ಅಧಿಕಾರಿ ದೃಷ್ಟಿಕೋನದಲ್ಲಿ ಆಡಳಿತಾತ್ಮಕ ಇತಿಹಾಸ

ಈ ಪುಸ್ತಕವು ಸಂಸದೀಯ ಪ್ರಜಾಪ್ರಭುತ್ವದಲ್ಲಿನ ಬದಲಾವಣೆಯ ಪ್ರಕ್ರಿಯೆಯನ್ನು ಗುಮಾಸ್ತನೊಬ್ಬನ ದೃಷ್ಟಿಕೋನದಲ್ಲಿ ನೋಡಿದಂತಿದೆ. ಇಂಗ್ಲಿಷ್ ಮಾಧ್ಯಮದ ವೃತ್ತಪತ್ರಿಕೆಯಲ್ಲಿ ವರದಿಯಾದ ಘಟನೆಗಳನ್ನು ಮೆಲುಕು ಹಾಕಿದಂತಿದೆ… ಹಲವಾರು ವರ್ಷಗಳ ಕಾಲ ಬೆಂಗಳೂರು ನಗರದ ಆಡಳಿತಾತ್ಮಕ ಹೊಣೆ ಹೊಂದಿದ್ದ ಲೇಖಕರು ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸಲೂ ಅಸಮರ್ಥವಾದಂತಿದೆ. ಒಟ್ಟಾರೆ ಪುಸ್ತಕದ ಉದ್ದೇಶವು ಇದ್ದದ್ದನ್ನು ಇದ್ದಂತೆ ವಿವರಿಸುವ ಮಿತಿ ಮೀರಿದಂತಿಲ್ಲ.

ಕಳೆದ ಎಪ್ಪತ್ತು ವರ್ಷಗಳಿಂದಲೂ ಸ್ವತಂತ್ರ ಭಾರತದಲ್ಲಿ ನಾವು ಅಧಿಕಾರಶಾಹಿಯಿಂದ ಆಡಳಿತಕ್ಕೆ ಒಳಪಟ್ಟಿದ್ದರೂ ಈ ಕಾರ್ಯಾಂಗದ ಬಗೆಗಿನ ಗಭೀರ ಅಧ್ಯಯನಗಳು ಕಡಿಮೆಯೇ. ನಿವೃತ್ತಿಯ ನಂತರ ಕೆಲವೇ ಕೆಲವು ಅಧಿಕಾರಿಗಳು ತಮ್ಮ ದೀರ್ಘ ಅನುಭವದ ದಿನಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಟಿ.ಎನ್.ಶೇಷನ್ ಹಾಗೂ ಟಿ.ಎಸ್.ಆರ್. ಸುಬ್ರಹ್ಮಣಿಯಮ್‍ರವರ ಪುಸ್ತಕಗಳನ್ನು ಇಲ್ಲಿ ಹೆಸರಿಸಬಹುದು. ಆದರೆ ಬಹಳಷ್ಟು ಅಧಿಕಾರಿಗಳು ತಾವು ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಮಾಡಿದ ಘನಂದಾರಿ ಕೆಲಸಗಳ ವಿವರ ನೀಡುತ್ತಾ ತಮ್ಮನ್ನು ತಾವೇ ಹೊಗಳಿಕೊಳ್ಳುವ ಪುಸ್ತಕ ಬರೆದಿದ್ದಾರೆ. ಇನ್ನೂ ಕೆಲವರು ತಾವು ಹೇಗೆ ರಾಜಕಾರಣಿಗಳಿಂದ ದೇಶವನ್ನು ಉಳಿಸಿದೆವು ಎಂಬುದನ್ನು ವರ್ಣರಂಜಿತವಾಗಿ ಹೇಳಲು ಹೊರಡುತ್ತಾರೆ. ಯಾವುದೇ ಒತ್ತಡ ಹಾಗೂ ಬೆದರಿಕೆಗಳ ನಡುವೆಯೂ ತಾವು ಹೇಗೆ ಸತ್ಯನಿಷ್ಠರಾಗಿ ನಾಗರಿಕರ ಹಕ್ಕುಗಳಿಗೆ ಬದ್ಧತೆ ತೋರಿದ್ದನ್ನು ಡಂಗುರ ಹೊಡೆಯುತ್ತಾರೆ. ಆದರೆ ಈ ಯಾವುದೇ ಪುಸ್ತಕಗಳಲ್ಲಿ ಅಧಿಕಾರಿವರ್ಗದ ಭ್ರಷ್ಟಾಚಾರ, ರಾಜಕಾರಣಿಗಳ ಮುಂದೆ ನಿರ್ಲಜ್ಜರಾಗಿ ಮಂಡಿಯೂರಿ ಹುದ್ದೆ ಭಿಕ್ಷೆ ಬೇಡುವುದು, ಒಬ್ಬರ ಮೇಲೆ ಮತ್ತೊಬ್ಬ ಅಧಿಕಾರಿ ಕತ್ತಿ ಮಸೆಯುವುದು ಅಥವಾ ಅಭಿವೃದ್ಧಿ ಕೆಲಸಗಳಿಗೆ ತಮ್ಮ ಋಣಾತ್ಮಕ (ನೆಗೆಟಿವ್) ನಡವಳಿಕೆಗಳಿಂದ ತಡಡೆಯೊಡ್ಡುವುದರ ಬಗ್ಗೆ ಬರೆಯುವುದಿಲ್ಲ. ನಮ್ಮ ದೇಶದ ಅಧಿಕಾರ ವರ್ಗವು ನಿಜಕ್ಕೂ ದೇಶಸೇವೆ ಮಾಡಲೆಂದು ಸ್ವರ್ಗದಿಂದ ಇಳಿದು ಬಂದ ಕಿನ್ನರರೆಂದು ಬಿಂಬಿಸುವ ಪುಸ್ತಕಗಳನ್ನೇ ನಾವು ಓದುತ್ತಾ ಬಂದಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ‘ಪ್ರಜಾವಾಣಿ’ ಅಂಕಣ ಬರೆದು ತಮ್ಮನ್ನು ತಾವು ವೈಭವೀಕರಿಸಿಕೊಂಡ ಅಧಿಕಾರಿಗಳು ಇದೇ ಸಾಲಿಗೆ ಬಂದು ನಿಲ್ಲುತ್ತಾರೆ.

ಇದಕ್ಕೆ ಹೊರತಾಗಿ ಡಾ.ಎ.ರವೀಂದ್ರರವರ ಈ ಪುಸ್ತಕವಿದೆ. ‘ಗವರ್ನಿಂಗ್ ಎನ್ ಇಂಡಿಯನ್ ಸ್ಟೇಟ್: ಕರ್ನಾಟಕ ಇನ್ ಫೋಕಸ್’ ಎಂಬ ಪುಸ್ತಕದಲ್ಲಿ ರವೀಂದ್ರರವರು ತಮ್ಮನ್ನು ತಾವು ವೈಭವೀಕರಿಸಿಕೊಳ್ಳುವ ಗೊಡವೆಗೆ ಹೋಗಿಲ್ಲ. ತಮ್ಮ ವೈಯಕ್ತಿಕ ಅನುಭವಗಳನ್ನು ಸಾರ್ವತ್ರೀಕರಿಸಿ ಅನಗತ್ಯ ನೀತಿಪಾಠ ಹೇಳಹೊರಟಿಲ್ಲ. ಇದು ಈ ಪುಸ್ತಕದ ಅತಿಮುಖ್ಯ ಪ್ಲಸ್ ಪಾಯಿಂಟ್. ಎಲ್ಲ ನಿವೃತ್ತ ಅಧಿಕಾರಿಗಳಂತೆ ಉಪದೇಶ ಮಾಡುವುದನ್ನು ಬಿಟ್ಟು ರವೀಂದ್ರರವರು ಕರ್ನಾಟಕದ ಆಡಳಿತದ ಮುಂದಿರುವ ಸವಾಲುಗಳನ್ನು ವಿಷದವಾಗಿ ಪಟ್ಟಿ ಮಾಡಿದ್ದಾರೆ. ಮೈಸೂರು ರಾಜ್ಯವು 1956ರಲ್ಲಿ ವಿಶಾಲ ಮೈಸೂರು ರಾಜ್ಯವಾಗಿ ಪರಿವರ್ತಿತವಾದ ದಿನಗಳಿಂದ ಹಿಡಿದು ಕರ್ನಾಟಕದ ಚುನಾವಣೆಗಳು, ಶಾಸಕಾಂಗ ಪದ್ದತಿ, ಆಡಳಿತ ಸುಧಾರಣೆಗಳು ಹಾಗೂ ಸಮಸ್ಯೆಗಳೆಲ್ಲವನ್ನು ಈ ಪುಸ್ತಕದಲ್ಲಿ ಹೆಸರಿಸಿದ್ದಾರೆ. ಈ ರೀತಿಯಲ್ಲಿ ಕನಾಟಕದ ಅರ್ಧ ಶತಮಾನದ ಆಡಳಿತ ಪದ್ದತಿಯ ಇತಹಾಸವನ್ನೇ ಓದುಗರಿಗೆ ತಿಳಿಹೇಳಿದ್ದಾರೆ. ಕರ್ನಾಟಕದ ರಾಜಕೀಯ ಹಾಗೂ ಆಡಳಿತ ಘಟನೆಗಳೆಲ್ಲವನ್ನು ಒಂದೂ ಬಿಡದಂತೆ ಬಿಚ್ಚಿಟ್ಟಿದ್ದಾರೆ. ಆಡಳಿತ ಸುಧಾರಣೆ-ಶಾಸನ ರಚನೆಯಲ್ಲಿ ಹಾಗೂ ನ್ಯಾಯಾಂಗದಲ್ಲಿ ಬೇಕಿರುವ ಸುಧಾರಣೆಗಳನ್ನು ಕೂಡಾ ಉಲ್ಲೇಖಿಸಿದ್ದಾರೆ. ಈ ರೀತಿಯಲ್ಲಿ ಕರ್ನಾಟಕದ ಆಡಳಿತ ಇತಿಹಾಸವನ್ನು ತಿಳಿಯಬಯಸುವ ವಿದ್ಯಾರ್ಥಿಗಳಿಗೆ ಒಂದೇ ಹೊತ್ತಿಗೆಯಲ್ಲಿ ಸಮಗ್ರ ಚಿತ್ರಣ ದೊರಕುವಂತೆ ಕೊಡಮಾಡಿದ್ದಾರೆ. 

ಈ ಪುಸ್ತಕವು ಕರ್ನಾಟಕದ ಇತಿಹಾಸ ಅಧ್ಯಯನಕ್ಕೆ ಸೇರಿದ ಉತ್ತಮ ಕೊಡುಗೆಯೆಂದು ಹೇಳುತ್ತಲೇ ಈ ಪುಸ್ತಕದ ಕೆಲವು ನ್ಯೂನತೆಗಳನ್ನು ಹೇಳಲೇಬೇಕು. ಈ ವಿಮರ್ಶೆಯ ಈ ಪ್ರಕ್ರಿಯೆಯಲ್ಲಿ ಇಂತಹ ಪುಸ್ತಕ ರಚಿಸುವ ಲೇಖಕರು ಮಾಡುವ ಸಾಮಾನ್ಯ ತಪ್ಪುಗಳನ್ನು ಎತ್ತಿ ಹೇಳಿದಂತೆಯೂ ಆದರೆ ಸ್ವಲ್ಪವಾದರೂ ಗುಣಾತ್ಮಕವಾದ ಪರಿಣಾಮವಾಗಬಹುದು.

ಕರ್ನಾಟಕದ ಆಡಳಿತ ಇತಿಹಾಸದ ಬಗ್ಗೆ ಇರುವ ಈ ಪುಸ್ತಕವನ್ನು “ಭಾರತದ ರಾಜ್ಯವೊಂದರ ಆಡಳಿತ”ವೆಂದು ಶೀರ್ಷಿಕೆ ನೀಡಿ ಕರೆದುಕೊಳ್ಳಬಾರದಿತ್ತು. ದೇಶದ ಪ್ರತಿಯೊಂದು ರಾಜ್ಯವು ತನ್ನದೇ ಆದ ಆಡಳಿತ ಇತಿಹಾಸ, ಪ್ರತ್ಯೇಕ ಸಂದರ್ಭ ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿದೆ. ಕರ್ನಾಟಕದ ಸಮಸ್ಯೆಗಳು ಹಾಗೂ ಅದರ ಪರಿಹಾರಗಳನ್ನು ಬೇರೊಂದು ರಾಜ್ಯಕ್ಕೆ ಸುಲಭವಾಗಿ ಅಳವಡಿಸುವಮತಿಲ್ಲ. ಲೇಖಕರಿಗೆ ಬೇರೆ ರಾಜ್ಯಗಳ ಆಡಳಿತ ಹಾಗೂ ರಾಜಕೀಯ ಸಮಸ್ಯೆಗಳ ಬಗ್ಗೆ ಅರಿವೂ ಇದ್ದಂತಿಲ್ಲ. ಆದಕಾರಣ ಲೇಖಕರು ಅನಗತ್ಯವಾಗಿ ತಮ್ಮ ಅನುಭವ ಪ್ರಪಂಚದ ಮಿತಿಯನ್ನು ಮೀರುವ ಘೋಷಣೆ ಮಾಡಿದ್ದರೆ. 

ಪುಸ್ತಕವು ಬಹುತೇಕವಾಗಿ ಪತ್ರಿಕೋದ್ಯಮಿಯೊಬ್ಬ ರಾಜ್ಯದ ಆಡಳಿತ ಇತಿಹಾಸವನ್ನು ಕುರಿತು ಬರೆದಂತಿದೆ. ರವೀಂದ್ರರವರು ಎಲ್ಲಾ ಘಟನೆ ಹಾಗೂ ಸಮಸ್ಯೆಗಳನ್ನು ತಮ್ಮ ಪುಸ್ತಕದಲ್ಲಿ ಅಡಕವಾಗಿಸುವ ಧಾವಂತದಲ್ಲಿ ತಮಗೆ ಗೊತ್ತಿರುವ ಎಲ್ಲಾ ಸಾಮಾನ್ಯ ವಿವರಗಳನ್ನೂ ತುಂಬಿದ್ದಾರೆ. ಜಿಲ್ಲಾಧಿಕಾರಿಯಾದಾಗಿನಿಂದ ಹಿಡಿದು ರಾಜ್ಯದ ಮುಖ್ಯ ಕಾರ್ಯದರ್ಶಿ ಆಗುವವರೆಗಿನ ಒಳಸೂಕ್ಷ್ಮಗಳು ಮತ್ತು ವೈಯಕ್ತಿಕ ಅನುಭವ ಶ್ರೀಮಂತಿಕೆಯ ಅಚ್ಚು ಎಲ್ಲೂ ಕಾಣಸಿಗುವುದಿಲ್ಲ. ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ಹಾಗೂ ಗಂಭೀರ ವಿದ್ಯಾರ್ಥಿಗಳಿಗೆ ಈ ಪುಸ್ತಕವು ‘ಶಾಸ್ತ್ರೀಯ’ವಾಗಿಲ್ಲವೆಂಬ ದೂರಿದ್ದರೆ ಅದಕ್ಕೆ ಲೇಖಕರನ್ನು ಹೊಣೆ ಮಾಡುವಂತಿಲ್ಲ.

ರಾಜಕೀಯದವರ ಒಳಗಣ್ಣಿನ ದೃಷ್ಟಿಯಿಂದ ನೋಡುವ ಗೊಡವೆಗೆ ಹೋದಂತಿಲ್ಲ. ಹಾಗಾಗಿ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಾಗೂ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ಲೇಖಕರು ಸಂಪೂರ್ಣವಾಗಿ ವಿಫಲವಾಗಿದ್ದಾರೆ.

ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸೂಚಿಸಲೆಂದೇ ಲೇಖಕರು ಅಧ್ಯಾಯವೊಂದನ್ನು ಮೀಸಲಿಟ್ಟಿದ್ದರೂ ಉದ್ದೇಶ ಸಫಲವಾದಂತಿಲ್ಲ. ಸಮಸ್ಯೆಗಳನ್ನು ಹೆಸರಿಸಿದ್ದರೂ ಲೇಖಕರು ಪರಿಹಾರಗಳನ್ನು ಹುಡುಕುವ ದಿಸೆಯಲ್ಲಿ ಬೇಕಿರುವ ಗಂಭೀರ ಅಧ್ಯಯನ ಮಾಡಿದಂತಿಲ್ಲ. ಅಂತಹಾ ಯಾವುದೇ ವೈಚಾರಿಕ ಹೊಳಪು ಕಾಣಸಿಗುವುದಿಲ್ಲ. ಹಲವಾರು ವರ್ಷಗಳ ಕಾಲ ಬೆಂಗಳೂರು ನಗರದ ಆಡಳಿತಾತ್ಮಕ ಹೊಣೆ ಹೊಂದಿದ್ದ ಲೇಖಕರು ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸಲೂ ಅಸಮರ್ಥವಾದಂತಿದೆ. ಒಟ್ಟಾರೆ ಪುಸ್ತಕದ ಉದ್ದೇಶವು ಇದ್ದದ್ದನ್ನು ಇದ್ದಂತೆ ವಿವರಿಸುವ ಮಿತಿ ಮೀರಿದಂತಿಲ್ಲ.

ತಮ್ಮ ಜೀವಮಾನದುದ್ದಕ್ಕೂ ಯಾರೊಬ್ಬರೊಡನೆಯೂ ಅತಿಯಾದ ಸ್ನೇಹ ಇಲ್ಲವೇ ವೈರತ್ವ ಕಟ್ಟಿಕೊಳ್ಳದೆ ‘ಟಿಪಿಕಲ್ ಬ್ಯೂರೊಕ್ರಾಟ್’ನಂತೆ ಇದ್ದ ಲೇಖಕರಿಗೆ ರಾಜಕೀಯದ ಒಳಸುಳಿಗಳು ತಿಳಿದಂತಿಲ್ಲ. ದಶಕಗಳ ಕಾಲ ರಾಜಕಾರಣಿಗಳ ಒಡನಾಟವಿದ್ದರೂ ಲೇಖಕರು ಮನಬಿಚ್ಚಿ ಮಾತನಾಡುವ ಅಥವಾ ರಾಜ್ಯಾಂಗ ಪ್ರಕ್ರಿಯೆಯನ್ನು ರಾಜಕೀಯದವರ ಒಳಗಣ್ಣಿನ ದೃಷ್ಟಿಯಿಂದ ನೋಡುವ ಗೊಡವೆಗೆ ಹೋದಂತಿಲ್ಲ. ಹಾಗಾಗಿ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಾಗೂ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ಲೇಖಕರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಈ ಪುಸ್ತಕವು ಸಂಸದೀಯ ಪ್ರಜಾಪ್ರಭುತ್ವದಲ್ಲಿನ ಬದಲಾವಣೆಯ ಪ್ರಕ್ರಿಯೆಯನ್ನು ಗುಮಾಸ್ತನೊಬ್ಬನ ದೃಷ್ಟಿಕೋನದಲ್ಲಿ ನೋಡಿದಂತಿದೆ. ಇಂಗ್ಲಿಷ್ ಮಾಧ್ಯಮದ ವೃತ್ತಪತ್ರಿಕೆಯಲ್ಲಿ ವರದಿಯಾದ ಘಟನೆಗಳನ್ನು ಮೆಲುಕು ಹಾಕಿದಂತಿದೆ.

ಇಷ್ಟಾಗಿಯೂ ತನ್ನಲ್ಲಿ ಒಳಗೊಂಡ ಸಮಗ್ರ ವಿವರಗಳಿಗಾಗಿಯೇ ರವೀಂದ್ರರವರ ಪುಸ್ತಕವು ಓದಲರ್ಹವಾಗಿದೆ ರಾಜ್ಯದ ಆಡಳಿತದಲ್ಲಿನ ಬದಲಾವಣೆಗಳ ದಾಖಲೆಗಾದರೂ ಈ ಪುಸ್ತಕವನ್ನು ಕರ್ನಾಟಕದ ಇತಿಹಾಸದ ವಿದ್ಯಾರ್ಥಿಗಳು ಓದಬೇಕು. ಕಾರ್ಯಾಂಗದ ಮಿತಿ ಹಾಗೂ ಶಕ್ತಿಗಳ ಮತ್ತು ಸಮಸ್ಯೆ-ಪರಿಹಾರಗಳ ಬಗ್ಗೆ ಅಧಿಕಾರಿ ದೃಷ್ಟಿಕೋನವನ್ನು ಅರಿಯಲೂ ಈ ಪುಸ್ತಕ ನಮಗೆ ನೆರವಾಗುತ್ತದೆ.

Leave a Reply

Your email address will not be published.