಶಿಸಿದೆ. ಈಗ ಕರ್ನಾಟಕದ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ವಿದ್ಯಾರ್ಥಿ ಸಂಬಂಧಿತ ವಿಷಯಗಳು ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕೇಂದ್ರಿತವಾಗಿವೆ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಭೌಗೋಳಿಕ ಆಧಾರದ ಮೇಲೆ ಎಂಜಿನಿಯರಿಂಗ್ ಕಾಲೇಜುಗಳನ್ನು ಮರುವಿಂಗಡಣೆ ಮಾಡಿ ಹಾಸನದಲ್ಲಿ ಒಂದು ಹೊಸ ತಾಂತ್ರಿಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನಿರ್ಧರಿಸಿದೆ.”

ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯನ್ನು ವಿಭಜನೆ ಮಾಡಿ ದಕ್ಷಿಣ ಕರ್ನಾಟಕದ ತಾಂತ್ರಿಕ ಕಾಲೇಜುಗಳ ಮೇಲೆ ನಿಯಂತ್ರಣ ಹೊಂದಿರುವ ವಿಶ್ವವಿದ್ಯಾಲಯವೊಂದನ್ನು ಹಾಸನದಲ್ಲಿ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ. ನಂತರದ ಟೀಕೆಗಳಿಗೆ ಉತ್ತರ ನೀಡುತ್ತಾ ತಾವು ಬೆಳಗಾವಿಯ ವಿಶ್ವೇಶ್ವರಯ್ಯ ವಿವಿಯನ್ನು ವಿಭಜನೆ ಮಾಡುತ್ತಿಲ್ಲವೆಂದು ಅವರು ಹೇಳಿದರೂ ಬಜೆಟ್ ಪತ್ರದಲ್ಲಿ ಅಡಕವಾಗಿರುವ ಹೇಳಿಕೆ ಪ್ರಕಾರವಾಗಿ ತಾಂತ್ರಿಕ ವಿವಿಯನ್ನು ವಿಭಜನೆ ಮಾಡುವ ಉದ್ದೇಶ ಸ್ಪಷ್ಟವಾಗಿದೆ. ಮುಖ್ಯಮಂತ್ರಿಯ ಗಮನಕ್ಕೆ ಬಾರದೆ ಈ ಘೋಷಣೆ ಮುಂಗಡಪತ್ರದಲ್ಲಿ ಅಡಕವಾಗಿರುವ ಸಾಧ್ಯತೆಯಿದ್ದರೂ ಕುಮಾರಸ್ವಾಮಿಯವರು ತಾವು ಸದನದಲ್ಲಿ ಓದಿದ ಬಜೆಟ್ ದಾಖಲೆಯ ಇರಾದೆಯ ಬಗ್ಗೆ ಸ್ಪಷ್ಟೀಕರಣ ನೀಡುವ ಅಗತ್ಯವಿದೆ.

ಇದಕ್ಕಿಂತ ಮುಖ್ಯವಾಗಿ ಕುಮಾರಸ್ವಾಮಿಯವರು ಬೆಂಗಳೂರು ಕೇಂದ್ರ ವಿವಿಯ ವಿಷಯದಲ್ಲಿ ಮತ್ತೊಂದು ಘೋಷಣೆ ಮಾಡಿದರು.

“122. ತಮ್ಮೆಲ್ಲರಿಗೂ ಕಂಡು ಬಂದಂತೆ ಪ್ರಸ್ತುತ ಉನ್ನತ ಶಿಕ್ಷಣ ಪದ್ಧತಿಯಲ್ಲಿ ಕಳೆದ 70 ವರ್ಷಗಳಿಂದ ಯಾವುದೇ ರೀತಿಯ ಆಮೂಲಾಗ್ರ ಬದಲಾವಣೆ ಕಂಡು ಬಂದಿಲ್ಲ. ಇಂಟರ್‍ನೆಟ್ ಆಧಾರಿತ ತಂತ್ರಜ್ಞಾನದಿಂದ ಬೋಧನಾ ಕ್ರಮವನ್ನು ಪ್ರಪಂಚದ ಯಾವುದೇ ಮೂಲೆಗೆ ತಲುಪಿಸಲು ಸಾಧ್ಯವಾಗಿದೆ. ಇದಲ್ಲದೇ ವಿಶ್ವದಾದ್ಯಂತ ಯಾವುದೇ ಸ್ಥಳದಲ್ಲಿದ್ದರೂ ಸಹ ವಿದ್ಯುನ್ಮಾನದ ಮುಖಾಂತರ ಯಾವುದೇ ಕೋರ್ಸ್‍ಗೆ ಸೇರಿಕೊಳ್ಳಬಹುದಾಗಿದೆ. ಪರೀಕ್ಷಾ ಪದ್ಧತಿಯು ಬದಲಾಗಿದ್ದು, ಇಂಟರ್‍ನೆಟ್ ಮುಖಾಂತರ ಪರೀಕ್ಷೆ ತೆಗೆದುಕೊಳ್ಳುವುದು ಅನುಕೂಲವಾಗಿದೆ. ಮುಂದುವರೆದು, ವಿಶ್ವವಿದ್ಯಾಲಯಗಳು ನೇರವಾಗಿ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳ ಮುಂದೆ ಸಂಪರ್ಕ ಹೊಂದಿ ಉದ್ಯೋಗಗಳಿಗೆ ಆವಶ್ಯಕವಿರುವ ನೂತನ ಪಠ್ಯಕ್ರಮದ ಮೂಲಕ ಉನ್ನತ ವಿದ್ಯಾಭ್ಯಾಸ ನೀಡಲಿವೆ. ಈ ಹಿನ್ನೆಲೆಯಲ್ಲಿ ನಾನು ಬೆಂಗಳೂರಿನ ಕೇಂದ್ರ ವಿಶ್ವವಿದ್ಯಾಲಯದಲ್ಲಿ “ಹೊಸ ಪೀಳಿಗೆ ಉನ್ನತ ಶಿಕ್ಷಣ” (ನೆಕ್ಸ್ಟ್ ಜೆನೆರೇಶನ್ ಲರ್ನಿಂಗ್ ಇನಿಶಿಯೇಟಿವ್) ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಿರುತ್ತೇನೆ. ಈ ಬದಲಾಯಿತ ಉನ್ನತ ಶಿಕ್ಷಣದ ಕ್ರಮದಲ್ಲಿ ಕೆಳಕಂಡ ಹೊಸ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುವುದು.

1. ಆಜೀವ ಪರ್ಯಂತ ಕಲಿಕೆ (ಲೈಫ್ ಲಾಂಗ್ ಲರ್ನಿಂಗ್)

2. ಪಠ್ಯ ಕ್ರಮದೊಂದಿಗೆ ಕೌಶಲ್ಯವನ್ನು ಅಳವಡಿಸಿಕೊಳ್ಳುವುದು (ಕಂಬೈನಿಂಗ್ ಥಿಯರಿ ವಿಥ್ ಸ್ಕಿಲ್ ಲರ್ನಿಂಗ್)

3. ತಾಂತ್ರಿಕ ಸಹಾಯದಿಂದ ಕಲಿಕೆ (ಟೆಕ್ನಾಲಜಿ ಅಸ್ಸಿಸ್ಟೆಡ್ ಲರ್ನಿಂಗ್)

4. ಬಹು ವಿಷಯಾಧಾರಿತ ಕಲಿಕೆ (ಮಲ್ಟಿ ಡಿಸ್ಸಿಪ್ಲಿನರಿ ಲರ್ನಿಂಗ್)

ಈ ರೀತಿ ಹೊಸ ಪೀಳಿಗೆ ಉನ್ನತ ಶಿಕ್ಷಣ ಪದ್ಧತಿಯನ್ನು ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಅಳವಡಿಸಿಕೊಳ್ಳಲು ನನ್ನ ನೇತೃತ್ವದಲ್ಲಿ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಈ ಸಮಿತಿಯ ಮಾರ್ಗದರ್ಶನದಲ್ಲಿ ಮೇಲ್ಕಂಡ ಉದ್ದೇಶಗಳನ್ನು ಸಫಲಗೊಳಿಸಲು ಕ್ರಮವನ್ನು ಕೈಗೊಳ್ಳುತ್ತೇನೆ.”

ಬೆಂಗಳೂರು ಕೇಂದ್ರ ವಿವಿಯನ್ನು ಎಂದಿನಂತೆ ಕಾಲೇಜುಗಳನ್ನು ನೋಂದಾಯಿಸಿಕೊಳ್ಳುವ ಸಾಮಾನ್ಯ ವಿಶ್ವವಿದ್ಯಾಲಯದ ಹೊರತಾಗಿ ನಿಜಕ್ಕೂ ‘ಉನ್ನತ’ ಶಿಕ್ಷಣ ಸಂಸ್ಥೆಯಾಗಿ ರೂಪಿಸುವ ಈ ಘೋಷಣೆ ಸರಿಯಾಗಿಯೇ ಇದೆ. ಆದರೆ ಈ ಘೋಷಣೆಯ ಬಗ್ಗೆ ಕೆಲವು ಕುತೂಹಲದ ಪ್ರಶ್ನೆಗಳಿವೆ.

• ಬೆಂಗಳೂರು ಕೇಂದ್ರ ವಿವಿಯ ಬಗ್ಗೆ ನೀಡಿದ ಈ ಘೋಷಣೆಯನ್ನು ಕುಮಾರಸ್ವಾಮಿ ಅರ್ಥ ಮಾಡಿಕೊಂಡಿದ್ದಾರೆಯೇ? ಅವರ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯ ಮುಂದಾಳತ್ವ ವಹಿಸುವ ಶೈಕ್ಷಣಿಕ ಅರ್ಹತೆ ಅವರಿಗಿದೆಯೇ?

• ಪ್ರಕಟಿತ ಉದ್ದೇಶವನ್ನು ಸಫಲಗೊಳಿಸುವ ಕಾರ್ಯಸೂಚಿ, ತಂಡ ಹಾಗೂ ಬದ್ಧತೆ ಕರ್ನಾಟಕ ಸರ್ಕಾರಕ್ಕೆ ಇರುವುದು ಸಾಧ್ಯವಿದೆಯೇ?

• ಈ ಯೋಜನೆಯಡಿ ಕರ್ನಾಟಕ ಸರ್ಕಾರದ ಕೆಲವು ಐಎಎಸ್ ಅಧಿಕಾರಿಗಳನ್ನು ನಿವೃತ್ತಿ ನಂತರವೂ ನಿಯೋಜನೆ ಮಾಡಿ ಆಶ್ರಯತಾಣ ನೀಡುವ ಒಳ ಉದ್ದೇಶವೇನಾದರೂ ಇದೆಯೇ?

• ಇಂದಿನ ಪೀಳಿಗೆಗೇ ನೀಡಬೇಕಿರುವ ಉನ್ನತ ಶಿಕ್ಷಣ ನೀಡಲಾಗದ ನಮ್ಮ ಸರ್ಕಾರಿ ವಿವಿಗಳು ಪ್ರಸಕ್ತ ಸನ್ನಿವೇಶದಲ್ಲಿ ‘ಮುಂದಿನ ಪೀಳಿಗೆ’ಗೆ ಸೂಕ್ತ ಉನ್ನತ ಶಿಕ್ಷಣ ನೀಡುವುದು ಸಾಧ್ಯವಿದೆಯೇ?

ಕರ್ನಾಟಕ ಸರ್ಕಾರವು ತನ್ನ ಪ್ರಕಟಿತ ಉದ್ದೇಶದಂತೆ ಬೆಂಗಳೂರು ಕೇಂದ್ರ ವಿವಿಯಲ್ಲಿ ‘ಮುಂದಿನ ಪೀಳಿಗೆ’ಗೆ ಸೂಕ್ತ ಉನ್ನತ ಶಿಕ್ಷಣ ನೀಡಬಾರದೆಂತೇನಿಲ್ಲ. ಆದರೆ ಇದುವರೆಗಿನ ಸರ್ಕಾರದ ಘೋಷಣೆಗಳು ಮತ್ತು ಅದರ ಪರಿಣಾಮಗಳು ಪ್ರೋತ್ಸಾಹದಾಯಕವಾಗಿಲ್ಲ. ಜಿಂದಲ್ ಅಲ್ಯುಮಿನಿಯಮ್‍ನ ಸೀತಾರಾಮ್ ಜಿಂದಲ್‍ರವರು ತಾವೇ ಹಣ ಹೂಡಿಕೆ ಮಾಡಿ ‘ಬೆಂಗಳೂರು ಸ್ಕೂಲ್ ಆಫ್ ಎಕನಾಮಿಕ್ಸ್’ ತೆರೆಯಹೊರಟಿದ್ದರು. ಬೆಂಗಳೂರು ವಿವಿಯ ಹತ್ತು ಎಕರೆ ಜಮೀನು ನೀಡುವ ಹೊರತಾಗಿ ಸರ್ಕಾರಕ್ಕೆ ಯಾವುದೇ ಹೊರೆ ಇರುತ್ತಿರಲಿಲ್ಲ. ಬೆಂಗಳೂರಿಗೆ ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಯೊಂದು ದೊರೆಯುತ್ತಿತ್ತು. ಸರ್ಕಾರವು ಸೂಕ್ತ ಸಮಿತಿ, ನಿಯಮಾವಳಿ ಹಾಗೂ ನಿಯಂತ್ರಣಕ್ಕೆ ಒಳಪಡಿಸಿ ಜಿಂದಲ್ ಸಂಸ್ಥೆಗೆ ಜಾಗ ಬಿಟ್ಟುಕೊಡಬಹುದಾಗಿತ್ತು. ಒಡಂಬಡಿಕೆ ಮಾಡಿಕೊಂಡು ರಾಜ್ಯಕ್ಕೆ ನಿಜಕ್ಕೂ ‘ಉನ್ನತ’ ಶಿಕ್ಷಣ ನೀಡಬಲ್ಲ ಸಂಸ್ಥೆಯೊಂದರ ಕೊಡುಗೆ ನೀಡಬಹುದಾಗಿತ್ತು.

ಯಾವುದೋ ಘನಂದಾರಿ ಉದ್ದೇಶವಿಟ್ಟು ಹೊರಟು ಕಡೆಗೆ ಯಾರಿಗೂ ಬೇಡವಾದ ಸರ್ಕಾರಿ ‘ಬಿಳಿಯಾನೆ’ ಸಂಸ್ಥೆಯನ್ನು ಸ್ಥಾಪಿಸಬಾರದು. ಸರ್ಕಾರದ ಇತಿಮಿತಿಯಲ್ಲಿ ಸಾಧ್ಯವಿರುವ ಕೆಲಸವನ್ನು ಮಾಡಬೇಕೇ ಹೊರತು ಅಂಗೈ ನೀರಿನಲ್ಲಿ ಆಕಾಶ ತೋರಿಸುವ ಚಾಳಿ ಬಿಡಬೇಕು.

ಆದರೆ ಅಂದಿನ ಸರ್ಕಾರ ಕುಹಕಿಗಳ ಪೊಳ್ಳು ಬೆದರಿಕೆಗಳಿಗೆ ಮಣಿದು ಈ ಶಾಲೆಯನ್ನು ಸರ್ಕಾರಿ ವಲಯದಲ್ಲಿಯೇ ತೆರೆಯಲು ಮುಂದಾಯಿತು. ತನ್ನ ಹೊಣೆಗೇಡಿತನ ಮರೆಮಾಚಲು ಈ ಶಾಲೆಗೆ ಅಂಬೇಡ್ಕರ್ ಹೆಸರಿಟ್ಟು ಅದನ್ನು ‘ಹೋಲಿ ಕೌ’ ಮಾಡಿತು. ಇಂದು ಆ ‘ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ ನೋಡುವಂತಿಲ್ಲ. ಅನನುಭವಿ ನಿವೃತ್ತ ಅಧಿಕಾರಿಯೊಬ್ಬ ಅದರ ಆಡಳಿತಾಧಿಕಾರಿಯಾಗಿದ್ದಾರೆ. ಎರವಲು ಸೇವೆಯ ಮತ್ತು ಗುತ್ತಿಗೆ ಮೇಲಿನ ಅಧ್ಯಾಪಕರನ್ನು ಪಡೆದು ‘ಬಿ.ಎ.’ ಕೋರ್ಸ್ ಪ್ರಾರಂಭಿಸಲಾಗಿದೆ. ಅಲ್ಲಿ ನೀಡಲಾಗುತ್ತಿರುವ ಶಿಕ್ಷಣ ಮಟ್ಟ ಬೆಂಗಳೂರಿನ ಯಾವುದೇ ಕಾಲೇಜಿನಲ್ಲಿ ನೀಡಲಾಗುತ್ತಿರುವ ಶಿಕ್ಷಣ ಮಟ್ಟಕ್ಕೆ ಹೊರತಾಗಿಲ್ಲ. ಬೇರೆಲ್ಲೂ ಪ್ರವೇಶ ಸಿಗದ ವಿದ್ಯಾರ್ಥಿಗಳು ಇಂದು ಅಂಬೇಡ್ಕರ್ ಶಾಲೆಗೆ ಸೇರುತ್ತಿದ್ದಾರೆ.

ಬೆಂಗಳೂರು ಕೇಂದ್ರ ವಿವಿಯ ಬಗ್ಗೆ ಕುಮಾರಸ್ವಾಮಿಯವರ ಘೋಷಣೆ ಬಗ್ಗೆ ನಮ್ಮ ಕಾಳಜಿಯ ಹಿನ್ನೆಲೆ ಇದು. ಅಂಬೇಡ್ಕರ್ ಶಾಲೆಗಾದ ಗತಿ ಕೇಂದ್ರ ವಿವಿಗೂ ಸಹ ಬರಬಾರದು. ಯಾವುದೋ ಘನಂದಾರಿ ಉದ್ದೇಶವಿಟ್ಟು ಹೊರಟು ಕಡೆಗೆ ಯಾರಿಗೂ ಬೇಡವಾದ ಸರ್ಕಾರಿ ‘ಬಿಳಿಯಾನೆ’ ಸಂಸ್ಥೆಯನ್ನು ಸ್ಥಾಪಿಸಬಾರದು. ಸರ್ಕಾರದ ಇತಿಮಿತಿಯಲ್ಲಿ ಸಾಧ್ಯವಿರುವ ಕೆಲಸವನ್ನು ಮಾಡಬೇಕೇ ಹೊರತು ಅಂಗೈ ನೀರಿನಲ್ಲಿ ಆಕಾಶ ತೋರಿಸುವ ಚಾಳಿ ಬಿಡಬೇಕು. ಯಾವ ಕೆಲಸಗಳು ಸರ್ಕಾರಿ ವಲಯದಲ್ಲಿ ಸಾಧ್ಯವಿದೆ ಹಾಗೂ ಯಾವ ಸವಾಲುಗಳನ್ನು ಖಾಸಗಿ ವಲಯಕ್ಕೆ ಬಿಟ್ಟುಕೊಡಬೇಕು ಎಂಬ ತಿಳಿವಳಿಕೆಯಿರಬೇಕು.

ಅಂಬೇಡ್ಕರ್ ಶಾಲೆಗಾದ ಗತಿ ಬೆಂಗಳೂರು ಕೇಂದ್ರ ವಿವಿಗೆ ಸಹ ಬರಬಾರದು ಎಂಬ ನಮ್ಮ ಕಾಳಜಿಗೆ ಕುಮಾರಸ್ವಾಮಿ ಸ್ಪಂದಿಸುತ್ತಾರೆಂಬ ಆಶಯವಿದೆ. ಇಲ್ಲವಾದಲ್ಲಿ ಕರ್ನಾಟಕದ ತೆರಿಗೆ ಆದಾಯದ ನೂರಿನ್ನೂರು ಕೋಟಿ ರೂಗಳು ಪೋಲಾಗುವುದು ಗ್ಯಾರಂಟಿ. ಇದರ ಜೊತೆಗೆ ಉನ್ನತ ಶಿಕ್ಷಣದ ಉದಾತ್ತ ಆಶಯಗಳನ್ನು ಮಣ್ಣುಗೆಡವಿದ ಕುಖ್ಯಾತಿಯೂ ಈ ಸರ್ಕಾರಕ್ಕೆ ಅಂಟಲಿದೆ.

Leave a Reply

Your email address will not be published.