ಅಧಿಕಾರ ಗಿಟ್ಟಿಸಲು ಕ್ರೀಡಾ ಕೀರ್ತಿಯ ಮೆಟ್ಟಿಲು

ಒಂದು ಕ್ಷೇತ್ರದಲ್ಲಿ ಸಂಪಾದಿಸಿದ ಯಶಸ್ಸು ಅಥವಾ ಕೀರ್ತಿ ಮತ್ತೊಂದು ಕ್ಷೇತ್ರದ ಏಣಿ ಹತ್ತಲು ಪೂರಕವಾಗುವುದು ಅಪರೂಪದ ಸಂಗತಿ. ಹೀಗೆ ಕ್ರೀಡಾರಂಗದಲ್ಲಿ ಎತ್ತರಕ್ಕೇರಿ ಮಗದೊಂದು ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದವರ ಕುರಿತ ಮಾಹಿತಿ ಇಲ್ಲಿದೆ.

ಕ್ರೀಡಾಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ ಬಹಳಷ್ಟು ಮಂದಿ ಸಕ್ರಿಯವಾಗಿರುವಾಗಲೇ ಅಥವಾ ನಿವೃತ್ತಿ ಘೋಷಿಸಿದ ಬಳಿಕ ಮತ್ತೊಂದು ಕ್ಷೇತ್ರ ಆರಿಸಿಕೊಳ್ಳುವ ಪ್ರಕರಣಗಳು ಸಾಕಷ್ಟಿವೆ. ಅದರಲ್ಲೂ ಕ್ರೀಡಾಪಟುಗಳನ್ನು ಹೆಚ್ಚಾಗಿ ಆಕರ್ಷಿಸುತ್ತಿರುವುದು ರಾಜಕಾರಣ. ಈ ಕ್ಷೇತ್ರ ಪ್ರವೇಶಿಸಿ ಗಟ್ಟಿಯಾಗಿ ನೆಲೆಯೂರಿದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಕಾರಣ ಹಲವಿರಬಹುದು. ಆದರೆ ಪ್ರಸ್ತುತ ಎರಡೂ ಕ್ಷೇತ್ರದಲ್ಲಿ ಸಕ್ಸೆಸ್ ಕಂಡವರ ಪಟ್ಟಿಯಲ್ಲಿ ಭಾರತೀಯರು ಮಾತ್ರವಲ್ಲ ವಿದೇಶಿ ಆಟಗಾರರು ಸೇರಿದ್ದಾರೆ.

ಒಂದು ಕ್ಷೇತ್ರದಲ್ಲಿ ಪ್ರಭಾವಿ ಎನಿಸಿರುವಾಗಲೇ ಅದನ್ನು ತಮ್ಮ ಪರವಾಗಿ ಬಳಸಿಕೊಳ್ಳುವ ಛಾತಿ ಇರುವುದು ಹೆಚ್ಚಾಗಿ ರಾಜಕಾರಣದಲ್ಲಿ ಮಾತ್ರ. ಹಾಗಾಗಿಯೇ ಕ್ರಿಕೆಟ್ ದಂತಕಥೆ ಎನಿಸಿರುವ ಸಿಡಿಲಮರಿ ಸಚಿನ್ ತೆಂಡೂಲ್ಕರ್ ಅವರಿಗೆ ಕಾಂಗ್ರೆಸ್ ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶನ ಮಾಡಿತ್ತು. ಆದರೆ ಕ್ರೀಡಾಕ್ಷೇತ್ರದ ಅವರ ಸಾಧನೆಯ ಅಬ್ಬರ ಸಂಸತ್ ಒಳಗೆ ಸದ್ದು ಮಾಡಲೇ ಇಲ್ಲ. ಅವಧಿ ಪೂರ್ಣವಾಗುವ ಹೊತ್ತಿಗೆ ಸಚಿನ್ ಧ್ವನಿಎತ್ತಿದ್ದು ಕೇವಲ ಆರು ಸಲ ಮಾತ್ರ. ಕ್ರೀಡಾ ಯಶಸ್ಸು ರಾಜಕೀಯದಲ್ಲಿ ಸಿಗಲಿಲ್ಲ.

ಆದರೆ ಒಲಿಂಪಿಕ್ಸ್ ಶೂಟಿಂಗ್ ನಲ್ಲಿ ಬೆಳ್ಳಿ ಗೆದ್ದಿದ್ದ ಕ್ಯಾ.ರಾಜವರ್ಧನ್ ಸಿಂಗ್ ರಾಥೋಡ್ ಸಕ್ರಿಯ ಚುನಾವಣೆ ಮುಖೇನ ಲೋಕಸಭೆಗೆ  ಆಯ್ಕೆಯಾಗಿ ದೇಶದ ಕ್ರೀಡಾ ಸಚಿವರಾಗಿಯೂ ಉತ್ತಮ ಹೆಸರು ಮಾಡಿದವರು. ಕ್ರಿಕೆಟಿಗ ಕೀರ್ತಿ ಆಜಾದ್, ರಾಜೀವ್ ಶುಕ್ಲಾ ರಾಜಕೀಯದ ಜತೆ ಉತ್ತಮ ಬಾಂಧವ್ಯ ಹೊಂದುತ್ತಲೇ ಬಿಸಿಸಿಐ ನಂತಹ ಹಣದ ತಿಜೋರಿ ಮೇಲೇರಿದವರು. ಸಕ್ರಿಯವಾಗಿ ಕ್ರಿಕೆಟ್ ನಲ್ಲಿ ಇದ್ದಾಗಲೇ ಬಿಜೆಪಿಯಿಂದ ಸ್ಪರ್ಧಿಸಿ ದೆಹಲಿಯಿಂದ ಸಂಸದರಾದವರು ಗೌತಮ್ ಗಂಭೀರ್. ಕೆಲವು ವರ್ಷಗಳ ಹಿಂದೆ ಹೈದರಾಬಾದ್ ನಿಂದ ಮಹ್ಮದ್ ಅಜರುದ್ದೀನ್ ಗೆದ್ದು ಸಂಸದರಾಗಿದ್ದರು. ಆದರೆ ಮಹ್ಮದ್ ಕೈಫ್, ಮನೋಜ್ ಪ್ರಭಾಕರ್, ವಿನೋದ್ ಕಾಂಬ್ಳಿ ಸಹಿತ ಹಲವು ಮಂದಿ ರಾಜಕಾರಣದಲ್ಲಿ ಯಶಸ್ಸು ಕಾಣಲಿಲ್ಲ.

ಸ್ವಲ್ಪ ವಿದೇಶದತ್ತ ಕಣ್ಣು ಹಾಯಿಸಿದರೆ ಹಲವು ನಿದರ್ಶನಗಳು ಸಿಗುತ್ತವೆ. ಶ್ರೀಲಂಕಾದಲ್ಲಿ ಒಂದು ಕಾಲದ ನಾಯಕರಾಗಿದ್ದ ಅರ್ಜುನ ರಣತುಂಗ, ಸನತ್ ಜಯಸೂರ್ಯ, ಮರ್ವನ್ ಅಟ್ಟಪಟ್ಟು, ಅಸಂಕ ಗುರುಸಿಂಗೆ, ರೊಮೇಶ್ ಕಲುವಿತರಣ ರಾಜಕೀಯ ಪ್ರವೇಶಿಸಿದವರು.

ಆದರೆ ಸಕ್ಸೆಸ್ ಸಿಕ್ಕಿದ್ದು ರಣತುಂಗ ಮತ್ತು ಜಯಸೂರ್ಯಗೆ ಮಾತ್ರ. ಆಸ್ಟ್ರೇಲಿಯಾ ಆಟಗಾರ ಡೀನ್ ಜೋನ್ಸ್ ಪ್ರಯತ್ನಿಸಿ ಸೋತವರು. ಮಾರ್ಕ್ ವಾಸ್ಥಳೀಯ ಜನಪ್ರತಿನಿಧಿ ಆಗುವಲ್ಲಿ ಯಶಸ್ಸು ಕಂಡವರು.

 

 

ಅತ್ತ ಪಾಕಿಸ್ತಾನಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದ ಆಲ್ ರೌಂಡರ್ ಇಮ್ರಾನ್ ಖಾನ್ ದಶಕದ ಕಾಲ ರಾಜಕೀಯದಲ್ಲಿ ಈಜಿ ಕೊನೆಗೆ ಆ ದೇಶದ ಪ್ರಧಾನಿ ಹುದ್ದೆ ಹಿಡಿದ ಸಾಹಸಿಗ. ಇದಕ್ಕೂ ಮುನ್ನ ಜಾವೆದ್ ಮಿಯಾಂದಾದ್, ಸಲೀಂ ಮಲ್ಲಿಕ್, ಅಬ್ದುಲ್ ಖಾದರ್ ವೈಫಲ್ಯ ಅನುಭವಿಸಿದ್ದರು.

ಕ್ರಿಕೆಟ್‍ನಲ್ಲಿ ಒಂದು ಕಾಲದ ಘಟಾನುಘಟಿ ಅನಿಸಿಕೊಂಡಿದ್ದ ವಿಂಡೀಸ್ ನ ವಿವಿಯನ್ ರಿಚಡ್ರ್ಸ್ ಅಲ್ಲಿನ ಸಂಸತ್ ಗೆ ನೇಮಕಗೊಂಡಿದ್ದರು. ನ್ಯೂಜಿಲ್ಯಾಂಡ್ ನ ಮಾರ್ಟಿನ್ ಕ್ರೋವ್ ಕೂಡಾ ಪಾರ್ಲಿಮೆಂಟ್ ಸದಸ್ಯರಾಗಿದ್ದರು. ದಕ್ಷಿಣ ಆಫ್ರಿಕಾದ ಕ್ಲೈವ್ ರೈಸ್ ಉಪಾಧ್ಯಕ್ಷ ಹುದ್ದೆ ಅಲಂಕರಿಸಿದ ಕ್ರಿಕೆಟಿಗ.

ಇದು ಕೇವಲ ಕ್ರಿಕೆಟ್ ಜನಪ್ರಿಯತೆಗೆ ಸೀಮಿತವಾಗಿಲ್ಲ. ನಮ್ಮಲ್ಲಿಯೇ ಹಲವು ಕ್ರೀಡೆಗಳಲ್ಲಿ ಹೆಸರು ಮಾಡಿದವರು ರಾಜಕಾರಣದ ಎರಡನೇ ಇನ್ನಿಂಗ್ಸ್ ನಲ್ಲೂ ಸಕ್ಸೆಸ್ ಕಂಡಿದ್ದಾರೆ. ಹಾಕಿಯಲ್ಲಿ ಮಿಂಚಿದ್ದ ದಿಲೀಪ್ ಟರ್ಕಿ ಒಡಿಶಾದಿಂದ ರಾಜ್ಯಸಭೆಗೆ ಆರಿಸಿ ಬಂದಿದ್ದರು. ಫುಟ್ಬಾಲ್ ಪಟು ಬೈಚುಂಗ್ ಭುಟಿಯಾ ಪ್ರತ್ಯೇಕ ಪಕ್ಷ ಕಟ್ಟಿ ಕೈ ಸುಟ್ಟುಕೊಂಡವರು. ಕುಸ್ತಿಪಟು ಯೋಗೀಶ್ವರ್ ದತ್, ಗೀತಾ ಪೊಗಟ್ ಚುನಾವಣಾ ಕಣಕ್ಕಿಳಿದು ಗೆಲುವಿನತ್ತ ಈಜಲಾಗಲಿಲ್ಲ. ಆದರೆ ವಿಶ್ವಚಾಂಪಿಯನ್ ಬಾಕ್ಸರ್ ಮೇರಿಕೋಂ ಇಂದಿಗೂ ಸಂಸದೆಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿ ಅನಿಸಿಕೊಂಡವರನ್ನು ರಾಜಕೀಯ ಪಕ್ಷಗಳು ತಮ್ಮ ಟ್ರಂಪ್ ಕಾರ್ಡ್ ಗಳನ್ನಾಗಿ ಬಳಸಿ ವಿಜಯದ ಮಾಲೆ ಹೆಣೆಯುವುದಿದೆ. ಕ್ರೀಡಾ ಕ್ಷೇತ್ರದ ಮಂದಿಯೂ ಇದಕ್ಕೆ ಹೊರತಾಗಿಲ್ಲ. ಮತ್ತೊಂದು ವಿಶೇಷ ಎಂದರೆ ಹೆಸರು ಮಾಡಿದ್ದ ಕ್ಷೇತ್ರದಲ್ಲೇ ಆಡಳಿತ ಅಥವಾ ಅಧಿಕಾರ ಹಿಡಿಯುವುದು ಪ್ರತಿಷ್ಠೆಯ ಸಂಗತಿ. ಇದಕ್ಕೆ ಸ್ಪಷ್ಟ ನಿದರ್ಶನ ಎಂದರೆ ಬಂಗಾಲದ ಮಹಾರಾಜ ಎನಿಸಿಕೊಂಡ ಭಾರತ ಕ್ರಿಕೆಟ್ ತಂಡದ ಯಶಸ್ವಿ ಕ್ಯಾಪ್ಟನ್ ಸೌರವ್ ಗಂಗೂಲಿ. ಪ್ರಸ್ತುತ ಬಿಸಿಸಿಐ ಅಧ್ಯಕ್ಷ ಅರ್ಥಾತ್ ಹಣದ ಥೈಲಿಯ ಒಡೆಯ. ಜತೆಗೆ ನೈಜಪ್ರತಿಭೆಯ ಕ್ರಿಕೆಟಿಗರು ದೇಶದ ತಂಡ ಸೇರುವಂತೆ ಮಾಡುವ ಮಹತ್ಕಾರ್ಯಕ್ಕು ಅವಕಾಶ. ಈ ಹಿಂದೆಯೂ ಕನ್ನಡಿಗರಾದ ಇವಿಎಸ್ ಪ್ರಸನ್ನ, ಜಾವಗಲ್ ಎಕ್ಸ್‍ಪ್ರೆಸ್ ಶ್ರೀನಾಥ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ರೋಜರ್ ಬಿನ್ನಿ, ಬ್ರಿಜೇಶ್ ಪಟೇಲ್, ಸುಧಾಕರ ರಾವ್ ಮೊದಲಾದವರು ತಮಗೆ ಸಿಕ್ಕ ಅವಕಾಶದಲ್ಲಿ ನೈಜನ್ಯಾಯಕ್ಕೆ ಪ್ರಯತ್ನಿಸಿದ್ದಾರೆ.

ಒಟ್ಟಾರೆ ಒಂದು ಕ್ಷೇತ್ರದಲ್ಲಿ ಹೆಸರು ಗಳಿಸಿದ್ದ ಕೀರ್ತಿಯಿಂದ ಇನ್ನೊಂದು ಕ್ಷೇತ್ರದಲ್ಲಿ ಅವಕಾಶ ಸಿಕ್ಕಾಗ ಅಲ್ಲಿಯೂ ಮಿಂಚುವುದು ಒಂದು ವೃತ್ತಿಪರ ಕಲೆ. ಜತೆಗೆ ಪ್ರಾಮಾಣಿಕ ಪ್ರಯತ್ನದ ಫಲ. ಭವಿಷ್ಯದಲ್ಲಿ ಇನ್ನಷ್ಟು ಮಂದಿ ಇಂತಹ ಉಭಯ ಕ್ಷೇತ್ರದ ಸಾಧನೆಯಲ್ಲಿ ಸಕ್ಸೆಸ್ ಕಾಣಲಿ. ಅದು ಉದಯೋನ್ಮುಖ ಮತ್ತು ಎಲೆಮರೆಯ ಪ್ರತಿಭೆಗಳಿಗೆ ಆಯಾ ಕ್ಷೇತ್ರದಲ್ಲಿ ಮಾನ್ಯತೆ ಸಿಗುವಂತಹ ಸನ್ನಿವೇಶ ಸೃಷ್ಟಿಸಲಿ.

Leave a Reply

Your email address will not be published.