ಅಜ್ಞಾತ ಮಾ ಯುನ್ ಜಾಕ್ ಮಾ ಆದ ಕಥೆ!

ಜಗತ್ತಿನ ಗ್ರೇಟ್ ಟೆಕ್ನಾಲಜಿ ಕಂಪೆನಿಗಳ ಜನಕರಲ್ಲಿ ಒಬ್ಬ ಎಂದು ತನ್ನ ಹೆಸರನ್ನ ದಾಖಲಿಸಿಕೊಳ್ಳಲು ಜಾಕ್ ಮಾ ಸಿದ್ಧರಾಗಿದ್ದರು. ಆದರೆ ಇದ್ದಕ್ಕಿದ್ದಹಾಗೆ ಜಾಕ್ ಮಾ ತಮ್ಮ ಇನ್ನೊಂದು ಸಂಸ್ಥೆ ಅಂಟ್ ಮೂಲಕ ಎತ್ತಬೇಕಾಗಿದ್ದ ಹಣಕ್ಕೆ ಸರಕಾರ ಕತ್ತರಿ ಹಾಕುತ್ತದೆ. ಜಾಕ್ ಮಾ ಅದೃಶ್ಯರಾಗುತ್ತಾರೆ!

ರಂಗಸ್ವಾಮಿ ಮೂಕನಹಳ್ಳಿ

ಇವತ್ತಿಗೆ ಜಾಕ್ ಮಾ ಎನ್ನುವ ಹೆಸರು ವಿಶ್ವಪ್ರಸಿದ್ಧ. ಆದರೆ ಜಾಕ್ ಮಾ ಆಗಿ ಪರಿವರ್ತನೆಗೊಳ್ಳುವುದಕ್ಕೆ ಮುಂಚೆ ಆತ ಮಾ ಯುನ್. 10ನೇ ಸೆಪ್ಟೆಂಬರ್ 1964 ರಂದು ಹ್ಯಾಂಗ್ಝೋ ಪ್ರದೇಶದಲ್ಲಿನ ಜ್ಹೆಜಿಯಾಂಗ್‍ನಲ್ಲಿ ಜನಿಸಿಸುತ್ತಾರೆ. ಇವರ ಕುಟುಂಬ ಅತ್ತ ತೀರಾ ಬಡವರೂ ಅಲ್ಲದ ಶ್ರೀಮಂತರೂ ಅಲ್ಲದ ಸ್ಥಿತಿಯವರು. ಬಾಲಕ ಮಾ ಯುನ್ ಗೆ ಚಿಕ್ಕಂದಿನಲ್ಲಿ ಇಂಗ್ಲಿಷ್ ಬಗ್ಗೆ ಒಂದು ರೀತಿಯ ವ್ಯಾಮೋಹ ಶುರುವಾಗುತ್ತದೆ. ಹೀಗಾಗಿ ಆತ ಇಂಗ್ಲಿಷ್ ಭಾಷೆಯನ್ನ ಕಲಿಯಲು ಶುರು ಮಾಡುತ್ತಾನೆ. ಹ್ಯಾಂಗ್ಝೋ ಟೀಚರ್ಸ್ ಕಾಲೇಜಿಗೆ ಪ್ರವೇಶ ಪಡೆಯಲು ಎರಡು ಬಾರಿ ವಿಫಲನಾಗುತ್ತಾನೆ. ಮೂರನೆಯ ಪ್ರಯತ್ನದಲ್ಲಿ ಇಂಗ್ಲಿಷಿಲ್ಲಿ ಬ್ಯಾಚೆಲರ್ಸ್ ಪದವಿಗೆ ಅರ್ಹತೆಯನ್ನ ಪಡೆದು ಅದನ್ನ ಮುಗಿಸುತ್ತಾರೆ. ಗಣಿತ ಎಂದರೆ ಈತನಿಗೆ ಅಲರ್ಜಿ.

ಆದರೆ ಮೊದಲ ಸಾಲುಗಳಲ್ಲಿ ಹೇಳಿದಂತೆ ಇಂಗ್ಲಿಷ್ ಎಂದರೆ ಹುಚ್ಚು. ಹೇಗಾದರೂ ಮಾಡಿ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಹೊಂದಬೇಕು ಎನ್ನುವುದು ಆತನ ಹಂಬಲವಾಗಿತ್ತು. ಹೀಗಾಗಿ ಹ್ಯಾಂಗ್ಝೋ ಪ್ರದೇಶಕ್ಕೆ ಬರುವ ವಿದೇಶಿ ಪ್ರವಾಸಿಗರಿಗೆ ಟೂರ್ ಗೈಡ್ ಆಗಿ ಕೆಲಸ ಮಾಡಲು ಶುರು ಮಾಡುತ್ತಾನೆ. ವಿದೇಶಿಯರ ಜೊತೆಗಿನ ಸಂವಹನ ಭಾಷೆಯ ಮೇಲೆ ಪ್ರಾವೀಣ್ಯ ಹೊಂದಲು ಸಹಕಾರಿ ಎನ್ನುವುದರ ಜೊತೆಗೆ ಬದುಕಿನ ತೇರು ಎಳೆಯಲು ಕೂಡ ಸಹಾಯ ಮಾಡುತ್ತದೆ ಎನ್ನುವುದನ್ನ ಆತ ಅರಿತುಕೊಂಡಿದ್ದ. ಹೀಗಾಗಿ ಈ ಕೆಲಸವನ್ನ ಸತತವಾಗಿ 9 ವರ್ಷಗಳ ಕಾಲ ನಿರ್ವಹಿಸುತ್ತಾನೆ.

ಆ ದಿನಗಳಲ್ಲಿ ಪ್ರತಿ ದಿನವೂ 27 ಕಿಲೋಮೀಟರ್ ಸೈಕಲ್ ಪ್ರಯಾಣ ಮಾಡುತ್ತಿದ್ದರೂ, ಒಂದು ದಿನವೂ ಆ ಬಗ್ಗೆ ಬೇಸರ ಮಾಡಿಕೊಂಡಿರಲಿಲ್ಲ. ತನಗೇನು ಬೇಕು ಎನ್ನುವುದರ ನಿಖರತೆ ಇದ್ದ ಕಾರಣ ಆ ಮಟ್ಟದ ಮನಸ್ಥಿತಿ ಆತನದಾಗಿರಬಹುದು. ಹೀಗೆ ಬಹಳ ಜನ ವಿದೇಶಿಯರ ಜೊತೆಗೆ ಪತ್ರದ ಮೂಲಕ ಸಂಪರ್ಕದಲ್ಲಿರುತ್ತಾರೆ. ವಿದೇಶಿಯರಿಗೆ ನೆನಪಲ್ಲಿ ಉಳಿಯಲಿ ಎನ್ನುವ ಕಾರಣಕ್ಕೆ ತಮ್ಮ ಪೆನ್ ನೇಮ್ ಜಾಕ್ ಎಂದು ಇಟ್ಟು ಕೊಳ್ಳುತ್ತಾರೆ. ಮುಂದೆ ಅದಕ್ಕೆ ತಮ್ಮ ಮೂಲ ಹೆಸರಿನ ಮಾ ಕೂಡ ಸೇರಿಸಿಕೊಳ್ಳುತ್ತಾರೆ.

ಹ್ಯಾಂಗ್ಝೋ ಡೈನ್ಝಿ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕನಾಗಿ ಕೆಲಸಕ್ಕೆ ಸೇರುವ ಮುಂಚೆ, ಒಂದಲ್ಲ, ಎರಡಲ್ಲ 30 ಪ್ರತ್ಯೇಕ ಪ್ರಕಾರಗಳಲ್ಲಿ ಕೆಲಸ ಕೋರಿ ಅರ್ಜಿಯನ್ನ ಸಲ್ಲಿಸಿರುತ್ತಾರೆ. ಎಲ್ಲೆಡೆಯೂ ರಿಜೆಕ್ಷನ್ ಆತನಿಗೆ ಸಿಗುತ್ತದೆ. ಪೊಲೀಸ್ ಕೆಲಸಕ್ಕೆ ಅರ್ಜಿ ಹಾಕಿದರೆ, ಈ ಕೆಲಸಕ್ಕೆ ನೀನು ನಾಲಾಯಕ್ಕು ಎಂದು ಹೇಳಿ ಕಳಿಸುತ್ತಾರೆ. ಕೊನೆಗೆ ಕೆಎಫ್ಸಿ  ರೆಸ್ಟೋರೆಂಟ್‍ನಲ್ಲಿ ಕೆಲಸಕ್ಕೆ ಅರ್ಜಿಯನ್ನ ಹಾಕುತ್ತಾರೆ. ಒಟ್ಟು 24 ಜನ ಅಲ್ಲಿ ಕೆಲಸಕ್ಕೆ ಅರ್ಜಿ ಹಾಕಿರುತ್ತಾರೆ. ಅದರಲ್ಲಿ 23 ಜನಕ್ಕೆ ಕೆಲಸ ಸಿಗುತ್ತದೆ. ಮಾ ಯುನ್ ಗೆ ಮತ್ತೆ ರಿಜೆಕ್ಷನ್ ನೋವು ಎದುರಾಗುತ್ತದೆ. ಈ ರೀತಿಯ ಸೋಲುಗಳನ್ನು ಸವಾಲಾಗಿ, ಸಮಚಿತ್ತದಿಂದ ಸ್ವೀಕರಿಸಿದ ಕಾರಣ ಮಾ ಯುನ್, ಜಾಕ್ ಮಾ ಆಗಿ ರೂಪಾಂತರಗೊಳ್ಳುತ್ತಾರೆ.

ಇವರ ಜೀವನದ ಪ್ರಥಮ ಟರ್ನಿಂಗ್ ಪಾಯಿಂಟ್ 1994ರಲ್ಲಿ ಹೈಬೋ ಟ್ರಾನ್ಸ್ಲೇಷನ್ ಏಜೆನ್ಸಿ ತೆಗೆಯುವುದರಿಂದ ಶುರುವಾಗುತ್ತದೆ. ಚೈನೀಸ್-ಇಂಗ್ಲಿಷ್ ಅನುವಾದದ ಜೊತೆಗೆ ದುಭಾಷಿ ಸೇವೆ ನೀಡುವ ಕೆಲಸವನ್ನ ಈ ಸಂಸ್ಥೆ ಮಾಡುತ್ತಿರುತ್ತದೆ. ಸ್ಥಳೀಯ ಸರಕಾರಿ ಸಂಸ್ಥೆಗೆ ಕೂಡ ಇವರು ಈ ಸೇವೆಯನ್ನ ನೀಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಚೈನೀಸ್ ಸರಕಾರದ ಪರವಾಗಿ 1995ರಲ್ಲಿ ಅಮೆರಿಕಾ ದೇಶಕ್ಕೆ ಪ್ರಯಾಣ ಮಾಡುತ್ತಾರೆ. ಅವರಿಗೆ `ಇಂಟರ್ನೆಟ್ ಜಗತ್ತು’ ತೆರೆದುಕೊಳ್ಳುತ್ತದೆ. ಅರೆರೇ ಇದೇನಿದು ಇಲ್ಲಿ ಇಷ್ಟೊಂದು ವೆಬ್ಸೈಟ್ ಗಳಿವೆ, ಇದರಿಂದ ಸಣ್ಣಪುಟ್ಟ ವ್ಯಾಪಾರಸ್ಥರೂ ಕೂಡ ಸುಲಭವಾಗಿ ಹೊರ ಜಗತ್ತಿನೊಂದಿಗೆ ಸಂಪರ್ಕ, ಸಂವಹನ ನಡೆಸಲು ಸಾಧ್ಯ ಎನ್ನುವುದು ಜಾಕ್ ಮಾ ಅರಿವಿಗೆ ಬರುತ್ತದೆ.

ಅಮೆರಿಕಾ ದಿಂದ ವಾಪಸ್ಸು ಬರುವಾಗ ತಲೆಯಲ್ಲಿ ಚೀನಾದಲ್ಲಿ ಬಹಳ ಕೊರತೆಯಿರುವ ಇಂತಹ ಒಂದು ವ್ಯವಸ್ಥೆಯನ್ನ ಪರಿಣಾಮಕಾರಿಯಾಗಿ ತುಂಬುವ ಒಂದು ಬಿಸಿನೆಸ್ ಫಾಮ್ರ್ಯಾಟ್ ಆಗಲೇ ತನ್ನ ಹುಟ್ಟು ಕಂಡಿರುತ್ತದೆ. ಸ್ಥಳೀಯ ಸರಕಾರದ ಸಹಯೋಗದೊಂದಿಗೆ ಇಂಟರ್ನೆಟ್ ಸಂಸ್ಥೆಯನ್ನ ಹುಟ್ಟು ಹಾಕುವಲ್ಲಿ ಸಫಲರೇನೋ ಆಗುತ್ತಾರೆ. ಆದರೆ ಸರಕಾರಿ ಸಂಸ್ಥೆಗೆ ಸೇವೆ ನೀಡುತ್ತಾ ತಾನೆಂದುಕೊಂಡ ಮಟ್ಟಕ್ಕೆ ಬೆಳೆಯುವುದು ಅಸಾಧ್ಯ ಎನ್ನುವುದರ ಅರಿವು ಕೂಡ ಜಾಕ್ ಮಾ ಗೆ ಇರುತ್ತದೆ. ಹೀಗಾಗಿ ತನ್ನ ಸ್ನೇಹಿತರ, ಸಹೋದ್ಯೋಗಿಗಳ ಮನಸ್ಸನ್ನ ಒಲಿಸಿ ಸರಕಾರಿ ಸಂಸ್ಥೆಗೆ ನೀಡುತ್ತಿದ್ದ ಸೇವೆಯಿಂದ ಮುಕ್ತರಾಗುತ್ತಾರೆ. ನಂತರ ಹುಟ್ಟಿದ್ದು ಇಂದಿಗೆ ಜಗತ್ ಪ್ರಸಿದ್ಧವಾದ ‘ಅಲಿಬಾಬಾ’ ಸಂಸ್ಥೆ,

ಅಲಿಬಾಬಾ ಬಹಳ ವೇಗವಾಗಿ ಬೆಳೆಯುತ್ತಾ ಹೋಗುತ್ತದೆ. ಆ ಕಾರ್ಯಕ್ಷೇತ್ರದಲ್ಲಿ ಆ ದಿನಗಳಲ್ಲಿ ಆ ರೀತಿಯ ಸೇವೆಯನ್ನ ಅಷ್ಟೊಂದು ಪರಿಣಾಮಕಾರಿಯಾಗಿ ನೀಡಬಲ್ಲ ಇನ್ನೊಂದು ಸಂಸ್ಥೆ ಇಲ್ಲದೆ ಹೋದದ್ದು ಅಲಿಬಾಬಾಗೆ ವರದಾನವಾಯಿತು. ಸಣ್ಣ ಮತ್ತು ಮಧ್ಯಮ ಮಟ್ಟದ ವ್ಯಾಪಾರಸ್ಥರು ಅಲಿಬಾಬಾ ಸೇವೆಯಿಂದ ಬಹಳಷ್ಟು ಸಂತುಷ್ಟರಾಗಿದ್ದರು. ಖುಷಿಯಾದ ಗ್ರಾಹಕ ಯಾವ ಜಾಹೀರಾತು ಕೂಡ ಮಾಡಲಾಗದ ಕೆಲಸವನ್ನ ಮಾಡುತ್ತಾನೆ. ಅದು ಜಾಕ್ ಮಾ ವಿಷಯದಲ್ಲಿ ನೂರಕ್ಕೆ ನೂರರಷ್ಟು ನಿಜವಾಯ್ತು.

ಅಲಿಬಾಬಾ ಖ್ಯಾತಿ ಎಷ್ಟರಮಟ್ಟಿಗೆ ಪಸರಿಸುತ್ತದೆ ಎಂದರೆ, ಅಮೆರಿಕಾದ ಯಾಹೂ ಸಂಸ್ಥೆ 2003ರಲ್ಲಿ ಅಲಿಬಾಬಾ ಸಂಸ್ಥೆಯ 40 ಪ್ರತಿಶತ ಪಾಲುದಾರಿಕೆಯನ್ನ ಕೇಳಿದ ಹಣತೆತ್ತು ಪಡೆದುಕೊಳ್ಳುತ್ತದೆ. 2007ರಲ್ಲಿ ಪ್ರಥಮ ಬಾರಿಗೆ ಐಪಿಒ ಮೂಲಕ 1.7 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಮಾರುಕಟ್ಟೆಯ ಮೂಲಕ ಎತ್ತುತ್ತದೆ. ಆ ನಂತರದ ಯಶೋಗಾಥೆಗೆ ಜಗತ್ತು ಸಾಕ್ಷಿಯಾಗುತ್ತದೆ.

ಹೀಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಲಿಬಾಬಾ ಜೊತೆಗೆ ಜಾಕ್ ಮಾ ಕೂಡ ಮನೆಮಾತಾದರು. ಚೀನಾ ಸರಕಾರ ಜಾಕ್ ಮಾ ಅವರನ್ನ ತನ್ನ ದೇಶವನ್ನ ಪ್ರೊಮೋಟ್ ಮಾಡಿಕೊಳ್ಳಲು ಚೆನ್ನಾಗಿ ಬಳಸಿಕೊಂಡಿತು. ಅಂತಾರಾಷ್ಟ್ರೀಯ ವಲಯದಲ್ಲಿ ಜಾಕ್ ಮಾ ಚೀನಾ ದೇಶದ ಪೋಸ್ಟರ್ ಬಾಯ್ ಎನ್ನುವ ಮಟ್ಟಕ್ಕೆ ಬೆಳೆದುಬಿಡುತ್ತಾರೆ. 2020 ಅಕ್ಟೋಬರ್ ತಿಂಗಳವರೆಗೆ ಎಲ್ಲವೂ ಚೆನ್ನಾಗೇ ನಡೆಯುತ್ತಿರುತ್ತದೆ. ಅಕ್ಟೋಬರ್ 27 ರಂದು 34 ಬಿಲಿಯನ್ ಅಮೆರಿಕನ್ ಡಾಲರ್‍ಗಳನ್ನು ಐಪಿಒ ಮೂಲಕ ಎತ್ತಲು ಬೇಕಾದ ಎಲ್ಲ ಸಿದ್ಧತೆಯನ್ನ ಮಾಡಿಕೊಂಡಿದ್ದರು. ಈ ಮೂಲಕ ಜಗತ್ತಿನ ಗ್ರೇಟ್ ಟೆಕ್ನಾಲಜಿ ಕಂಪೆನಿಗಳ ಜನಕರಲ್ಲಿ ಒಬ್ಬ ಎಂದು ತನ್ನ ಹೆಸರನ್ನ ದಾಖಲಿಸಿಕೊಳ್ಳಲು ಕೂಡ ಸಿದ್ಧರಾಗಿದ್ದರು. ಆದರೆ ಇದ್ದಕ್ಕಿದ್ದಹಾಗೆ ಜಾಕ್ ಮಾ ತಮ್ಮ ಇನ್ನೊಂದು ಸಂಸ್ಥೆ ಅಂಟ್ ಮೂಲಕ ಎತ್ತಬೇಕಾಗಿದ್ದ ಹಣಕ್ಕೆ ಸರಕಾರ ಕತ್ತರಿ ಹಾಕುತ್ತದೆ. ಜಾಕ್ ಮಾ ಅದೃಶ್ಯರಾಗುತ್ತಾರೆ.

ಇದು ಚೀನಾದ ಅಧ್ಯಕ್ಷನ ವಿರುದ್ಧ ಮಾತನಾಡಿದುದರ ಫಲಿತಾಂಶ. ಜಾಕ್ಮಾ ಈ ರೀತಿ ಚೀನಾದ ಪಾಲಿಸಿಗಳ ವಿರುದ್ಧ ಮಾತನಾಡಿದ್ದು ಇದೆ ಮೊದಲಲ್ಲ. ಹಾಗಾದರೆ ಜಾಕ್ಮಾ ಎಲ್ಲಿ ಮಾಯವಾದರು?  ಎಲ್ಲಾ ಪತ್ರಿಕೆಗಳಲ್ಲಿ ಜಾಕ್ ಮಾ `ಚೀನಾದ ನೀತಿಗಳು ವ್ಯಾಪಾರವನ್ನ ಉಸಿರುಗಟ್ಟಿಸುತ್ತವೆ’ ಎನ್ನುವ ಹೇಳಿಕೆ ಕೊಟ್ಟರು; ಅದಕ್ಕೆ ಅವರನ್ನ ಚೀನಿ ಕಮ್ಯುನಿಸ್ಟ್ ಸರಕಾರ ಕಿಡ್ನಾಪ್ ಮಾಡಿದೆ ಎನ್ನುವ ರೀತಿಯಲ್ಲಿ ಬರೆದಿದ್ದಾರೆ. ಆದರೆ ನಿಜವಾದ ಕಾರಣ ಬೇರೆಯಿದೆ. ಜಾಕ್ ಮಾ ಸ್ಟೇಟ್ ರನ್ ಬ್ಯಾಂಕುಗಳ ವಿರುದ್ಧ ಮಾತನಾಡಿದ್ದು ನೇರವಾಗಿ ಜಿನ್ಪಿಂಗ್ ವಿರುದ್ಧ ಮಾತನಾಡಿದಂತೆ. ಅವರು ಇದೊಂದು ಬಿಟ್ಟು ಬೇರೇನೂ ಬೇಕಾದರೂ ಮಾಡಬಹುದಿತ್ತು, ಬಟ್ ಜಾಕ್ ಮಾ ಆ ಎಡವಟ್ಟು ಮಾಡಿಕೊಂಡುಬಿಟ್ಟರು.

ಗಮನಿಸಿ: 71 ಬಿಲಿಯನ್ ಅಮೆರಿಕನ್ ಡಾಲರ್ ಸಂಪತ್ತಿನ ಒಡೆಯ, ಶೋಮ್ಯಾನ್ ಆಫ್ ಚೀನಾ, ಹೊಸ ಚೀನಾದ ಮುಖ ಎಂದೆಲ್ಲಾ ಬಿಂಬಿತವಾಗಿದ್ದ ಜಾಕ್ಮಾ ರಾತ್ರೋರಾತ್ರಿ ಮಾಯವಾಗುತ್ತಾರೆ. ಇವರನ್ನ ಮುಖೇಶ್ ಅಂಬಾನಿ ಆಫ್ ಚೀನಾ ಎನ್ನಬಹುದು. ಅಷ್ಟು ಪ್ರಸಿದ್ಧ, ಹಣವಂತ ಮನುಷ್ಯನನ್ನ ಚೀನಾ ಸರಕಾರ ತನ್ನ ವಿರುದ್ಧ ಮಾತನಾಡಿದ ಎನ್ನುವ ಒಂದು ಸಣ್ಣ ಕಾರಣಕ್ಕೆ ‘ಗಾಯಬ್’ ಮಾಡಿಬಿಡುತ್ತದೆ. ಚೀನಾದ ಕಮ್ಯುನಿಸ್ಟ್ ಸರಕಾರದ ವಿರುದ್ಧ ಉಸಿರೆತ್ತಿದವರೆಲ್ಲಾ ಹೀಗೆ ಅಗೋಚರ ರೀತಿಯಲ್ಲಿ ಮಾಯವಾಗುತ್ತಾರೆ. ಜಾಕ್ಮಾ ಹೊಸ ಸೇರ್ಪಡೆ. ಫೆಬ್ರವರಿ 2021ರ ವೇಳೆಗೆ ಮತ್ತೆ ಇವರು ಕಾಣಿಸಿಕೊಂಡ ಸುದ್ದಿ ಪ್ರಚಾರವಾಯ್ತು. ಆ ಮಟ್ಟಿಗೆ ಜಾಕ್ ಮಾ ಜೀವಂತವಿದ್ದಾರೆ ಎಂದು ನಂಬಬಹುದು. ಉಳಿದಂತೆ ಜಾಕ್ ಮಾ ಸೃಷ್ಟಿಸಿದ ವ್ಯಾಪಾರವೇನೂ ನಡೆದುಕೊಂಡು ಹೋಗುತ್ತದೆ. ಆದರೆ ಜಾಕ್ ಮಾ? ಅವರ ಭವಿಷ್ಯವೇನು? ಇದಕ್ಕೆ ಮಾತ್ರ ನಿಖರ ಉತ್ತರ ನೀಡಲು ಯಾರಿಂದಲೂ ಸಾಧ್ಯವಿಲ್ಲ.

Leave a Reply

Your email address will not be published.