ಅಡಿಗರಿಗೆ ಗುಣಾತ್ಮಕ ಕಾವ್ಯನ್ಯಾಯ ಸಲ್ಲಿಸುವ ನೈಮಿತ್ತಿಕ

ಪ್ರೊ.ಎನ್.ಬೋರಲಿಂಗಯ್ಯನವರು ಕುವೆಂಪು ಮತ್ತು ಅಡಿಗರನ್ನು ಎದುರು ಬದರಾಗಿ ನಿಲ್ಲಿಸಿ ಹೇಳುವ ಸತ್ಯವಾಕ್‍ವೊಂದಿದೆ ಇಲ್ಲಿ. ಅದೆಂದರೆ ಆರ್ಷೇಯ ಪರ ದೃಷ್ಟಿಯ ಅಡಿಗರಿಗೆ ಪಶ್ಚಿಮದಿಂದ ಆಗಿರುವ ಲಾಭ ಸಾಹಿತ್ಯಕವಾದದ್ದು ಮಾತ್ರ. ಸಾಂಸ್ಕೃತಿಕವಾದುದಲ್ಲ.

ಪ್ರೊ.ಶಿವರಾಮಯ್ಯ

ಪ್ರೊ.ಎನ್.ಬೋರಲಿಂಗಯ್ಯನವರು ಕನ್ನಡ ಸಾಹಿತ್ಯ ವಿಮರ್ಶನ ಕ್ಷೇತ್ರದ ಹಿರಿಯ ತಲೆಮಾರಿನ ಒಬ್ಬ ನಿಷ್ಠುರ ವಿಮರ್ಶಕರು. ಕುವೆಂಪು, ಬೇಂದ್ರೆ, ಅಡಿಗ ಮುಂತಾದ ದೊಡ್ಡ ಕವಿಗಳ ಬಗ್ಗೆ ಇವರು ಆಗಾಗ ಆಡಿರುವ ಮಾತುಗಳು ಆಯಾ ಕವಿಗಳ ಕಾವ್ಯ ಪ್ರವೇಶಕ್ಕೆ ಎಳೆಯರಿಗೆ ದಾರಿದೀಪಗಳಾಗಿವೆ. ಪ್ರಸ್ತುತ 98 ಪುಟಗಳ ‘ನೈಮಿತ್ತಿಕ’ ಎಂಬೀಕೃತಿಯಲ್ಲಿ ನವ್ಯ ಕಾವ್ಯದ ಏಕಮಾತ್ರ ಬಹುದೊಡ್ಡ ಕವಿ ಎಮ್.ಗೋಪಾಲಕೃಷ್ಣ ಅಡಿಗರ ಏಳು ಕವನಗಳನ್ನು ಕುರಿತು ಅವರ ನೂರಾಒಂದನೆಯ ವರ್ಷಾಚರಣೆಯ (2019) ಸವಿನೆನಪಿನಲ್ಲಿ ಅವಲೋಕನಕ್ಕೆ ತೆಗೆದುಕೊಂಡಿದ್ದಾರೆ.

ಕವಿಕಾವ್ಯವನ್ನು ಕುರಿತ ಹೊಗಳಿಕೆ ತೆಗಳಿಕೆಗಳೆಲ್ಲ ಕೇವಲ ‘ನೈಮಿತ್ತಿಕ’ ಎಂದರೆ ‘ಸಾಮಯಿಕ, ಸಾಂದರ್ಭಿಕ, ಖಂಡಿತ ಶಾಶ್ವತವಲ್ಲ’ ಎಂಬ ಎಚ್ಚರದಿಂದ ಪ್ರೊ.ಎನ್.ಬಿ. ಯವರು ‘ಶಾಶ್ವತ ಅಂದರೆ ನಮ್ಮ ಕಣ್ಣೆದುರಿಗಿರುವ ಗೋಪಾಲಕೃಷ್ಣ ಅಡಿಗರ ಪ್ರಾರ್ಥನೆ ಮಾತ್ರ’ ಎಂದು ಆ ಕುರಿತು ಬರೆಯಲು ತೊಡಗುತ್ತಾರೆ.

‘ನೈಮಿತ್ತಿಕ’ ದಲ್ಲಿ ಅವಲೋಕನಕ್ಕೆ ಒಳಗಾಗಿರುವ ಕವನಗಳೆಂದರೆ ಪ್ರಾರ್ಥನೆ, ಕೂಪಮಂಡೂಕ, ಒಳ್ಳೆತನ ಸಹಜವೇನಲ್ಲ, ಕೆಂದಾವರೆ, ಭೂತ, ವರ್ಧಮಾನ, ಚಿಂತಾಮಣಿಯಲ್ಲಿ ಕಂಡ ಮುಖ -ಈ ಏಳು ಮಾತ್ರ.

ಮೊದಲಿಗೆ ಎನ್.ಬಿ. ಯವರು ಇಲ್ಲಿ ಎತ್ತಿಕೊಳ್ಳುವ ಪ್ರಶ್ನೆ ಎಂದರೆ ‘ಪ್ರಾರ್ಥನೆ’ ಕವನದ ನಾಯಕ ಯಾರು? ಎಂಬುದು. ‘ಪ್ರಾರ್ಥನೆ’ ಎಂಬ ಈ ಕವನ ಅಡಿಗರ ಭೂಮಿಗೀತ (1959) ಸಂಕಲನದಲ್ಲಿದೆ. ಈಗ್ಗೆ ಅರವತ್ತು ವರ್ಷಗಳ ಪರ್ಯಂತ ಅನೇಕ ವಿಚಾರ ವಿಮರ್ಶಕರು ‘ಪ್ರಾರ್ಥನೆ’ ಕುರಿತು ವ್ಯಾಖ್ಯಾನ, ವಿಮರ್ಶೆಗಳನ್ನು ಮಾಡುತ್ತಾ ಬಂದಿದ್ದಾರೆ. ಅವರೆಲ್ಲರೂ ಮನುಷ್ಯ (ಪ್ರಾಣಿ) ಜೀವನದ ಸಹಜ ಪ್ರವೃತ್ತಿಗಳಾದ ಭಯ-ಆಹಾರ-ರತಿ ಈ ಮೂರರ ಬಗ್ಗೆ ಈ ಕವನ ಹೇಳುತ್ತದೆ ಎಂದಿದ್ದಾರೆ. ಆದರೆ ಅವರ್ಯಾರೂ ಗಂಭೀರವಾಗಿ ಗಮನಿಸದಿರುವ ಒಂದೆರಡು ವಿಚಾರಗಳನ್ನು ಕುರಿತು ಎನ್.ಬಿ. ಯವರು ಇಲ್ಲಿ ಪ್ರಸ್ತಾಪಿಸಿದ್ದಾರೆ.

ಈ ಕವನ ಆರಂಭವಾಗುವುದೇ ‘ಪ್ರಭೂ’ ಎಂಬ ಸಂಬೋಧನೆಯೊಡನೆ. ಕವಿಯೂ ಅಲ್ಲದ, ಸಹೃದಯನೂ ಅಲ್ಲದ ಈ ‘ಪ್ರಭೂ’ ಯಾರು? ತಮ್ಮ ಕಾವ್ಯ ವಿಸ್ತಾರದಲ್ಲಿ, ಧೀರತನವನ್ನೂ, ದಿಟ್ಟತನವನ್ನೂ ಎಲ್ಲಿಯೂ ಬಿಟ್ಟುಕೊಡದ ಅಡಿಗರು ‘ಪ್ರಭೂ’ ಎಂದು ಕರೆದಿರುವುದರ ಔಚಿತ್ಯವೇನು? ಈ ಪ್ರಶ್ನೆಗೆ ಉತ್ತರ ದೊರಕಿಸಿಕೊಂಡರೆ ಕವನವನ್ನು ಇನ್ನೂ ಹೆಚ್ಚು ನೇರ ನೇರ ಎದುರಾಗುವುದರ ಮೂಲಕ ಮತ್ತಷ್ಟು ಇಂಬು ದೊರೆಯುತ್ತದೇನೋ ಎಂಬುದು ಎನ್.ಬಿ. ಅವರ ಗ್ರಹಿಕೆ. ಅಂತೂ ಪ್ರಾರ್ಥನೆ ಕವನದ ‘ಪ್ರಭೂ’ ಯಾರಲ್ಲ. ಅವನು ಸೂರ್ಯನೇ ಎಂಬುದು ಚೆತೋಹಾರಿ ವಿಮರ್ಶೆ ಆಗಿದೆ.

ಈ ಗ್ರಹಿಕೆಯೊಂದಿಗೆ ಕವನವನ್ನು ಪ್ರವೇಶಿಸುವ ಲೇಖಕರು ಕವನ ಆರಂಭದ ಎಲ್ಲ ನಕಾರಾತ್ಮಕ ಕೋರಿಕೆಯ ಈ ಸಂಭೋಗ ಶೃಂಗಾರ ದೃಶ್ಯದಲ್ಲಿ ಈ ‘ಪ್ರಭೂ’ ಯಾರಿರಬಹುದೆಂದು ಊಹಿಸುವುದಕ್ಕೆ ಇವರಿಗೆ ಅಡಿಗರ ಬೇರೊಂದು ಕವನ ‘ಕೆಂದಾವರೆ’ಯ ಇಂಥದೇ ಒಂದು ಸಂಭೋಗ ದೃಶ್ಯ ನೆರವಿಗೆ ಬರುತ್ತದೆ. ಆ ಕವನದ ಗಂಧವತಿ-ಪುಷ್ಪವತಿ-ಫಲವತಿ ಈ ಮೂರು ಶೃಂಗಾರಾಶಯಗಳನ್ನು ಗಮನಿಸಿದರೆ, ‘ಕೆಂದಾವರೆ’ಯಲ್ಲಿ ಕ್ರಿಯಾಶೀಲನಾಗಿರುವುದು ‘ಸೂರ್ಯ’ ಎಂಬುದನ್ನು ನಿರ್ಣಯಿಸಿದ ಇವರು, ‘ಪ್ರಾರ್ಥನೆ’ ಯಲ್ಲಿ ‘ಪ್ರಭೂ’ ಎಂದು ಸಂಬೋಧಿಸಿರುವುದು ಈ ‘ಸೂರ್ಯ’ನನ್ನೇ ಎಂಬುದನ್ನು ಕೆಲವು ಸಾಧಾರಗಳ ಮೂಲಕ ಅನುಮಾನಕ್ಕೆಡೆಯಿಲ್ಲದಂತೆ ಸ್ಪಷ್ಟಪಡಿಸುತ್ತಾರೆ. ‘ಸ್ವಾಮಿ ದೇವನೆ ಲೋಕಪಾಲನೆ, ಜೀವ ಲೋಕವು ನಿನ್ನ ಈ ಬೆಳಕಿಂದ ಜೀವಿಪುದಲ್ಲವೈ’? ಎಂದು ನಮ್ಮ ಜನಪದರು ಸಂಬೋಧಿಸಿರುವುದೂ ಈ ಸೂರ್ಯನನ್ನೇ ಅಲ್ಲವೇ? ಇದಕ್ಕೆ ಪೂರಕವಾಗಿ ಅಡಿಗರ ಮತ್ತೊಂದು ಕವನ ‘ಸ್ವಾತಂತ್ರ್ಯ; 1958ರ ಪಾಠ’ ಎಂಬುದನ್ನೂ ಎನ್.ಬಿ. ಅವರು ಉದಾಹರಿಸುತ್ತಾರೆ.

ಅಡಿಗರ ಆಲೋಚನೆ ಮತ್ತು ಚಿಂತನ ಕ್ರಮಗಳನ್ನು ಒಟ್ಟಾರೆಯಾಗಿ ನಿರ್ಣಯಿಸುವಲ್ಲಿ ಸುವಿಖ್ಯಾತ ಕವನ ‘ಪ್ರಾರ್ಥನೆ’ ನೆರವಿಗೆ ಬರುತ್ತದೆ.

ಅಡಿಗರ ಕಾವ್ಯ ವಿಸ್ತಾರದಲ್ಲಿ ಸುಮಾರು 236ಕ್ಕೂ ಹೆಚ್ಚು ಕವನಗಳಿವೆ. [ನೋಡಿ: ಅಡಿಗರ ಸಮಗ್ರ ಕಾವ್ಯ, ಐ.ಬಿ.ಎಚ್. ಪ್ರಕಾಶನ. 1987] ಭೂಮಿ ಮತ್ತು ಸೂರ್ಯ ಸಂಬಂಧ ಕುರಿತ ಸಂಕೇತ, ಪ್ರತೀಕ ಮತ್ತು ಪ್ರತಿಮೆಗಳು ನೂರಾರು ಸಂಖ್ಯೆಯಲ್ಲಿ ದೊರೆಯುತ್ತವೆ. ಅಡಿಗರ ಆಲೋಚನೆ ಮತ್ತು ಚಿಂತನ ಕ್ರಮಗಳನ್ನು ಒಟ್ಟಾರೆಯಾಗಿ ನಿರ್ಣಯಿಸುವಲ್ಲಿ ಸುವಿಖ್ಯಾತ ಕವನ ‘ಪ್ರಾರ್ಥನೆ’ ನೆರವಿಗೆ ಬರುತ್ತದೆ. ಆದ್ದರಿಂದಲೇ ಇದು ಅಡಿಗರ ಸೃಜನಶೀಲತೆಯ ಪ್ರಣಾಳಿಕೆಯಂತೆ ಕಂಡಿರಬಹುದೆಂದು ಈ ಲೇಖಕರು ಊಹಿಸುತ್ತಿರುವುದು ಸಮಂಜಸವಾಗಿಯೆ ಕಾಣುತ್ತದೆ.

ಪ್ರಾರ್ಥನೆ ಕವನದ ಕೇಂದ್ರ ‘ಆತ್ಮರತಿಸುಖ’ ಅಥವಾ ‘ಮೇಲು ಮಾಳಿಗೆಯ ಕಿರು ಕೋಣೆಯ ಮೈಮರೆವು -ಸಹಸ್ರಾರ’ ಈ ಕವನದಲ್ಲಿ ಅಡಿಗರು ಎರಡಿದ್ದದೊಂದಾಗುತ್ತಿರುವುದನ್ನು ಗುರುತಿಸುತ್ತಾರೆ; ಮತ್ತು ಒಂದಿದ್ದಿದುದೊಂದಾಗುತ್ತಿರುವುದನ್ನೂ ಕಾಣುತ್ತಿದ್ದಾರೆ. ‘ಊಧ್ರ್ವರೇತಸ್ಯನಾಗೊಬ್ಬಂಟಿ ಮೇಲು ಮಾಳಿಗೆಯ ಕಿರುಕೋಣೆಯಲ್ಲಿ ಮೈಮರೆಸುವ ರತಿಸುಖ’ ಇದು. ಕವನದ ಮೊದಲಿನ ಎಲ್ಲ ಉದಾಹರಣೆಗಳಲ್ಲಿ ರೇತಸ್ಸು (ಸೂರ್ಯಶಕ್ತಿ) ಕೆಳಮೊಗವಾಗಿ ಚಲಿಸಿದರೆ ಕವನದ ಕೊನೆಯಲ್ಲಿ ಮಾತ್ರ ಮೇಲ್ಮೊಗವಾಗಿ ಚಲಿಸುತ್ತದೆ. [ಯೌಗಿಕ ಪರಿಭಾಷೆಯಲ್ಲಿ ಹೇಳುವುದಾದರೆ] ‘ಅದರ ಗುರಿ ನಾಭಿ ಹೃದಯಾದಿ ನಾಲ್ಕು ಘಟ್ಟಗಳನ್ನೂ ದಾಟಿಕೊಂಡು ಮಿದುಳನ್ನು ತಲುಪುವುದು. ಅದೇ ಸಹಸ್ರಾರ ನೆಲೆವನೆ. ಅಲ್ಲಿಯೇ ಸಕಲ ಸೃಷ್ಟಿಯ ಅಗ್ನಿಕುಂಡ ಬೆಳಗುತ್ತಿರುವುದು.

‘ಇದು ಈ ಕವಿ ಈ ಕವನದ ಮೂಲಕ ಕಂಡರಿಸಿದ ದರ್ಶನ. ಆದ್ದರಿಂದ ಭೂಮಿಯ ಮೇಲಿನ ಮನುಷ್ಯ ತನ್ನ ತಲೆಯನ್ನು ಜೋಪಾನವಾಗಿ ಕಾಯ್ದುಕೊಳ್ಳಬೇಕಾಗಿದೆ. ಅದು ನಮ್ಮ ಎಲ್ಲ ಇಂದ್ರಿಯಗಳ ಆವಾಸಸ್ಥಾನ ಕೂಡ’ (ನೈಮಿತ್ತಿಕ ಪುಟ 32) ಎನ್ನುವ ಲೇಖಕರು, ‘ಪ್ರಾರ್ಥನೆ ಕವನ ಕುರಿತು ನಮ್ಮ ವಿಮರ್ಶಕರು ಢಾಳಾಗಿ ಗುರ್ತಿಸುವ ಭಯ-ಆಹಾರ-ರತಿಗೆ ಸಂಬಂಧಿಸಿದ ವಾಚ್ಯ ವಿಚಾರಗಳನ್ನೆಲ್ಲ ನೆಗೇಟ್ ಮಾಡಿಬಿಡುತ್ತಾರೆ ಮತ್ತು ಈವರೆಗಿನ ಇವರ ತಿಳಿವಳಿಕೆ ಒಬ್ಬ ಸಾಮಾನ್ಯಮಟ್ಟದ ಆಯುರ್ವೇದ ವೈದ್ಯ (ಅಳಲೆಕಾಯಿ ಪಂಡಿತ) ಹೇಳಿಕೊಡಬಹುದಾದ ಪಾಠದಂತಿದೆ’ ಎಂದು ಷರಾ ಬರೆಯುತ್ತಾರೆ.

ಅಡಿಗರ ‘ಸಂಕ್ರಾಂತಿ ಸೂರ್ಯ’ ಎಂಬ ಇನ್ನೊಂದು ಕವನದ ಸಂದರ್ಭದಲ್ಲೂ ಸಹ ಸೂರ್ಯನನ್ನು ಮನುಷ್ಯ ಸಂಬಂಧವಾಗಿಯೇ ಕವಿ ಅರ್ಥೈಸಿಕೊಳ್ಳುತ್ತಿರುವುದನ್ನು ಗಮನಿಸಿ, ಊಧ್ರ್ವಾಭಿವ್ಯಕ್ತಿಯೇ ಮಾನವತೆಯ ಮುಖ್ಯಲಕ್ಷಣ ಎಂಬುದು ಅಡಿಗರ ಸ್ಪಷ್ಟ ನಿಲುವು ಎಂದು ಸ್ಪಷ್ಟಪಡಿಸುತ್ತಾರೆ.

ಶುದ್ಧವಾದ, ಸುಸಂಸ್ಕೃತವಾದ, ವಾಸ್ತವವಾದ ಅನುಭವಗಳಿಂದ ಕೂಡಿದ ಸರ್ವಾಂಗೀಣ ಆರೋಗ್ಯದಾಯಿಕ ಸಾಹಿತ್ಯ ಸಂಸ್ಕೃತಿ ನಿರ್ಮಾಣದ ಜರೂರಿನ ಅಗತ್ಯವನ್ನು ಕುರಿತು ಇಲ್ಲಿ ಪ್ರಾರ್ಥಿಸಲಾಗಿದೆ. ಯಾಕೆಂದರೆ ಭೂಮಿ ಮತ್ತು ಸೂರ್ಯರ ನಡುವಣ ಸಂಬಂಧ ಅವಿನಾವಾದದ್ದು -ಎಂದು ಮುಂದುವರಿದ ಎನ್.ಬಿ. ಅವರು ಅಡಿಗರ ‘ಸಂಕ್ರಾಂತಿ ಸೂರ್ಯ’ ಎಂಬ ಇನ್ನೊಂದು ಕವನದ ಸಂದರ್ಭದಲ್ಲೂ ಸಹ ಸೂರ್ಯನನ್ನು ಮನುಷ್ಯ ಸಂಬಂಧವಾಗಿಯೇ ಕವಿ ಅರ್ಥೈಸಿಕೊಳ್ಳುತ್ತಿರುವುದನ್ನು ಗಮನಿಸಿ, ಊಧ್ರ್ವಾಭಿವ್ಯಕ್ತಿಯೇ ಮಾನವತೆಯ ಮುಖ್ಯಲಕ್ಷಣ ಎಂಬುದು ಅಡಿಗರ ಸ್ಪಷ್ಟ ನಿಲುವು ಎಂದು ಸ್ಪಷ್ಟಪಡಿಸುತ್ತಾರೆ.

ಹೀಗೆ ಪ್ರೊ.ಎನ್.ಬೋರಲಿಂಗಯ್ಯನವರು ‘ಪ್ರಾರ್ಥನೆ’ ಕವನದ ಆರಂಭದಲ್ಲಿ ‘ಪ್ರಭೂ’ ಎಂದು ಕವಿ ಸಂಬೋಧಿಸಿರುವುದು ಕವಿಯನ್ನೂ ಅಲ್ಲ, ಸಹೃದಯನನ್ನೂ ಅಲ್ಲ, ಈ ‘ಪ್ರಭೂ’ ಸೂರ್ಯನೇ ಎಂದು ಸಾದರಪಡಿಸುತ್ತಿರುವ ಅವರ ವಿವೇಚನಾ ಪ್ರಜ್ಞೆಗೆ ಸರಿಸಾಟಿಯಿಲ್ಲ ಎಂದೆನಿಸುತ್ತದೆ.

ಅದಕ್ಕೆ ಮತ್ತೊಂದು ಪೂರಕವಾಗಿ ಅಡಿಗರ ‘ಕೂಪ ಮಂಡೂಕ’ ಎಂಬ ಇನ್ನೊಂದು ಕವನವನ್ನು ತೆಗೆದುಕೊಂಡು ವಿಶ್ಲೇಷಣೆಗೆ ಗುರಿಪಡಿಸುತ್ತಾರೆ. ವಿಜ್ಞಾನದ ವಿದ್ಯಾರ್ಥಿಯಾದ ಎನ್.ಬಿ. ‘ಕೂಪ ಮಂಡೂಕ’ ಕವನವನ್ನು ವೈಜ್ಞಾನಿಕ ಸತ್ಯದ ನೆಲೆಯಲ್ಲಿ ವಿವರಿಸುತ್ತಾ ಈ ಕಾವ್ಯಕೃತಿಯಲ್ಲಿ ಸೂರ್ಯ ಮತ್ತು ಭೂಮಿ ಇವುಗಳ ಸಂಬಂಧ ಹೇಗೆ ಸಮೀಕರಣಗೊಂಡು ಸಾಹಿತ್ಯ ರೂಪ ತಾಳುತ್ತಿದೆ ಎಂಬುದನ್ನು ಕಾಣುತ್ತಾರೆ. ಸೂರ್ಯಮಂಡಲದಲ್ಲಿ ಮಧ್ಯಮ ಗಾತ್ರದ ಭೂಮಿಯ ವಯಸ್ಸು, 2500 ಕೋಟಿ ವರ್ಷ, ಭೂಮಿಯ ಶಾಖ ತಣಿದು, ಮೋಡಕವಿದು ಮಳೆ ಸುರಿದು, ಸಮುದ್ರ ಕಟ್ಟೆಗಳು ನಿರ್ಮಾಣಗೊಂಡು ಭೂಮಿಯ ಮುಕ್ಕಾಲು ಭಾಗವನ್ನೂ ಆ ನೀರು ಮುಳುಗಿಸಿ ಬರಿಯ ಕಾಲು ಭಾಗವಷ್ಟೆ ಕಪ್ಪೆಯಂತೆ ಕತ್ತೆತ್ತಿ ನಿಂತು ‘ಕೂಪ ಮಂಡೂಕ’ವಾಗಿಸುವುದಕ್ಕೆ ತೆಗೆದುಕೊಂಡ ಸಮಯ ಸುಮಾರು 250 ಕೋಟಿ ವರ್ಷ, ಅದು ಅಮೀಬೋದಯದ ಕಾಲಘಟ್ಟ. ಇದರೊಟ್ಟಿಗೆ ಸಾಂಸ್ಕೃತಿಕವಾದ ಷಡ್ದರ್ಶನಗಳ ಕಾಲ ಬುದ್ಧಪೂರ್ವ ಘಟ್ಟವನ್ನೂ ಸಮೀಕರಿಸಿಕೊಂಡು ‘ಕೂಪ ಮಂಡೂಕ’ವನ್ನು ಓದಿಕೊಂಡರೆ ಕವನದ ಸಾಕ್ಷಾತ್ಕಾರ ಅತಿಶಯವಾಗಬಲ್ಲದು.

ಪ್ರೊ.ಎನ್.ಬೋರಲಿಂಗಯ್ಯನವರು ಇಲ್ಲಿ ಹೇಳದೆ ಬಿಟ್ಟಿರುವ ಇನ್ನೊಂದು ಮಾತೆಂದರೆ ‘ಕೂಪ ಮಂಡೂಕ’ ಎಂದರೆ ಬಾವಿಯ ಕಪ್ಪೆ. ಅದು ವ್ಯಕ್ತಿಯಿಂದ ಆರಂಭಗೊಂಡು ಒಂದು ಸಮಾಜ, ಒಂದು ದೇಶ, ಒಂದು ಕೋಶ, ಒಂದು ರಾಜ್ಯ, ಒಂದು ರಾಷ್ಟ್ರ, ಒಂದು ಮತಧರ್ಮದವರೆಗೂ ವ್ಯಾಪಿಸುತ್ತಾ, ಹೀಗೆ ವ್ಯಂಗ್ಯಾರ್ಥದ ಪರಂಪರೆಯನ್ನೇ ಬಿಚ್ಚಿಡುತ್ತದೆ ಎಂಬುದು. ಅಡಿಗರ ‘ಕೂಪ ಮಂಡೂಕ’ ಕವನವನ್ನು ಎನ್.ಬಿ. ಯವರ ವಿಶ್ಲೇಷಣೆಯ ನೆರವಿನೊಂದಿಗೆ ಓದುತ್ತಿದ್ದರೆ ಕೂಪಮಂಡೂಕವು ಬೇರೆ ಏನೂ ಅಲ್ಲ, ಯಾರೂ ಅಲ್ಲ; ವಾಸ್ತವವಾಗಿ ಅದು ‘ಭೂಮಿ’ ಯೇ ಎಂಬ ಭೂಮಕಲ್ಪನೆ ಗರಿಗೆದರುತ್ತದೆ. ಅದರ ವಿಸ್ತಾರಕ್ಕೆ ಇಲ್ಲಿ ಸ್ಥಳವಿಲ್ಲ.

ಸಾಂಸ್ಕೃತಿಕವಾದುದಲ್ಲ. ಅದಕ್ಕೆ ಭೂತ, ಭೂಮಿಗೀತಗಳಂಥ ಕವನಗಳೇ ಸಾಕ್ಷಿ. ಕುವೆಂಪು ಅವರ ದೃಷ್ಟಿಯೂ ಆರ್ಷೇಯ ಪರವಾದುದೇ.

ಹೀಗೆಯೇ ಕೆಂದಾವರೆ, ಭೂತ, ವರ್ಧಮಾನ, ಚಿಂತಾಮಣಿಯಲ್ಲಿ ಕಂಡ ಮುಖ ಈ ಕವನಗಳನ್ನೂ ಕುರಿತು ಎನ್.ಬಿ. ಅವರು ವ್ಯಾಖ್ಯಾನಿಸಿರುವುದನ್ನು ಗಮನಿಸಿದರೆ ಇದುವರೆಗಿನ ಕನ್ನಡ ವಿಮರ್ಶೆ ‘ನಡೆದು ಬಂದ ದಾರಿಯ ಕಡೆ ತಿರುಗಿ ನೋಡಿ’ ಬೆಚ್ಚಿ ಬೀಳಬೇಕು. ಯಾಕೆಂದರೆ ಪ್ರಸ್ತುತ ಲೇಖಕರೇ ನಿರ್ವಚಿಸಿರುವಂತೆ ‘ವಿಮರ್ಶೆ ಸ್ಫಟಿಕದಂಥ ತತ್ವ್ತಜ್ಞಾನ ಮತ್ತು ಅದರದ್ದು ಬೆಳಕಿನ ಕಾರ್ಯ. ಸಮಕಾಲೀನ ಸಮಾಜಕ್ಕೆ ಬೇಕಾಗುವ ಸತ್ವವನ್ನು ಶೋಧಿಸುವುದು ವಿಮರ್ಶೆಯ ಮುಖ್ಯ ಕೈಂಕರ್ಯ. ವಾಸ್ತವವಾಗಿ ಅದೊಂದು ಸೃಷ್ಟಿಕ್ರಿಯೆ’ (ನೈಮಿತ್ತಿಕ, ಪುಟ-92) ಅಲ್ಲವೆ? ಆ ಕೈಂಕರ್ಯ ಇಲ್ಲಿ ನಡೆದಿದೆ.

ಕೊನೆಯದಾಗಿ, ಪ್ರೊ.ಎನ್.ಬೋರಲಿಂಗಯ್ಯನವರು ಕುವೆಂಪು ಮತ್ತು ಅಡಿಗರನ್ನು ಎದುರು ಬದರಾಗಿ ನಿಲ್ಲಿಸಿ ಹೇಳುವ ಸತ್ಯವಾಕ್‍ವೊಂದಿದೆ ಇಲ್ಲಿ. ಅದೆಂದರೆ ಆರ್ಷೇಯ ಪರ ದೃಷ್ಟಿಯ ಅಡಿಗರಿಗೆ ಪಶ್ಚಿಮದಿಂದ ಆಗಿರುವ ಲಾಭ ಸಾಹಿತ್ಯಕವಾದದ್ದು ಮಾತ್ರ. ಸಾಂಸ್ಕೃತಿಕವಾದುದಲ್ಲ. ಅದಕ್ಕೆ ಭೂತ, ಭೂಮಿಗೀತಗಳಂಥ ಕವನಗಳೇ ಸಾಕ್ಷಿ. ಕುವೆಂಪು ಅವರ ದೃಷ್ಟಿಯೂ ಆರ್ಷೇಯ ಪರವಾದುದೇ. ಆದರೆ ಅದು ತನ್ನ ಸಮಕಾಲೀನ ಬದುಕಿಗೊಂದುವಂಥ ಮತ್ತು ಆ ಬದುಕಿನ ಸಮಗ್ರ ವಿಕಾಸಕ್ಕೆ ಬೆನ್ನೆಲುಬಾಗುವಂಥ ಸಾರ್ವಜನಿಕ ಸತ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಮನು ಮುಂತಾದ ಅವೈಜ್ಞಾನಿಕ ಹಾಗೂ ಅವೈಚಾರಿಕ ಚಿಂತಕರಿಗೆ ಕುವೆಂಪು ಎಂದೂ ಮಣೆ ಹಾಕುವುದಿಲ್ಲ. ಪ್ರಾಕೃತಿ ದೃಷ್ಟಿಕೋನದ ಕುವೆಂಪು ಅವರಿಗೆ ಮಡಿ ಮೈಲಿಗೆಯ ಪಾಪಪುಣ್ಯದ ಪ್ರಶ್ನೆ ಎದುರಾಗುವುದಿಲ್ಲ. ದೇವಸ್ಥಾನಗಳಂತೆ ಮಠ ಮಾನ್ಯಗಳನ್ನೂ ಅವರು ಬಹಿಷ್ಕರಿಸಿದ್ದಾರೆ (ಅದೇ ಪುಟ-95).

ಪ್ರೊ.ಎನ್.ಬೋರಲಿಂಗಯ್ಯನವರು ಖಂಡಿತವಾಗಿ ಲೋಕ ವಿರೋಧಿ ಶರಣ ಆರಿಗಂಜುವವನಲ್ಲ ಎಂಬ ಧಾತು ದಾಷ್ಟ್ರ್ಯಯುಳ್ಳವರು. ಇವರ ‘ನೈಮಿತ್ತಿಕ’ದ ವಿಮರ್ಶೆಯನ್ನು ಅಡಿಗರಿದ್ದಾಗಲೇ ತಂದಿದ್ದರೆ ಅವರೂ ನೋಡಿ ಧನ್ಯಾತ್ಮರಾಗುತ್ತಿದ್ದರೇನೋ! ಅತ್ತ ನವ್ಯರ ಹೊಗಳಿಕೆಯಿಂದ ಇತ್ತ ನವೋದಯದವರ ತೆಗಳಿಕೆಯಿಂದ ಅಡಿಗರ ಕಾವ್ಯವನ್ನು ಬೇರ್ಪಡಿಸಿ ಗುಣಾತ್ಮಕ ಕಾವ್ಯ ನ್ಯಾಯ ಸಲ್ಲಿಸಿ, ಓದುಗರಿಗೆ ದಾರಿದೀಪವೆಂಬಂತೆ ಬರೆದ ಪ್ರೊ.ಎನ್.ಬಿ. ಅವರಿಗೆ ಧನ್ಯವಾದಗಳು ಸಲ್ಲಬೇಕು.

Leave a Reply

Your email address will not be published.