ಅಜ್ಜಂದಿರಿಂದ ಪ್ರೇರಣೆ ಹುಬ್ಬಳ್ಳಿಯ ರಾಹುಲ ಸಂಕನೂರ

ಕೇಂದ್ರ ಲೋಕಸೇವಾ ಆಯೋಗದ 2018ನೇ ಸಾಲಿನ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮಸ್ಥಾನ ಹಾಗೂ ದೇಶಕ್ಕೆ 17ನೇ ಸ್ಥಾನ ಪಡೆದ ಹುಬ್ಬಳ್ಳಿಯ ರಾಹುಲ ಸಂಕನೂರ ಅವರೊಂದಿಗಿನ ಮಾತುಕತೆ.

ನಿಮ್ಮ ಬಾಲ್ಯ ಹಾಗೂ ವಿದ್ಯಾಭ್ಯಾಸದ ಪರಿಚಯ ಮಾಡಿಕೊಡಿ.

ಸಂಕನೂರ ಪರಿವಾರದ ಮೂಲ ಗದಗ ಜಿಲ್ಲೆಯ ರೋಣ ತಾಲೂಕು. ನಮ್ಮದು ಬಹಳ ದೊಡ್ಡ ಕುಟುಂಬ. ತಂದೆಯವರು ಸರಕಾರಿ ಕೆಲಸದಲ್ಲಿದ್ದರು. ನನ್ನ ಬಾಲ್ಯದ ವಿದ್ಯಾಭ್ಯಾಸ ಬೆಳಗಾವಿಯ ಖಾನಾಪುರದಲ್ಲಿ ಕನ್ನಡ ಮಾಧ್ಯಮದಲ್ಲಾಗಿದೆ. ನಂತರ ಮೈಸೂರಿನ ರಾಮಕೃಷ್ಣ ಆಶ್ರಮದ ವಿದ್ಯಾಮಂದಿರ ಶಾಲೆಯಲ್ಲಿ ಹೈಸ್ಕೂಲ್‍ನಿಂದ ಪಿಯುಸಿವರೆಗೆ ಮುಂದುವರೆಯಿತು. ಸಿ.ಇ.ಟಿ.ಯಲ್ಲಿ ವೈದ್ಯಕೀಯದಲ್ಲಿ
ರಾಜ್ಯಕ್ಕೆ 26ನೇ ರ್ಯಾಂಕ್ ಹಾಗೂ ಇಂಜಿನಿಯರಿಂಗ್‍ನಲ್ಲಿ 28ನೇ ರ್ಯಾಂಕ್ ಪಡೆದೆ. ಹಾಗಾಗಿ ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಇ&ಇ ವಿಭಾಗದಲ್ಲಿ ಪ್ರವೇಶ ಸಿಕ್ಕಿತು. ಇಂಜಿನಿಯರಿಂಗ್ ಪದವಿ ನಂತರ ಖಾಸಗಿ ಕಂಪನಿಯಲ್ಲಿ ಒಂದೆರೆಡು ವರ್ಷ ಕೆಲಸಕ್ಕೆ ಸೇರಿ ಕೊಂಡು ಉತ್ತಮ ಸಾಧನೆ ಮಾಡಿದ್ದೆ. ನಂತರ ಏನಾದರೂ ಸಾಧನೆ ಮಾಡಬೇಕೆಂದು ನಿರ್ಧರಿಸಿ ನೌಕರಿಗೆ ರಾಜೀನಾಮೆ ಕೊಟ್ಟು ಐಎಎಸ್ ಪರೀಕ್ಷೆಗೆ ಅಧ್ಯಯನ ಪ್ರಾರಂಭಿಸಿದೆ.

ಐ.ಎ.ಎಸ್. ಕನಸು ಕಂಡಿದ್ದು ಹೇಗೆ? ಪ್ರೇರಣೆ ಸಿಕ್ಕಿದ್ದು ಎಲ್ಲಿಂದ?

ನಮ್ಮ ಕುಟುಂಬವರ್ಗದ ಹಿನ್ನಲೆಯನ್ನು ಅವಲೋಕಿಸಿದರೆ, ನನ್ನ ಪರಿವಾರದವರೆಲ್ಲ ಸೇವಾ ಕ್ಷೇತ್ರದಿಂದಲೇ ಬಂದವರು. ನನ್ನ ತಂದೆಯವರ ತಂದೆ ವೀರಪ್ಪ ಸಂಕನೂರ ಹಳ್ಳಿ/ನಾಟಿ ವೈದ್ಯರು, ಸದಾ ಜನರ ಸೇವೆ ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಸಾಮಾನ್ಯ ಜೀವನ ನಡೆಸುತ್ತ ಬಹಳ ಹೆಸರುವಾಸಿಯಾಗಿದ್ದರು. ನನ್ನ ತಾಯಿಯ ತಂದೆ ಶಂಕರಪ್ಪ ಖೋತ್ ಸರಕಾರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದು ಜನಾನುರಾಗಿದ್ದರಂತೆ. ಅವರ ನಿಸ್ವಾರ್ಥ ಸೇವಾಗುಣ, ಜನರ ಜೊತೆ ಬೆರೆತು ಅವರ ನೋವುಗಳನ್ನು ಪರಿಹಾರ ಮಾಡುವ ಮನೋಭಾವ ಕಂಡ ನಮ್ಮ ತಂದೆಯವರು ಇವರಿಬ್ಬರ ಸತ್ಯಘಟನೆಗಳನ್ನು ನನಗೆ ಬಾಲ್ಯದಿಂದಲೇ ಹೇಳುತ್ತ್ತಿದ್ದರು.

ಇವರಿಬ್ಬರ ಆದರ್ಶ ಜೀವನ ನನ್ನಲ್ಲಿನ ಸೇವಾ ಮನೋಭಾವನೆಯನ್ನು ಹೆಚ್ಚಿಸಿತು. ನತರ ಈ ಮನೋಭಾವಕ್ಕೆ ಸೂಕ್ತ ಚಾಲನೆ ಬಂದದ್ದು ರಾಮಕೃಷ್ಣ ಆಶ್ರಮದ ವಿದ್ಯಾಮಂದಿರ ಶಾಲೆಯಲ್ಲಿ. ಅಲ್ಲಿನ ಶಿಸ್ತು ಹಾಗೂ ವಿವೇಕಾನಂದರ ಜೀವನದ ಪರಿಚಯ ನನ್ನಲ್ಲಿರುವ ಈ ಸೇವಾ ಮನೋಭಾವಕ್ಕೆ ಹೆಚ್ಚು ವಿಶ್ವಾಸ ತಂದುಕೊಟ್ಟಿತು. ಪದವಿಯ ನಂತರ ಸುರಕ್ಷಿತ ನೌಕರಿಯ ಜೀವನವಿದ್ದರೂ ಅಜ್ಜಂದಿರ ಹಾಗೂ ಪಾಲಕರ ಪ್ರೇರಣೆ ನನ್ನನ್ನು ಐ.ಎ.ಎಸ್. ಪರೀಕ್ಷೆ ಬರೆಯುವಂತೆ ಮಾಡಿತು.

ಐ.ಎ.ಎಸ್. ಪರೀಕ್ಷೆಗೆ ತಮ್ಮ ತಯಾರಿ ಹೇಗಿತ್ತು?

ಬೆಂಗಳೂರಿನ ಸತ್ಯಂ ಸಿಸ್ಟಮ್ಸ್ ಸಂಸ್ಥೆಯಲ್ಲಿ ಎರಡು ವರ್ಷ ಕೆಲಸ ಮಾಡಿ ರಾಜೀನಾಮೆ ಕೊಟ್ಟು ಹೊರಗಡೆ ಬಂದಾಗ ಪಾಲಕರ ಹಾಗೂ ಗೆಳೆಯರ ಜೊತೆ ಐ.ಎ.ಎಸ್. ಬಗ್ಗೆ ಚರ್ಚಿಸಿದೆ. ನನ್ನ ಪಾಲಕರು ಬಹಳ ಸಿಂಪಲ್ ಲೈಫ್ ನಡೆಸುವವರು; ದೊಡ್ಡ ಕನಸು ಹೊತ್ತುಕೊಂಡವರಲ್ಲ. ಆದಾಗ್ಯೂ ಎಲ್ಲರೂ, ‘ಆಯ್ತು ಪ್ರಯತ್ನ ಮಾಡು’ ಎಂದು ಬೆನ್ನು ತಟ್ಟಿದರು.

ದೆಹಲಿಯಲ್ಲಿ ಕೋಚಿಂಗ್ ಅಕ್ಯಾಡೆಮಿ ಸೇರಿಕೊಂಡೆ. ವಾಜಿ ರಾಮ್ ಇನ್‍ಸ್ಟಿಟ್ಯೂಟಿನಲ್ಲಿ 8 ಘಂಟೆಗಳ ಕಾಲ ಸತತ ತರಬೇತಿ ನಡೆಯುತ್ತಿತ್ತು. ಆದಾಗ್ಯೂ ನಮ್ಮ ಸ್ವಂತ ಅಭ್ಯಾಸ ಹಾಗೂ ಸೂಕ್ತ ಜ್ಞಾನ ಬೇಕೇಬೇಕು. ಇತ್ತೀಚೆಗೆ ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಯ ಪ್ಯಾಟರ್ನ್ ಬದಲಾಗಿದೆ. ಆನ್‍ಲೈನ್‍ನಲ್ಲಿ ಸಾಕಷ್ಟು ಸ್ಟಡಿ ಮೆಟಿರಿಯಲ್ ಅಪ್‍ಡೇಟ್ ಸಿಗುತ್ತದೆ. ಅಲ್ಲಿ ಪ್ರಶ್ನಾವಳಿಗಳು, ಕೀ ಉತ್ತರಗಳು, ಇತ್ಯಾದಿ ಲಭ್ಯವಿರುವುದರಿಂದ ಟ್ಯೂಷನ್ ಜೊತೆಗೆ ಸ್ವಅಧ್ಯಯನಕ್ಕೆ ಹೆಚ್ಚು ಒತ್ತುಕೊಡುತ್ತಿದ್ದೆ.

‘ದಿ ಹಿಂದೂ’ ಪತ್ರಿಕೆ ತಪ್ಪದೇ ಓದುತ್ತಿದ್ದೆ. ಎನ್.ಸಿ.ಇ.ಆರ್.ಟಿ ಸಿಲ್ಯಾಬಸ್ ಹಾಗೂ ಸಾಮಾನ್ಯ ಜ್ಞಾನಕ್ಕೆ ಹೇರಳವಾದ ಪುಸ್ತಕಗಳನ್ನು ಅವಲಂಬಿಸಿದೆ. ನೀತಿ ಆಯೋಗದ ಪುಸ್ತಕಗಳೆಲ್ಲ ಬಹಳ ಉಪಯುಕ್ತವಾಗಿದ್ದವು

ಉತ್ತರ ಕರ್ನಾಟಕದ ಯುವಕರು ದೊಡ್ಡ ಕನಸು ಅಥವಾ ದೊಡ್ಡ ಗುರಿ ಸಾಧನೆಯ ಚಿಂತನೆಯನ್ನು ಮಾಡಲ್ಲ ಎನ್ನುವುದು ನನ್ನ ಅಭಿಪ್ರಾಯ. Low Aim is Crime ಅನ್ನುವ ಮನಃಸ್ಥಿತಿ ಬಂದಿದ್ದೇಯಾದರೆ ಉತ್ತರ ಕರ್ನಾಟಕದ ಯುವಕರು ದೇಶದ ಆಡಳಿತ ವ್ಯವಸ್ಥೆಯ ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿರಬಹುದು.

ನಿಮ್ಮ ಆಯ್ಕೆಯ ವಿಷಯ ಯಾವುದು?

ನಾನು ಅಂಥ್ರಪೋಲಾಜಿ ವಿಷಯವನ್ನು ಆಯ್ಕೆ ಮಾಡಿಕೊಂಡೆ. ಇದು ನನ್ನ ಆಸಕ್ತಿಯ ವಿಷಯವಾಗಿ ಬೆಳೆಯಿತು. ಐಎಎಸ್ ಕೋಚಿಂಗ್ ಪಡೆಯುವಾಗ ಡಿಸ್ಕಸ್‍ಗೆ ಹೆಚ್ಚು ಒತ್ತು ಕೊಡುತ್ತಿದ್ದೆವು ಇದರಿಂದ ಮೊದಲೆರಡು ಅಟೆಂಪ್ಟ್ ನಲ್ಲಿ ಅಷ್ಟು ಸ್ಕೋರ್ ಆಗಿರಲಿಲ್ಲ. ಕಾರಣ ನನ್ನ ಬರವಣಿಗೆಯ ಮೇಲೆ ಹೆಚ್ಚು ಒತ್ತು ಕೊಡದೇ ಇದ್ದುದ್ದು. ನನ್ನ ಬ್ಯಾಕ್‍ಗ್ರೌಂಡ್ ಇಂಜಿನಿಯರಿಂಗ್ ಇರುವುದರಿಂದ ಸೋಶಿಯಲ್ ಸೈನ್ಸ್ ವಿಷಯಗಳನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗಿತ್ತು. ದೆಹಲಿಯಲ್ಲಿ ಕರ್ನಾಟಕದವರದೇ ಒಂದು ಗುಂಪು ಮಾಡಿಕೊಂಡಿದ್ದೆವು ಅಲ್ಲಿ ಮೇನ್ಸ್ ಗೆ ಯಾವ ವಿಷಯಗಳನ್ನು ಆರಿಸಿಕೊಳ್ಳಬೇಕೆಂಬ ಚರ್ಚೆ ನಡೆಯುತ್ತಿದ್ದವು.

ಯಶಸ್ಸು ಸಿಗುತ್ತದೆ ಎಂಬ ಭರವಸೆ ಇತ್ತೇ?

ಇಲ್ಲ…..! ಆದರೆ ಫಸ್ಟ್ ಅಟೆಂಪ್ಟನಲ್ಲಿ ಆ ಹುಮ್ಮಸ್ಸು ಇರುತ್ತದೆ. ಒಂದುಸಾರಿ ಆಳಕ್ಕೆ ಇಳಿದಾಗ ಅದರ ಗಂಭೀರತೆ ಅರಿವಾಗುತ್ತದೆ. ಆದರೆ ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನ ಗುರಿ ಮುಟ್ಟಲು ಸಹಕಾರಿಯಾಗುತ್ತದೆ.

ಐಎಎಸ್ ಆಕಾಂಕ್ಷಿ ಯುವಕರಿಗೆ ತಮ್ಮ ಸಲಹೆ?

Competitive exam is nothing but mental game. 100%  ದಿನಚರಿ ಹಾಕಿಕೊಳ್ಳಬೇಕು. ದಿನಂಪ್ರತಿ 2 ಘಂಟೆಗಳ 4 ವಿಭಾಗ ಮಾಡಿಕೊಂಡು ನಿರಂತರ ಅಧ್ಯಯನ ಮಾಡಬೇಕು. ಸರಳ ವ್ಯಾಯಾಮ, ಒಳ್ಳೆಯ ನಿದ್ರೆ, ಉತ್ತಮ ಆಹಾರ ಕೂಡ ಮುಖ್ಯ.

ಐಎಎಸ್ ಅಧಿಕಾರಿಯಾಗಿ ತಾವು ಕಾರ್ಯನಿರ್ವಹಿಸಲು ಬಯಸುವ ಕ್ಷೇತ್ರಯಾವುದು?

ಕೇಂದ್ರ ಲೋಕಸೇವಾ ಆಯೋಗ ಯಾವುದೇ ಕ್ಷೇತ್ರದಲ್ಲಿ ನಿಯೊಜಿಸಿದರೂ ಕಾರ್ಯ ನಿರ್ವಹಿಸುವುದು ನಮ್ಮ ಜವಾಬ್ದಾರಿ/ ಕರ್ತವ್ಯ. ಅದಾಗ್ಯೂ ವೈಯಕ್ತಿಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ನನ್ನದೇ ಆದ ಕನಸುಗಳನ್ನು ಹೊಂದಿದ್ದೇನೆ. ಅವಕಾಶ ಸಿಕ್ಕಾಗ ಪ್ರಯತ್ನಪೂರ್ವಕವಾಗಿ ದೇಶದ ಶೈಕ್ಷಣಿಕ ಬದಲಾವಣೆಗೆ ಶ್ರಮಿಸುವೆ. ನನ್ನೆಲ್ಲ ಸಾಧನೆಯಲ್ಲಿ ನನ್ನನ್ನು ವಿದ್ಯಾವಂತನನ್ನಾಗಿ ಮಾಡಿದ ಎಲ್ಲ ಗುರುಗಳ ಶ್ರಮವೂ ಇದೆ. ಹಾಗಾಗಿ ಶೈಕ್ಷಣಿಕ ಕ್ಷೇತ್ರ ನನಗೆ ಬಹಳ ಇಷ್ಟ.

Leave a Reply

Your email address will not be published.