ಅಜ್ಞಾನ ಒಪ್ಪಿಕೊಳ್ಳುವ ಗುಣವನ್ನು ಸಾಕ್ರೆಟಿಸ್‌ನಿಂದ ಕಲಿಯೋಣ

ನಮ್ಮ ರಾಜಕೀಯ ನಾಯಕರು ತಮಗೆ ಗೊತ್ತಿಲ್ಲ ಅನ್ನುವುದನ್ನು ವಿನಯದಿಂದ ಒಪ್ಪಿಕೊಂಡರೆ, ಇನ್ನೂ ಹೆಚ್ಚು ಸಮಯವನ್ನು ವ್ಯರ್ಥಮಾಡದೆ, ಮುಂದಿನ ಹಾದಿಯನ್ನು ಕಂಡುಕೊಳ್ಳುವುದಕ್ಕೆ ಜಗತ್ತಿನ ಎಲ್ಲಾ ಕಡೆಯಿಂದ ಭಾರತದ ಅತ್ಯುತ್ತಮ ಮೇಧಾವಿಗಳನ್ನು ಒಟ್ಟಿಗೆ ಕಲೆಹಾಕಬೇಕು.

 

ಒಂದೆರಡು ದಿನಗಳ ಹಿಂದೆ ಪತ್ರಕರ್ತರೊಬ್ಬರು ಫೋನ್ ಮಾಡಿ ಒಂದು ಸಂದರ್ಶನ ನೀಡುವಂತೆ ಕೇಳಿಕೊಂಡರು. “ಈ ಕೊರೋನಾ ಮಹಾಮಾರಿಯ ಬಿಕ್ಕಟ್ಟಿನಲ್ಲಿ ವಾಯುಯಾನ ಕ್ಷೇತ್ರವು ಉಳಿದುಕೊಳ್ಳಬಹುದೇ,” ಎನ್ನುವುದು ಅವರ ಮುಖ್ಯ ಪ್ರಶ್ನೆಯಾಗಿತ್ತು.

ಇದು ನನ್ನನ್ನು ಯೋಚಿಸಲು ಪ್ರೇರೇಪಿಸಿತು. ನನಗೆ ನಿಜವಾಗಿಯೂ ಈ ಪ್ರಶ್ನೆಯ ಉತ್ತರ ಗೊತ್ತಾ? ಇನ್ನು ಮೂರರಿಂದ ಆರು ತಿಂಗಳಿನಲ್ಲಿ ಜಗತ್ತು ಹೇಗಿರಬಹುದು ಅನ್ನುವುದು ನನಗೆ ನಿಜಕ್ಕೂ ಗೊತ್ತಿದೆಯಾ? ಒಂದೆರಡು ಗಂಟೆಗಳ ನಂತರ ಅವರಿಗೆ ನನ್ನ ಅಭಿಪ್ರಾಯ ತಿಳಿಸಿದೆ.

“ನನಗೆ ಈ ಬಗ್ಗೆ ಏನಾದರೂ ಒಳನೋಟ ಕೊಡುವುದಕ್ಕೆ ಸಾಧ್ಯವಾ, ನನಗೆ ಆ ಸಾಮರ್ಥ್ಯ ಇದೆಯಾ ಅನ್ನುವುದರ ಬಗ್ಗೆ ನನಗೇ ಅನುಮಾನಗಳಿವೆ. ಏನೂ ಗೊತ್ತಿರದ ಮಹಾಮಾರಿಯ  ಬಗ್ಗೆ ಏನನ್ನಾದರೂ ಊಹಿಸುವುದಾಗಲಿ, ಗೊತ್ತಿರುವ ಅರೆಬರೆ ಜ್ಞಾನವನ್ನು ಇಟ್ಟುಕೊಂಡು ವಾಯುಯಾನವನ್ನು ಕುರಿತಂತೆ ಪರಿಹಾರವನ್ನು ಸೂಚಿಸುವುದಾಗಲಿ ಅಥವಾ ಸಲಹೆ ಕೊಡುವುದಾಗಲಿ ಗೋಮೂತ್ರದಿಂದ ಕೊರೋನಾ ಸೋಂಕು ವಾಸಿಯಾಗುತ್ತದೆ ಎಂದು ಪ್ರತಿಪಾದಿಸುತ್ತಿರುವ ನಕಲಿವೈದ್ಯರಿಗಿಂತ ಯಾವ ರೀತಿಯಲ್ಲೂ ಭಿನ್ನವಾಗುವುದಿಲ್ಲ. ಅವರ ಉತ್ತರಕ್ಕಿಂತ ನನ್ನ ಉತ್ತರ ಉತ್ತಮವಾಗಿರುವುದಕ್ಕೆ ಸಾಧ್ಯವಿಲ್ಲ.

ನಾನು ಕೂಡ ಹೆಲಿಕಾಪ್ಟರ್‌ನಲ್ಲಿ ಸುತ್ತುತ್ತಾ, ಸುಂದರವಾದ ಸಿಲ್ಕ್ ಬಟ್ಟೆ ಧರಿಸಿ, ವೈಯ್ಯಾರದಿಂದ ನಡೆದಾಡುವ ಹೆಂಗಸರಿಂದ ಸುತ್ತುವರಿಯಲ್ಪಟ್ಟ, ದಿಢೀರ್ ‘ನಿರ್ವಾಣ’ ದಯಪಾಲಿಸುವ ಆಧುನಿಕ ದೇವಪುರುಷರ ತರಹ ಆಗಿಬಿಡುತ್ತೇನೆ. ಅಂತಹ ದೇವಪುರುಷರಲ್ಲಿ ಒಬ್ಬ ಸುಡು ಬಿಸಿಯಾದ ಸಾರು ಕುಡಿದರೆ ವೈರಾಣು ಸತ್ತು ಹೋಗುತ್ತದೆ ಎಂದು ಹೇಳಿದ. ಇನ್ನೊಬ್ಬ ಹೇಳಿದ, “ನಿಮಗೆ ಕೊರೋನಾ ವೈರಾಣು ಇದೆಯೋ ಇಲ್ಲವೋ ಎನ್ನುವುದನ್ನು ನೀವೇ ಪರೀಕ್ಷಿಸಿಕೊಳ್ಳಬಹುದು. ಯೋಗ ಮಾಡಿದ ನಂತರ ಪ್ರಾಣಾಯಾಮ ಮಾಡಿ 30 ಸೆಕೆಂಡ್ ಉಸಿರು ಹಿಡಿದುಕೊಳ್ಳಿ. ನಿಮಗೆ ಸಾಧ್ಯವಾಗದೇ ಹೋದರೆ ನಿಮಗೆ ಕೋವಿಡ್-19 ಇದೆ.” ಅಂತ. ಕ್ಷಮಿಸಿ, ನಾನು ವಿಷಯಾಂತರ ಮಾಡುತ್ತಿದ್ದೇನೆ ಎಂದು ನಿಮಗೆ ಅನ್ನಿಸಬಹುದು.

ನಾನು ವಾಯುಯಾನವನ್ನು ಬಿಟ್ಟು ಬೇರೇನನ್ನೋ ಮಾತನಾಡುತ್ತಿದ್ದೇನೆ ಅಂತ ನಿಮಗೆ ಅನ್ನಿಸಬಹುದು. ಆದರೆ ಇವೆಲ್ಲದರಿಂದ ಪ್ರತ್ಯೇಕಿಸಿ, ಕೇವಲ ವಾಯುಯಾನವನ್ನು ಮಾತ್ರ ಸ್ವತಂತ್ರವಾಗಿ ನೋಡುವುದಕ್ಕೆ ಸಾಧ್ಯವೇ? ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿರುವ ಲಕ್ಷಾಂತರ ಜನ ಕಾರ್ಮಿಕರು, ಸಣ್ಣ ರೈತರು ಜೀವನ ಮತ್ತು ಆದಾಯ ಕಳೆದುಕೊಂಡಿರುವಾಗ, ಪಿರಮಿಡ್ಡಿನ ಬುಡವೇ ಕುಸಿದಿರುವಾಗ ಮೇಲ್ಭಾಗದಲ್ಲಿರುವ ಆಟೋಮೊಬೈಲ್ ಅಥವಾ ವಿಮಾನೋದ್ಯಮ ಉಳಿಯುವುದಕ್ಕೆ ಸಾಧ್ಯವೇ? ಇವೆಲ್ಲಾ ಸ್ವಲ್ಪ ಸ್ಪಷ್ಟವಾಗುವವರೆಗೆ ಈ ಸಂದರ್ಶನವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು ಎಂದು ನಿಮಗೆ ಅನ್ನಿಸುವುದಿಲ್ಲವೇ?”

ನಾನೊಬ್ಬ ಪ್ರವಾದಿಯಾಗಲು ಸ್ವಲ್ಪ ಹಿಂದೇಟು ಹಾಕಿದೆ.

ಹಾಗೆ ಸುತ್ತಿ ಬಳಸಿ ಸಂದರ್ಶನವನ್ನು ಬೇಡವೆಂದ ಮೇಲೆ, ನನ್ನ ಮನಸ್ಸು ಹಲವು ವರ್ಷಗಳ ಹಿಂದಕ್ಕೆ, ನನ್ನ ಬಾಲ್ಯಕ್ಕೆ ಮರಳಿತ್ತು. ಒಮ್ಮೆ ನಮ್ಮೂರು ಸುದೀರ್ಘವಾದ ಬರಕ್ಕೆ ತುತ್ತಾಗಿತ್ತು. ಜಾನುವಾರುಗಳು ಸಾಯುತ್ತಿದ್ದವು. ಆಹಾರದ ಕೊರತೆ ತೀವ್ರವಾಗಿತ್ತು. ಬಡವರು ಕೆಲಸಕ್ಕಾಗಿ ಬೇಡುತ್ತಿದ್ದರು. ಒಂದು ದಿನ ನಮ್ಮ ಹಳ್ಳಿಯವರು ತಮಟೆ, ಜಾಗಟೆ ಮತ್ತು ಓಲಗ ಊದಿಕೊಂಡು ಮೆರವಣಿಗೆಯಲ್ಲ್ಲಿ ಬಂದರು. ಜನ ನರ್ತಿಸುತ್ತಿದ್ದರು. ಮೆರವಣಿಗೆ ನಮ್ಮ ಮನೆಯ ಮುಂದೆ ಬಂತು. ನಮ್ಮಮ್ಮ ಒಂದು ತಾಮ್ರದ ಕೊಡದಲ್ಲಿ ನೀರು ತುಂಬಿಕೊಂಡು ಕುಣಿಯುತ್ತಿರುವ ಜನರ ಮಧ್ಯಕ್ಕೆ ಹೋದರು. ಅಲ್ಲಿ ಕಣ್ಣಿಗೆ ಬಿದ್ದ ದೃಶ್ಯ ವಿಚಿತ್ರವಾಗಿತ್ತು. ಆ ಮೆರವಣಿಗೆಯಲ್ಲಿ ದೇವರಿರಲಿಲ್ಲ. ಹಲವು ಕಪ್ಪೆಗಳನ್ನು ಒಂದು ಕೋಲಿಗೆ ಕಟ್ಟಿದ್ದರು. ಬತ್ತಲಾಗಿದ್ದ ಇಬ್ಬರು ಯುವಕರು ಅದನ್ನು ಹೊತ್ತುಕೊಂಡಿದ್ದರು. ನಮ್ಮಮ್ಮ ತಣ್ಣೀರನ್ನು ಆ ಕಪ್ಪೆಗಳ ಮೇಲೆ ಸುರಿದರು. ಅವು ಬಿಸಿಲಿನಲ್ಲಿ ವಿಲಿವಿಲಿ ಎಂದು ಒದ್ದಾಡುತ್ತಿದ್ದವು. ಅಮ್ಮ ಅವುಗಳಿಗೆ ‘ಆರತಿ’ ಮಾಡಿದರು.

ಅಮ್ಮ ಮನೆಗೆ ಬಂದ ಮೇಲೆ ನನ್ನ ಅಜ್ಞೇಯತಾವಾದಿ ಅಪ್ಪ, “ಅವಿವೇಕಿಗಳು!” ಅಂತ ಗೊಣಗಿದರು. ನಾನು ಆಶ್ಚರ್ಯದಿಂದ ನೋಡುತ್ತಿದ್ದೆ. ಏನು ಮಾಡುತ್ತಿದ್ದಾರೆ ಅಂತ ಕೇಳಿದೆ. ಅವರು ನಗುತ್ತಾ, ಲೇವಡಿ ಮಾಡಿದರು, “ಆ ಬಡ ಹಳ್ಳಿಯವರಂತೆ ನಿಮ್ಮಮ್ಮನೂ ಓಬೀರಾಯನಕಾಲದ ಮೂಢನಂಬಿಕೆಯನ್ನು ನಂಬಿದ್ದಾಳೆ. ಮಳೆ ಬಾರದಿದ್ದಾಗ ಕಪ್ಪೆಗಳಿಗೆ ಪೂಜೆ ಮಾಡಿ, ಸ್ನಾನ ಮಾಡಿಸಿದರೆ ಮಳೆ ಬರುತ್ತದೆ ಅಂತ ಒಂದು ಕುರುಡು ನಂಬಿಕೆ.”

ನಾನು ಚಿಕ್ಕವನಿದ್ದಾಗ ನಮ್ಮದು ಕೂಡುಕುಟುಂಬ. ನನ್ನ ತಂದೆಯ ಚಿಕ್ಕಪ್ಪನಿಗೆ ಈಗ ಇರುವವರು ನಾಲ್ಕನೇ ಹೆಂಡತಿ ಅಂತ ಅವರಿವರು ಮಾತನಾಡುವುದು ಕಿವಿಗೆ ಬಿತ್ತು. ನಾನು ತಬ್ಬಿಬ್ಬಾದೆ. ನಮ್ಮ ಅಪ್ಪ ಪೆದ್ದುನಗುವನ್ನು ಮರೆಮಾಚಲು ಪ್ರಯತ್ನಿಸುತ್ತಾ ಹೇಳಿದರು, “ಅವಳು ನಿಜವಾಗಿ ಅವನ ಮೂರನೇ ಹೆಂಡತಿ. ಮೊದಲನೆಯ ಇಬ್ಬರು ಇವನ ಜೊತೆ ಮದುವೆಯಾದ ತಕ್ಷಣ ಸತ್ತು ಹೋದರು. ಆದರೆ ಮೂರು ಅಶುಭ. ಹಾಗಾಗಿ ಸಾವಿನ ದುರದೃಷ್ಟಕಾರಿ ಪ್ರಭಾವವನ್ನು ಭಂಗ ಮಾಡೋದಕ್ಕೆ ಅಂತ ಬಾಳೆಗಿಡದ ಜೊತೆ ಮೂರನೇ ಮದುವೆ ಮಾಡಿ, ಅಮೇಲೆ ಆ ಗಿಡವನ್ನು ಕತ್ತರಿಸಿ ಕೊಂದಿದ್ದಾರೆ. ಈ ಕಲಾಪ ಆದ ಮೇಲೆ ಅವನಿಗೆ ಇನ್ನೊಬ್ಬಳ ಜೊತೆ ಮದುವೆ ಮಾಡಿದರು. ಆದರೆ ಬಾಳೆಗಿಡದ ಜೊತೆ ಮದುವೆ ಮಾಡಿದಾಕ್ಷಣ ಆತ ಮತ್ತೆ ವಿದುರನಾಗೋದನ್ನ ತಪ್ಪಿಸಕ್ಕಾಗುತ್ತೆ ಅಂತ ಅಲ್ಲ. ಅವನು ಸದಾ ಅವಳನ್ನ ಹಿಂಸೆ ಮಾಡ್ತಾ ಇರ್ತಾನೆ. ಅವಳು ಯಾವಾಗ ಆತ್ಮಹತ್ಯೆ ಮಾಡ್ಕೊತಾಳೋ ದೇವರಿಗೆ ಗೊತ್ತು,” ಎಂದು ತುಂಟನಗೆ ನಕ್ಕರು. ನಮ್ಮ ಹಿಂದಿನವರ ಮೂಢನಂಬಿಕೆಗಳು ಇಂಥವೇ.

ನಮ್ಮ ಆಧುನಿಕ ಗುರುಗಳು, ರಾಜಕೀಯ ನಾಯಕರು ಮತ್ತು ಅವರ ಶಿಷ್ಯರು ಅಸಂಬದ್ಧ ಉಪದೇಶ ಮಾಡುವುದನ್ನು ನೋಡಿದಾಗ ಕಣ್ಣಿಗೆ ಕಾಣದ ಈ ಹೊಸ ರಾಕ್ಷಸ, ಈ ವೈರಾಣು, ಮಂತ್ರಗಳು ಮತ್ತು ಜಾಗಟೆಗಳಿಂದ ನಾಶವಾಗುತ್ತದೆಯೋ ಅಥವಾ ಈ ಕ್ರಿಮಿಗಳನ್ನು ವೈರಾಣು ತಜ್ಞರು ಮತ್ತು ಲಸಿಕೆ ತಯಾರಕರು ನಾಶಮಾಡುತ್ತಾರೋ ಎಂದು ಪ್ರಶ್ನಿಸಿಕೊಳ್ಳುತ್ತೀರಿ. ಈ ಘೋರ ಪೀಡೆಯನ್ನು ಜಯಿಸಲು ಪ್ರವಾದಿಗಳಿಂದ ಸಾಧ್ಯವೋ ಅಥವಾ ವಿಜ್ಞಾನಿಗಳಿಂದ ಸಾಧ್ಯವೋ? ‘ಗುರು’ಗಳು ತಮಗೆ ಹಲ್ಲು ನೋವು ಬಂದಾಗ ಮಂತ್ರ ಹೇಳುತ್ತಾರೋ ಅಥವಾ ದಂತವೈದ್ಯರ ಬಳಿಗೆ ಹೋಗುತ್ತಾರೋ? ನಮಗೆಲ್ಲರಿಗೂ ಇದಕ್ಕೆ ಉತ್ತರ ಗೊತ್ತು. ಯಾಕೆಂದರೆ ಸತ್ಯ ಅಂತಿಮವಾಗಿ ಹೊರಗೆ ಬಂದಿದೆ. ಮೊದಲು ನಮ್ಮನ್ನು ನಾವು ಮೋಸಗೊಳಿಸಿಕೊಳ್ಳುವುದು ನಿಲ್ಲಬೇಕು. ಆಮೇಲೆ ಸಾರ್ವಜನಿಕರನ್ನು ಮೂರ್ಖರನ್ನಾಗಿ ಮಾಡುವುದನ್ನು ನಿಲ್ಲಿಸುತ್ತೀರಿ.

ಈಗ ಬದುಕು ಸಾವಿನ ನಿಜವಾದ ಬಿಕ್ಕಟ್ಟಿಗೆ ಬರೋಣ. ನಾವು ಶಾಲಾ ದಿನಗಳಲ್ಲಿ ಕಲಿತದ್ದನ್ನು ನೆನಪಿಸಿಕೊಳ್ಳೋಣ. ಸಾಕ್ರೆಟಿಸ್ ಜಗತ್ತು ಕಂಡ ಅತ್ಯಂತ ಬುದ್ಧಿವಂತ ಚಾರಿತ್ರಿಕ ವ್ಯಕ್ತಿ. ಅವನನ್ನು ಗಮನಿಸಿದರೆ ಅಲ್ಪಸ್ವಲ್ಪ ಭರವಸೆ ಮೂಡಬಹುದು, ಒಂದು ಪರಿಹಾರ ಸಿಗಬಹುದು. ತನಗೆ ಗೊತ್ತಿಲ್ಲದಿರುವುದನ್ನು ಗೊತ್ತಿಲ್ಲ ಎಂದು ಒಪ್ಪಿಕೊಳ್ಳುವುದಕ್ಕೆ ಯಾವುದೇ ಅಳಕು ಅವನಿಗಿರಲಿಲ್ಲ. ಹೀಗೆ ಅಜ್ಞಾನವನ್ನು ಒಪ್ಪಿಕೊಳ್ಳುವುದಕ್ಕೆ ಅವನಿಗೆ ಸಾಧ್ಯವಾದದ್ದರಿಂದಲೇ ಅವನಿಗೆ ಸುಳ್ಳನ್ನು ಪ್ರತಿಪಾದಿಸುವವರನ್ನು ಪ್ರಶ್ನಿಸುವುದಕ್ಕೆ ಅದಮ್ಯ ಸ್ಥೆöÊರ್ಯ ಮತ್ತು ಸಾಮರ್ಥ್ಯ ಸಾಧ್ಯವಾಯಿತು.

ನೋಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತçಜ್ಞ ರಿಚರ್ಡ್ ಫೇನ್‌ಮನ್ ಅವರ ಮಾತು ಇಲ್ಲಿ ಉಲ್ಲೇಖನೀಯ:

“ವಿಜ್ಞಾನಿಗಳಿಗೆ ಅಜ್ಞಾನ, ಅನುಮಾನ ಮತ್ತು ಅನಿಶ್ಚಿತತೆಗೆ ಸಂಬಂಧಿಸಿದಂತೆ ಅಪಾರ ಅನುಭವವಿದೆ. ಇದು ತುಂಬಾ ಮುಖ್ಯವಾದ ಅನುಭವ. ವಿಜ್ಞಾನದ ಬೆಳವಣಿಗೆ ಪ್ರಾರಂಭವಾದ ಶುರುವಿನಲ್ಲಿ ಪ್ರಮಾಣಗ್ರಂಥಗಳ ವಿರುದ್ಧ ಹೋರಾಡಬೇಕಾಯಿತು. ನಮಗೆ ಪ್ರಶ್ನಿಸಲು, ಅನುಮಾನಿಸಲು ಅವಕಾಶ ಬೇಕಿತ್ತು. ಹಾಗೆಯೇ ಎಲ್ಲಾ ವಿಷಯದಲ್ಲೂ ಸ್ಪಷ್ಟತೆ ಇರಲೇ ಬೇಕೆಂದೇನಿಲ್ಲ. ಅನಿಶ್ಚಿತತೆಯಿಂದ ಇರುವುದಕ್ಕೂ ಅವಕಾಶವಿರಬೇಕು. ಇವೆಲ್ಲಕ್ಕೂ ಒತ್ತಾಯಿಸುವುದು ಆ ಹೋರಾಟದ ಉದ್ದೇಶವಾಗಿತ್ತು. ಅದು ತುಂಬಾ ಬಲವಾದ, ಗಂಭೀರ ಹೋರಾಟ. ನಮಗೆ ಯಾವುದನ್ನಾಗಲಿ ಪ್ರಶ್ನಿಸುವ ಸ್ವಾತಂತ್ರ÷್ಯ ದಕ್ಕಿದ್ದು ಈ ಹೋರಾಟದಿಂದ. ಇದೇನು ಹೊಸ ಚಿಂತನೆಯಲ್ಲ. ಇದು ವೈಚಾರಿಕ ಯುಗದ ಚಿಂತನೆ. ಇಂದು ನಮ್ಮ ಬದುಕಿನ ಭಾಗವಾಗಿರುವ ಪ್ರಜಾಪ್ರಭುತ್ವವನ್ನು ರೂಪಿಸಿದ ಚಿಂತಕರಿಗೆ ಮಾರ್ಗದರ್ಶನ ನೀಡಿದ್ದೇ ಈ ದರ್ಶನ.

ಯಾರಿಗೂ ಸರಕಾರವನ್ನು ನಡೆಸುವುದಕ್ಕೆ ಗೊತ್ತಿಲ್ಲ ಅನ್ನುವ ಚಿಂತನೆಯೇ ಬೇರೆ ರೀತಿಯಲ್ಲಿ ಸಂಯೋಜಿಸಿರುವ ಒಂದು ವ್ಯವಸ್ಥೆಯನ್ನು ರೂಪಿಸಬೇಕು ಎಂಬ ಅಲೋಚನೆಗೆ ಎಡೆಮಾಡಿಕೊಟ್ಟಿತು. ಈ ವ್ಯವಸ್ಥೆಯಲ್ಲಿ ಹೊಸವಿಚಾರಗಳನ್ನು ಸೃಷ್ಟಿಸುವುದಕ್ಕೆ, ಅವುಗಳನ್ನು ಪ್ರಯೋಗಿಸಿ ನೋಡಲು ಮತ್ತು ಅನಿವಾರ್ಯವಾದಲ್ಲಿ ಕಿತ್ತೆಸೆಯುವುದಕ್ಕೂ ಅವಕಾಶ ಇರಬೇಕು. ನಿಗೂಢವಾಗಿರುವ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವುದಕ್ಕೆ ಅನುಮಾನ ಹಾಗೂ ಚರ್ಚೆ ತುಂಬಾ ಅವಶ್ಯಕ. ಈವರೆಗೂ ಪರಿಹರಿಸದೇ ಇರುವ ಸಮಸ್ಯೆಗಳನ್ನು ಪರಿಹರಿಸಬೇಕಾದರೆ ನಾವು ಅಜ್ಞಾತವಾದದ್ದಕ್ಕೆ ಬಾಗಿಲನ್ನು ಸ್ವಲ್ಪವಾದರೂ ತೆರೆದಿಟ್ಟಿರಬೇಕು”.

ಹಿಂದೆಂದೂ ಇಂತಹ ಬಿಕ್ಕಟ್ಟು ಆಗಿರಲಿಲ್ಲ. ಇದನ್ನು ಹೇಗೆ ನಿರ್ವಹಿಸಬೇಕು ಅನ್ನುವ ಪಾಠವನ್ನು ಚರಿತ್ರೆಯಿಂದ ಕಲಿಯುವುದಕ್ಕೆ ಸಾಧ್ಯವಿಲ್ಲ. ಇದನ್ನು ಹಲವು ಮನಸ್ಸುಗಳು ಹಾಗೂ ಪ್ರಯತ್ನಗಳು ಒಟ್ಟಿಗೆ ಸೇರಿಕೊಂಡು ಶ್ರಮಿಸುವ ಮೂಲಕ ನಿರ್ವಹಿಸಬೇಕು. ಕೇವಲ ಒಳ್ಳೆಯ ಉದ್ದೇಶಗಳು ಮತ್ತು ಅಂತಃಸ್ಫೂರ್ತಿಯಿಂದ ಸಾಧ್ಯವಾಗುವುದಿಲ್ಲ. ಹಾಗಾಗಿ ನಮ್ಮ ರಾಜಕೀಯ ನಾಯಕರು ತಮಗೆ ಗೊತ್ತಿಲ್ಲ ಅನ್ನುವುದನ್ನು ವಿನಯದಿಂದ ಒಪ್ಪಿಕೊಂಡರೆ, ಇನ್ನೂ ಹೆಚ್ಚು ಸಮಯವನ್ನು ವ್ಯರ್ಥಮಾಡದೆ, ಮುಂದಿನ ಹಾದಿಯನ್ನು ಕಂಡುಕೊಳ್ಳುವುದಕ್ಕೆ ಜಗತ್ತಿನ ಎಲ್ಲಾ ಕಡೆಯಿಂದ ಭಾರತದ ಅತ್ಯುತ್ತಮ ಮೇಧಾವಿಗಳನ್ನು ಒಟ್ಟಿಗೆ ಕಲೆಹಾಕಬೇಕು.

ಹೀಗೆ ಈ ವಿಜ್ಞಾನಿಗಳು, ಸಾಂಕ್ರಾಮಿಕ ರೋಗಶಾಸ್ತçಜ್ಞರು, ವೈದ್ಯರು, ಅರ್ಥಶಾಸ್ತಜ್ಞರು ಮತ್ತು ಸಮಾಜ ವಿಜ್ಞಾನಿಗಳು ಒಂದೆಡೆ ಸೇರಿದರೆ ನಿಗೂಢವಾಗಿರುವ ಈ ಭೀತಿಯನ್ನು ಎದುರಿಸುವುದಕ್ಕೆ, ನಮ್ಮ ಜೀವ ಹಾಗೂ ಜೀವನವನ್ನು ಉಳಿಸಿಕೊಳ್ಳುವುದಕ್ಕೆ ಉತ್ತರ ಹುಟ್ಟಿಕೊಳ್ಳುತ್ತದೆ. ಋಗ್ವೇದ ಹೇಳುವಂತೆ “ಉನ್ನತ ಚಿಂತನೆಗಳು ಎಲ್ಲಾ ಕಡೆಯಿಂದಲೂ ಹರಿದು ಬರಲಿ.”

*ಲೇಖಕರು ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್; ಖ್ಯಾತ ಉದ್ಯಮಿ, ಏರ್ ಡೆಕ್ಕನ್ ಸಂಸ್ಥಾಪಕರು. ಅವರ ಜೀವನ ಚರಿತ್ರೆ ‘ಸಿಂಪ್ಲಿ ಫ್ಲೈ’ ಬಹು ಜನಪ್ರಿಯ ಕೃತಿ, ಮಂಡ್ಯ ಜಿಲ್ಲೆಯ ಮೇಲುಕೋಟೆ ಹುಟ್ಟೂರು, ಬಾಲ್ಯ ಕಳೆದದ್ದು ಹಾಸನದ ಗೊರೂರಿನಲ್ಲಿ.

ಮೂಲ: ಡೆಕ್ಕನ್ ಹೆರಾಲ್ಡ್

ಅನುವಾದ: ಟಿ.ಎಸ್.ವೇಣುಗೋಪಾಲ್ ಹಾಗೂ ಶೈಲಜ

Leave a Reply

Your email address will not be published.