ಅಡ್ಡಿಯಾದ ಸೈದ್ಧಾಂತಿಕ ಅಸ್ಪಷ್ಟತೆ

ಚಳವಳಿಯಲ್ಲಿ ಬಹುತೇಕರು ಕಮ್ಯುನಿಸ್ಟರು ಮತ್ತು ವಿಚಾರವಾದಿಗಳು ಸಾರಾಸಗಟಾಗಿ ವೈದಿಕರ ಹಿಡಿತದಲ್ಲಿದ್ದ ದೇವರು ಮತ್ತು ಮೂಢನಂಬಿಕೆಯನ್ನು ನಿರಾಕರಿಸುವ ಭರದಲ್ಲಿ ನಮ್ಮ ನೆಲಮೂಲದ ಸಂಸ್ಕೃತಿಯನ್ನು, ನಮ್ಮ ಶರಣರನ್ನು, ದಾಸರನ್ನು, ದಾರ್ಶನಿಕರನ್ನು, ತತ್ವಪದಕಾರರನ್ನು, ಅನುಭಾವಿಗಳನ್ನೂ ನಿರಾಕರಿಸಿದರು!? ಇದರ ಪರಿಣಾಮ ಚಳವಳಿ ಜನಸಾಮಾನ್ಯರಿಂದ ದೂರವಾಯಿತು. ಈ ಎಲ್ಲಾ ಪಾಪಗಳಲ್ಲಿ ನನ್ನ ಪಾಲೂ ಇದೆ!

ದಲಿತ ಚಳವಳಿಗೆ ನನ್ನ ಪ್ರವೇಶ ಎಪ್ಪತ್ತರ ದಶಕದ ಮಧ್ಯಭಾಗ, ಅಲ್ಲಿಂದ ಆಚೆಗೆ ದಲಿತ ಚಳವಳಿಯಲ್ಲಿ ಒಬ್ಬ ಕಾರ್ಯಕರ್ತನಾಗಿ, ಕಾಲಾನಂತರ ಚಳವಳಿಯ ಸಂಗಾತಿಯಾಗಿ, ಸಲಹೆಗಾರನಾಗಿ, ಭಾಷಣ ಕಾರನಾಗಿ, ಬರಹಗಾರನಾಗಿ, ಬೆಂಬಲಿಗನಾಗಿ, ವಿಮರ್ಶಕನಾಗಿ ಒಟ್ಟಾರೆ ನಾಲ್ಕೂವರೆ ದಶಕಗಳ ಕಾಲ ವಿವಿಧ ಪಾತ್ರಗಳಲ್ಲಿ ದಲಿತ ಚಳವಳಿಯನ್ನು ಒಳಗಿನಿಂದ ಮತ್ತು ಹೊರಗಿನಿಂದ ಸಾಕಷ್ಟು ಸನಿಹದಿಂದ ನೋಡುತ್ತಾ ಬಂದಿದ್ದೇನೆ.

‘ಸಮಾಜಮುಖಿ’ ಕೇಳಿರುವ ಪ್ರಶ್ನೆ ‘ದಿಕ್ಕು ತಪ್ಪಿದ್ದೆಲ್ಲಿ..?’ ಎನ್ನುವುದರಲ್ಲೇ ‘ದಿಕ್ಕುತಪ್ಪಿದೆ’ ಎಂಬುದನ್ನು ಸ್ಪಷ್ಟಪಡಿಸಿದ್ದೀರಿ, ಆದ್ದರಿಂದ ಅದನ್ನು ನಾನು ಮತ್ತೊಮ್ಮೆ ಹೇಳಬೇಕಿಲ್ಲ. ದಲಿತ ಚಳವಳಿಯ ಕುರಿತು ಬರೆಯಲು ಸಾಕಷ್ಟು ಉತ್ತಮ ವಿಷಯಗಳಿವೆ. ಆದರೆ ಸ್ಪಷ್ಟವಾಗಿ ದಿಕ್ಕುತಪ್ಪುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದರಿಂದ ಅದರ ಮೇಲೆಯೇ ನನ್ನ ಬರಹವನ್ನು ಕೇಂದ್ರೀಕರಿಸಿದ್ದೇನೆ.

ದಲಿತ ಚಳವಳಿಯ ಆರಂಭಿಕ ಕಾಲಘಟ್ಟದಲ್ಲಿ ಇಲ್ಲಿ ಬ್ರಾಹ್ಮಣರನ್ನು ಸೇರಿಸಿದಂತೆ ಎಲ್ಲಾ ಜಾತಿಯವರು ಒಳಗಿನವರಾಗಿ ಮತ್ತು ಹೊರಗಿನವರಾಗಿ ಸಕ್ರಿಯರಾಗಿದ್ದರು. ಅದೇ ರೀತಿ ಎಲ್ಲಾ ಸಿದ್ಧಾಂತದವರು ಅಂದರೆ,ಗಾಂಧಿ, ಮಾರ್ಕ್ಸ್, ಲೋಹಿಯ, ಪೆರಿಯಾರ್, ಅಂಬೇಡ್ಕರ್… ಅವರೊಂದಿಗೆ ಮಾಕ್ರ್ಸಿಸ್ಟ್‍ಲೆನೆನಿಸ್ಟ್ (ಈಗ ಮಾವೋವಾದಿಗಳು ಎಂದು ಕರೆಯಬಹುದೇನೋ) ಬೆಂಬಲಿಗರೂ ಇದ್ದರು. ಆಗ ನಡೆಯುತ್ತಿದ್ದ ದಲಿತ ಸಂಘಟನೆಯ ಶಿಬಿರ ಅಥವಾ ಸಭೆಗಳಲ್ಲಿ ವೇದಿಕೆ ಮೇಲಿದ್ದವರು ಒಬ್ಬರು ಮಾಕ್ರ್ಸ್ ಬಗ್ಗೆ ಮಾತಾಡಿದರೆ ಮತ್ತೊಬ್ಬರು ಲೋಹಿಯ, ಮಗದೊಬ್ಬರು ಗಾಂಧಿ ಹೀಗೆ ಅವರವರ ಭಾವಕ್ಕೆ ಅವರವರು ಮಾತನಾಡುತಿದ್ದರು. ಕೇಳುಗರಿಗಂತೂ ಎಲ್ಲಾ ಅಸ್ಪಷ್ಟ, ಗೊಂದಲ, ಗೋಜಲು! ಆಗಿನ್ನೂ ಅಂಬೇಡ್ಕರ್ ಅವರು ದಲಿತ ಚಳವಳಿಗೆ ಹೆಚ್ಚು ಪರಿಚಿತರಾಗಿರಲಿಲ್ಲ. ಯಾರಿಗೂ ಯಾವುದರ ಬಗ್ಗೆಯೂ ‘ಕ್ಲಾರಿಟಿ’ ಇರಲಿಲ್ಲ.

ಹೋರಾಟಕ್ಕೆ ತೆಗೆದುಕೊಳ್ಳಬೇಕಾದ ವಿಷಯಗಳ ಆಯ್ಕೆಗಳಲ್ಲೂ ಸ್ಪಷ್ಟತೆ ಇರುತ್ತಿರಲಿಲ್ಲ. ಹಾಗೆಂದು ದಲಿತ ಚಳವಳಿಯಿಂದ ಯಶಸ್ವಿ ಹೋರಾಟಗಳೇ ನಡೆದಿಲ್ಲ ಎಂಬುದು ನನ್ನ ವಾದವಲ್ಲ. ಅನೇಕ ಹೋರಾಟಗಳ ಮಾಹಿತಿ ನನ್ನ ಬಳಿ ಇದೆ. ಒಟ್ಟಾರೆಯಾಗಿ ಕ್ರಾಂತಿಯಾಗಬೇಕು ಎಂದು ಭಾವನಾತ್ಮಕವಾಗಿ ಹೇಳುತಿದ್ದರು. ಆದರೆ ‘ಹೇಗೆ?’ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿರಲಿಲ್ಲ.

ಚಳವಳಿಯಲ್ಲಿ ಬಹುತೇಕರು ಕಮ್ಯುನಿಸ್ಟ್‍ರು ಮತ್ತು ವಿಚಾರವಾದಿಗಳು (ratiionalist) ಸಾರಾಸಗಟಾಗಿ ವೈದಿಕರ ಹಿಡಿತದಲ್ಲಿದ್ದ ದೇವರು ಮತ್ತು ಮೂಢನಂಬಿಕೆಯನ್ನು ನಿರಾಕರಿಸುವ ಭರದಲ್ಲಿ ನಮ್ಮ ನೆಲಮೂಲದ ಸಂಸ್ಕೃತಿಯನ್ನು, ನಮ್ಮ ಶರಣರನ್ನು, ದಾಸರನ್ನು, ದಾರ್ಶನಿಕರನ್ನು, ತತ್ವಪದಕಾರರನ್ನು, ಅನುಭಾವಿಗಳನ್ನೂ ಕೂಡ ನಿರಾಕರಿಸಿದರು!? ಇದರ ಪರಿಣಾಮ ಚಳವಳಿ ಜನಸಾಮಾನ್ಯರಿಂದ ದೂರವಾಯಿತು. ಈ ಎಲ್ಲಾ ಪಾಪಗಳಲ್ಲಿ ನನ್ನ ಪಾಲೂ ಇದೆ! ದಲಿತ ಚಳವಳಿಯನ್ನು ಮುನ್ನೆಡೆಸುವವರಲ್ಲೂ ಸ್ಪಷ್ಟತೆ ಇರಲಿಲ್ಲ! ಇಲ್ಲಿ ನಾನು ಯಾರನ್ನೂ ದೂರುತ್ತಿಲ್ಲ; ಆಗ ನಾಯಕರಲ್ಲಿದ್ದ ವಿಚಾರದ ಕೊರತೆ, ಸೈದ್ಧಾಂತಿಕ ಗೊಂದಲ ಹಾಗೂ ಅಮಾಯಕತೆಗಳು ಚಳವಳಿ ಒಂದು ಸ್ಪಷ್ಟ ದಿಕ್ಕಿನತ್ತ ಸಾಗಲು ಅಡ್ಡಿಯಾಗಿದ್ದವು ಎಂದು ಈಗ ಅನಿಸುತ್ತಿದೆ.

ಇಲ್ಲಿ ದಲಿತ ಚಳವಳಿ ಆರಂಭವಾದ ಒಂದು ದಶಕದ ಹಿಂದೆ ಅಥವಾ ಮುಂದೆ ಪಕ್ಕದ ತಮಿಳುನಾಡಿನಲ್ಲಿ ದ್ರಾವಿಡ ಚಳವಳಿ ತನ್ನ ಸೈದ್ಧಾಂತಿಕ ಸ್ಪಷ್ಡತೆಯಿಂದಾಗಿ ರಾಜಕೀಯ ಚಳವಳಿಯಾಗಿ ಮಾರ್ಪಟ್ಟು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಅದೇ ರೀತಿ ದೂರದ ಉತ್ತರ ಪ್ರದೇಶದಲ್ಲಿ ಬಹುಜನ ಚಳವಳಿ ರಾಜಕೀಯಗೊಂಡು ಅಧಿಕಾರದತ್ತ ದಾಪುಕಾಲು ಹಾಕುತಿತ್ತು. ಆದರೆ ಆ ಸಮಯದಲ್ಲಿಯೇ ನಮ್ಮ ದಲಿತ ಚಳವಳಿ ರಾಜಕೀಯದಿಂದ ದೂರ ಉಳಿಯುವ ಮಾತನಾಡುತ್ತಾ ಚುನಾವಣೆಗಳನ್ನು ಬಹಿಷ್ಕರಿಸುವ ಕಾರ್ಯಕ್ರಮಕ್ಕೆ ಸಿದ್ಧವಾಗಿತ್ತು! ಈ ಆಲೋಚನೆ ನಮಗೆ ಯರವಲಾಗಿ ದಕ್ಕಿದ್ದು ಆಂಧ್ರಪ್ರದೇಶದ ನಕ್ಸಲ್ ಚಳವಳಿಯಿಂದ!

ಅಂಬೇಡ್ಕರ್ ದಲಿತ ಚಳವಳಿಗೆ ದಕ್ಕುವ ವೇಳೆಗೆ ಇಡೀ ಚಳವಳಿ ವಿಘಟನೆಯಾಗಿ ಗುಂಪಿಗೊಂದು, ತಲೆಗೊಂದರಂತೆ ದಲಿತ ಸಂಘಟನೆಗಳು ಹುಟ್ಟಿಕೊಂಡವು ಅಂಬೇಡ್ಕರ್ ಕೇವಲ ‘ಎಂಬ್ಲಮ್’ ಆಗಿ ಮಾತ್ರ ಲೆಟರ್ ಹೆಡ್‍ಗಳಿಗೆ ಮತ್ತು ವಿಸಿಟಿಂಗ್ ಕಾರ್ಡುಗಳಿಗೆ ಸೀಮಿತ ರಾದರು! ಅಂಬೇಡ್ಕರಿಸಂ ಚಳವಳಿಗೆ ದಕ್ಕಲೇಯಿಲ್ಲ!

ಈ ಕಾರಣಕ್ಕೆ ದಲಿತ ಚಳವಳಿ ತನ್ನ ಹುಟ್ಟಿನಲ್ಲಿಯೇ ದಿಕ್ಕುತಪ್ಪಿದ್ದು ನನಗೆ ಈಗ ಢಾಳಾಗಿ ಕಾಣುತ್ತಿದೆ. ಚಳವಳಿಯ ಮುಂಚೂಣೆಯಲ್ಲಿದ್ದ ದೇವನೂರರು ಲೋಹಿಯಾ ಮತ್ತು ಗಾಂಧೀವಾದಿಯಾದರೆ, ಸಿದ್ಧಲಿಂಗಯ್ಯನವರು ಮಾರ್ಕ್ಸ್ ವಾದಿ, ಬಿ.ಕೃಷ್ಣಪ್ಪನವರು ಮಾತ್ರ ಲೋಹಿಯಾ-ಅಂಬೇಡ್ಕರ್ ವಾದಿಯಾಗಿದ್ದರು. ನಂತರದ ಕಾಲಘಟ್ಟದಲ್ಲಿ ಅಂಬೇಡ್ಕರ್-ಕಾನ್ಸಿರಾಂ ಅವರ ಸಿದ್ಧಾಂತದ ಕಡೆಗೆ ಕೃಷ್ಣಪ್ಪನವರ ಒಲವು ಕೇಂದ್ರೀಕೃತವಾಯಿತು. ಅಷ್ಟರಲ್ಲಿ ಕಾಲ ಮಿಂಚಿಹೋಗಿತ್ತು! ಕೃಷ್ಣಪ್ಪನವರು ಕರ್ನಾಟಕದಲ್ಲಿ ಬಹುಜನ ಚಳವಳಿಯನ್ನು ಗಟ್ಟಿ ನೆಲೆಗಟ್ಟಿ ನಲ್ಲಿ ಕಟ್ಟುತ್ತಿರುವಂತೆಯೇ ಕಾಲವಶವಾದರು.

ಪಕ್ಕದ ತಮಿಳುನಾಡಿನಲ್ಲಿ ಪೆರಿಯಾರರ ಶೂದ್ರ ಚಳವಳಿ ಕ್ರಮೇಣ ಭಾಷಾ ಚಳವಳಿಯಾಗಿ, ಕಡೆಗೆ ತಮಿಳರ ಆತ್ಮಗೌರವದ ರಾಜಕಾರಣವಾಗಿ ಒಂದು ಸ್ಪಷ್ಟತೆ ಪಡೆದ ಪರಿಣಾಮ ಅದು ಅಧಿಕಾರ ಹಿಡಿಯಲು ಸಾಧ್ಯವಾಯಿತು. ಅದೇರೀತಿ ಉತ್ತರ ಪ್ರದೇಶದಲ್ಲಿ ಅಂಬೇಡ್ಕರ್ ಅವರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡ ಪರಿಣಾಮ ಅಲ್ಲಿ ಕಾನ್ಸಿರಾಂ ಅವರು ಅಧಿಕಾರ ಹಿಡಿದರು. ‘ಶಾಸನವನ್ನು ರೂಪಿಸುವ ಜಾಗಕ್ಕೆ ನಾವು ಹೋಗದ ಹೊರತು ನಮ್ಮ ಸಮಸ್ಯೆಗಳು ಬಗೆಹರೆಯಲಾರವು’ ಎಂಬ ಅಂಬೇಡ್ಕರ್ ಅವರ ಮಾತನ್ನು ಅರ್ಥಮಾಡಿಕೊಂಡು, ಯಥಾವತ್ತಾಗಿ ಜಾರಿಗೊಳಿಸಿದ ಪರಿಣಾಮ ಉತ್ತರಪ್ರದೇಶದಲ್ಲಿ ಕಾನ್ಸಿರಾಂ ಅವರು ಕಟ್ಟಿದ ಬಿ.ಎಸ್.ಪಿ. ನಾಲ್ಕು ಬಾರಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಒಂದು ಕೋಟಿಗೂ ಹೆಚ್ಚು ಎಕರೆಯಷ್ಟು ಭೂಮಿಯನ್ನು ದಲಿತ, ಹಿಂದುಳಿದ ಬಹುಜನರಿಗೆ ಹಂಚಲು ಸಾಧ್ಯವಾಯಿತು.

ದಲಿತ ಚಳವಳಿ ಈ ಎಲ್ಲಾ ಸ್ಥಿತ್ಯಂತರಗಳನ್ನು ಹಾದುಹೋಗುತಿ ದ್ದಂತೆ ಅದರಲ್ಲಿನ ಇತರೆ ಜಾತಿಯ ಪ್ರಗತಿಪರರು ಕಾರಣಾಂತರಗಳಿಂದ ದೂರವಾದರು. ದಲಿತ ಚಳವಳಿ ಕೇವಲ ದಲಿತರ (ಅಸ್ಪೃಶ್ಯರ) ಚಳವಳಿಯಾಗಿ ಪರ್ಯಾವಸಾನಗೊಂಡಿತು. ಕೇವಲ ಬಲ (ಹೊಲೆಯ) ಮತ್ತು ಎಡ (ಮಾದಿಗ) ಸಮುದಾಯಗಳಿಗೆ ಚಳವಳಿಯ ಬಣಗಳು ಸೀಮಿತವಾದವು. ಇದು ಮುಂದೆ ಇನ್ನಷ್ಟು ವಿಘಟನೆಯಾಗಿ ಎಡ ಮತ್ತು ಬಲಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಾ ಆಯಾ ಸಂಘಟನೆಗಳ ನಾಯಕತ್ವವೂ ಆಯಾ ಉಪಪಂಗಡಗಳ ಪಾಲಾಗಿ ಅತ್ಯಂತ ದುರ್ಬಲವಾಯಿತು. 

ದಲಿತಕವಿ ಸಿದ್ಧಲಿಂಗಯ್ಯನವರು ಎಮ್.ಎಲ್.ಸಿ. ಆದರು, ಕೃಷ್ಣಪ್ಪನವರು ಜನತಾದಳದಿಂದ ಚುನಾವಣೆಗೆ ನಿಂತರು, ಚಂದ್ರಪ್ರಸಾದ್ ತ್ಯಾಗಿಯವರು ಸ್ಲಂ ಬೋರ್ಡ್ ಅಧ್ಯಕ್ಷ ರಾದರು, ದೇವನೂರರು ದೂರವಾದರು, ದೇವಯ್ಯ ಹರವೆ ನಿಧನರಾದರು; ನಂತರ ಕೆ.ರಾಮಯ್ಯ, ಕೆ.ಬಿ. ಸಿದ್ಧಯ್ಯ ಮುಂತಾದವರು ತಮ್ಮ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಇದ್ದಬದ್ದವರು ತಮ್ಮ ತಮ್ಮ ಸಂಘಟನೆಗಳನ್ನು ಕಟ್ಟಿಕೊಂಡು ಕಾರ್ಯೋನ್ಮುಖರಾದರು.

ಆರಂಭದ ಕಾಲಘಟ್ಟದಲ್ಲಿ ದಲಿತ ಚಳವಳಿ ಬಲಿಷ್ಟವಾಗಿದ್ದದ್ದು ಕ್ರಮೇಣ ದುರ್ಬಲವಾಗಿದ್ದು ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ. ದಲಿತಕವಿ ಸಿದ್ಧಲಿಂಗಯ್ಯನವರು ಎಮ್.ಎಲ್.ಸಿ. ಆದರು, ಕೃಷ್ಣಪ್ಪನವರು ಜನತಾದಳದಿಂದ ಚುನಾವಣೆಗೆ ನಿಂತರು, ಚಂದ್ರಪ್ರಸಾದ್ ತ್ಯಾಗಿಯವರು ಸ್ಲಂ ಬೋರ್ಡ್ ಅಧ್ಯಕ್ಷರಾದರು, ದೇವನೂರರು ದೂರವಾದರು, ದೇವಯ್ಯ ಹರವೆ ನಿಧನರಾದರು; ನಂತರ ಕೆ.ರಾಮಯ್ಯ, ಕೆ.ಬಿ.ಸಿದ್ಧಯ್ಯ ಮುಂತಾದವರು ತಮ್ಮ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಇದ್ದಬದ್ದವರು ತಮ್ಮ ತಮ್ಮ ಸಂಘಟನೆಗಳನ್ನು ಕಟ್ಟಿಕೊಂಡು ಕಾರ್ಯೋನ್ಮುಖರಾದರು.

ಇದಾದ ನಂತರ ಕಳೆದ ಆರು ವರ್ಷದ ಹಿಂದೆ ಆಡಳಿತಕ್ಕೆ ಬಂದ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೊಡಗಿಸಿಕೊಂಡ ಅನೇಕ ದಲಿತ ಸಂಘಟನೆಗಳ ನಾಯಕರು ತಮ್ಮ ವೈಯಕ್ತಿಕ ವಾಂಛೆಗಳಿಗಾಗಿ ರಾಜಿಯಾಗುತ್ತಾ ಚಳವಳಿ ಹೋರಾಟದ ಛಾಪನ್ನೇ ಕಳಕೊಂಡಿತು! ವಿಪರ್ಯಾಸವೆಂದರೆ ಒಂದು ಕಾಲದಲ್ಲಿ ರಾಜಕಾರಣದಿಂದಲೇ ದೂರವಿರಬೇಕೆಂದು ನಿರ್ಧರಿಸಿದ್ದ ದಲಿತ ಚಳವಳಿ ಕಾಲಾಂತರದಲ್ಲಿ ಯಥಾಸ್ಥಿತಿವಾದಿ ಪಕ್ಷಗಳ ರಾಜಕಾರಣಕ್ಕೆ ಶರಣಾದುದು ದುರಂತ! ಕೆಲವು ದಲಿತ ಬಣಗಳು ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನೇರವಾಗಿ ಬೆಂಬಲ ನೀಡಿದ್ದು ಅಘಾತಕಾರಿ!!

ಇಷ್ಟಾದರೂ ದಲಿತ ಹೋರಾಟಕ್ಕೆ ಅಪಾರ ದಲಿತ ಯುವಜನರನ್ನು ಸೆಳೆದ ಇತಿಹಾಸ ಚಳವಳಿಗೆ ಇದೆ. ಅನೇಕ ಭೂಹೋರಾಟಗಳನ್ನು ಹಮ್ಮಿಕೊಂಡ, ಜಾತಿ ವೈಷಮ್ಯದ ಪ್ರಕರಣಗಳನ್ನು ನಿಭಾಯಿಸಿದ ಹಿನ್ನೆಲೆಯಿದೆ. ದುರಂತವೆಂದರೆ ಅಷ್ಟೆಲ್ಲಾ ಬಲಿಷ್ಠವಾಗಿದ್ದ ದಲಿತ ಚಳವಳಿಯಿಂದ ಒಬ್ಬೇ ಒಬ್ಬ ಶಾಸಕನನ್ನು ಆರಿಸಿ ಕಳಿಸಲು ಸಾಧ್ಯವಾಗಲಿಲ್ಲ ಎನ್ನುವುದು ಈಗಲೂ ಬೇಸರ ಮೂಡಿಸುವ ಸಂಗತಿ…

*ಲೇಖಕರು ಮೂಲತಃ ಕೋಲಾರದವರು; ವೃತ್ತಿಯಲ್ಲಿ ವಕೀಲರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿದ್ದರು, ಬಿ.ಎಸ್.ಪಿ. ಜೊತೆಗೆ ಗುರುತಿಸಿಕೊಂಡಿದ್ದಾರೆ. 

Leave a Reply

Your email address will not be published.