ಅತ್ತೆ ಅಮ್ಮನಾಗುವ ಅಚ್ಚರಿ!

-ಡಾ.ವಸುಂಧರಾ ಭೂಪತಿ

ಜಗತ್ತಿನ ಓಟದ ಜೊತೆಗೆ ನನ್ನ ಅತ್ತೆಯವರ ನಡಿಗೆಯೂ ಇದೆ. ಅವರು ಆಧುನಿಕತೆಗೆ ತೆರೆÀದುಕೊಳ್ಳುವ ಮನೋಭಾವದವರು; ಸ್ತ್ರೀವಾದವನ್ನು ಓದದೆಯೇ ಸ್ತ್ರೀವಾದಿಯಾಗಿರುವವರು. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿಯವರನ್ನು ಓದದಿದ್ದರೂ ಅವರ ವಿಚಾರಗಳನ್ನು ಬದುಕಾಗಿಸಿಕೊಂಡವರು.

ಒಂದು ಕುಟುಂಬದಲ್ಲಿ ಅತ್ತೆ ಸೊಸೆ ಅನ್ಯೋನ್ಯವಾಗಿದ್ದರು. ಒಮ್ಮೆ ಮನೆಗೆ ನೆಂಟರು ಬಂದಿರುತ್ತಾರೆ. ಅವರು ಮಾತಾಡ್ತಾ ಅತ್ತೆಗೆ ಸೊಸೆಯ ಬಗ್ಗೆ ಕೇಳ್ತಾರೆ. ಆಗ ಅತ್ತೆ, ‘ಮಗಳು ಸಕ್ಕರೆ ಇದ್ದಂತೆ, ಸೊಸೆ ಉಪ್ಪು ಇದ್ದಂತೆ’ ಎನ್ನುತ್ತಾರೆ. ಸೊಸೆಯ ಕಿವಿಗೆ ಆ ಮಾತು ಬಿದ್ದು ತುಂಬ ದುಃಖವೆನಿಸುತ್ತದೆ, ಮೌನಿಯಾಗ್ತಾಳೆ. ಯಾವ ಕೆಲಸದಲ್ಲಿಯೂ ಆಸಕ್ತಿಯಿರುವುದಿಲ್ಲ. ಅತ್ತೆಯೂ ಸೊಸೆಯ ನಡವಳಿಕೆಯನ್ನು ಗಮನಿಸುತ್ತಿರುತ್ತಾಳೆ. ಅತ್ತೆ ಸೊಸೆಯನ್ನು ಕೂರಿಸಿಕೊಂಡು ಕಾರಣ ಕೇಳುತ್ತಾಳೆ. ಸೊಸೆ ದುಃಖದಿಂದಲೇ ಸಕ್ಕರೆ-ಉಪ್ಪಿನ ವಿಷಯ ಹೇಳುತ್ತಾಳೆ. ಅತ್ತೆ ನಗುತ್ತಾ ‘ನೀನು ತಪ್ಪು ತಿಳಿದಿದ್ದೀಯಾ, ಉಪ್ಪು ಇಲ್ಲದೇ ಯಾವ ಅಡುಗೆಯು ರುಚಿಸುವುದಿಲ್ಲ. ಉಪ್ಪಿನ ಋಣ ಯಾರೂ ತೀರಿಸಲು ಆಗುವುದಿಲ್ಲ. ನೀನು ಉಪ್ಪಿದ್ದಂತೆ ಅಂದ್ರೆ ನಿನ್ನ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ. ಈಗ ಹೇಳು ಸಕ್ಕರೆ ಹೆಚ್ಚೋ, ಉಪ್ಪು ಹೆಚ್ಚೋ ಅಂತ?’.

ಅತ್ತೆಯಾಗುವುದು ಸುಲಭ. ಆದರೆ ಅತ್ತೆ ಅಮ್ಮನಾಗುವ ಪರಿ ಇದೆಯಲ್ಲ… ಈ ಪಯಣ ಬಲು ಅಪರೂಪದ್ದು. ನನ್ನ ಬಂಧುಗಳ, ಸ್ನೇಹಿತರ ಬಹಳಷ್ಟು ಕುಟುಂಬಗಳಲ್ಲಿ ಕಂಡಿರುವಂತೆ ಸೊಸೆಯಾಗಿ ಬಂದವಳು ತನ್ನ ಮನೆಗೆ ಹೊಂದಿಕೊಂಡು ಹೋಗಬೇಕು ಎಂದು ಅಪೇಕ್ಷೆ ಪಡುವ ಅತ್ತೆಯರು ತಾವು ಅವಳಿಗೆ ಹೊಂದಿಕೊಂಡು ಹೋಗಬೇಕು, ತಮ್ಮ ಮನೆಯ ರೀತಿ, ನೀತಿ, ರಿವಾಜುಗಳನ್ನು ಅವಳಿಗೆ ತಿಳಿಸಿಕೊಡಬೇಕು ಎಂಬುದನ್ನೇ ಮರೆಯುತ್ತಾರೆ. ಇನ್ನು ಕೆಲವು ಅತ್ತೆಯರಂತು ಮಗ, ಸೊಸೆ ನಗುನಗುತ್ತ ಸಂತೋಷವಾಗಿರುವುದನ್ನೇ ಸಹಿಸಲಾರರು. ತಮಗಿಲ್ಲದ ಸುಖ ಅವರಿಗೂ ಬೇಡ ಎಂಬ ಸ್ಯಾಡಿಸ್ಟ್ ಮನೋಭಾವ ಅನೇಕರಲ್ಲಿರುತ್ತದೆ.

ಮಗನ ಮೇಲೆ ಅಧಿಕಾರ ಚಲಾಯಿಸುವುದು ತಮ್ಮ ಹಕ್ಕು ಎಂದು ಭಾವಿಸಿರುತ್ತಾರೆ. ಮಗನ ಸಂತೋಷಕ್ಕಿಂತ ತಮ್ಮ ಅಧಿಕಾರ ಚಲಾವಣೆ ಅವರಿಗೆ ಮುಖ್ಯವೆನಿಸುತ್ತದೆ. ಸೊಸೆ ಅಂದ್ರೇನೆ ತೊತ್ತಿನ ಹಾಗೆ ಪರಿಭಾವಿಸಿರುತ್ತಾರೆ. ಅತ್ತೆ, ಸೊಸೆಯ ಸಂಬಂಧ ಮೇಲ್ನೋಟಕ್ಕೆ ಕಂಡುಬರುವಂತೆ ಸರಳವಾಗಿಲ್ಲ. ತನ್ನ ಹೆಣ್ಣುಮಕ್ಕಳಿಗೆ ಅತ್ತೆಯ ಮನೆಯಲ್ಲಿ ಕಷ್ಟ ಇರಬಾರದು, ಅಳಿಯ ಅವಳÀನ್ನ ಪ್ರೀತಿಯಿಂದ ನೋಡಿಕೊಳ್ಳಬೇಕು ಅಂತ ಬಯಸುವವರು ತಮ್ಮ ಮಗನ ಹೆಂಡತಿಯು ಇನ್ನೊಬ್ಬ ತಾಯಿಯ ಮಗಳೇ ಅಲ್ಲವೇ ಎಂಬುವುದನ್ನು ಮರೆಯುತ್ತಾರೆ. ಪ್ರೀತಿ, ಗೌರವಗಳೆರಡು ನಾವು ಇತರರಿಗೆ ಕೊಟ್ಟಷ್ಟು ನಮಗೆ ವಾಪಸ್ ಬರುತ್ತವೆ. ಯಾವ ಮನೆಯಲ್ಲಿ ಅತ್ತೆ, ಸೊಸೆ ಪರಸ್ಪರರನ್ನು ಗೌರವಿಸುತ್ತಾರೋ ಅಂತಹ ಮನೆಯೇ ಭೂಮಿಯಲ್ಲಿನ ಸ್ವರ್ಗ. ಮಗ, ಸೊಸೆಯ ಏಳಿಗೆಯಲ್ಲಿಯೇ ಇಡೀ ಮನೆಯ ಉನ್ನತಿ ಅಡಗಿದೆಯೆಂಬ ಸತ್ಯವನ್ನು ಮನಗಾಣಬೇಕು.

ನನ್ನ ಅತ್ತೆ ನಾಗಮ್ಮ ಶಾಲೆಯ ಮುಖ ಕಂಡವರಲ್ಲ. ಆದರೆ ಸಹಿ ಮಾಡಬಲ್ಲರು, ಫೋನ್ ನಂ ಹೇಳಬಲ್ಲರು, ಮೈಕ್ರೋವೇವ್ ಓವನ್ ಬಳಸಬಲ್ಲರು. ಈ ರೀತಿಯಲ್ಲಿ ಅವರೊಬ್ಬ ಸುಶಿಕ್ಷಿತೆ. ಬಹುಪಾಲು ಜನ ಅಕ್ಷರಸ್ಥರಾಗಿರುತ್ತಾರೆಯೇ ಹೊರÀತು ಸುಶಿಕ್ಷಿತರಾಗಿರುವುದಿಲ್ಲ. ನನ್ನ ಅತ್ತೆ ಜಾತ್ಯಾತೀತ ಮನೋಭಾವದವರು. ಅವರ ನಾಲ್ಕು ಮಕ್ಕಳಲ್ಲಿ ಇಬ್ಬರು ಮಕ್ಕಳು ಅಂತರ್ಜಾತಿ ಮದುವೆಯಾದವರು. ನಮ್ಮ ಮದುವೆಯಾಗಿ 35 ವರ್ಷಗಳಾಗುತ್ತಾ ಬಂತು. ನಮ್ಮ ಮದುವೆಯಾದಾಗಿನಿಂದ ಇಲ್ಲಿಯೇ ನಮ್ಮೊಂದಿಗೇ ಇದ್ದಾರೆ.

ನಮ್ಮಿಬ್ಬರ ನಡುವೆ ಯಾವತ್ತೂ ಯಾವುದೇ ವಿಷಯಕ್ಕೂ ಭಿನ್ನಾಭಿಪ್ರಾಯ ಉಂಟಾಗಿಲ್ಲ. ನೇರ ನುಡಿಯ ವಿಶಾಲ ಮನೋಭಾವದ ವ್ಯಕ್ತಿತ್ವ ಅವರದು. ನನ್ನ ಸಾಧನೆಯಲ್ಲಿ ಅವರ ಪಾಲು ಬಹಳಷ್ಟಿದೆ. ಅಡುಗೆ, ಮಕ್ಕಳ ಆರೈಕೆಯನ್ನು ಸಂಪೂರ್ಣವಾಗಿ ನೋಡಿಕೊಂಡಿದ್ದಾರೆ. ಎಷ್ಟೋಬಾರಿ ಮಧ್ಯಾಹ್ನ ನಾನು ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ಭೂಪತಿಯವರೇ ಫೋನ್ ಮಾಡಿದಾಗಲೂ “ಡಾಕ್ಟ್ರು ಮಲಗಿದಾರಪ್ಪ… ಆಮೇಲೆ ಫೋನ್ ಮಾಡು” ಅಂತ ರಿಸೀವರ್ ಇಟ್ಟು ಬಿಡುತ್ತಿದ್ದರೇ ವಿನಾ ನನ್ನನ್ನು ಎಬ್ಬಿಸುತ್ತಿರಲಿಲ್ಲ. ಇದು 25 ವರ್ಷಗಳ ಹಿಂದಿನ ಮಾತು. ಆಗ ಮೊಬೈಲ್ ಇನ್ನೂ ನಮ್ಮ ಬದುಕನ್ನು ಪ್ರವೇಶಿಸಿರಲಿಲ್ಲ.

ಹತ್ತು ಕೊಳಗ ಬತ್ತ, ಬತ್ತದ ಬಾವಿ ನೀರ

ಮತ್ತೇಳ ಅತ್ತೆಮ್ಮ ಕೆಲಸವಾ ಸೊಸೆಮುದ್ದಿ

ದುಂಡು ಮಲ್ಲಿಗೆ ಸರವ ಮುಡಿಬಾರೆ ಸೊಸೆಮುದ್ದಿ

ಹಾಲೋಗರದನ್ನ ಉಣಬಾರೆ

ಇದು ಅತ್ತೆ ಸೊಸೆಯ ಅನ್ಯೋನ್ಯತೆಯನ್ನು ಸಾರುತ್ತದೆ. ಒಮ್ಮೆ ನನ್ನ ಮೈದುನ ಅವನ ಪತ್ನಿಯೊಂದಿಗೆ ಜಗಳವಾಡಿಕೊಂಡು ಬಂದಾಗ ನನ್ನತ್ತೆ ಹೇಳಿದ್ದು ಹೀಗೆ, “ನೀನೆ ಏನೋ ತಪ್ಪು ಮಾಡಿರುತ್ತೀಯ, ಅವಳು ಜಗಳ ಮಾಡಿರುತ್ತಾಳೆ. ನಿನ್ನನ್ನು ನೀನು ಸರಿಮಾಡಿಕೊ’’ ಎಂದಿದ್ದು ನಾನೆಂದಿಗೂ ಮರೆಯಲಾರೆ. ಅವರಿಗೆ ಹೆಣ್ಣುಮಕ್ಕಳಿರದಿದ್ದರೂ ಸೊಸೆಯರ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೀತಿ. ಯಾವುದೇ ಕೆಲಸವಿರಲಿ ಶ್ರದ್ಧೆಯಿಂದ ಮಾಡಬೇಕೆನ್ನುವುದು ಅವರ ನಿಲುವು. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತು ಅವರಿಗೆ ಅನ್ವರ್ಥಕವಾದುದ್ದು.

ಹಬ್ಬ ಹರಿದಿನಗಳಲ್ಲಂತು ಬೆಳಗ್ಗೆ ಬೇಗನೆ ಎದ್ದು ಹೋಳಿಗೆ ತಯಾರಿಸಲು ಬೇಳೆ ಬೇಯಲು ಇಟ್ಟಿರುತ್ತಿದ್ದರು. ಅವರಲ್ಲಿ ನನಗೆ ಇಷ್ಟವಾದ ಗುಣವೆಂದರೆ ಜಗತ್ತಿನ ಓಟದ ಜೊತೆಗೆ ಅವರ ನಡಿಗೆಯೂ ಇದೆ. ಅವರು ಆಧುನಿಕತೆಗೆ ತೆರೆÀದುಕೊಳ್ಳುವ ಮನೋಭಾವದವರು; ಸ್ತ್ರೀವಾದವನ್ನು ಓದದೆಯೇ ಸ್ತ್ರೀವಾದಿಯಾಗಿರುವವರು. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿಯವರನ್ನು ಓದದಿದ್ದರೂ ಅವರ ವಿಚಾರಗಳನ್ನು ಬದುಕಾಗಿಸಿಕೊಂಡವರು.

ಯಾಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ ನನ್ನ ಎರಡನೇ ಮೈದುನ ಹೃದಯಘಾತದಿಂದ ನಿಧನ ಹೊಂದಿದ್ದಾಗ ಅವನಿಗೆ ನಲವತ್ತು ವರ್ಷಗಳು ಅಷ್ಟೇ. ಅವನ ಪತ್ನಿಗೆ ಮೂವತ್ತು ವರ್ಷ ಇರಬೇಕು. ನನ್ನತ್ತೆಗೂ ಮಗನ ಸಾವು ಅಘಾತವನ್ನೇ ತಂದಿದ್ದರೂ, ಸೊಸೆಗೆ ಧೈರ್ಯ, ಸಾಂತ್ವನ ಹೇಳುತ್ತ “ನೋಡಮ್ಮ ನೀನು ಮನೆಯಲ್ಲೇ ಇದ್ದರೆ ನೋವು ಇನ್ನೂ ಹೆಚ್ಚಾಗುತ್ತದೆ. ಓದು ಮುಂದುವರೆಸು. ಕೆಲಸಕ್ಕೆ ಸೇರು. ಒಳ್ಳೆ ಹುಡುಗನನ್ನು ನೋಡಿ ಮದುವೆಯಾಗಬೇಕು. ನಾವೇ ನಿಂತು ಮದುವೆ ಮಾಡಿಸುತ್ತೇವೆ” ಎಂದರು. ಆ ಮಾತನ್ನು ಕೇಳಿ ನನ್ನ ಓರಗಿತ್ತಿಯ ತಾಯಿಯೇ ಆಶ್ಚರ್ಯಚಕಿತರಾದರು.

ಮಗನ ಬಗ್ಗೆ ಅಂದರೆ ನನ್ನ ಪತಿ ಭೂಪತಿಯವರ ಬಗ್ಗೆ ತುಂಬ ಹೆಮ್ಮೆ, ಅಭಿಮಾನ. ಇಂತಹ ಮಗ ಯಾರಿಗೂ ಹುಟ್ಟಲಾರ ಎನ್ನುತ್ತಾರೆ. ಅವರು ಕೂಡ ಅಮ್ಮನ ಬಗ್ಗೆ ಅಷ್ಟೇ ಪ್ರೀತಿ, ಕಾಳಜಿ ಹೊಂದಿದ್ದರು. ಇಡೀ ಬದುಕನ್ನು ಹೊಲ, ಮನೆಗಳನ್ನು ಸಂಭಾಳಿಸುವುದರಲ್ಲಿ ನಿರತರು. ನಮ್ಮ ಮಾವನವರು ಜಮೀನ್ದಾರೀ ಮನೋಭಾವದವರು. ಸದಾ ಗತ್ತಿನಲ್ಲೇ ಇರುತ್ತಿದ್ದವರು. ಅವರಿಗೆ ಬಯಲಾಟದಲ್ಲಿ ಪಾತ್ರ ಮಾಡುವ ಹುಚ್ಚು. ಬೇಸಿಗೆ ಬಂತೆಂದರೆ ಬಯಲಾಟ ಕಲಿಯಲು ತಮ್ಮ ಮನೆಯ ಪಡಸಾಲೆಯನ್ನೇ ಬಿಟ್ಟುಕೊಡುತ್ತಿದ್ದರು.

ನಟಿಯರನ್ನು ಬೇರೆ ಬೇರೆ ಊರುಗಳಿಂದ ಕರೆಸಿ ಮನೆಯಲ್ಲೇ ಇರಿಸಿಕೊಳ್ಳುತ್ತಿದ್ದರು. ಆ ನಟಿಯರಲ್ಲಿ ಮಾವನವರಿಗೆ ಒಬ್ಬ ನಟಿ ತುಂಬ ಹತ್ತಿರವಾಗಿದ್ದಳು. ಅತ್ತೆಯವರು ಆಕೆಗೆ ಎಷ್ಟೋ ಬಾರಿ ಸ್ನಾನ ಮಾಡಲು ಬಿಸಿನೀರು ಕಾಯಿಸಿಕೊಟ್ಟು, ಅಡುಗೆ ಮಾಡಿ ಊಟ ಬಡಿಸಬೇಕಾಗಿತ್ತು. ಅತ್ತೆಯವರಿಗೆ ತನ್ನ ಗಂಡನೊಂದಿಗೆ ಆಕೆಯ ಸಂಬಂಧ ಗೊತ್ತಿದ್ದರೂ ಅತ್ತೆಯವರು ಗಂಡನಿಗೆ ಎದುರು ಮಾತನಾಡುತ್ತಿರಲಿಲ್ಲ. ಅವರಿಬ್ಬರ ಸಂಬಂಧ ಅತಿರೇಕಕ್ಕೆ ಹೋಗಿ 4 ಎಕರೆ ಹೊಲ ನೀಡಬೇಕೆಂದು ಮಾವ ನಿರ್ಧರಿಸಿದ್ದರು. ನಮ್ಮತ್ತೆ ಕೊಡುವುದಿಲ್ಲ ಅಂತ ಹಠಮಾಡಿದ್ದರಂತೆ. ಕೊನೆಗೆ ನಮ್ಮ ಮಾವ ಪಂಚಾಯಿತಿ ಸೇರಿಸುವೆ ಎಂದಾಗ ಅತ್ತೆ “ಆಕೆ ನಿಮ್ಮೊಂದಿಗೆ ಒಂದು ವರ್ಷ ಇರಲಿ, ನಂತರ ನಾನೇ ಆಕೆಯ ಹೆಸರಿಗೆ ರಿಜಿಸ್ಟರ್ ಮಾಡಿಸಿ ಕೊಡುವೆ” ಎಂದರಂತೆ. ಆ ಕರಾರಿಗೆ ಮಾವನವರು ಒಪ್ಪಿದರಂತೆ.

ನಂತರ ಆರು ತಿಂಗಳಲ್ಲಿಯೇ ಆಕೆಯೊಂದಿಗೆ ಸಂಬಂಧ ಹಳಸಿತÀಂತೆ. ಅದನ್ನು ನೆನಪಿಸಿಕೊಂಡು ಆಗಾಗ ಹೇಳುತ್ತಲೇ ಇರುತ್ತಾರೆ. ‘ಅವರ ಕಾಟವನ್ನು ಸಹಿಸಿಕೊಂಡು ಹೇಗೆ ಇದ್ರಿ? ನೀವು ಜಗಳ ಮಾಡುತ್ತಿರಲಿಲ್ವ?’ ಎಂದರೆ ‘ಜಗಳ ಮಾಡಿ ಎಲ್ಲಿ ಹೋಗಲಿ? ನಾಲ್ಕು ಮಕ್ಕಳ ಬದುಕು ಮೂರಾಬಟ್ಟೆಯಾಗುತ್ತಿತ್ತು. ಅವರಿಗೋಸ್ಕರ ಎಲ್ಲವನ್ನೂ ಸಹಿಸಿಕೊಂಡು ಬದುಕು ನಡೆಸಬೇಕಾಗಿತ್ತು. ನಾನೇನು ಓದಿದ್ದೀನಾ? ಬರೆದಿದ್ದೀನಾ? ಆಸ್ತಿ ಇಲ್ಲ, ಹಣ ಇಲ್ಲ, ಹೊರಗೆ ಹೋಗಿ ಜೀವನ ನಡೆಸುವುದು ಹೇಗೆ?’ ಎನ್ನುತ್ತಾರೆ. ನಮ್ಮ ಮನೆ ಯಾವಾಗಲೂ ಜನರಿಂದ ತುಂಬಿರುತ್ತಿತ್ತು. 8 ರಿಂದ 10 ಜನ ಮನೆಯಲ್ಲಿ ಇದ್ದೇ ಇರುತ್ತಿದ್ದರು. ಅಲ್ಲದೇ ಭೇಟಿಕೊಡುತ್ತಿದ್ದವರು ಇದ್ದೇ ಇರುತ್ತಿದ್ದರು. ಸದಾ ಒಲೆ ಉರಿಯುತ್ತಿತ್ತು. ರಾತ್ರಿ ಎಷ್ಟೊತ್ತಿಗೆ ಯಾರೇ ಬಂದರೂ ಊಟವಿಲ್ಲದೇ ಕಳುಹಿಸುತ್ತಿರಲಿಲ್ಲ.

ಅತ್ತೆ ಮುತ್ತಿನ ಸರವೇ ಮಾವ ಮಲ್ಲಿಗೆ ಹೂವು

ಬಂಗಾರ ಹೋಲ್ವ ಹಿರಿಭಾವ ನಮ್ಮನಿಯ

ಅರ(ರಿ)ಸಿನ ಕೆನಿಯೇ ಅರಸ(ಸಾ)ರು, (ಪುರುಸರು)

ಹಾಂ! ಮತ್ತೊಂದು ವಿಚಾರ: ಅವರ ಬುದ್ಧಿವಂತಿಕೆ ಬಗ್ಗೆ ಹೇಳಲೇಬೇಕು. ನನ್ನ ಮಗನ ಮದುವೆಯ ದಿನ ಮನೆಯಿಂದ ಮದುವೆ ಸ್ಥಳಕ್ಕೆ ಕಾರಿನಲ್ಲಿ ಹೋದೆವು ನಾನು, ಅತ್ತೆ, ಅಮ್ಮ, ಅಭಿಮನ್ಯು ಮತ್ತು ಡ್ರೈವರ್ ಯೋಗೇಶ್ ಇದ್ದದ್ದು. ಸ್ಥಳ ತಲುಪಿದ ಮೇಲೆ ನಾವೆಲ್ಲ ಕಾರಿನಿಂದ ಇಳಿದು ಅವರನ್ನ ಇಳಿಸಿಕೊಳ್ಳೋಣವೆಂದಾಗ ಡ್ರೈವರ್ ಕೂಡ ಮುಂಚೆಯೇ ಇಳಿದುಬಿಟ್ಟಿದ್ದ. ಡೋರ್ ಎಲ್ಲಾ ಲಾಕ್ ಆಗಿ ಬಿಟ್ಟಿತ್ತು. ಕಿಟಕಿಗಳು ಕ್ಲೋಸ್ ಆಗಿದ್ದವು. ಕೀ ಹೊರಗೆ ಇತ್ತು. ಒಳಗೆ ಅಮ್ಮ, ಅತ್ತೆ ಇಬ್ಬರೂ ಸಿಕ್ಕಿಕೊಂಡಿದ್ದರು. ನನಗೆ ಬೆವರಲು ಶುರುವಾಯಿತು. ಹೊರಗಿನಿಂದ ನನ್ನ ಮಗ ಇಂತಹ ಬಟನ್ ಒತ್ತಿ ಅಂತ ನನ್ನ ಅಮ್ಮ ಮತ್ತು ಅತ್ತೆಗೆ ಹೇಳುತ್ತಲೇ ಇದ್ದ. ಅವರಿಗೆ ಯಾವ ಬಟನ್ ಅಂತ ತಿಳಿಯುತ್ತಿಲ್ಲ.

ಹೀಗೆ ಹತ್ತು ನಿಮಿಷ ಕಳೆಯಿತು. ಭಯ ಶುರುವಾಯಿತು. ಒಳಗೆ ಗಾಳಿ ಇಲ್ಲದೆ ಉಸಿರುಗಟ್ಟಿದರೆ ಎಂಬ ಆತಂಕ. ಆಗ ಅತ್ತೆಯವರೇ ಬಟನ್ ಪ್ರೆಸ್ ಮಾಡಿದರು. ಕಿಟಕಿ ತೆರೆÉದುಕೊಂಡಿತು. ನಮ್ಮೆಲ್ಲರ ಆತಂಕ ದೂರವಾಯಿತು. ಅಂತಹ ಅನಾರೋಗ್ಯದ ಸಮಯದಲ್ಲೂ ಅವರು ಸರಿಯಾಗಿ ಅರ್ಥಮಾಡಿಕೊಂಡಿದ್ದು ಸೋಜಿಗವೇ ಸೈ. ಅಂದರೆ ಸದಾ ಅವರ ಮೆದುಳು ಮತ್ತು ಮನಸ್ಸು ವರ್ತಮಾನದ ಸಂಗತಿಗಳಿಗೆ ತೆರೆದುಕೊಂಡಿರುತ್ತದೆ ಎಂಬುದಕ್ಕೆ ಸಾಕ್ಷಿ ಇದು.

ಕಾರಿನಲ್ಲಿ ಓಡಾಡುವಾಗ ಬಟನ್‍ಗಳ ಬಗ್ಗೆ ತಿಳಿದುಕೊಂಡಿದ್ದರು. ಅಮ್ಮ ಕೂಡ ಕಾರಿನಲ್ಲಿ ಓಡಾಡಿದರೂ ಬಟನ್‍ಗಳ ಕಡೆಗೆ ಗಮನ ಕೊಟ್ಟವರಲ್ಲ. ಅಮ್ಮ, ಅತ್ತೆ ಇಬ್ಬರು ಒಳ್ಳೆಯ ಸ್ನೇಹಿತೆಯರು. ಅಮ್ಮನಿಂದ ಮೆಂತ್ಯ ಹಿಟ್ಟು, ಚಟ್ನಿಪುಡಿ, ಬೇಸನ್ ಲಾಡು ಅತ್ತೆ ಕಲಿತರೆ, ಅತ್ತೆ ತಯಾರಿಸುವ ಮಾದ್ಲಿ, ಕರ್ಜಿಕಾಯಿ, ಎಣ್ಣೆ ಹೋಳಿಗೆ ಅಮ್ಮ ಇಷ್ಟಪಟ್ಟು ಸವಿಯುತ್ತಾರೆ. ಅತ್ತೆಯಲ್ಲಿ ವೈಚಾರಿಕ ಮನೋಭಾವ ಇದೆ. ಅವರೆಂದೂ ಬಂಗಾರದ ಒಡವೆಗಳಿಗೆ, ರೇಷ್ಮೆ ಸೀರೆಗಳಿಗೆ ಆಸೆಪಟ್ಟವರಲ್ಲ. ಇನ್ನೊಬ್ಬರನ್ನು ನೋಡಿ ಕರಬುವುದೂ ಇಲ್ಲ. ನಮ್ಮ ಮನೆಯ ಕೆಳಭಾಗದಲ್ಲಿಯೇ ಪಂಚಕರ್ಮ ಚಿಕಿತ್ಸಾ ಕೇಂದ್ರ ನಡೆಸುತ್ತಿದ್ದೆ. ನಾನು ಕ್ಲಿನಿಕ್‍ಗೆ ಹೋದಮೇಲೆ ಮತ್ತು ಹೊರಗೆ ಕಾರ್ಯಕ್ರಮಗಳಿಗೆ ಹೋದಂತಹ ಸಮಯದಲ್ಲಿ ಅವರೇ ಎಲ್ಲದರ ಮೇಲ್ವಿಚಾರಣೆ ನಡೆಸುತ್ತಿದ್ದರು. ಚಿಕಿತ್ಸೆಗೆ ಬರುತ್ತಿದ್ದವರ ಜೊತೆ ಮಾತನಾಡುತ್ತಿದ್ದರು. ಗರ್ಭಿಣಿಯರಿಗೆ ನೀಡುವ ಹೊಂಬಾಳೆ ಔಷಧಿಗೆ ಬೇಕಾಗುವುದನ್ನು ತಯಾರಿಸುವುದು, ಹೊಂಬಾಳೆಯನ್ನು ಪರೀಕ್ಷೆ ಮಾಡುವುದು ಎಲ್ಲವನ್ನೂ ಕಲಿತರು.

ಒಮ್ಮೆ ಅಮ್ಮ, ಮಗ ಇಬ್ಬರೂ ಬೆಂಗಳೂರಿನಿಂದ ತೋರಣಗಲ್ಲಿಗೆ ಹೋಗುವಾಗ ಬಸ್‍ಸ್ಟಾಪ್‍ನಲ್ಲಿ ಬಸ್ ಹತ್ತುವ ಸಮಯದಲ್ಲಿ ಅತ್ತೆಯವರು ಹಿಂದೆ ಉಳಿದಿದ್ದಾರೆ. ಜನವೋ ಜನ. ಮುಂದೆ ಹೋದ ಭೂಪತಿಯವರು ಅಮ್ಮನನ್ನು ಕಾಣದೆ ಕಂಗಾಲಾಗಿ ಎಲ್ಲೆಡೆ ಹುಡುಕಾಡುತ್ತ ದುಃಖದಿಂದ ಮೈಕಿನಲ್ಲಿ ಅನೌನ್ಸ್ ಮಾಡಿಸಬೇಕೆಂದು ಹೋಗುತ್ತಾರೆ. ಇತ್ತ ಅತ್ತೆಯವರು ಆತಂಕದಿಂದ ಇರುವೆಯಂತೆ ಹರಿದಾಡುವ ಜನರನ್ನ ನೋಡುತ್ತಾ ಪೊಲೀಸರ ಬಳಿ ಹೋಗಿ ಹೇಳಬೇಕೆಂದು ಯೋಚಿಸುತ್ತಿದ್ದರಂತೆ. ಅಷ್ಟರಲ್ಲಿ ಅಮ್ಮ ಮಗನ ಭೇಟಿಯಾಗಿ ಸುಖಾಂತ್ಯವಾಯಿತು.

ಅತ್ತೆ-ಸೊಸೆ ಸಂಬಂಧ ಎಣ್ಣೆಸೀಗೆಕಾಯಿಯತರ ಇರುವುದೇ ಹೆಚ್ಚು.

ಕಣ್ಣೀಗೆ ಕಸಬಿದ್ದು ಹಾಲಾಗೆ ನೊಣಬಿದ್ದು

ಅತ್ತೆಗು ಸೊಸೆಗು ಹಗೆ ಬಿದ್ದೋ ದೇವಾರೆ

ಕಣ್ಣೀನ ಕಸವ ತೆಗೀಬೇಕು, ಆಡಿಕೊಳ್ಳುವವರೇ ಹೆಚ್ಚು.

ನನ್ನ ಅತ್ತೆಯವರಿಗೆ ಐದಾರು ವರ್ಷಗಳ ಹಿಂದೆ ಸಕ್ಕರೆ ಕಾಯಿಲೆ ಶುರುವಾಯಿತು. ಅವರಿಗೆ ಸಕ್ಕರೆ, ಉಪ್ಪು ಎರಡೂ ತುಂಬ ಇಷ್ಟ. ಅಡುಗೆಗೆ ಹಾಕಿದ್ದಲ್ಲದೇ ಮೇಲೆ ಮತ್ತಷ್ಟು ಉಪ್ಪು ಉದುರಿಸಿಕೊಳ್ಳುತ್ತಾರೆ. ಕಾಫಿ, ಟೀಗೆ ನಾವು ಹಾಕಿದ ಒಂದು ಚಮಚೆ ಸಕ್ಕರೆ ಸಾಲದೇ ಮತ್ತೊಂದು ಚಮಚೆ ಹಾಕಿಕೊಳ್ಳುವ ಅಭ್ಯಾಸ ಅವರದು. ಸಕ್ಕರೆಯಿಲ್ಲದೆ ಕಾಫಿ, ಟೀ ಕುಡಿಯಬೇಕೆಂದಾಗ ತುಂಬಾ ಹಠ ಮಾಡಿದರು. ಸಾಧ್ಯವಿಲ್ಲ. ಸಕ್ಕರೆ ಬೇಕೇಬೇಕು ಅಂದರು. ಆಗ ನಾನು, ಭೂಪತಿಯವರು ಇಬ್ಬರೂ ಸಕ್ಕರೆ ಬಿಟ್ಟುಬಿಟ್ಟೆವು. ನಾವು ಪ್ರತಿದಿನ ಸಕ್ಕರೆಯಿಲ್ಲದ ಕಾಫಿ, ಟೀ ಕುಡಿಯಲು ಆರಂಭಿಸಿದೆವು. ನಂತರ ಅವರೂ ಅದಕ್ಕೆ ಒಗ್ಗಿಕೊಂಡರು. ಈಗ ಸಕ್ಕರೆಯಿಲ್ಲದ ಕಾಫಿ, ಟೀ ಅಭ್ಯಾಸವಾಗಿ ಅಪ್ಪಿತಪ್ಪಿ ಯಾರಾದರೂ ಸಕ್ಕರೆ ಹಾಕಿದ್ದನ್ನು ಕೊಟ್ಟರೆ ಒಂದು ಗುಟುಕು ಕುಡಿದು ನಾನಿದನ್ನು ಕುಡಿಯುವುದಿಲ್ಲ! ಎಂದು ವಾಪಸ್ ಕೊಟ್ಟುಬಿಡುತ್ತಾರೆ.

ಯಾವುದೇ ವಿಷಯ, ವಿಚಾರವಾಗಲಿ ತೆರೆದ ಮನಸ್ಸಿನಿಂದ ಕೇಳುತ್ತಾರೆ. ಆಧುನಿಕತೆಗೆ, ಜಾಗತಿಕ ವಿಚಾರಗಳಿಗೆ ಸ್ಪಂದಿಸುತ್ತಾರೆ. ಕೌಟುಂಬಿಕ ನೆಲೆಯಲ್ಲಿ ಜರುಗುತ್ತಿರುವ ವಿದ್ಯಮಾನಗಳನ್ನ ಗಮನಿಸುತ್ತಾರೆ. ಸಂಬಂಧಿಯೊಬ್ಬರ ಮಗಳ ಗಂಡ ಕಿರುಕುಳ ಕೊಡುತ್ತಿದ್ದ, ತುಂಬ ಮಾನಸಿಕ ಹಿಂಸೆ ಕೊಡುತ್ತಿದ್ದ. ಅವಳ ಸಂಬಳ ಎಲ್ಲವನ್ನೂ ಅವನಿಗೆ ಕೊಡಬೇಕೆಂದು ಪೀಡಿಸುತ್ತಿದ್ದ. ಈ ವಿಷಯ ಕೇಳಿದ ನನ್ನತ್ತೆಯ ಪ್ರತಿಕ್ರಿಯೆ, ‘ಕಷ್ಟಪಟ್ಟು ಊಟ, ನಿದ್ದೆ ಬಿಟ್ಟು ಓದಿ ಇಂಜಿನಿಯರ್ ಆಗಿ ಕೆಲಸ ಸಂಪಾದಿಸಿ ಸಂಬಳ ಯಾಕೆ ಅವನಿಗೆ ಕೊಡಬೇಕು? ದುಡಿಯವುದು ಇವಳು, ಸಂಬಳ ಅವನಿಗಂದ್ರೆ ಹೇಗೆ? ಹೀಗೆ ಜಗಳ ಮಾಡುತ್ತಿದ್ದರೆ ಡೈವೋರ್ಸ್ ಕೊಟ್ಟುಬಿಡು. ಹಣಕ್ಕೋಸ್ಕರ ನಿನ್ನನ್ನು ಮದುವೆಯಾಗಿದ್ದನಾ ಅವನು? ಅವನೆಂತಹ ಗಂಡಸು!’ ಅಂತ ಹೇಳಿದ್ದನ್ನು ಕೇಳಿ ಅವರ ಮನೆಯವರೆಲ್ಲ ಆಶ್ಚರ್ಯಪಟ್ಟರು.

15 ವರ್ಷಗಳ ಹಿಂದೆ, ಅಂದ್ರೆ ಅತ್ತೆಯವರಿಗಾಗ 68 ವರ್ಷ ವಯಸ್ಸು. ಅತ್ತೆ ಹಾಗೂ ಅವರ ತಂಗಿ ಇಬ್ಬರೂ ಸೇರಿ ತಮ್ಮನ ಬಳಿ ಹೋಗಿ ಒಂದೊಂದು ಎಕರೆ ಹೊಲ ಕೇಳಿದ್ದಾರೆ. ಅವನು ಕೊಡಲು ಒಪ್ಪಿಲ್ಲ. ಆಗ ಇಬ್ಬರೂ ಸೇರಿ ತಮ್ಮನ ಮೇಲೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿ ಕೋರ್ಟ್ ಮೆಟ್ಟಿಲೇರಿದರು. ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಪಾಲು ಇದೆ ಎಂಬ ಕಾನೂನಿನ ಅರಿವು ಅವರಿಗಿದ್ದುದರಿಂದ ಕೇಸ್ ಹಾಕಿದರು. ಎರಡು ಮೂರು ವರ್ಷ ಕೇಸ್ ನಡೆಯಿತು. ಕೇಸ್ ಹಾಕಿದ ಮೇಲೆ ಅವರ ತಮ್ಮ ಮತ್ತು ಕುಟುಂಬದವರೆಲ್ಲರೂ ಬಂದು ಒಂದು ಎಕರೆ ಹೊಲ ಕೊಡ್ತಿವಿ ಕೇಸ್ ವಾಪಸ್ ತೆಗೆದುಕೊಳ್ಳಿ ಎಂದರು. ಆದರೆ ಇವರು ಅದಕ್ಕೆ ಒಪ್ಪಲಿಲ್ಲ. ನಂತರ ಇಬ್ಬರಿಗೂ ಅಂದರೆ ಅತ್ತೆಯವರಿಗೆ ಮತ್ತು ಅವರ ತಂಗಿಗೆ ತಲಾ ಎರಡು ಎಕರೆ ಹೊಲ ಕೊಡಬೇಕೆಂದು ನ್ಯಾಯಾಲಯದಿಂದ ಆದೇಶವಾಯಿತು.

ಅತ್ತೆಯ ಪ್ರೀತಿ, ಅಂತಃಕರಣ, ಅಭಿಮಾನ ಎಲ್ಲವನ್ನು ಸಮೃದ್ಧವಾಗಿ ಉಂಡಿರುವ ನಾನು ಈಗ ಅತ್ತೆಯಾಗಿದ್ದೇನೆ. ಕಳೆದ ನವೆಂಬರ್(03.11.2019)ನಲ್ಲಿ ಮಗ ಅಭಿಮನ್ಯುವಿನ ಮದುವೆಯಾಯಿತು. ಅವನು, ದಿವ್ಯಾ ಪ್ರೀತಿಸಿದರು. ಮಂತ್ರ ಮಾಂಗಲ್ಯದ ಮದುವೆ ಮಾಡಿದೆವು. ದಿವ್ಯಾ ಸೊಸೆಯಾಗಿ ಮನೆಯನ್ನ ತುಂಬಿದ್ದಾಳೆ. ಅಭಿಮನ್ಯುವಿನ ಪ್ರೀತಿಗೆ ಮನ ಸೋತಿದ್ದ ದಿವ್ಯಾ ಈ ಆರು ತಿಂಗಳಲ್ಲಿ ತನ್ನ ನಡೆ, ನುಡಿಯಿಂದ ನಮ್ಮೆಲ್ಲರ ಮನ ಗೆದ್ದಿದ್ದಾಳೆ. ಅತ್ತೆಯವರಿಗೆ ಮುದ್ದಿನ ಮೊಮ್ಮಗಳಾಗಿದ್ದಾಳೆ. ದಿವ್ಯ ಭರತನಾಟ್ಯ ಕಲಾವಿದೆ. ಎಂ.ಟೆಕ್. ಪದವೀಧರೆ. ಅವಳು ಮದುವೆಗೆ ಮುಂಚೆ ನಡೆಸುತ್ತಿದ್ದ ಡ್ಯಾನ್ಸ್ ಕ್ಲಾಸ್, ಕಾರ್ಯಕ್ರಮಗಳು ಎಲ್ಲವನ್ನು ಮುಂದುವರೆಸಿದ್ದಾಳೆ.

ಅವಳ ವ್ಯಕ್ತಿತ್ವ ನಮ್ಮ ಮನೆಯಲ್ಲಿ ಇನ್ನಷ್ಟು ಬೆಳಗಲು ಏನು ಬೇಕೋ ಅಂತಹ ಅವಕಾಶಗಳನ್ನು ಕಲ್ಪಿಸಿಕೊಡಬೇಕೆಂಬುದೇ ನನ್ನ ಬಯಕೆ. ನನ್ನ ಅತ್ತೆ ನಾಗಮ್ಮ ಹೇಗೆ ನನಗೆ ಅಮ್ಮನಾದರೋ ಅಂಥದ್ದೇ ಪರಂಪರೆಯ ಪಯಣವನ್ನು ನಾನೀಗ ಮುಂದುವರಿಸುತ್ತಿದ್ದೇನೆ. ನಾನು ಕೂಡ ಅದರಲ್ಲಿ ಯಶಸ್ವಿಯಾಗುತ್ತೇನೆನ್ನುವ ನಂಬಿಕೆ, ಭರವಸೆ ನನಗಿದೆ.

*ಲೇಖಕಿ ಪ್ರಖ್ಯಾತ ಆಯುರ್ವೇದ ವೈದ್ಯರು, ವೈದ್ಯಸಾಹಿತಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು.

 

 

Leave a Reply

Your email address will not be published.