ಅಕ್ಕಡಿ ಸಾಲು ಕರುಳು ಮಿಡಿಯುವ ಹೆಣ್ಣು ಬರಹ

ಹೃದಯಸ್ಪರ್ಶಿ ‘ಅಕ್ಕಡಿಯ ಸಾಲು’ ಸಾಲುಗಳಲ್ಲಿ ಸತ್ಯಗಳನ್ನು ಒತ್ತೊತ್ತಾಗಿ ಬಿತ್ತಲಾಗಿದೆ. ಕಾವ್ಯಾಸಕ್ತರ ಮನಸು ಕದ್ದ ಕಾವ್ಯ ಮಕಾನದಾರರದು. ಹರೆಯದ ಆಸೆ ಆಕಾಂಕ್ಷೆಗಳನ್ನು ನುಚ್ಚು ನೂರಾಗಿಸಿ ನುಚ್ಚಿನ ಗಡಿಗೆಗೆ ಹಾಕಿ ಕುದಿಸುವ ಕಾವ್ಯಚಿತ್ರಣ ಮನ ತಟ್ಟುತ್ತದೆ.

-ಡಾ.ಕೆ.ಷರೀಫ

ಎ.ಎಸ್.ಮಕಾನದಾರ ಅವರ 3 ದಶಕಗಳ ಕಾವ್ಯವನ್ನು ಸಮಗ್ರವಾಗಿ ಪ್ರಕಟಿಸಿದ ‘ಅಕ್ಕಡಿ ಸಾಲು’ ಸಂಕಲನವು, ಸುಮಾರು 211 ಕವಿತೆಗಳ 240 ಪುಟಗಳ ಪುಸ್ತಕ. ಮಕಾನದಾರ ಅವರ ಕವಿತೆಗಳು ವ್ಯವಸ್ಥೆಯಲ್ಲಿಯ ಕ್ರೂರ ಸತ್ಯಗಳನ್ನು ಮುಖಾಮುಖಿಯಾಗುತ್ತಲೇ ಜೀವರಸದ ಸೆಲೆಗಳಾಗಿ ಹೊರಹೊಮ್ಮುತ್ತವೆ. ಅವರು ಬಹುತ್ವದ ನೆಲೆಗಳನ್ನು ನಂಬಿ ನಡೆದವರು. ಈ ಬಹುತ್ವದ ಸೆಲೆ ಅಕ್ಕಡಿ ಸಾಲುಗಳಲ್ಲಿ ವ್ಯಂಗ್ಯ, ವಿಷಾದ, ಬದುಕಿನ ನೋವು, ನಲಿವು, ತಲ್ಲಣಗಳ ಮಧ್ಯೆ ಬಿಕ್ಕುವ ಕವಿತೆಗಳಿವೆ. ಮಕಾನದಾರರ ಬದುಕಿನಲ್ಲಿ ಅವರ ಬರಹಕ್ಕೊಂದು ಮಹತ್ವದ ತಿರುವು ನೀಡಿದ್ದು ಅಕ್ಕಡಿ ಸಾಲು ಎಂದೇ ಹೇಳಬಹುದು.

ಮಕಾನದಾರರ ಕಾವ್ಯದ ಮೇರು ಭಾವ ಅವ್ವ. ಅವ್ವನ ಕಷ್ಟ ಕಾರ್ಪಣ್ಯ, ಸುಖ-ದುಃಖಗಳನ್ನು ಕಣ್ಣ ಮುಂದೆಯೇ ಕಂಡವರು. ಆದ್ದರಿಂದಲೇ ಅವರದು ಕರುಳು ಮಿಡಿಯುವ ಹೆಣ್ಣು ಬರಹ. ಹೆಣ್ಣಿನ ಕರುಳ ಮಿಡಿತವೇ ಇವರ ಕಾವ್ಯದ ಜೀವಾಳ. ರೋದಿಸುವ ಅಕ್ಷರಗಳಿಗೆ ವಿಶ್ವಾಸ ಹನಿಸುವ ಅವ್ವ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಳೆ. ಚೊಚ್ಚಲ ಮಗನ ಜೀತಕ್ಕಿಟ್ಟು, ಹಳಸಿದ ಸಂಗ್ಟಿ ಕುಡಿದು ರಂಜಾನ್ ರೋಜಾ ಮುಗಿಸಿ ಚೌಕಿಮಠದಲ್ಲಿ ಪುರಾಣ ಕೇಳುವ ಅವರ ಅಮ್ಮ ನನ್ನಮ್ಮನಂತೆಯೇ. ಅವರು ಸೌಹಾರ್ದದ ಕೊಂಡಿಗಳನ್ನು ಕಾಪಿಟ್ಟ ಮುಗ್ಧರು. ಸೌಹಾರ್ದದ ಸೋನೆ ಮಳೆಯಲ್ಲಿ ಕುಂಟಾಬಿಲ್ಲೆ, ಲಗೋರಿ ಆಟಗಳನ್ನು ಆಡುವ ಲೇಖಕ ಬಡತನದಲ್ಲಿಯೇ ಬದುಕಿದರು. ಸ್ವಾಭಿಮಾನದ ಖನಿ ಆ ಜನರು. ಕೋಮುವಾದೀ ರಾಜಕಾರಣ ನೋಡಿದ ಲೇಖಕ, ‘ಯಾರು ನೆಟ್ಟರು ಸೌಹಾರ್ದ ನಾಡಲ್ಲಿ…’ ಎಂದು ಪ್ರಶ್ನಿಸುತ್ತಾರೆ. ಮುಂದುವರಿದು, ‘ಸೌಹಾರ್ದತೆಯ ಸೆಲೆ ಉಕ್ಕಿಸುವ ಹಕೀಂ ನಾನು. ಬೇಕಾಗಿಲ್ಲ ನನಗೆ ಯಾರದೇ ಹುಕುಂ’ ಎನ್ನುವ ಕವಿ ಜಾತಿ, ಮತ, ಧರ್ಮ, ದೇವರುಗಳಾಚೆ ನಿಂತು ಅಪ್ಪಟ ಮನುಷ್ಯನಾಗುತ್ತಾನೆ. ಉರಿಯುವ ಕೋಮುವಾದದ ಕೆಂಡಕ್ಕೆ ನೀರೆರೆಯುತ್ತಾನೆ.

 

 

ಕವಿ: ಎ.ಎಸ್.ಮಕಾನದಾರ
ಪುಟ: 240 ಬೆಲೆ: ರೂ.199
ಪ್ರಕಾಶನ: ನಿರಂತರ ಪ್ರಕಾಶನ, ಗದಗ

ಹೃದಯಸ್ಪರ್ಶಿ ‘ಅಕ್ಕಡಿಯ ಸಾಲು’ ಸಾಲುಗಳಲ್ಲಿ ಸತ್ಯಗಳನ್ನು ಒತ್ತೊತ್ತಾಗಿ ಬಿತ್ತಲಾಗಿದೆ. ಕಾವ್ಯಾಸಕ್ತರ ಮನಸು ಕದ್ದ ಕಾವ್ಯ ಮಕಾನದಾರರದು. ಹರೆಯದ ಆಸೆ ಆಕಾಂಕ್ಷೆಗಳನ್ನು ನುಚ್ಚು ನೂರಾಗಿಸಿ ನುಚ್ಚಿನ ಗಡಿಗೆಗೆ ಹಾಕಿ ಕುದಿಸುವ ಕಾವ್ಯಚಿತ್ರಣ ಮನ ತಟ್ಟುತ್ತದೆ. ಅವ್ವ ಬೆಟ್ಟದಂತಹ ಸಹನಾಮೂರ್ತಿಯಾಗಿ ಕಂಗೊಳಿಸುತ್ತಾಳೆ. ಭಿಕ್ಷೆ ಬೇಡುವ ಕರುಳ ಕುಡಿಗಳ ಸಂಕಟ ನುಂಗಿಕೊಳ್ಳುತ್ತಾಳೆ. ಕೊನೆಗೆ ಹೊದ್ದಿರುವ ಬುರ್ಖಾದ ನಕಾಬನ್ನು ಕಿತ್ತೆಸೆದು ಕುಂಟೆತ್ತಿನ ಜೋಡಿ ನಟ್ಟು ಹೊಡೆದು ಅನ್ನ ಬಿತ್ತಿ ಬೆಳೆದ ಅಮ್ಮನ ಹೋಲಿಕೆ ಇನ್ನೊಂದಿಲ್ಲ. ಕೊನೆಗೆ ಧೈರ್ಯದ ಬೆಟ್ಟವಾಗಿ ಅಮ್ಮ ಇದಿರುಗೊಳ್ಳುವ ಪರಿ ಅನೂಹ್ಯ.

ಅಂತಃಕರಣವೇ ಬತ್ತಿ ಹೋದ ಲೋಕದಲ್ಲಿ ಅವ್ವ ಸತ್ತ ಮಗನ ಶವಕ್ಕೆ ಜನಾಝ ಸಿಗದೆ ಬಿಕ್ಕುತ್ತಾಳೆ. ಮಗ ಸತ್ತಾಗ ಕಫನ್, ದಫನ್‍ಗೆ ಹಣವಿಲ್ಲದೆ ಬಿಕ್ಕುತ್ತಿರುವ ಅವ್ವನ ಸಂಕಟ ಕರುಳು ಹಿಂಡುತ್ತದೆ. ಮಾನವೀಯತೆ ಮರೆತ ಲೋಕದಲ್ಲಿ ಕಾವ್ಯ ಮನುಕುಲದ ಮಿತ್ರನಾಗುತ್ತದೆ. ಇಲ್ಲಿಯ ಕಾವ್ಯ ಹಂಬಲಿಸಿರುವುದು ಮಾನವೀಯ ಮೌಲ್ಯಗಳಿಗೆ ಎಂಬುದು ಎದ್ದು ಕಾಣುತ್ತದೆ.

ಅವರ `ಅಪ್ಪಣ್ಣನಿಗೊಂದು ಮನವಿ’ ಕವಿತೆಯಲ್ಲಿ ಮುಸ್ಲಿಮ ಚಾಂದ್‍ನ ದಾಡಿ, ಬ್ರಾಹ್ಮಣನ ಜುಟ್ಟು, ಕೆಳದಾಡಿಯ ಸಿಖ್ಖ ಮತ್ತು ಫ್ರೆಂಚ್ ದಾಡಿಯವನು ಕಿಶ್ಚಿಯನ್ ಎಂಬ ಜಾತಿ ಸೂತಕಗಳ ಬಿಸಾಕಲು ಕವಿ ಮನವಿ ಮಾಡುತ್ತಾರೆ. ಅವರ ಕಾವ್ಯ ಜಾತಿ, ಮತ, ಪಂಥ ಮತ್ತು ಲಿಂಗಭೇದವನ್ನಳಿಸಿ ಅಕ್ಷರ ಕುಂಡದಲ್ಲಿ ಹೂವಾಗಿ ಅರಳಿದೆ. ಹಣೆಯ ಮೇಲೆ ಯಾವುದೇ ಕುಂಕುಮ, ಭಂಡಾರ, ವಿಭೂತಿ, ಶ್ರೀಗಂಧದ ಲೇಪವಿಲ್ಲವೆಂದು ಕವಿ ಬಹು ಮಾರ್ಮಿಕವಾಗಿ ಹೇಳುತ್ತಾರೆ. ಎದೆಯ ಆಲೆಮನೆಯಲ್ಲಿ ಕುದ್ದು ಕುದ್ದು ಸಿಹಿ ಬೆಲ್ಲವಾದ ಅವರ ಕಾವ್ಯ ಮೌನದ ಮಾತಿಗೆ ಭಾಷ್ಯ ಬರೆದಿದೆ. ಮೌನ ಬೀಜಗಳನ್ನು ಅಕ್ಕಡಿ ಸಾಲಿನಲ್ಲಿ ಒತ್ತೊತ್ತಾಗಿ ಬಿತ್ತಿ ಫಲವತ್ತಾದ ಬೆಳೆ ಬೆಳೆಯುತ್ತಾರೆ.

ಹೆಣ್ಣು, ಹೊನ್ನು, ಮಣ್ಣು ಅಷ್ಠೆ ಏಕೆ ಸಾಹಿತ್ಯವೂ ಕೂಡ ಜಾಗತೀಕರಣದ ಸಂದರ್ಭದಲ್ಲಿ ಮಾರಾಟದ ಸರಕಾಗುತ್ತಿದೆ. ಸಾಹಿತ್ಯವು ಸಿರಿಯಾಗಿ ಅಥವಾ ಸಂಭ್ರಮಿಸುವ ವಿಷಯವಾಗಿ ಕಾರ್ಪೊರೇಟ್ ವಲಯಗಳು ಕಬಳಿಸುತ್ತಿರುವ ಈ ಕಾಲದಲ್ಲಿ ಅಪ್ಪಟ ಮನುಷ್ಯನೊಬ್ಬನ ಕಾವ್ಯವೇ ಮಕಾನದಾರರದು. ಆಯಾ ಕಾಲಘಟ್ಟದ ತಲ್ಲಣಗಳನ್ನು ಎದುರುಗೊಳ್ಳುವ ತಾಕತ್ತು ಕಾವ್ಯಕ್ಕಿದೆ. ಖಲೀಲ್ ಗಿಬ್ರಾನ್ ಹೇಳುತ್ತಾನೆ, ‘ನನ್ನವ್ವ ಒಂದು ಕವಿತೆಯನ್ನೂ ಬರೆಯಲಿಲ.್ಲ ಆದರೆ ನೂರಾರು ಕವಿತೆಗಳಷ್ಟು ಬದುಕಿದಳು’. ಮಕಾನದಾರರ ಕಾವ್ಯದ ಅವ್ವನ ಸ್ಥಿತಿಯೂ ಇದಕ್ಕಿಂತ ಭಿನ್ನ ಆಗಲಾರದು. ಅವಳ ಬದುಕೇ ಒಂದು ಮಹಾಕಾವ್ಯವಾಗಿದೆ.

Leave a Reply

Your email address will not be published.