ಅಣ್ಣಾ ವಿವಿ ಸೂರಪ್ಪ ಪ್ರಕರಣ: ಉತ್ಕೃಷ್ಟತೆ ಉತ್ಸಾಹಕ್ಕೆ ತಣ್ಣೀರು!

-ಪೃಥ್ವಿದತ್ತ ಚಂದ್ರಶೋಭಿ

ನೆರೆಯ ತಮಿಳುನಾಡಿನ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿಚಿತ್ರ ವಿವಾದ ಉದ್ಭವಿಸಿದೆ. ಅದರ ಕೇಂದ್ರದಲ್ಲಿ ಇರುವವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕರಾದ ಪ್ರೊ.ಎಂ.ಕೆ.ಸೂರಪ್ಪನವರು. ಅವರೀಗ ಚೆನ್ನೈನಲ್ಲಿರುವ ಪ್ರತಿಷ್ಠಿತ ಅಣ್ಣಾ ವಿಶ್ವವಿದ್ಯಾನಿಲಯದ ಕುಲಪತಿಗಳು. ಈ ವಿಶ್ವವಿದ್ಯಾನಿಲಯಕ್ಕೆ ಉತ್ಕೃಷ್ಟ ಸಂಸ್ಥೆ ಸ್ಥಾನ ದೊರಕಿರುವುದೆ ವಿವಾದದ ಮೂಲ. ಪಳನಿಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಸೂರಪ್ಪನವರ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ, ನ್ಯಾಯಾಂಗ ತನಿಖೆ ನಡೆಸಲು ಆದೇಶಿಸಿದೆ.

 

ಜ್ಞಾನ ಸೃಷ್ಟಿ ಮತ್ತು ಪ್ರಸರಣಗಳೆರಡರಲ್ಲಿಯೂ ಸೋಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವುದು ಹೇಗೆ? ಈ ಕಾರ್ಯಕ್ಕೆ ಹೊಸನೀತಿಯ ಅವಶ್ಯಕತೆಯಿದೆಯೆ? ಹೊಸ ಸಾಂಸ್ಥಿಕ ಸಂಸ್ಕೃತಿಯನ್ನು ರೂಪಿಸಬೇಕೆ? ಇಂತಹ ಸಂಸ್ಕೃತಿಯನ್ನು ರೂಪಿಸಲು ಬೇಕಾದ ಸಂಪನ್ಮೂಲಗಳು ಮತ್ತು ಜನರನ್ನು ಎಲ್ಲಿ ಹುಡುಕುವುದು?

ಈ ಪ್ರಶ್ನೆಗಳು ಮತ್ತು ಅವುಗಳಿಗೆ ಲಭ್ಯವಿರುವ ಉತ್ತರಗಳು -ಇವುಗಳ ಸಂಕೀರ್ಣತೆಯನ್ನು ಅರಿಯಲು ಪ್ರಸ್ತುತದ ಒಂದು ವಿವಾದವನ್ನು ಅವಲೋಕಿಸೋಣ. ಈ ವಿವಾದವು ನಮ್ಮ ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ ಉದ್ಭವಿಸಿದೆ. ಅದರ ಕೇಂದ್ರದಲ್ಲಿ ಇರುವವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕರಾದ ಪ್ರೊ.ಎಂ.ಕೆ.ಸೂರಪ್ಪನವರು. ಅವರೀಗ ಚೆನ್ನೆನಲ್ಲಿರುವ ಪ್ರತಿಷ್ಠಿತ ಅಣ್ಣಾ ವಿಶ್ವವಿದ್ಯಾನಿಲಯದ ಕುಲಪತಿಗಳು. ಅವರ ನೇತೃತ್ವದಲ್ಲಿ ಅಣ್ಣಾ ವಿಶ್ವವಿದ್ಯಾನಿಲಯವು ಭಾರತ ಸರ್ಕಾರವು ಹೊಸದಾಗಿ ಸ್ಥಾಪಿಸಿರುವ ಉತ್ಕಷ್ಟ ಸಂಸ್ಥೆ (ಇನ್ಸಿಟ್ಯೂಟ್ ಆ ಎಕ್ಸಲೆನ್ಸ್) ಸ್ಥಾನವನ್ನು ಪಡೆಯಿತು. ಈ ಗೌರವವನ್ನು ಪಡೆದ ಎರಡು ರಾಜ್ಯ ಮಟ್ಟದ ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ಅಣ್ಣಾ ವಿಶ್ವವಿದ್ಯಾನಿಲಯ ಮತ್ತು ಕೊಲಕತ್ತಾದ ಜಾದವಪುರ ವಿಶ್ವವಿದ್ಯಾನಿಲಯಗಳು ಸೇರಿವೆ.

ಅಣ್ಣಾ ವಿಶ್ವವಿದ್ಯಾನಿಲಯಕ್ಕೆ ಉತ್ಕಷ್ಟ ಸಂಸ್ಥೆ ಸ್ಥಾನ ದೊರಕಿರುವುದೆ ಇಂದಿನ ವಿವಾದಕ್ಕೆ ಕಾರಣವಾಗಿದೆ. 2019ರಲ್ಲಿ ಈ ಸ್ಥಾನಮಾನ ದೊರಕಿದಾಗ ಸಂತಸ ಪಟ್ಟಿದ್ದ ತಮಿಳುನಾಡಿನ ಪಳನಿಸ್ವಾಮಿ ನೇತೃತ್ವದ ರಾಜ್ಯ ಸರ್ಕಾರವು ಈಗ ಅಣ್ಣಾ ವಿಶ್ವವಿದ್ಯಾನಿಲಯಕ್ಕೆ ಉತ್ಕಷ್ಟ ಸಂಸ್ಥೆ ಸ್ಥಾನಮಾನವನ್ನು ನಿರಾಕರಿಸುವಂತೆ ನಿರ್ದೇಶಿಸುತ್ತಿದೆ. ರಾಜ್ಯಸರ್ಕಾರದ ನಿರ್ದೇಶನವನ್ನು ದಿಕ್ಕರಿಸಿದ ಸೂರಪ್ಪನವರ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ, ನ್ಯಾಯಾಂಗ ತನಿಖೆ ನಡೆಸಲು ರಾಜ್ಯಸರ್ಕಾರವು ಆದೇಶಿಸಿದೆ. ಇದು ನಡೆದಿರುವ ಘಟನೆಗಳ ಸರಳ ಚಿತ್ರಣ.

ಉತ್ಕಷ್ಟ ಸಂಸ್ಥೆ ಸ್ಥಾನಮಾನದ ಪರಿಕಲ್ಪನೆ ಮತ್ತು ಹಿನ್ನೆಲೆಗಳೇನು? ಭಾರತದ ಯಾವ ವಿಶ್ವವಿದ್ಯಾನಿಲಯ ಅಥವಾ ಸಂಶೋಧನಾ ಸಂಸ್ಥೆಯೂ ಕೂಡ ಜಾಗತಿಕ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿಯ ಮೊದಲ ಇನ್ನೂರು ಸ್ಥಾನಗಳಲ್ಲಿ ಇಲ್ಲದಿರುವುದನ್ನು ಸರಿಪಡಿಸಲು ಮೋದಿ ಸರ್ಕಾರವು ರೂಪಿಸಿದ ಹೊಸ ನೀತಿಯಿದು. ಇದರ ಅಂಗವಾಗಿ ಹತ್ತು ಸಾರ್ವಜನಿಕ ಮತ್ತು ಹತ್ತು ಖಾಸಗಿ ವಿಶ್ವವಿದ್ಯಾನಿಲಯಗಳನ್ನು ಉತ್ಕಷ್ಟ ಸಂಸ್ಥೆಗಳೆOದು ಗುರುತಿಸಲಾಯಿತು. ಈ ಪ್ರಕ್ರಿಯೆಯನ್ನು ನಿರ್ವಹಿಸಿದ್ದು ಮಾಜಿ ಚುನಾವಣಾ ಕಮೀಷನರ್ ಗೋಪಾಲಸ್ವಾಮಿ ಅವರ ನೇತೃತ್ವದ ಸಮಿತಿ. ಅ ಸಮಿತಿಯ ಶಿರಸುಗಳನ್ನು ಆಧರಿಸಿ, 2018ರಲ್ಲಿ ಆರು ಮತ್ತು 2019ರಲ್ಲಿ ಹದಿನಾಲ್ಕು ವಿಶ್ವವಿದ್ಯಾಲಯಗಳನ್ನು ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಉತ್ಕಷ್ಟ ಸಂಸ್ಥೆಗಳೆದು ಅಂಗೀಕರಿಸಿತು.

ಈ ಪ್ರಕ್ರಿಯೆಯೂ ಸಹ ವಿವಾದಾತ್ಮಾಕವಾಗಿಯೆ ಇದ್ದರೂ ಅದನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ. ಬದಲಿಗೆ ಈ ಸ್ಥಾನವನ್ನು ಪಡೆದ ಸಂಸ್ಥೆಗಳಿಗೆ ದೊರಕುವ ಲಾಭಗಳಾದರೂ ಏನು ಎನ್ನುವುದನ್ನು ಗುರುತಿಸೋಣ. ಭಾರತೀಯ ವಿಶ್ವವಿದ್ಯಾಲಯಗಳು ಉತ್ತಮ ಶ್ರೇಯಾಂಕ ಪಡೆಯದಿರಲು ಎರಡು ಕಾರಣಗಳಿವೆ ಎಂದು ಮೋದಿ ಸರ್ಕಾರವು ಗುರುತಿಸಿತು. ಅವುಗಳಲ್ಲಿ ಒಂದು ಆರ್ಥಿಕ ಸಂಪನ್ಮೂಲಗಳ ಕೊರತೆಯಾದರೆ, ಎರಡನೆಯದು ವಿಶ್ವವಿದ್ಯಾಲಯಗಳ ಕಾರ್ಯಚಟುವಟಿಕೆಗಳನ್ನು ನಡೆಸಲು ಅಡ್ಡಿ ಬರುವ ಸರ್ಕಾರದ ನೀತಿನಿಯಮಗಳು. ಇಂತಹ ಅಡಚಣೆಗಳಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ನಿಯಮಗಳು ಸಹ ಇವೆ ಎನ್ನುವುದು ಇಲ್ಲಿ ಗಮನಾರ್ಹ ವಿಷಯ.

ಉತ್ಕೃಷ್ಟ ಸಂಸ್ಥೆ ಸ್ಥಾನಮಾನಗಳನ್ನು ಪಡೆದ ವಿಶ್ವವಿದ್ಯಾನಿಲಯಗಳ ಮೇಲೆ ಯು.ಜಿ.ಸಿ.ಯ ನಿಬಂಧನೆಗಳು ಬಹುಮಟ್ಟಿಗೆ ಅನ್ವಯವಾಗುವುದಿಲ್ಲ. ಅಂದರೆ ಈ ಸಂಸ್ಥೆಗಳು ಸರ್ಕಾರದ ನೀತಿನಿಯಮಗಳನ್ನು ನೇಮಕಾತಿಯಲ್ಲಿ ಅಥವಾ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಪಾಲಿಸಬೇಕಿಲ್ಲ. ವಿದೇಶೀಯರನ್ನೂ ಸೇರಿದಂತೆ ಯಾರನ್ನಾದರೂ ಕೆಲಸಕ್ಕೆ ನೇಮಕ ಮಾಡಿಕೊಳ್ಳಬಹುದು. ಹೆಚ್ಚುವರಿ ಸಂಬಳ ಭತ್ಯೆಗಳನ್ನು ನೀಡಲು ಅವಕಾಶವಿದೆ. ಈ ಸ್ಥಾನಮಾನವನ್ನು ಪಡೆದ 10 ಸಾರ್ವಜನಿಕ ವಲಯದ ವಿಶ್ವವಿದ್ಯಾಲಯಗಳಿಗೆ 10,000 ಕೋಟಿ ಹಣವನ್ನು ನೀಡುವುದಾಗಿ ಕೇಂದ್ರ ಸರ್ಕಾರವು ಘೋಷಿಸಿತು.

ಇಲ್ಲಿ ಗಮನಿಸಬೇಕಾದ ಅಂಶವೊAದಿದೆ. ಭಾರತೀಯ ವಿಶ್ವವಿದ್ಯಾಲಯಗಳು ವಿಶ್ವಮಟ್ಟದಲ್ಲಿ ಉತ್ತಮ ಶ್ರೇಯಾಂಕ ಪಡೆಯದಿರಲು ಕಾರಣಗಳೆಂದರೆ ಸಂಪನ್ಮೂಲಗಳ ಕೊರತೆ ಮತ್ತು ಯುಜಿಸಿ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಗಳ ನಿರ್ಬಂಧಗಳು ಎಂದು ಮೋದಿ ಸರ್ಕಾರವೆ ಈ ಹೊಸನೀತಿಯನ್ನು ರೂಪಿಸುವಾಗ ಒಪ್ಪಿಕೊಂಡಿದೆ. ಇದು ಶ್ರೇಯಾಂಕಕ್ಕೆ ಮಾತ್ರ ಸೀಮಿತವಾದ ಆಯಾಮವಲ್ಲ, ಬದಲಿಗೆ ಜ್ಞಾನ ಸೃಷ್ಟಿ ಹಾಗೂ ಪ್ರಸರಣಗಳ ಗುಣಮಟ್ಟಕ್ಕೆ ಸಂಬOಧಿಸಿದ ವಿಷಯವೆಂದರೆ ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಈ ಹೊಸ ನೀತಿಯನ್ನು ವಿಶ್ವವಿದ್ಯಾಲಯ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗೆ ಬಳಸಲಿಲ್ಲ. ಯಾಕೆಂದರೆ ಅದಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸಲು ಅಗತ್ಯವಾದಷ್ಟು ಹಣಕಾಸಾಗಲಿ ಅಥವಾ ತನ್ನ ನಿಯಂತ್ರಕ ಅಧಿಕಾರವನ್ನು ಬಿಟ್ಟುಕೊಡುವ ಔದಾರ್ಯವಾಗಲಿ ಯಾವುದೆ ಸರ್ಕಾರಕ್ಕೂ ಇರುವುದಿಲ್ಲ. ಮೋದಿ ಸರ್ಕಾರಕ್ಕೂ ಇಲ್ಲ. ಹೊಸ ಶಿಕ್ಷಣ ನೀತಿಯೂ ಸಹ ಇಂತಹ ಸ್ವಾಯತ್ತತೆಯನ್ನು ಕೊಡಲು ಸಿದ್ಧವಿಲ್ಲ.

ಇದು ಹೀಗಿರಲಿ. ಅಣ್ಣಾ ವಿಶ್ವವಿದ್ಯಾನಿಲಯದ ಸಂದರ್ಭದಲ್ಲಿ ರಾಜ್ಯಸರ್ಕಾರವು ತನ್ನ ಆರಂಭದ ಉತ್ಸಾಹವನ್ನು ಕಳೆದುಕೊಂಡು, ಈ ಯೋಜನೆಯ ಅಂಗವಾಗಿ ತಾನು ಕೊಡಬೇಕಾಗಿದ್ದ ಅನುದಾನವನ್ನು ಕೊಡಲು ನಿರಾಕರಿಸಿತು. ಈ ಹಂತದಲ್ಲಿ ಸಮಸ್ಯೆಗಳು ಪ್ರಾರಂಭವಾದವು. ಮೋದಿ ಸರ್ಕಾರದ ಯೋಜನೆಯ ಅಂಗವಾಗಿ ಅಣ್ಣಾ ವಿಶ್ವವಿದ್ಯಾನಿಲಯಕ್ಕೆ ಒಂದು ಸಾವಿರ ಕೋಟಿ ಅನುದಾನವು ದೊರಕಬೇಕಿತ್ತು. ಇದೊಂದು ರಾಜ್ಯ ವಿವಿಯಾಗಿರುವುದರಿಂದ, ಕೇಂದ್ರದ ಅನುದಾನದ ಜೊತೆಗೆ ರಾಜ್ಯದ ಪಾಲನ್ನು ತಮಿಳುನಾಡು ಸರ್ಕಾರವು ಕೊಡಬೇಕಿತ್ತು. ಅಣ್ಣಾ ವಿಶ್ವವಿದ್ಯಾನಿಲಯದ ಉತ್ಕೃಷ್ಟ ಸಂಸ್ಥೆ ಯೋಜನೆಯ ಜೊತೆಗೆ ತನ್ನ ಪಾಲಿನ ಅನುದಾನವನ್ನು ನೀಡುವುದಾಗಿ ಪ್ರಮಾಣಪತ್ರವನ್ನು ನೀಡಲು ಪಳನಿಸ್ವಾಮಿ ಸರ್ಕಾರವು ನಿರಾಕರಿಸಿತು. ಈ ಹಂತದಲ್ಲಿ ಸೂರಪ್ಪನವರು ಅಣ್ಣಾ ವಿಶ್ವವಿದ್ಯಾಲಯವೆ ಆಂತರಿಕವಾಗಿ ರಾಜ್ಯಸರ್ಕಾರದ ಪಾಲನ್ನು ಸಹ ಕಲೆಹಾಕುವುದಾಗಿ ನಿರ್ಧರಿಸಿ, ಸರ್ಕಾರಕ್ಕೆ ತಿಳಿಸಿದರು ಸಹ. ಆದರೆ ತಮಿಳುನಾಡು ಸರ್ಕಾರ ಇದಕ್ಕೆ ಸಮ್ಮತಿಸಲಿಲ್ಲ. ಬದಲಿಗೆ ಉತ್ಕೃಷ್ಟ ಸಂಸ್ಥೆ ಸ್ಥಾನಮಾನವನ್ನೆ ನಿರಾಕರಿಸುವಂತೆ ಕುಲಪತಿ ಸೂರಪ್ಪನವರಿಗೆ ನಿರ್ದೇಶಿಸಿತು. ಈ ನಿರ್ದೇಶನವನ್ನು ಪಾಲಿಸಲು ನಿರಾಕರಿಸಿದ್ದು ಸೂರಪ್ಪನವರಿಗೆ ಈಗ ಮುಳುವಾಗಿರುವುದು.

ತಮಿಳುನಾಡು ಸರ್ಕಾರದ ಹಠಮಾರಿ ನಿಲುವಿಗೆ ಕಾರಣವೇನು? ಅಣ್ಣಾ ವಿಶ್ವವಿದ್ಯಾನಿಲಯಕ್ಕೆ ಉತ್ಕೃಷ್ಟ ಸಂಸ್ಥೆ ಸ್ಥಾನಮಾನದಿಂದ ದೊರಕುವ ಸ್ವಾಯತ್ತತೆಯು ಪಳನಿಸ್ವಾಮಿ ಸರ್ಕಾರದ ಗುಮಾನಿಗೆ ಕಾರಣವಾಗಿದೆ. ಈ ಸ್ವಾಯತ್ತತೆಯ ಮೂಲಕ ತಮಿಳುನಾಡಿನಲ್ಲಿ ಅನ್ವಯವಾಗುವ ಮೀಸಲಾತಿಯೂ ಸೇರಿದಂತೆ ಹಲವಾರು ನಿಯಮಗಳಿಂದ ವಿನಾಯಿತಿ ದೊರಕುತ್ತದೆ ಎಂದು ತಮಿಳುನಾಡಿನ ರಾಜಕಾರಣಿಗಳು ವಾದಿಸುತ್ತಿದ್ದಾರೆ. ಇದು ನಿಜವಲ್ಲವೆಂದು ಸೂರಪ್ಪನವರು ಉತ್ತರಿಸಿದರೂ ಸಹ, ಅದನ್ನು ಒಪ್ಪುವ ಸ್ಥಿತಿಯಲ್ಲಿ ಯಾರೂ ಇಲ್ಲ.

ಪ್ರೊ.ಸೂರಪ್ಪನವರು ನಮ್ಮ ನಡುವಿನ ಅತ್ಯುತ್ತಮ ವಿಜ್ಞಾನಿ ಮತ್ತು ಆಡಳಿತಗಾರರಲ್ಲಿ ಒಬ್ಬರು. ಕಳೆದ ಐದು ದಶಕಗಳ ಸಂಶೋಧನೆಗಳು ಮತ್ತು ಸಂಸ್ಥಾಪಕ ನಿರ್ದೇಶಕರಾಗಿ ಅವರು ರೂಪಿಸಿದ ರೋಪಾರಿನ ಹೊಸ ಐ.ಐ.ಟಿ.ಗೆ ಈಗಿರುವ ಜಾಗತಿಕ ಮನ್ನಣೆಗಳು ಅವರ ದಕ್ಷತೆ, ಸಾಮರ್ಥ್ಯ ಮತ್ತು ಸಾಧನೆಗಳಿಗೆ ನಿದರ್ಶನಗಳು.

ಎಲ್ಲಕ್ಕಿಂತ ಮಿಗಿಲಾಗಿ ಕಳೆದ ಐದು ದಶಕಗಳ ಅವರ ವೃತ್ತಿಜೀವನ ಕಳಂಕರಹಿತವಾದುದು. ಹೀಗಾಗಿ ಅಣ್ಣಾ ವಿಶ್ವವಿದ್ಯಾನಿಲಯದ ನಿದರ್ಶನದಿಂದ ಸ್ಪಷ್ಟವಾಗುವುದಿಷ್ಟೆ. ಸೂರಪ್ಪನವರಂತಹ ಶೈಕ್ಷಣಿಕ ತಜ್ಞರಿಗೂ ಸಹ ಸ್ವಾಯತ್ತವಾಗಿ ಒಂದು ಸಂಸ್ಥೆಯನ್ನು ಕಟ್ಟುವ ಅವಕಾಶವನ್ನು ನಮ್ಮ ವ್ಯವಸ್ಥೆ ಕೊಡಲು ಸಿದ್ಧವಿಲ್ಲ. ಮಾತ್ರವಲ್ಲ, ಅವರಂತೆ ಸಂಸ್ಥೆಯ ಒಳಿತನ್ನು ಸಾಧಿಸಲು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಮುಂದಾದರೆ, ಇಲ್ಲದ ಆರೋಪಗಳನ್ನು ಮಾಡಿ ಜೈಲಿಗೆ ಕಳುಹಿಸಲು ಪಿತೂರಿ ಮಾಡಲು ಸಹ ಹೇಸುವುದಿಲ್ಲ. ಸರ್ಕಾರಗಳಾಗಲಿ, ಅಧಿಕಾರಿವರ್ಗವಾಗಲಿ, ಜಾತಿಸಂಸ್ಥೆಗಳಾಗಲಿ ಈಗ ಅವುಗಳಿಗೆ ವಿಶ್ವವಿದ್ಯಾಲಯಗಳೊಳಗೆ ಅಧಿಕಾರ ಚಲಾಯಿಸಲು, ಹಸ್ತಕ್ಷೇಪ ಮಾಡಲು ಇರುವ ಅವಕಾಶಗಳನ್ನು ಸುಮ್ಮನೆ ಬಿಟ್ಟುಕೊಡುವುದಿಲ್ಲ.

ತಮಿಳುನಾಡಿನ ರಾಜಕಾರಣಿಗಳನ್ನು ಮಾತ್ರ ದೂರಲು ಈ ಅವಕಾಶವನ್ನು ನಾವು ಬಳಸಿಕೊಳ್ಳುತ್ತಿಲ್ಲ. ಕರ್ನಾಟಕದಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಇಂತಹುದೆ ಸಂದರ್ಭ ಉದ್ಭವಿಸಿದರೆ, ಆಗ ಸಹ ಹೀಗೆಯೆ ನಮ್ಮ ರಾಜಕಾರಣಿಗಳೂ ಸಹ ನಡೆದುಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೆ ಅನುಮಾನವಿಲ್ಲ. ನಮ್ಮ ತರಗತಿಗಳೊಳಗೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯಗಳ ಕಚೇರಿಗಳ ಒಳಗೆ ಜ್ಞಾನಸೃಷ್ಟಿ – ಪ್ರಸರಣಗಳಿಗೆ ಬದ್ಧರಾಗಿರುವ ಆಡಳಿತಗಾರರು ಮಾತ್ರ ಇರುವ ಪರಿಸ್ಥಿತಿ ನಿರ್ಮಾಣವಾಗುವ ತನಕ ಇಂತಹ ವಿವಾದಗಳು ಪದೇಪದೆ ಹುಟ್ಟುತ್ತಿರುತ್ತವೆ.

ಹೀಗಾದರೆ ಉನ್ನತ ಶಿಕ್ಷಣ ಸಂಸ್ಥೆಗಳ ಸುಧಾರಣೆ ಹೇಗೆ ಸಾಧ್ಯ? ಹಿಂದಿನ ಮುಖ್ಯಚರ್ಚೆಗೆ ಪ್ರತಿಕ್ರಿಯಿಸಿದ ಹಲವಾರು ಓದುಗರು ಈ ಸಮಸ್ಯೆಗೆ ಪರಿಹಾರವನ್ನು ನಾವು ಸೂಚಿಸುತ್ತಿಲ್ಲ ಎಂದು ಆಕ್ಷೇಪಿಸಿದರು. ವಿಶ್ವವಿದ್ಯಾನಿಲಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಬೇಕು ಎಂದು ವಾದಿಸಿದರು. ಆದರೆ ಆಮೂಲಾಗ್ರ ಬದಲಾವಣೆ ಯಾವ ಸ್ವರೂಪದ್ದು ಮತ್ತು ಅದನ್ನು ಹೇಗೆ ಮಾಡಬೇಕು ಎನ್ನುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳಿಲ್ಲ.

ನವ ಶಿಕ್ಷಣ ನೀತಿ, 2020ರಿಂದ ಅಥವಾ ಅಂತಹ ಮತ್ತೊಂದು ನೀತಿಯಿಂದ ಬದಲಾವಣೆಗಳು ಸಾಧ್ಯವೆ? ಕಳೆದ ಒಂದು ವರ್ಷದಲ್ಲಿ ದೇಶದ ಎಲ್ಲ ಪಂಡಿತರು ಈ ಹೊಸ ನೀತಿಯ ಬಗ್ಗೆ ಆಮೂಲಾಗ್ರ ಚರ್ಚೆಯನ್ನು ನಡೆಸಿದ್ದಾರೆ. ಆದರೆ ಈ ನೀತಿಯು ಯಾವ ಬಿಕ್ಕಟ್ಟನ್ನು ಪರಿಹರಿಸುತ್ತದೆ ಎನ್ನುವ ಸರಳ ಪ್ರಶ್ನೆಯನ್ನು ಯಾರೂ ಕೇಳುತ್ತಿಲ್ಲ. ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಅವಧಿಯನ್ನು ಬದಲಿಸುವುದರಿಂದ, ಲಿಬರಲ್ ಆರ್ಟ್ಸ್ ವಿಧಾನವನ್ನು ಉನ್ನತ ಶಿಕ್ಷಣದಲ್ಲಿ ಅನುಸರಿಸುತ್ತೇವೆ ಎಂದು ಹೇಳುವುದರಿಂದ ಯಾವ ಬದಲಾವಣೆಯೂ ಆಗುವುದಿಲ್ಲ. ಈ ನೀತಿಗಳನ್ನು ರೂಪಿಸುವವರು ಯಾರೂ ಸಹ ಕಳೆದ ಎರಡು-ಮೂರು ದಶಕಗಳಲ್ಲಿ ಭಾರತದ ಯಾವುದೆ ವಿಶ್ವವಿದ್ಯಾಲಯದ ತರಗತಿಯ ಕೊಠಡಿಯೊಂದನ್ನು ಪ್ರವೇಶಿಸಿದವರು ಅಲ್ಲ. ಕಸ್ತೂರಿರಂಗನ್ ಸಮಿತಿಯ ಸದಸ್ಯಪಟ್ಟಿಯನ್ನು ನೋಡಿ. ಅದರಲ್ಲಿ ಈಗ ಪಾಠ ಮಾಡುತ್ತಿರುವವರು ಗಣಿತಶಾಸ್ತçಜ್ಞ ಮಂಜುಲ್ ಭಾರ್ಗವ ಒಬ್ಬರು ಮಾತ್ರ.

ಅಮೆರಿಕದ ಪ್ರಿನ್ಸ್ಟನ್ನಿನಲ್ಲಿ ಕುಳಿತಿರುವ ಅವರಾಗಲಿ ಅಥವಾ ತರಗತಿಯ ವಸ್ತುಸ್ಥಿತಿಯ ಅನುಭವವಿಲ್ಲದ ಕಸ್ತೂರಿ ರಂಗನ್ ಹಾಗೂ ಅನುರಾಗ್ ಬೆಹರ್ (ಅಜೀಮ್ ಪ್ರೇಮಜಿ ವಿವಿಯ ಕುಲಪತಿ) ಇಂತಹವರು ಯಾವ ಹೊಸ ಪರಿಹಾರವನ್ನು ಕೊಡಬಲ್ಲರು?

ನಮಗೆ ತುರ್ತಾಗಿ ಬೇಕಾಗಿರುವುದು ಹೊಸ ಸಾಂಸ್ಥಿಕ ಸಂಸ್ಕೃತಿ. ಲಿಬರಲ್ ಆರ್ಟ್ಸ್ ವಿಧಾನದ ಬಗ್ಗೆ ಮಾತನಾಡುತ್ತ ಬಯೊಮೆಟ್ರಿಕ್ ಹಾಜರಾತಿಯನ್ನು ಬಯಸುವ ಸಂಸ್ಕೃತಿಯಲ್ಲ. ಸ್ವತಂತ್ರ ಚಿಂತನೆಯನ್ನು ಪೋಷಿಸುವ ಸಾಮರ್ಥ್ಯವಿರುವ ಹಾಗೂ ತನ್ನ ವಿಷಯವನ್ನು ಅರಿತಿರುವ ಅಧ್ಯಾಪಕನಿಗೆ ಕಚೇರಿಯಲ್ಲಿ ಎಷ್ಟು ಹೊತ್ತು ಕುಳಿತಿರಬೇಕು, ಯಾವಾಗ ಕೆಲಸ ಮಾಡಬೇಕು ಎನ್ನುವ ಅರಿವು ಜವಾಬ್ದಾರಿ ಇರುತ್ತದೆ. ಈ ಹೊತ್ತು ಅಂತಹ ಸಾಮರ್ಥ್ಯವಿರುವ ಅಧ್ಯಾಪಕರು ನಮ್ಮ ವಿಶ್ವವಿದ್ಯಾಲಯಗಳಲ್ಲಿ ಇಲ್ಲ ಎಂದರೆ, ಅಂತಹವರನ್ನು ಹೊರಹಾಕುವ ತನಕ ಸುಧಾರಣೆಯ ಚರ್ಚೆಯನ್ನು ನಿಲ್ಲಿಸುವುದು ಒಳ್ಳೆಯದು. ಏಕೆಂದರೆ ಸುಧಾರಣೆ-ಬದಲಾವಣೆಗಳು ಸಾಧ್ಯವಿರುವುದು ಯಾವುದೆ ಹೊಸನೀತಿಯಿಂದ ಮಾತ್ರವಲ್ಲ, ಸಮರ್ಥ ಅಧ್ಯಾಪಕರಿಂದ ಮಾತ್ರ.

ನಮ್ಮ ಮುಂದಿನ ವಿಪರ್ಯಾಸವಿದು. ಮೆಕಾಲೆಯ ಶಿಕ್ಷಣ ಸಂಸ್ಕೃತಿಯನ್ನು ಅಳಿಸಿ, ಭಾರತದ ಗುರುಕುಲ ಮಾದರಿಯನ್ನು ಅನುಸರಿಸುವ ಮಾತುಗಳು ಆಗಾಗ ಕೇಳುತ್ತಿವೆ. ಆದರೆ ನಮ್ಮ ರಾಜ್ಯದಲ್ಲಾಗಲಿ, ದೇಶದ ಇತರೆ ಭಾಗಗಳಲ್ಲಿ ಆಗಲಿ ಗುರುವನ್ನು ಕೇಂದ್ರಕ್ಕೆ ತರುವ, ತರಗತಿಯನ್ನು ಗುರುವಿಗೆ ಬಿಟ್ಟುಕೊಡುವ ಆಶಯ ಮಾತ್ರ ಎಲ್ಲಿಯೂ ಕಾಣಸಿಗುತ್ತಿಲ್ಲ. ಸಮರ್ಥ ಗುರುಗಳೆ ಇಲ್ಲ ಎನ್ನುವ ಸಿನಿಕರೂ ನಮ್ಮ ನಡುವೆ ಇದ್ದಾರೆ. ಆದರೆ ಅದು ಮತ್ತೊಂದು ಚರ್ಚೆಯ ವಿಷಯ.

 ಪ್ರೊ.ಎಂ.ಕೆ.ಸೂರಪ್ಪ

ಮೈಸೂರು ಜಿಲ್ಲೆಯ ಮಿರ್ಲೆಯ ರೈತ ಕುಟುಂಬವೊAದರಲ್ಲಿ 1951ರಲ್ಲಿ ಜನಿಸಿದ, ಪ್ರೊ.ಸೂರಪ್ಪನವರು ಮೈಸೂರು ವಿಶ್ವವಿದ್ಯಾಲಯ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದರು. 1980ರಲ್ಲಿ ಮೆಟೀರಿಯಲ್ ಸೈನ್ಸಿನಲ್ಲಿ ಪಿ.ಹೆಚ್.ಡಿ. ಪದವಿಯನ್ನು ಗಳಿಸಿದ ನಂತರ, ಅಮೆರಿಕದ ಡ್ರೆಕ್ಸೆಲ್ ವಿಶ್ವವಿದ್ಯಾನಿಲಯ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಕ್ಯಾವೆಂಡಿಷ್ ಪ್ರಯೋಗಾಲಯಗಳಲ್ಲಿ ಸಂಶೋಧಕರಾಗಿ ಕೆಲಸ ಮಾಡಿದರು.

1987ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿಯಾದ ನಂತರ ಭಾರತಕ್ಕೆ ಹಿಂದಿರುಗಿ, ತಮ್ಮ ಬೋಧನೆ ಮತ್ತು ಸಂಶೋಧನೆಗಳನ್ನು ಬೆಂಗಳೂರಿನಲ್ಲಿಯೆ ಮುಂದಿನ ನಾಲ್ಕು ದಶಕಗಳ ಕಾಲ ಸೂರಪ್ಪನವರು ನಡೆಸಿದರು. ಮೆಟಲ್ ಮ್ಯಾಟ್ರಿಕ್ಸ್ ಕಾಂಪೊಸಿಟ್ (ಭಿನ್ನ ಲೋಹಗಳನ್ನು ಸಂಯೋಗ ಮಾಡುವ) ಕ್ಷೇತ್ರದಲ್ಲಿ ವಿಶೇಷ ಪರಿಣತಿ ಹೊಂದಿರುವ ಸೂರಪ್ಪನವರು ಜಾಗತಿಕವಾಗಿ ಮನ್ನಣೆ ಪಡೆದಿರುವ ಲೋಹ ಸಂಯೋಜನಾ ವಿಧಾನಗಳನ್ನು ರೂಪಿಸಿದ್ದಾರೆ.

2009ರಿಂದ 2015ರವರೆಗೆ ಪಂಜಾಬಿನ ರೋಪಾರಿನಲ್ಲಿ ಸ್ಥಾಪಿತವಾದ ಐಐಟಿಯ ಸಂಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಅವರ ನಾಯಕತ್ವದಲ್ಲಿ ಈ ಹೊಸ ಸಂಸ್ಥೆಯು ಉತ್ತಮ ಐಐಟಿಗಳ ಸಾಲಿಗೆ ಸೇರಿದ್ದು ಗಮನಾರ್ಹವಾದುದು. ಅಣ್ಣಾ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅವರು ನೇಮಕ ಹೊಂದಿದ್ದು 2018ರಲ್ಲಿ.

Leave a Reply

Your email address will not be published.