ಅಗ್ಗದ ಸರಕಿಗೆ ಕೆಂಪುಗಂಬಳಿ ಹಾಸುವ ಸಂಸ್ಕೃತಿ

ಉನ್ನತ ಗುಣಮಟ್ಟದ ಅಥವಾ ಮಾನದಂಡದ ಪ್ರಶ್ನೆಯನ್ನು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ, ಅದರಲ್ಲಿಯೂ ವಿಮರ್ಶೆಗೆ ಸಂಬಂಧಿಸಿದಂತೆ ಎತ್ತಬೇಕಾದ ತುರ್ತು ಅಗತ್ಯವಿದೆ. ಎಲ್ಲಿ ಉತ್ಕೃಷ್ಟತೆಯ ಅಭಾವವಿರುತ್ತದೋ, ಅಲ್ಲಿ ಭಟ್ಟಂಗಿತನ ಹಾಗೂ ಮಾರುಕಟ್ಟೆಯ ಪ್ರಭಾವಗಳ ಅಬ್ಬರ ಹೆಚ್ಚಾಗುತ್ತದೆ.

ಎಂ.ಕೆ.ಆನಂದರಾಜೇ ಅರಸ್

ಸುಜಾತ ಕೇಶವನ್ ಹೆಸರು ಎಲ್ಲೆಡೆ ಪರಿಚಿತವಿಲ್ಲ. ಅವರ ಪತಿ ಇತಿಹಾಸಕಾರ ರಾಮಚಂದ್ರ ಗುಹಾ ಸಾಮಾನ್ಯವಾಗಿ ಎಲ್ಲರೂ ಕೇಳಿರುವ ಹೆಸರು. ಆದರೆ ಸುಜಾತ ಕೇಶವನ್ ಅವರದು ಬ್ರ್ಯಾಂಡಿಂಗ್ ಹಾಗೂ ಗ್ರಾಫಿಕ್ ಡಿಸೈನ್ ಉದ್ಯಮದಲ್ಲಿ ದೊಡ್ಡ ಹೆಸರು. ರೇ ಅಂಡ್ ಕೇಶವನ್ ಸಂಸ್ಥೆಯ ಸಹ ಸಂಸ್ಥಾಪಕಿಯಾಗಿ ನಂತರ ಬ್ರ್ಯಾಂಡ್ ಯೂನಿಯನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಸುಜಾತ ಕೇಶವನ್‍ಗೆ ದಕ್ಷಿಣ ಏಷಿಯಾದಲ್ಲಿ ಗ್ರಾಫಿಕ್ಸ್ ವಿನ್ಯಾಸವನ್ನು ಪುನರ್‍ವ್ಯಾಖ್ಯಾನಿಸಿದ ಶ್ರೇಷ್ಠ ವಿನ್ಯಾಸಗಾರ್ತಿ ಎಂಬ ಹೆಗ್ಗಳಿಕೆಯಿದೆ. ಅಹ್ಮದಾಬಾದಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್‍ನಲ್ಲಿ ಪದವಿ, ನಂತರ ಯೇಲ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಪಾಲ್ ರ್ಯಾಂಡ್, ಬ್ರ್ಯಾಡ್‍ಬರಿ ಥಾಮ್ಸನ್ ಮುಂತಾದ ಶ್ರೇಷ್ಠ ವಿನ್ಯಾಸಗಾರರಡಿ, ವಿನ್ಯಾಸ ಅಭ್ಯಸಿಸಿದವರು.

ಆಕೆ ಸಂದರ್ಶನವೊಂದರಲ್ಲಿ ನಮ್ಮ ಶೈಕ್ಷಣಿಕ ವ್ಯವಸ್ಥೆ ನಮ್ಮನ್ನು ‘ಸೌಂದರ್ಯ ಅನÀಕ್ಷರಸ್ಥರನ್ನು’ ಹೊಂದಿರುವ ದೇಶವನ್ನಾಗಿ ಮಾಡಿದೆ ಎಂದು ಹೇಳುತ್ತಾರೆ. ಮುಂದುವರೆದು, “ನಾನು ಎನ್‍ಐಡಿಯಲ್ಲಿ ವಿನ್ಯಾಸ ಅಂದರೆ ಕೇವಲ ಸುಂದರ ಚೆಂದದ ಮಾದರಿಗಳನ್ನು ಮಾಡುವುದÀಲ್ಲ ಎಂಬುದನ್ನು ಕಲಿತೆ. ಯೇಲ್‍ನಲ್ಲಿ ಉನ್ನತ ಗುಣಮಟ್ಟದ ಮಾನದಂಡವನ್ನು ಹೇಗೆ ಹಾಕಿಕೊಳ್ಳುವುದು ಎಂಬುದನ್ನು ಕಲಿತೆ. ನನ್ನನ್ನು ನಾನು ಪ್ರಶ್ನಿಸಿಕೊಳ್ಳುವುದನ್ನು, ನನ್ನ ಕೆಲಸವನ್ನು ವಿಮರ್ಶೆ ಮಾಡಿಕೊಳ್ಳುವುದನ್ನು ಕಲಿತೆ. ಇದು ನನ್ನ ದೃಷ್ಟಿಕೋನದ ಬಗ್ಗೆ ನನಗೆ ಹೆಚ್ಚು ವಿಶ್ವಾಸ ಬೆಳೆಸಿಕೊಳ್ಳುವಂತೆ ಮಾಡಿತು,” ಎಂದು ತಮ್ಮ ಒಡಲನ್ನು ಬಿಚ್ಚುತ್ತಾರೆ. 

ಹತ್ತರಲ್ಲಿ, ಒಂಭತ್ತು ಜನರಿಗೆ ಒಂದು ಒಳ್ಳೆಯ ಕಲಾಕೃತಿಯನ್ನೋ ಅಥವಾ ಛಾಯಾಚಿತ್ರವನ್ನೋ ಗುರುತಿಸಲು ಬರುವುದಿಲ್ಲ. ಚಲನಚಿತ್ರಗಳಲ್ಲಿ, ನಾಟಕಗಳಲ್ಲಿ ಕಲಾತ್ಮಕತೆಯ ಪ್ರಾಧಾನ್ಯತೆಯನ್ನು ಅರಿಯುವ ಅಥವಾ ಪ್ರಶಂಸಿಸುವ ಸಾಮರ್ಥ್ಯವಿರುವುದಿಲ್ಲ. ಕಲಾತ್ಮಕತೆ, ಸೌಂದರ್ಯವನ್ನು ವಿಮರ್ಶಿಸುವ ದೃಷ್ಟಿಯಿಂದ ಗಮನಿಸಿದರೆ, ನಮ್ಮಲ್ಲಿ ಪೂರಾ ಅನÀಕ್ಷರಸ್ಥರೇ ತುಂಬಿದ್ದಾರೆ. ಸುಜಾತ ಅವರ ಹೇಳಿಕೆ ಅತಿಶಯೋಕ್ತಿಯಿಂದ ಕೂಡಿಲ್ಲ. ಆದ್ದರಿಂದಲೇ ಕ್ಲಾಸ್ ಸಂಸ್ಕೃತಿ ಮಾಸ್ ಸಂಸ್ಕೃತಿಗೆ ದಾರಿ ಮಾಡಿಕೊಟ್ಟಿದೆ. ಅಗ್ಗದ ಸರಕಿಗೆ ಕೆಂಪುಗಂಬಳಿ ಹಾಸುವ ಸಂಸ್ಕೃತಿ ಆರಂಭವಾಗಿದೆ. ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಬದಲಿಸದಿದ್ದಾಗ, ನಾವು ಉನ್ನತ ಮಾನದಂಡಗಳನ್ನು ಹಾಕಿಕೊಳ್ಳದಿದ್ದಾಗ, ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳದಿದ್ದಾಗ, ನಮ್ಮನ್ನು ನಾವೇ ತೀಕ್ಷ್ಣವಾಗಿ ವಿಮರ್ಶಿಸಿಕೊಳ್ಳುವ ಧೈರ್ಯ ತೋರದಿದ್ದಾಗ ನಾವು ಸೃಜನಶೀಲತೆಗೆ ಸಂಬಂಧಿಸಿದಂತೆ ಗುಣಮಟ್ಟವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಉನ್ನತ ಗುಣಮಟ್ಟದ ಅಥವಾ ಮಾನದಂಡದ ಪ್ರಶ್ನೆಯನ್ನು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ, ಅದರಲ್ಲಿಯೂ ವಿಮರ್ಶೆಗೆ ಸಂಬಂಧಿಸಿದಂತೆ ಎತ್ತಬೇಕಾದ ತುರ್ತು ಅಗತ್ಯತೆಯಿದೆ. ಎಲ್ಲಿ ಉತ್ಕೃಷ್ಟತೆಯ ಅಭಾವವಿರುತ್ತದೋ, ಅಲ್ಲಿ ಭಟ್ಟಂಗಿತನ ಹಾಗೂ ಮಾರುಕಟ್ಟೆಯ ಪ್ರಭಾವಗಳ ಅಬ್ಬರ ಹೆಚ್ಚಾಗುತ್ತದೆ. ಪರಸ್ಪರ ಹೊಗಳುವಿಕೆ ಅಥವಾ ಇಂಗ್ಲಿಷ್‍ನಲ್ಲಿ ಹೇಳುವ ‘ಯು ಸ್ಕ್ರ್ಯಾಚ್ ಮೈ ಬ್ಯಾಕ್, ಐ ವಿಲ್ ಸ್ಕ್ರ್ಯಾಚ್ ಯುವರ್ಸ್ (ನೀನು ನನಗೆ ಸಹಾಯ ಮಾಡು, ಪ್ರತಿಯಾಗಿ ನಾನು ನಿನಗೆ ಸಹಾಯ ಮಾಡುತ್ತೇನೆ)’ ಬೆಳವಣಿಗೆ ಮನರಂಜನೆ, ಕ್ರೀಡಾರಂಗಗಳಲ್ಲಿ ಹೆಚ್ಚಾಗುತ್ತಿದೆ. ಕನ್ನಡ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಬರುವ ಸಂದರ್ಶನಗಳನ್ನು ಗಮನಿಸಿ. ಸಂದರ್ಶಕರು ಕೇಳುವ ಪ್ರಶ್ನೆಗಳಲ್ಲಿ ಸತ್ವ, ತರ್ಕ ಯಾವುದೂ ಇರುವುದಿಲ್ಲ. ಇದಕ್ಕೆ ಕಾರಣ ಹುಡುಕಿ ಹೊರಟರೆ ಉದ್ಯಮ ಉಳಿಯಬೇಕು, ಜನ ಕೇಳುವುದು ಇದನ್ನೇ, ಇತ್ಯಾದಿ ತಲೆಚಚ್ಚಿಕೊಳ್ಳುವ ಉತ್ತರಗಳು ಸಿಗುತ್ತವೆ. ಈ ಬೆಳವಣಿಗೆಯಲ್ಲಿ ಹೆಚ್ಚು ಕಡಿಮೆ ಎಲ್ಲಾ ದೊಡ್ಡ ಹೆಸರುಗಳು ಸೇರಿಕೊಂಡಿರುವುದು ವಿಷಾದಕರ, ದುರದೃಷ್ಟಕರ ಸಂಗತಿ. ಒಬ್ಬ ನಟ ತನ್ನ ಚಿತ್ರಕ್ಕಾಗಿ 20-30 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದನ್ನು, ಅಷ್ಟೇ ತೂಕವನ್ನು 2-3 ತಿಂಗಳಲ್ಲೇ ಕಡಿಮೆ ಮಾಡಿದ್ದನ್ನೇ ದೊಡ್ಡ ಬದ್ಧತೆಯೆಂಬಂತೆ ಮಾತನಾಡುತ್ತೇವೆ.  ಬದ್ಧತೆ ನಿಜ. ಬಾಡಿಬಿಲ್ಡರ್‍ಗಳ ಕೈಯಲ್ಲೂ ಆ ಕೆಲಸ ಮಾಡಿಸಬಹುದಲ್ಲವೇ. ಚಿತ್ರದ ಶ್ರೇಷ್ಠತೆಯ ಬಗ್ಗೆ, ನಿರ್ದೇಶನ, ಕಲಾತ್ಮಕತೆ, ಸಂದೇಶದ ಗುಣಮಟ್ಟ, ಸೃಜನಶೀಲತೆ ಇತ್ಯಾದಿಯ ಬಗ್ಗೆ ಗಂಭೀರ ಪ್ರಶ್ನೆಗಳು ಏಳುವುದಿಲ್ಲ.

ವರನಟ ರಾಜ್‍ಕುಮಾರ್ ಒಂದು ಸಂದರ್ಶನದಲ್ಲಿ ಅರ್ಥಗರ್ಭಿತವಾದ ಮಾತುಗಳನ್ನು ಹೇಳುತ್ತಾರೆ, “ಒಂದು ಕಾಲದಲ್ಲಿ ಮದ್ರಾಸ್‍ನಲ್ಲಿ ಕನ್ನಡ ಚಿತ್ರಗಳ ಗುಣಮಟ್ಟ ಚೆನ್ನಾಗಿದೆ ಅಂಥಾ ಹೇಳುತ್ತಿದ್ದರು. ಅದು ಕಪ್ಪುಬಿಳುಪು ಚಿತ್ರಗಳನ್ನು ತೆಗೆಯುತ್ತಿದ್ದ ಸಮಯದಲ್ಲಿ. ಈಗ ನೀವು ಹೇಳಿದ ಹಾಗೆ ಸ್ವಲ್ಪ ಗುಣಮಟ್ಟ ಕಡಿಮೆ ಇದೆ. ಗುಣಮಟ್ಟ ಯಾವುದರಲ್ಲಿ ಜಾಸ್ತಿ ಇದೆ ಅಂತ ಹೇಳುತ್ತಾರೆ… ಜನಕ್ಕೆ ಹಿಡಿಸೋದನ್ನೆ ನಾವು ಮಾಡಬೇಕು ಅನ್ನೋದಕ್ಕಿಂತ ಹೆಚ್ಚಾಗಿ, ನಮ್ಮ ಸ್ವಂತಿಕೆ ಅನ್ನೋದು ಒಂದು ಇರುತ್ತಲ್ಲ, ನಮ್ಮ ಸ್ವಂತ ಅಭಿರುಚಿ ಅನ್ನೋದು ಇರುತ್ತಲ್ಲ. ನನಗೇನು ಬೇಕು ಅನ್ನೋದು ನಮಗೆ ಮೊದಲು ಬಂದರೆ ಈ ಚಿತ್ರರಂಗಕ್ಕೆ ಪ್ರಯೋಜನಕಾರಿ ಅಂತ ನನ್ನ (ಅನಿಸಿಕೆ)…” ಔಪಚಾರಿಕ ಶಿಕ್ಷಣವಿಲ್ಲದ, ಆದರೆ ತಮ್ಮ ಪ್ರತಿಭೆಯಿಂದ ಇಡೀ ರಾಜ್ಯವೇ ತಮ್ಮನ್ನು ಆರಾಧಿಸುವಂತೆ ಮಾಡಿದ್ದ ರಾಜ್‍ಕುಮಾರ್ ಅವರ ಈ ಮಾತುಗಳು ಇಂದಿನ ಮನರಂಜನಾ ಉದ್ಯಮಕ್ಕೆ ಸ್ಪಷ್ಟ ಸಂದೇಶ ನೀಡುತ್ತದೆ. ಜನ ಅದು ಕೇಳುತ್ತಾರೆ, ಇದು ಕೇಳುತ್ತಾರೆ ಎಂದು ನಾವೇ ಭ್ರಮಿಸಿಕೊಂಡು, ಕನಿಷ್ಠ ಮಾನದಂಡಗಳನ್ನು ಹಾಕಿಕೊಂಡು ನಮ್ಮ ಚಲನಚಿತ್ರಗಳ ಗುಣಮಟ್ಟವನ್ನು ನಿರಂತರವಾಗಿ ಕುಗ್ಗಿಸುತ್ತಿದ್ದೇವೆ. ಇದೊಂದು ವಿಷವರ್ತುಲ. ಇದರಿಂದ ಹೊರಬಂದು ನಮ್ಮ ಚಿತ್ರಗಳ ಗುಣಮಟ್ಟ ಹೆಚ್ಚಿಸಲು, ಅಗಾಧ ಎದೆಗಾರಿಕೆಯನ್ನು, ಸೃಜನಶೀಲತೆಯನ್ನು ನಮ್ಮ ನಿರ್ಮಾಪಕರು, ನಿರ್ದೇಶಕರು, ನಟರು ಹಾಗೂ ತಂತ್ರಜ್ಞರು ಇಂದು ತೋರಬೇಕಾಗಿದೆ.

ಇಂಗ್ಲಿಷ್ ಹಾಗೂ ಹಿಂದಿ ಕ್ರಿಕೆಟ್ ವೀಕ್ಷಕ ವಿವರಣೆಯನ್ನೇ ಆಲಿಸಿಕೊಂಡು ಬೆಳೆದಿದ್ದ ಪ್ರಾದೇಶಿಕ ಭಾಷಿಕರಿಗೆ ಈಗ ಪ್ರಾದೇಶಿಕ ಭಾಷೆಗಳಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಲ್ ಪಂದ್ಯಗಳ ವಿವರಣೆ ದೊರಕುತ್ತಿರುವುದು ಸಂತಸಕರ ಬೆಳವಣಿಗೆಯಾಗಿದೆ. ಮೊದಮೊದಲು ಪ್ರಾದೇಶಿಕ ಭಾಷೆಯ ವೀಕ್ಷಕ ವಿವರಣೆ ಸಾಮರ್ಥ್ಯದ ಬಗ್ಗೆ ಅನುಮಾನಗಳಿದ್ದವು. ಆದರೆ ಮಾಜಿ ಆಟಗಾರರು, ಪರಿಣಿತರ ಪ್ರವೇಶದಿಂದ ಈಗ ಕನ್ನಡ ದಲ್ಲಿ ಬರುತ್ತಿರುವ ವೀಕ್ಷಕ ವಿವರಣೆ ಸೊಗಸಾಗಿದೆ. ಇಲ್ಲಿ ಸಹ ವಿವರಣೆಯ ಗುಣಮಟ್ಟಕ್ಕೆ, ತೀಕ್ಷ್ಣತೆಗೆ ಸಂಬಂಧಿಸಿದಂತೆ ಪ್ರಶ್ನೆಗಳು ಏಳುತ್ತವೆ. ಐಪಿಲ್, ಮನರಂಜನೆ ಹಾಗೂ ಕ್ರೀಡೆ ಎರಡೂ ರಂಗಗಳ ಅದ್ಭುತ ಸಂಯೋಜನೆಯಾಗಿ ಒಂದು ಬೃಹತ ವಾಣಿಜ್ಯ ಶಕ್ತಿಯಾಗಿದೆ. ಇಲ್ಲಿ ಕಾಂಚಾಣವೇ ಪ್ರಧಾನ. ಎನೋ ಹೇಳಲು ಹೋಗಿ, ಯಾಕಪ್ಪಾ ತಗ್ಲಾಕಬೇಕು, ಎಂದು ಎಲ್ಲ ವಿವರಣೆಕಾರರು ಅತೀವ ಜಾಣತನ ಪ್ರದರ್ಶಿಸುತ್ತಾರೆ. ‘ಯು ಸ್ಕ್ರ್ಯಾಚ್ ಮೈ ಬ್ಯಾಕ್, ಐ ವಿಲ್ ಸ್ಕ್ರ್ಯಾಚ್ ಯುವರ್ಸ್,’ ಮಾದರಿಗೆ ಐಪಿಲ್ ವಿವರಣೆಕಾರರು ಇನ್ನೊಂದು ಉದಾಹರಣೆ.

ಸಂಜಯ್ ಮಂಜ್ರೇಕರ್ ರವೀಂದ್ರ ಜಡೇಜಾರನ್ನು `ಬಿಟ್ಸ್ ಅಂಡ್ ಪೀಸಸ್’ ಆಟಗಾರ ಎಂದಾಗ ಅವರು ನಾಲಿಗೆ ಹರಿ ಬಿಟ್ಟಿದ್ದು ಮೊದಲನೆಯ ಬಾರಿಯಾಗಿರಲಿಲ್ಲ. ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪ್ರವೇಶಿಸಿದ ಆರಂಭದಲ್ಲಿ ಸಂಜಯ್ ಮಂಜ್ರೇಕರ್ ಅವರನ್ನು ಟೆಸ್ಟ್ ಕ್ರಿಕೆಟ್‍ಗೆ ಯೋಗ್ಯವಲ್ಲ ಎಂಬ ಹೇಳಿಕೆ ನೀಡಿದ್ದರು. ನಂತರ ಅವರ ಮಾತುಗಳನ್ನು ಅವರೇ ನುಂಗಬೇಕಾಯಿತು. ಸ್ವೇಚ್ಛೆಯಾಗಿ  ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ, ಕೆಲವೊಮ್ಮೆ ಮೊನಚಾಗಿ ಆಟಗಾರರನ್ನು ಟೀಕಿಸುತ್ತಿದ್ದ ಸಂಜಯ ಮಂಜ್ರೇಕರ್ ಅವರ ಬಗ್ಗೆ ಹಲವಾರು ಕ್ರಿಕೆಟ್ ಆಟಗಾರರಿಗೆ ಅಸಮಾಧಾನವಿತ್ತು. ಮಂಜ್ರೇಕರರಿಗೆ ಪಾಠ ಕಲಿಸಲೆಂದೇ, ಬಿಸಿಸಿಐ ಅವರನ್ನು ವಿವರಣೆಕಾರರ ಪ್ಯಾನೆಲ್‍ನಿಂದ ತೆಗೆದುಹಾಕುತ್ತದೆ. ನಂತರ ಮಂಜ್ರೇಕರ್ ತಮ್ಮ ಕೆಲಸಕ್ಕಾಗಿ ಬಿಸಿಸಿಐ ಮುಂದೆ ಬೇಡಬೇಕಾದದ್ದು ಕರುಣಾಜನಕವಾದ ಸಂಗತಿ. ಆದರೆ ಬಿಸಿಸಿಐಗೆ ವಿವರಣೆಕಾರರ ಮೇಲೆ ಯಾವ ಹಕ್ಕಿದೆ, ಸಂಜಯ್ ಮಂಜ್ರೇಕರ್ ಬಾಯಿಗೆ ಬೀಗ ಹಾಕಲು ಸೌರವ್ ಗಂಗೂಲಿಗೆ ಯಾವ ಅಧಿಕಾರವಿದೆ. ಇಂತಹ ವಿಷಯಗಳು ಚರ್ಚೆಗೆ ಬಂದವು. ನಂತರ ಸಂಜಯ್ ಮಂಜ್ರೇಕರ್ ಅವರನ್ನು ಸೋನಿ ವಾಹಿನಿಯಲ್ಲಿ ವೀಕ್ಷಕ ವಿವರಣೆಕಾರರನ್ನಾಗಿ ಸೇರಿಸಿಕೊಳ್ಳಲಾಗುತ್ತದೆ.  ಇಂತಹ ಘಟನೆಗಳು ಪ್ರಪಂಪದ ಬೇರಾವುದೇ ದೇಶದಲ್ಲೂ ನಡೆಯುವುದಿಲ್ಲ. ಇಂತಹದನ್ನು ಇಂಗ್ಲಿಷ್ ಪ್ರೀಮಿಯರ್ ಲೀಗ್ ಮಾಡುತ್ತದೆ ಎಂದು ಊಹಿಸಿಕೊಳ್ಳಲು ಸಾಧ್ಯವೇ, ಎಂದು ರಾಮಚಂದ್ರ ಗುಹಾ ಪ್ರಶ್ನಿಸುತ್ತಾರೆ.

ಇಂತಹ ಪ್ರಸಂಗಗಳು ಉಳಿದ ವೀಕ್ಷಕ ವಿವರಣೆಕಾರರಿಗೆ ಪಾಠವಾಗಿಬಿಟ್ಟಿದೆ. ಐಪಿಎಲ್‍ನ ಸಾಧಕ-ಬಾಧಕಗಳ ಬಗ್ಗೆ, ಒಂದು ಇಡೀ ವ್ಯವಸ್ಥೆಯ ಆರೋಗ್ಯದ ವಿಷಯ ಬಂದಾಗ ಎಲ್ಲರೂ ರಾಜತಂತ್ರಕ್ಕೆ ಅಂಟಿಕೊಳ್ಳುತ್ತಾರೆ. ಏಕೆಂದರೆ ಐಪಿಎಲ್ ಹೆಚ್ಚು-ಕಡಿಮೆ ಎಲ್ಲಾ ಮಾಜಿ ಆಟಗಾರರಿಗೂ ಉದ್ಯೋಗ ಒದಗಿಸುವ ಮಾಲೀಕ. ಈ ಬೆಳವಣಿಗೆಗಳಿಂದ ಕ್ರಿಕೆಟ್ ಮೇಲಾಗುವ ಪರಿಣಾಮವನ್ನು ತಿಳಿಯಲು ದೀರ್ಘ ಕಾಲ ಬೇಕಾಗುತ್ತದೆ.

ಈ ಕಾರಣಗಳಿಂದಲೇ, ನಿರ್ಭೀತಿಯಿಂದ ಅಭಿಪ್ರಾಯ ವ್ಯಕ್ತಪಡಿಸುವುದು ಹಾಗೂ ಕಟು ವಿಮರ್ಶೆಗಳ ಅಗತ್ಯತೆ ಪ್ರತಿ ಕ್ಷೇತ್ರದಲ್ಲೂ ಇದೆ. ಉನ್ನತ ಗುಣಮಟ್ಟ, ಉತ್ಕೃಷ್ಟತೆ, ಎಲ್ಲೆಡೆ ಪಸರಿಸಬೇಕು. ಪರಸ್ಪರ ಪ್ರಶಂಸೆಗಳು ಹಾಗೂ ಭಟ್ಟಂಗಿತನ, ಗುಣಮಟ್ಟ ಹಾಗೂ ಸೃಜನಶೀಲತೆಗೆ ಎಂದೂ ಪಥ್ಯವಲ್ಲ. ಅಗ್ಗದ ಸರಕಿಗೆ ಕೆಂಪುಗಂಬಳಿ ಹಾಸುವ ಸಂಸ್ಕೃತಿ ದೂರವಾಗಬೇಕು.

Leave a Reply

Your email address will not be published.