ಅಡ್ವಾಣಿಗೇಕೆ ಈ ಅನುಕಂಪ?

ಅಡ್ವಾಣಿಯವರ ಇಂದಿನ ಮಾತುಗಳು ಸ್ವಾರ್ಥದಿಂದ ಹುಟ್ಟಿರುವುದೇ ಹೊರತು ದೇಶದ ಹಿತಾಸಕ್ತಿಯಿಂದಂತೂ ಖಂಡಿತಾ ಅಲ್ಲ. ಹೋಗಲಿ, ಅವರು ನಂಬಿರುವ ಸಿದ್ಧಾಂತದ ಹಿತಾಸಕ್ತಿಯಿಂದಲೂ ಅಲ್ಲ.

ಅಡ್ವಾಣಿಯವರು ದೇಶದ ಭವಿಷ್ಯದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ತೋರಿದ್ದಾರೆ. ಅವರಿಗೆ ಈಗಷ್ಟೇ ಜ್ಞಾನೋದಯವಾಯಿತೇ? ಈ ಮೊದಲು ತಮ್ಮ ಇಡೀ ರಾಜಕೀಯ ಜೀವನದಲ್ಲಿ ಈ ರೀತಿ ಮಾತಾಡಿರುವುದು ನಮ್ಮ ಗಮನಕ್ಕೆ ಬಂದಿದೆಯೇ? ದೇಶ, ಸಂವಿಧಾನ, ಬಹುತ್ವ, ರಾಜಕೀಯ ವೈರುಧ್ಯ ಮುಂತಾದ ಪ್ರಜಾಪ್ರಭುತ್ವವಾದೀ ಚಿಂತನೆಗಳನ್ನು ವಿರೋಧಿಸುತ್ತಲೇ ತನ್ನ ರಾಜಕೀಯ ಬದುಕನ್ನು ಕಟ್ಟಿಕೊಂಡವರು ಇವರು. ರಥ ಯಾತ್ರೆಯ ಮೂಲಕ ದೇಶವನ್ನು ಉದ್ದಗಲಕ್ಕೂ ವಿಭಜಿಸಿ ಅಧಿಕಾರ ಹಿಡಿದವರು ಇವರು, ಇವರ ಪಕ್ಷ ಮತ್ತು ಸಿದ್ಧಾಂತ. ಹೀಗೇ ಮಾಡುತ್ತ ಬಂದು ತನ್ನ ಶಿಷ್ಯರಿಂದಲೇ ಮೂಲೆಗುಂಪಾದ ಪರಿಸ್ಥಿತಿಯಲ್ಲಿ ಇವರಿಗೆ ಈಗ ದೇಶ ನೆನಪಾಯಿತೇ? ತಾನು ಮಾಡಿರುವ ತಪ್ಪುಗಳನ್ನೇ ತನ್ನ ಶಿಷ್ಯರು ಮಾಡುತ್ತ ಬೆಳೆದಾಗ ಅವು ಇವರಿಗೆ ಇಂದು ತಪ್ಪಾಗಿ ಕಾಣುತ್ತಿವೆಯೇ?

2014ರಲ್ಲಿ ಒಂದು ವೇಳೆ ಅಡ್ವಾಣಿಯವರೇ ಪ್ರಧಾನಿಯಾಗಿದ್ದಿದ್ದರೆ ದೊಡ್ಡ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ದೇಶ ಬಹುತೇಕ ಈಗಿನ ಸ್ಥಿತಿಯಲ್ಲೇ ಇರುತ್ತಿತ್ತೇನೋ! ಏಕೆಂದರೆ ಇವರು ನಂಬಿರುವ ಸಿದ್ಧಾಂತ ಇವರಿಂದ ಇದೇ ರೀತಿ ಆಳಿಸುತ್ತಿತ್ತು. ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಇದೇ ರೀತಿಯ, ಆದರೆ ಕಣ್ಣಿಗೆ ಕಾಣದಷ್ಟು ಮಂದ ಫ್ಯಾಸಿಸ್ಟ್ ಸರ್ಕಾರವೇ ಇತ್ತು. ಅಡ್ವಾಣಿ ಪ್ರಧಾನಿಯಾಗಿದ್ದರೆ ಅದು ಇನ್ನಷ್ಟು ತೀವ್ರತೆ ಪಡೆದಿರುತ್ತಿತ್ತು.

ಈ ಎಲ್ಲ ಅಂಶಗಳನ್ನು ಇಟ್ಟು ನೋಡಿದಾಗ ಅಡ್ವಾಣಿಯವರ ಇಂದಿನ ಮಾತುಗಳು ಸ್ವಾರ್ಥದಿಂದ ಹುಟ್ಟಿರುವುದೇ ಹೊರತು ದೇಶದ ಹಿತಾಸಕ್ತಿಯಿಂದಂತೂ ಖಂಡಿತಾ ಅಲ್ಲ. ಹೋಗಲಿ, ಅವರು ನಂಬಿರುವ ಸಿದ್ಧಾಂತದ ಹಿತಾಸಕ್ತಿಯಿಂದಲೂ ಅಲ್ಲ. ತನ್ನ ಕಷ್ಟಕಾಲದಲ್ಲಿ ಆಡಿರುವ ಈ ಮಾತುಗಳು ಅವರ ಚಾರಿತ್ರ್ಯವನ್ನು ಕ್ಷಮಿಸುವುದಿಲ್ಲ. ವಿಪರ್ಯಾಸವೆಂದರೆ ಅವರ ರಾಜಕೀಯ ಹಿನ್ನೆಲೆ, ಕಾರ್ಯವಿಧಾನ ಹಾಗೂ ಸಿದ್ಧಾಂತವೂ ಅವರ ಈ ಮಾತುಗಳನ್ನು ಅಷ್ಟು ಸುಲಭವಾಗಿ ನುಂಗಿಕೊಳ್ಳುವುದಿಲ್ಲ.

ಅಡ್ವಾಣಿಯವರ ಈ ಮಾತುಗಳಿಗೆ ನಾವು ಇಷ್ಟು ಮಹತ್ವ ನೀಡಬೇಕೇ? ದೇಶದ ಹಿತದೃಷ್ಠಿಯಿಂದ ಅವನ್ನು ಕಡೆಗಣಿಸುವುದೇ ಸೂಕ್ತ. ಅಥವಾ ಆ ಮಾತುಗಳನ್ನು ಖಂಡಿಸಿ ಅವರ ಜಾಗವನ್ನು ಅವರಿಗೆ ತೋರಿಸುವುದು ಇನ್ನೂ ಹೆಚ್ಚು ಸೂಕ್ತ. ಆದರೆ ನಮ್ಮ ಮಾಧ್ಯಮಗಳ ವರ್ತನೆಯನ್ನು ನೋಡಿದಾಗ ಆಶ್ಚರ್ಯರ್ಯವಾಗುತ್ತದೆ. ಹಲವು ಪತ್ರಿಕೆಗಳು ಅವರ ಹೇಳಿಕೆಯನ್ನು ಪುಷ್ಟೀಕರಿಸಿರುವುದು ಅವುಗಳ ಎಡಬಿಡಂಗಿತನವನ್ನು ತೋರಿಸುವುದಿಲ್ಲವೇ? ಅಡ್ವಾಣಿಗೇಕೆ ಈಗ ಈ ಅನುಕಂಪ? `ಹಿಂದಿನವರು ಈಗಿನವರಂತೆ ಇರಲಿಲ್ಲ ಬಿಡಪ್ಪಾ’ ಎನ್ನುವ ಕೃತಕ ಅನುಕಂಪವೇಕೆ? ಇದು ಹೇಗಿದೆಯೆಂದರೆ, ಸತ್ತಮೇಲೆ ಒಬ್ಬ ವ್ಯಕ್ತಿ (ಅವನು ಹೇಗಾದರೂ ಬದುಕಿರಲಿ) ಹುತಾತ್ಮ, ಮಹಾತ್ಮ, ಅವನಲ್ಲಿ ಹಲವು ಉದಾತ್ತ ಗುಣಗಳಿದ್ದವು ಎಂದು ಮಾತನಾಡುವುದನ್ನು ನಾವು ನೋಡಿದ್ದೇವೆ. ಇದು ನಮ್ಮ ದೌರ್ಬಲ್ಯವೇ ಹೊರತು, ಸತ್ತ ವ್ಯಕ್ತಿಯ ಬಗ್ಗೆ ಅನಿವಾರ್ಯ ಎನ್ನುವಂತೆ ಆಡಬೇಕಾದ ಒಳ್ಳೆಯ ಮಾತುಗಳಂತೂ ಅಲ್ಲ. ಅದು ಚರಿತ್ರೆಗೆ, ದೇಶಕ್ಕೆ ನಾವು ತೋರುವ ಅಗೌರವವಷ್ಟೇ ಆಗುತ್ತದೆ.

ಬಹುಶಃ ಇದ್ಯಾವುದೂ ಅಲ್ಲ. ಮುಂದಿನ ಸರ್ಕಾರ ಯಾವುದೇ ಬರಲಿ, ಅದರ ಕೆಂಗಣ್ಣಿಗೆ ತಾನು ಗುರಿಯಾಗಬಾರದು ಎನ್ನುವ ಗೋಡೆಯ ಮೇಲೆ ಕೂತು ತಮ್ಮ ಘನತೆ, ಕರ್ತವ್ಯಗಳನ್ನು ಬದಿಗೊತ್ತಿ ಮೃದು ಧೋರಣೆಯನ್ನೇ ಈ ಮಾಧ್ಯಮಗಳು ಅನುಸರಿ ಸುತ್ತಿವೆ ಎಂದೇ ಹೇಳಬೇಕು. ಇದು ಏನನ್ನು ಸೂಚಿಸುತ್ತದೆ? ಈಗಷ್ಟೇ ಸಂದುಹೋದ ಚರಿ ತ್ರೆಯೂ ಮರೆತುಹೋಯಿತೇ? ಎನ್ನುವ ಪ್ರಶ್ನೆಗಿಂತ ಜನಮಾನಸದಿಂದ ಮರೆಯಿಸುವ ಪ್ರಯತ್ನವೇ ಇದು? ಎನ್ನುವ ಪ್ರಶ್ನೆ ಇಂದಿನ ಕಾಲದಲ್ಲಿ ಸೂಕ್ತವಾದೀತು.

ಅಡ್ವಾಣಿಯಂಥವರ ಸಿದ್ಧಾಂತ ಅಧಿಕಾರ ಹಿಡಿದಾಗಿನಿಂದಲೂ ಈ ಪರಿಸ್ಥಿತಿ ಕ್ರಮೇಣ ದೇಶವನ್ನು ಅವರಿಸಿಕೊಳ್ಳುತ್ತಿದೆ. ಮೋದಿಯ ಐದು ವರ್ಷದ ಆಳಿಕೆಯಲ್ಲಿ ಅದು ವೇಗೋತ್ಕರ್ಷ ಪಡೆದಿದೆ. ರಥಯಾತ್ರೆಗೆ ಮುಂಚಿನ ಭಾರತದಲ್ಲಿ ಈ ರೀತಿ ಇರಲಿಲ್ಲ.

ಏಕೆ ಬರೆಯುತ್ತಿವೆ ಹೀಗೆ? ವಾಜಪೇಯಿ ಮತ್ತು ಅಡ್ವಾಣಿಯ ಮುಖಗಳನ್ನು ನೋಡಿಯಾದರೂ ಇಂದಿನ ಮತ್ತು ನಾಳಿನ ಬಿಜೆಪಿಯ ಬಗ್ಗೆ ಮೃದು ಭಾವನೆ ಬೆಳೆಸಿಕೊಳ್ಳಲಿ ಎಂದೇ? ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲೆಂದು ಓದುಗರೂ ಬಯಸಲಿ, ಆ ಮೂಲಕ ಅದನ್ನು ದೇಶವನ್ನು, ಸಂವಿಧಾನವನ್ನು ಗೌರವಿಸುವ ಒಂದು ರಾಜಕೀಯ ಪಕ್ಷವಾಗಿ ಒಪ್ಪಿಕೊಳ್ಳಲಿ ಎನ್ನುವ ‘ಪ್ರಿಂಟ್ ಈಜ್ ಟ್ರೂತ್, ಅಧಿಕೃತ’ ಎನ್ನುವ ಧೋರಣೆಯಡಿಯ ಪ್ರೇರೇಪಣೆಯೇ?

ಇನ್ನಷ್ಟು ಮುಂದಕ್ಕೆ ಹೋಗಿ ನೋಡುವುದಾದರೆ, ಮಾಧ್ಯಮಗಳೂ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳೂ, ಅನೇಕ ಸಾಂವಿಧಾನಿಕ ಸಂಸ್ಥೆಗಳೂ ಈ ರೀತಿ ಗೋಡೆಯ ಮೇಲೆ ಕುಳಿತಿವೆ. ಜನಸಾಮಾನ್ಯನ, ಸಂವಿಧಾನದ ಕೈಬಿಡುತ್ತಿವೆ. ಎಲ್ಲೆಡೆ, ಎಲ್ಲ ರಾಜಕೀಯ ಪಕ್ಷಗಳಲ್ಲೂ ಮೃದು ಹಿಂದುತ್ವ ನಿಚ್ಚಳವಾಗಿ ಕಾಣುತ್ತಿದೆ. ಮುಂದೊಂದು ದಿನ ನಮ್ಮ ದೇಶ ಹಿಂದೂ ರಾಷ್ಟ್ರವಾಗಬಹುದು, ಅಂತಹ ಸಂದರ್ಭವನ್ನು ನಾವು ವಿಧಿಯಿಲ್ಲದೇ ಒಪ್ಪಿಕೊಳ್ಳಬೇಕು ಎನ್ನುವ ಒಳಮನಸ್ಸು ಕಾಣುತ್ತಿದೆ. ಅದನ್ನು ಜನಸಾಮಾನ್ಯನಿಗೆ ದಾಟಿಸಲು ಎಲ್ಲ ಕ್ಷೇತ್ರಗಳೂ ಯತ್ನಿಸುತ್ತಿವೆ.

*ಲೇಖಕರು ಖ್ಯಾತ ಸಿನಿಮಾ ನಿರ್ದೇಶಕರು; ಸಾಕ್ಷ್ಯಚಿತ್ರ, ಸಂವಹನ ಮಾಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

Leave a Reply

Your email address will not be published.