ಅಣತಿಯ ಆಡಳಿತ ಎರವಲು ಸಾಧನೆ!

ಸರ್ಕಾರದಿಂದ ಭಿನ್ನವಾದದ್ದನ್ನು ನಿರೀಕ್ಷಿಸುವ ಹಾಗಿಲ್ಲ. ಯಾಕೆಂದರೆ ಇದು ಸಂಪೂರ್ಣ ಚುನಾಯಿತ ಸರ್ಕಾರವಲ್ಲ; ಅರ್ಧ ಚುನಾಯಿತಅರ್ಧ ಖರೀದಿತ ಸರಕಾರ. ಇಂತಹದ್ದೊಂದು ಸರಕಾರಕ್ಕೆ ಅದರದ್ದೇ ಆದ ಮಿತಿಗಳಿರುತ್ತವೆ.

-ಎ.ನಾರಾಯಣ

ಕರ್ನಾಟಕದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಈ ತನಕ ನೀಡಿದ ಆಡಳಿತವನ್ನು ಹೇಗೆ ಮೌಲ್ಯಮಾಪನ ಮಾಡುವುದು? ಈ ಸರಕಾರ ಅಂತ ಅಲ್ಲ. ಯಾವುದೇ ಸರಕಾರದ ಸಾಧನೆಯನ್ನು ತೂಗಿ-ಅಳೆಯುದು ತುಂಬಾ ಕ್ಲಿಷ್ಟಕರ ಕೆಲಸ. ಸಾಮಾನ್ಯವಾಗಿ ಮಾಧ್ಯಮಗಳು ಸರ್ಕಾರವೊಂದರ ಸಾಧನೆಯ ಬಗ್ಗೆ ಅಥವಾ ವೈಫಲ್ಯಗಳ ಬಗ್ಗೆ ನೀಡುವ ಬೀಸು ಹೇಳಿಕೆಗಳಲ್ಲಿ ವಿಶೇಷ ಅರ್ಥವೇನೂ ಇರುವುದಿಲ್ಲ.

ಸರಕಾರ ನಡೆಸುವವರ ಬಳಿ ನಿಮ್ಮ ಸಾಧನೆ ಏನು ಎಂಬ ಪ್ರಶ್ನೆಯನ್ನು ಕಾಲಕಾಲಕ್ಕೆ ಕೇಳಿದರೆ ಅವರ ಬಳಿ ಪುಂಖಾನುಪುಂಖ ಉತ್ತರ ಇರುತ್ತದೆ. ಅತ್ಯಂತ ಕಳಪೆ ಸಾಧನೆ ಮಾಡಿದ ಸರಕಾರ ಎಂಬ ಕಾರಣಕ್ಕೆ ಚುನಾವಣೆಯಲ್ಲಿ ಸೋತ ಸರಕಾರಗಳು ಕೂಡಾ ಚುನಾವಣಾ ಪ್ರಚಾರ ಸಮಯದಲ್ಲಿ ತಮ್ಮ ಅವಧಿಯ ಸಾಧನೆಯ ಬಗ್ಗೆ ಬಹಳಷ್ಟು ಹೇಳುತ್ತವೆ. ಎಷ್ಟೋ ಸಲ ಹೀಗೆ ಒಂದು ಸರಕಾರ ಅಥವಾ ಅದನ್ನು ಮುನ್ನಡೆಸುವ ಮುಖ್ಯಮಂತ್ರಿ/ಪ್ರಧಾನ ಮಂತ್ರಿ ಹೇಳಿದಾಗ ಹೇಗಿರುತ್ತದೆ ಎಂದರೆ ಅದನ್ನು ಅತ್ತ ಸತ್ಯ ಅಂತ ಸ್ವೀಕರಿಸಲೂ ಆಗುವುದಿಲ್ಲ, ಇತ್ತ ಸುಳ್ಳು ಅಂತ ನಿರಾಕಾರಿಸಲೂ ಆಗುವುದಿಲ್ಲ. ಇದಕ್ಕೆ ಕಾರಣವಿದೆ.

ಯಾವುದೇ ಸರಕಾರ ಇರಲಿ, ಯಾರೇ ಮುಖ್ಯ ಮಂತ್ರಿ/ಪ್ರಧಾನ ಮಂತ್ರಿ ಇರಲಿ, ಯಾವುದೇ ಪಕ್ಷ ಆಳ್ವಿಕೆ ನಡೆಸುತ್ತಿರಲಿ, ಒಂದು ಸರಕಾರ ಅಂತ ಅಂದ ಮೇಲೆ ಅದು ಒಂದಷ್ಟು ಕೆಲಸಗಳನ್ನು ‘ಸ್ವಯಂ ಚಾಲಿತ’ ಎನ್ನುವ ರೀತಿಯಲ್ಲಿ ಮಾಡುತ್ತಲೇ ಇರುತ್ತದೆ. ಆ ಕೆಲಸಗಳೆಲ್ಲಾ ಯಾವುದೇ ಸಂದರ್ಭದಲ್ಲಿ ನಿಲ್ಲುವುದಿಲ್ಲ. ಅವುಗಳನ್ನು ಯಾರೂ ನಿಲ್ಲಿಸಲಾಗುವುದಿಲ್ಲ. ಇಂತವುಗಳೆಲ್ಲಾ ನನ್ನಿಂದಾಗಿಯೇ, ನನ್ನ ಕಾರಣದಿಂದಾಗಿಯೇ ಆಯಿತು ಅಂತ ಕೆಲವೊಮ್ಮೆ ಜನರ ಮುಂದೆ ವೈಭವೀಕರಿಸಿ ಹೇಳುವುದಿದೆ. ಇದು ರಾಜಕೀಯದ ಭಾಗ. ಹಾಗಾದರೆ ಸಾಧನೆ ಅಂತ ಒಂದು ಸರಕಾರಕ್ಕೆ ಹೇಳಲು ಯಾವಾಗ ಸಾಧ್ಯವಾಗುತ್ತದೆ?

ಅದು ಸಾಧ್ಯವಾಗುವುದು ಎರಡು ಸಂದರ್ಭಗಳಲ್ಲಿ. ಮೊದಲನೆಯದಾಗಿ ಬಹಳ ಕಾಲದಿಂದ ಕಾಡುತಿದ್ದ ಸಮಸ್ಯೆಯನ್ನು ಅಥವಾ ಸಮಸ್ಯೆಗಳನ್ನು ಸರಕಾರ ಬಗೆಹರಿಸಿದ್ದರೆ ಅದು ಜನರ ದೃಷ್ಟಿಯಲ್ಲಿ ಸಾಧನೆ ಅಂತ ಅನ್ನಿಸಿಕೊಳ್ಳುತ್ತದೆ. ಎರಡನೆಯದ್ದು, ಭವಿಷ್ಯದ ಹಿತದೃಷ್ಟಿಯಿಂದ ಯಾರೂ ಊಹಿಸಲಾರದನ್ನು ಊಹಿಸಿ ಯಾವುದೋ ಜನಹಿತದ ಯೋಜನೆಗಳನ್ನು ಕೈಗೆತ್ತಿಕೊಂಡರೆ, ಈ ತನಕ ಅನುಸರಿಸಿಕೊಂಡು ಬಂದ ಹಾದಿಯನ್ನು ಬಿಟ್ಟು ಹೊಸ ಹಾದಿಯಲ್ಲಿ ನೀತಿನಿರೂಪಣೆ ಮಾಡಿದರೆ ಆಗ ಅದು ಸಾಧನೆ ಅಂತ ಅನ್ನಿಸಿಕೊಳ್ಳುತ್ತದೆ. ಇಂತಹವರ ಕಾಲದಲ್ಲಿ ಇಂತಹದ್ದೊಂದು ಆಗಿದೆ ಅಂತ ಜನ ಆಡಿಕೊಳ್ಳುತ್ತಾರೆ, ನೆನಪಿಸಿಕೊಳ್ಳುತ್ತಾರೆ. ಒಂದು ವೇಳೆ ಇಂತಹ ಒಂದು ಕೆಲಸವನ್ನು ಮಾಡಲಾರದೇ ಹೋದರೂ ಹೊಸ ಹಾದಿಯಲ್ಲಿ ನಡೆಯುವ, ಸರ್ವರ ಬದುಕನ್ನು ಹಸನುಗೊಳಿಸುವ ಒಂದು ಸ್ಪಷ್ಟ ಗುರಿಯನ್ನು, ಕೆಲ ಸುಂದರ ಕನಸುಗಳನ್ನಾದರೂ ಜನಮನದಲ್ಲಿ ಬಿತ್ತುವುದು ಸಾಧನೆ ಅನ್ನಿಸಿಕೊಳ್ಳುತ್ತದೆ. ಒಂದು ದೂರಗಾಮಿ ಯೋಚನೆಯನ್ನು ಪ್ರತಿಪಾದಿಸಿದರೂ ಸಾಕು, ಅದನ್ನು ಮಾಡಿದ ನಾಯಕ ಸಾಧನೆಯ ಹಾದಿಯಲ್ಲಿದ್ದಾನೆ ಅಂತ ಭಾವಿಸಬಹುದು.

ಈ ದೃಷ್ಟಿಯಿಂದ ಈಗಿನ ಸರಕಾರದ ಅಂದರೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಈ ತನಕ ಸವೆಸಿದ ಹಾದಿಯನ್ನು ನೋಡೋಣ. ನಿಜ, ಬಹಳ ದೊಡ್ಡದು ಎಂದು ಹೇಳಲಾಗದಿದ್ದರೂ, ಹಲವು ಬದಲಾವಣೆಗಳು ಕರ್ನಾಟಕದಲ್ಲಿ ಕಳೆದೆರಡು ವರ್ಷಗಳಿಂದೀಚೆಗೆ ಆಗಿವೆ, ಆಗುತ್ತಿವೆ.  ಹಲವಾರು ನೀತಿಗಳು ಗತಿ ಬದಲಿಸಿವೆ. ಉದಾಹರಣೆಗೆ ಹಳೆಯ ಭೂಸುಧಾರಣಾ ಕಾಯ್ದೆ ಕೃಷಿ ಭೂಮಿಯ ಪರಭಾರೆಯ ಮೇಲೆ ಹೇರಿದ್ದ ಮಿತಿಗಳನ್ನೆಲ್ಲಾ ತೆಗೆದು ಹಾಕಲಾಗಿದೆ. ಹೆಚ್ಚು ಹೆಚ್ಚು ಹೊಸ ಉದ್ಯಮಗಳನ್ನು ಆಕರ್ಷಿಸುವ ಸಲುವಾಗಿ ಸರಕಾರ ಇನ್ನಿಲ್ಲ ಎಂಬಂತೆ ರಿಯಾಯಿತಿಗಳನ್ನೂ ಸಹಾಯವನ್ನೂ ಘೋಷಿಸುತ್ತಿದೆ. ಎಲ್ಲೆಂದರಲ್ಲಿ ಹೊಸ ಹೊಸ ವಿಮಾನ ನಿಲ್ದಾಣಗಳನ್ನು ತೆರೆಯಲಾಗುತ್ತದೆ -ಹೀಗೆ ಸಾಗಿದರೆ ಬಸ್ ನಿಲ್ದಾಣಗಳಿಗಿಂತ ಹೆಚ್ಚು ವಿಮಾನ ನಿಲ್ದಾಣಗಳು ತಲೆ ಎತ್ತಬಹುದೋ ಎನ್ನುವಷ್ಟರ ಮಟ್ಟಿಗೆ.

ಹೊಸತೊಂದು ಆಡಳಿತ ಸುಧಾರಣಾ ಆಯೋಗವನ್ನು ರಚಿಸಿ ಅದಕ್ಕೆ ಪ್ರಾಮಾಣಿಕತೆಗೂ, ದಕ್ಷತೆಗೂ ಹೆಸರಾಗಿದ್ದ ಮಾಜೀ ಮುಖ್ಯ ಕಾರ್ಯದರ್ಶಿಯೋರ್ವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ನಿಜ ಹೇಳಬೇಕೆಂದರೆ, ಸಮ್ಮಿಶ್ರ ಸರಕಾರದ ಕಾಲದಲ್ಲಿ ಒಂದು ತರಹ ಮಂಕು ಬಡಿದಂತೆ ಇದ್ದ ಸರಕಾರೀ ವ್ಯವಸ್ಥೆಯಲ್ಲಿ ಕಳೆದೆರಡು ವರ್ಷಗಳಿಂದೀಚೆಗೆ ಏನೋ ಒಂದಷ್ಟು ಸಂಚಲನ ಮೂಡಿದೆ ಮತ್ತು ಇವೆಲ್ಲವೂ ಕರೋನದ  ಕಾರ್ಮೋಡ ಕವಿದಿದ್ದ ಕಾಲಕ್ಕೆ ಆಗಿವೆ ಎನ್ನುವುದನ್ನು ಗುರುತಿಸಲೇ ಬೇಕು.

ಇಷ್ಟಾಗಿದ್ದರೂ ಕರ್ನಾಟಕದಲ್ಲೊಂದು ಸರಕಾರ ಇದ್ದಂತೆ ತೋರುವುದಿಲ್ಲ. ಒಂದರ್ಥದಲ್ಲಿ, 2018ರ ಚುನಾವಣೆಯ ನಂತರ ಕರ್ನಾಟಕದಲ್ಲಿ ಪೂರ್ಣಕಾಲಿಕ-ಸುಭದ್ರ ಸರಕಾರ ಅಂತ ಒಂದು ಅಸ್ತಿತ್ವಕ್ಕೇನೆ   ಬಂದಿಲ್ಲ ಎನ್ನುವ ರೀತಿಯಲ್ಲಿ ಆಡಳಿತಾತ್ಮಕ ನಿಸ್ತೇಜತೆ, ರಾಜಕೀಯವಾದ ಅಸ್ಥಿರತೆ ಕರ್ನಾಟಕವನ್ನು ಕಾಡುತ್ತಿರುವ ಹಾಗೆ ಭಾಸವಾಗುತ್ತಿದೆ. ಇದಕ್ಕೆ ಒಂದು ಕಾರಣವನ್ನು ಈ ಸರಕಾರದ ಮತ್ತು ಅದನ್ನು ನಡೆಸುವ ಪಕ್ಷದ ರಾಜಕೀಯದಲ್ಲಿ ಗುರುತಿಸಬಹುದು.

ಮುಖ್ಯಮಂತ್ರಿ ಪೂರ್ಣಾವಧಿಗೆ ಮುಂದುವರಿಯುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆಯನ್ನು ಮುಕ್ತವಾಗಿರಿಸಿ ನಡೆಯುತ್ತಿರುವ ಈ ರಾಜಕೀಯದಿಂದಾಗಿ, ಸರಕಾರಕ್ಕೆ ಇನ್ನೂ ಒಂದು ಪೂರ್ಣ ಮತ್ತು ಸ್ವಸ್ಥ ಅಸ್ತಿತ್ವ ಇದೆ ಅಂತ ಅನ್ನಿಸುವುದಿಲ್ಲ. ಆದರೆ ಇಲ್ಲಿರುವುದು ಕೇವಲ ರಾಜಕೀಯ ಕಾರಣ ಮಾತ್ರವಲ್ಲ. ಈ ಸರಕಾರ ತನ್ನ ಅಪೂರ್ಣಾವಸ್ಥೆಯಲ್ಲೇ ಮಾಡಿದ ಕೆಲಸಗಳ ಚರ್ಯೆಯನ್ನು ಮತ್ತು ಆ ಕೆಲಸಗಳ ಹಿಂದಿನ ಪ್ರೇರಣೆಗಳನ್ನು ಕೂಡಾ ಇಲ್ಲಿ ಹೆಸರಿಸಬೇಕಾಗುತ್ತದೆ.

ಮುಖ್ಯವಾಗಿ ಈ ಸರಕಾರ ತನ್ನ ಸ್ವಂತ ಇಚ್ಚಾ, ಕ್ರಿಯಾ, ಜ್ಞಾನ ಇತ್ಯಾದಿಗಳನ್ನು ಬಳಸಿ ಏನೂ ಮಾಡುತ್ತಿರುವಂತೆ ತೋರುತ್ತಿಲ್ಲ. ಎಲ್ಲವೂ ಕೇಂದ್ರದ ನಿಯತಿಯಂತೆ ನಡೆಯುತ್ತಿದೆ. ರಾಜ್ಯ ಸರಕಾರದ ಸಾಧನೆ ಎಂಬಂತೆ ಏನು ಕಾಣಿಸುತ್ತದೋ ಅದು ಕೂಡಾ ಒಂದು ರೀತಿಯ ಎರವಲು ವಿದ್ಯಮಾನ. ಭೂಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಮನಸೋ ಇಚ್ಛೆ ಕೃಷಿ ಭೂಮಿ ಯಾರ ಕೈಗಾದರೂ ಸೇರಬಹುದು ಎನ್ನುವ ಉದಾರ ಭೂ-ಅರ್ಥ ನೀತಿಯ ಹಿಂದೆ ಇದ್ದದ್ದು ಕೇಂದ್ರದ ಅಣತಿ. ಕೃಷಿ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಎಪಿಎಂಸಿಗಳನ್ನು ನಗಣ್ಯಗೊಳಿಸಿ ಇನ್ನೇನಿದ್ದರೂ ಖಾಸಗಿ ಕಂಪನಿಗಳ ದರ್ಬಾರು ಎನ್ನುವ ನೀತಿಯನ್ನು ಸರಕಾರ ಅಳವಡಿಸಿಕೊಂಡದ್ದು ಕೇಂದ್ರದ ಅಣತಿಯಂತೆ. ಕೇಂದ್ರ ಸರಕಾರ ಎಲ್ಲವನ್ನೂ ಖಾಸಗೀಕರಣಗೊಳಿಸಿ ಅರ್ಥ ವ್ಯವಸ್ಥೆಗೊಂದು ಹೊಸ ಭಾಷ್ಯ ಬರೆಯಲು ಹೊರಟಿರುವ ಹಿನ್ನೆಲೆಯಲ್ಲಿ ಬಿಜೆಪಿ ಆಳ್ವಿಕೆಯಲ್ಲಿರುವ ಎಲ್ಲಾ ರಾಜ್ಯಗಳೂ ಅದೇ ಹಾದಿಯಲ್ಲಿ ತಮ್ಮ ಅರ್ಥ ನೀತಿಗಳನ್ನು ಅಳವಡಿಸಿಕೊಳ್ಳಬೇಕೆಂದು ಬಯಸಿದೆ. ಕರ್ನಾಟಕದಲ್ಲಿ ಎಲ್ಲವೂ ಹಾಗೆಯೇ ನಡೆಯುತ್ತಿದೆ.

ಆಧುನೀಕರಣದ ಹಪಹಪಿಗೆ ಬಿದ್ದಿರುವ ಕೇಂದ್ರ ಸರಕಾರ ಅಂಡಮಾನ್-ನಿಕೋಬಾರ್ ದ್ವೀಪಗಳ ಅತ್ಯಂತ ಸೂಕ್ಷ್ಮ ಪರಿಸರವನ್ನೂ ಬಿಡದೆ ರೆಸಾರ್ಟ್, ಹೋಟೆಲು, ಹೈವೇ, ಬುಲೆಟ್ ರೈಲ್ ಅಂತ ದೇಶದ ಚಹರೆಯನ್ನೇ ಬದಲಿಸಲು ಹೊರಟಿದೆ. ನಿಧಾನವಾಗಿ ಅಪ್ರಸ್ತುತವಾಗುತ್ತಿರುವ ಈ ಆಧುನಿಕ-ಕೇಂದ್ರಿತ, ಪಶ್ಚಿಮದಿಂದ ಆಮದಿತ ಅಭಿವೃದ್ಧಿ ಯೋಜನೆಯಿಂದಾಗಿ ದೊಡ್ಡ ಅನಾಹುತಗಳು ಆಗಲಿವೆ ಎನ್ನುವ ಎಚ್ಚರಿಕೆ ಇಲ್ಲದೆ ಕರ್ನಾಟಕವೂ ಸೇರಿದಂತೆ ಎಲ್ಲಾ ರಾಜ್ಯಗಳೂ ಇಂತಹ ಅಪಾಯಕಾರಿ ಅರ್ಥ ಮಾದರಿಯ ಹಾದಿಯಲ್ಲಿದ್ದಾವೆ. ವಿದ್ಯಾಭ್ಯಾಸ ನೀತಿ ಕೇಂದ್ರದ ಅಣತಿ ಪ್ರಕಾರ, ಕೃಷಿ ನೀತಿ ಕೇಂದ್ರದ ಅಣತಿ ಪ್ರಕಾರ, ಕೈಗಾರಿಕಾ ನೀತಿ ಕೇಂದ್ರದ ಅಣತಿ ಪ್ರಕಾರ, ಭೂನೀತಿ ಕೇಂದ್ರದ ಅಣತಿ ಪ್ರಕಾರ, ಮೂಲಭೂತ ಸೌಕರ್ಯಗಳ ನೀತಿ ಕೇಂದ್ರದ ಅಣತಿ ಪ್ರಕಾರ, ಕೋರೋನಾ ನಿಯಂತ್ರಣ-ಪರಿಹಾರ ಎಂಬಂತೆ ಅದರ ಸಂಬಂಧಿ ಎಲ್ಲವೂ ನಡೆದದ್ದು ಕೇಂದ್ರದ ಅಣತಿಯ ಮೇಲೆ. ಹಾಗಾದರೆ ರಾಜ್ಯದ್ದೇನು?

ಈ ರೀತಿ ಕೇಂದ್ರದ ಆಜ್ಞಾನುವರ್ತಿಯಾಗಿ ರಾಜ್ಯವೊಂದು ನಡೆದುಕೊಳ್ಳುವುದು ಒಂದು. ಇನ್ನೊಂದೆಡೆ ಸಾಂವಿಧಾನಿಕವಾಗಿ ರಾಜ್ಯಕ್ಕೆ ಬರಬೇಕಾದ ಹಣಕಾಸಿನ ಪಾಲನ್ನು ಕೇಂದ್ರ ಸರಕಾರ ಏಕಾಏಕಿ ಕಡಿತಗೊಳಿಸಿದ್ದರೆ ಅದನ್ನು ಕಣ್ಣು ಮುಚ್ಚಿ, ಕೈಕಟ್ಟಿ ಒಪ್ಪಿಕೊಳ್ಳಬೇಕಾದ ದೈನೇಸಿ ಸ್ಥಿತಿಯಲ್ಲಿರುವ ರಾಜ್ಯವೊಂದರ ಸಾಧನೆಯ ಪ್ರಶ್ನೆಗಿಂತ ಹೆಚ್ಚಾಗಿ, ಅದರ ಸ್ವಾಭಿಮಾನವನ್ನೂ, ಸ್ವತಂತ್ರ ಅಸ್ತಿತ್ವವನ್ನೇ ಪ್ರಶ್ನಿಸಬೇಕಾದ ಕಾಲ ಬಂದಿರುವಂತೆ ತೋರುತ್ತದೆ. ಚುನಾವಣೆಗೆ ಮೊದಲು, ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಸರಕಾರವಿದ್ದರೆ ರಾಜ್ಯದಲ್ಲಿ ಹಾಲು ಸುರಿಯುತ್ತದೆ, ಜೇನು ಹರಿಯುತ್ತದೆ ಅಂತ ಜನರನ್ನು ನಂಬಿಸಲಾಗಿತ್ತು. ಒಂದೇ ಪಕ್ಷದ ಸರಕಾರವಿದ್ದರೆ ಅದೊಂದು ಡಬಲ್ ಎಂಜಿನ್ ಸರಕಾರ ಇದ್ದಂತೆ ಅಂತ ವೈಭವೀಕರಿಸಲಾಗಿತ್ತು ಆದರೆ ಆಗಿದ್ದೆ ಬೇರೆ. ಇದು ಡಬಲ್ ಇಂಜಿನ್ ಸರಕಾರ ಮಾತ್ರವಲ್ಲ, ಹಿಂದಿನ ಸೀಟ್ ನಲ್ಲೊಬ್ಬ, ಮೇಲೊಬ್ಬ, ಕೆಳಗೊಬ್ಬ ಡ್ರೈವರ್ ಇರುವ ಸರಕಾರ ಆಗಿಬಿಟ್ಟಿದೆ.

ಈಗ ಇಡೀ ಪ್ರಪಂಚವೇ ಒಂದು ಸಂಧಿ ಕಾಲವನ್ನು ಹಾದುಹೋಗುತ್ತಿದೆ. ಒಂದೆಡೆ ಕೊರೊನಾ ಸಾಂಕ್ರಾಮಿಕ ಅರ್ಥ ವ್ಯವಸ್ಥೆಯ ಚಹರೆಯನ್ನೇ ಎಲ್ಲಡೆ ಬದಲಿಸುತಿದ್ದರೆ, ಇನ್ನೊಂದೆಡೆ ಇನ್ನೇನು ದಾಂಗುಡಿ ಇಡಲಿರುವ ಕೃತಕ-ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಜನಜೀವನದಲ್ಲಿ-ಉದ್ಯೋಗದಲ್ಲಿ-ವಿದ್ಯಾಭ್ಯಾಸದಲ್ಲಿ ಇನ್ನಿಲ್ಲ ಎನ್ನುವಂತಹ ಬದಲಾವಣೆಗಳನ್ನು ತರಲಿದೆ. ಇಂತಹದ್ದೊಂದು ಕಾಲಘಟ್ಟದಲ್ಲಿ ಆಡಳಿತದ ಪ್ರತೀ ಘಟಕವೂ -ಅಂದರೆ ಪಂಚಾಯತಿನಿಂದ ಹಿಡಿದು ರಾಜ್ಯ ಸರಕಾರದವರೆಗೆ- ಸ್ಥಳೀಯವಾಗಿ ಹೊಸದಾಗಿ ಯೋಚಿಸಬೇಕಾದ, ತಮ್ಮ ತಮ್ಮ ಪರಿಸರ-ಪರಿಸ್ಥಿತಿಯ ನಾಳೆಗಳನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಾಗರೂಕತೆ ವಹಿಸಬೇಕಾದ ಕಾಲ ಇದು. ಸರಕಾರವೆಂಬ ನಿಗೂಢ ಯಂತ್ರದೊಳಗಣ ಯಾವುದೋ ಒಂದು ಹಂತದಲ್ಲಿ, ಯಾವನೋ ಒಬ್ಬ ಅಧಿಕಾರಿ, ಯಾವನೋ ಒಬ್ಬ ಸಲಹೆಗಾರ ಈ ವಿಚಾರದ ಬಗ್ಗೆ ಯೋಚಿಸುತ್ತಿರಬಹುದು; ವರದಿ ಬರೆಯುತ್ತಿರಬಹುದು, ಕಡತ ಪೇರಿಸುತ್ತಿರಬಹುದು.

ಮೊದಲೇ ಹೇಳಿದಂತೆ ಇಂತಹದ್ದನ್ನೆಲ್ಲಾ ಒಂದು ಸರಕಾರೀ ಯಂತ್ರ ಮಾಮೂಲಿ ಎಂಬಂತೆ ಮಾಡುತ್ತಲೇ ಇರುತ್ತದೆ. ಇಷ್ಟು ಸಾಕಾಗುವುದಿಲ್ಲ. ಇದು ವಿಶಿಷ್ಟವೂ, ವಿಭಿನ್ನವೂ ಆದ ರಾಜಕೀಯ ನಾಯಕತ್ವವನ್ನು ಬೇಡುವ ಕಾಲ. ಈ ಕಾಲದ ಸವಾಲುಗಳ ಬಗ್ಗೆ, ಭವಿಷ್ಯದ ಅನಿಶ್ಚಿತತೆಯ ಬಗ್ಗೆ ರಾಜಕೀಯ ನಾಯಕತ್ವಕ್ಕೆ ಒಂದು ಮುನ್ನೋಟ, ಒಂದು ಒಳನೋಟ, ಒಂದು ಸ್ವಂತ ತಿಳಿವಳಿಕೆ ಇಲ್ಲದೆ ಹೋದರೆ ಅರ್ಥವ್ಯವಸ್ಥೆಯಲ್ಲಿ, ತಂತ್ರಜ್ಞಾನದಲ್ಲಿ ಮತ್ತು ಮೂಲಸೌಕರ್ಯಗಳಲ್ಲಿ ಆಗುವ ಯಾವುದೇ ಬದಲಾವಣೆ ಸಮಸ್ತ ಜನಜೀವನವನ್ನು ಸುಧಾರಿಸುವುದಿಲ್ಲ. ಉಳ್ಳವರು ಇನ್ನೂ ಬೆಳೆಯುವ, ಇಲ್ಲದವರು ಇನ್ನೂ ಸೊರಗುವ ಈಗಿನ ಅಭಿವೃದ್ಧಿ ನೀತಿ ಮತ್ತೆ ಯಥಾ ಪ್ರಕಾರ ಸಾಗಲಿದೆ.

ಕರ್ನಾಟಕದ ನಾಯಕತ್ವ ಆಡುವ ಮಾತುಗಳನ್ನು, ನೀಡುವ ಭರವಸೆಗಳನ್ನು, ಕೈಗೊಳ್ಳುವ ಕ್ರಮಗಳನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಅಲ್ಲಿ ಕೇಂದ್ರದಿಂದ ಎರವಲು ಪಡೆದ ಯೋಚನೆಗಳಾಚೆ ಕಂಡದ್ದು ಅಥವಾ ಕೇಳಿಸಿದ್ದು ಅಂತ ಏನಾದರೂ ಇದ್ದರೆ ಅದು ಜಾತಿಗಳ ಓಲೈಕೆ, ಅಲ್ಲೊಂದು ಪ್ರತಿಮೆ, ಇಲ್ಲೊಂದು ಕಟ್ಟಡ, ಇನ್ನೊಂದೆಡೆ ಗೋಶಾಲೆ -ಇದರಾಚೆಗೆ ಮುಖ್ಯಮಂತ್ರಿಗಳಾಗಲೀ, ಸಚಿವರಾಗಲೀ, ಆಡಳಿತ ಪಕ್ಷದ ಯಾವುದೇ ನಾಯಕರಾಗಲೀ ಎಂದಾದರೂ ಏನಾದರೂ ಹೇಳಿದ್ದಿದೆಯೇ?

ಈ ಸಾಲಿನ (2021-22) ಬಜೆಟ್ ಉದಾಹರಣೆಯನ್ನೇ ನೋಡೋಣ. ಇದೊಂದು ವಿಶಿಷ್ಟ ಕಾಲದ ಬಜೆಟ್. ಅಂದಮೇಲೆ ಇದು ವಿಶಿಷ್ಟವಾಗಿಯೇ ಇರಬೇಕು ತಾನೇ? ಏನಿಲ್ಲವೆಂದರೂ, ಕೇಂದ್ರ ಸರಕಾರ ಇಂತಹದ್ದೊಂದು ಪ್ರಯತ್ನವನ್ನು ಈ ಸಾಲಿನಲ್ಲಿ ಮಾಡಿದೆ. ಒಂದಷ್ಟು ಅಲ್ಲಿ, ಒಂದಿಷ್ಟು ಇಲ್ಲಿ ಅಂತ ಸಣ್ಣ ಸಣ್ಣ ಪ್ರಮಾಣದಲ್ಲಿ ಸಂಪನ್ಮೂಲಗಳನ್ನು ಹಂಚಿ ಯಾವ ಪರಿಣಾಮವೂ ಆಗದಂತೆ ಮಾಡುವ ಹಳೆಯ ಪರಿಪಾಠವನ್ನು ಬಿಟ್ಟು ಅರ್ಥವ್ಯವಸ್ಥೆಯಲ್ಲಿ ಚೇತರಿಕೆ ತರುವ ಪ್ರಯತ್ನ ಎಂಬಂತೆ ದೊಡ್ಡ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳ ಮೇಲೆ ವೆಚ್ಚ ಮಾಡುವ ಗಟ್ಟಿ ನಿರ್ಧಾರವನ್ನು ಕೇಂದ್ರ ಸರಕಾರ ಮಾಡಿದೆ. ಅದೇ ರೀತಿ ಬಜೆಟ್‍ನ ಅಂಕಿ-ಅಂಶಗಳ ಮೇಲೆ ಇತ್ತೀಚೆಗಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದ್ದ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಅಂಕಿ-ಅಂಶಗಳನ್ನು ಶುದ್ಧೀಕರಿಸುವ ಕೆಲಸ ಮಾಡಿದೆ. ಆದರೆ ರಾಜ್ಯ ಬಜೆಟ್ ನಲ್ಲಿ ಅಂತಹದ್ದೇನೂ ಕಂಡಿಲ್ಲ. ಇಲ್ಲಿ ಮತ್ತೆ ಕಂಡದ್ದು ಸಾರ್ವಜನಿಕರ ದುಡ್ಡಿನ ಜಾತೀವಾರು ಹಂಚಿಕೆ. ಇಂತಹದ್ದೊಂದು ಅನಿಷ್ಟ ಪದ್ಧತಿಯನ್ನು ಈ ವರ್ಷ ಸಂಕಷ್ಟದ ಕಾರಣ ನೀಡಿಯಾದರೂ ನಿಲ್ಲಿಸಬಹುದಿತ್ತು. ಆದರ ಬದಲಿಗೆ ಹಳೆ ಚಾಳಿಗಳೆಲ್ಲ ದೊಡ್ಡ ಪ್ರಮಾಣದಲ್ಲೇ ಮುಂದುವರಿದಿವೆ. ಮಾತ್ರವಲ್ಲ, ಕರ್ನಾಟಕ ಸರಕಾರವು ಸಾರ್ವಜನಿಕ ವೆಚ್ಚದಲ್ಲಿ ಪಾಲಿಸಲೇ ಬೇಕಾಗಿರುವ ಕನಿಷ್ಠ ಸಮತೆಯ ತತ್ವಕ್ಕೂ (ಛಿಚಿಟಿoಟಿ oಜಿ equiಣಥಿ) ತಿಲಾಂಜಲಿ ಇಟ್ಟಂತೆ ತೋರುತ್ತದೆ.

ಮುಂದುವರಿದ ಜಾತಿಯೊಂದರ ಹೆಸರಲ್ಲಿ ಸ್ಥಾಪಿಸಲಾದ ನಿಗಮವೊಂದಕ್ಕೆ 500 ಕೋಟಿ ರೂಪಾಯಿ ನೀಡಿದರೆ, ಅದೇ ಮೊತ್ತದ ಹಣವನ್ನು ತೀರಾ ಹಿಂದುಳಿದ ಹಲವಾರು ಜಾತಿಗಳಿಗೆಲ್ಲಾ ಒಟ್ಟು ಸೇರಿಸಿ ನೀಡಲಾಗಿದೆ. ಹಣ ಹಂಚಿಕೆ ಜಾತಿಯ ಆಧಾರದ ಮೇಲೆ ನಡೆಯುತ್ತಿದೆ, ಅಗತ್ಯ ಅಥವಾ ಹಿಂದುಳಿದಿರುವಿಕೆಯ ಆಧಾರದಲ್ಲಲ್ಲ!  ಈ ಸಾಂಕ್ರಾಮಿಕ ಕಾಲದಲ್ಲಾದರೂ ಎಲ್ಲಾ ರೀತಿಯ ಓಲೈಕೆಗಳಿಗೆ ನೀಡುವ ಹಣವನ್ನೆಲ್ಲ ನಿಲ್ಲಿಸಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮುರಿದುಕಟ್ಟುವ-ಬಲಗೊಳಿಸುವ ಕೆಲಸಕ್ಕೆ ಮುಂದಾಗುವಷ್ಟು ಕನಿಷ್ಠ ಧೈರ್ಯವನ್ನೂ ತೋರದ ಸರಕಾರದ ಸಾಧನೆಯ ಬಗ್ಗೆ ಏನು ಹೇಳುವುದು?

ಕೊರೊನದಿಂದ ರಾಜ್ಯ ಅರ್ಥ ವ್ಯವಸ್ಥೆ ಕುಸಿದು ವರಮಾನದ ಮೂಲಗಳೆಲ್ಲಾ ಬತ್ತಿ ಹೋಗಿದ್ದರೂ ಹೋದ ವರ್ಷಕ್ಕಿಂತ ಹೆಚ್ಚಿನ ಗಾತ್ರದ ಬಜೆಟ್ ಮಂಡಿಸಲಾಗಿದೆ. ಬಜೆಟ್‍ನ ಮೂಲಭೂತ ಅಂಕಿ-ಅಂಶಗಳನ್ನೇ ಸಂಶಯದಿಂದ ನೋಡಬೇಕಾದ ಪರಿಸ್ಥಿತಿ ಇದೆ! ಒಂದು ಅರ್ಥದಲ್ಲಿ ಈ ಸರಕಾರದ ಸ್ವರೂಪವೇ ಹಾಗಿದೆ. ಇದರಿಂದ ಭಿನ್ನವಾದದ್ದನ್ನು ಏನೂ ನಿರೀಕ್ಷಿಸುವ ಹಾಗಿಲ್ಲ. ಯಾಕೆಂದರೆ ಇದು ಸಂಪೂರ್ಣ ಚುನಾಯಿತ ಸರ್ಕಾರವಲ್ಲ; ಅರ್ಧ ಚುನಾಯಿತ-ಅರ್ಧ ಖರೀದಿತ ಸರಕಾರ. ಇಂತಹದ್ದೊಂದು ಸರಕಾರಕ್ಕೆ ಅದರದ್ದೇ ಆದ ಮಿತಿಗಳಿರುತ್ತವೆ.

*ಲೇಖಕರು ಮಂಗಳೂರು ವಿವಿಯಲ್ಲಿ ಎಂ.., ಇಂಗ್ಲೆಂಡಿನ ಸುಸೆಕ್ಸ್ ವಿವಿಯಿಂದ ಅಭಿವೃದ್ಧಿ ಅಧ್ಯಯನ ವಿಷಯದಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಪ್ರಸ್ತುತ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು, ಅಂಕಣಕಾರರು.

Leave a Reply

Your email address will not be published.