ಅಜ್ಜಿ ಅಡುಗೆ, ಗಾಂಧೀ ಮಾದರಿಗೆ ಮರು ನಡಿಗೆ!

ಪ್ರಸ್ತುತ ಕೊರೊನಾ ಪಿಡುಗಿನಿಂದ ನಾವು ದೂರ ಉಳಿಯಬೇಕಾದರೆ ಪುನಃ ಅಜ್ಜಿ ಮಾಡುತ್ತಿದ್ದ ಅಡುಗೆ ಪದ್ಧತಿಗೆ, ಗಾಂಧಿಯ ಮಾದರಿಗೆ ಮರು ಪಯಣ ಮಾಡುವುದು ಅನಿವಾರ್ಯ.

ಪ್ರೊ.ಶಿವರಾಮಯ್ಯ

ಎಂಬತ್ತು ವರ್ಷ ದಾಟಿದ ನಮ್ಮಂತಹವರಿಗೆ ಆರೋಗ್ಯ ಭಾಗ್ಯ ಇನ್ನೂ ಉಳಿದಿರುವುದಕ್ಕೆ ನಾವು ಚಿಕ್ಕಂದಿನಲ್ಲಿ ತಿಂದ ಆಹಾರ ವಿಹಾರವೇ ಇರಬೇಕೆಂದು ನನ್ನ ಊಹೆ. ಯಾರಾದರೂ `ಅಜ್ಜ ನಿಮ್ಮ ಆರೋಗ್ಯದ ಗುಟ್ಟೇನು’ ಎಂದು ಕೇಳಿದರೆ `ಕೋಳಿ ತಿಂದಂಗೆ ತಿನ್ನೋದು ನಾಯಿ ಸುತ್ತಿದಂತೆ ಸುತ್ತೋದು’ ಎಂದು ನಾನು ಜೋಕು ಮಾಡಿದ್ದು ನಮ್ಮ ಎಳೆಯರ ಬಳಗದಲ್ಲಿ ವೈರಲ್ ಆಗುತ್ತಲೇ ಇದೆ. ಇದು ಅರ್ಧ ಸತ್ಯ. ಪೂರ್ಣ ಸತ್ಯ ಏನೆಂದರೆ ಕಡಿಮೆ ತಿನ್ನೋದು ಮತ್ತು ಸದಾ ಚಟುವಟಿಕೆಯಿಂದ ಇರುವುದು ಅಷ್ಟೇ. ಅತಿಯಾದರೆ ಅಮೃತವೂ ವಿಷವಲ್ಲವೆ?

ಈಗ ವಿಷಯಕ್ಕೆ ಬರೋಣ. ಮೊದಲು ನಮ್ಮ ಈಗಿನ ಕಿಚನ್‌ರೂಮ್ ಹಾಗೂ ಅಜ್ಜಿಕಾಲದ ಅಡುಗೆ ಮನೆ ಕಲ್ಪಿಸಿಕೊಳ್ಳಿ. ಇವತ್ತಿನ ಕಿಚನ್ ರೂಮ್‌ಗಳು ಅತ್ಯಾಧುನಿಕ ಉಪಕರಣಗಳಿಂದ ಇಡಿಕಿರಿದಿರುತ್ತವೆ. ಥಳಥಳ ಫಳಫಳ ಹೊಳೆವ ಸ್ಟೀಲ್ ಪಾತ್ರೆಗಳು, ಜತೆಗೆ ನಯವಾದ ಪ್ಲಾಸ್ಟಿಕ್ ಡಬ್ಬಗಳು ಹಾಗೂ ಎರಕ ಹೆಂಚು ಮಿಕ್ಸಿ ಫ್ರಿಜ್ ಇತ್ಯಾದಿ. ಅವುಗಳಲ್ಲಿ ಇರುವುದಾದರೂ ಏನು? ಅಕ್ಕಿ, ಅಸಿಟ್ಟು, ಬೇಳೆ, ಹುಣಸೆ ಹಣ್ಣು, ಉಪ್ಪು, ಮೆಣಸಿನಕಾಯಿ ಇತ್ಯಾದಿ. ಅಲ್ಲದೆ ಪ್ರಪಂಚದಲ್ಲಿ ದೊರೆಯಬಹುದಾದ ಎಲ್ಲಾ ಬಗೆಯ ಮಸಾಲೆ ಸಾಂಬಾರ ಪದಾರ್ಥಗಳು ಪಾರದರ್ಶಕ ಪ್ಲಾಸ್ಟಿಕ್ ಡಬ್ಬಗಳಲ್ಲಿ ರಾರಾಜಿಸುತ್ತವೆ. ಅಲ್ಲಿ ತಯಾರಿಸಿದ ಅಡುಗೆ ಪದಾರ್ಥಗಳು, ವೆಜ್ ಮತ್ತು ನಾನ್ ವೆಜ್ ವೈವಿಧ್ಯಮಯ. ರಿಫೈಯಿಂಡ್ ಆಯಿಲ್ ಇಲ್ಲದೆ ಯಾವ ಖಾದ್ಯವೂ ತಯಾರಾಗುವುದಿಲ್ಲ. ಜತೆಗೆ ವಿದೇಶಿ ಹಸುವಿನ ಹಾಲು ಬೆಣ್ಣೆ ಮೊಸರುಗಳಿಗೆ ಕೊರತೆ ಇಲ್ಲ. ಇಷ್ಟು ಇಲ್ಲಿರುವ ನಮ್ಮ ಮಕ್ಕಳ ಅಡುಗೆ ಮನೆ.

ಇನ್ನು ವಿದೇಶಗಳಲ್ಲಿರುವ ನಮ್ಮ ಮಕ್ಕಳ ಮೊಮ್ಮಕ್ಕಳ ಮನೆಯ ಕಿಚನ್‌ಗಳ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ, ಮಗಳ ಮನೆಯಲ್ಲಿ ಕಿಚನ್ ಇದ್ದರೂ ಅಡುಗೆ ಮಾಡುವುದು ವಾರದಲ್ಲಿ ಮೂರ್ನಾಲ್ಕು ದಿನ.  ಉಳಿದಂತೆ ಹೋಟೆಲ್‌ಗಳಿಗೆ ಹೋಗುವುದು ಇಲ್ಲವೇ ಪಾರ್ಸಲ್ ತರುವುದು. ಇನ್ನೂ ಹೇಳಬೇಕೆಂದರೆ ಅಮೆರಿಕಾದಲ್ಲಿ ಬೇರೆ ಬೇರೆ ಕಡೆ ಇರುವ ಮೊಮ್ಮಕ್ಕಳ ಫ್ಲಾಟ್‌ಗಳಲ್ಲಿ ಅಡಿಗೆ ಕಂಪಾರ್ಟ್ಮೆಂಟ್, ಅಲ್ಲೊಂದು ರೆಫ್ರಿಜರೇಟರ್, ಮೈಕ್ರೋವೇವ್ ಮಾತ್ರ. ಮಾಲ್‌ಗಳಿಂದ ರೆಡಿಮೇಡ್ ಫುಡ್ ತಂದು ಬಿಸಿ ಮಾಡುವುದು, ಇಲ್ಲವೇ ರೆಸ್ಟೋರೆಂಟ್‌ಗಳಿಗೆ ಹೋಗಿ ತಿಂದು ಬರುವುದು. ಅಲ್ಲಿ ವೆಜ್‌ಗಿಂತ ನಾನ್ ವೆಜ್ ತಿಂಡಿತಿನಿಸುಗಳೇ ಹೆಚ್ಚು.

ಈಗ ಅಜ್ಜಿ ಕಾಲದ ಅಡುಗೆ ಮನೆ ಚಿತ್ರವನ್ನು ನೆನಪಿಸಿಕೊಳ್ಳಿ. ಮನೆ ಎಷ್ಟೇ ದೊಡ್ಡದು, ಚಿಕ್ಕದಿರಲಿ ಅಡುಗೆ ಮನೆ ಎಂದರೆ, ಅಗ್ನಿಮೂಲೆಯಲ್ಲಿ ಒಂದು ಸೌದೆ ಒಲೆ, ಅದೇ ಗೋಡೆ ಪಕ್ಕದಲ್ಲಿ ಸೌದೆ, ಹಿಂದಕ್ಕೆ ಕಲ್ಲಟ್ಟಣೆ, ಅದರ ಮೇಲೆ ನೀರಿನ ಗುಡಾಣ, ಪಕ್ಕದಲ್ಲಿ ಅಕ್ಕಿ, ಅಸಿಟ್ಟು, ಉಪ್ಪು, ಮೆಣಸಿನ ಕಾಯಿ, ಬೇಳೆ ತುಂಬಿರುವ ಸಣ್ಣ ಪುಟ್ಟ ಮಡಕೆ ಕುಡಿಕೆಗಳು, ತಗಡಿನ ಡಬ್ಬದಲ್ಲಿ ಅಪರೂಪಕ್ಕೆ ನೆಂಟರಿಷ್ಟರು ಬಂದಾಗ ಮಾಡುವ ಬಾಡಿನ ಹೆಸರಿಗೆ ಅರೆಯುವ ಚಕ್ಕೆ, ಲವಂಗ, ಗಸಗಸೆ, ಏಲಕ್ಕಿ ಇತ್ಯಾದಿ ಮಸಾಲೆ ಪದಾರ್ಥಗಳು. ಒಂದು ಗೋಡೆ ಬದಿಗೆ ಮೊಸರು ಕಡೆವ ಹಗ್ಗ ಕಡಗೋಲು, ಅಲ್ಲೆ ಪಕ್ಕದಲ್ಲಿ ಕಾಳುಕಡಿ ತುಂಬಿದ ಬಾನಿ ಸಾಲುಗಳು, ಇಷ್ಟೆಲ್ಲಾ ಜಾಗದ ಸಂಧಿನಲ್ಲಿ ಒಂದೆಡೆಗೆ ಒಂದು ಸಣ್ಣಗೂಡು, ಅದರಲ್ಲಿ ಒಂದು ಸಣ್ಣ ಬೆನಕನ ಕಲ್ಲು, ದೀಪ, ಈಬತ್ತಿ, ಅರಿಶಿನ ಕುಂಕುಮ ಬಟ್ಟಲುಗಳು ಮುಗೀತು; ಇಷ್ಟು ಅಜ್ಜಿಕಾಲದ ಅಡುಗೆ ಮನೆ ಚಿತ್ರ.

ಅಲ್ಲಿ ಮಾಡುತ್ತಿದ್ದ ಕೆಲವು ಅಡುಗೆ ಮಾದರಿಗಳು: ರಾಗಿಮುದ್ದೆ, ಅದಕ್ಕೆ ನವಣೆ, ಹಾರಕ, ಜೋಳದ ನುಚ್ಚು ಹಾಕುತ್ತಿದ್ದರು. ಅದಕ್ಕೆ ಸಾರು ಎಂದರೆ ಮಳೆಗಾಲದಲ್ಲಿ, ಹಸಿ ತರಕಾರಿ, ಈರೇಕಾಯಿ, ಬೆಂಡೆಕಾಯಿ, ಬದನೆಕಾಯಿ, ಅವರೆ-ತೊಗರಿ ಬೆರಕೆ ಸೊಪ್ಪು ಇತ್ಯಾದಿ. ರೊಟ್ಟಿ ಜೊತೆ ಸುಟ್ಟ ಬದನೆಕಾಯಿ ಬಜ್ಜಿ ಅಥವಾ ಯಾವುದಾದರೂ ಕಾಳಿನ ತಾಳ್ಳು, ಹುರುಳಿ, ಹುಚ್ಚೆಳ್ಳು, ನೆಲಗಡಲೆ ಬೀಜದ ಚಟ್ನಿ. ಇದೂ ಇಲ್ಲವಾದರೆ ರೊಟ್ಟಿ ಜತೆ ಹುರಿಗಡಲೆ, ತೆಂಗಿನ ಕಾಯಿ, ಅಥವಾ ಸುಟ್ಟ ಮೆಣಸಿನ ಕಾಯಿ ಅಷ್ಟೆ. ಒಮ್ಮೊಮ್ಮೆ ಹುಣಸೆ ಹಣ್ಣು, ಬೆಳ್ಳುಳ್ಳಿ, ಈರುಳ್ಳಿ, ಜೀರಿಗೆ ಕಿವುಚಿದ ಉಪ್ಪುಸಾರು ನಾಲಗೆಯಲ್ಲಿ ನೀರೂರಿಸುವುದು.

ಹಬ್ಬ ಹರಿದಿನಗಳಲ್ಲಿ ಮಾತ್ರ ಒಬ್ಬಟ್ಟು, ಕಡುಬು, ಪಾಯಸ ಜತೆಗೆ ಈರುಳ್ಳಿ ಪಕೋಡ ಇದ್ದರೆ ಹಬ್ಬ ಆಯಿತು, ಅಜ್ಜಿ ಕಾಲದ ಈ ಅಡುಗೆಯನ್ನು ಉಂಡವರು 60-70-80 ವರ್ಷಗಳವರೆಗೆ ಯಾವ ಜಾಡ್ಯ ಜಾಪತ್ತು ನರಳಾಟ ಇಲ್ಲದೆ ವಯೋಸಹಜ ಸಾವಿನಿಂದ ಕಣ್ಣು ಮುಚ್ಚುತ್ತಿದ್ದರು. ಹಾಗೆಂದು ರೋಗರುಜಿನ ಬರುತ್ತಲೇ ಇರಲಿಲ್ಲವೆಂದಲ್ಲ. ಕೆಮ್ಮು, ನೆಗಡಿ, ಶೀತಜ್ವರ ತಲೆನೋವು ಬರುವುದುಂಟು. ಅದಕ್ಕೆ ನಾಟಿ ಔಷಧಗಳ ಅಳಲೆಕಾಯಿ ಪಂಡಿತರಿದ್ದರು.

ಆ ಕಾಲಕ್ಕೆ ಸು.1950ರ ಆಜುಬಾಜಿನಲ್ಲಿ, ಮಧುಗಿರಿ ತಾಲ್ಲೂಕು ಬಡವನಹಳ್ಳಿಯಲ್ಲಿ ಸೋಮವಾರ ಸಂತೆ ನಡೆಯುತ್ತಿತ್ತು. 4-5 ಮೈಲಿ ದೂರದ ಸಂತೆಗೆ ಹತ್ತಾರು ಹಳ್ಳಿಯ ಜನ ಬರುತ್ತಿದ್ದರು. ಒಮ್ಮೆ ಕಿತ್ತಗಳಿ ಎಂಬ ಊರಿನ ಒಬ್ಬ ಶ್ರೀಮಂತ ಗೌಡರಿಗೆ `ಅನ್ನ ಕಂಡರೆ ಹುಳ ಕಂಡಂತಾಗುತ್ತದಂತೆ, ಅವರು ರಾಗಿ ಗಂಜಿ, ಚಪಾತಿ ಮಾತ್ರ ತಿನ್ನುತ್ತಾರಂತೆ, ಪಾಪ! ಎಷ್ಟಿದ್ದರೇನು ಅದನ್ನು ಉಂಡು ತಿನ್ನುವುದಕ್ಕೂ ಪುಣ್ಯ ಮಾಡಿ ಬಂದಿರಬೇಕು’ ಮುಂತಾಗಿ ಜನ ಮಾತಾಡಿಕೊಳ್ಳುತ್ತಿದ್ದುದನ್ನು ನಾನು ಆ ಬಡವನಹಳ್ಳಿ ಪ್ರೈಮರಿ ಶಾಲೆಗೆ ದಿನಾ ನಡೆದು ಹೋಗುತ್ತಿದ್ದಾಗ ಕೇಳಿದ್ದೆ.

ಆಮೇಲೆ ಕಾಲೇಜಿಗೆ ಸೇರಿದ ಮೇಲೆ ಗೊತ್ತಾಯಿತು; ಆ ಊರಗೌಡರಿಗೆ ಬಿ.ಪಿ., ಶುಗರ್ ಮುಂತಾದ ಶ್ರೀಮಂತ ಕಾಯಿಲೆಗಳಿದ್ದವೇನೊ! ಆದ್ದರಿಂದ ಅವರು ಅನ್ನ ಸಕ್ಕರೆ ಸಿಹಿ ಪದಾರ್ಥಗಳನ್ನು ವರ್ಜ್ಯ ಮಾಡಿದ್ದಿರಬಹುದು. ಹಬ್ಬದಲ್ಲೊ, ಜಾತ್ರೆಗಳಲ್ಲೋ ಅನ್ನ ಉಣ್ಣುತ್ತಿದ್ದ. ಉಳಿದಂತೆ ರಾಗಿ ಮುದ್ದೆ. ನಮ್ಮ ಬಯಲುಸೀಮೆಯ ವಣಕಲು ಜನರಿಗೆ ಗೌಡರು ಅನ್ನ ತಿನ್ನುವುದಿಲ್ಲ ಎಂಬ ವಿಷಯ ಪವಾಡದಂತೆ ಬಾಯಿಂದ ಬಾಯಿಗೆ ಹರಿದಾಡಿ ‘ಅನ್ನ ಕಂಡರೆ ಅವರಿಗೆ ಹುಳ ಕಂಡಂತೆ’ ಎಂಬ ಮಿಥ್ ಹುಟ್ಟಿಕೊಳ್ಳಲು ಕಾರಣವಾಗಿರಬೇಕು ಎಂದುಕೊಂಡೆ. ತಿಂದುಂಡು ಕೊಬ್ಬಿದವರಿಗೆ ಬಿ.ಪಿ., ಶುಗರ್, ಹಾರ್ಟ್ ಅಟ್ಯಾಕ್, ಹೊಟ್ಟೆ ಭಾರಕ್ಕೆ ಕಿಡ್ನಿ ಫೆಲ್ಯೂರ್ ಇತ್ಯಾದಿ ಸಾಮಾನ್ಯ ತಾನೆ?

ಈಗ ಅಜ್ಜಿ ಕಾಲದ ಅಡುಗೆ ಮಾದರಿಗೂ ಗಾಂಧೀಜಿ ಕಾಲದ ಅಡುಗೆ ಮಾದರಿಗೂ ಇರುವ ಸಾಮ್ಯವನ್ನು ಕೊಂಚ ಹೋಲಿಸಿ ನೋಡಬಹುದು. ಏಕೆಂದರೆ ಗಾಂಧೀ ಎಂದರೆ ಏಕಕಾಲಕ್ಕೆ ಸನಾತನರೂ ಸಮೀಚೀನರು ಆಗಿದ್ದರು. ಅವರು ಭಾರತೀಯ ಪರಂಪರೆಯ ಒಂದು ಪರಿಣತ ಪ್ರಜ್ಞೆ; ಹಾಗೂ ಭಾರತೀಯರ ಬದುಕಿನ ವಿದ್ಯಮಾನ. ದಕ್ಷಿಣ ಆಫ್ರಿಕಾಕ್ಕೆ ಅವರು ಬ್ಯಾರಿಸ್ಟರ್ ಆಗಿ ಹೋದಾಗ ಅಲ್ಲಿ ಅನೇಕ ಕಷ್ಟ-ನಿಷ್ಠುರ ಅವಮಾನವನ್ನು ಎದುರಿಸಬೇಕಾಯಿತು. ಬರುವ ಸಂಬಳಕ್ಕೆ ತಮ್ಮ ಖರ್ಚುವೆಚ್ಚವನ್ನು ಸರಿದೂಗಿಸಿಕೊಳ್ಳಬೇಕಾಗಿತ್ತು. ಆದ್ದರಿಂದ ಅವರು ಅಗಸನಂತೆ ತಮ್ಮ ಬಟ್ಟೆಯನ್ನು ತಾವೇ ಒಗೆದುಕೊಂಡರು; ಕ್ಷೌರಿಕನಂತೆ ತನ್ನ ಶೇವ್ ತಾನೇ ಮಾಡುವುದನ್ನು ಕಲಿತರು; ದರ್ಜಿಯಂತೆ ಬಟ್ಟೆ ಕತ್ತರಿಸಿ ಹೊಲಿದು ಹಾಕಿಕೊಂಡರು; ಬಾಣಸಿಗನಂತೆ ತಮ್ಮ ಅಡುಗೆ ಮಾಡುವುದನ್ನು ತಾವೇ ಕಲಿತುಕೊಂಡರು. ಹೀಗೆ ತಮ್ಮ ಒಂದೊಂದೇ ಅಗತ್ಯಗಳನ್ನು ಪೂರೈಸಿಕೊಂಡು ಛಲ ಬಿಡದೆ ಸ್ವಾವಲಂಬನೆಯ ಬದುಕು ಕಲಿತರು. ಗಾಂಧಿ ಯಾವುದನ್ನೂ ತಾವು ಮೊದಲು ಮಾಡಲು ಸಾಧ್ಯವೇ ಎಂದು ಪರೀಕ್ಷಿಸಿಕೊಂಡು ಆಮೇಲೆ ಬೇರೆಯವರಿಗೆ ಮಾಡಲು ಹೇಳುತ್ತಿದ್ದರು. ಇದನ್ನು ಬಾಲ್ಯದಿಂದಲೇ ರೂಢಿಸಿಕೊಂಡು ಬಂದಿದ್ದರು. 

ಹೀಗಿರುತ್ತ ಅವರು ಅಡುಗೆ ಮಾಡಲು ಕಲಿತು ಒಳ್ಳೆ ಬಾಣಸಿಗರೇ ಆದರು. ದಕ್ಷಿಣ ಆಫ್ರಿಕಾದಲ್ಲಾಗಲಿ, ಭಾರತದಲ್ಲಾಗಲಿ ಗಾಂಧಿಯವರ ಆಶ್ರಮದಲ್ಲಿ ಸಂಬಳ ಕೊಟ್ಟು ಅಡುಗೆಯವರನ್ನಿಟ್ಟುಕೊಳ್ಳಲಿಲ್ಲ. ಒಂದು ಊಟಕ್ಕಾಗಿ ಹಲವಾರು ವ್ಯಂಜನಗಳನ್ನು ತಯಾರಿಸುವುದೆಂದರೆ ಸಮಯ ಹಾಗೂ ಶ್ರಮ ವೃಥಾ ಪೋಲು ಎಂದು ಅವರು ಭಾವಿಸಿದರು. ಅವರದು ಸಾಮೂಹಿಕ ಅಡುಗೆ ಮನೆ. ಅಲ್ಲಿ ಆಶ್ರಮವಾಸಿಗಳು ಸ್ವಸಹಾಯ ಪದ್ಧತಿಯಲ್ಲಿ ತಂಡಗಳಲ್ಲಿ ಪಾಕಶಾಲೆಯ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಸಂಕೀರ್ಣವೂ ಕಷ್ಟಕರವೂ ಆದ ಅಡುಗೆ ಕಲೆಯನ್ನು ಗಾಂಧೀಜಿ ಸರಳಗೊಳಿಸಿದರು. ಅನ್ನ, ಗಂಜಿ, ಬಾಳೆಹಣ್ಣು, ಗೋಧಿ ಹಿಟ್ಟಿನ ಬ್ರೆಡ್, ಬೇಯಿಸಿದ ಸೊಪ್ಪು ತರಕಾರಿಗಳು, ಹಾಲು, ಹಣ್ಣು, ಜೇನುತುಪ್ಪ, ಬೆಲ್ಲದ ಪಾನಕ ಇತ್ಯಾದಿ ಸರಳ ಭಕ್ಷ್ಯಗಳು ಅಲ್ಲಿದ್ದವು. ಅವರು ಅಡುಗೆ ಮಾಡುವುದನ್ನು ಕಲಿಸುವುದು ಸಹ ಶಿಕ್ಷಣದ ಒಂದು ಭಾಗ ಎಂದು ಪರಿಗಣಿಸಿದರು. ಅವರ ಆರಂಭದ ಫೀನಿಕ್ಸ್ ಶಾಲೆಯಿಂದ ಮೊದಲಾಗಿ ಭಾರತದ ಶಾಂತಿನಿಕೇತನ ಶಾಲೆಯವರೆಗೂ ವಿದ್ಯಾರ್ಥಿಗಳಿಗೆ ಅಡುಗೆ ಹುಚ್ಚು ಹಿಡಿಸಿದರು.

ಗಾಂಧೀಜಿಯ ಅಡುಗೆ ಪದ್ಧತಿಯಲ್ಲಿದ್ದ ಕೆಲವು ವಿಶೇಷ ಮಾದರಿಗಳೆಂದರೆ, ಕ್ವಿನೈನ್ ಗುಳಿಗೆಗಳಂತೆ ಕಹಿಯಾದ ಬೇವಿನ ಎಲೆ ಚಟ್ನಿ, ನಾಡ ಹಸುವಿನ ಹಾಲಿನ ಮೊಸರು, ಗಾಣದಲ್ಲಿ ಆಡಿಸಿದ ತಾಜಾ ಎಣ್ಣೆ ಹಿಂಡಿ, ಜೀರಿಗೆ ಹುಣಸೆ ಬೆಲ್ಲದ ಪಾನಕ, ತಿನ್ನಬಹುದಾದ ಹಸಿರೆಲೆ ಸೊಪ್ಪು, ಗೋಧಿ ಹಿಟ್ಟಿನ ಪುಡಿಯಿಂದ ಮಾಡಿದ ಕಡುಬು ಮತ್ತು ಗಂಜಿ ಇತ್ಯಾದಿ. ಕಾಫಿ ಟೀಗೆ ಅಲ್ಲಿ ಜಾಗವಿಲ್ಲ. ಗಾಂಧೀಜಿಗೆ ಅನ್ನ, ದಾಲ್, ತರಕಾರಿ ಸೂಪ್, ಹಣ್ಣು ತರಕಾರಿಗಳ ಸಲಾಡ್, ಕಿತ್ತಲೆ ಹಣ್ಣು ಹಾಗೂ ಅದರ ಸಿಪ್ಪೆಯ ಮೊರಬ್ಬ, ಬುರುಗು ಬಾಳೆ ಹಣ್ಣಿನ ಬ್ರೆಡ್, ಕೇಕ್ ಚಪಾತಿ, ರೊಟ್ಟಿ, ಮುಂತಾದುವನ್ನು ಮಾಡುವ ಕಲೆ ಗೊತ್ತಿತ್ತು.

`ಸದ್ಯ ಆಗ ಹುಲ್ಲಿನಲ್ಲಿ ಒಳ್ಳೆಯ ವಿಟಮಿನ್‌ಗಳು ಇವೆ ಎಂಬುದು ಗಾಂಧಿಗೆ ತಿಳಿದಿರಲಿಲ್ಲ. ತಿಳಿದಿದ್ದರೆ ಆಶ್ರಮ ವಾಸಿಗಳಿಗೆಲ್ಲಾ ಹುಲ್ಲು ಮೇಯಿಸುತ್ತಿದ್ದರು’ ಎಂದು ಅವರ ಜೊತೆಗಾರರೊಬ್ಬರು ಟೀಕಿಸಿದ್ದರಂತೆ. ಆದರೆ ವಿದೇಶಗಳಲ್ಲಿ ಈಗೀಗ ಮಾಂಸಾಹಾರಿ ಜನರು ಸಹ ಮಾಲ್‌ಗಳಲ್ಲಿ ಪ್ಯಾಕ್ ಮಾಡಿ ಇಟ್ಟಿರುವ ಒಂದು ಬಗೆಯ ಹುಲ್ಲುಸೊಪ್ಪು ತರಕಾರಿಗಳನ್ನು ಕೊಂಡು ತಂದು ಆಡು ಕುರಿಗಳು ತಿಂದಂತೆ ತಿನ್ನುವುದನ್ನು ಕಂಡವರಿಗೆ ಗಾಂಧೀಜಿಯನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ ಎಂದೆನಿಸುತ್ತದೆ. ಇನ್ನು ಮೇಕೆ ಹಾಲು, ನೆಲಗಡಲೆ ಬೀಜ ಗಾಂಧಿಗೆ ಪ್ರಿಯವಾದ ಆಹಾರ ಪದಾರ್ಥಗಳು ಎಂಬುದು ಲೋಕ ವಿದಿತ. ಜೊತೆಗೆ ಸಂಜೆ ಮುಂಜಾನೆ ಸ್ವಲ್ಪ ಹೊತ್ತು ಶ್ರಮದಾನ ಹಾಗೂ ಭಜನೆ ಇವು ಅವರ ಆರೋಗ್ಯದ ಗುಟ್ಟು.

ನಾವೀಗ ಆರಂಭದ ನಮ್ಮ ಹಳೆಗಾಲದ ಅಜ್ಜಿ ಅಡುಗೆಯ ಮಾದರಿಗಳನ್ನೂ ಗಾಂಧೀಜಿಯ ಅಡುಗೆ ಮನೆಯ ಮಾದರಿಗಳನ್ನೂ ತುಲನಾತ್ಮಕವಾಗಿ ನೋಡಿದರೆ ಅಷ್ಟೇನು ವ್ಯತ್ಯಾಸಗಳು ಕಾಣುವುದಿಲ್ಲ. ದಕ್ಷಿಣ ರಾಜ್ಯಗಳಲ್ಲೆಲ್ಲಾದರೂ; ಅವರು ಆಶ್ರಮವನ್ನು ಸ್ಥಾಪಿಸಿದ್ದರೆ ರಾಗಿಮುದ್ದೆ ಮಾಡುವುದನ್ನು ಕಲಿಯುತ್ತಿದ್ದರೇನೊ; ಆಗ ಅವರು ಹೋದಲ್ಲಿ ಬಂದಲ್ಲಿ ಚರಕಾದ ಜೊತೆಗೆ ಹಿಟ್ಟಿನ ಕೋಲು, ಕೆರೆಬಿಲ್ಲೆ, ಕವಗಟ್ಟಿಗೆಗಳು ಇರುತ್ತಿದ್ದವು. ಒಟ್ಟಾರೆ ನಾಡಿನ ಪಾರಂಪಾರಿಕವಾದ ಆಹಾರ ಪದ್ಧತಿಯನ್ನೇ ಗಾಂಧೀಜಿ ಸುಧಾರಿಸಿ ಮುಂದುವರೆಸಿದರು. ಆದ್ದರಿಂದ ಆಗಾಗ ಉಪವಾಸ ಸತ್ಯಾಗ್ರಹ, ಧರಣಿ ಸತ್ಯಾಗ್ರಹ ಆಚರಿಸಿ ಸಹ ಅವರು ದೃಢಕಾಯರಾಗಿದ್ದರು. 78ನೆಯ ವಯಸ್ಸಿಗೆ ಗುಂಡು ಬೀಳದಿದ್ದರೆ ಇನ್ನಷ್ಟು ಕಾಲ ಬದುಕಿರುತ್ತಿದ್ದರೇನೋ! ಆದರೆ ನಾವೀಗ ನಮ್ಮ ಅಜ್ಜಿ ಮತ್ತು ಅಮ್ಮ ಹಾಗೂ ಗಾಂಧೀಜಿಯ ಅಡುಗೆ ಮನೆಯ ಆಹಾರ ಪದ್ಧತಿಗಳಿಗೆ ವಿದಾಯ ಹೇಳಿದ್ದೇವೆ. ಹಿಂದಿರುಗಿ ಹೋಗಲಾರದಷ್ಟು ಮುಂದೆ ಬಂದಿದ್ದೇವೆ. ಇದನ್ನೇ ನವನಾಗರಿಕತೆ ಎಂದು ಬೀಗುತ್ತಿದ್ದೇವೆ.

ಪ್ರಸ್ತುತ ವಿದ್ಯುತ್ ಸ್ಥಾವರಗಳಿಗೆ, ಭಾರಿ ನೀರಾವರಿ ಅಣೆಕಟ್ಟೆಗಳಿಗೆ, ಗಣಿಗಾರಿಕೆಗೆ, ಕಾಡನ್ನು ಕಡಿದು ಹಾಳು ಮಾಡಿದ್ದೇವೆ. ರಸ್ತೆಗೆ, ಬೃಹತ್ ಕಾರ್ಖಾನೆಗಳಿಗೆ ರೆಸಾರ್ಟ್ ಹೋಂ ಸ್ಟೇಗಳಿಗೆ ಎಲ್ಲೆಂದರಲ್ಲಿ ಭೂಮಿಯನ್ನು ಕಡಿದೂ ಒಡೆದೂ ಕೊರೆದೂ ಹಾಳು ಮಾಡಿದ್ದೇವೆ. ಪರಿಣಾಮ ಪರಿಸರ ಮಾಲಿನ್ಯ ಅಧಿಕವಾಗುತ್ತಿದೆ. ಹಣಕೊಟ್ಟು ಆಕ್ಸಿಜನ್ ಉಸಿರಾಡಬೇಕಾಗಿದೆ. ನಮ್ಮ ನಾಲಿಗೆ ರುಚಿಗೆ ಮತ್ತು ನಮ್ಮ ಮಾತಿನ ಚಟಕ್ಕೆ ನಮ್ಮ ಆರೋಗ್ಯವನ್ನೂ ನಮ್ಮ ಸುತ್ತಲ ಸಮಾಜವನ್ನೂ ಹದಗೆಡಿಸುತ್ತಿದ್ದೇವೆ. ಹೈಟೆಕ್ ಹೋಟೆಲ್ ರೆಸ್ಟೋರೆಂಟ್‌ಗಳು ಹೆಚ್ಚಾಗುತ್ತಿವೆ. ಶಾಕಾಹಾರ ತ್ಯಜಿಸಿ ಮಾಂಸಾಹಾರಕ್ಕೆ ದಾಟಿಕೊಳ್ಳುತ್ತಿರುವುದರಿಂದ ಪಶು ಪಕ್ಷಿ ಪ್ರಾಣಿಗಳು ನಿರ್ನಾಮವಾಗುತ್ತಿವೆ.

ಇಂದು ಜಗತ್ತಿನಲ್ಲಿ ಪ್ರತಿಶತ 90 ಜನರು ಮಾಂಸಾಹಾರಿಗಳು ಎನ್ನುತ್ತಿದೆ ಅಂಕಿಅಂಶ. ಮಾಂಸಾಹಾರದ ಬಗ್ಗೆ ನಮ್ಮ ಪೂರ್ವಿಕರು ಹೇಳಿದ್ದೇನು? ಶಾಸ್ತ್ರಜ್ಞರ ಪ್ರಕಾರ ಅನಿವಾರ್ಯ ಸಂದರ್ಭಗಳಲ್ಲಿ ಮಾಂಸವನ್ನು ತಿನ್ನಬಹದು. ಎಂದರೆ ಸಸ್ಯಾಹಾರದ ಅಭಾವದಲ್ಲಿ, ರೂಗ್ಣಾವಸ್ಥೆಯಲಿ ಪ್ರಾಣ ರಕ್ಷಣೆಗಾಗಿ ಮಾತ್ರ. ಈಗ ಕೋವಿಡ್-19 ಹರಡುವುದಕ್ಕೆ ಚೀನಾದ ವುಹಾನ್‌ನ ಮಾಂಸದ ಮಾರುಕಟ್ಟೆಯೇ ಕಾರಣ ಎಂಬ ವಾದವಿದೆ.  ಅದು ಅಲ್ಲ ಎನ್ನುವವರೂ ಉಂಟು.

ಅದೇನೇ ಇರಲಿ ನಾಲಿಗೆ ಬಿದ್ದ ನಾವು ಕಾಡಿನಲ್ಲಾಗಲಿ ನಾಡಿನಲ್ಲಾಗಲಿ ತಿನ್ನಬಹುದಾದ ಮೃಗಗಳು ಇದ್ದರೆ ಹುಡುಕಿ ಬೇಟೆಯಾಡುತ್ತಿದ್ದೇವೆ. ಸಮುದ್ರಜೀವಿಗಳನ್ನು ತಳಮಟ್ಟ ಬಲೆಹಾಕಿ ಬಾಚಿಕೊಳ್ಳುತ್ತಿದ್ದೇವೆ; ಆಕಾಶದಲ್ಲಿ ಹಾರುವ ಪಕ್ಷಿಗಳನ್ನೂ ಬಿಡದೆ ಬಲೆ ಬೀಸಿ ಹಿಡಿದು ಕುತ್ತಿಗೆ ಮುರಿಯುತ್ತಿದ್ದೇವೆ. ಆದರೆ ಈ ಸಕಲ ಜೀವರಾಶಿಗಳಿಗೂ ನಮ್ಮಂತೆಯೇ ಇಲ್ಲಿ ಬದುಕುವ ಹಕ್ಕಿದೆ ಎಂಬುದನ್ನು ಮಾತ್ರ ಮರೆಯುತ್ತಿದ್ದೇವೆ. ಅವು ಕೂಡ ಭೂಮಿತಾಯಿಯ ಚೊಚ್ಚಲ ಮಕ್ಕಳು ಎಂಬ ಪ್ರಜ್ಞೆಯೇ ನಮಗಿಲ್ಲ. ಯಾರು ಕೊಟ್ಟರು ನಮಗೆ ಹೀಗೆ ಕೊಲ್ಲುವ ಅಧಿಕಾರ? ಆದ್ದರಿಂದಲೇ ಭೂಮಿತಾಯಿ ಮುನಿದುಕೊಂಡು ಕೊರೊನಾದಂಥ ವೈರಸ್‌ನ ರೂಪಾವತಾರ ತಾಳಿ ಮನುಕುಲಕ್ಕೆ ಬುದ್ಧಿ ಕಲಿಸಲು ಹೊರಟಿದ್ದಾಳೆ. ಸದ್ಯ ಪ್ರತಿದಿನ ಒಂದು ಲಕ್ಷದವರೆಗೂ ಸೋಂಕು ಹರಡುತ್ತಿದೆ. ಇನ್ನೇನು ಕೋಟಿ ಲೆಕ್ಕ ತಲುಪುತ್ತದೆ. ನಾಲ್ಕೈದು ಲಕ್ಷ ಸಾವಾಗಿದೆ. ಇನ್ನಾದರೂ ನಾವು ನಮ್ಮ ಆಹಾರ ಪದ್ಧತಿ ಮತ್ತು ಬದುಕುವ ಕ್ರಮವನ್ನು ಸರಳಗೊಳಿಸಿ ಅಜ್ಜಿಯ ಕಾಲದ ಹಾಗೂ ಗಾಂಧಿಯ ಕಾಲದ ಮಾದರಿಗೆ ಬದಲಾಯಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ. ಲಾಕ್‌ಡೌನ್ ಆಗಿದ್ದಾಗ ಭೂಮಿ ಉಸಿರಾಡುತ್ತಿತ್ತು ನದಿಗಳು ಶುದ್ಧವಾಗಿ ಹರಿಯುತ್ತಿದ್ದವು. ವಾಯು ಮಂಡಲ ಮಾಲಿನ್ಯ ರಹಿತವಾಗಿತ್ತು.

ಆದರೆ ಲಾಕ್‌ಡೌನ್ ಸಡಿಲಿಸಿದ ಕೂಡಲೇ ನಾಯಿ ಬಾಲ ಡೊಂಕು ಎಂಬಂತೆ, ಹುಲ್ಲಿನಲ್ಲಿ ಮುಚ್ಚಿಟ್ಟ ಮಂಗಗಳು ಎಂಬಂತೆ ಯಥಾ ಪ್ರಕಾರ ಮೊದಲಿನ ಹಾಗೆಯೆ ಹಾರಾಡತೊಡಗಿದ್ದೇವೆ. ಆ ಪ್ರಯುಕ್ತ ಕೊರೊನಾ ವೈರಾಣುವಿನ ಬೀಸು ಹೆಚ್ಚಾಗುತ್ತಲೇ ಇದೆ. ಹೀಗೇ ಆದರೆ ಇದಕ್ಕೂ ಭೀಕರವಾದ ವೈರಸ್ ಜಗತ್ತಿನಾದ್ಯಂತ ಇರುವ ಕೋಳಿ ಫಾರಂಗಳಿಂದ ಹುಟ್ಟಿ ವಿಶ್ವದ ಈಗಿರುವ ಜನಸಂಖ್ಯೆಯ ಅರ್ಧಭಾಗವನ್ನಾದರೂ ಬಲಿ ತೆಗೆದುಕೊಳ್ಳದೆ ಬಿಡುವುದಿಲ್ಲ ಎಂಬುದಾಗಿ ಆಸ್ಟ್ರೇಲಿಯಾದ ಸಿಡ್ನಿ ನಗರ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಆದ್ದರಿಂದ ಮನುಕುಲ ಉಳಿಯಲು ಇರುವುದೊಂದೇ ದಾರಿ: ಡಾ.ರಾಜೇಗೌಡ ಹೊಸಹಳ್ಳಿಯವರು ಸಂಗತದಲ್ಲಿ ಸಾದರಪಡಿಸಿರುವಂತೆ ‘ನಾವು ಅಜ್ಜಿ ಅಡುಗೆ ಮನೆಗೆ, ಅಜ್ಜನ ಕೃಷಿ ಹಾಗೂ ನಾಟಿ ಹಸುವಿನ ಹಾಲಿಗೆ ಮರು ಪಯಣ’ ಮಾಡಬೇಕಿದೆ.

 

 

Leave a Reply

Your email address will not be published.