ಅಕ್ಕನೆಂಬೋ ಅಮ್ಮ

ತಾಯಿ ಇಲ್ಲದ ಕೊರತೆಯನ್ನು ನೀಗಿಸುವ ಅಕ್ಕ ತಾಯಿಯ ಅನುಪಸ್ಥಿತಿಯಲ್ಲಿ ಎರಡನೆಯ ತವರಾಗಿರುತ್ತಾಳೆ. ತಾಯಿ ಇಲ್ಲದ ಹೆಣ್ಣುಮಕ್ಕಳು ತನ್ನ ಅಕ್ಕನಲ್ಲಿ ತೆರಳಿ ತವರಿನ ಸುಖವನ್ನು ಅನುಭವಿಸುತ್ತಾರೆ.

-ಗೌರಿ ಚಂದ್ರಕೇಸರಿ

ಬಾಲ್ಯದಲ್ಲಿ ನನ್ನ ಅಕ್ಕನೇ ನನ್ನ ವೈರಿಯಾಗಿದ್ದಳು. ಮೂರು ವರ್ಷದವರೆಗೂ ಮನೆಯವರೆಲ್ಲರ ಪ್ರೀತಿ, ಮಮತೆ, ಅಕ್ಕರೆಗಳನ್ನು ಎರೆಸಿಕೊಳ್ಳುತ್ತಿದ್ದ ಅವಳ ಸ್ಥಾನ ನನ್ನ ಹುಟ್ಟಿನಿಂದ ಅಭದ್ರವಾಗಿತ್ತು. ನನ್ನ ಆಗಮನದ ಕ್ಷಣದಿಂದಲೇ ತಾನು ಮೂಲೆಗುಂಪಾದೆ ಎಂಬ ಭಾವ ಅವಳಲ್ಲಿ ಅಚ್ಚೊತ್ತಿಬಿಟ್ಟಿತ್ತು. ಸದಾ ಅವಳ ಹಿಂದೆ ಮುಂದೆ ಸುತ್ತುತ್ತಿದ್ದ ಅಮ್ಮ ಬಾಣಂತಿಯಾಗಿ ಕೋಣೆಯೊಂದರಲ್ಲಿ ಬಂಧಿಯಾಗಿದ್ದಳು. ಸದಾ ಅಕ್ಕನನ್ನು ಸೊಂಟದ ಮೇಲೆ ಹೊತ್ತು ತಿರುಗುತ್ತಿದ್ದ ಅಮ್ಮನ ಮಡಿಲಲ್ಲಿ ನಾನು ಪವಡಿಸಿದ್ದು ಅವಳಿಗೆ ಸಹಿಸಲಾರದ ನೋವು ತಂದಿತ್ತೇನೊ.

ಅವಳಿಗಿಂತ ಐದು ವರುಷ ದೊಡ್ಡವನಾದ ಅಣ್ಣ ತನಗೊಬ್ಬ ಹೊಸ ತಂಗಿ ಬಂದ ಸಂತೋಷದಲ್ಲಿ ತನ್ನ ಹಳೆಯ ತಂಗಿಯನ್ನು ನಿರ್ಲಕ್ಷಿಸಿದ್ದ. ಹೀಗೆ ಮನೆಯ ಎಲ್ಲ ಸದಸ್ಯರ ಗಮನವೆಲ್ಲ ನನ್ನ ಮೇಲೆಯೇ ಕೇಂದ್ರೀಕೃತವಾಗಿದ್ದಾಗ ಅಕ್ಕನ ಮನಸ್ಸು ನನ್ನ ಪ್ರತಿ ದ್ವೇಷದ ಭಾವನೆಯನ್ನು ಬೆಳೆಸಿಕೊಂಡಿತ್ತೇನೋ. ಬಾಣಂತಿ ಕೋಣೆಯ ಒಳಗೂ ಅವಳಿಗೆ ಪ್ರವೇಶವಿರಲಿಲ್ಲ. ಅಮ್ಮ ನನ್ನನ್ನು ಎತ್ತಿಕೊಂಡು ಹಾಲೂಡುವಾಗ ಅಕ್ಕ ಬೇಕೆಂದೇ ಹಠವನ್ನು ತೆಗೆದು ಆಕಾಶಕ್ಕೆ ಮುಖ ಮಾಡಿ ಹೋ… ಎಂದು ಅಳುತ್ತಿದ್ದಳಂತೆ. ನನಗೆ ಎಣ್ಣೆ ಸ್ನಾನವನ್ನು ಮಾಡಿಸುವಾಗಲೇ “ಹಸಿವು” ಎಂದು ಕೂಗಿಕೊಳ್ಳುತ್ತಿದ್ದಳಂತೆ. ಎಲ್ಲರ ಗಮನವನ್ನು ತನ್ನೆಡೆ ಸೆಳೆಯಲು ಏನೇನು ಉಪಾಯಗಳಿದ್ದವೋ ಅವನ್ನೆಲ್ಲ ಪ್ರಯೋಗಿಸುತ್ತಿದ್ದಳೆಂದು ಅಜ್ಜಿ ಆಗಾಗ ನೆನಪುಗಳನ್ನು ಮೆಲುಕು ಹಾಕುತ್ತಿದ್ದಳು.

ಅಕ್ಕ ಶಾಲೆಗೆ ಹೋಗುವಂತಾದಾಗ ನಾನು ಹೊರಗೆ ಅಡಿ ಇಡತೊಡಗಿದ್ದೆ. ಅಕ್ಕಪಕ್ಕದಲ್ಲಿ ಅವಳ ಸರೀಕರಿಲ್ಲದ ಕಾರಣ ನನ್ನ ಸಾಂಗತ್ಯ ಅವಳಿಗೆ ಅನಿವಾರ್ಯವಾಗಿತ್ತು. ಶಾಲೆಯಿಂದ ಬಂದ ತಕ್ಷಣ ನನ್ನೊಂದಿಗೆ ಆಟಕ್ಕಿಳಿಯುತ್ತಿದ್ದಳು ಅಕ್ಕ. ಯಾವಾಗಲೂ ಅವಳದು ಡಿಕ್ಟೇಟರ್‍ಶಿಪ್. ಟೀಚರ್ ಆಟದಲ್ಲಿ ನಾನೇ ಪ್ರತಿ ಸಾರಿಯೂ ಛಡಿ ಏಟು ತಿನ್ನುವ ವಿದ್ಯಾರ್ಥಿಯಾಗಬೇಕಾಗಿತ್ತು. ಒಳ್ಳೆಯ ಗೊಂಬೆ ಅವಳ ಪಾಲಿಗೇ ಬರಬೇಕಿತ್ತು. ಕೈಕಾಲುಗಳಿಲ್ಲದ ಅಂಗವಿಹೀನವಾದ ನನ್ನ ಗೊಂಬೆಗೆ ನಾನು ಇಟ್ಟ ಸುಂದರವಾದ ಹೆಸರು ಕೂಡ ಅವಳ ಗೊಂಬೆಗೇ ಇಡಬೇಕು. ದಾರಿಯಲ್ಲಿ ಸಿಕ್ಕ ಸುಂದರ ಬಳೆ ಚೂರುಗಳು ಅವಳ ಜೇಬಲ್ಲೇ ಇರಬೇಕು.

ಹೀಗೇ ಒಮ್ಮೆ ಸುಂದರವಾದ ಬಣ್ಣ ಬಣ್ಣದ ಗಾಜಿನ ಮಣಿಯೊಂದು ನನಗೆ ಸಿಕ್ಕಿತ್ತು. ಅದಕ್ಕಾಗಿ ಅಕ್ಕ ಬೇಡಿಕೆ ಇಟ್ಟಾಗ ಇಬ್ಬರಲ್ಲೂ ಯುದ್ಧ ಪ್ರಾರಂಭವಾಗಿತ್ತು. ನಾ ಕೊಡೆ ನೀ ಬಿಡೆ ಎಂಬಂತಾದಾಗ ಕೋಪಿಷ್ಠೆಯಾದ ಅಕ್ಕ ಆ ಸುಂದರ ಮಣಿಯನ್ನು ನನ್ನಿಂದ ಕಿತ್ತುಕೊಂಡವಳೇ ಕಲ್ಲಿನಿಂದ ಅದನ್ನು ಜಜ್ಜಿಹಾಕಿ ಗಲಾಟೆಗೊಂದು ಪೂರ್ಣ ವಿರಾಮವನ್ನು ಹಾಕಿಬಿಟ್ಟಳು. ಬಾಲ್ಯದಲ್ಲಿ ನಮ್ಮ ಆಟ ಕೊನೆಗೊಳ್ಳುತ್ತಿದ್ದದ್ದು ನನ್ನ ಅಳುವಿನಲ್ಲೇ. ಬುದ್ಧಿ ಬೆಳೆಯುತ್ತ ಬಂದಂತೆ ನಮ್ಮ ನಡುವಿನ ಬಾಂಧವ್ಯ ಗಟ್ಟಿಗೊಳ್ಳುತ್ತ ಬಂದಿತ್ತು.

ಹೊಸ ಸಮವಸ್ತ್ರ ಧರಿಸಿ ಮೊದಲ ದಿನ ಶಾಲೆಗೆ ಹೊರಟ ನನ್ನ ಬಗ್ಗೆ ಅಕ್ಕನಿಗೆ ಪ್ರೀತಿಯೋ ಹೆಮ್ಮೆಯೋ ಗೊತ್ತಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದ ನನ್ನನ್ನು ತರಗತಿಯವರೆಗೂ ಬಿಟ್ಟು ತನ್ನ ಲಂಗದಿಂದ ನನ್ನ ಕಣ್ಣೀರು, ಗೊಣ್ಣೆಯನ್ನು ಒರೆಸಿ ಒಂದು ಬಗೆಯಲ್ಲಿ ತಾನೂ ಅಳುತ್ತಲೇ ತನ್ನ ತರಗತಿಗೆ ಹೋಗಿದ್ದಳು. ಶಾಲೆಯಲ್ಲಿ ನನಗೆ ಏನೇ ಆದರೂ ಅದೇ ಶಾಲೆಯಲ್ಲಿದ್ದ ಅಕ್ಕನಿಗೆ ಕರೆ ಹೋಗುತ್ತಿತ್ತು. ಮನೆಯಲ್ಲಿ ನನಗೆ ಅಮ್ಮ ತಾಯಿಯಾದರೆ ಶಾಲೆಯಲ್ಲಿ ಅಕ್ಕ ತಾಯಿಯಾಗಿರುತ್ತಿದ್ದಳು. ಸಂಜೆ ನನ್ನ ತರಗತಿ ಮುಗಿಯುವವರೆಗೂ ಕಾಯ್ದು ಕೆಲವೊಮ್ಮೆ ನನ್ನ ಪುಸ್ತಕದ ಭಾರವನ್ನೂ ತಾನೇ ಹೊತ್ತು ದಾರಿಯುದ್ದಕ್ಕೂ ತರಗತಿಯಲ್ಲಿ ಏನೇನು ಹೇಳಿ ಕೊಟ್ಟರೆಂದು ಮನನ ಮಾಡಿಸುತ್ತ ಕರೆದುಕೊಂಡು ಬರುತ್ತಿದ್ದಳು.

ಹೆಣ್ಣು ಮಕ್ಕಳು ತಮ್ಮ ಪ್ರೌಢಾವಸ್ಥೆಯಲ್ಲಿ ಮನದ ಒಳಗುದಿಗಳನ್ನು ಹೇಳಿಕೊಳ್ಳಲು ಹೊರಗೆ ಒಬ್ಬ ಸ್ನೇಹಿತೆ, ಮನೆಯಲ್ಲಿ ಒಬ್ಬ ಅಕ್ಕ ಬೇಕೇ ಬೇಕು. ಎಲ್ಲವನ್ನೂ ಅಮ್ಮನ ಹತ್ತಿರ ಹೇಳಿಕೊಳ್ಳಲು ಸಾಧ್ಯವಿಲ್ಲ. ಒಂದು ಹೆಣ್ಣು ತನ್ನ ಟೀನ್ ಏಜ್ ನಲ್ಲಿ ಅನುಭವಿಸುವ ಬೇಗುದಿಗಳು ಒಂದೆರಡಲ್ಲ. ದೈಹಿಕ ಬದಲಾವಣೆಗಳ ಜೊತೆ ಜೊತೆಗೆ ವಯೋಸಹಜವಾಗಿ ಆಗುವ ಮೊದಲ ಕ್ರಷ್, ರಜಸ್ವಲೆಯಾಗುವುದು, ದೇಹದ ಉಬ್ಬು ತಗ್ಗುಗಳ ಮೇಲೆ ಬೀಳುವ ಕಾಕ ದೃಷ್ಟಿಗಳು, ಈ ಎಲ್ಲ ಮಾನಸಿಕ ಸಂಘರ್ಷಗಳಿಗೆ ಒಳಗಾಗುವ ಹುಡುಗಿಗೆ ತಾಯಿ ನೀಡುವ ಸಾಂತ್ವನಕ್ಕಿಂತ ಅಕ್ಕ ಕೊಡುವ ಬೆಚ್ಚನೆಯ ಭಾವ, ಮಾರ್ಗದರ್ಶನ, ಸಮಾಧಾನ, ಧೈರ್ಯ, ಸಲಹೆಗಳಿಂದ ಮನಸ್ಸು ಹಳತಾರಕ್ಕೆ ಬರುತ್ತದೆ. ಈ ಎಲ್ಲ ಸನ್ನಿವೇಶಗಳನ್ನೂ ಹಾಯ್ದು ಬಂದ ಅಕ್ಕ ಒಬ್ಬ ತಂಗಿಗೆ ಇದ್ದಲ್ಲಿ ಅವಳಲ್ಲಿ ಪರಿಸ್ಥಿತಿಯನ್ನು ಎದುರಿಸುವ ಮನೋಬಲ ದ್ವಿಗುಣಗೊಳ್ಳುತ್ತದೆ.

ತಾಯಿ ಒಬ್ಬಳು ಇರದೇ ಹೋದರೂ ಅಕ್ಕ ಒಬ್ಬಳಿರಬೇಕೆಂಬ ಮಾತಿದೆ. ತಾಯಿ ಇಲ್ಲದ ಕೊರತೆಯನ್ನು ನೀಗಿಸುವವಳೇ ಅಕ್ಕ. ತನ್ನ ಒಡಹುಟ್ಟಿದವರ ಬಗ್ಗೆ ಅವಳಿಗೊಂದು ಅಕ್ಕರೆ, ಮಮತೆ, ಜವಾಬ್ದಾರಿಗಳು ರಕ್ತಗತವಾಗಿ ಬಂದಿರುತ್ತವೆ. ಅಪ್ಪನ ಇಲ್ಲವೇ ಅಮ್ಮನ ಕೋಪಕ್ಕೆ ಗುರಿಯಾಗುವ ನಮ್ಮನ್ನು ರಕ್ಷಿಸಲು ಅಕ್ಕ ಎನ್ನುವ ಜೀವ ಸದಾ ಸನ್ನದ್ಧಳಾಗಿರುತ್ತದೆ. ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಬೇಕೆಂಬ ಉದ್ದೇಶದಿಂದ ಹಳ್ಳಿಯಲ್ಲಿದ್ದ ನಮ್ಮನ್ನು ಅಪ್ಪ ಪಟ್ಟಣಕ್ಕೆ ಕರೆತಂದು ಪುಟ್ಟ ಕೋಣೆಯೊಂದರಲ್ಲಿ ನೆಲೆ ನಿಲ್ಲಿಸಿದ್ದರು. ಬೆಳಗಿನ ಒಂದು ಹೊತ್ತಿನ ಊಟ ಬಸ್ ಮೂಲಕ ಬರುತ್ತಿತ್ತು. ಆದರೆ ರಾತ್ರಿಯ ಅಡುಗೆಯ ಪ್ರಶ್ನೆ ಬಂದಾಗ ಐದನೇ ತರಗತಿಯಲ್ಲಿ ಓದುತ್ತಿದ್ದ ಅಕ್ಕನೇ ವಹಿಸಿಕೊಂಡಿದ್ದಳು. ಸ್ಟವ್ ಒಂದರಲ್ಲಿ ಅನ್ನವನ್ನು ಮಾಡುತ್ತಿದ್ದ ಅವಳು ಅನ್ನ ಬಸಿಯುವಾಗ ಎಷ್ಟೋ ಬಾರಿ ಅವಘಡಗಳನ್ನು ಮಾಡಿಕೊಂಡಿದ್ದಳು. ಇಬ್ಬರ ಮಧ್ಯವಿದ್ದ ನಾಲ್ಕೇ ಜೊತೆ ಬಟ್ಟೆಗಳನ್ನು ಅದಲು ಬದಲು ಮಾಡಿಕೊಂಡು ಒಬ್ಬರಿಗೆ ನಾಲ್ಕು ಜೊತೆ ಬಟ್ಟೆ ಇರುವಂತೆ ಬೀಗುತ್ತಿದ್ದೆವು. ಓದಿನ ಜೊತೆಗೇ ಅಮ್ಮನ ಸ್ಥಾನದಲ್ಲಿ ನಿಂತು ಅಣ್ಣನನ್ನು ಹಾಗೂ ನನ್ನನ್ನು ಸಲಹುತ್ತಿದ್ದವಳು ಅಕ್ಕ. ಹಾಗೆಯೇ ನನ್ನ ತಪ್ಪುಗಳನ್ನು ತಿದ್ದಲು ಕೋಲಿನ ರುಚಿಯನ್ನೂ ತೋರಿಸುತ್ತಿದ್ದಳು. ಜ್ವರ ಬಂದು ನರಳುವಾಗ ಹಣೆಯ ಮೇಲೆ ತಣ್ಣೀರಿನ ಪಟ್ಟಿಯ ಆರೈಕೆಯನ್ನೂ ಮಾಡಿದ್ದಾಳೆ. ಹೀಗಾಗಿ ನನ್ನ ಅಮ್ಮ ಮಾಡಿದ ಆರೈಕೆ ಮಸುಕು ಮಸುಕಾಗಿದ್ದು, ಅಕ್ಕನ ಅಕ್ಕರೆ ಈಗಲೂ ಹಸಿ ಹಸಿಯಾಗಿ ನೆನಪಿದೆ.

ಕಾಲೇಜು ಹಂತಕ್ಕೆ ಬಂದಾಗ ಪ್ರತಿಯೊಬ್ಬ ಹೆಣ್ಣಿಗೂ ಒಬ್ಬಳು ಅಕ್ಕ ಇರಬೇಕೆನ್ನುವ ಭಾವ ಮೂಡುತ್ತದೆ. ಹೋಗುವಾಗ ಬರುವಾಗ ಕೀಟಲೆ ಮಾಡುವ ಹುಡುಗರು, ತಮ್ಮ ದಿನನಿತ್ಯದ ಕರ್ತವ್ಯ ಎಂಬಂತೆ ಹುಡುಗಿಯರನ್ನು ಹಿಂಬಾಲಿಸುವ ಪುಂಡ ಪೋಕರಿಗಳು, ಜನಸಂದಣಿಯಲ್ಲಿ ಮೈಗೆ ಮೈ ಸವರಿಕೊಂಡು ಹೋಗುವ ಅತೃಪ್ತ ಜೀವಗಳು, ಹೀಗೆ ಇನ್ನೂ ಅನೇಕ ಕಿರಿಕಿರಿಗಳು ಆಗ ತಾನೇ ಪ್ರಾರಂಭವಾಗಿರುತ್ತವೆ. ಇವೆಲ್ಲ ಹೊಸ ಹಾಗೂ ಅಪರಿಚಿತ ಅಸಹ್ಯಗಳಿಗೆ ಗುರಿಯಾಗುವ ಹೆಣ್ಣು ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ತಾವು ಅನುಭವಿಸುವ ಸಂಕಟಗಳನ್ನು ಕೇಳುವ ಅಕ್ಕ ಒಬ್ಬಳಿದ್ದಲ್ಲಿ ಮನಸ್ಸು ಹಗುರಾಗುತ್ತದೆ. ಇಂತಹ ಹಾದಿಗಳನ್ನು ಅವಳೂ ಕೂಡ ಹಾದು ಬಂದವಳೇ ಎಂದು ತಿಳಿದು ಬೇಸರವೆನ್ನಿಸಿದರೂ ವಾಸ್ತವವನ್ನು ಒಪ್ಪಿಕೊಳ್ಳುವಲ್ಲಿ, ಅರಗಿಸಿಕೊಳ್ಳುವಲ್ಲಿ ಅಕ್ಕ ಸಹಾಯ ಮಾಡುತ್ತಾಳೆ.

ಹತ್ತಾರು ವರ್ಷಗಳವರೆಗೆ ಒಟ್ಟಿಗೆ ಆಡಿ, ಬೆಳೆದು, ಕಿತ್ತಾಡಿ ಮತ್ತೆ ಒಂದಾಗುವ ಅಕ್ಕ-ತಂಗಿಯರು ಒಂದಿಲ್ಲ ಒಂದು ದಿನ ಅಗಲಲೇಬೇಕು. ಮತ್ತೊಂದು ಮನೆಯನ್ನು ಬೆಳಗಲು ಅವಳು ಹೊರಟು ನಿಂತಾಗ ಒಡಹುಟ್ಟಿದವರಿಗೆ ತಮ್ಮ ಕರುಳ ಬಳ್ಳಿಯೇ ಕಡಿದುಕೊಂಡು ಹೊರಟಂತಾಗುತ್ತದೆ. ತನಗೊಬ್ಬ ಜೀವನ ಸಂಗಾತಿ ದೊರಕಿದ ಸಂತಸವಿದ್ದರೂ ತನ್ನವರನ್ನು ಬಿಟ್ಟು ಹೋಗಬೇಕಾದ ಸಂದರ್ಭ ಬಂದಾಗ ಅಕ್ಕನಿಗೂ ಹಾಗೂ ಅವಳ ಬೆನ್ನಿಗೆ ಬಿದ್ದವರಿಗೂ ಆಗುವ ನೋವು ವರ್ಣನಾತೀತ.

ಶಿವನೇ ತನ್ನ ಪತಿಯೆಂದು ನಿರ್ಧರಿಸಿದ್ದ ಉಡುತಡಿಯ ಮಹಾದೇವಿಯ ನಾಮದ ಹಿಂದೆ “ಅಕ್ಕ” ಎಂಬ ಸರ್ವನಾಮ ಸೇರಿಕೊಂಡಿದ್ದು ಸುಮ್ಮನೇ ಅಲ್ಲ. ಲೋಕ ಕಲ್ಯಾಣಕ್ಕಾಗಿ ಐಹಿಕ ಸುಖ-ಭೋಗಗಳನ್ನೆಲ್ಲ ತ್ಯಜಿಸಿ, ಹುಟ್ಟುಡುಗೆಯಲ್ಲಿ ಸಂಚರಿಸಿ, ಹೆಣ್ಣು ಕೇವಲ ದಾಸಿಯೆಂಬ, ಸಮಾಜದಲ್ಲಿ ಬೇರೂರಿದ ಭಾವವನ್ನು ತನ್ನ ವಚನಗಳ ಈಟಿಯಿಂದ ತಿವಿದವಳು. ಘಟಾನುಘಟಿಗಳಿಂದ ತುಂಬಿದ ಅನುಭವ ಮಂಟಪದಲ್ಲಿ ನಿಂತು ಅಲ್ಲಿ ನೆರೆದವರ ಕಣ್ಣು ತೆರೆಸಿದವಳು. ಅಕ್ಕ ಎಂದರೆ ಸಹನಾಮಯಿ, ದಯಾಮಯಿ. ಅದೇ ಕಾರಣದಿಂದಲೋ ಏನೋ ಆರೋಗ್ಯ ಕ್ಷೇತ್ರಗಳಲ್ಲಿ ಸೇವೆಗೈಯ್ಯುವ ದಾದಿಯರನ್ನು “ಸಿಸ್ಟರ್” ಎಂದು ಸಂಬೋಧಿಸುವುದು.

ತಾಯಿ ಇಲ್ಲದ ಕೊರತೆಯನ್ನು ನೀಗಿಸುವ ಅಕ್ಕ ತಾಯಿಯ ಅನುಪಸ್ಥಿತಿಯಲ್ಲಿ ಎರಡನೆಯ ತವರಾಗಿರುತ್ತಾಳೆ. ತಾಯಿ ಇಲ್ಲದ ಹೆಣ್ಣುಮಕ್ಕಳು ತನ್ನ ಅಕ್ಕನಲ್ಲಿ ತೆರಳಿ ತವರಿನ ಸುಖವನ್ನು ಅನುಭವಿಸುತ್ತಾರೆ. ಇತ್ತೀಚೆಗೆ ಕುಟುಂಬಕ್ಕೊಂದೇ ಮಗುವನ್ನು ಹೊಂದುವುದು ಸಾಮಾನ್ಯವಾಗಿದೆ. ಹೀಗಿರುವಾಗ ಅಕ್ಕನೆಂಬ ಸಂಬಂಧದ ಅನುಭೂತಿಯಿಂದ ಇಂದಿನ ಮಕ್ಕಳು ವಂಚಿತರಾಗುತ್ತಿದ್ದಾರೆ.  ಕೆಲ ಕುಟುಂಬಗಳಲ್ಲಿ ಆಸ್ತಿ, ಅಂತಸ್ತುಗಳ ಪಡೆಯುವಿಕೆಗಾಗಿ ಅಕ್ಕ-ತಂಗಿ, ಅಕ್ಕ-ತಮ್ಮ ಎಂಬ ಸಂಬಂಧಗಳು ಕಿತ್ತಾಡಿಕೊಂಡು ತಮ್ಮ ಮಹತ್ವವನ್ನೇ ಕಳೆದುಕೊಳ್ಳುತ್ತಿವೆ. ಇನ್ನು ಕೆಲವೆಡೆ ಅಕ್ಕ-ತಂಗಿಯರು ಅನವರತ ಜೊತೆಗಿರಲು ಒಂದೇ ಮನೆಯ ಹುಡುಗರನ್ನೇ ಮದುವೆಯಾಗಿ ಬಾಂಧವ್ಯವನ್ನು ಬಿಗಿಗೊಳಿಸಿಕೊಂಡವರಿದ್ದಾರೆ. ಏನೇ ಆಗಲಿ “ಅಕ್ಕ” ಎನ್ನುವ ಪದ ಕಿವಿಗೆ ಬಿದ್ದಾಗ ಅಮ್ಮನ ರೂಪದ ಅಕ್ಕನೇ ಬಂದು ನಿಲ್ಲುತ್ತಾಳೆ ನನ್ನ ಮನಸಿನ ಪರದೆಯ ಮೇಲೆ.

Leave a Reply

Your email address will not be published.