ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲದು!

ನಮ್ಮ ಹಳ್ಳಿಯ ಜನರಿಗೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಕಳಿಸಬೇಕೆನ್ನುವ ಹುಚ್ಚು ಹಿಡಿದಂತೆ ಕೆಲವರಿಗೆ ಮೋದಿ ಹುಚ್ಚು ಹಿಡಿದಿದೆ. ಗಿಡದೊಳಗಿನ ಮಂಗ ಮಾತಿಗೆ ಮರುಳಾಗಿ ಕೈಬಿಟ್ಟು, ಕೆಳಗೆ ಬಿದ್ದು, ಕೈಕಾಲು ಮುರಿದುಕೊಂಡಂತೆ ನಮ್ಮ ದೇಶದ ಜನರ ಪರಿಸ್ಥಿತಿ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅನಿವಾರ್ಯನೂ ಅಲ್ಲ, ಅನಗತ್ಯವೂ ಅಲ್ಲ. ಉತ್ತರ ಕರ್ನಾಟಕದಲ್ಲಿ ‘ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲೋದಿಲ್ಲ’ ಅಂತ ಒಂದು ಗಾದೆ ಮಾತಿದೆ. ಅಂದರೆ ಒಂದು ದೇಶಕ್ಕೆ ಯಾರೂ ಅನಿವಾರ್ಯ ಅಲ್ಲ. ನರೇಂದ್ರ ಮೋದಿ ಅನಿವಾರ್ಯವಂತೂ ಅಲ್ಲ. ಹಿಂದೆ ಜವಾಹರಲಾಲ್ ನೆಹರೂ ಅವರು ನಿಧನರಾದಾಗ ದೇಶವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಎದುರಾಗಿತ್ತು. ಆಗ ಲಾಲ್ ಬಹಾದ್ದೂರ್ ಶಾಸ್ತ್ರೀಯವರು ಬಹಳ ಉತ್ತಮವಾಗಿಯೇ ದೇಶವನ್ನು ಮುನ್ನಡೆಸಿದರು. ಹಾಗಾಗಿ ಮೋದಿ ಅನಿವಾರ್ಯವಲ್ಲ.

ನರೇಂದ್ರ ಮೋದಿ ಪ್ರಧಾನಿ ಆದಾಗ ನಾನೂ ಸೇರಿದಂತೆ ದೇಶದ ಜನರೆಲ್ಲ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ವಾಜಪೇಯಿ ಮಾಡಲಾಗದ್ದನ್ನು ಮೋದಿಯವರು ಮಾಡಬಹುದು ಎಂಬ ಭರವಸೆ ಇತ್ತು. ನಿಚ್ಚಳ ಬಹುಮತ ಇದ್ದಾಗಲೂ ಪ್ರಧಾನಿಯಾಗಿ ನರೇಂದ್ರ ಮೋದಿಗೆ ಎನೂ ಮಾಡಲಾಗಿಲ್ಲ. ಕಾಶ್ಮೀರದಲ್ಲಿ ಜನ ಕಲ್ಲು ಹೊಡೆದರೂ ನಮ್ಮ ಸೈನಿಕರು ಸುಮ್ಮನಿರುವಂತಾಗಿದೆ. ಆ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ. ಅದಕ್ಕಾಗಿ ಸಂವಿಧಾನದ ಕಲಂ 370ನ್ನು ಬದಲಾವಣೆ ಮಾಡುತ್ತೇವೆ ಎಂದು ಇವರು ಹೇಳಿದರು. ಆಗ ಮೆಹಬೂಬಾ ಮುಫ್ತಿ ಕಾನೂನು ಬದಲಾವಣೆ ಮಾಡಿದರೆ ಕಾಶ್ಮೀರದಲ್ಲಿ ಬೇರೆ ಧ್ವಜ ಹಾರಲಿದೆ ಎಂದರು. ಅಂದರೆ ಏನರ್ಥ? ಪಾಕಿಸ್ತಾನದ ಧ್ವಜ ಹಾರಲಿದೆ ಎಂದ ಹಾಗೆ. ಆದರೂ ಇವರು ಏನೂ ಮಾಡಲಾಗದೆ ಸುಮ್ಮನಿದ್ದಾರೆ. ಇವರು ದೊಡ್ಡದಾಗಿ ಹೇಳುವ ‘ಸರ್ಜಿಕಲ್ ಸ್ಟ್ರೈಕ್’ನ್ನು ಮುಕ್ತ ಅವಕಾಶ ನೀಡಿದರೆ ಸೈನಿಕರೇ ಮಾಡುತ್ತಾರೆ.

ಕಾಶ್ಮೀರದಲ್ಲಿ ಪ್ರತಿ ದಿನ ಹತ್ತಾರು ಸೈನಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಏನೂ ಮಾಡಲಾಗದೆ ಬಿಜೆಪಿ ಸರಕಾರ ಸುಮ್ಮನಿದೆ. ಹಾಗಾಗಿ ಇವರಿಂದ ದೇಶಕ್ಕೆ ಒಳ್ಳೆಯದಾಗಿದೆ, ದೇಶ ಸುಧಾರಣೆ ಮಾಡಿದ್ದಾರೆ ಎಂದು ಹೇಳುವ ಹಾಗಿಲ್ಲ. ಬಿಜೆಪಿ ಸರಕಾರ ಬಂದ ಮೇಲೆಯೇ ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತು ಉಗ್ರರ ಉಪಟಳ ಹೆಚ್ಚಾಗಿದೆ. ಕಾಶ್ಮೀರದಲ್ಲಿ ಮನೆಗೊಬ್ಬ ಉಗ್ರಗಾಮಿ ಇದ್ದಾನೆ. ಪರಿಸ್ಥಿತಿ ಹೀಗಿದ್ದರೂ ಇವರ ಗುಪ್ತಚಾರ ವ್ಯವಸ್ಥೆ ಏನು ಕೆಲಸ ಮಾಡುತ್ತಿದೆ?

ಕಳೆದ ಐದು ವರ್ಷಗಳ ಇವರ ಆಡಳಿತದಲ್ಲಿ ಯಾವ ಸುಧಾರಣೆ ಆಗಿದೆ ಎಂಬುದನ್ನು ಇವರೇ ತೋರಿಸಿಕೊಡಲಿ. ಯಾವುದಾದರೂ ವಸ್ತುಗಳ ಬೆಲೆ ಕಡಿಮೆ ಆಗಿವೆಯೇ? ಯುವಕರಿಗೆ ಉದ್ಯೋಗ ಸಿಗುತ್ತಿದೆಯೇ? ಸಾಮಾನ್ಯ ಜನರಿಗೆ ಒಳ್ಳೆಯದಾಗಿದೆಯೇ? ರೈತರಿಗೆ ಒಳ್ಳೆಯದನ್ನು ಮಾಡಿದ್ದಾರೆಯೇ? ಎನು ಮಾಡಿದ್ದಾರೆಂಬುದನ್ನು ಅವರೇ ಹೇಳಲಿ. ಯಾವುದೂ ಇಲ್ಲ. ಬರಿ ಭಾಷಣ. ರೈತರಿಗೆ ಆರು ಸಾವಿರ ರೂಪಾಯಿ ಹಣ ಹಾಕುವುದಾಗಿ ಈಗ ಹೇಳಿದ್ದಾರೆ. ಆರು ಸಾವಿರ ರೂಪಾಯಿ ಯಾವುದಕ್ಕೆ ಸಾಕಾಗುತ್ತದೆ. ನಾಲ್ಕು ಎತ್ತುಗಳಿಗೆ ಮೇವು ಕೊಳ್ಳಲು ಸಾಕಾಗುವುದಿಲ್ಲ. ಅಷ್ಟಕ್ಕೂ ನಾಲ್ಕು ವರ್ಷಗಳ ಹಿಂದೆಯೇ ಯಾಕೆ ಈ ಯೋಜನೆಯನ್ನು ಜಾರಿಗೊಳಿಸಲಿಲ್ಲ? ಫಸಲ್ ಬಿಮಾ ಯೋಜನೆ ಕೆಲವರಿಗೆ ಅನುಕೂಲ ಆಗಿದೆ. ಕೆಲವರಿಗೆ ಏನೂ ಆಗಿಲ್ಲ. ದೇಶಾದ್ಯಂತ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಇವರು ಸಾಲಮನ್ನಾ ಮಾಡಲಿಲ್ಲ. ಸಾಲಮನ್ನಾ ಮಾಡುವುದು ಬೇಡವೇ, ಬಿಡಿ. ಕನಿಷ್ಠ ಬೆಂಬಲ ಬೆಲೆಯನ್ನಾದರೂ ನೀಡಬಹುದಿತ್ತು. ಅದನ್ನೇಕೆ ಮಾಡಲಿಲ್ಲ?

ಇವರು ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದ್ದರು. ಎಲ್ಲಿದೆ ಉಚಿತ ಶಿಕ್ಷಣ? ಇಡೀ ಶಿಕ್ಷಣ ಕ್ಷೇತ್ರವನ್ನೂ ಖಾಸಗಿಯವರಿಗೆ ನೀಡಿ ಗಬ್ಬೆದ್ದು ಹೋಗಿದೆ. ಖಾಸಗಿ ವಿಶ್ವವಿದ್ಯಾನಿಲಯಗಳು ಪದವಿಗಳನ್ನು ಮಾರಿಕೊಳ್ಳುತ್ತಿವೆ. ಆದರೂ ಇವರು ಸುಮ್ಮನೆ ಕೂತು ನೋಡುತ್ತಿದ್ದಾರೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಎಲ್ಲಿವೆ ಎರಡು ಕೋಟಿ ಉದ್ಯೋಗ? ಎರಡು ಲಕ್ಷ ಕೊಟ್ಟದ್ದನ್ನು ತೋರಿಸಲಿ?

ಚುನಾವಣೆ ಸಂದರ್ಭದಲ್ಲಿ ನೀಡಿದ 55 ಭರವಸೆಗಳಲ್ಲಿ 52ನ್ನು ಈಡೇರಿಸಿರುವುದಾಗಿ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರೆ. ಯಾವ ಭರವಸೆ ನೀಡಿದ್ದರು, ಯಾವ ಭರವಸೆಗಳನ್ನು ಈಡೇರಿಸಿದ್ದಾರೆ ಎಂಬುದನ್ನೂ ಇವರು ಜಾಹೀರಾತು ನೀಡಬೇಕು.

ರಸ್ತೆ ಅಭಿವೃದ್ಧಿಯಲ್ಲಿ ಸ್ವಲ್ಪ ಕೆಲಸವಾಗಿದೆ. ಅದನ್ನು ನಾನು ಒಪ್ಪುತ್ತೇನೆ. ರಸ್ತೆ ಮಂತ್ರಿ ನಿತಿನ್ ಗಡ್ಕರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಯಾವ ಖಾತೆ ಕೊಟ್ಟರೂ ಅವರು ಒಳ್ಳೆಯ ಕೆಲಸ ಮಾಡುತ್ತಾರೆ. ಅದನ್ನು ಮೆಚ್ಚಲೇಬೇಕು.

ಚುನಾವಣೆ ಸಂದರ್ಭದಲ್ಲಿ ನೀಡಿದ 55 ಭರವಸೆಗಳಲ್ಲಿ 52ನ್ನು ಈಡೇರಿಸಿರುವುದಾಗಿ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರೆ. ಯಾವ ಭರವಸೆ ನೀಡಿದ್ದರು, ಯಾವ ಭರವಸೆಗಳನ್ನು ಈಡೇರಿಸಿದ್ದಾರೆ ಎಂಬುದನ್ನೂ ಇವರು ಜಾಹೀರಾತು ನೀಡಬೇಕು. ಕಳೆದ ಐದು ವರ್ಷಗಳಲ್ಲಿ ನೆನಪಿಡುವಂತಹ ಒಂದಾದರೂ ಯೋಜನೆಯನ್ನು ಇವರು ಮಾಡಿದ್ದಾರೆಯೇ? ವಿದ್ಯುತ್ ಸುಧಾರಣೆ ಆಗಿದೆಯೇ? ನೀರಾವರಿಯಲ್ಲಿ ದೇಶ ಏನಾದರೂ ಸುಧಾರಣೆ ಕಂಡಿದೆಯೇ? ನದಿಗಳ ಜೋಡಣೆ ಮಾಡುವುದಾಗಿ ಹೇಳಿದ್ದರು. ಆ ಕೆಲಸ ಆಗಿದೆಯೇ? ಆಗಿದ್ದರೆ ತೋರಿಸಲಿ? ಲಾಲ್ ಬಹಾದ್ದೂರ್ ಶಾಸ್ತ್ರೀ ಅವರಿದ್ದಾಗ ‘ಜೈ ಜವಾನ್ ಜೈ ಕಿಸಾನ್’ ಅಂದರು. ಪ್ರತಿ ಸೋಮವಾರ ಹೋಟೆಲ್‍ಗಳನ್ನು ಬಂದು ಮಾಡಬೇಕೆಂದರು. ದೇಶಕ್ಕೆ ಅದರಿಂದ ಎಷ್ಟು ಉಳಿತಾಯ ಆಯಿತು. ಹಾಗೆ ಇವರೇನು ಮಾಡಿದ್ದಾರೆ?

ನರೇಂದ್ರ ಮೋದಿ ಆಡಳಿತ ನಡೆಸಿದ ಐದು ವರ್ಷಗಳಲ್ಲಿ ಕನಿಷ್ಠ ಎರಡು ವರ್ಷಗಳನ್ನು ವಿದೇಶಗಳಲ್ಲೇ ಕಳೆದಿದ್ದಾರೆ. ಜಗತ್ತಿನ ಶೇ.70 ದೇಶಗಳನ್ನು ಇವರು ಸುತ್ತಾಡಿದ್ದಾರೆ. ಆದರೆ ಇವರ ವಿದೇಶಾಂಗ ನೀತಿಯಲ್ಲಿ ಏನು ಸುಧಾರಣೆ ಆಗಿದೆ? ವಿದೇಶಗಳಿಗೆ ಹೋದಾಗ ಅಲ್ಲಿ ಹಾಂಗ… ಇಲ್ಲಿ ಹೀಂಗ ಬರಿ ಬಡಾಯಿ ಕೊಚ್ಚಿಕೊಳ್ಳುವುದು. ಇವರ ಬಳಿ ಮಾತಿನಲ್ಲಿ ಮೋಡಿ ಮಾಡುವ ಅದೊಂದು ನ್ಯಾಕ್ ಇದೆ. ಇವರ ನಡೆ ‘ಜನ ಮರಳೋ ಜಾತ್ರಿ ಮರಳೋ’ ಅನ್ನುವಂತಾಗಿದೆ. ಆದರೆ ವಾಸ್ತವ ಏನಿದೆ?

ಇವರ ಸಾಮಾಜಿಕ ನೀತಿ ಹೇಗಿದೆ ನೋಡಿ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕೆಂಬುದಿಲ್ಲ. ಸಮಾಜವನ್ನು ಎರಡು ಭಾಗ ಮಾಡಿದ್ದಾರೆ. ‘ಹಿಂದೂಗಳು ಮತ್ತು ಹಿಂದೂ ವಿರೋಧಿಗಳು’ ಎಂಬುದು ಇವರ ನೀತಿಯಾಗಿದೆ. ಈಗ ರಾಮ ಮಂದಿರ ಎನ್ನುತ್ತಿದ್ದಾರೆ. ರಾಮ ಮಂದಿರ ಈಗ್ಯಾಕೆ ಬೇಕು? ಚುನಾವಣೆ ಬಂದಾಗ ಈಗ್ಯಾಕೆ ರಾಮ ಮಂದಿರ ವಿಷಯ ಬಂತು? ಇಷ್ಟು ದಿನಗಳ ಕಾಲ ಸುಮ್ಮನಿದ್ದು ಈಗ ವಿವಾದ ಕೆದಕಿದ್ದೇಕೆ? ರಾಮ ಮಂದಿರವನ್ನು ಕಟ್ಟುತ್ತೇವೆ ಎಂದಾದರೂ ಹೇಳಿ, ಕಟ್ಟುವುದಿಲ್ಲ ಎಂದಾದರೂ ಹೇಳಿ? ನಾಲ್ಕು ವರ್ಷ ಸುಮ್ಮನಿದ್ದು ಚುನಾವಣೆ ಬಂದಾಗ ಮಾತನಾಡುವುದು ಸರಿಯಲ್ಲ.

ನೋಟು ರದ್ದತಿ ಕ್ರಮ ಅನಗತ್ಯವಾಗಿತ್ತು. ಈ ವಿಚಾರದಲ್ಲಿ ರಿಸರ್ವ ಬ್ಯಾಂಕ್ ಗೌರ್ನರನ್ನೂ ಇವರು ಕೇಳಿಲ್ಲ. ಇತ್ತೀಚೆಗಷ್ಟೇ ರಿಸರ್ವ ಬ್ಯಾಂಕ್ ಗೌರ್ನರ್ ‘ನಮ್ಮನ್ನು ಕೇಳದೆ ನೋಟ್ ರದ್ದು ಮಾಡಲಾಗಿದೆ’ ಎಂದು ಹೇಳಿದ್ದಾರೆ. ಹೀಗೆ ಇವರು ಎಲ್ಲದರಲ್ಲೂ ಹಸ್ತಕ್ಷೇಪ ಮಾಡಿದ್ದಾರೆ.

ಕೆಲವೊಂದು ವಿಚಾರದಲ್ಲಿ ಅನಗತ್ಯ ಕೆಲಸಗಳನ್ನು ಇವರು ಮಾಡಿದ್ದಾರೆ. ಉದಾಹರಣೆಗಾಗಿ ನೋಟು ರದ್ದತಿ ಕ್ರಮ ಅನಗತ್ಯವಾಗಿತ್ತು. ಈ ವಿಚಾರದಲ್ಲಿ ರಿಸರ್ವ ಬ್ಯಾಂಕ್ ಗೌರ್ನರನ್ನೂ ಇವರು ಕೇಳಿಲ್ಲ. ಇತ್ತೀಚೆಗಷ್ಟೇ ರಿಸರ್ವ ಬ್ಯಾಂಕ್ ಗೌರ್ನರ್ ‘ನಮ್ಮನ್ನು ಕೇಳದೆ ನೋಟ್ ರದ್ದು ಮಾಡಲಾಗಿದೆ’ ಎಂದು ಹೇಳಿದ್ದಾರೆ. ಹೀಗೆ ಇವರು ಎಲ್ಲದರಲ್ಲೂ ಹಸ್ತಕ್ಷೇಪ ಮಾಡಿದ್ದಾರೆ. ಯಾವ ಅಧಿಕಾರಿಗಳನ್ನೂ ಮುಕ್ತವಾಗಿ ಕೆಲಸ ಮಾಡಲು ಬಿಟ್ಟಿಲ್ಲ. ಒಂದು ರೀತಿಯಲ್ಲಿ ಮೋದಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಯಾವ ಮಂತ್ರಿಯೂ ಮೋದಿಯವರ ತಪ್ಪುಗಳನ್ನು ಹೇಳುವ ಧೈರ್ಯ ಹೊಂದಿಲ್ಲ.

ಚುನಾವಣೆ ಸಂದರ್ಭದಲ್ಲಿ ದೊಡ್ಡ ದೊಡ್ಡದಾಗಿ ಮಾತನಾಡಿ ಒಂದು ಹವಾ ಎಬ್ಬಿಸಿದರು. ಮೋದಿಯವರಿಗೆ ಉತ್ತಮವಾಗಿ ಮಾತನಾಡಿ ಜನರನ್ನು ಮೋಡಿ ಮಾಡುವ ಕಲೆ ಇದೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಲ್ಲಿ ಯಾರೂ ಆ ರೀತಿ ಮಾತನಾಡುವವರಿಲ್ಲ. ಹಿಂದೆ ಪ್ರತಿಪಕ್ಷಗಳಲ್ಲಿ ವಾಜಪೇಯಿ ಅಂತಹ ಮಾತುಗಾರರಿದ್ದರು. ಈಗ ಹಾಗಿಲ್ಲ. ಇಂದಿರಾಗಾಂಧಿಯವರಂತೆ ಮೋದಿಯವರಿಗೂ ಮಾತಿನ ಕಲೆ ಇದೆ. ಇವರು ಶೇಕಡಾ ಇಪ್ಪತ್ತು ಕೆಲಸ ಮಾಡಿದ್ದಾರೆ. ಉಳಿದ ಶೇಕಡಾ ಎಂಬತ್ತರಷ್ಟು ಭಾಷಣ ಮಾಡಿದ್ದಾರೆ. ಎಲ್ಲಾ ಬಿಜೆಪಿ ಹವಾ ಎಬ್ಬಿಸಿಕೊಂಡು ಹೊರಟಿದ್ದಾರೆ.

ಮುಂಜಾನೆಯಿಂದ ಸಂಜೆವರೆಗೆ ಬರಿ ಟೀಕೆ ಟಿಪ್ಪಣಿಗಳು. ರಾಹುಲ್ ಗಾಂಧಿಯನ್ನು ಬೈಯ್ಯುವುದು, ಹಿಂದಿನ ನೆಹರೂ ಕಾಲದ ಆಡಳಿತವನ್ನು ಕೆದಕುವುದು, ಟೀಕಿಸುವುದು. ಅವರನ್ನು ಬಿಡಿ. ನೀವು ಎನು ಮಾಡಿದಿರಿ ಹೇಳಿ? ಅವರು ಏನು ಮಾಡಿಲ್ಲ ಎಂದೇ ಜನ ನಿಮಗೆ ಅಧಿಕಾರ ಕೊಟ್ಟರು ನೀವು ಕಳೆದ ಐದು ವರ್ಷ ಏನು ಮಾಡಿದಿರಿ? ಪಕ್ಷಾಂತರಕ್ಕೆ ಅವಕಾಶ ಕೊಡುವುದು, ಆಪರೇಷನ್ ಕಮಲಕ್ಕೆ ಕುಮ್ಮುಕ್ಕು ನೀಡುವುದು. ಇದರಿಂದಲೇ ಇವರು ವಿವಿಧ ರಾಜ್ಯಗಳಲ್ಲಿ ಅಧಿಕಾರ ಹಿಡಿಯುತ್ತ ಹೊರಟಿದ್ದಾರೆ. ಇವೇ ಇವರ ಸಾಧನೆಗಳು.

ದೇಶದಲ್ಲಿ ಕೆಲವು ಜನರು ಮೋದಿ ಹವಾ ಹಾಕುತ್ತಿದ್ದಾರೆ. ಅವರಿಗೆ ಮೋದಿ ಅನ್ನುವ ಹುಚ್ಚು ಹಿಡಿದಿದೆ. ನಮ್ಮ ಹಳ್ಳಿಯ ಜನರಿಗೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಕಳಿಸಬೇಕೆನ್ನುವ ಹುಚ್ಚು ಹಿಡಿದಂತೆ ಕೆಲವರಿಗೆ ಮೋದಿ ಹುಚ್ಚು ಹಿಡಿದಿದೆ. ಗಿಡದೊಳಗಿನ ಮಂಗ ಮಾತಿಗೆ ಮರುಳಾಗಿ ಕೈಬಿಟ್ಟು, ಕೆಳಗೆ ಬಿದ್ದು, ಕೈಕಾಲು ಮುರಿದುಕೊಂಡಂತೆ ನಮ್ಮ ದೇಶದ ಜನರ ಪರಿಸ್ಥಿತಿ ಆಗಿದೆ. ಈಗ 6800 ಜನ ಎಂ.ಟೆಕ್. ಮಾಡಿದರೂ ನಿರುದ್ಯೋಗಿಗಳಾಗಿದ್ದಾರೆ. ಮಂದೆ ಇನ್ನಷ್ಟು ನಿರುದ್ಯೋಗಿಗಳಾದಾಗ ವಾಸ್ತವದ ಅರಿವಾಗಲಿದೆ.

*ಲೇಖಕರು ಮಾಜಿ ಸಚಿವರು, ಹಾಲಿ ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯರು.

Leave a Reply

Your email address will not be published.