ಅಧಿಕಾರಿಗಳ ರಂಪಾಟ ಹಳ್ಳ ಹಿಡಿದ ಆಡಳಿತ!

ಸರ್ಕಾರದಲ್ಲಿ ಇದ್ದವರ ಮರ್ಜಿಯಂತೆ ನಡೆಯುವವರಿಗೆ ಎಲ್ಲಿಗೆ ಬೇಕೋ ಅಲ್ಲಿಗೆ ‘ಪೋಸ್ಟಿಂಗ್ ಸಿಗುತ್ತದೆ. ಯಾರು ಕರ್ತವ್ಯ ನಿಷ್ಠರಾಗಿರುತ್ತಾರೋ ಅಂಥವರನ್ನು ಕೆಲಸಕ್ಕೆ ಬಾರದ ಹುದ್ದೆಗಳಲ್ಲಿಪಾರ್ಕಿಂಗ್ ಮಾಡಲಾಗುತ್ತದೆ! ಹೀಗಿರುವಾಗ ಉತ್ತಮ ಆಡಳಿತ ನಿರೀಕ್ಷಿಸುವುದು ಹೇಗೆ? ಯಾರಿಂದ?

-ಪದ್ಮರಾಜ ದಂಡಾವತಿ

ಇದು ಮೊದಲ ಸಲವಲ್ಲ. ಇವರು ಯಾವುದೋ ಕೆಳಹಂತದ ಅಧಿಕಾರಿಗಳೂ ಅಲ್ಲ. ಒಬ್ಬರು ಒಂದು ಜಿಲ್ಲೆಯ ಮುಖ್ಯಸ್ಥರು. ಇನ್ನೊಬ್ಬರು ಒಂದು ಸ್ಥಳೀಯ ಆಡಳಿತ ಸಂಸ್ಥೆಯ ಮುಖ್ಯಸ್ಥರು. ಇಬ್ಬರೂ ಭಾರತೀಯ ಆಡಳಿತ ಸೇವೆಗೆ ಸೇರಿದವರು, ಇಬ್ಬರೂ ಬೀದಿಗೆ ಬಂದು ಜಗಳವಾಡುತ್ತಾರೆ. ಪರಸ್ಪರರ ವಿರುದ್ಧ ಆರೋಪ ಮಾಡುತ್ತಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸ್ಥಳಕ್ಕೇ ಹೋಗುತ್ತಾರೆ. ಜಗಳ ಬಗೆಹರಿಸಲು ಪ್ರಯತ್ನಿಸುತ್ತಾರೆ. ವಾಪಸು ಬರುತ್ತಾರೆ; ಬಹುಶಃ ಸೋತು.

ಇಬ್ಬರನ್ನೂ ಸರ್ಕಾರ ವರ್ಗ ಮಾಡುತ್ತದೆ. ಅದರಲ್ಲಿ ಒಬ್ಬರು, ಅವರು ಜಿಲ್ಲೆಯ ಆಡಳಿತದ ಮುಖ್ಯಸ್ಥರು, ರಾತ್ರೋ ರಾತ್ರಿ ತಮ್ಮ ಕಾರ್ಯಸ್ಥಳದ ಕೇಂದ್ರದಿಂದ ರಾಜಧಾನಿಗೆ ಬಂದು ರಾಜ್ಯದ ಮುಖ್ಯಮಂತ್ರಿಯನ್ನೇ ನೇರವಾಗಿ ಭೇಟಿ ಮಾಡುತ್ತಾರೆ. ತಮ್ಮ ವರ್ಗ ರದ್ದು ಮಾಡಬೇಕು ಎಂದು ಮನವಿ ಮಾಡುತ್ತಾರೆ. ಅದು ಆಗದೇ ಇದ್ದಾಗ, ಭೂ ಮಾಫಿಯಾ ತಮ್ಮ ಬಲಿ ತೆಗೆದುಕೊಂಡಿತು ಎಂದು ಆರೋಪ ಮಾಡುತ್ತಾರೆ. ತಮ್ಮ ಸ್ಥಾನದಲ್ಲಿ ವರ್ಗವಾಗಿ ಬಂದ ಅಧಿಕಾರಿಗೆ ಅವರು ಅಧಿಕಾರ ವಹಿಸಿಕೊಡುವ ಸೌಜನ್ಯವನ್ನೂ ತೋರಿಸುವುದಿಲ್ಲ. ಇಲ್ಲಿ ಹೆಸರುಗಳು ಅಮುಖ್ಯ. ಏಕೆಂದರೆ, ಅವು ಎಲ್ಲರಿಗೂ ಗೊತ್ತು. ಮತ್ತು ಅವು ಸಾಂಕೇತಿಕ.

ಒಬ್ಬ ಜಿಲ್ಲಾಧಿಕಾರಿ ಮತ್ತು ಒಬ್ಬ ಮಹಾನಗರ ಪಾಲಿಕೆಯ ಆಯುಕ್ತರ ನಡುವೆ ಏನೆಲ್ಲ ಆಯಿತು ಎಂಬುದು ಆಡಳಿತಾತ್ಮಕ ವಿಚಾರ. ಒಂದು ರೀತಿ ಆಂತರಿಕ ವಿಚಾರ. ಆದರೆ, ಮಹಾನಗರ ಪಾಲಿಕೆ ಆಯುಕ್ತರು ಪತ್ರಿಕಾಗೋಷ್ಠಿ ಕರೆಯುತ್ತಾರೆ. ತಮ್ಮ ವಿರುದ್ಧದ ಅಥವಾ ಪಾಲಿಕೆ ವಿರುದ್ಧದ ಆರೋಪಗಳಿಗೆ ಉತ್ತರ ಕೊಡುತ್ತಾರೆ. ಅವರು ಅಲ್ಲಿಗೇ ನಿಲ್ಲಿಸುವುದಿಲ್ಲ. ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ ತಮ್ಮ ರಾಜೀನಾಮೆ ಪತ್ರವನ್ನು ಮಾಧ್ಯಮಗಳಿಗೆ ಕೊಡುತ್ತಾರೆ. ನಂತರ ಪರಸ್ಪರರ ನಡುವೆ ಶಾಬ್ದಿಕ ಸಮರ ನಡೆಯುತ್ತದೆ. ಅದಕ್ಕೆ ಇತರರೂ ತಮ್ಮ ದನಿ ಜೋಡಿಸುತ್ತಾರೆ. ರಾಜ್ಯದ ಆಡಳಿತ ಎನ್ನುವುದು ನಗೆಪಾಟಲು ಆಗುತ್ತದೆ.

“ನೀವು ಇಬ್ಬರೂ ಐ.ಎ.ಎಸ್ ಅಧಿಕಾರಿಗಳು. ಹೀಗೆ ಬೀದಿರಂಪ, ಹಾದಿರಂಪ ಮಾಡಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಜಿಲ್ಲೆಯ ಮತ್ತು ಸ್ಥಳೀಯ ಸಂಸ್ಥೆಯ ಮುಖ್ಯಸ್ಥರಾಗಿ ಕೆಲಸ ಮಾಡುವ ನೀವೇ ಹೀಗೆ ಅಶಿಸ್ತಿನಿಂದ ವರ್ತಿಸಿದರೆ ನಿಮ್ಮ ಕೆಳಗಿನ ಸಿಬ್ಬಂದಿಗೆ ನೀವು ಹಾಕಿಕೊಡುವ ಮಾದರಿಯಾದರೂ ಏನು” ಎಂದು ಒಬ್ಬರೂ ಕೇಳುವುದಿಲ್ಲ. ಆಶ್ಚರ್ಯ ಎಂದರೆ ಜಿಲ್ಲೆಯ ಉಸ್ತುವಾರಿ ಸಚಿವರು ಚಾಮುಂಡಿ ತಾಯಿಯ ಮೇಲೆ ಭಾರ ಹಾಕುತ್ತಾರೆ.

ಈ ಇಬ್ಬರೂ ಅಧಿಕಾರಿಗಳು ಪರಸ್ಪರರ ವಿರುದ್ಧ ಆರೋಪ ಮಾಡಿದ್ದರೆ ಅವುಗಳ ಶೀಘ್ರ ವಿಚಾರಣೆ ಆಗಬೇಕು. ಮತ್ತು ಅದರಲ್ಲಿ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು. ಆಗ ಒಟ್ಟು ಆಡಳಿತಕ್ಕೆ ಒಂದು `ಸಂದೇಶ’ ಹೋಗುತ್ತದೆ. ಆದರೆ, ಆಡಳಿತ ಮಾಡುವವರಿಗೆ ಇಷ್ಟೆಲ್ಲ ವ್ಯವಧಾನವೇ ಇರುವಂತೆ ಕಾಣುವುದಿಲ್ಲ ಅಥವಾ ಇಂಥ ವಿಚಾರಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದು ಅವರಿಗೆ ಬೇಕಾಗಿರುವಂತೆಯೂ ಇಲ್ಲ.

ಹಾಗಾದರೆ, ಈ ಭೂ ಮಾಫಿಯಾಕ್ಕೆ ಮಣಿದವರು ಯಾರು? ನಮಗೆ ತಿಳಿದಂತೆ ಒಬ್ಬ ಜಿಲ್ಲಾಧಿಕಾರಿಯನ್ನು ವರ್ಗ ಮಾಡುವ ಅಧಿಕಾರ ಇರುವುದು ಮುಖ್ಯಮಂತ್ರಿಗೆ. ಅಂತಲೇ ತಮ್ಮ ವರ್ಗಾವಣೆ ರದ್ದು ಮಾಡಬೇಕು ಎಂದು ಆ ಅಧಿಕಾರಿ ಮುಖ್ಯಮಂತ್ರಿ ಬಳಿ ಬಂದಿದ್ದರು. ಅಂದರೆ, ಮುಖ್ಯಮಂತ್ರಿಯ ಮೇಲೆ ಭೂ ಮಾಫಿಯಾ ಪ್ರಭಾವ ಬೀರಿತು ಎಂದು ಅರ್ಥವಾಗುತ್ತದೆ. ಇಂಥ ಮಾತುಗಳನ್ನು ಸಲೀಸಲಾಗಿ ಅಲ್ಲಲ್ಲಿಯೇ ಬಿಟ್ಟು ಬಿಡಬಹುದೇ? `ನಿಮ್ಮ ನಾಲಿಗೆ ಮೇಲೆ ಹಿಡಿತ ಇರಲಿ’ ಎಂದು ಯಾರೂ ಅವರಿಗೆ ಹೇಳುವುದಿಲ್ಲ.

ಆಡಳಿತದಲ್ಲಿ ಹಿಡಿತ ಇಲ್ಲದೇ ಇದ್ದರೆ ಏನಾಗುತ್ತದೆ ಎಂಬುದಕ್ಕೆ ಪುರಾವೆ ಎನ್ನುವಂತೆ ಒಬ್ಬ ಜಿಲ್ಲಾಧಿಕಾರಿ ತಮ್ಮ ಮನೆಯ ಅಂಗಳದಲ್ಲಿ ದುಬಾರಿ ವೆಚ್ಚದಲ್ಲಿ ಈಜುಕೊಳ ನಿರ್ಮಿಸಿಕೊಳ್ಳುತ್ತಾರೆ. ಕರ್ನಾಟಕದ ಇತಿಹಾಸದಲ್ಲಿ ಯಾವೊಬ್ಬ ಮುಖ್ಯಮಂತ್ರಿಯೂ ತಮ್ಮ ಮನೆಯ ಅಂಗಳದಲ್ಲಿ ಇಂಥ ಈಜುಕೊಳವನ್ನು ಕಟ್ಟಿಸಿಕೊಂಡ ನಿದರ್ಶನ ಇಲ್ಲ. ಅಥವಾ ದೇಶದ ಯಾವ ರಾಜ್ಯದಲ್ಲಿಯಾದರೂ ಇಂಥ ದುಸ್ಸಾಹಸವನ್ನು ಒಬ್ಬ ಮುಖ್ಯಮಂತ್ರಿ ಮಾಡಿರುವುದನ್ನು ನಾವು ಕೇಳಿಲ್ಲ.

ಮುಖ್ಯಮಂತ್ರಿಗಾದರೆ ಐದು ವರ್ಷಗಳ ಖಾತ್ರಿ ಅವಧಿಯಾದರೂ ಇರುತ್ತದೆ. ಆದರೆ, ಒಬ್ಬ ಜಿಲ್ಲಾಧಿಕಾರಿಗೆ ಅಂಥ ಯಾವ ಖಾತ್ರಿಯೂ ಇರುವುದಿಲ್ಲ. ತಾವು ಇಡೀ ಸೇವೆಯನ್ನು ಅಲ್ಲಿಯೇ ಮಾಡುವವರು ಎನ್ನುವ ಹಾಗೆ ಈಜುಕೊಳ ನಿರ್ಮಿಸಿಕೊಂಡ ಜಿಲ್ಲಾಧಿಕಾರಿ ಕೇವಲ ಎಂಟು ತಿಂಗಳಲ್ಲಿ ಜಾಗ ಖಾಲಿ ಮಾಡಿದ್ದಾರೆ. ತಮ್ಮ ಬಂಗಲೆಯ ಆವರಣದಲ್ಲಿ ಈಜುಕೊಳ ನಿರ್ಮಿಸಿರುವುದಕ್ಕೆ ಅವರು ಕೊಟ್ಟಿರುವ ಕಾರಣಗಳು ಹಾಸ್ಯಾಸ್ಪದವಾಗಿವೆ ಮತ್ತು ಆಧಾರ ರಹಿತವಾಗಿವೆ. ಒಬ್ಬ ಅಧಿಕಾರಿ ಈಜುಕೊಳ ನಿರ್ಮಿಸಿಕೊಳ್ಳುವ ಧಾಷ್ಟ್ರ್ಯವನ್ನು ಗಳಿಸುವುದು ಯಾವುದರ ಬಲದಿಂದ? ಇದು ಐ.ಎ.ಎಸ್ ಸೇವೆಯಲ್ಲಿ ಅಂತರ್ಗತವಾಗಿರುವ ಅಹಂಕಾರವೇ? ಈ ಸೇವೆಯನ್ನು ಹುಟ್ಟು ಹಾಕಿದ ವಸಾಹತುಶಾಹಿ ವ್ಯವಸ್ಥೆಯಲ್ಲಿ ಇದ್ದ ನಿರಂಕುಶತೆಯ ಪಳೆಯುಳಿಕೆಯೇ?

ಆ ಈಜುಕೊಳಕ್ಕೆ ಎಷ್ಟು ಹಣ ಖರ್ಚಾಯಿತು ಎಂಬುದಕ್ಕಿಂತ ಇಲ್ಲಿ ಉಚಿತಾನುಚಿತ ಪ್ರಶ್ನೆ ಇದೆ. ಆಡಳಿತಗಾರರು ಹಾಕಿಕೊಡಬೇಕಾದ ಮಾದರಿಯ ಪ್ರಶ್ನೆ ಇದೆ. ಸಾರ್ವಜನಿಕ ಹಣವನ್ನು ಹೇಗೆ ವ್ಯಯ ಮಾಡಬೇಕು ಅಥವಾ ಮಾಡಬಾರದು ಎಂಬ ಸಾಮಾಜಿಕ ಪ್ರಜ್ಞೆಯ ಪ್ರಶ್ನೆ ಇದೆ. ಅದನ್ನೆಲ್ಲ ಮರೆತು ಅಥವಾ ಬೇಕೆಂದೇ ಉದ್ಧಟತನದಿಂದ ಒಬ್ಬ ಸರ್ಕಾರಿ ಅಧಿಕಾರಿ ತನ್ನ ಸರ್ಕಾರಿ ಮನೆಯ ಆವರಣದಲ್ಲಿ ಈಜುಕೊಳವನ್ನು ನಿರ್ಮಿಸುತ್ತಿದ್ದರೆ ಸರ್ಕಾರದ ಮುಖ್ಯಸ್ಥರಾದವರು ಏನು ಮಾಡಬೇಕು? ಅದನ್ನು ಅವರು ಮಾಡದೇ ಇರಲು ಕಾರಣವಾದರೂ ಏನು? ಈಗಲೂ ಈ ಕುರಿತು ನಡೆದಿರುವ ವಿಚಾರಣೆ ತೇಪೆ ಹಾಕಿದಂತೆ ನಡೆದು ಮುಚ್ಚಿ ಹೋಗುತ್ತದೆ ಎಂಬುದರಲ್ಲಿ ಯಾವ ಸಂಶಯವೂ ಇರಬೇಕಿಲ್ಲ. ಹಾಗಾದರೆ, ಮುಂದಿನವರಿಗೆ ಇದರಿಂದ ಏನು ಪಾಠ? ಪಾಠ ಇರುವುದಿಲ್ಲ ಎಂಬ ಕಾರಣಕ್ಕಾಗಿಯೇ ಇವು ಪುನರಾವರ್ತನೆ ಆಗುತ್ತ ಇರುತ್ತವೆ.

ಕೇವಲ ಆರೇಳು ತಿಂಗಳ ಹಿಂದೆ ಇದೇ ರೀತಿ ಇಬ್ಬರು ಹಿರಿಯ ಐ.ಪಿ.ಎಸ್ ಅಧಿಕಾರಿಗಳು ಬೀದಿಯಲ್ಲಿ ನಿಂತು ಜಗಳ ಮಾಡಿದ್ದನ್ನು ನಾವು ಕಂಡಿದ್ದೇವೆ. ವ್ಯತ್ಯಾಸ ಎಂದರೆ ಅದರಲ್ಲಿ ಒಬ್ಬರು ಮಹಿಳೆಯಾಗಿದ್ದರು! ಅದು ಬೆಂಗಳೂರನ್ನು ಸುರಕ್ಷಿತ ನಗರವಾಗಿ ಮಾಡುವ ಒಂದು ಯೋಜನೆ. ಅದಕ್ಕಾಗಿ ಒಂದು ಟೆಂಡರ್ ಕರೆದಿದ್ದರು. ಅದರ ಮೊತ್ತ ಒಂದಲ್ಲ, ಎರಡಲ್ಲ, ನೂರಲ್ಲ, 620 ಕೋಟಿ ರೂಪಾಯಿಗಳದು. ಅದರಲ್ಲಿ ಮಹಿಳಾ ಅಧಿಕಾರಿ ತಮ್ಮ ಸಹೋದ್ಯೋಗಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು; ತಮ್ಮ ಮೇಲಧಿಕಾರಿ ವಿರುದ್ಧ ನಿಷ್ಕ್ರಿಯತೆ ಆರೋಪ ಮಾಡಿದರು.

ಈ ನಾಟಕ ನಮ್ಮ ಮಾಧ್ಯಮಗಳಿಗೆ ಒಂದಿಷ್ಟು ಕಾಲ ರಂಜನೆಯ ವಸ್ತುವಾಗಿತ್ತು. ಗೃಹ ಸಚಿವರು, `ಯಾರಿಗೆ ಬುದ್ಧಿ ಹೇಳಬೇಕು, ಯಾರಿಗೆ ಉಪದೇಶ ಮಾಡಬೇಕು ಮಾಡುತ್ತೇವೆ’ ಎಂದರು. ಏನಾಯಿತೋ ತಿಳಿಯಲಿಲ್ಲ. ಇಬ್ಬರದೂ ವರ್ಗವಾಯಿತು. ವರ್ಗವಾದ ಮಹಿಳಾ ಅಧಿಕಾರಿ, “ನನ್ನನ್ನು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಗೆ ಸಮಾನವಾಗಿ ನೋಡಿಕೊಳ್ಳಲಾಗಿದೆ” ಎಂದು ತಮ್ಮ ಟ್ವಿಟರ್‍ನಲ್ಲಿ ಬರೆದುಕೊಂಡರು. ಇದರ ಅರ್ಥವೇನು? ಭ್ರಷ್ಟ ಅಧಿಕಾರಿಯನ್ನು ಸರ್ಕಾರ ರಕ್ಷಿಸುತ್ತಿದೆ ಎಂದು ಅಲ್ಲವೇ? ಈ ಎರಡೂ ವರ್ಗಾವಣೆಗಳನ್ನು ಮಾಡಿದವರು ಮುಖ್ಯಮಂತ್ರಿಗಳೇ ಅಲ್ಲವೇ?

ಇಲ್ಲಿ ನೂರಾರು ಕೋಟಿ ರೂಪಾಯಿಗಳ ವಹಿವಾಟಿನ ಪ್ರಶ್ನೆ ಇದೆ. `ಇಷ್ಟು ದೊಡ್ಡ ಮೊತ್ತದ ಟೆಂಡರ್‍ನಲ್ಲಿ ಪಾರದರ್ಶಕತೆ ಪಾಲನೆಯಾಗಿಲ್ಲ, ಕೇಂದ್ರ ಸರ್ಕಾರಿ ಸ್ವಾಮ್ಯದ ಬಿ.ಇ.ಎಲ್ ನಂಥ ಸಂಸ್ಥೆಯನ್ನು ಕಡೆಗಣಿಸಲಾಗಿದೆ’ ಎಂಬ ಆರೋಪಕ್ಕೆ ಇದುವರೆಗೆ ಉತ್ತರ ಸಿಕ್ಕಿಲ್ಲ. ಅದು ತೆರಿಗೆಯ ಹಣವಾದ ಕಾರಣ ಅದಕ್ಕೆ ಉತ್ತರ ಪಡೆಯುವ ಹಕ್ಕು ಸಾರ್ವಜನಿಕರಿಗೆ ಇದೆ. ಅದನ್ನು ಅವರಿಗೆ ತಿಳಿಸುವುದು ತಮ್ಮ ಜವಾಬ್ದಾರಿ ಎಂದು ಸರ್ಕಾರದಲ್ಲಿ ಇದ್ದವರು ಭಾವಿಸುವುದಿಲ್ಲವೇ?

ಇಲ್ಲಿ ಇನ್ನೂ ಒಂದು ವಿಚಾರ ಇದೆ. ಮೊದಲಿನದು ಐ.ಎ.ಎಸ್ ಅಧಿಕಾರಿಗಳ ನಡುವಿನ ಜಗಳವಾದರೆ, ಎರಡನೆಯದು ಐ.ಪಿ.ಎಸ್ ಅಧಿಕಾರಿಗಳ ನಡುವಣ ಜಗಳ. ಇಬ್ಬರಿಗೂ ಮುಖ್ಯಸ್ಥರಾದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾ ನಿರ್ದೇಶಕರು ಇದ್ದಾರೆ. ಹಾಗಾದರೆ ಅವರ ಕೆಲಸ ಏನು? ಅದಕ್ಕೆ ಉತ್ತರ ಅತ್ಯಂತ ಸರಳವಾಗಿದೆ. ಇವು ಈಗ ಕೇವಲ ಆಲಂಕಾರಿಕ ಹುದ್ದೆಗಳಾಗಿವೆ. ಮುಖ್ಯಮಂತ್ರಿಯ ಮರ್ಜಿಯ ಮೇಲೆಯೇ, ಅವರು ಯಾವ ಪಕ್ಷದವರೇ ಇರಲಿ, ಇವರು ನೇಮಕವಾಗುತ್ತಾರೆ. ನೇಮಕವಾಗುವಾಗಲೇ ಅವರು ತಮ್ಮ ಎಲ್ಲ ಸ್ವಾತಂತ್ರ್ಯವನ್ನು, ವಿವೇಚನಾಧಿಕಾರವನ್ನು ಹಾಗೂ ಅಷ್ಟು ವರ್ಷ ಕಲಿತ ಆಡಳಿತದ ಅನುಭವಗಳನ್ನು ಮುಖ್ಯಮಂತ್ರಿಯ, ಅವರ ಸುತ್ತಲಿನ ಪ್ರಭಾವಿಗಳ ಪದತಲದಲ್ಲಿ ಇಟ್ಟು ಬಿಡುತ್ತಾರೆ.

ಮುಖ್ಯ ಕಾರ್ಯದರ್ಶಿಗಳು ಸರ್ಕಾರದ ಆಡಳಿತಕ್ಕೆ ಅನುಕೂಲವಾಗುವಂತೆ ಒಬ್ಬನೇ ಒಬ್ಬ ಐ.ಎ.ಎಸ್ ಅಧಿಕಾರಿಯ ವರ್ಗ ಮಾಡುವ ಅಧಿಕಾರವನ್ನು ಈಗ ಉಳಿಸಿಕೊಂಡಿದ್ದಾರೆ ಎಂದು ಅನಿಸುವುದಿಲ್ಲ. ಇದೇ ಮಾತು ಪೊಲೀಸ್ ಮಹಾ ನಿರ್ದೇಶಕರಿಗೂ ಅನ್ವಯಿಸುತ್ತದೆ. ಹಾಗಾದರೆ, ಆಡಳಿತದಲ್ಲಿ ಬಿಗಿ ಹೇಗೆ ಬರುತ್ತದೆ?

ಸರ್ಕಾರದಲ್ಲಿ ಈಗ ನೇಮಕಾತಿ (ಪೋಸ್ಟಿಂಗ್) ಮತ್ತು ನಿಲುಗಡೆ (ಪಾರ್ಕಿಂಗ್) ಎಂಬ ನುಡಿಗಟ್ಟು ಇದೆ. ಸರ್ಕಾರದಲ್ಲಿ ಇದ್ದವರ ಮರ್ಜಿಯಲ್ಲಿ ನಡೆಯುವವರಿಗೆ ಅಥವಾ ಅದಕ್ಕೆ ತಕ್ಕಂತೆ ಏನೇನು ಮಾಡಬೇಕೋ ಅದನ್ನು ಮಾಡುವವರಿಗೆ ಎಲ್ಲಿಗೆ ಬೇಕೋ ಅಲ್ಲಿಗೆ ಪೋಸ್ಟಿಂಗ್ ಸಿಗುತ್ತದೆ. ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೋ, ಯಾರು ಕರ್ತವ್ಯ ನಿಷ್ಠರಾಗಿರುತ್ತಾರೋ ಅಂಥವರನ್ನು ಕೆಲಸಕ್ಕೆ ಬಾರದ ಹುದ್ದೆಗಳಲ್ಲಿ ಪಾರ್ಕ್ ಮಾಡಲಾಗುತ್ತದೆ. ಆಡಳಿತದ ದುರಂತ ಎಂದರೆ ಇದೇ ಇರಬಹುದು. ಇಲ್ಲಿ ಯಾರು ಯಾರಿಗೆ ಮಾದರಿ; ಯಾರು ಯಾರಿಗೆ ಬೆದರಿಕೆ?

ಹಾಗಾದರೆ, ಉತ್ತಮ ಆಡಳಿತ ಎಂದರೆ ಯಾವುದು? ಇದು ಕಷ್ಟದ ಪ್ರಶ್ನೆಯೇನೂ ಅಲ್ಲ. ಉತ್ತಮ ಆಡಳಿತ ಎನ್ನುವುದು ಸರಳವಾಗಿರುತ್ತದೆ, ಜನಪರವಾಗಿರುತ್ತದೆ ಮತ್ತು ಉತ್ತರದಾಯಿ ಆಗಿರುತ್ತದೆ. ಆದರೆ, ಇಷ್ಟು ಸರಳ ಉತ್ತರಕ್ಕಾಗಿ ನಾವು ಈಗ ದೀಪ ಹಚ್ಚಿಕೊಂಡು ಹುಡುಕಬೇಕಾಗಿದೆ.

Leave a Reply

Your email address will not be published.