ಅಜೀಂ ಪ್ರೇಮ್ಜೀ ಎಂಬ ಶ್ರೀಮಂತ ಮನಸ್ಸು…

-ಪದ್ಮರಾಜ ದಂಡಾವತಿ

ನಮ್ಮಲ್ಲಿ ಅನೇಕ ಉದ್ಯಮಿಗಳು ತಮ್ಮ ಸಂಸ್ಥೆಯ ಹಣವನ್ನು ಸಾರ್ವಜನಿಕ ಉದ್ದೇಶಕ್ಕೆ (ಸಿ.ಎಸ್.ಆರ್.) ದಾನ ಮಾಡಿ ಹೆಸರು ಮಾಡಿದವರು. ಪ್ರೇಮ್‌ಜಿ ಮಾತ್ರ ತಮ್ಮ ವೈಯಕ್ತಿಕ ಸಂಪತ್ತನ್ನು ಸಮಾಜಕ್ಕೆ ಧಾರೆ ಎರೆದವರು!

ಇವರೊಬ್ಬ ಜಿಪುಣ, ಕೆಲವೊಮ್ಮೆ ಜಿಪುಣಾಗ್ರೇಸರ; ಸಿಕ್ಕ ಸಿಕ್ಕ ಹಾಗೆ ಹಣ ಖರ್ಚು ಮಾಡಿದವರಲ್ಲ. ಮಾಡುವವರನ್ನು ಕಂಡರೆ ಇಷ್ಟಪಟ್ಟವರೂ ಅಲ್ಲ. ಆಗರ್ಭ ಶ್ರೀಮಂತ. ಬೆಳೆಯುತ್ತ ದೇಶದ ಕೆಲವೇ ಕೆಲವು ದೊಡ್ಡ ಶ್ರೀಮಂತರಲ್ಲಿ ಒಬ್ಬರು ಎಂದು ಹೆಸರು ಮಾಡಿದವರು. ಹಾಗೆ ಶ್ರೀಮಂತರಾದವರು ಅನೇಕ ಮಂದಿ ಇದ್ದಾರೆ. ಆದರೆ, ತಾನು ದುಡಿದ ಸಾವಿರಾರು ಕೋಟಿ ಹಣ ತನ್ನದಲ್ಲ, ಅದು ಸಮಾಜಕ್ಕೆ ಸೇರಿದ್ದು ಎಂದು ಬಿಟ್ಟುಕೊಟ್ಟವರು ಬೆರಳೆಣಿಕೆಯಷ್ಟು. ಹಾಗೆ ನೋಡಿದರೆ ಒಂದೇ ಬೆರಳೆಣಿಕೆಗೆ ಸಿಗುವವರು. ಅದರಲ್ಲಿ ನಮ್ಮ ಅಜೀಂ ಪ್ರೇಮ್‌ಜಿ ಒಬ್ಬರು. ಅವರು ಕಳೆದ ಎರಡು ದಶಕಗಳಲ್ಲಿ ಮಾಡಿದ ದಾನ 21 ಶತಕೋಟಿ ಅಮೆರಿಕನ್ ಡಾಲರ್. ಇದನ್ನು ನಿಮ್ಮ ಮೊಬೈಲ್‌ನಲ್ಲಿ ರೂಪಾಯಿಗಳಿಗೆ ಕನ್ವರ್ಟ್ ಮಾಡಿ ನೋಡಿ. ಎಷ್ಟು ಸೊನ್ನೆಗಳು ಬರುತ್ತವೆ ಎಂದು. ಅದು ಭಾರತೀಯ ರೂಪಾಯಿಗಳಲ್ಲಿ 1.45 ಲಕ್ಷ ಕೊಟಿ ರೂಪಾಯಿ! ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ ಅವರನ್ನು ಬಿಟ್ಟರೆ ಅತಿ ಹೆಚ್ಚು ದಾನ ಮಾಡಿದವರು ಪ್ರೇಮ್‌ಜಿ.

2019 ರ ಮಾರ್ಚ್ 13 ರಂದು ಒಂದೇ ದಿನ ಪ್ರೇಮ್‌ಜಿ ಅವರು ಶೇಕಡ 34 ರಷ್ಟು ವಿಪ್ರೊ ಷೇರುಗಳನ್ನು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನಕ್ಕೆ ದಾನ ಮಾಡಿದರು. ಈ ಮೊತ್ತ 7.5 ಶತಕೋಟಿ ಅಮೆರಿಕನ್ ಡಾಲರ್. ಭಾರತದ ರೂಪಾಯಿಗಳಲ್ಲಿ ಇದು 52,750 ಕೋಟಿ ರೂಪಾಯಿ. ಅಂದಿಗೆ, ಅವರು ಅದುವರೆಗೆ, ಪ್ರತಿಷ್ಠಾನಕ್ಕೆ ಕೊಟ್ಟ ಒಟ್ಟು ಮೊತ್ತ 1.45 ಲಕ್ಷ ಕೋಟಿ ರೂಪಾಯಿ ಆಯಿತು ಎಂದು ಅಂದು ಬಿಡುಗಡೆ ಮಾಡಿದ್ದ ಒಂದು ಪುಟದ ಪತ್ರಿಕಾ ಪ್ರಕಟಣೆ ಹೇಳಿತ್ತು. ಇಷ್ಟು ದೊಡ್ಡ ಮೊತ್ತವನ್ನು ಬಿಡುಗಡೆ ಮಾಡುವುದು ಜಾಗತಿಕ ಸುದ್ದಿ. ಪ್ರೇಮ್‌ಜಿ ಅವರಾಗಲೀ, ಅವರ ಪ್ರತಿಷ್ಠಾನ ನೋಡಿಕೊಳ್ಳುವವರಾಗಲಿ ಯಾವ ಮಾಧ್ಯಮದವರನ್ನೂ ಈ ಸುದ್ದಿ ತಿಳಿಸಲು ಕರೆದಿರಲಿಲ್ಲ. ಒಂದು ಪುಟದ ಆ ಪ್ರಕಟಣೆ ಬಿಟ್ಟರೆ ಬೇರೆ ಯಾವ ದೌಲತ್ತನ್ನೂ ಅವರು ಪ್ರದರ್ಶಿಸಲಿಲ್ಲ.

ಇದು ನಾವು ಕಂಡು ಕೇಳರಿಯದ ಸರಳತೆ. ಯಾವುದನ್ನೇ ಆಗಲಿ ಪ್ರದರ್ಶಿಸಬಾರದು, ಹೇಳಿಕೊಳ್ಳಬಾರದು ಎನ್ನುವ ಜಾಯಮಾನ ಪ್ರೇಮ್‌ಜಿ ಅವರದು. ಅವರ ಕುರಿತು ಸಂದೀಪ ಖನ್ನಾ ಮತ್ತು ವರುಣ್ ಸೂದ್ ಎಂಬ ಇಬ್ಬರು ಪತಕರ್ತರು ಬರೆದಿರುವ ಈ ಪುಸ್ತಕ ಬಿಡುಗಡೆಯಾಗಿ ನಾಲ್ಕು ತಿಂಗಳಾಯಿತು. ಪುಸ್ತಕ ಬರೆಯುವಾಗ ಪ್ರೇಮ್‌ಜಿ ಅವರನ್ನು ಭೇಟಿ ಮಾಡಲು ಈ ಇಬ್ಬರು ಪತ್ರಕರ್ತರಿಗೆ ಸಾಧ್ಯವಾಗಲಿಲ್ಲ. ಇವರನ್ನು ಭೇಟಿ ಮಾಡಲು ಪ್ರೇಮ್‌ಜಿ ಒಪ್ಪಲೇ ಇಲ್ಲ. ತಮ್ಮ ನಿಕಟ ಸ್ನೇಹಿತರಾದ ಕಿರಣ್ ಮಜುಮ್‌ದಾರ್ ಶಹಾ ಮತ್ತು ಅನು ಆಗಾ ಅವರ ಆಗ್ರಹಕ್ಕೂ ಅಜೀಂ ಮಣಿಯಲಿಲ್ಲ. ‘ಅವರಿಗೆ ನಾನು ಹೇಳುವುದು ಏನೂ ಇಲ್ಲ’ ಎಂದು ತಪ್ಪಿಸಿಕೊಂಡರು.

ಕೊನೆಗೆ ಸುಮಾರು ಇನ್ನೂರು ಜನರನ್ನು ಮಾತನಾಡಿಸಿ, ಅವರ ಪಟ್ಟಿ ಪುಸ್ತಕದ ಕೊನೆಯಲ್ಲಿ ಇದೆ, ಅವರು ಈ ಪುಸ್ತಕವನ್ನು ಬರೆದಿದ್ದಾರೆ. ಆ ದೃಷ್ಟಿಯಿಂದ ಇದು ಅಪರಿಪೂರ್ಣ ಪುಸ್ತಕ. ತಾವು ಯಾರ ಬಗೆಗೆ ಬರೆದಿದ್ದಾರೋ, ಅವರು ಬದುಕಿರುವಾಗಲೂ, ಅವರನ್ನು ಮಾತನಾಡಿಸಲು ಆಗದೇ ಇರುವುದು ಏನನ್ನು ಹೇಳುತ್ತ ಇರಬಹುದು? ಆ ಮನುಷ್ಯನ ಸಂಕೋಚ ಗುಣವನ್ನೇ, ವಿನಯವನ್ನೇ, ಪ್ರಚಾರದ ಗೋಜಲು ಬೇಡ ಎನ್ನುವ ಆಳದ ಏಕಾಕಿತನವನ್ನೇ? ಎಲ್ಲವೂ ಇರಬಹುದು. ಪ್ರೇಮ್‌ಜಿ ಆಳದಲ್ಲಿ ಒಂಟಿ. ಏಕಾಕಿ.

ಪ್ರೇಮ್‌ಜಿ ಅವರು ತಮ್ಮ 21ನೇ ವಯಸ್ಸಿನಲ್ಲಿ, ತಂದೆಯ ಅಕಾಲಿಕ ನಿಧನದ ನಂತರ, ಅಮೆರಿಕದ ಸ್ಟಾö್ಯನ್‌ಫೋರ್ಡ ವಿಶ್ವವಿದ್ಯಾಲಯದ ಓದನ್ನು ಅರ್ಧಕ್ಕೆ ಬಿಟ್ಟು ಭಾರತಕ್ಕೆ ಬಂದರು. ತಂದೆಯ ಕೆಲವು ಲಕ್ಷಗಳ ವನಸ್ಪತಿ ತೈಲದ ಉದ್ಯಮವನ್ನು ನಡೆಸಲು ಆರಂಭಿಸಿದರು. ಕಳೆದ ಐವತ್ತು ವರ್ಷಗಳಲ್ಲಿ ಶತಕೋಟಿ ರೂಪಾಯಿಗಳನ್ನು ಗಳಿಸಿದರು. ಇದು ವಾಮನÀ ತ್ರಿವಿಕ್ರಮನಾಗಿ ಬೆಳೆದು ನಿಂತ ಕಥೆ!

ಆ ಬೆಳವಣಿಗೆಯ ಹಿಂದೆ ಅಪಾರ ಶ್ರಮ ಇತ್ತು. ಪೈಸೆ ಪೈಸೆಯನ್ನು ಕೂಡಿಸಿ ಇಡುವ ಹಿಕಮತ್ತು ಇತ್ತು. ಅದನ್ನು ಬೆಳೆಸುವ ತಲೆಗಳನ್ನು ಹುಡುಕಿ ತನ್ನ ಸಂಸ್ಥೆಗೆ ಸೇರಿಸಿಕೊಳ್ಳುವ ಗೈರತ್ತು ಇತ್ತು. ತನ್ನ ಗುರಿಯನ್ನು ಸಾಧಿಸುವ, ಏಕನೋಟದ ಶ್ರದ್ಧೆ ಇತ್ತು, ಛಲವಿತ್ತು. ಆದರೂ ಅವರಿಗೆ ಮೊದಲಿನಿಂದಲೂ ತನ್ನ ಹಣ ಯಾವುದು, ಸಂಸ್ಥೆಯ ಹಣ ಯಾವುದು ಎಂಬ ಭೇದ ಗೊತ್ತಿತ್ತು. ಕಚೇರಿಯಿಂದ ಖಾಸಗಿ ಕರೆ ಮಾಡಿದರೆ ಅದಕ್ಕೆ ತಗುಲಿದ ಹಣವನ್ನು ಕೊಟ್ಟವರು ಅವರು!

ತನ್ನ ತಂದೆಯಿAದ ವ್ಯವಹಾರದ ಗುಣಗಳನ್ನು ಬಳುವಳಿಯಾಗಿ ಪಡೆದ ಅವರಿಗೆ, ಸಂಕಟದಲ್ಲಿ ಇದ್ದವರಿಗೆ ನೆರವಾಗಬೇಕು ಎನ್ನುವ, ನಾವು ಗಳಿಸಿ ಎಷ್ಟೇ ಶ್ರೀಮಂತರಾದರೂ ಅದು ಸಾರ್ವಜನಿಕ ಹಣ ಮತ್ತು ನಾವು ಅದರ ಟ್ರಸ್ಟಿಗಳು ಮಾತ್ರ ಎನ್ನುವ ವಿವೇಕ ಎಲ್ಲಿಂದ ಬಂತು? ಅವರ ತಂದೆ ಹಷಂ ಪ್ರೇಮ್‌ಜಿ ಒಬ್ಬ ಉದ್ಯಮಿಯಾಗಿ ಬಹಳ ದೊಡ್ಡ ಹೆಸರು ಮಾಡಿದ್ದರೆ ಅವರ ತಾಯಿ ಗುಲ್ಬಾನೂ ವೈದ್ಯರಾಗಿ ಹೆಸರು ಮಾಡಿದವರು. ಮಹಾರಾಷ್ಟçದ ಅಳಮನೇರ್ ಪಟ್ಟಣದಲ್ಲಿ, ದೈಹಿಕ ವೈಕಲ್ಯ ಇರುವ ಮಕ್ಕಳ ಆಸ್ಪತ್ರೆಯಲ್ಲಿ ಆಕೆ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು. ಅವರದು ನಿಸ್ಪೃಹ ಸೇವೆ. ಪ್ರೇಮ್‌ಜಿಗೆ ತಾಯಿಯ ರಕ್ತದಲ್ಲಿ ಹರಿದು ಬಂದುದು ಈ ದಾನ ಗುಣ.

ಪ್ರೇಮ್‌ಜಿ ಕಾಲೇಜನ್ನು ತೊರೆದು ಉದ್ಯಮ ರಂಗಕ್ಕೆ ಪ್ರವೇಶಿಸಿದ್ದು 1966ರಲ್ಲಿ. ಅಂದರೆ ಇಂದಿಗೆ 50 ವರ್ಷಗಳಾದುವು. ಆಗಿನಿಂದ ಇದುವರೆಗೆ ಅವರು ತಮ್ಮ ಉದ್ಯಮಗಳನ್ನು ಕಟ್ಟಿದ್ದು ನಿಯತ್ತ್ತು, ನೀತಿವಂತಿಕೆ ಮತ್ತು ಗ್ರಾಹಕ ಕೇಂದ್ರಿತ ಎಂಬ ಮೂರು ಮುಖ್ಯ ಮೌಲ್ಯಗಳ ಅಡಿಪಾಯದ ಮೇಲೆ. ಈ ವಿಚಾರದಲ್ಲಿ ಅವರು ಎಂದೂ ರಾಜಿ ಮಾಡಿಕೊಳ್ಳಲಿಲ್ಲ.

ವಿಪ್ರೊ ಎಂದ ಕೂಡಲೇ ಎಲ್ಲರೂ ದೇಶದ ಮೂರನೇ ಅಥವಾ ನಾಲ್ಕನೇ ಅತಿದೊಡ್ಡ ಐ.ಟಿ ಉದ್ಯಮ ಎಂದು ಮಾತ್ರ ಭಾವಿಸುತ್ತಾರೆ. ಪ್ರೇಮ್‌ಜಿ ಅವರು ‘ಸಂತೂರ್’ ಸಾಬೂನಿನಂಥ ವೈಯಕ್ತಿಕ ಬಳಕೆಯ ಅನೇಕ ವಸ್ತುಗಳನ್ನೂ ತಯಾರಿಸುತ್ತಾರೆ, ಹಿಂದುಸ್ಥಾನ್ ಲಿವರ್‌ನಂಥ ಬಹುರಾಷ್ಟಿçÃಯ ಕಂಪೆನಿಯ ‘ಲಕ್ಸ್’ ಸಾಬೂನನ್ನು ಹಿಂದಿಕ್ಕಿ 2,0000 ಕೋಟಿ ರೂಪಾಯಿ ಮೌಲ್ಯದ ‘ಸಂತೂರ್’ ಸಾಬೂನು ಮಾರಾಟವಾಗಿವೆ ಎಂದರೆ ಅದು ಸಾಮಾನ್ಯ ಸಂಗತಿಯಲ್ಲ. ಅದರ ಹಿಂದೆ ಮಾರುಕಟ್ಟೆ ನಾಯಕ ಆಗಬೇಕು ಎಂಬ ಪ್ರೇಮ್‌ಜಿಯ ಹೆಣಗಾಟ, ಸತತ ಶ್ರಮ, ಹಾತೊರಿಕೆಗಳೆಲ್ಲ ಇವೆ. ತಮ್ಮ ವಸ್ತುಗಳು ಹೇಗೆ ಮಾರಾಟವಾಗುತ್ತವೆ ಎಂಬುದನ್ನು ತಿಳಿಯಲು ಅವರು ಕಿರಾಣಿ ಅಂಗಡಿಗೆ ಹೋಗಿ ಮೂಟೆಗಳ ಮೇಲೆ ಕುಳಿತುಕೊಂಡು ಅಂಗಡಿಯ ಮಾಲೀಕನ ಜೊತೆ ಮಾತನಾಡಲೂ ಹಿಂದೇಟು ಹಾಕುತ್ತಿರಲಿಲ್ಲ. ಒಂದು ಸಾರಿ ವಿಪ್ರೊ ಸನ್‌ಫ್ಲವರ್ ಮಾರುವ ಅಂಗಡಿಗೆ ಹೋಗಿ ಪ್ರೇಮ್‌ಜಿ ಪೇಚಿಗೆ ಸಿಲುಕಿಕೊಂಡರು. ಆರು ಪಾಕೀಟು ಸನ್ ಫ್ಲವರ್ ಪಾಕೀಟು ಕೊಡಿ ಎಂದ ಅಂಗಡಿ ಮಾಲೀಕನಿಗೆÀ ಹನ್ನೆರಡು ತೆಗೆದುಕೊಳ್ಳಬಾರದೇ ಎಂದು ಪ್ರೇಮ್‌ಜಿ ದುಂಬಾಲು ಬಿದ್ದರು. ‘ಅಂಗಡಿ ಮಾಲೀಕ ನಾನು; ನೀನಲ್ಲ’ ಎಂದು ಆತ ಆ ಆರು ಪಾಕೀಟುಗಳ ಆರ್ಡರ್ ಅನ್ನೂ ರದ್ದು ಮಾಡಿದ ಸ್ವಾರಸ್ಯಕರ ಪ್ರಸಂಗವೂ ಪುಸ್ತಕದಲ್ಲಿ ಇದೆ!

ನ್ಯೂಯಾರ್ಕ್ನ ಷೇರುಪೇಟೆಯಲ್ಲಿ ವಿಪ್ರೊ ಷೇರನ್ನು ಲಿಸ್ಟ್ ಮಾಡಿಸಲು ಹೋದಾಗ ತಮ್ಮ ಬ್ಯಾಂಕರುಗಳು ವಿಮಾನದ ಎಕ್ಸಿಕ್ಯೂಟಿವ್ ಆಸನಗಳಲ್ಲಿ ಕುಳಿತುದು, ಪ್ರೇಮ್‌ಜಿ ಮತ್ತು ಅವರ ಅಧಿಕಾರಿಗಳು ಎಕಾನಮಿ ದರ್ಜೆಯಲ್ಲಿ ಕುಳಿತುದು, ನ್ಯೂಯಾರ್ಕಿನಲ್ಲಿ ಲಿಮೋಸಿನ್ ಕಾರು ಬಿಟ್ಟು ಸೆಡಾನ್ ಕಾರಿನಲ್ಲಿ ಐದಾರು ಮಂದಿ ತುಂಬಿಕೊAಡು ತಿರುಗಿದ್ದು, ಹತ್ತು ಡಾಲರ್‌ಗೆ ಮೂವರಿಗೆ ಊಟ ಕೊಡಿಸಿದ ತನ್ನ ಕಿರಿಯ ಸಹೋದ್ಯೋಗಿಗೆ ‘ಭಲೆ’ ಎಂದು ಮೆಚ್ಚಿದ್ದು, ಒಂದು ದಿನ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯನ್ನು ಕರೆದು ನಮ್ಮ ಸಂಸ್ಥೆಯ ಶೌಚಾಲಯಗಳಲ್ಲಿ ಎಷ್ಟು ಟಿಶ್ಯೂ ಕಾಗದ ಬಳಕೆಯಾಗುತ್ತದೆ ಎಂದು ಲೆಕ್ಕ ಕೇಳಿದ್ದು, ಸರ್ಜಾಪುರ ಸಂಕೀರ್ಣದಲ್ಲಿ ಕಾವಲುಗಾರರ ಸಂಖ್ಯೆ ಎಷ್ಟು ಎಂದು ತಿಳಿಯಲು ಬಯಸಿದ್ದು, ಕಿರಣ್ ಮಜುಂದಾರ್ ಶಹಾ ಅವರ ಜೊತೆಗೆ ಕಲಾತ್ಮಕ ವಸ್ತುಗಳ ಖರೀದಿಗೆ ಹೋಗುವಾಗ ತಾವು ಪ್ರೇಮ್‌ಜಿ ಎಂದು ಗೊತ್ತಾಗಬಾರದು ಎಂದು ಮುಖಕ್ಕೆ ಮೀಸೆ ಅಂಟಿಸಿಕೊAಡು ತಲೆಯ ಮೇಲೆ ಹ್ಯಾಟ್ ಹಾಕಿಕೊಂಡುದು… ಏಕೆಂದರೆ ತಾನು ಪ್ರೇಮ್‌ಜಿ ಎಂದು ಗೊತ್ತಾದರೆ ಅಂಗಡಿಯವರು ದುಬಾರಿ ಬೆಲೆ ಹಾಕಬಹುದು ಎಂದು ಅಳುಕಿದ್ದು. ಕ್ವಾಲಾಲಂಪುರ ವಿಮಾನ ನಿಲ್ದಾಣದ ಸ್ನಾನಗೃಹದಲ್ಲಿ (ಹೋಟೆಲ್‌ನಲ್ಲಿ ಅಲ್ಲ ಗಮನಿಸಿ) ಸ್ನಾನ ಮಾಡಲು ಹೋಗಿ ಬಿದ್ದು ಬೆನ್ನು ಮೂಳೆ ಮುರಿದು ಕೊಂಡುದು… ಒಂದೇ ಎರಡೇ? ಇಂಥ ಜುಗ್ಗ ಮನುಷ್ಯ ಒಂದು ದಿನ ಇದೆಲ್ಲ ತನ್ನದಲ್ಲ ಎಂದು ತ್ಯಾಗ ಮಾಡಿದ್ದು ಒಂದು ಅಲೌಕಿಕ ಘಟನೆಯ ಹಾಗೆ ಕಾಣಿಸುತ್ತದೆ.

ತಾವು ಇಟ್ಟ ದತ್ತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕು ಎಂದು ಪ್ರೇಮ್‌ಜಿ ಹಂಬಲಿಸುತ್ತಿದ್ದಾರೆ. ಇದು ಅವರ ಜೀವಮಾನದಲ್ಲಿ ಕಾಣಲಾಗದ ಬದಲಾವಣೆ ಎಂಬುದೂ ಅವರಿಗೆ ತಿಳಿದಿದೆ. ಆದರೂ, ಶಿಕ್ಷಣ ಮಾತ್ರ ಸಮಾನತೆ ತರಬಹುದು ಎಂಬುದು ಅವರ ನಂಬಿಕೆ. ಒಂದು ಕಡೆ ಹೀಗೆ ಪ್ರಾಥಮಿಕ ಶಿಕ್ಷಣದ ಉತ್ತಮಿಕೆಗೆ ದೇಣಿಗೆ ನೀಡಿರುವ ಪ್ರೇಮ್‌ಜಿ ಇನ್ನೊಂದು ಕಡೆ ಶ್ರೇಷ್ಠ ಮಟ್ಟದ ಉನ್ನತ ಶಿಕ್ಷಣ ದೊರಕಿಸಲು ಖಾಸಗಿ ವಿಶ್ವವಿದ್ಯಾಲಯವನ್ನೇ ಸ್ಥಾಪಿಸಿದ್ದಾರೆ.

ಪ್ರೇಮ್‌ಜಿ ಅವರ ಕಾಳಜಿಯ ಕೈಗಳನ್ನೂ ಹಿಡಿದವರು ಯಾಸ್ಮಿನ್. ಯೌವನದಲ್ಲಿ ಅಪೂರ್ವ ಸುಂದರಿ ಎಂದು ಹೆಸರಾಗಿದ್ದವರು ಅವರು. ಮೂಲತಃ ಶ್ರೀಮಂತ ಮನೆತನದ ಆಕೆ ಒಬ್ಬ ಲೇಖಕಿ ಕೂಡ. ರಿಷಾದ್ ಮತ್ತು ತಾರೀಖ್ ಎಂಬ ಬೆಳೆದು ನಿಂತ ಮಕ್ಕಳ ಪುಟ್ಟ ಸಂಸಾರ ಅವರದು.

ನಮ್ಮಲ್ಲಿ ಅನೇಕ ಉದ್ಯಮಿಗಳು ಇದ್ದಾರೆ. ಇಬ್ಬರಂತೂ ಸಾರ್ವಜನಿಕರ ಹಣವನ್ನು ದೋಚಿ ವಿದೇಶದಲ್ಲಿ ಹೇಡಿಗಳ ಹಾಗೆ ಅಡಗಿ ಕುಳಿತಿದ್ದಾರೆ. ಇಲ್ಲಿ ಇರುವ ಅನೇಕರು ತಮ್ಮ ಸಂಸ್ಥೆಯ ಹಣವನ್ನು ಸಾರ್ವಜನಿಕ ಉದ್ದೇಶಕ್ಕೆ (ಸಿ.ಎಸ್.ಆರ್) ದಾನ ಮಾಡಿ ಹೆಸರು ಮಾಡಿದವರು! ಪ್ರೇಮ್‌ಜಿ ಮಾತ್ರ ತಮ್ಮ ವೈಯಕ್ತಿಕ ಸಂಪತ್ತನ್ನು ಸಮಾಜಕ್ಕೆ ಧಾರೆ ಎರೆದವರು. ಭಾರತದಲ್ಲಿ ಹೀಗೆ ಮಾಡಿದವರು ಅವರು ಒಬ್ಬರೇ. ಅವರಿಗೆ ‘ಪದ್ಮವಿಭೂಷಣ’ ಬಂದಿದೆ. ನಿಜವಾದ ‘ಭಾರತ ರತ್ನ’ ಎಂದರೆ ಇವರೇ ಅಲ್ಲವೇ!

*ಲೇಖಕರು ಪ್ರಜಾವಾಣಿಯ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕರು; ಅನೇಕ ಪುಸ್ತಕಗಳ ಲೇಖಕರು, ದೇವದತ್ತ ಪಟ್ಟನಾಯಕರ ಇಂಗ್ಲಿಷ್ ಕೃತಿ ಸೀತಾ ರಾಮಾಯಣವನ್ನು ಕನ್ನಡಕ್ಕೆ ತಂದಿದ್ದಾರೆ.

 

Leave a Reply

Your email address will not be published.