ಅದೆಲ್ಲಿ ಮಾಯವಾಗಿದ್ದೀರಿ, ಬನ್ನಿ ನ್ಯಾಯ ಕೊಡಿಸೋಣ

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರಸ್ತೆಯ ಬದಿಯಲ್ಲಿ ಕೈಹೊತ್ತು ಕುಳಿತ ಮಣ್ಣಿನ ಮಕ್ಕಳ ಆಕ್ರಂದನದ ಕೂಗಿದು. ಕಣ್ಣಿದ್ದು ಕುರುಡಾದ ರೈತ ಸಂಘಟನೆಗಳ ಕಥೆ ಇದು.

ಈ ಮಣ್ಣಿನಲ್ಲಿ ಹೋರಾಟಗಳಿಗೆ ಎಷ್ಟು ಮಹತ್ವ ಇದೆ ಎನ್ನುವುದಕ್ಕೆ ಗಾಂಧಿ ಉದಾಹರಣೆಯಾಗಿ ನಿಲ್ಲುತ್ತಾರೆ. ಇದರ ಮುಂದುವರಿದ ಭಾಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಶಿಕ್ಷಣ, ಸಂಘಟನೆ, ಹೋರಾಟ ನಮಗೆ ಅಸ್ತ್ರವೆಂದು ಹೇಳಿದ್ದರು. ಇಂತಹ ಅನೇಕರ ಚಿಂತನೆಗಳಿಂದ ಉತ್ತೇಜನಗೊಂಡು ಹುಟ್ಟಿಕೊಂಡ ಅನೇಕ ಸಂಘಟನೆಗಳಲ್ಲಿ ರೈತ ಸಂಘಟನೆ ಕೂಡ ಒಂದು.

ಪ್ರಸ್ತುತ ದೇಶವ್ಯಾಪಿ ಚಾಪನ್ನು ಮೂಡಿಸಿರುವ ಕೆಲವೇ ಕೆಲವು ಸಂಘಟನೆಗಳ ಪಟ್ಟಿಗೆ ರೈತ ಸಂಘಟನೆಗಳು ಸೇರುತ್ತವೆ. ಕರ್ನಾಟಕದ ಮಟ್ಟಿಗೆ ರೈತ ಚಳವಳಿ ಮತ್ತು ಹೋರಾಟಗಳು ಎಂದಾಗ ದಿವಂಗತ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ರೈತ ಮನಗಳನ್ನು ಆವರಿಸಿಬಿಡುತ್ತಾರೆ. ಕಾರಣ ಅವರ ಹೋರಾಟದ ತೀವ್ರತೆ, ಬದ್ಧತೆ, ರೈತರ ಬಗೆಗಿನ ಕಾಳಜಿ ಅತ್ಯಂತ ಮೇರುಮಟ್ಟದಲ್ಲಿತ್ತು. ಆದರೆ ಇದು ಇಂದಿನ ರೈತ ಸಂಘಟನೆಗಳಿಗೆ ಇದ್ದಂತೆ ಕಾಣುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ ಬ್ಯಾಡಗಿಯಲ್ಲಿ ನಡೆದ ಈ ಒಂದು ಘಟನೆ.

ತುಂಗಭದ್ರಾ ಜಲಾಶಯದ ಆಶ್ರಯದಲ್ಲಿ ಬಳ್ಳಾರಿ ಭಾಗದ ಅನೇಕ ರೈತರು ತಮ್ಮ ಬದುಕು ಸಾಗಿಸುತ್ತಿದ್ದಾರೆ. ಇಲ್ಲಿನ ರೈತರಿಗೆ ಫಲವತ್ತಾದ ಭೂಮಿಯ ಕೊರತೆಯೇನೂ ಇಲ್ಲ. ಸಕಾಲಕ್ಕೆ ಮಳೆಯಾಗಿ ಜಲಾಶಯ ಭರ್ತಿಯಾದರೆ ಸಾಕು; ಅವರ ಮುಖದಲ್ಲಿ ಮಂದಹಾಸ, ಕೈಗಳಿಗೆ ಪೂರ್ಣ ಕೆಲಸ ಸಿಕ್ಕ ಉಲ್ಲಾಸ ಕಾಣಬಹುದು. ಆದರೆ ಕಳೆದ ಹತ್ತಾರು ವರ್ಷಗಳಿಂದ ಇಲ್ಲಿನ ರೈತರು ಮಳೆಬೆಳೆ ಇಲ್ಲದೆ ಸಂಕಷ್ಟದ ದಿನಗಳನ್ನು ದೂಡುತ್ತಿದ್ದಾರೆ. ಬೆಳೆ ಬಂದಾಗ ಬೆಲೆ ಇಲ್ಲ, ಬೆಲೆ ಇದ್ದಾಗ ಬೆಳೆ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ಪ್ರಮುಖ ಮತ್ತು ಆದಾಯ ಹೊತ್ತು ತರುವ ಬೆಳೆಯೆಂದರೆ ಮೆಣಸಿನಕಾಯಿ. ಕಡ್ಡಿಗಾಯಿ ಮತ್ತು ಬ್ಯಾಡಗಿ ಮೆಣಸಿನಕಾಯಿ ರೈತರ ಪಾಲಿನ ಬಂಗಾರದ ಬೆಳೆಗಳಾಗಿವೆ. ಈ ಬೆಳೆಗೆ ಹಳ್ಳಿಯ ಜನರು ಲಾಟರಿ ಬೆಳೆಯೆಂದೇ ಕರೆಯುತ್ತಾರೆ. ತಾಯಿ ತನ್ನ ಮಗುವನ್ನು ಹೇಗೆ ಆರೈಕೆ ಮಾಡುತ್ತಾಳೋ ಹಾಗೆ ರೈತ ಈ ಮೆಣಸಿನಕಾಯಿ ಬೆಳೆಯನ್ನು ಜೋಪಾನ ಮಾಡುತ್ತಾನೆ. ಇಂತಹ ಬೆಳೆ ಕಳೆದ ಒಂದು ದಶಕದಿಂದ ಈ ಭಾಗದ ರೈತರಿಗೆ ತೀರಾ ಖಾರವಾಗುತ್ತಿದೆ. ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಹೊಸಹೊಸ ಆಯಾಮಗಳು ಸಿಗುತ್ತವೆ. ಬೆಳೆಗೆ ತಗಲುವ ಕೀಟಬಾಧೆ, ನುಸಿರೋಗ, ಬೆಳವಣಿಗೆ ಕುಂಟಿತ, ಕಾಪು, ಕಳೆಗಳಿಗೆ ರಾಸಾಯನಿಕ ಔಷಧಿಗಳು, ರಸಗೊಬ್ಬರ, ಆಳಿನ ಕೂಲಿ ಹೀಗೆ ಬಿತ್ತನೆ ಕಾರ್ಯದಿಂದ ಕಟಾವಿನ ಹಂತಕ್ಕೆ ಸುಮಾರು ಒಂದು ಎಕರೆಗೆ ಒಂದು ಲಕ್ಷದಷ್ಟು ಖರ್ಚುಮಾಡಿಕೊಳ್ಳುತ್ತಾನೆ ಇಲ್ಲಿನ ರೈತ.

ದೂರದ ಊರು ಬ್ಯಾಡಗಿ ಕಡೆಗೆ ಬಾಡಿಗೆ ಲಾರಿ ಹಿಡಿದು ಒಂದು ಚೀಲಕ್ಕೆ ಸುಮಾರು 400 ರೂಪಾಯಿಗಳಷ್ಟು ಖರ್ಚು ಮಾಡಿ ಹೊತ್ತೊಯ್ದಿದ್ದ ರೈತರಿಗೆ ಭರವಸೆಯ ಸಾಗರವೊಂದು ಬತ್ತಿಹೋಗಿತ್ತು. ಮಾರುಕಟ್ಟೆಯಲ್ಲಿ ತಮ್ಮ ಬೆಳೆಗೆ ದರ ನಿಗದಿ ಮಾಡುವ ಸಮಯದಲ್ಲಿ ಮಾರುಕಟ್ಟೆ ನಡೆದುಕೊಂಡ ರೀತಿ ಎಂಥವರಿಗೂ ಕರುಳು ಚುರ್ ಎನ್ನುವಂತಿತ್ತು. ಶ್ರಮದ ಪ್ರತೀಕವಾದ ಬೆಳೆಯನ್ನು ಕಂಡಕಂಡ ಕಡೆಯಲ್ಲಿ ಬೀಸಾಡಿದ್ದರು. ಸಾಲದಿದ್ದಕ್ಕೆ ಒಂದು ಎಕರೆಗೆ ಒಂದು ಲಕ್ಷದಷ್ಟು ಖರ್ಚು ಮಾಡಿದ ಬೆಳೆಗೆ ಕೇವಲ ಐದು ಸಾವಿರದಿಂದ ಆರು ಸಾವಿರಗಳಿಗೆ ಬೆಲೆ ನಿಗದಿಯಾಯ್ತು. ಈ ಸುದ್ದಿ ತಿಳಿದ ಮಣ್ಣಿನ ಮಕ್ಕಳು ಆಕ್ರೋಶಗೊಂಡರು, ಪ್ರತಿಭಟನೆಗೆ ಮುಂದಾದರು. ಮಾಡಿದ ಸಾಲಶೂಲದ ಬಗ್ಗೆ ಚಿಂತಾಕ್ರಾಂತರಾಗಿದ್ದ ರೈತರು ಅನ್ಯಾಯದ ವಿರುದ್ಧ ಘೋಷಣೆ ಮೊಳಗಿಸಿದರು.

ಇದೇನೂ ಮೊದಲಲ್ಲ; ಕಳೆದ ಬಾರಿಯೂ ಇದೇ ಕಥೆ, ಹಠಾತ್ತನೆ ಬೆಲೆ ಕುಸಿತ ಆಗಿತ್ತು. ಇದರಿಂದ ರೈತರು ಮುಂದಿನ ಬಾರಿಯಾದರೂ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಭರವಸೆ ಮತ್ತೆ ಹುಸಿಯಾಗಿದೆ. ರೈತಾಪಿವರ್ಗ ಕಂಗಾಲಾಗಿದೆ. ರೈತ ಜೋತು ಮುಖಹೊತ್ತು ಮನೆಗೆ ಹಿಂದಿರುಗುತ್ತಿದ್ದಾನೆ. ಇಷ್ಟಾದರೂ ತಮಗೂ ಈ ಘಟನೆಗಳಿಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿವೆ ರೈತ ಸಂಘಟನೆಗಳು.

ಸಾಲಮನ್ನಾಕ್ಕಾಗಿ ಒತ್ತಾಯಿಸಿದ ಸಂಘಟನೆಗಳು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಜವಾದ ಫಲಾನುಭವಿಗಳ ಬಗ್ಗೆ ಯೋಚಿಸಿದ್ದೀರಾ? ಸಾಲಮನ್ನಾ ನಿಜವಾದ ರೈತರಿಗೆ ತಲುಪಿದೆಯಾ? ಗುತ್ತಿಗೆ ಪಡೆದು ಬೇಸಾಯ ಮಾಡಿದ ರೈತರ ಬಗ್ಗೆ ಕಾಳಜಿ ಇದೇಯಾ? ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸಬೇಕೆನ್ನಿಸುತ್ತಿಲ್ಲವೇ? ಈ ಪ್ರಶ್ನೆಗಳಿಗೆ ಸಂಘಟನೆಯ ಮುಖಂಡರು ಉತ್ತರಿಸಲಾರರು. ಚುನಾವಣೆ ಸಂದರ್ಭದಲ್ಲಿ ಮಾರುದ್ದ ಭಾಷಣ ಮಾಡುವ ರೈತ ಮುಖಂಡರಿಗೆ ಬ್ಯಾಡಗಿಯಲ್ಲಿ ನಡೆದ ಘಟನೆ ಕಣ್ಣಿಗೆ ಬೀಳುವುದಿಲ್ಲ, ಕಿವಿಗೆ ಕೇಳುವುದಿಲ್ಲ, ಹೃದಯ ತಟ್ಟುವುದಿಲ್ಲ!

ಇವರು ಇನ್ನಾದರೂ ಜಡತ್ವ ಬಿಟ್ಟು, ಸ್ವಾರ್ಥ ಹಿತಾಸಕ್ತಿಗಳನ್ನು ಬದಿಗೊತ್ತಿ, ಒಳಬಣಗಳ ಕೆಡವಿ, ಒಗ್ಗಟ್ಟಿನ ಪಣತೊಟ್ಟು ಈ ಭಾಗದ ರೈತರಿಗೆ ನ್ಯಾಯಕೊಡಿಸಬೇಕಿದೆ.

Leave a Reply

Your email address will not be published.