ಸರ್ವಾಧಿಕಾರ ನಿಯಂತ್ರಿಸಲು ಅಸ್ಥಿರತೆ ಅನಿವಾರ್ಯ!

ಮೇಲ್ನೋಟಕ್ಕೆ ಇದು ಅಧ್ಯಕ್ಷೀಯ ಮಾದರಿಯ ಚುನಾವಣೆಯಂತೆ ಕಾಣಿಸಿದರೂ, ಸೂಕ್ಷ್ಮವಾಗಿ ನೋಡಿದರೆ ಇಲ್ಲಿ ಈರ್ವರು ನಾಯಕರು ಮುಖಾಮುಖಿಯಾದಂತೆ ಕಾಣಿಸುವುದಿಲ್ಲ. ಬಿಜೆಪಿಗೆ ಓಟುಹಾಕುವ ಬಹುತೇಕ ಮಂದಿ ಮೋದಿಯವರ ನಾಯಕತ್ವಕ್ಕಾಗಿ ಓಟು ಹಾಕಬಹುದು. ಆದರೆ ಕಾಂಗ್ರೆಸ್ಸಿಗೆ ಓಟು ಹಾಕುವ ಮಂದಿ ರಾಹುಲ್ ಗಾಂಧಿಯವರ ನಾಯಕತ್ವ ನೋಡಿ ಓಟು ಹಾಕುತ್ತಾರೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿಲ್ಲ.

ಹೋದ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದು ಅಧಿಕಾರ ಹಿಡಿದದ್ದು ಅವರು ಒಬ್ಬ ಉತ್ತಮ ನಾಯಕ ಎನ್ನುವ ಜನಾಭಿಪ್ರಾಯ ವ್ಯಾಪಕವಾಗಿ ಮೂಡಿದ ಕಾರಣ. ಈ ಬಾರಿ ಅವರು ಗೆದ್ದರೆ ಗೆಲ್ಲುವುದು ಅವರು ಉಳಿದವರಿಗೆ ಹೋಲಿಸಿ ನೋಡಿದರೆ ಪರವಾಗಿಲ್ಲ ಎನ್ನುವ ನಾಯಕ ಎನ್ನುವ ಕಾರಣಕ್ಕೆ.

ಹೋದ ಬಾರಿ ಮೋದಿ ಹಿಂದೂ ಹೃದಯ ಸಾಮ್ರಾಟ ಮತ್ತು ಆರ್ಥಿಕಾಭಿವೃಧ್ಧಿಯ ಮಹೋನ್ನತ ಹರಿಕಾರ ಎಂಬೆರಡು ಬಿಂಬಗಳನ್ನು ಏಕಕಾಲದಲ್ಲಿ ಆವಾಹಿಸಿಕೊಂಡಿದ್ದರು. ಈಗ ಈ ಎರಡೂ ಬಿಂಬಗಳು ಬಹುಮಟ್ಟಿಗೆ ಒಡಕಲಾಗಿವೆ. ಹಿಂದೂ ಹೃದಯ ಸಾಮ್ರಾಟ ಎನ್ನುವುದನ್ನು ಹಿಂದೂ ಸಂಘಟನೆಗಳೇ ಅಲ್ಲಿಲ್ಲಿ ಪ್ರಶ್ನಿಸಿದ್ದುಂಟು. ಇನ್ನೇನು ಬಿಂಬ ಕುಸಿಯುತ್ತದೆ ಎಂದಾದಾಗ ಪುಲ್ವಾಮ ದುರಂತ ನಡೆಯಿತು. ಕಳಚಿ ಬೀಳುವುದರಲ್ಲಿದ್ದ ಹಿಂದೂ ಹೃದಯ ಸಾಮ್ರಾಟ ಬಿಂಬಕ್ಕೆ ಮೋದಿ ದೇಶರಕ್ಷಕ ಎನ್ನುವ ಹೊಸ ಬಿಂಬದ ಆಶ್ರಯ ಸಿಕ್ಕಿತು. ಹೀಗಾಗಿ ಹೋದ ಚುನಾವಣೆಯಲ್ಲಿ ಹಿಂದೂ ರಕ್ಷಕನಾಗಿದ್ದ ಮೋದಿ ಈ ಬಾರಿ ದೇಶ ರಕ್ಷಕನಂತೆ ರಾಜಕೀಯವಾಗಿ ಮರುಅವತಾರ ತಾಳಿದ್ದಾಯಿತು. ದೇಶ ರಕ್ಷಕನಾದ ನಾಯಕ ಎಂದರೆ ಪರ್ಯಾಯವಾಗಿ ಹಿಂದೂ ರಕ್ಷಕನೂ ಹೌದು ಎನ್ನುವ ಸಂದೇಶವೇ ಈಗ ಬಿಜೆಪಿಯ ಪ್ರಚಾರದ ಮೂಲದಲ್ಲಿ ಇರುವುದು.

ಮೋದಿ ಅಭಿವೃದ್ಧಿಯ ಮಾಹಾನ್ ಹರಿಕಾರ ಎಂಬ ಬಿಂಬವೂ ಕುಸಿದಿದೆ. ಆದರೆ ಮೋದಿ ದೇಶ ರಕ್ಷಕ, ಮೋದಿ ಇಲ್ಲದೆ ಹೋದರೆ ದೇಶವೇ ಇರುವುದಿಲ್ಲ, ದೇಶ ಇದ್ದರೆ ತಾನೇ ಅಭಿವೃದ್ಧಿ ಎನ್ನುವ ರೀತಿಯಲ್ಲಿ ಬಿಜೆಪಿ ತನ್ನ ಪ್ರಚಾರದ ವ್ಯೂಹವನ್ನು ಬೆಸೆಯುತ್ತಿದೆ. ಹೀಗಂತ ಒಮ್ಮೆ ಜನರನ್ನು ನಂಬಿಸಿಬಿಟ್ಟರೆ ಹೆಚ್ಚು ಕಡಿಮೆ ಹೋದ ಚುನಾವಣೆಯಲ್ಲಿ ಇದ್ದ ಮೋದಿ ವರ್ಚಸ್ಸನ್ನು ಯಥಾವತ್ತಾಗಿ ಈ ಸಲವೂ ಉಳಿಸಿಕೊಳ್ಳಬಹುದು ಎಂದು ಬಿಜೆಪಿಯ ಲೆಕ್ಕಾಚಾರ. ಹಾಗಾಗಿ ಅದು ಈಗಲೂ ತನ್ನ ಸಾಧನೆಯನ್ನು ಹೇಳಿಕೊಳ್ಳುವುದರ ಬದಲು ಕಾಂಗ್ರೆಸ್ ನ ವೈಫಲ್ಯಗಳನ್ನು ಹೇಳಿಕೊಳ್ಳುವುದರಲ್ಲೇ ತನ್ನ ಚುನಾವಣಾ ತಂತ್ರವನ್ನು ಹೆಣೆಯುತ್ತಿದೆ. ಹಾಗೆ ಕಾಂಗ್ರೆಸ್ಸಿನ ವೈಫಲ್ಯಗಳನ್ನು ಪಟ್ಟಿಮಾಡುವಾಗ ಸತ್ಯಗಳನ್ನೂ ಮತ್ತು ಅಪ್ಪಟ ಸುಳ್ಳುಗಳನ್ನು ನಾನಾ ಪ್ರಮಾಣದಲ್ಲಿ ಬೆರೆಸುತ್ತದೆ. ಯುದ್ಧದಲ್ಲಿ ಮತ್ತು ಪ್ರೇಮದಲ್ಲಿ ಮಾಡಿದ್ದೆಲ್ಲವೂ ಸರಿ ಎನ್ನುವುದನ್ನು ಉಳಿದೆಲ್ಲಾ ಪಕ್ಷಗಳಿಗಿಂತ ಹೆಚ್ಚು ಬಿಜೆಪಿ ನಂಬಿದ ಹಾಗಿದೆ.

ಮೋದಿ ಮತ್ತೊಮ್ಮೆ ಪ್ರಧಾನಿ ಯಾಕಾಬಾರದು ಎಂದು ಜನರಿಗೆ ಮನದಟ್ಟು ಮಾಡಿಕೊಡುವ ವಾದವೊಂದು ವಿರೋಧ ಪಕ್ಷಗಳ ಬಳಿ ಇಲ್ಲ. ಮೋದಿ ಆಡಳಿತದ ಸಮಗ್ರ ಗುಣಾವಗುಣಗಳನ್ನು ಪರಾಮರ್ಶಿಸಿ ಜನರ ಮನಮುಟ್ಟುವಂತಹ ಮೋದಿ ವಿರೋಧಿ ಸಂಕತನವೊಂದನ್ನು ಹೆಣೆಯುವುದು ಕಷ್ಟವಾದರೂ ಅಸಾಧ್ಯವಲ್ಲ. ಆದರೆ ಹೀಗೆ ಮಾಡಲು ವಿರೋಧ ಪಕ್ಷಗಳಿಗೆ ಎರಡು ರೀತಿಯ ಮಿತಿಗಳಿವೆ.

ಮೊದಲನೆಯದ್ದು ನಾಯಕತ್ವದ ಮಿತಿ. ಎರಡನೆಯದ್ದು ನೈತಿಕತೆಯ ಮಿತಿ. ಮೋದಿಯವರ ಸಾರ್ವಜನಿಕ ವರ್ಚಸ್ಸನ್ನು ಘಾಸಿಗೊಳಿಸುವಂತಹ ನುಡಿಗಟ್ಟೊಂದನ್ನು ರೂಪಿಸಲು ಬಹಳ ಆಳವಾಗಿ ಮತ್ತು ಸೃಜನಶೀಲವಾಗಿ ಯೋಚಿಸಬಲ್ಲ ನಾಯಕರ ಅಗತ್ಯವಿದೆ. ಅಂತಹ ನಾಯಕತ್ವ ಇಂದು ವಿರೋಧ ಪಕ್ಷಗಳಲ್ಲಿ ಇಲ್ಲ. ಒಂದು ವೇಳೆ ಅಂತಹದೊಂದು ನುಡಿಗಟ್ಟನ್ನು ಯಾರಾದರೂ ರೂಪಿಸಿದರೆ ಅದು ಜನಮನವನ್ನು ಸೆಳೆಯುವಂತಾಗಲು ವಿರೋಧ ಪಕ್ಷಗಳಿಗೆ ಒಂದು ನೈತಿಕ ಹೆಚ್ಚುಗಾರಿಕೆ ಇರಬೇಕಾಗುತ್ತದೆ. ಅಂತಹ ನೈತಿಕ ಹೆಚ್ಚುಗಾರಿಕೆ ವಿರೋಧ ಪಕ್ಷಗಳಲ್ಲಿ ಇಲ್ಲ. ರಾಜೀವ್ ಗಾಂಧಿಯವರ ವಿರುದ್ಧ ಸೆಟೆದು ನಿಂತ ವಿ.ಪಿ.ಸಿಂಗ್ ಗೆ ಅಂತಹದ್ದೊಂದು ಸಂಕತನ ನಿರ್ಮಿಸಲು ಸಾಧ್ಯವಾಗಿತ್ತು. ಬೊಫೋರ್ಸ್ ಹಗರಣವನ್ನವರು ಈ ಉದ್ದೇಶಕ್ಕೆ ಬಳಸಿಕೊಂಡಿದ್ದರು. ಮೋದಿಯವರ ವಿರುದ್ಧ ಕೇಳಿಬಂದ ರಫೆಲ್ ಹಗರಣ ಬೊಫೋರ್ಸ್ ನಷ್ಟು ಪ್ರಬಲವಾಗಿ ರೂಪುಗೊಳ್ಳಲಿಲ್ಲ.

ಯಾವ ದೃಷ್ಟಿಯಿಂದ ನೋಡಿದರೂ ಈ ಚುನಾವಣೆ ನರೇಂದ್ರ ಮೋದಿಯವರ ನಾಯಕತ್ವದ ಮರುಪರೀಕ್ಷೆ. ನಾಯಕರಾದವರು ತಮ್ಮ ಜನಪ್ರಿಯತೆ ಉಳಿಸಿಕೊಳ್ಳಬೇಕಾದರೆ ಅವರ ಸುತ್ತ ಒಂದು ನಿಗೂಢತೆ ಆವರಿಸಿಕೊಂಡಿರಬೇಕು. ಈ ನಿಗೂಢತೆಯನ್ನು ಮೋದಿ ಚೆನ್ನಾಗಿಯೇ ನಿರ್ಮಿಸಿಕೊಂಡಿದ್ದಾರೆ.

ನೈತಿಕವಾಗಿ ಮೋದಿ ಯಾವತ್ತಿದ್ದರೂ ಎಲ್ಲಾ ವಿರೋಧ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆ ಎನ್ನುವಂತೆ ಅವರ ಸುತ್ತ ಒಂದು ಪ್ರಭಾವಲಯವನ್ನು ಹೆಣೆಯುವಲ್ಲಿ ಅವರ ರಾಜಕೀಯ ಸಂವಹನಕಾರರು ಸಫಲರಾಗಿದ್ದಾರೆ. ವಿರೋಧ ಪಕ್ಷಗಳ ಪ್ರತಿಯೊಬ್ಬ ನಾಯಕನಿಗೂ ಒಂದಲ್ಲ ಒಂದು ರೀತಿಯಲ್ಲಿ ಭ್ರಷ್ಟಾಚಾರದ ಕಳಂಕ ತಟ್ಟಿರುವುದರಿಂದ ಅವರು ಮೋದಿಯವರ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರದ ಆಪಾದನೆ ಒಂದು ಚುನಾವಣಾ ವಿಚಾರವಾಗಿ ಮುನ್ನೆಲೆಗೆ ಬರುತ್ತಿಲ್ಲ..

ಮೋದಿಗೆ ಈ ಚುನಾವಣೆಯಲ್ಲಿ ನಿಜವಾದ ಶತ್ರು ಅಂತ ಒಂದು ಇದ್ದರೆ ಆ ಶತ್ರು ವಿರೋಧ ಪಕ್ಷಗಳ ನಡುವೆ ಇಲ್ಲ. ಆ ಶತ್ರು ಇರುವುದು 2014ರ ಚುನಾವಣೆಯ ಫಲಿತಾಂಶದಲ್ಲಿ. ಆ ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಎಷ್ಟು ಉತ್ತುಂಗಕ್ಕೆ ಹೋಗಲು ಸಾಧ್ಯವಿತ್ತೋ ಅಷ್ಟು ಉತ್ತುಂಗಕ್ಕೆ ಏರಿತ್ತು. ಆ ಹಂತದಿಂದ ಇನ್ನು ಮೇಲೇರಲು ಸಾಧ್ಯವೇ ಇಲ್ಲ ಎನ್ನುವ ಒಂದೇ ಒಂದು ಅಂಶ ಮಾತ್ರ ವಿರೋಧ ಪಕ್ಷಗಳ ಸಮಾಧಾನಕ್ಕೆ ಇರುವುದು. ಹೋದ ಬಾರಿ ಮೋದಿ ತನ್ನ ಕೀರ್ತಿಯ ಉತ್ತುಂಗದಲ್ಲಿದ್ದರು. ಆಗ ಸಿಕ್ಕಿದ್ದು 282 ಸೀಟುಗಳು. ಈಗ ಏನಿಲ್ಲ ಎಂದರೂ ಅವರ ವರ್ಚಸ್ಸು ಸ್ವಲ್ಪ ಮಟ್ಟಿಗೆ ಕುಸಿದಿದೆ. ದೇಶದ ಆರ್ಥಿಕ ತಲ್ಲಣಗಳು, ಅದರಲ್ಲೂ ಕೃಷಿ ಕ್ಷೇತ್ರದ ಸಂಕಷ್ಟದಿಂದಾಗಿ ಮೋದಿ ವರ್ಚಸ್ಸು ಕಳೆದುಕೊಂಡಿರುವ ಪ್ರಮಾಣ ವಿರೋಧ ಪಕ್ಷಗಳಿಗೆ ಗೆದ್ದು ಸರಕಾರ ಮಾಡುವಷ್ಟು ಇರದೇ ಹೋಗಬಹುದು. ಆದರೆ ಅದು ಬಿಜೆಪಿಯ ಒಟ್ಟು ಸ್ಥಾನಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗುವಂತೆ ಮಾಡಲಿದೆ ಎಂದು ಸಹಜವಾಗಿಯೇ ಊಹಿಸಬಹುದು. ಇದರ ಜತೆಗೆ ಸ್ಥಳೀಯ ಅಸಮಾಧಾನಗಳು ಹಲವಾರು ಹಾಲಿ ಎಂಪಿಗಳು ಸೋಲುವಂತೆ ನೋಡಿಕೊಳ್ಳುತ್ತವೆ.

ಈ ರೀತಿಯ ಸೋಲಿನಿಂದ ಆಗಬಹುದಾದ ಸಂಖ್ಯಾ ಕುಸಿತವನ್ನು ಬಿಜೆಪಿ ಇನ್ನೊಂದು ಕಡೆಯಿಂದ ಪಡೆದುಕೊಳ್ಳಬಹುದು. ಎಷ್ಟರ ಮಟ್ಟಿಗೆ ಈ ಸರಿದೂಗಿಸುವಿಕೆ ಸಾಧ್ಯ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾಗದು. ಯಾಕೆಂದರೆ ಬಿಜೆಪಿಗೆ ಹೋದಬಾರಿಗಿಂತ ಹೆಚ್ಚಿನ ಸ್ಥಾನಗಳು ಬರಲು ದಕ್ಷಿಣ ರಾಜ್ಯಗಳಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾತ್ರ ಸಾಧ್ಯ. ಉತ್ತರದ ಪ್ರಮುಖ ರಾಜ್ಯಗಳಲ್ಲಿ ಈಗಾಗಲೇ ಪಡೆದುಕೊಳ್ಳುವಷ್ಟು ಹೋದ ಚುನಾವಣೆಯಲ್ಲಿ ಪಡೆದುಕೊಂಡಿರುವ ಕಾರಣಕ್ಕೆ ಅಲ್ಲಿ ಸಂಖ್ಯೆ ಕುಸಿದೆ ಕುಸಿಯಬೇಕು. ಆದುದರಿಂದ ಈ ಚುನಾವಣೆಯಲ್ಲಿ ಇರುವ ಬಹುದೊಡ್ಡ ಕುತೂಹಲ ಸೋಲುಗೆಲುವುಗಳದ್ದಲ್ಲ; ಬಿಜೆಪಿಯ ಸ್ಥಾನಗಳು ಎಷ್ಟರ ಮಟ್ಟಿಗೆ ಕಡಿಮೆಯಾಗಲಿವೆ ಎನ್ನುವುದು. ಅಥವಾ ಬಿಜೆಪಿ ನೇತೃತ್ವದ ಎನ್.ಡಿ.ಎ. ಸ್ಥಾನಗಳು ಎಷ್ಟು ಕುಸಿಯಲಿದೆ ಎನ್ನುವುದು.

ಮೋದಿ ಸರಕಾರ ಒಂದಾದದನಂತರ ಒಂದರಂತೆ ಪ್ರಜಾತಂತ್ರದ ಸಾಂಸ್ಥಿಕ ಸ್ತಂಭಗಳ ಮೇಲೆ ಪ್ರಹಾರ ಮಾಡುತ್ತಿದ್ದರೆ ಮಾಧ್ಯಮಗಳು ಈ ಬೆಳವಣಿಗೆಗಳನ್ನು ನಾಟಕ ನೋಡುವ ದೃಷ್ಟಿಯಲ್ಲಿ ನೋಡಿದವು.

ಯಾವ ದೃಷ್ಟಿಯಿಂದ ನೋಡಿದರೂ ಈ ಚುನಾವಣೆ ನರೇಂದ್ರ ಮೋದಿಯವರ ನಾಯಕತ್ವದ ಮರುಪರೀಕ್ಷೆ. ನಾಯಕರಾದವರು ತಮ್ಮ ಜನಪ್ರಿಯತೆ ಉಳಿಸಿಕೊಳ್ಳಬೇಕಾದರೆ ಅವರ ಸುತ್ತ ಒಂದು ನಿಗೂಢತೆ ಆವರಿಸಿಕೊಂಡಿರಬೇಕು. ಈ ನಿಗೂಢತೆಯನ್ನು ಮೋದಿ ಚೆನ್ನಾಗಿಯೇ ನಿರ್ಮಿಸಿಕೊಂಡಿದ್ದಾರೆ. ಮೋದಿ ಏನು, ಮೋದಿ ಎಷ್ಟು, ಮೋದಿ ಯಾಕಾಗಿ ಎನ್ನುವ ಪ್ರಶ್ನೆಗಳಿಗೆ ಉತ್ತರಗಳು ಯಾರಿಗೂ ಸರಿಯಾಗಿ ಸಿಗದಂತೆ ನೋಡಿಕೊಂಡಿದ್ದಾರೆ. ಈತನಕ ಅವರು ಒಂದೇ ಒಂದು ಪತ್ರಿಕಾ ಗೋಷ್ಠಿ ನಡೆಸಿಲ್ಲ ಎನ್ನುವಲ್ಲಿ ಇರುವುದು ಕೇವಲ ಪ್ರಶ್ನೆಗಳಿಂದ ಓಡಿಹೋಗುವ ಜಾಯಮಾನ ಮಾತ್ರವಲ್ಲ; ಮಾಧ್ಯಮಗಳಿಂದ ಒಂದು ಅಂತರ ಕಾಯ್ದುಕೊಳ್ಳುವುದು, ಜತೆಗೆ ಮಾಧ್ಯಮಗಳನ್ನು ಪಳಗಿಸಿ ಬಳಸಿಕೊಳ್ಳುವುದು ಇಡೀ ಮೋದಿ ರಾಜಕೀಯದ ಮೂಲದಲ್ಲಿ ಇರುವ ರಾಜಕೀಯ ಸಂವಹನಾ ತಂತ್ರ. ಇದನ್ನು ಅರ್ಥ ಮಾಡಿಕೊಂಡು ಈ ವ್ಯೂಹವನ್ನು ಭೇದಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿತ್ತು. ಕಡೇ ಪಕ್ಷ ತಮ್ಮ ಪ್ರತಿಭಟನೆಯನ್ನಾದರೂ ದಾಖಲಿಸಬೇಕಿತ್ತು.

ತುರ್ತುಪರಿಸ್ಥಿತಿಯ ಕಾಲದಲ್ಲಿ ಇಂದಿರಾ ಗಾಂಧಿ ಸರಕಾರ ಮಾಧ್ಯಮಗಳ ಬಾಯಿಮುಚ್ಚಿಸಿದಾಗ ಇಂಡಿಯನ್ ಎಕ್ಸ್ ಪ್ರೆಸ್ ನಂತಹ ಒಂದು ಪತ್ರಿಕೆ ತನ್ನ ಮೌನ ಪ್ರತಿಭಟನೆಯನ್ನು ಸಂಪಾದಕೀಯಕ್ಕಾಗಿ ಮೀಸಲಿಟ್ಟ ಸ್ಥಳವನ್ನು ಖಾಲಿ ಬಿಡುವ ಮೂಲಕ ದಾಖಲಿಸಿತ್ತು. ಮೋದಿಯ ಕಾಲಕ್ಕೆ ಮುಖ್ಯವಾಹಿನಿ ಮಾಧ್ಯಮಗಳ ಮಧ್ಯೆ ಕೂಡಾ ಅಂತಹದ್ದೊಂದು ಕ್ರಿಯಾತ್ಮಕ, ಸೃಜನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಚಿಂತನೆ ಸತ್ತೇ ಹೋಗಿದೆ ಅನ್ನಿಸುತ್ತದೆ. ಮೋದಿ ಸರಕಾರ ಒಂದಾದದನಂತರ ಒಂದರಂತೆ ಪ್ರಜಾತಂತ್ರದ ಸಾಂಸ್ಥಿಕ ಸ್ತಂಭಗಳ ಮೇಲೆ ಪ್ರಹಾರ ಮಾಡುತ್ತಿದ್ದರೆ ಮಾಧ್ಯಮಗಳು ಈ ಬೆಳವಣಿಗೆಗಳನ್ನು ನಾಟಕ ನೋಡುವ ದೃಷ್ಟಿಯಲ್ಲಿ ನೋಡಿದವು. ತುರ್ತುಪರಿಸ್ಥಿಯ ಕಾಲಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಹೆಚ್.ಆರ್.ಖನ್ನಾ ಅವರಂತಹ ಆತ್ಮಸಾಕ್ಷಿ ಪ್ರಕಾರ ನಡೆದುಕೊಳ್ಳುವ ನ್ಯಾಯಮೂರ್ತಿಗಳಿದ್ದರು. ಮೋದಿಯ ಕಾಲಕ್ಕೆ ಅಂತಹ ಸುಪ್ರೀಂ ಕೋರ್ಟ್ ಕೂಡಾ ತಣ್ಣಗೆ ತತ್ತರಿಸಿದಂತೆ ಕಾಣುತ್ತದೆ. ಮೋದಿಯ ರಾಜಕೀಯದಿಂದಾಗಿ ಸಂಸ್ಥೆಗಳು ಸೊರಗಿದವೇ ಅಥವಾ ಸಾಂಸ್ಥಿಕವಾಗಿ ಭಾರತ ಜರ್ಜರಿತವಾಗಿದ್ದ ಕಾಲದ ಶಿಶುವಾಗಿ ಮೋದಿಯ ನಾಯಕತ್ವ ತಲೆ ಎತ್ತಿತೇ ಎನ್ನುವುವುದು ಸಂಶೋಧಿಸಿ ತಿಳಿದುಕೊಳ್ಳಬೇಕಿರುವ ವಿಷಯ. ಅದೇನೇ ಇದ್ದರೂ ಒಬ್ಬ ನಾಯಕನ ಸುತ್ತ ನಿಗೂಢತೆಯೊಂದು ಮನೆಮಾಡಿರುವಷ್ಟು ಕಾಲ ಆತನಿಗೆ ಪ್ರಶ್ನಾತೀತವಾಗಿರಲು ಅದು ನೆರವಾಗುತ್ತದೆ. ತಮಿಳು ನಾಡಿನಲ್ಲಿ ಜಯಲಲಿತಾ ಇಂತಹ ನಿಗೂಢ ನಾಯಕತ್ವದ ಮಾದರಿಯೊಂದನ್ನು ಕೊನೆಯತನಕ ಉಳಿಸಿಕೊಂಡದ್ದೇ ಅವರ ರಾಜಕೀಯ ಯಶಸ್ಸಿನ ಸೂತ್ರವಾಗಿತ್ತು.

ಮೋದಿ ದೇಶಕ್ಕೆ ಅನಿವಾರ್ಯ ಎಂಬ ಜನಾಭಿಪ್ರಾಯ ಮೂಡಲು ಏನೆಲ್ಲಾ ಮಾಡಬೇಕೋ ಅದನ್ನು ಮೋದಿಯವರ ಭಾರತೀಯ ಜನತಾ ಪಕ್ಷ ಮಾಡುತ್ತಿದೆ. ಆದರೆ ಮೋದಿಯಾಗಲೀ ಇನ್ಯಾರೋ ನಾಯಕರಾಗಲೀ ದೇಶಕ್ಕೆ ಅನಿವಾರ್ಯವೇ? ಅನಿವಾರ್ಯ ಅಂತ ಅಂದುಕೊಂಡವರು ಬಹಳ ಮಂದಿ ಇರಬಹುದು. ವಿರೋಧ ಪಕ್ಷದಲ್ಲಿ ಮೋದಿಗೆ ಸರಿಸಮಾನವಾಗಿ ನಿಲ್ಲಬಲ್ಲ ನಾಯಕನೊಬ್ಬ ಕಾಣಿಸುವುದಿಲ್ಲ ಎನ್ನುವುದು ಇದಕ್ಕೆ ಕಾರಣವಿರಬಹುದು. ಆದರೆ ಭಾರತದಲ್ಲಿ ರಾಜಕೀಯ ನಾಯಕತ್ವ ಹುಟ್ಟುವ ಮತ್ತು ಬೆಳೆಯುವ ಪರಿಯನ್ನೊಮ್ಮೆ ನೋಡಬೇಕು.

ನೆಹರೂ ನಂತರ ಯಾರು ಎನ್ನುವ ಪ್ರಶ್ನೆ ಆ ಕಾಲಕ್ಕೆ ದೊಡ್ಡ ಪ್ರಶ್ನೆಯಾಗಿತ್ತು. ಆದರೆ ದೇಶದ ರಾಜಕೀಯ ವ್ಯವಸ್ಥೆಯ ಬಹುದೊಡ್ಡ ಶಕ್ತಿ ಏನು ಎಂದರೆ ಅದು ಆಯಾ ಕಾಲಕ್ಕೆ ಬೇಕಾದ ನಾಯಕತ್ವವನ್ನು ಹೇಗೋ ಪೂರೈಸಿದೆ.

ಇಲ್ಲಿ ನಾಯಕರಾಗಿ ಬೆಳೆದುನಿಂತ ನಂತರ ಅಧಿಕಾರ ವಹಿಸಿಕೊಂಡವರ ಉದಾಹರಣೆಗಳು ಕಡಿಮೆ. ಸ್ವಾತಂತ್ರ್ಯಾನಂತರದ ಮೊದಲ ತಲೆಮಾರಿನ ನಾಯಕರನ್ನು ಹೊರತು ಪಡಿಸಿದರೆ ಭಾರತ ಕಂಡ ಬಹುತೇಕ ನಾಯಕರು ನಾಯಕರಾದದ್ದು ಅವರು ಅಧಿಕಾರ ಸ್ಥಾನವೊಂದನ್ನು ಅಲಂಕರಿಸಿದ ಮೇಲೆ. ಇಂದಿರಾ ಗಾಂಧಿಯಿಂದ ಹಿಡಿದು ಮೋದಿಯವರೆಗೆ ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಆಗಿಹೋದ ಬಹುತೇಕ ನಾಯಕರಿಗೆ ಈ ಮಾತು ಅನ್ವಯಿಸುತ್ತದೆ. ಒಬ್ಬ ನಾಯಕನಿರುತ್ತಾ ಆತನ ನಂತರ ಯಾರು ಎನ್ನುವ ಪ್ರಶ್ನೆ ಈ ದೇಶವನ್ನು ಎಲ್ಲಾ ಕಾಲದಲ್ಲೂ ಕಾಡಿತ್ತು.

ನೆಹರೂ ನಂತರ ಯಾರು ಎನ್ನುವ ಪ್ರಶ್ನೆ ಆ ಕಾಲಕ್ಕೆ ದೊಡ್ಡ ಪ್ರಶ್ನೆಯಾಗಿತ್ತು. ಆದರೆ ದೇಶದ ರಾಜಕೀಯ ವ್ಯವಸ್ಥೆಯ ಬಹುದೊಡ್ಡ ಶಕ್ತಿ ಏನು ಎಂದರೆ ಅದು ಆಯಾ ಕಾಲಕ್ಕೆ ಬೇಕಾದ ನಾಯಕತ್ವವನ್ನು ಹೇಗೋ ಪೂರೈಸಿದೆ. ಇಂದಿರಾ ಗಾಂಧಿ ಪ್ರಧಾನಿಯಾದದ್ದು ನೆಹರೂ ಮಗಳು ಎನ್ನುವ ಕಾರಣಕ್ಕೆ. ಅವರು ಈಗ ಜನಮಾನಸದಲ್ಲಿ ಉಳಿದದ್ದು ದೊಡ್ಡ ನಾಯಕಿಯಾಗಿ. ಎಂ.ಜಿ.ರಾಮಚಂದ್ರನ್, ಎನ್.ಟಿ.ರಾಮರಾವ್ ಮುಂತಾದವರು ಚುನಾವಣೆ ಗೆದ್ದದ್ದು ಸಿನಿಮಾ ನಟರು ಎನ್ನುವ ಕಾರಣಕ್ಕೆ. ಆದರೂ ಆನಂತರ ಅವರು ನಾಯಕರಾಗಿ ಬೆಳೆದ ಪರಿ ಅಮೋಘವಾದದ್ದು. ರಾಜೀವ್ ಗಾಂಧಿ ಪ್ರಧಾನಮಂತ್ರಿ ಆದದ್ದು ಇಂದಿರಾ ಗಾಂಧಿಯ ಮಗ ಎನ್ನುವ ಕಾರಣಕ್ಕೆ. ಆದರೆ ಪ್ರಧಾನಿಯಾದ ನಂತರ ಅವರು ಅವರದ್ದೇ ಆದ ಒಂದು ನಾಯಕತ್ವದ ಮಾದರಿಯನ್ನು ಉಳಿಸಿ ಹೋಗಿದ್ದಾರೆ.

ಭಾರತದ ರಾಜಕೀಯ ನಾಯಕತ್ವದ ಚರಿತ್ರೆಯ ಇನ್ನೊಂದು ಆಯಾಮ ಏನು ಅಂದರೆ ಒಬ್ಬ ಪ್ರಬಲ ನಾಯಕನಿರುವಷ್ಟು ಕಾಲ ಇನ್ನೊಬ್ಬ ಪ್ರಬಲ ನಾಯಕ ಎದ್ದು ಬರುವುದಿಲ್ಲ. ಇಂದಿರಾ ಗಾಂಧಿಯವರ ಕಾಲಕ್ಕೆ ಒಂದಷ್ಟು ಕಾಲ ಜಯಪ್ರಕಾಶ್ ನಾರಾಯಣ ಪ್ರತಿ ನಾಯಕರಂತೆ ಕಾಣಿಸಿದರು. ರಾಜೀವ್ ಗಾಂಧಿಯವರ ಕಾಲದಲ್ಲಿ ವಿ.ಪಿ.ಸಿಂಗ್ ಒಂದಷ್ಟು ಕಾಲ ಪರ್ಯಾಯ ನಾಯಕರಂತೆ ಕಾಣಿಸಿದರು. ಇವೆರಡು ಸಂದರ್ಭಗಳನ್ನು ಹೊರತುಪಡಿಸಿದರೆ ಈರ್ವರು ಘಟಾನುಘಟಿ ನಾಯಕರು ಚುನಾವಣೆಯಲ್ಲಿ ಎದುರುಬದುರಾದದ್ದಿಲ್ಲ. ಈ ಚುನಾವಣೆಯ ಸಂದರ್ಭದಲ್ಲೂ ಇದೇ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಮೇಲ್ನೋಟಕ್ಕೆ ಇದು ಅಧ್ಯಕ್ಷೀಯ ಮಾದರಿಯ ಚುನಾವಣೆಯಂತೆ ಕಾಣಿಸಿದರೂ, ಸೂಕ್ಷ್ಮವಾಗಿ ನೋಡಿದರೆ ಇಲ್ಲಿ ಈರ್ವರು ನಾಯಕರು ಮುಖಾಮುಖಿಯಾದಂತೆ ಕಾಣಿಸುವುದಿಲ್ಲ. ಬಿಜೆಪಿಗೆ ಓಟುಹಾಕುವ ಬಹುತೇಕ ಮಂದಿ ಮೋದಿಯವರ ನಾಯಕತ್ವಕ್ಕಾಗಿ ಓಟು ಹಾಕಬಹುದು. ಆದರೆ ಕಾಂಗ್ರೆಸ್ಸಿಗೆ ಓಟು ಹಾಕುವ ಮಂದಿ ರಾಹುಲ್ ಗಾಂಧಿಯವರ ನಾಯಕತ್ವ ನೋಡಿ ಓಟು ಹಾಕುತ್ತಾರೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಕಾಂಗ್ರೆಸ್ಸಿಗೆ ಓಟು ಹಾಕುವವರು, ಅಥವಾ ಇನ್ಯಾವುದೋ ಪಕ್ಷಕ್ಕೆ ಓಟು ಹಾಕುವವರು, ಹಾಗೆ ಮಾಡುವುದು ಯಾಕೆಂದರೆ ಅವರು ಮೋದಿಯ ನಾಯಕತ್ವವನ್ನು ಸುತಾರಾಂ ಒಪ್ಪಲು ಸಾಧ್ಯವಿಲ್ಲ ಎನ್ನುವ ನಿಲುವು ತಳೆದಿರುವುದಕ್ಕೆ, ಅಥವಾ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿರುವ ವ್ಯಕ್ತಿ ಅವರಿಗೆ ಇಷ್ಟವಾಗದಕ್ಕೆ, ಅಥವಾ ಜಾತಿಯ ಲೆಕ್ಕಾಚಾರದಮೇಲೆ.

ಆಡಳಿತರೂಢ ಪಕ್ಷಗಳ ಅಧಿಕಾರದ ಆಟಾಟೋಪಗಳ ಮೇಲೆ ನಿಗಾ ಇಡಬೇಕಾದ ಎಲ್ಲಾ ಸಾಂಸ್ಥಿಕ ಪರಿಕರಗಳೂ ಕಂಗೆಟ್ಟು ನಿಂತಿರುವ ಸ್ಥಿತಿಯಲ್ಲಿ ಪ್ರಾಯಃ ಅಸ್ಥಿರತೆಯೊಂದೇ ಅಧಿಕಾರವನ್ನು ನಿಯಂತ್ರಣದಲ್ಲಿಡಬಹುದು ಅನ್ನಿಸುತ್ತದೆ.

ಆದುದರಿಂದ ಭಾರತದ ಸಂಸದೀಯ ಚುನಾವಣಾ ವ್ಯವಸ್ಥೆ ಮೋದಿಯ ಕಾಲಕ್ಕೆ ಅನಧಿಕೃತ ಅಧ್ಯಕ್ಷೀಯ ಮಾದರಿಯ ಚುನಾವಣೆಯಾಗಿ ಬದಲಾಗುತ್ತಿದೆ ಎನ್ನುವುದು ಬೀಸು ಹೇಳಿಕೆಯಾಗುತ್ತದೆ. ಭಾರತದ ಚುನಾವಣೆಗಳದ್ದು ಏನಿದ್ದರೂ ಭಾರತದ್ದೇ ಆದ ವಿಶಿಷ್ಟ ಮಾದರಿ.

ಮೋದಿ ಇಲ್ಲದೆ ಹೋದರೆ ಸ್ಥಿರ ಸರಕಾರ ಇರುವುದಿಲ್ಲ ಎನ್ನುವ ಕಾರಣಕ್ಕೆ ಮೋದಿ ಅನಿವಾರ್ಯ ಎಂಬ ಇನ್ನೊಂದು ಅಭಿಪ್ರಾಯ ಈ ಚುನಾವಣೆಯ ಸಂಧರ್ಭದಲ್ಲಿ ಚಲಾವಣೆಯಲ್ಲಿದೆ. ಮೋದಿ ಇಲ್ಲದೆ ಹೋದರೆ ಸ್ಥಿರ ಸರಕಾರ ಸಾಧ್ಯವೇ ಎಂಬ ಪ್ರಶ್ನೆಗಿಂತ ಈ ದೇಶಕ್ಕೆ ಸಂಖ್ಯಾಬಲವುಳ್ಳ ಸ್ಥಿರಸರಕಾರ ನಿಜಕ್ಕೂ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಹೆಚ್ಚು ಮುಖ್ಯವಾಗುತ್ತದೆ. ಸ್ಥಿರ ಸರಕಾರವಿಲ್ಲದ ಕಾಲದಲ್ಲಿ ದೇಶವೇನೂ ಕಂಗೆಟ್ಟಿರಲಿಲ್ಲ. ಐದು ವರ್ಷಗಳಲ್ಲಿ ಮೋದಿಯವರ ಸ್ಥಿರ ಸರಕಾರ ದೇಶದ ಸಾಂಸ್ಥಿಕ ಸ್ವರೂಪದ ಮೇಲೆ ಮಾಡಿದ ಪ್ರಹಾರ ನೋಡಿದರೆ ಸ್ಥಿರ ಸರಕಾರ ಯಾಕಾದರೂ ಬೇಕು ಎನ್ನುವ ಪ್ರಶ್ನೆ ಮೂಡುತ್ತವೆ. ಆಡಳಿತರೂಢ ಪಕ್ಷಗಳ ಅಧಿಕಾರದ ಆಟಾಟೋಪಗಳ ಮೇಲೆ ನಿಗಾ ಇಡಬೇಕಾದ ಎಲ್ಲಾ ಸಾಂಸ್ಥಿಕ ಪರಿಕರಗಳೂ ಕಂಗೆಟ್ಟು ನಿಂತಿರುವ ಸ್ಥಿತಿಯಲ್ಲಿ ಪ್ರಾಯಃ ಅಸ್ಥಿರತೆಯೊಂದೇ ಅಧಿಕಾರವನ್ನು ನಿಯಂತ್ರಣದಲ್ಲಿಡಬಹುದು ಅನ್ನಿಸುತ್ತದೆ. ಸರಕಾರವೊಂದು ಒಂದಿಷ್ಟು ಮಾನವೀಯವಾಗಿ ಇರಬಹುದಾದರೆ, ಸ್ವಲ್ಪ ಅಸ್ಥಿರತೆ, ಸ್ವಲ್ಪ ಅಧ್ಯಕ್ಷತೆ, ಸ್ವಲ ಆರ್ಥಿಕ ಹಿಂದುಳಿದಿರುವಿಕೆ ಇತ್ಯಾದಿಗಳೆಲ್ಲಾ ಕೆಟ್ಟದಲ್ಲ ಎಂದು ಹೇಳುವ ಧೈರ್ಯ ಇರುವ ಗಟ್ಟಿ ನಾಯಕನೊಬ್ಬನ ಅಗತ್ಯವನ್ನು ಈ 2019ರ ಲೋಕಸಭಾ ಚುನಾವಣಾ ಕಣ ಒತ್ತಿ ಹೇಳುತ್ತಿದೆ.

*ಲೇಖಕರು ಮಂಗಳೂರು ವಿವಿಯಲ್ಲಿ ಎಂ.ಎ., ಇಂಗ್ಲೆಂಡಿನ ಸುಸೆಕ್ಸ್ ವಿವಿಯಿಂದ ಅಭಿವೃದ್ಧಿ ಅಧ್ಯಯನ ವಿಷಯದಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಪ್ರಸ್ತುತ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು, ಅಂಕಣಕಾರರು.

Leave a Reply

Your email address will not be published.