ಅಧಿಕಾರಿಗಳು ಹೀಗೇಕೆ?

ಅವರೊಬ್ಬ ನಿವೃತ್ತ ಐಎಎಸ್ ಅಧಿಕಾರಿ; ಬರೆವಣಿಗೆಯಲ್ಲಿ ಅಷ್ಟಿಷ್ಟು ತೊಡಗಿಸಿಕೊಂಡವರು. ಒಂದು ಅನುವಾದಿತ ಲೇಖನವನ್ನು ಸಮಾಜಮುಖಿಗೆ ಪ್ರಕಟಣೆಗಾಗಿ ಕಳಿಸಿದರು. ಅದೇ ವಿಷಯದ ಲೇಖನವೊಂದು ಹಿಂದಿನ ಸಂಚಿಕೆಯಲ್ಲಿಯೇ ಪ್ರಕಟವಾಗಿದ್ದರಿಂದ ಅವರ ಲೇಖನವನ್ನು ಪ್ರಕಟಿಸಲಾಗದೆಂದು ವಿನಯದಿಂದ ತಿಳಿಸಿದೆ. ಆ ವ್ಯಕ್ತಿ ಎಷ್ಟು ವಿಚಲಿತರಾದರೆಂದರೆ ಕೂಡಲೇ ನನಗೆ ಸಂದೇಶ ರವಾನಿಸಿದರು: “ನಾನು ಆರಂಭದಿಂದಲೂ ನಿಮ್ಮ ಪತ್ರಿಕೆಯ ಜೊತೆಗಿದ್ದೆ; ಆದರೆ ಈಗ ಬೇರ್ಪಡುವ ಕಾಲ ಬಂದಿದೆ, ಇನ್ನುಮೇಲೆ ನನಗೆ ಪತ್ರಿಕೆ ಕಳುಹಿಸಬೇಡಿ, ಚಂದಾಹಣ ಹಿಂದಿರುಗಿಸಿ”.

ನಾನೂ ತಡಮಾಡಲಿಲ್ಲ, “ಸಮಾಜಮುಖಿ ಒಂದು ಪತ್ರಿಕೆಯಾಗಿ ಈವರೆಗೆ ತನ್ನ ಸಮಗ್ರತೆ ಮುಕ್ಕಾಗದಂತೆ ಕಾಯ್ದುಕೊಂಡಿದೆ. ಇಂತಹ ಕಾರಣಗಳಿಗಾಗಿ ನಿಮ್ಮಂತಹ ಮನಃಸ್ಥಿತಿಗಳಿಂದ ದೂರಾಗಲು ಸಂತೋಷಿಸುತ್ತದೆ” ಎಂದು ಉತ್ತರಿಸಿದೆ. ನಿಜವೆಂದರೆ ಈ ಮನುಷ್ಯ ತನ್ನ ಹಣ ನೀಡಿ ಚಂದಾದಾರರಾಗಿರಲಿಲ್ಲ; ಅವರ ಸಾಹಿತ್ಯಾಸಕ್ತ ಸಂಬಂಧಿಯೊಬ್ಬರು ಚಂದಾ ಉಡುಗೊರೆ ನೀಡಿದ್ದರು!

ಓದುಗರು ಮತ್ತು ಲೇಖಕರ ನಡುವಿನ ಕೊಂಡಿಯಾಗಿ ಅವರೊಂದಿಗಿನ ನಿರಂತರ ಒಡನಾಟ ನನಗೆ ಅನಿವಾರ್ಯ. ಈ ಸಂಬಂಧದಲ್ಲಿ ಸಹಜವಾಗಿಯೇ ಸೆಡವು, ಪ್ರೀತಿ, ಓಲೈಕೆ, ಅಸೂಯೆ, ಆಕ್ಷೇಪ, ಕಿತ್ತಾಟ -ಎಲ್ಲವೂ ಹದವಾಗಿ ಬೆರೆತಿರುತ್ತವೆ; ಕ್ಷುಲ್ಲಕ ಕಾರಣಗಳ ಅಗಲಿಕೆ ಕೂಡಾ ಹೊಸದಲ್ಲ, ಒಂದು ಪುಸ್ತಕಕ್ಕಾಗುವಷ್ಟು ಇಂತಹ ಅನುಭವದ ಸರಕಿದೆ.

ಇನ್ನೊಂದು ಪ್ರಕರಣ: ಬಹಳಷ್ಟು ಐಎಎಸ್-ಐಪಿಎಸ್ ಅಧಿಕಾರಿಗಳಿರುವ ಒಂದು ವಾಟ್ಸಾಪ್ ಗುಂಪಿನಲ್ಲಿ ಪ್ರಮಾದವಶಾತ್ ನನ್ನನ್ನೂ ಸೇರಿಸಿಕೊಂಡುಬಿಟ್ಟಿದ್ದಾರೆ! ಅಲ್ಲಿನ ಕೆಲವು ಅಧಿಕಾರಿಗಳ ಕೋಮು ಭಾವನೆ ಮತ್ತು ಜನಸಾಮಾನ್ಯರನ್ನು ಕುರಿತ ಗ್ರಹಿಕೆ, ಅರ್ಥೈಸುವಿಕೆ, ಸಂಕುಚಿತ ಮನೋಧರ್ಮ ಗಮನಿಸಿದರೆ ನಿಜಕ್ಕೂ ಭಯವಾಗುತ್ತದೆ; ಮನುಷ್ಯ-ಸಂಬಂಧಗಳ ನೇಯ್ಗೆಯ ಶಿಥಿಲಕ್ಕೆ ಇವರು ನೀಡಿದ/ನೀಡುತ್ತಿರುವ ಕೊಡುಗೆ ಅಕ್ಷಮ್ಯ.

ಈ ಅಧಿಕಾರಿಗಳು ಹೀಗೇಕೆ…? ಇವರ ಆಯ್ಕೆಯ ಮಾನದಂಡ, ನೇಮಕಾತಿ ವಿಧಾನದಲ್ಲಿ ಏನಾದರೂ ಎಡವಟ್ಟು ಆಗುತ್ತಿದೆಯೇ? ಎರಡು ಲಿಖಿತ ಪರೀಕ್ಷೆ, ಒಂದು ಸಂದರ್ಶನದ ಮೂಲಕ ವಿವಿಧ ನಾಗರಿಕ ಸೇವೆಗಳಿಗೆ ಆಯ್ಕೆಯಾಗುವ ಇವರನ್ನು ಮಸ್ಸೂರಿಯಲ್ಲಿ ಕೆಲ ತಿಂಗಳ ತರಬೇತಿ ನಂತರ ನೇರವಾಗಿ ಕಾರ್ಯಕ್ಷೇತ್ರಕ್ಕೆ ಧುಮುಕಿಸುತ್ತಿರುವ ಕ್ರಮ ಸರಿಯೇ? ನಾಲ್ಕಾರು ವರ್ಷಗಳ ನಿರ್ದಿಷ್ಟ ವಿಷಯದ ಅಧ್ಯಯನದ ಮೂಲಕ ವೃತ್ತಿ ಪರಿಣತಿ ಹೊಂದುವ ವೈದ್ಯರು, ಇಂಜಿನಿಯರು, ವಕೀಲರಿಗೆ ಹೋಲಿಸಿದರೆ ಇವರ ಪ್ರತಿಭೆಯ ಹೆಚ್ಚುಗಾರಿಕೆ ಏನು, ಹೇಗೆ ಭಿನ್ನ?

ನನ್ನ ಈ ಅನುಭವ ಮತ್ತು ಅನುಮಾನವನ್ನು ಸಾರಾಸಗಟಾಗಿ ಎಲ್ಲಾ ನಾಗರಿಕ ಸೇವೆಯ ಅಧಿಕಾರಿಗಳ ಮೇಲೆ ಆರೋಪಿಸಲಾಗದು ಎಂಬ ಅರಿವು ನನಗಿದೆ. ಆದರೆ ಮೇಲಿನ ನಿದರ್ಶನಗಳಲ್ಲಿ ಕಣಿಸಿಕೊಳ್ಳುವ ಅಧಿಕಾರಿಗಳು ಸಾಮಾನ್ಯರಲ್ಲ; ರಾಜ್ಯಮಟ್ಟದ ಹಲವಾರು ಆಯಕಟ್ಟಿನ ಅಧಿಕಾರ ಸ್ಥಾನಗಳನ್ನು ಅಲಂಕರಿಸಿದವರು ಮತ್ತು ತಮ್ಮ ತಿಳಿವಳಿಕೆಯ ಮಿತಿ-ಸಂಕುಚಿತತೆ ಪರಿಧಿಯಲ್ಲೇ ಆಡಳಿತ ನಡೆಸಿದವರು, ನಡೆಸುತ್ತಿರುವವರು! ಅದರ ಪರಿಣಾಮ ಉಣ್ಣುವ, ಕಾಣುವ ದುಃಸ್ಥಿತಿ ನಮ್ಮದು.

ಇನ್ನು ಮುಂಬರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಒಬ್ಬ ನಿವೃತ್ತ ಐಎಎಸ್, ಇನ್ನೊಬ್ಬ ನಿವೃತ್ತ ಐಐಎಸ್ ಸಕಲ ತಯಾರಿ ನಡೆಸುತ್ತಿದ್ದಾರೆ. ಹಾಲಿ ಅಧ್ಯಕ್ಷರು ಕೂಡ ನಿವೃತ್ತ ಕೆಎಎಸ್ ಅಧಿಕಾರಿ; ಅವರು ಕಾನೂನು ರೀತಿಯಲ್ಲೇ ತಮ್ಮ ಅಧಿಕಾರಾವಧಿ ವಿಸ್ತರಿಸಿಕೊಂಡ ಶೈಲಿ ಅಧಿಕಾರಶಾಹಿಯ ಸ್ವಾರ್ಥ ಸಾಧಕತೆಗೆ ದ್ಯೋತಕ. ಕಾಣೆಯಾಗಿರುವುದು ಮಾತ್ರ ನೈತಿಕತೆ.

ಜ್ಞಾನಸೃಷ್ಟಿ ಬಗೆಗಿನ ಸಂವಾದ, ಕನ್ನಡ ಶಾಲೆ ಮಾಸ್ತರರ ಮಾದರಿ, ಒಳಮೀಸಲಾತಿ ಸುಳಿ, ರಾಜ್ಯ ರಾಜಕಾರಣ, ನೊಬೆಲ್ ಪ್ರಶಸ್ತಿ ಇತ್ಯಾದಿ ಹೊತ್ತ ಈ ಸಂಚಿಕೆ ರಾಜ್ಯೋತ್ಸವ ಸಂದರ್ಭವನ್ನು ಅರ್ಥಪೂರ್ಣಗೊಳಿಸಲಿ.

Leave a Reply

Your email address will not be published.