ಅಜ್ಜೀನಾ ಬಜ್ಜಿ ಮಾಡಿ… ತಾತಂಗೆ ತಾಳಿ ಕಟ್ಟಿ…

ನಮ್ಮ ಅಜ್ಜೀಮನೆ ಎಂದರೆ ನಾಲ್ಕು ಜನ ಅಜ್ಜಂದಿರ ತುಂಬು ಕುಟುಂಬದ ಮನೆಯದು. ಕನಿಷ್ಠ ಮೂವತ್ತೈದು ಜನರ ವಾಸ. ಜೊತೆಗೆ ಮನೆಯಲ್ಲಿ ನಾಲ್ಕು ಜನ ಆಳುಗಳು. ಹತ್ತು, ಹದಿನೈದು ಕರೆಯುವ ಎಮ್ಮೆಗಳು, ನಾಲ್ಕಾರು ನಾಯಿಗಳು, ದೊಡ್ಡ ಮನೆ, ದೊಡ್ಡ ಅಂಗಳ ಒಟ್ಟಿನಲ್ಲಿ ಎಲ್ಲ ದೊಡ್ಡ ದೊಡ್ಡದೇ.

-ನಳಿನಿ ಟಿ. ಭೀಮಪ್ಪ

ಚಿಕ್ಕವಳಿದ್ದಾಗ ಜೊತೆಯಲ್ಲಿ ಆಡುತ್ತಿದ್ದ ಮಕ್ಕಳೆಲ್ಲರೂ ಅಜ್ಜೀಮನೆ ಎಂದರೆ ಕುಣಿಕುಣಿದುಕೊಂಡು ಹೋಗುವುದು ನೋಡಿ ನನಗೆ ಅಚ್ಚರಿಯಾಗುತ್ತಿತ್ತು. ನನಗೋ ಹಳ್ಳಿ ಎಂದರೆ ಅಲರ್ಜಿ. ಅದರಲ್ಲೂ ಅಪ್ಪನನ್ನು ಬಿಟ್ಟು ಇರಲು ನನಗೆ ಸುತಾರಾಂ ಸಾಧ್ಯವಿರಲಿಲ್ಲ. ಅಮ್ಮ ತನ್ನ ತವರಿಗೆ ಹೊರಟಳು ಎಂದರೆ ಹೇಗೆ ತಪ್ಪಿಸಿಕೊಳ್ಳಬಹುದೂ ಅಂತಾ ನೂರೆಂಟು ನೆಪ ಹುಡುಕುತ್ತಿದ್ದೆ. ಮೊಂಡು ಹಠ ಹಿಡಿದ ನನ್ನನ್ನು ಹಳ್ಳಿಗೆ ಹೊರಡಿಸುವ ಹೊತ್ತಿಗೆ ಒಂದು ಮಹಾಯುದ್ಧವೇ ನಡೆದು ಹೋಗುತ್ತಿತ್ತು. ಕೊನೆಗೆ ಅಮ್ಮ ಎರಡೇಟು ಕೊಟ್ಟು ಮೂಗುದಾರ ಹಾಕಿದ ಕರುವನ್ನು ದರದರ ಎಳೆದುಕೊಂಡು ಹೋಗುವಂತೆ ಹೋಗುತ್ತಿದ್ದಳು.

ಅಪ್ಪ ನನಗೆ ಚಾಕೋಲೇಟು, ಬಿಸ್ಕೀಟು ಎಲ್ಲ ಕೊಡಿಸಿ, ರಮಿಸಿ ಎರಡು ದಿನದಲ್ಲಿ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಭರವಸೆ ಕೊಟ್ಟಮೇಲೆ ಸ್ವಲ್ಪ ಸಮಾಧಾನವಾದರೂ, ಮುಖ ಧುಮ್ಮಿಕ್ಕಿಸಿಕೊಂಡೇ ಹೊರಡುತ್ತಿದ್ದುದು. ಅಲ್ಲಿ ಒಂದು ದಿನ ಕಳೆಯುವಷ್ಟರಲ್ಲಿ ಅಪ್ಪನನ್ನು ನೆನೆಸಿಕೊಂಡು ಜ್ವರವೇ ಬಂದುಬಿಡುತ್ತಿತ್ತು. ಈ ಹುಡುಗಿನ ಇನ್ನೊಂದಪ ನಮ್ಮಳ್ಳಿಗೆ ಕರ್ಕೊಂಡು ಬರ್ಬೇಡ, ಅಲ್ಲೇ ಅವರಪ್ಪನ ಹತ್ರ ಬುಟ್ಟು ಬಂದ್ಬುಡು ಎಂದು ಅಮ್ಮನ ಅಜ್ಜಿ ಗದರುತ್ತಿದ್ದಳು. 

ಮೊದಲನೆಯದಾಗಿ ಹಳ್ಳಿಗೆ ಹೋಗುವ ಬಸ್‍ನಲ್ಲಿ ಪ್ರಯಾಣಿಸುವುದು ಎಂದರೆ ದೊಡ್ಡ ಕಿರಿಕಿರಿ ನನಗೆ.  ದಿವಸಕ್ಕೆ ಮೂರೋ ನಾಲ್ಕೋ ಬಸ್ ಅಷ್ಟೇ ಇದ್ದದ್ದು. ಅದನ್ನ ಕಾಯುವುದರಲ್ಲಿಯೇ ಅರ್ಧ ದಿನ ಹೋಗಿಬಿಡುತ್ತಿತ್ತು. ಅದರಲ್ಲಿ ಮನುಷ್ಯರ ಜೊತೆ ಕುರೀ, ಕೋಳೀ, ಬೆಳೆದ ಬೆಳೆ ಚೀಲಾ ಎಲ್ಲಾ ಕೈಕಾಲು ಸಂದಿಯಲ್ಲಿ ತುರುಕಿಕೊಂಡು, ಸಣ್ಣ ಮಕ್ಕಳನ್ನು ಅದರ ಮೇಲೆ ಕೂಡಿಸಿಕೊಂಡು, ಎಲೆ ಅಡಿಕೆ ಜಗಿಯುತ್ತಾ, ಕಿಟಕಿಯಲ್ಲಿ ಕೊಕ್ಕರೆ ಹಾಗೆ ತಲೆ ತೂರಿಸಿ ತುಪುಕ್ ಅಂತಾ ಉಗಿಯುತ್ತಾ ಇಡೀ ಜಗತ್ತಿನ ಸುದ್ದಿ, ಸಮಾಚಾರವನ್ನು ಜೋರು ಜೋರಾಗಿ ಮಾತನಾಡುತ್ತಾ ಪ್ರಯಾಣಿಸುವ ಜನರನ್ನು ಕಂಡರೆ ಸಿಟ್ಟು ಬರುತ್ತಿತ್ತು.

ಬಸ್ಸಂತೂ ಯಾವಾಗಲೂ ಒಳಗೆ, ಹೊರಗೆ, ಮೇಲೆ, ಕೆಳಗೆ, ಎಲ್ಲಾ ತುಂಬಿಕೊಂಡು, ದಿನ ತುಂಬಿದ ಬಸುರಿ ಹೆಣ್ಣುಮಗಳು ಮೆತ್ತಗಾಗಿ, ಸುಸ್ತಾಗಿ ವಾಲಾಡುತ್ತಾ ಹೋಗುವಂತೆ ಹೋಗುತ್ತಿತ್ತು. ಖಾಸಗಿ ಬಸ್‍ಗಳ ಹೆಸರನ್ನು ಹಳ್ಳೀಜನ ಅದೆಷ್ಟು ಪ್ರೀತಿಯಿಂದ, ಮುಂಜಾನೆ ಸುಮಲತಾಕ್ಕೆ ಬಂದೇ, ಸಂಜೆ ಮಾದೇವಿಗೆ ಹೋಗುತ್ತೇವೆ ಅಂತಲೇ ಹೇಳುತ್ತಿದ್ದುದು. ಕೆಂಪು ಬಸ್ಸುಗಳೆಲ್ಲ ಊರಿನ ಹೊರಗೆ ಹೈವೇಯಲ್ಲಿ ನಿಲ್ಲಿಸುತ್ತಿದ್ದರಿಂದ ಅವಕ್ಕೆ ‘ಐಲ್ವೇ’ ಬಸ್ಸುಗಳು ಅಂತಾನೇ ಕರೆಯುತ್ತಿದ್ದರು.

ಸ್ವಲ್ಪ ತಿಳಿವಳಿಕೆ ಬಂದ ಮೇಲೆ ಅಜ್ಜಿಯ ಮನೆ ಎಂದರೆ ನನಗೆ ತುಂಬು ಪ್ರೀತಿಯ ತಾಣವಾಗಿತ್ತು.  ಹಳ್ಳಿಯಲ್ಲಿ ಬಸ್ಸು ಇಳಿಯುತ್ತಿದ್ದ ಹಾಗೆ, ಎದುರಿಗೆ ಇದ್ದ ಅಜ್ಜಂದಿರ ಕಿರಾಣಿ ಅಂಗಡಿ, ಜವಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಾವಂದಿರು, ಅಜ್ಜಂದಿರು ಯಾರಾದರೂ ಒಬ್ಬರು ನೋಡಿದರೆ ಸಾಕು, ಓಯ್, ನಮ್ಮ ರತ್ನಮ್ಮ ಬಂದೌಳೆ ಪೇಟೆಯಿಂದ, ಎಂದು ಕೂಗುತ್ತಾ, ಅಂಗಡೀಲಿ ಕೆಲಸಕ್ಕೆ ಇದ್ದ ಹುಡುಗರನ್ನು, ಹೋಗ್ರಲೇ ಸಾಮಾನು, ಕೂಸೀನ ಇಳುಸ್ಕೋಂಡು ಮನೀಗೆ ಬಿಟ್ಟು ಬರ್ರೀ ಅಂತಾ ಕಳಿಸುತ್ತಿದ್ದರು. ಅವರು, ಸಂದಾಕಿದಿಯೇನವ್ವಾ ಎಂದು ಅಮ್ಮನನ್ನು ಮಾತನಾಡಿಸುತ್ತಾ, ನಮ್ಮ ಲಗೇಜು ಇಳಿಸಿಕೊಂಡು, ಹೆಗಲ ಮೇಲೊಂದು, ಕೈಯ್ಯಲ್ಲೊಂದು ಹಿಡಿದು ಮನೆಕಡೆ ದಾಪುಗಾಲು ಹಾಕುತ್ತಿದ್ದರು.

ಅಜ್ಜಿಯ ಮನೆ ಸಿಗುವ ತನಕವೂ ಸಿಗುವ ಮನೆಗಳ ಹೊರಗೆ ಪಾತ್ರೆ ತಿಕ್ಕುತ್ತಿದ್ದವರು, ಬಟ್ಟೆ ಒಗೆಯುವವರು, ಬಾವಿಯಲ್ಲಿ ನೀರು ಸೇದುತ್ತಿದ್ದವರು, ಗುಂಡುಕಲ್ಲಿನಲ್ಲಿ ಎರಡೂ ಬದಿಗೆ ಕುಳಿತು ಚಟ್ನಿನೋ, ಮಸಾಲೆಯೋ ಅರೆಯುತ್ತಿದ್ದ ಹೆಣ್ಣುಮಕ್ಕಳು, ಹರಟೆಕಟ್ಟೆ ಮೇಲೆ ಕುಳಿತ ಗಂಡಸರು ಎಲ್ಲರೂ ಮಾತನಾಡಿಸುವವರೇ. ಏಟು ದೊಡ್ಡವರಾಗ್ಯಾರೆ ನಿನ್ನ ಮಕ್ಳು, ಒಳ್ಳೇ ತೆಂಗಿನ ಮರ ಬೆಳೆದಂಗೆ ಬೆಳೆದೌರೆ ರತ್ನಮ್ಮಾ, ಏನು ಎಸ್ರು, ಏನು ಓದ್ತಾರೆ ಎಂದು ಕೇಳುತ್ತಿದ್ದ ಪ್ರಶ್ನೆಗಳಿಗೆ ಅಮ್ಮ ಖುಷಿಯಿಂದ ಉತ್ತರ ಕೊಡುತ್ತಾ, ಅವರ ಕ್ಷೇಮವನ್ನೂ ವಿಚಾರಿಸುವ ಹೊತ್ತಿಗೆ ಅಜ್ಜಿಯ ಮನೆ ಬಂದಿರುತ್ತಿತ್ತು. ಅಷ್ಟು ಹೊತ್ತಿಗಾಗಲೇ ಚಿಕ್ಕಮ್ಮ ದೊಡ್ಡಮ್ಮಂದಿರ ಆಗಮನವಾಗಿ, ಅವರ ಮಕ್ಕಳು, ಸೋದರಮಾವನ ಮಕ್ಕಳು ಎಲ್ಲ ಸೇರಿ ಹೋ… ಎಂದು ಚೀರಾಡುತ್ತಾ ಗದ್ದಲವೋ ಗದ್ದಲ.

ನಾಲ್ಕು ಜನ ಅಜ್ಜಂದಿರ ಸಂಸಾರದ ತುಂಬು ಕುಟುಂಬದ ಮನೆಯದು. ಕನಿಷ್ಠ ಮೂವತ್ತೈದು ಜನರ ವಾಸ. ಜೊತೆಗೆ ಮನೆಯಲ್ಲಿ ನಾಲ್ಕು ಜನ ಆಳುಗಳು. ಹತ್ತು, ಹದಿನೈದು ಕರೆಯುವ ಎಮ್ಮೆಗಳು, ನಾಲ್ಕಾರು ನಾಯಿಗಳು, ದೊಡ್ಡ ಮನೆ, ದೊಡ್ಡ ಅಂಗಳ ಒಟ್ಟಿನಲ್ಲಿ ಎಲ್ಲ ದೊಡ್ಡ ದೊಡ್ಡದೇ. ಬಿಳೀ ಕುರ್ತಾ, ಪಂಚೆ, ತಲೆಗೆ ಮುಂಡಾಸು, ಹೆಗಲಿಗೊಂದು ಟವೆಲ್ ಹಾಕಿಕೊಂಡು ಅಜ್ಜಂದಿರು ಹೊರಟರೆಂದರೆ ದಾರಿಯುದ್ದಕ್ಕೂ ಅವರಿಗೆ ಎದುರಾದವರೆಲ್ಲರೂ ನಮಸ್ಕಾರ ಬುದ್ಧೀ ಎಂದು ಹೇಳದೆ ಮುಂದೆ ಹೋಗುತ್ತಿರಲಿಲ್ಲ. ಅಂತಹ ಠೀವಿ, ಗಾಂಭೀರ್ಯ ಅವರದು. ಊರಿಗೇ ಸಾಹುಕಾರ ನಮ್ಮಜ್ಜ ಆದ್ದರಿಂದ, ಸಾಹುಕಾರ್ ಮನೆಯವರು ಎಂದರೆ ಊರಿನಲ್ಲಿ ಒಂದು ತೂಕ ಹೆಚ್ಚೇ. ಸೋದರ ಮಾವಂದಿರು ಕೂಡ ಬಿಳಿ ಶರ್ಟು ಹಾಕುವುದು ಕಡ್ಡಾಯವಾಗಿತ್ತು. ಸ್ವಲ್ಪ ಬಣ್ಣದ ಶರ್ಟು ಹಾಕಿದರೂ, ಏನು ನಾಟಕಾ ಆಡಾಕೆ ಹೋಗೋರ ಹಾಗೆ ಬಣ್ಣಬಣ್ಣದ ಶರ್ಟು ಹಾಕ್ತೀರಾ ಅಂತಾ ಹಿರಿಯರು ಗದರಿಸಿಬಿಡುತ್ತಿದ್ದರು.

ಪ್ರತಿದಿನ ಅಲ್ಲಿ ಬೆಲ್ಲದ ಕಾಫಿ ಮಾಡುತ್ತಿದ್ದರೂ, ಅಮ್ಮನಿಗೆ ಮಾತ್ರ ಸಕ್ಕರೆ ಕಾಫಿ. ಮುಂಜಾನೆ ಮನೆಯಲ್ಲಿ ನಾಷ್ಟಾ ಆಗುವ ಸಮಯಕ್ಕೆ ಅದೇ ಓಣಿಯಲ್ಲಿದ್ದ ಅಮ್ಮನ ಅತ್ತೆಯ ಮನೆಯಿಂದಲೋ, ದೂರದ ಸಂಬಂಧಿಕರ ಮನೆಯಿಂದಲೋ ಚಿಕ್ಕಮಕ್ಕಳು ಬಂದು ನಾಷ್ಟಾಕ್ಕೆ ಬರಬೇಕಂತೆ ಎಂದು ಕರೆಯುತ್ತಿದ್ದರು.  ಅಮ್ಮನ ಅಕ್ಕ ತಂಗಿಯರ ಪಟಾಲಂ ಮನೆಯಲ್ಲಿ ಒಂದು ರೌಂಡ್ ನಾಷ್ಟಾ ಮುಗಿಸಿ ಹೊರಡುತ್ತಿತ್ತು.  ಒಂದೆರಡು ಮನೆಯಲ್ಲಿ ತಿಂಡಿ, ಮಧ್ಯಾಹ್ನಕ್ಕೆ ಒಂದೆರಡು ಮನೆಯಲ್ಲಿ ಊಟ, ಸಂಜೆಗೆ ಮತ್ಯಾರದೋ ಮನೆಯಲ್ಲಿ ಮಿರ್ಚಿ, ಮಂಡಕ್ಕಿ, ಶೇಂಗಾ, ಮತ್ತೆ ರಾತ್ರಿಗೆ ಇನ್ಯಾರದೋ ಮನೆಯಲ್ಲಿ ಊಟ ಮಾಡಿಕೊಂಡು, ಕಪ್ಪೆ ತಿಂದ ಹಾವುಗಳಂತೆ ಉಸ್ ಉಸ್ ಎಂದು ಭುಸುಗುಡುತ್ತಾ, ತೇಕುತ್ತಾ ಮನೆಯತ್ತ ಹೆಜ್ಜೆ ಹಾಕುತ್ತಿದ್ದರು.

ರಾತ್ರಿ ಮನೆಮುಟ್ಟುವಷ್ಟರಲ್ಲಿ ಹೊರಗೆ ಕಾದು ಕುಳಿತಿರುತ್ತಿದ್ದ ಅವರಜ್ಜಿ, ಯಾಕ್ರಲೇ, ಬೇಗ ಮನೆ ಸೇರ್ಕೋಬೇಕೂ ಅನ್ನೋ ಜ್ಞಾನ ಇಲ್ವ್ರಾ ನಿಮಗೆ, ಇಷ್ಟೋತ್ತನಾಗೆ ಗಂಡುಮಕ್ಳು ಕುಡ್ದು ದಾರ್ಯಾಗೆ ಬಿದ್ದಿರ್ತಾವೆ, ಕರೆಂಟು ಹೋಗ್ತಾ ಇರ್ತತೆ, ನಾಯಿಗಳ ಕಾಟಾ ಬೇರೆ, ಬ್ಯಾಟರಿ ಹಿಡ್ಕೊಂಡು ಹೋಗ್ರೀ ಅಂದ್ರೇ ಕೇಳಲ್ಲ, ಅಂತಾ ಜೋರು ಮಾಡುತ್ತಿದ್ದರು. ಇಷ್ಟು ಜನ ಇದ್ದೀವಿ, ಏನು ಹೆದ್ರಿಕೆ ಇಲ್ಲ ಬಿಡಜ್ಜೀ ಅಂತಾ ಒಳಗೆ ಹೋಗುತ್ತಿದ್ದರು. ಇರುವಷ್ಟು ದಿನವೂ ಪ್ರತಿದಿನ ಹತ್ತಾರು ಮನೆಗಳಲ್ಲಿ ಊಟ, ತಿಂಡಿಗಳಾಗಿ ಊರಿಗೆ ಹಿಂದಿರುಗುವಷ್ಟರಲ್ಲಿ ಎಲ್ಲರೂ ಕನಿಷ್ಠ ಎರಡು ಸುತ್ತು ದಪ್ಪಗಾಗಿ, ರಕ್ತ ಕುಡಿದ ತಿಗಣೆಗಳಂತೆ ಗುಂಡುಗುಂಡಗಾಗಿಬಿಡುತ್ತಿದ್ದರು.

ಪೇಟೆಯಲ್ಲಿ ಹಾಲು, ಮೊಸರು, ತುಪ್ಪ ಎಲ್ಲವೂ ಮಿತವಾಗಿ ತಂದು ರೂಢಿಯಾಗಿದ್ದ ನಮಗೆ ಇಲ್ಲಿ ಎಲ್ಲವೂ ಯಥೇಚ್ಛವಾಗಿ ಇರುವುದನ್ನು ನೋಡಿ ಅಚ್ಚರಿಯಾಗುತ್ತಿತ್ತು. ಅಮ್ಮನ ಅಜ್ಜಿಯಂತೂ, ಮೊದ್ಲೇ ತೂಕದಕ್ಕಿ ತಿನ್ನೋ ಜನ ನೀವು, ಒಳ್ಳೇ ಕಡ್ಡಿ ಪುರ್ಲೆ ಆಗೀರಿ ನೋಡು, ಸಂದಾಗಿ ಉಣ್ಣವ್ವಾ ಎಂದು ಗದರಿ ಅಮ್ಮನಿಗೆ, ನಮಗೆ ತಿನ್ನುವಂತೆ ಬಲವಂತ ಮಾಡುತ್ತಿದ್ದಳು. ಗಿಣ್ಣ, ಕುಚ್ಚಿದ ಶೇಂಗಾ, ಮೆಕ್ಕೆಜೋಳ ಹೀಗೆ ಏನಾದರೊಂದು ಮೇಯಲು ನಮಗೆ ಇದ್ದೇ ಇರುತ್ತಿತ್ತು. 

ಅಮ್ಮನ ಚಿಕ್ಕಪ್ಪಂದಿರ ಮಕ್ಕಳೂ ಸಹ ನಮ್ಮದೇ ವಯಸ್ಸಿನವರಿದ್ದುದರಿಂದ ಎಲ್ಲರೂ ಜೊತೆಯಾಗಿ ತರಲೆ ಮಾಡಿದ್ದೇ ಮಾಡಿದ್ದು. ಗೋಡೌನ್‍ನಲ್ಲಿ ಒಟ್ಟಿರುತ್ತಿದ್ದ ಗೋಣೀಚೀಲಗಳನ್ನು ತೂತು ಮಾಡಿ, ಅದರಲ್ಲಿಂದ ಧಾನ್ಯಗಳನ್ನು ಹೆಕ್ಕಿ ತಿನ್ನುತ್ತಾ, ಹುಲಿಗಿಲಿ ಮರಕ್ಕೆ ಕಟ್ಟಿದ್ದ ಜೋಕಾಲಿ ಜೀಕಿ ಆಡುತ್ತಿದ್ದೆವು. ತುಂಬಾ ಮಕ್ಕಳಿರುತ್ತಿದ್ದರಿಂದ ಜಗಳ, ಗುಂಪುಗಾರಿಕೆ, ಚಾಳಿ ಠೂ ಬಿಡುವುದು, ಮತ್ತೆ ಕಟ್ಟುವುದು ಎಲ್ಲವೂ ಸ್ವಲ್ಪ ಹೊತ್ತು ಮಾತ್ರ. ಮತ್ತೆ ಎಲ್ಲ ಒಂದಾಗಿ ಗದ್ದಲ ಹಾಕುವುದು ಸಾಮಾನ್ಯವಾಗಿತ್ತು. ಅಮ್ಮನ ಅಜ್ಜಿಯನ್ನಂತೂ ‘ಅಜ್ಜೀನ ಬಜ್ಜಿ ಮಾಡಿ… ತಾತಂಗೆ ತಾಳಿ ಕಟ್ಟಿ… ಡುಂ ಡುಂ’ ಅಂತಾ ರಾಗವಾಗಿ ಹಾಡಿ ಕಾಡಿಸುತ್ತಿದ್ದೆವು. 

ಒಂದೆರಡು ಬಾರಿಯಾದರೂ ಎತ್ತಿನ ಗಾಡಿ ಹೂಡಿಸಿ ಎಲ್ಲರನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದರು.  ಅಲ್ಲಿನ ಕಚ್ಚಾ ದಾರಿಗೆ, ಗಾಡೀ ದಡಕೂ ಬಡಕೂ ಅಂತಾ ಎಗರೆಗರಿ ಕುಳಿತವರನ್ನೆಲ್ಲ ಎತ್ತಿ ಎತ್ತಿ ಹಾಕುತ್ತಾ ಹೊಲ ತಲುಪುವ ಹೊತ್ತಿಗೆ ಸುಸ್ತಾಗಿಬಿಡುತ್ತಿತ್ತು. ಅಲ್ಲಿ ಆಲೆಮನೆ ಬೆಲ್ಲ, ಎಳನೀರು ಕಿತ್ತಿಸಿಕೊಂಡು ಕುಡಿಯುವುದು, ಬಾವಿ ನೀರಿನಲ್ಲಿ ಈಜಾಡುವುದು, ಗುಲಗಂಜಿ ಗಿಡಗಳಿಂದ ಅವುಗಳನ್ನು ಕಿತ್ತು ಕೂಡಿಟ್ಟುಕೊಳ್ಳುವುದು, ಹಸಿ ಶೇಂಗಾ ಗಿಡಗಳನ್ನು ಕಿತ್ತು, ಅದರಲ್ಲಿನ ಶೇಂಗಾ ತಿನ್ನುವುದು, ಕಬ್ಬು ತಿನ್ನುವುದು ಒಟ್ಟಿನಲ್ಲಿ ಪುರುಸೊತ್ತಿಲ್ಲದ ಕೋತಿ ಆಟದಲ್ಲಿ ಸಮಯ ಹೋಗಿದ್ದೇ ತಿಳಿಯುತ್ತಿರಲಿಲ್ಲ.

ಗೌರಿ ಹುಣ್ಣಿಮೆಗೆ ಹೆಣ್ಣು ಹುಡುಗಿಯರೆಲ್ಲ ಗೌರಿ ಹುಡುಗಿಯರಾಗಿ ಸಿಂಗಾರಗೊಳ್ಳುತ್ತಿದ್ದೆವು. ಎಲ್ಲ ಸಂಬಂಧಿಕರ ಮನೆಗೆ ಹೋಗಿ, ಹಿರಿಯರ ಕಾಲಿಗೆ ಬಿದ್ದಾಗ ಆಶೀರ್ವಾದ ಮಾಡಿ ತಮ್ಮ ಕೈಲಾದಷ್ಟು ಹಣವನ್ನು ಎಲ್ಲರಿಗೂ ಕೊಡುತ್ತಿದ್ದರು. ಇನ್ನು ಜಾತ್ರೆಗೆ ಹೋದಾಗ ಅಲ್ಲಿ ತೇರು ಎಳೆದಾದ ಮೇಲೆ ಗುಡಿಯಲ್ಲಿ ಪೂಜೆ ಮಾಡಿಸಿಕೊಂಡು, ಜಾತ್ರೆಯಲ್ಲಿ ಸಿಗುವ ಬಳೆ, ಸರ, ಕ್ಲಿಪ್ಪು ಎಲ್ಲ ಖರೀದಿ ಮಾಡಿ, ಬೆಂಡು, ಬತ್ತಾಸು, ಲಾಡು, ಮಂಡಕ್ಕಿ, ಜಿಲೇಬಿ ಮೇಯುತ್ತಾ ಸಂಜೆಯವರೆಗೂ ಅಲ್ಲಿಯೇ ಅಡ್ಡಾಡಿ ಮನೆಗೆ ಬರುತ್ತಿದ್ದೆವು.

ಇನ್ನು ಊರಿಗೆ ಇದ್ದಿದ್ದು ಒಂದೇ ಟಾಕೀಸು. ಟಾಕೀಸು ಎನ್ನುವುದಕ್ಕಿಂತ ಟೆಂಟ್ ಅಂದರೇನೇ ಸೂಕ್ತ.  ಅದರ ಮಾಲೀಕನನ್ನು ‘ಸಿಮ್ಮಾ ರಾಜಣ್ಣಾ’ ಅಂತಲೇ ಕರೆಯುತ್ತಿದ್ದರು. ವಾರದ ಸಂತೆಯ ದಿನ ಮಂಗಳವಾರಕ್ಕೊಮ್ಮೆ ಅಲ್ಲಿ ಹೊಸ ಸಿನೆಮಾ. ಅದೂ ಬರೀ ಸೆಕಂಡ್ ಶೋ ಮಾತ್ರ. ಯಾವ ಸಿನೆಮಾ ಎಂದು ಹಿಂದಿನ ದಿನವೇ ತಮಟೆ ಹೊಡೆಯುತ್ತಾ ಊರೆಲ್ಲ ಸಾರುತ್ತಿದ್ದರು. ಮರುದಿನ ರಾತ್ರಿ ಊಟ ಮುಗಿಸಿ ಮನೆಯಲ್ಲಿದ್ದ ಹೆಣ್ಣುಮಕ್ಕಳು, ಮಕ್ಕಳು ಸಿನೆಮಾಕ್ಕೆ ಹಾಜರ್.

ಮುಂದೆ ಪರದೆಯ ಹತ್ತಿರದಲ್ಲೇ ಒಂದು ಜಮಖಾನ ಹಾಸಿ ಮನೆಮಂದಿಯೆಲ್ಲಾ ಕುಳಿತುಕೊಳ್ಳುತ್ತಿದ್ದೆವು.  ಸಿನೆಮಾ ಶುರುವಾಗುತ್ತಿದ್ದ ಹಾಗೆ ಸೀಟಿ ಹೊಡೆಯುತ್ತಾ, ದೇವರ ಸ್ತೋತ್ರ ಶುರುವಾಗುತ್ತಿದ್ದ ಹಾಗೆ ಕೈಮುಗಿಯುತ್ತಾ, ಹೀರೋ ಫೈಟಿಂಗ್ ಮಾಡುವಾಗ ಚಚ್ಚಲೇ ಆ ಬೋಳೀ ಮಗನ್ನ, ಹಾಕಲೇ ಆ ಸೂಳೆಮಗಂಗೆ ಅಂತಾ ಜನರೆಲ್ಲ ಕೂಗಾಡುತ್ತ, ಹಾಡು ಬಂದಾಗ ಕುಣಿಯುತ್ತಾ ಸಂಭ್ರಮಿಸುತ್ತಿದ್ದರು. ಸ್ವಲ್ಪ ಹೊತ್ತು ಪ್ರಸಾರದಲ್ಲಿ ಅಡಚಣೆ, ಒಮ್ಮೊಮ್ಮೆ ಕೈಕೊಡುವ ಕರೆಂಟು ಒಟ್ಟಿನಲ್ಲಿ ಮೂರು ತಾಸಿನ ಸಿನೆಮಾ ಐದು ತಾಸು ನೋಡಬೇಕಾಗಿತ್ತು. ನಾವು ಮಕ್ಕಳೆಲ್ಲ ಜಮಖಾನದ ಮೇಲೆ ಅಲ್ಲಲ್ಲೇ ಉರುಳಿ ನಿದ್ದೆಗೆ ಜಾರಿಬಿಡುತ್ತಿದ್ದೆವು. ಸಿನೆಮಾ ಮುಗಿಯುತ್ತಲೇ ಹೊರಗೆ ಕಾಯುತ್ತಿದ್ದ ಕೆಲಸದಾಳುಗಳು ನಮ್ಮನ್ನೆಲ್ಲಾ ಎತ್ತಿಕೊಂಡು ಹೋಗಬೇಕಿತ್ತು.

ಬಾವಿಯಲ್ಲಿನ ನೀರು ಸೇದುವುದು ಎಂದರೆ ನಮಗೆಲ್ಲಾ ತುಂಬಾ ಇಷ್ಟದ ಸಂಗತಿ. ತಾಮ್ರದ ಕೊಡದ ಕುತ್ತಿಗೆಗೆ ಹುರಿಹಗ್ಗ ಬಿಗಿದು, ರಾಟೆಯ ಮೂಲಕ ಬಾವಿಗೆ ಇಳಿಬಿಟ್ಟು, ನಿಧಾನವಾಗಿ ಹಗ್ಗವನ್ನು ಮೇಲೆ ಕೆಳಗೆ ಆಡಿಸುತ್ತಾ, ಅದರ ಕಂಠವನ್ನು ಚೂರು ಚೂರೇ ನೀರಿಗೆ ಮುಖ ಮಾಡಿಸುವಲ್ಲಿ ಯಶಸ್ವಿಯಾದಾಗ ಅದು ಗುಳು ಗುಳು ಶಬ್ದ ಮಾಡುತ್ತಾ ನೀರು ತುಂಬಿ ಮುಳುಗಿದ ಮೇಲೆ ಇಬ್ಬರು ಸೇದುವುದಕ್ಕೆ ರೆಡಿಯಾಗುತ್ತಿದ್ದೆವು.  ಬಾವಿಯ ಕಟ್ಟೆಗೆ ಒಂದು ಕಾಲನ್ನು ಗಟ್ಟಿಯಾಗಿ ಊರಿ ಒಮ್ಮೆ ಈಕಡೆಯವರು ಒಮ್ಮೆ ಆಕಡೆಯವರು ಸೇದುವಾಗ ನಿಧಾನವಾಗಿ ಕೊಡ ಮೇಲಕ್ಕೆ ಬರುತ್ತಿತ್ತು. ದೊಡ್ಡ ದೊಡ್ಡ ಕೊಡಪಾನಗಳನ್ನು ಮನೆಯ ಆಳುಗಳು, ಒಬ್ಬರೇ ಎರಡೂ ಕಾಲನ್ನು ಬಾವಿಕಟ್ಟೆಗೆ ಬಿಗಿಯಾಗಿ ಊರಿ ಸರಸರ ಎಳೆದು ಹಾಕುವುದನ್ನು ನೋಡಿ ಅಚ್ಚರಿಯಾಗುತ್ತಿತ್ತು.

ಹಳ್ಳಿಯಿಂದ ವಾಪಾಸಾಗುವಾಗ ಎಲ್ಲರೂ ಅಜ್ಜ, ಅಜ್ಜಿಯಂದಿರ ಕಾಲಿಗೆ ನಮಸ್ಕರಿಸುತ್ತಿದ್ದೆವು. ಮತ್ತೆ ಬೇಸಿಗೆ ರಜಕ್ಕೆ ಬಂದುಬಿಡಿ ಎನ್ನುತ್ತಲೇ, ಅಜ್ಜ ಸ್ವಲ್ಪ ಹಣವನ್ನು, ಜೊತೆಗೆ ತಮ್ಮ ಜವಳಿ ಅಂಗಡಿಯಿಂದ ಎಲ್ಲರಿಗೂ ಒಂದೊಂದು ಸೀರೆಯನ್ನು ಎಲ್ಲ ಹೆಣ್ಣುಮಕ್ಕಳಿಗೂ ಉಡಿತುಂಬಿ, ಹಾಗೇ ಕಿರಾಣಿ ಅಂಗಡಿಯಲ್ಲಿನ ಬಿಸ್ಕತ್ತಿನ ಪ್ಯಾಕುಗಳನ್ನು ಮಕ್ಕಳಿಗೆ ಕೊಟ್ಟು, ಜೊತೆಗೆ ಬೆಳೆದ ಧಾನ್ಯಗಳು, ಹಣ್ಣುಗಳು ಎಲ್ಲವನ್ನು ಬಸ್ಸಿಗೆ ಹಾಕಿಸುತ್ತಿದ್ದ. ಅಜ್ಜಿ ಕಟ್ಟಿಕೊಟ್ಟ ಕರ್ಜಿಕಾಯಿ, ರವೆಉಂಡೆಗಳು ಎಲ್ಲವೂ ನಮ್ಮ ಜೊತೆ ಪ್ರಯಾಣಕ್ಕೆ ಸಿದ್ಧವಾಗುತ್ತಿದ್ದವು.  ಬಸ್ಸು ಹೊರಡುತ್ತಿದ್ದಂತೆ ಎಲ್ಲರಿಗೂ ಟಾಟಾ ಮಾಡುವಾಗ, ಮತ್ತೆ ಯಾವಾಗ ಅಜ್ಜಿಯ ಮನೆಗೆ ಹೋಗಲು ರಜೆ ಸಿಗುತ್ತದೆಯೋ ಎನ್ನುವ ಕನಸು ಕಾಣುತ್ತಲೇ ಅಮ್ಮನ ಮಡಿಲಲ್ಲಿ ನಿದ್ರೆಗೆ ಜಾರುತ್ತಿದ್ದೆ.

Leave a Reply

Your email address will not be published.