ಅಡಿಗ ಮತ್ತು ಅನಂತಮೂರ್ತಿ ಹಬ್ಬಿಸಿದ ಸಾಂಸ್ಕೃತಿಕ ಮಂಪರು!

ಸನಾತನಿಯಾದರೂ ಎಂ.ಗೋಪಾಲಕೃಷ್ಣ ಅಡಿಗರನ್ನು ನವ್ಯದ ನೇತಾರ ಎಂದು ಪ್ರತಿಷ್ಠಾಪಿಸುವುದರಲ್ಲಿ ವಿಮರ್ಶೆ ಹೆಸರಿನ ಒಂದು ದೊಡ್ಡ ಕಾರ್ಯಾಚರಣೆಯೇ ನಡೆಯಿತು. ಉದ್ದಕ್ಕೂ ಅಡಿಗರ ಜೊತೆ ನಿಂತು ಅವರ ಪೌರೋಹಿತ್ಯ ವಹಿಸಿದವರು ಅವರ ಪರಮ ಮಿತ್ರ ಯು.ಆರ್.ಅನಂತಮೂರ್ತಿ.

ಇತ್ತೀಚೆಗೆ, ಅಂದರೆ ಕಳೆದ ಎರಡು ವರ್ಷಗಳ ಕಾಲ, ಕವಿ ಎಂ.ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದಿ ಆಚರಣೆ ನಡೆಯಿತು. ಈ ಹಿನ್ನೆಲೆಯಲ್ಲಿ ಅನೇಕರು ಅವರ ಕಾವ್ಯದ ಬಗ್ಗೆ ಮಾತನಾಡಿದರು. ಹೀಗೆ ಕನ್ನಡ ಕವಿಯೊಬ್ಬರಿಗೆ ನೂರು ವರ್ಷ ತುಂಬಿದ್ದನ್ನು ನೆನಸಿಕೊಂಡದ್ದು ಸಹಜ ವಿದ್ಯಮಾನವೇ ಆಗಿತ್ತು. ಹಾಗೆ ಅಡಿಗರ ಬಗ್ಗೆ ಮಾತನಾಡಿದ ನೂರಾರು ಮಂದಿ ಬರಹಗಾರರ ವಿಡಿಯೋಗಳು ಈಗಲೂ ಯೂಟ್ಯೂಬ್ ನಲ್ಲಿ ಲಭ್ಯ. ಆದರೆ ಈ ವಿಡಿಯೋಗಳನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು. ಅವುಗಳಲ್ಲಿ ಅಡಿಗರ ಕುರಿತಾಗಿ ಅದೇ ಚರ್ವಿತಚರ್ವಣ ಬಿಟ್ಟರೆ ಯಾವ ಹೊಸ ಹೊಳಹುಗಳೂ ಇರಲಿಲ್ಲ.

ಇಂದು ನಾವು ಎದುರಿಸುತ್ತಿರುವ ಸಾಮಾಜಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಬಗ್ಗೆ  ಅಡಿಗರ ಕಾವ್ಯವನ್ನು ಮುಂದಿಟ್ಟುಕೊಂಡು ಯಾವ ಚರ್ಚೆಯೂ ನಡೆಯಲಿಲ್ಲ. ಇಂದಿಗೂ ನಮ್ಮನ್ನು ಕಾಡುತ್ತಿರುವ ಜಾತಿ ಮತ್ತು ವರ್ಣ ವ್ಯವಸ್ಥೆ ಮತ್ತು ಹೊಸದಾಗಿ ಕಾಣಿಸಿಕೊಂಡಿರುವ ಫ್ಯಾಸಿಸಂನ ಚಹರೆಗಳ ಬಗ್ಗೆ ಒಬ್ಬ ಲೇಖಕನೂ ಮಾತನಾಡಿದ್ದು ನನಗೆ ಕಂಡುಬರಲಿಲ್ಲ. ಅಡಿಗರ ಕೊನೆಯ ಕವನಗಳಲ್ಲಿ ಢಾಳಾಗಿ ಕಾಣಿಸುವ ಕೋಮುವಾದಿ ನಿಲುವಿನ ಬಗ್ಗೆ ಖಂಡನೆಯೂ ವ್ಯಕ್ತವಾಗಲಿಲ್ಲ. ಇದು ಅವರ ಕುರಿತು ಮಾತನಾಡಿದವರ ಮಿತಿ ಆಗಿರುವಂತೆಯೇ ಲೇಖಕನ ವಿಚಾರಧಾರೆ ಹಾಗೂ ಕಾವ್ಯದ ಮಿತಿಯೂ ಆಗಿ ನನಗೆ ಕಾಣಿಸಿತು. ಇದರಿಂದಾಗಿ ಅಡಿಗರ ಜನ್ಮಶತಾಬ್ದಿ ಆಚರಣೆ ಬರೀ ಅಹೋರಾತ್ರಿ ಅಡಿಗ ಭಜನೆಯಾಗಿ ಪರಿವರ್ತನೆಗೊಂಡಿದ್ದು ಒಂದು ತಮಾಷೆ.

ನವ್ಯ ಕಾವ್ಯ ನಿಜಕ್ಕೂ ನವೋದಯಕ್ಕೆ ಪರ್ಯಾಯವಾಗಿತ್ತೇ?

‘ನವೋದಯ ಕಾವ್ಯ ಜಾಡಿಗೆ ಬಿದ್ದಿತ್ತು. ಹೊಸದಾಗಿ ಏನನ್ನೂ ಹೇಳುವ ಶಕ್ತಿಯನ್ನು ಉಳಿಸಿಕೊಂಡಿರಲಿಲ್ಲ. ಆದರ್ಶವಾದಿ ನೆಲೆಯನ್ನು ತಲುಪಿತ್ತು. ಆದುದರಿಂದ ಅಡಿಗರು ಇದನ್ನೆಲ್ಲಾ ನಿರಾಕರಿಸಿ ಕನ್ನಡ ಕಾವ್ಯಕ್ಕೆ ಹೊಸತನ ತಂದರು’ ಈ ಮಾತುಗಳನ್ನು ನವ್ಯದ ವಕ್ತಾರರೆನಿಸಿಕೊಂಡಿರುವ ವಿಮರ್ಶಕರು ಪದೇಪದೇ ಹೇಳುತ್ತಾ ಬಂದಿದ್ದಾರೆ. ಇದರ ಸತ್ಯಾಸತ್ಯತೆಗಳೇನು?

ಅಡಿಗರ ಕಾವ್ಯ ನಿಜವಾದ ಅರ್ಥದಲ್ಲಿ ನವ್ಯ ಕಾವ್ಯವಾಗಿತ್ತೇ? ಆಧುನಿಕರಲ್ಲದ ಅಡಿಗರ ಕಾವ್ಯ ಆಧುನಿಕ ಕಾವ್ಯವಾಗಲು ಹೇಗೆ ಸಾಧ್ಯ? ಇನ್ನು ಅಡಿಗರು ಕನ್ನಡಕ್ಕೆ ತಂದ ಹೊಸತನವಾದರೂ ಏನು? ಸನಾತನ ಧರ್ಮವನ್ನು ಎತ್ತಿ ಹಿಡಿದ ಕನ್ನಡದ ಮೊತ್ತಮೊದಲ ಕವಿ ಎಂಬುದೇ? ‘ಈಡಿಪಸ್ಸಿನ ಗೂಢ ಪಾಪ ಲೇಪಿತ’ ಎಂಬ ವಿಕಾರವನ್ನು ಹೊತ್ತು ತಂದಿದ್ದೇ? ಸಾಲುಗಳನ್ನು ಒಡೆದು ಕಟ್ಟುವುದರಲ್ಲಿ ಬದಲಾವಣೆ ಮಾಡಿದ ಕೂಡಲೇ, ಹೊಸ ಪದಪುಂಜಗಳನ್ನು ತಂದು ಪೋಣಿಸಿದ ಕೂಡಲೇ ಆದು ಆಧುನಿಕ ಕಾವ್ಯವಾಗಿ ಬಿಡುತ್ತದೆಯೇ? ಅದರ ಹೂರಣವನ್ನೂ ನೋಡಬೇಕಲ್ಲವೇ?

ತಮ್ಮ ಕಾವ್ಯದಲ್ಲಿ ಅಡಿಗರು ಬಿಂಬಿಸಿದ್ದು ಜನರನ್ನು ಮೇಲು ಕೀಳು ಎಂದು ವಿಂಗಡಿಸಿದ ತಾರತಮ್ಯವನ್ನು. ಪರಂಪರೆಯ ಶ್ರೇಷ್ಠತೆಯನ್ನು ಸ್ಥಾಪಿಸಲು ಬಂಗಾರ ಶಿಖರ ಮುಂತಾದ ಸಂಕೇತಗಳ ಮೊರೆ ಹೋದವರು ಅವರು. ಮನುಷ್ಯ ಚೈತನ್ಯದ ಕುರಿತು ಅಪರಿಮಿತ ವಿಶ್ವಾಸ ಹೊಂದಿದ್ದ ಕಾವ್ಯವನ್ನು ಬರೆದ ಕುವೆಂಪು ಅವರನ್ನು ಎದುರಿಸಲು ಬೇಕಾದ ಯಾವ ಶಕ್ತಿಯಾಗಲೀ ಹೊಸ ಆಲೋಚನೆಗಳಾಗಲೀ ಅಡಿಗರಲ್ಲಿ ಇರಲೇ ಇಲ್ಲ. ಬ್ರಾಹ್ಮಣ ಮೌಲ್ಯಗಳನ್ನು ಮುಂಚೂಣಿಗೆ ತರಲು  ಸತತವಾಗಿ ಶ್ರಮಿಸಿದ್ದೊಂದೇ ಅವರ ಹೆಗ್ಗಳಿಕೆಯಾಗಿತ್ತು.

ಇಷ್ಟಿದ್ದೂ ಅನೇಕ ಶೂದ್ರ ಬರಹಗಾರರು ಅಡಿಗರನ್ನು ಕಣ್ಣು ಮುಚ್ಚಿ ಸಮರ್ಥಿಸುವ ಕುರುಡುತನಕ್ಕೆ ಇಳಿದದ್ದು ಏಕೆ? ಈ ಬಗೆಯ ಮಂಪರು ಅವರನ್ನು ಏಕೆ ಕವಿದುಕೊಂಡಿತು? ಯಾರು ಅವರಲ್ಲಿ ಈ ಅರಿವುಗೇಡಿತನವನ್ನು ಬಿತ್ತಿದವರು?

ಇದಕ್ಕೆಲ್ಲ ಒಂದು ದೊಡ್ಡ ಹಿನ್ನೆಲೆಯೇ ಇದೆ. ಸ್ಥೂಲವಾಗಿ ಇದನ್ನು ‘ಪೊಲಿಟಿಕ್ಸ್ ಅಫ್ ಪ್ರೊಜೆಕ್ಷನ್’ ಎನ್ನಬಹುದು. ಸನಾತನಿಯಾದರೂ ಅಡಿಗರನ್ನು ನವ್ಯದ ನೇತಾರ ಎಂದು ಪ್ರತಿಷ್ಠಾಪಿಸುವುದರಲ್ಲಿ ವಿಮರ್ಶೆಯ ಹೆಸರಿನಲ್ಲಿ ಒಂದು ದೊಡ್ಡ ಕಾರ್ಯಾಚರಣೆಯೇ ನಡೆದುಬಿಟ್ಟಿತು. ಇದರ ಮುಂದಾಳತ್ವ ವಹಿಸಿದ್ದು ಮೊದಲಿಗೆ ಸ್ವತಃ ಅಡಿಗರೇ. ಅಗತ್ಯಕ್ಕಿಂತ ಹೆಚ್ಚು ನವೋದಯದ ಬರಹಗಾರರನ್ನು ಅದರಲ್ಲೂ ಕುವೆಂಪು ಅವರನ್ನು ಅವರು ಟೀಕಿಸಿದರು. ಆ ಟೀಕೆಗಳಿಗೆ ಯಾವ ಬೆನ್ನೆಲುಬೂ ಇರಲಿಲ್ಲ. ಬಳಿಕ ಉದ್ದಕ್ಕೂ ಅಡಿಗರ ಜೊತೆ ನಿಂತು ಅವರ ಪೌರೋಹಿತ್ಯ ವಹಿಸಿದವರು ಅವರ ಪರಮ ಮಿತ್ರ ಯು.ಆರ್.ಅನಂತಮೂರ್ತಿ.

ಕುವೆAಪು ಬಗ್ಗೆ ಅನಂತಮೂರ್ತಿ ಆಡಿದ ಮಾತುಗಳಂತೂ ತನ್ನ ಓರಗೆಯ ಲೇಖಕನ ಬಗ್ಗೆ ಬರಹಗಾರನೊಬ್ಬ ತೋರಿದ ಇನ್ನಿಲ್ಲದ ಸಣ್ಣತದ ಏಕೈಕ ಉದಾಹರಣೆಯಾಗಿ ಇಂದು ನಮ್ಮ ಮುಂದಿದೆ.

ವಿಕಾಸದ ಹಾದಿಯಲ್ಲಿ ಮನುಷ್ಯ ಅನ್ನಮಯ ಕೋಶದಿಂದ ಆನಂದಮಯ ಕೋಶದತ್ತ ಬೆಳೆಯುವುದನ್ನು ಕಾಣಿಸಿದ ಕುವೆಂಪು ಅವರದು ಅಲೌಕಿಕತೆಯ ಕಡೆಗಿನ ಪ್ರಯಾಣ ಎನ್ನುವ ಅನಂತಮೂರ್ತಿ, ಅದನ್ನು ಅಡಿಗರು ತಮ್ಮ ಮಣ್ಣಿನ ವಾಸನೆಯ ಕಲ್ಪನೆಯ ಮೂಲಕ ಪೂರ್ತಿ ನಿರಾಕರಿಸಿದರು ಎನ್ನುತ್ತಾರೆ! ಆದರೆ ಯಾವ ರೂಪದಲ್ಲಿ ಮಣ್ಣಿನ ವಾಸನೆಯನ್ನು ಅಡಿಗರು ತನ್ನ ಕಾವ್ಯದಲ್ಲಿ ತಂದರು ಎನ್ನುವುದನ್ನು ಹೇಳುವುದಿಲ್ಲ. ಇದಕ್ಕೆ ವಿರುದ್ಧವಾಗಿ ನಾಗರಿಕತೆ, ಸಂಸ್ಕೃತಿ ಸಣ್ಣ ಮೈನಾರಿಟಿಯಲ್ಲಿ ಇರುತ್ತದೆ ಎಂದು ಹೇಳಿದ ಎಲಿಯಟ್ ನಂಬಿಕೆ ಅಡಿಗರದೂ ಆಗಿತ್ತು ಎನ್ನುವ ಮೂಲಕ ಅವರ ವ್ಯಕ್ತಿವಾದಿ ನಿಲುವನ್ನು ಎತ್ತಿಹಿಡಿಯತ್ತಾರೆ!

ಮುಂದೆ ಅನಂತಮೂರ್ತಿ ತೆಗೆದುಕೊಂಡಿದ್ದೆಲ್ಲ ಅಸಂಬದ್ಧ ನಿಲುವುಗಳೇ. ಅಡಿಗರದ್ದು ಮುಖ್ಯವಾಗಿ ಆರ್ಷದೃಷ್ಟಿಯಾದುದರಿಂದ ಅವರ ಕಾವ್ಯವನ್ನು ಅರ್ಥಮಾಡಿಕೊಳ್ಳಲು ನಮ್ಮ ಸಂಪ್ರದಾಯ ಅರ್ಥವಾಗಿರಲೇಬೇಕು ಎನ್ನುವ ಮೂಲಕ ಅಡಿಗರ ಕಾವ್ಯದ ಹೂರಣ ಬ್ರಾಹ್ಮಿನಿಕಲ್ ಎಂಬುದನ್ನು ಸ್ವತಃ ಅನಂತಮೂರ್ತಿಯವರೇ ತೆರೆದಿಟ್ಟದ್ದು ತಮಾಷೆಯಾಗಿದೆ. ‘ನಿಮ್ಮ ಕಾವ್ಯ ಓದಬೇಕಾದರೆ ನಿಮ್ಮ ಪುರಾಣ ಪ್ರತಿಮೆಗಳನ್ನೂ ಅರ್ಥಮಾಡಿಕೊಂಡಿರಬೇಕು ಎಂದಾದರೆ ಅದರ ಸಹವಾಸವೇ ನನಗೆ ಬೇಡ’ ಎಂದು ಪೂರ್ಣಚಂದ್ರ ತೇಜಸ್ವಿ ಹೇಳಿದ್ದು ಈ ಹಿನ್ನೆಲೆಯಲ್ಲಿಯೇ.

ಅಡಿಗರ ‘ಭೂಮಿಗೀತ’ದ ಬಗ್ಗೆ ಬರೆದ ಲೇಖನದ ಕೊನೆಯಲ್ಲಿ ಬೇಂದ್ರೆ ಹಾಗೂ ಅಡಿಗ ಮಾತ್ರ ಕನ್ನಡದ ಅತಿ ಶ್ರೇಷ್ಠ ಕವಿಗಳೆಂದು ನಾನು ತಿಳಿದಿದ್ದೇನೆ ಎಂಬ ತೀರ್ಪನ್ನು ನೀಡುವ ಪ್ರಯತ್ನವನ್ನೂ ಅನಂತಮೂರ್ತಿ ಮಾಡಿದ್ದಿದೆ. ಆಗಲೇ ‘ಶ್ರೀ ರಾಮಾಯಣ ದರ್ಶನಂ’ ಬರೆದಿದ್ದ ಕುವೆಂಪು ಅವರನ್ನು ಬದಿಗೊತ್ತುವ ಅಸಾಧ್ಯ ಅಸಹನೆ ಇಲ್ಲಿ ಎದ್ದು ಕಾಣುತ್ತದೆ. ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಕುರಿತ ಲೇಖನದಲ್ಲಿಯೂ ಅವರು ನೀಡಿರುವುದು ಇಂತಹ ಅಸಡ್ಡಾಳ ತೀರ್ಮಾನಗಳನ್ನೇ. ಆ ಮೂಲಕ ಅಡಿಗರನ್ನು ಕನ್ನಡದ ಅತಿಶ್ರೇಷ್ಠ ಬರಹಗಾರರೆಂದು ಪ್ರತಿಷ್ಠಾಪಿಸುವುದು ಆ ಕಲ್ಪನೆಯನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಅನಂತಮೂರ್ತಿ ಅವರ ಉದ್ದೇಶವಾಗಿತ್ತು.

ಕುವೆಂಪು ಬಗ್ಗೆ ಆಡಿದ ಮಾತುಗಳನ್ನು ಅನಂತಮೂರ್ತಿ ನಂತರ ಹಿಂದೆ ತೆಗೆದುಕೊಂಡಿದ್ದಾರೆ ಎಂದು ಕೆಲವು ಶೂದ್ರ ಲೇಖಕರು ವಾದಿಸಿದ್ದನ್ನು ಈಚೆಗೆ ನೋಡಿದೆ. ಇರಬಹುದು. ಆದರೆ ಈ ಶೂದ್ರ ಲೇಖಕರು 2016ರಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಉಪನ್ಯಾಸ ಮಾಲಿಕೆಯಡಿ ಅನಂತಮೂರ್ತಿ ಆಡಿದ ಮಾತುಗಳನ್ನು  ಗಮನಿಸಿದಂತಿಲ್ಲ- ‘ನೆಹರೂ ಮನೋವೃತ್ತಿ ಹೇಗೆ ಹಿಡಿಸಲಿಲ್ಲವೋ ಹಾಗೆಯೇ ಆದರ್ಶವಾದಿಯಾದ ಕುವೆಂಪು ಮನೋವೃತ್ತಿಯೂ ಅವರಿಗೆ ಹಿಡಿಸುತ್ತಿರಲಿಲ್ಲ. ಅದೂ ಮುಗಿಲೆತ್ತರಕ್ಕೆ ಕೈಚಾಚುವುದು, ಭೂಮಿಯ ಜೊತೆಗಿನ ಸಂಪರ್ಕವನ್ನು ಕಳೆದುಕೊಳ್ಳುವುದು. ಅದನ್ನು ಹೇಳುವುದರಿಂದ ಯಾರನ್ನಾದರೂ ಮೋಸಮಾಡಿಬಿಡಬಹುದು. ಆತ್ಮ ಮೋಸವೂ ಸಾಧ್ಯ’ ಇದು ಅನಂತಮೂರ್ತಿ ಮಾತು. ಸಾಯುವ ಒಂದು ವರ್ಷ ಮೊದಲು ಅವರು ಹೇಳಿದ ಮಾತು ಇದು.

ಯಾವುದು ಆದರ್ಶವಾದಿ ಕಲ್ಪನೆ? ಯಾವುದು ಆತ್ಮ ಮೋಸ?

ತನ್ನ ಕೊನೆಯ ಮುಖ್ಯ ಸಂದರ್ಶನದಲ್ಲಿ, ‘ಹಿಂದೂ ಧರ್ಮ ವಿಶ್ವ ಧರ್ಮ ಆಗಬೇಕಿದ್ದರೆ ವರ್ಣವ್ಯವಸ್ಥೆ, ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ವಿಸರ್ಜಿಸಿದರೆ ಮಾತ್ರ ಸಾಧ್ಯ… ಮೇಲುಕೀಳುಗಳ ಭೇದ ಅಳಿಯಬೇಕು. ವರ್ಣ, ಜಾತಿ, ವರ್ಗಗಳನ್ನು ಸೃಷ್ಟಿಸುವ ಮತ ಬೇಡ. ಮನುಷ್ಯನೇ ಕೇಂದ್ರವಾಗಿರುವ ಮನುಜಮತ ಸಾಕು’ ಎಂದ ಕುವೆಂಪು ಅವರದೇ ಅಥವಾ ‘ರಾಮಬಾಣದಂತೆ ಅಸಂದಿಗ್ಧ ಮತ್ತೆ ಮೊಳಗಲಿ ಇಲ್ಲಿ ಪಾಂಚಜನ್ಯ.. ಹಿಂದುತ್ವದ ಮಹಾ ಸಿಂಧು ಭೋರ್ಗರೆದು ಬೊಬ್ಬಿರಿದು ಗಡಿಬಿಡಿ ತೊಡೆದು ನುಗ್ಗಲೆಲ್ಲಾ ಕಡೆಗೂ ನಾಡಿನುದ್ದ, ಆಗುವುದೆಲ್ಲವೂ ಮತ್ತೆ ಪರಿಶುದ್ಧ.. ನಾವು ಕೈಯೆತ್ತಿದರೆ ಹತ್ತು ದಿಕ್ಕುಗಳು ನಡುಗಲೇಬೇಕು, ಒಂದೇಟು ಬಿದ್ದರೆ ಎರಡು, ಎರಡಕ್ಕೆ ನಾಲ್ಕು, ನಾಲ್ಕಕ್ಕೆ ಹದಿನಾರು, ಒಂದು ಹೆಣ ಬಿದ್ದರೆ ಅದಕ್ಕೆ ನೂರೊಂದು ಬೀಳಲೇಬೇಕು’ ಎಂದು ನೇರವಾಗಿ ಹಿಂದುತ್ವದ ಹಿಂಸೆಗೆ ಕರೆಕೊಟ್ಟ ಜನಸಂಘಿ ಮನೋಭಾವದ ಗೋಪಾಲಕೃಷ್ಣ ಅಡಿಗರದೇ? ಉತ್ತರ ಸ್ವಯಂ ಸ್ಪಷ್ಟ.

ಅಡಿಗರು ಹೀಗೆ ಕರೆ ಕೊಟ್ಟಿದ್ದು ಕವನದ ಹೆಸರಲ್ಲಿ. ಸಾವಿನ ಐದು ವರ್ಷ ಮೊದಲು, ಅಂದರೆ 1987ರಲ್ಲಿ. ‘ಮತ್ತೆ ಮೊಳಗಲಿ ಪಾಂಚಜನ್ಯ’ ಎಂಬ ಕಾವ್ಯದ ಹೆಸರಿನ ಅಸಂಬದ್ಧ ಘೋಷಣಾ ಪತ್ರದಲ್ಲಿ.

ಕೊನೆತನಕ ಕುವೆಂಪು ಎದುರು ಅಡಿಗರನ್ನು ಇಟ್ಟು ಆತ್ಮವಂಚನೆ ಮೆರೆದ ಬರಹಗಾರ ಅನಂತಮೂರ್ತಿ. ನಮ್ಮಲ್ಲಿ ಓದುವುದು ಅಂದರೆ, ಕೈಗೆ ಸಿಕ್ಕಿದ್ದನ್ನೆಲ್ಲ ಓದುವುದು ಎಂದಾಗಿಬಿಟ್ಟಿದೆ. ಲೇಖಕರ ಬಗ್ಗೆ ಕುರುಡು ವ್ಯಾಮೋಹ ಬೆಳೆಸಿಕೊಳ್ಳುವುದು ಎಂದಾಗಿಬಿಟ್ಟಿದೆ. ಇದರಿಂದಾಗಿ, ಅನಂತಮೂರ್ತಿ ಹೇಳಿದರೆಂಬ ಕಾರಣಕ್ಕೆ ಅವರು ಹೇಳಿದ್ದನ್ನೆಲ್ಲ ಒಪ್ಪಿಕೊಂಡುಬಿಡುವುದೂ ಅಡಿಗರನ್ನು ಸನಾತನತೆಯ ಜೊತೆಗೇ ಹೊತ್ತು ಮೆರೆಸುವುದೂ ಬರಬರುತ್ತಾ ಕನ್ನಡ ಲೇಖಕರಿಗೆ ರೂಢಿಯಾಗಿಬಿಟ್ಟಿತು. ಈ ಕಾರಣದಿಂದಾಗಿಯೇ ಅಡಿಗ, ಅನಂತಮೂರ್ತಿ ಆಡಿರುವ ಎಲ್ಲ ಮಾತುಗಳೂ ಯಾವ ಮರು ವಿಶ್ಲೇಷಣೆಗೂ ಒಳಪಡದೆ ಹೋದವು.

ಅದೇ ಸಂದರ್ಶನದಲ್ಲಿ ಅನಂತಮೂರ್ತಿ ಆಡಿದ ಮಾತುಗಳು ಇದಕ್ಕೊಂದು ಒಳ್ಳೆಯ ಉದಾಹರಣೆ- ‘ಕೊನೆಯಲ್ಲಿ ವ್ಯವಸ್ಥೆಯನ್ನು ಕಾಯುವುದಕ್ಕೆ ಫೋರ್ಸ್ ಉಪಯೋಗಿಸಬೇಕಾಗುತ್ತದೆ ಎಂಬ ಕನ್ಸರ್ವೇಟಿವ್ ನಿಲುವಿಗೆ ಅಡಿಗರು ಬಂದಿದ್ದರು. ಅವರು ಕನಸುಗಾರರಾಗಿರಲಿಲ್ಲ. ಪೊಲೀಸು ಮತ್ತೊಂದು ಯಾವುದೂ ಬೇಡ ಎನ್ನುವುದನ್ನು ಒಪ್ಪುವವರಾಗಿರಲಿಲ್ಲ’ ಇದು ಗೋಪಾಲಕೃಷ್ಣ ಅಡಿಗರ ಅಂತಿಮ ಕಾಣ್ಕೆ! ಜೀವನ ದೃಷ್ಟಿ!

ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವ, ‘ಶ್ರೀ ರಾಮನವಮಿಯ ದಿವಸ’ ಅನಂತಮೂರ್ತಿಯವರ ದೃಷ್ಟಿಯಲ್ಲಿ ಅಡಿಗರ ಶ್ರೇಷ್ಠ ಕವಿತೆಗಳಲ್ಲಿ ಒಂದು! ಮುಂದೆ ಇದನ್ನು ಎಲ್ಲರೂ ಮರುಮಾತಿಲ್ಲದೆ ಒಪ್ಪಿದವರೇ ಅಲ್ಲವೇ?

 

ನವೋದಯವನ್ನು ವಿರೋಧಿಸಿ ನವ್ಯ ಎಂದು ತಮ್ಮನ್ನು ತಾವೇ ಕರೆದುಕೊಂಡ, ಹಿಂದುತ್ವದ ಹಿಂದೆ ಬಿದ್ದು ಕನ್ನಡದ ಶೇಷ್ಠ ಮೌಲ್ಯಗಳನ್ನು ತಿರಸ್ಕರಿಸಿದ ಅಡಿಗರದು ಜಾರುವ ದಾರಿ. ಒಂದು ಮಟ್ಟದ ಬರವಣಿಗೆ ನೀಡಿ ಬರಬರುತ್ತಾ ಕುಸಿಯುತ್ತ ಹೋದ ಕವಿ ಅವರು. ನವ್ಯರೆಂದು  ಕರೆಸಿಕೊಂಡಿದ್ದ ಕಾಲಕ್ಕೆ ಕೆಲವು ಬಿಗಿ ಕವಿತೆಗಳನ್ನು ಬರೆದಿದ್ದವರು ಮುಂದೆ ಬರೆದದ್ದು ‘ಪಾಂಚಜನ್ಯ’ದಂತಹ ಜೊಳ್ಳು ಕವಿತೆಗಳನ್ನೇ. ‘ಪಾಂಚಜನ್ಯ’ದಂತಹ ಅತಿ ಕೆಟ್ಟ ಕವಿತೆಯನ್ನು ತನ್ನ ಜೀವಿತಕಾಲದಲ್ಲಿಯೇ ‘ಡಿಸ್‌ಓನ್’ ಮಾಡದ, ಸಮಗ್ರ ಕಾವ್ಯದಲ್ಲಿಯೂ ಕಾಣಿಸಿಕೊಳ್ಳಲು ಬಿಟ್ಟ ಕವಿಯ ಬಗ್ಗೆ ಬೇರೆ ಏನು ಹೇಳಲಿದೆ ನಮಗೆ? ಎಲ್ಲ ಅರಿವಿದ್ದೂ ಸತತ ಭಜನೆಯಲ್ಲಿ ನಿರತರಾದ ವಂದಿಮಾಗಧರ ಕಥೆಯನ್ನೂ ಈಗಾಗಲೇ ನಾವು ನೋಡಿದ್ದೇವೆ. ಇಂತಹ ಒಂದು ಅನಾರೋಗ್ಯಕರ ವಾತಾವರಣ ಯಾವ ಭಾಷೆಯಲ್ಲಾದರೂ ಇರಲು ಸಾಧ್ಯವೇ?

ನವ್ಯರ ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಯಾಕೆ ಪ್ರತಿರೋಧದ ಧ್ವನಿಗಳು ಕಾಣಿಸಿಕೊಳ್ಳಲಿಲ್ಲ?

ನಮ್ಮಲ್ಲಿ ಸದ್ಯ ಇರುವ ಸಾಂಸ್ಕೃತಿಕ ಮಂಪರಿಗೆ ಮುಖ್ಯ ಕಾರಣವಾದವರು ಗೋಪಾಲಕೃಷ್ಣ ಅಡಿಗ ಮತ್ತು ಅನಂತಮೂರ್ತಿ. ಇವರು ತಾವಾಗಿ ಸಾಂಸ್ಕೃತಿಕ ವಕ್ತಾರಿಕೆಯನ್ನು ಕೈಗೆತ್ತಿಕೊಂಡವರು. ಇವರಿಬ್ಬರೂ ಜೊತೆಯಾಗಿ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಒಂದು ನೇತ್ಯಾತ್ಮಕ ಮನಸ್ಥಿತಿಯನ್ನು ರೂಪಿಸಿದರು. ಇದರ ಪರಿಣಾಮವಾಗಿ, ಕೃತಿಗೂ ಕಾವ್ಯಕ್ಕೂ ಸಂಬಂಧ ಇರಬೇಕಾಗಿಲ್ಲ ಎಂಬುದನ್ನು ಮುಂದಿಟ್ಟುಕೊಂಡು, ಕೃತಿಕಾರನ ವಾತ, ಪಿತ್ತ, ಕಫಗಳೆಲ್ಲವೂ ಆತನ ಕೃತಿಗಳಲ್ಲಿ ಕಾಣಿಸಿಕೊಂಡಾಗಲೂ ಸೊಲ್ಲೆತ್ತಬಾರದು ಎಂಬ ವಾತಾವರಣವನ್ನು ಸೃಷ್ಟಿಸಲಾಯಿತು. ಅಡಿಗರು ಜನಸಂಘದಿಂದ ಎರಡೆರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ ಬಳಿಕವೂ   ‘ಪಾಂಚಜನ್ಯ’ ಮತ್ತು ‘ವರ್ಗರಹಿತ ಸಮಾಜ’ ಮುಂತಾದ ಕವಿತೆಗಳಲ್ಲಿ ಸಂಘ ಪರಿವಾರದ ತತ್ವವನ್ನು ನೇರವಾಗಿ ಪ್ರತಿಪಾದಿಸಿದ ಬಳಿಕವೂ ಅವರ ಇಮೇಜಿಗೆ ಯಾವ ರೀತಿಯಲ್ಲೂ ಧಕ್ಕೆ ಬಾರದ ಹಾಗೆ ನೋಡಿಕೊಳ್ಳಲಾಯಿತು! ಇದು ಅಂತಿಮವಾಗಿ ವಿಚಿತ್ರವಾದ ಒಂದು ಪರಿಸ್ಥಿತಿಗೆ ದಾರಿಮಾಡಿಕೊಟ್ಟಿತು.

ಅನಂತಮೂರ್ತಿ ಕೋಮುವಾದವನ್ನು ವಿರೋಧಿಸುತ್ತಲೇ ರಾಮಮಂದಿರ ಕೆಡವಿದ ಘಟನೆ ನಡೆದ ಮೇಲೂ ಪೇಜಾವರ ಸ್ವಾಮಿಗಳ ಜೊತೆ ಹಾರ್ದಿಕ ಸಂಬಂಧ ಇಟ್ಟುಕೊಳ್ಳುವುದು ಯಾರಿಗೂ ಅಸಹಜವಾಗಿ ತೋರಲಿಲ್ಲ. ಇದು ಉಳಿದವರಿಗೂ ಒಂದು ಮಾದರಿ ಆಯಿತು. ‘ಕುವೆಂಪು ಕಾದಂಬರಿಗಳ ಶ್ರೀಮಂತ ಅನುಭವ ಪ್ರಪಂಚವು ಕೇವಲ ರಮ್ಯವಾದ ಕಥೆಯೊಂದನ್ನು ಹೇಳುವುದಕ್ಕೆ ವ್ಯಯವಾಗಿದೆ’ ಎನ್ನುತ್ತ ಅಡಿಗರ ಕಾವ್ಯವನ್ನು ಓತಪ್ರೋತವಾಗಿ ಸಮರ್ಥಿಸುವ ಜಿ.ರಾಜಶೇಖರ್ ಹಿಡಿದಿದ್ದೂ ಇದೇ ದಾರಿ. ರಾಜಶೇಖರ್ ಮಾರ್ಕ್ಸ್ ವಾದಿ ಹಿನ್ನೆಲೆಯಿಂದ ಬಂದವರು ಎಂಬುದು ಇಲ್ಲಿ ಮುಖ್ಯ. ಅಂಥವರೇ ಒಪ್ಪಿದ ಮೇಲೆ ಇನ್ನೇನು? ಲೇಖಕನಾದವನು ಕೋಮುವಾದದ ವಿರೋಧಿಯಾಗಿದ್ದರೆ ಸಾಕು; ಬ್ರಾಹ್ಮಣ್ಯವನ್ನು ಬೇಕಾದರೆ ಎತ್ತಿಹಿಡಿಯಲಿ. ಹಾಗೆಯೇ ಹಿಂದುತ್ವವಾದಿಯಾಗಿದ್ದರೂ ‘ಒಳ್ಳೆಯ ಕವನ’ಗಳನ್ನು ಬರೆಯುತ್ತಿದ್ದರೆ ಸರಿ. ನವ್ಯರು ತಮ್ಮ ಲಾಭಕ್ಕಾಗಿ ರೂಪಿಸಿದ ಅಪಾಯಕಾರಿ ಮಾದರಿಯಿದು. ಈ ಮಾದರಿಯನ್ನು ಅನುಸರಿಸುವ ಲೇಖಕರ ದೊಡ್ಡ ಪಡೆಯೇ ಹುಟ್ಟಿಕೊಂಡಿತು.

ಎಸ್.ದಿವಾಕರ್ ಇತ್ತೀಚೆಗೆ ‘ಅಡಿಗರನ್ನು ಓದದಿದ್ದರೆ ಅವರಿಗೇ ನಷ್ಟ’ ಎಂದಿರುವುದನ್ನು ಗಮನಿಸಿ. ಆ ಮೂಲಕ ದಿವಾಕರ್ ಏನು ಹೇಳುತ್ತಿದ್ದಾರೆ? ಕಾವ್ಯವನ್ನು ಕಾವ್ಯವಾಗಿ ನೋಡಿ ಎನ್ನುವ ಪುರಾತನ ಕಾಲದ ನಂಬಿಕೆಯನ್ನು ಮತ್ತೆ ಚಾಲ್ತಿಗೆ ತರಲು ಪ್ರಯತ್ನಿಸುತ್ತಿದ್ದಾರೆಯೇ? ಇದು ದಿವಾಕರ್ ಒಬ್ಬರ ಕಥೆಯಲ್ಲ. ಕನ್ನಡದಲ್ಲಿ ಹೆಜ್ಜೆಹೆಜ್ಜೆಗೆ ಸಿಗುವವರು ಬರೀ ಇಂಥವರೇ. ಆದುದರಿಂದಲೇ ಅನಂತಮೂರ್ತಿ ಕುವೆಂಪು ಬಗ್ಗೆ ಅಷ್ಟೊಂದು ಹೀನವಾಗಿ ಮಾತನಾಡಿದಾಗಲೂ ಅಡಿಗರು ಪಾಂಚಜನ್ಯ ಮೊಳಗಿಸಿದಾಗಲೂ ಮಾತನಾಡದೆ ಈ ಎಲ್ಲರೂ ಮೌನವಾಗಿದ್ದರು.

ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಸುಮತೀಂದ್ರ ನಾಡಿಗರಿಂದ ಹಿಡಿದು ಜಯಂತ ಕಾಯ್ಕಿಣಿ, ವೈದೇಹಿ ತನಕ ಹೀಗೆ ಯೋಚಿಸುವ ಮತ್ತು ವರ್ತಿಸುವವರ ಬಹು ದೊಡ್ಡ ಗುಂಪೇ ಕನ್ನಡದಲ್ಲಿ ಇದೆ. ಪುರೋಹಿತಶಾಹಿ ಬಿಡಿ ಫ್ಯಾಸಿಸಮ್ ನ ಉತ್ಕರ್ಷ ದ ಬಗ್ಗೆಯೂ ಬಾಯಿ ಬಿಗಿದುಕೊಂಡಿರುವವರು ಇವರು. ಎಲ್ಲೆಲ್ಲೂ ಸಲ್ಲತಕ್ಕವರು. ಕಮ್ಯುನಿಸ್ಟರು ಮತ್ತು ಎಡಪಂಥೀಯರೂ ತಮ್ಮ ಈ ಎಡಬಿಡಂಗಿ ವರ್ತನೆಯನ್ನು ಪ್ರಶ್ನಿಸದೇ ಇರುವಹಾಗೆ ನೋಡಿಕೊಂಡ ಜಾಣ್ಮೆ ಇವರದು. ಅನಂತಮೂರ್ತಿ ಬಗ್ಗೆ, ಅವರ ಕಲಬೆರಕೆ ವಿಮರ್ಶಾ ಪದ್ಧತಿಯ ಬಗ್ಗೆ ನಾನೊಂದು ಲೇಖನ ಬರೆದಾಗಲೂ ಮುಂಬೈನಿಂದ ಯಶವಂತ ಚಿತ್ತಾಲರು ನೊಂದುಕೊಂಡು ಫೋನ್ ಮಾಡಿದ್ದಿದೆ ಎಂದರೆ ಇವರ ಕೈಗಳು ಎಷ್ಟು ಉದ್ದ ಚಾಚಿಕೊಂಡಿವೆ ಎಂಬುದನ್ನು ನೋಡಬಹುದು. ಭಿನ್ನ ಮಾರ್ಗ ಹಿಡಿದು ಬರೆದ ಎ.ಕೆ.ರಾಮಾನುಜನ್, ಕೆ.ವಿ.ತಿರುಮಲೇಶ್ ಅಂಥವರು ಕೂಡ ಯಾವುದೇ ವಾಗ್ವಾದದಲ್ಲಿ ಭಾಗವಹಿಸದೆ ಸುಮ್ಮನೆ ಕುಳಿತವರಲ್ಲವೇ? ಹೀಗೆ ತಮ್ಮ ಉದ್ದೇಶ ಸಾಧನೆಗಾಗಿ ಒಂದು ಬೃಹತ್ ಕೂಡು ಕುಟುಂಬವನ್ನೇ ನಿರ್ಮಿಸಿಕೊಂಡು ಅದನ್ನೇ ಭದ್ರಕೋಟೆಯನ್ನಾಗಿಸಿಕೊಂಡವರು ನವ್ಯರು.

ಹಿಂದುತ್ವವನ್ನು ಪ್ರತಿಪಾದಿಸುವ, ಬ್ರಾಹ್ಮಣ್ಯವನ್ನು ಮೆರೆಸುವ ಕನ್ನಡ ಬರಹಗಾರರ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದವರೆಂದರೆ ಪೂರ್ಣಚಂದ್ರ ತೇಜಸ್ವಿ ಮಾತ್ರ. ಸಾಹಿತ್ಯದ ಮಟ್ಟಿಗೆ ಸೀಮಿತಗೊಂಡ ಕ್ರಾಂತಿಕಾರತನದ ಬಗ್ಗೆ ಅವರು ದನಿಯೆತ್ತಿದರು. ಕನ್ನಡದ ಹಲವು ಕ್ರಾಂತಿಗಳು ಮುಗ್ಗರಿಸಿದುದಕ್ಕೆ ಅವುಗಳ ಮುಂಚೂಣಿಯಲ್ಲಿ ಚುಕ್ಕಾಣಿ ಹಿಡಿದ್ದವರು ಬ್ರಾಹ್ಮಣರಾಗಿದ್ದುದೇ ಕಾರಣ ಎಂದು ನೇರವಾಗಿ ಹೇಳಿದರು. ಆದ್ದರಿಂದಲೇ ಹಳೆ ಸಾಹಿತ್ಯಕ್ಕೂ ಹೊಸ ಸಾಹಿತ್ಯಕ್ಕೂ ಸಂಭವಿಸಿದ ಘರ್ಷಣೆ, ಸಂಪ್ರದಾಯ, ಆಚಾರ ಪದ್ಧತಿ ಮುಂತಾದುವುಗಳೆಲ್ಲದರ ವಿರುದ್ಧದ ಆಂದೋಲನವಾಲಿಲ್ಲ ಎಂಬುದನ್ನು ಸ್ಪಷ್ಟವಾಗಿ ಗುರುತಿಸಿದರು.

ಸಾಹಿತ್ಯದಲ್ಲಿ ಕ್ರಾಂತಿಕಾರಿಗಳಂತೆ ಕಾಣಿಸಿಕೊಂಡವರು ಏಕೆ ಜಾತಿಪದ್ಧತಿ, ವರ್ಣಾಶ್ರಮ ಧರ್ಮಗಳನ್ನು ಪ್ರತಿಪಾದಿಸಿಯೂ ಸ್ವೀಕರಿಸಲ್ಪಟ್ಟರು ಎಂಬುದಕ್ಕೆ ಉತ್ತರ ತೇಜಸ್ವಿ ಮಾತುಗಳಲ್ಲಿವೆ. ಬ್ರಾಹ್ಮಣ್ಯದ ನೆರಳಿನಲ್ಲಿ ನಡೆಯುತ್ತಿರುವ ಶೂದ್ರರಿಗೂ ಇದೇ ಕಾಯಿಲೆ ಅಮರಿಕೊಂಡಿದೆ ಎಂಬುದನ್ನೂ ತೇಜಸ್ವಿ ಗುರುತಿಸಿದ್ದರು. ಈ ಹಿನ್ನೆಲೆಯಲ್ಲಿಯೇ ‘ಬೇರೆ ಜಾತಿಯವನು ಅಕಸ್ಮಾತಾಗಿ ಬರಹಗಾರನಾಗಿ ಬಂದರೂ ಅದೇ ಪಠ್ಯಗಳನ್ನೇ ವಿಮರ್ಶಿಸಿ, ಪ್ರಶಂಸಿಸಿ ಕಾಲಕಳೆಯುವ ಅದೇ ಗಿಳಿಯೇ ಆಗಿರುತ್ತಾನೆ’ ಎಂದು ತೇಜಸ್ವಿ ನುಡಿದಿರುವುದು. ಚೂರುಪಾರು ಪ್ರಶಸ್ತಿ ಮತ್ತು ಸಣ್ಣಪುಟ್ಟ ಅಧಿಕಾರದ ಆಸೆಯಿಂದ ಬ್ರಾಹ್ಮಣ ಲೇಖಕರ ಹಿಂದೆಮುಂದೆ ನಡುಬಗ್ಗಿಸಿ ಅಲೆಯುವ ‘ಶೂದ್ರ ಗಿಳಿಗಳು’ ಇವರು. ಈ ಸ್ಥಿತಿ ಸದ್ಯಕ್ಕೆ ಬದಲಾಗುವಂತೆ ತೋರುತ್ತಿಲ್ಲ.

ಕೊನೆಯ ಮಾತು

ಹೊಸ ಬರಹಗಾರರು ಸ್ಪಷ್ಟವಾಗಿ ಆಮಿಷಗಳನ್ನು ಮೀರುವುದೊಂದೇ ಈ ಗೋಜಲುಗಳಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ದಾರಿ. ಅಡಿಗ, ಅನಂತಮೂರ್ತಿ ಮುಂತಾದವರನ್ನು ಓದಲೇಬಾರದು ಎಂದು ಇಲ್ಲಿ ಯಾರೂ ಹೇಳುತ್ತಿಲ್ಲ. ಬದಲಾಗಿ ಇವರು ಮಾಡುತ್ತಾ ಬಂದಿದ್ದೇನು ಎಂಬುದನ್ನು ಚಾರಿತ್ರಿಕವಾಗಿ ಯೋಚಿಸಬೇಕಾದುದು ಬಹಳ ಮುಖ್ಯ. ಸಾಂಸ್ಕೃತಿಕವಾಗಿ ನವೋದಯವನ್ನು ತಿರಸ್ಕರಿಸುವುದು ಮುಖ್ಯವಾಗಿತ್ತು ಎಂದು ಗೋಪಾಲಕೃಷ್ಣ ಅಡಿಗ ಮತ್ತು ಅನಂತಮೂರ್ತಿ ಸುಳ್ಳು ಕಥೆ ಹೆಣೆದುದನ್ನು ಹೊಸ ಬರಹಗಾರರು ಗಮನದಲ್ಲಿಟ್ಟುಕೊಂಡಿರಬೇಕು. ಅದರ ಬಗ್ಗೆ ಸ್ಪಷ್ಟ ಎಚ್ಚರ ಇರಬೇಕು.

ಕುವೆಂಪು ಹಾಕಿಕೊಟ್ಟ ದಾರಿಯನ್ನು ಅರ್ಥಪೂರ್ಣವಾಗಿ ಮುಂದುವರಿಸುವುದು ಹೇಗೆ ಎಂಬುದರ ಕುರಿತು ಜಿಜ್ಞಾಸೆ ನಡೆಸಬೇಕು. ಸಾಂಸ್ಕೃತಿಕವಾಗಿ ಇಂದು ನಮಗೆ ವಚನಕಾರರು, ಕುವೆಂಪು, ಅಂಬೇಡ್ಕರ್ ಅಂಥವರು ಮಾತ್ರ ಮುಖ್ಯರಾಗಬೇಕು. ಅಂತಹ ಒಂದು ವೈಚಾರಿಕ ಬದಲಾವಣೆ ಹೊಸಪೀಳಿಗೆಯ ಚಳವಳಿಗಾರರು ಮತ್ತು ಬರಹಗಾರರಲ್ಲಿ ಮೂಡಿಬರಬೇಕಾದ ಕಾಲಘಟ್ಟವಿದು.

*ಲೇಖಕರು ಕುಂದಾಪುರದ ಭಂಡಾರ್ಕರ್ ಕಾಲೇಜಿನ ನಿವೃತ್ತ ವಾಣಿಜ್ಯ ಪ್ರಾಧ್ಯಾಪಕರು; ಕವಿ, ವಿಮರ್ಶಕ ಮತ್ತು ನಾಟಕ ನಿರ್ದೇಶಕರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.

Leave a Reply

Your email address will not be published.