ಅನಿಶ್ಚಿತ ಆರ್ಥಿಕ ನೀತಿ ಅಭಿವೃದ್ಧಿಗೆ ಕಾಡುವ ಭೀತಿ!

ರೈತರ ವರಮಾನವನ್ನು 2022ರಲ್ಲಿ ದುಪ್ಪಟ್ಟು ಮಾಡುತ್ತೇವೆ, ಭಾರತದ ಜಿಡಿಪಿಯನ್ನು 2024ರಲ್ಲಿ ಐದು ಟ್ರಿಲಿಯನ ಡಾಲರ್ ಮಾಡುತ್ತೇವೆ ಎಂಬುದೆಲ್ಲ ಕೇವಲ ‘ಭಾಷಣದ ಸರಕು’ ಎಂಬುದು ಜನಕ್ಕೆ ಈಗ ತಿಳಿದಿದೆ!.

ಡಾ.ಟಿ.ಆರ್.ಚಂದ್ರಶೇಖರ

ಇಂದು ಭಾರತವು ಸಂಪೂರ್ಣ ಖಾಸಗೀಕರಣ ಪರ್ವದಲ್ಲಿ ಹಾದು ಹೋಗುತ್ತಿದೆ. ಉದಾರವಾದಿ ನೀತಿಯು ಆರಂಭವಾದ 1991ರಿಂದ 2014ರವರೆಗೆ ನಮಲ್ಲಿದ್ದುದು ಮಿತ ಖಾಸಗೀಕರಣ. ಈಗ 2014ರ ನಂತರ ಆರ್ಥಿಕತೆಯ ಪೂರ್ಣ ಖಾಸಗೀಕರಣ ನಡೆದಿದೆ. 1991 ಮತ್ತು 2014ರ ಆರ್ಥಿಕ ನೀತಿಗಳಲ್ಲಿನ ಈ ಭಿನ್ನತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರವು ಇಂದು ಖುಲ್ಲಂಖುಲ್ಲಾ ಖಾಸಗಿ ಉದ್ದಿಮೆದಾರರ ಪರವಾಗಿ ನಿಂತಿದೆ. ಭಾರತದ ಆರ್ಥಿಕ ಸಮೀಕ್ಷೆ 2018-19 ಮತ್ತು 2019-2020ರಲ್ಲಿ ನಮ್ಮ ಆರ್ಥಿಕತೆಯ ಉಳಿವಿಗೆ ಖಾಸಗೀಕರಣ ಸಿದ್ಧೌಷಧ ಎಂದು ಅದನ್ನು ಇನ್ನಿಲ್ಲದಂತೆ ಹಾಡಿ ಹೊಗಳಲಾಗಿದೆ.

ಬಂಡವಾಳ-ಕಾರ್ಮಿಕ ವರ್ಗಗಳ ನಡುವಿನ ಸಂಬಂಧದ ವಾಸ್ತುಶಿಲ್ಪವೇ ಇಂದು ಬದಲಾವಣೆಗೆ ಒಳಗಾಗಿದೆ. ನಮ್ಮ ಆರ್ಥಿಕತೆಯಲ್ಲಿ 1991ರವರೆಗೆ ಸರ್ಕಾರವು ಸುಮಾರಾಗಿ ಕಾರ್ಮಿಕ ವರ್ಗದ ಪರವಾಗಿತ್ತು. ಉದಾರವಾದಿ ನೀತಿಯು 1991ರಲ್ಲಿ ಜಾರಿಗೆ ಬಂದಮೇಲೆ ಸರ್ಕಾರದ ಕಾರ್ಮಿಕ ವರ್ಗದ ಪರವಾದ ಧೋರಣೆ ತೆಳುವಾದರೂ ಅದರ ವಿರೋಧವಾಗಿರಲಿಲ್ಲ. ಆದರೆ 2014ರ ನಂತರ ಸರ್ಕಾರವು ಬಂಡವಳಿಗರ ಪರವಾಗಿ ನಿಂತು ಕಾರ್ಮಿಕ ವರ್ಗವನ್ನು ‘ಅಭಿವೃದ್ಧಿಗೆ ಕಂಟಕ’, ‘ಬಂಡವಾಳ ಹೂಡಿಕೆಗೆ ಅಡ್ಡಿ’, ಖಾಸಗಿ ವಲಯವು ‘ವೆಲ್ಥ್ ಕ್ರೀಯೇಟಿಂಗ್’ ವಲಯವಾಗಿದೆ ಎನ್ನುವ ಜನ ವಿರೋಧಿ ನೀತಿಗಳನ್ನು ಅಳವಡಿಸಿಕೊಳ್ಳಲು ತೊಡಗಿತು. (ಇದಕ್ಕೆ ನಿದರ್ಶನವೆಂದರೆ ಸಂಸದರೊಬ್ಬರು ಆರ್ಥಿಕ ಅಭಿವೃದ್ಧಿಗೆ ಟೆಕ್ಕಿಗಳು ಕಾಣಿಕೆ ನೀಡುತ್ತಿದ್ದಾರೆ ವಿನಾ ಕೂಲಿಕಾರರಲ್ಲ ಎಂದು ಹೇಳಿದ್ದರೆ, ಮತ್ತೊಬ್ಬರು ಬಿಎಸ್‌ಎಲ್‌ಎನ್ ಕಾರ್ಮಿಕರನ್ನು ಟ್ರೈಟರ್ಸ್-ದೇಶದ್ರೋಹಿಗಳು ಎಂದು ಕರೆದಿದ್ದಾರೆ).

ಕೋವಿಡ್ 19ರ ದುರಂತದಲ್ಲಿ ಸರ್ಕಾರವು ಘೋಷಿಸಿದ್ದ ಲಾಕ್ ಡೌನ್‌ನಲ್ಲಿ ವಲಸೆ ಕಾರ್ಮಿಕರನ್ನು ಸರ್ಕಾರ ಹೇಗೆ ನಡೆಸಿಕೊಂಡಿತು ಎಂಬುದು ಇನ್ನೂ ನಮ್ಮೆದುರಿಗೆ ಹಸಿರಾಗಿದೆ. ಲಕ್ಷಾಂತರ ಕಾರ್ಮಿಕರು ದೇಶದಾದ್ಯಂತ ಬೀದಿಗೆ ಬಿದ್ದರೂ ಸರ್ಕಾರವು ಅವರ ಆಕ್ರಂದನಕ್ಕೆ ಓಗೊಡಲಿಲ್ಲ. ರಾಜ್ಯಗಳ ಜೊತೆ ಸಮಾಲೋಚಿಸದೆ, ಅವುಗಳ ಅಭಿಪ್ರಾಯ ಕೇಳದೆ ಕೇಂದ್ರ ಲಾಕ್ ಡೌನ್ ಘೋಷಿಸಿತು. ಆದರೆ ವಲಸೆ ಕಾರ್ಮಿಕರ ಸಮಸ್ಯೆಯ ನಿರ್ವಹಣೆ ಜವಾಬ್ದಾರಿಯನ್ನು, ಅದರ ಹಣಕಾಸು ಹೊರೆಯನ್ನು ರಾಜ್ಯ ಸರ್ಕಾರಗಳ ಜವಾಬ್ದಾರಿಗೆ ಬಿಟ್ಟುಕೊಟ್ಟಿತು. ಮೊದಲೆ ಸಂಪನ್ಮೂಲ ಕೊರತೆಯಿಂದ ಜರ್ಜರಿತವಾಗಿದ್ದ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರ ಹಿತಕಾಯುವುದರಲ್ಲಿ ಸಂಪೂರ್ಣವಾಗಿ ವಿಫಲವಾದವು. ಇವೆಲ್ಲವೂ ನಮ್ಮ ಸಾಂವಿಧಾನಾತ್ಮಕ ಒಕ್ಕೂಟ ತತ್ವಕ್ಕೆ ವಿರೋಧಿ ಕ್ರಮಗಳಾಗಿದ್ದವು ಎಂಬುದನ್ನು ಇಲ್ಲಿ ಗುರುತಿಸುವುದು ಅಗತ್ಯ.

ಬಂಡವಾಳಕ್ಕೆ ಮನ್ನಣೆ

‘ಲೇಬರ್ ರಿಫಾರಮ್ಸ್’ ಹೆಸರಿನಲ್ಲಿ ಸರ್ಕಾರವು ದುಡಿಮೆಗಾರ ವಿರೋಧಿ ಕ್ರಮಗಳನ್ನು ಒಳಗೊಂಡ ‘ಲೇಬರ್ ಕೋಡ್ಸ್’ ಜಾರಿಗೆ ತಂದಿದೆ. ದುಡಿಮೆ ದಿನದ ಕಾಲಾವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಏರಿಸಲಾಯಿತು, ಮೂರು ನೂರಕ್ಕಿಂತ ಕಡಿಮೆ ಕಾರ್ಮಿಕರಿರುವ ಉದ್ದಿಮೆಗಳು ತಮಗೆ ಬೇಕಾದ ಹಾಗೆ ಕಾರ್ಮಿಕರನ್ನು ನೇಮಿಸಿಕೊಳ್ಳಬಹುದು-ತೆಗೆದು ಹಾಕಬಹುದು, ಇದಕ್ಕೆ ಸರ್ಕಾರದ ಅನುಮತಿ ಅಥವಾ ಕಾರ್ಮಿಕ ಹಿತರಕ್ಷಣೆ ಕ್ರಮಗಳ ಅಗತ್ಯವಿಲ್ಲ, ಕನಿಷ್ಠ ಕೂಲಿ ಕಾನೂನಿಗೆ ಬದಲಾಗಿ ಫ್ಲೋರ್ ಲೆವೆಲ್ ಕೂಲಿ ನೀತಿ, ಫಿಕ್ಸ್ಡ್ ಟರ್ಮ್ ಉದ್ಯೋಗ ಮುಂತಾದ ಕ್ರಮಗಳನ್ನು ಜಾರಿಗೆ ತಂದಿದೆ. ಇವೆಲ್ಲವೂ ಸಾರಾಸಗಟಾಗಿ ‘ದುಡಿಮೆ’ ವಿರೋಧಿ ಕ್ರಮಗಳಾಗಿವೆ.

ಇದರಿಂದ ಸಮಾಧಾನವಾಗದ ಉದ್ದಿಮೆಗಾರರ ಸಂಘಟನೆಗಳು (ಎಫ್‌ಐಸಿಸಿಐ) ಕಾರ್ಮಿಕ ನೇಮಕಾತಿ, ಸಂಬಳ, ಭದ್ರತೆ ಮುಂತಾದವುಗಳಲ್ಲಿ ಇನ್ನೂ ಹೆಚ್ಚಿನ ಸ್ವಾತಂತ್ರ್ಯವನ್ನು ನಮಗೆ ನೀಡಬೇಕು ಎಂದು ಒತ್ತಾಯಿಸುತ್ತಿವೆ. ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸುವಂತೆ ಕೆಲವು ಉದ್ದಿಮೆಗಾರರು ಒತ್ತಾಯಿಸುತ್ತಿದ್ದಾರೆ. ಕೋವಿಡ್-19 ದುರಂತದ ಹಿನ್ನೆಲೆಯಲ್ಲಿ ಸರ್ಕಾರವೂ ಈ ಬಗ್ಗೆ ಯೋಚಿಸುತ್ತಿರುವಂತೆ ಕಾಣುತ್ತಿದೆ. ಈ ಎಲ್ಲ ಕ್ರಮಗಳಿಂದ ನಮ್ಮ ಆರ್ಥಿಕತೆಯಲ್ಲಿ ‘ಕಾರ್ಮಿಕರು-ಬಂಡವಾಳ’ ನಡುವಿನ ಸಂಬAಧದ ವಾಸ್ತುಶಿಲ್ಪ ಬದಲಾಗುತ್ತಿದೆ ಮತ್ತು ಇದು ಬಂಡವಳಿಗರ ಪರವಾಗಿ ವಾಲುತ್ತಿದೆ.

ವೆಲ್ಥ್ ಕ್ರಿಯೇಟರ್ಸ್ ಯಾರು?

ಪ್ರಧಾನಮಂತ್ರಿಗಳಿಂದ ಹಿಡಿದು, ವಿತ್ತಮಂತ್ರಿ, ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣ್ಯಂ, ನೀತಿ ಆಯೋಗದ ರಾಜೀವ್ ಕುಮಾರ್, ಅಮಿತಾಬ್ ಕಾಂತ್ ಮುಂತಾದವರೆಲ್ಲ ಉದ್ದಿಮೆಗಾರರು ನಮ್ಮ ಆರ್ಥಿಕತೆಯಲ್ಲಿ ‘ವೆಲ್ಥ್ ಕ್ರಿಯೇಟರ್ಸ್’ ಎಂದು ಅವರನ್ನು ಹಾಡಿ ಹೊಗಳುತ್ತಿದ್ದಾರೆ. ನಿಜ, ವೆಲ್ಥ್ ಕ್ರಿಯೇಶನ್‌ನಲ್ಲಿ ಬಂಡವಾಳದ ಪಾತ್ರವಿದೆ. ಆದರೆ ಅದರ ಜೊತೆಯಲ್ಲಿ ಶ್ರಮಿಕ ವರ್ಗದ ಪಾತ್ರವೂ ಸಮಾನವಾಗಿದೆ. ಈ ದೇಶದ ನೆಲ, ಜಲ, ಗಾಳಿ, ಬೆಳಕು, ಗಣಿಗಳು, ಇಂಧನ ಮುಂತಾದವುಗಳ ಪಾತ್ರವೂ ಇದೆ. ಉತ್ಪಾದನೆ ಎನ್ನುವುದು ಇವೆಲ್ಲವುಗಳ ಸಂಯುಕ್ತ ಶ್ರಮದ ಫಲವಾಗಿದೆ (ಉತ್ಪಾದನೆ = ನೈಸರ್ಗಿಕ ಸಂಪನ್ಮೂಲ + ಶ್ರಮಶಕ್ತಿ + ಬಂಡವಾಳ + ಉದ್ಯಮ ನಿರ್ವಹಣೆ).

ಆದರೆ ಈಗ ಏಕಪಕ್ಷೀಯವಾಗಿ ಸರ್ಕಾರವು ಬಂಡವಳಿಗರನ್ನು, ಉದ್ದಿಮೆಗಾರರನ್ನು, ಖಾಸಗಿ ವಲಯವನ್ನು ಇನ್ನಿಲ್ಲದಂತೆ ವೈಭವೀಕರಿಸುತ್ತಿದೆ. ಉದಾ: 2018-19ರ ಆರ್ಥಿಕ ಸಮೀಕ್ಷೆಯ ಮೊದಲ ಅಧ್ಯಾಯದ ಶೀರ್ಷಿಕೆ ‘ಪಥ ಬದಲಾವಣೆ: ಆರ್ಥಿಕ ಬೆಳವಣಿಗೆ, ಉದ್ಯೋಗ, ರಫ್ತು ಮತ್ತು ಬೇಡಿಕೆಗಳ ಹಿಂದಿನ ಪ್ರಮುಖ ಚಾಲಕ ಶಕ್ತಿ ಖಾಸಗಿ ಬಂಡವಾಳ ಹೂಡಿಕೆ’ ಎಂದಿದ್ದರೆ 2019-20ರ ಸಮೀಕ್ಷೆಯ ಮೊದಲ ಅಧ್ಯಾಯದ ಶೀರ್ಷಿಕೆ ‘ವೆಲ್ಥ್ ಕ್ರಿಯೇಶನ್: ಅಗೋಚರ ಹಸ್ತ ಮತ್ತು ಅದಕ್ಕೆ ಬೆಂಬಲವಾಗಿರುವ ನಂಬಿಕೆಯ ಹಸ್ತ’ ಎಂಬುದಾಗಿದೆ. ಇಲ್ಲಿ ಅಗೋಚರ ಹಸ್ತ ಎನ್ನುವುದು ಮಾರುಕಟ್ಟೆ ಶಕ್ತಿಯ (ಖಾಸಗಿ ವಲಯ) ಪಾತ್ರದ ಬಗ್ಗೆ ಆಡಂಸ್ಮಿತ್ ಬಳಸಿರುವ ಪರಿಭಾವನೆ ಎನ್ನುವುದು ಅರ್ಥವಾಗುತ್ತದೆ. ‘ನಂಬಿಕೆಯ ಹಸ್ತ’ ಎನ್ನುವುದು ಸರ್ಕಾರದ ಅಭಯ ಎನ್ನುವುದನ್ನು ಸೂಚಿಸುತ್ತದೆ.

ಮತ್ತೊಂದು ಅಧ್ಯಾಯದ ಶೀರ್ಷಿಕೆ ‘ಪ್ರೆವೈಟೈಜೇಶನ್ ಆಂಡ್ ವೆಲ್ಥ್ ಕ್ರಿಯೇಶನ್’ ಎಂಬುದಾಗಿದೆ. ಇವೆಲ್ಲವೂ ಸರ್ಕಾರವು ಆರ್ಥಿಕ ನಿರ್ವಹಣೆಯ ಜಬಾಬ್ದಾರಿಯನ್ನು ಖಾಸಗಿ ವಲಯಕ್ಕೆ, ಉದ್ದಿಮೆಗಾರರ ಸುಪರ್ದಿಗೆ ಮತ್ತು ಮಾರುಕಟ್ಟೆ ವಶಕ್ಕೆ ನೀಡುವುದಕ್ಕೆ ಸಿದ್ಧವಿದೆ ಎಂಬುದು ಸ್ಪಷ್ಟ್ಟವಾಗಿದೆ. ಉದ್ದಿಮೆಗಾರರಿಗೆ ‘ಅಭಯ’ಹಸ್ತ: ಕಾರ್ಮಿಕ ವರ್ಗಕ್ಕೆ ‘ಕಠೋರ ಹಸ್ತ’: ಇದಾವ ನ್ಯಾಯ! ಪ್ರಧಾನಮಂತ್ರಿಗಳು 2019ರ ಸ್ವಾತಂತ್ರ್ಯ ದಿನಾಚರಣೆಯಂದು ‘ಉದ್ದಿಮೆದಾರರನ್ನು ಅವಮಾನಿಸಬಾರದು, ಅವರನ್ನು ಅನುಮಾನದಿಂದ ನೋಡಬಾರದು’ ಎಂದು ಹೇಳಿದ್ದಾರೆ. ಮುಂದುವರಿದು ‘ಅವರು ದೇಶದ ಸಂಪತ್ತು’ ಎಂದು ಘೋಷಿಸಿದ್ದಾರೆ. ಇದು ಸರಿ.

ಹಾಗಾದರೆ ದುಡಿಯುವ ವರ್ಗವನ್ನೂ ಅವಮಾನಿಸಬಾರದು ತಾನೆ? ಬೆವರು, ಕಣ್ಣೀರು ಮತ್ತು ರಕ್ತ ಹರಿಸಿ ಈ ದೇಶಕ್ಕಾಗಿ 45 ರಿಂದ 50 ಕೋಟಿ ದುಡಿಮೆಗಾರರು ಶ್ರಮಿಸುತ್ತಿಲ್ಲವೇ? ಅವರಿಲ್ಲದೆ ವೆಲ್ಥ್ ಕ್ರ‍್ರಿಯೇಶನ್ ಸಾಧ್ಯವೇ? ಅವರು ದೇಶದ ಸಂಪತ್ತು ತಾನೆ? ಆದರೆ ಈ ಸಮತೋಲನ ಧೋರಣೆಯು ಸರ್ಕಾರದಲ್ಲಿ ಕಾಣುತ್ತಿಲ್ಲ. 

ನಮ್ಮ ದೇಶದಲ್ಲಿ ಅನೇಕ ಸಮೀಕ್ಷೆಗಳು, ಅಧ್ಯಯನಗಳು, ವರದಿಗಳು ಅಂದಾಜು ಮಾಡಿರುವಂತೆ 45 ಕೋಟಿಯಿಂದ 50 ಕೋಟಿ ದುಡಿಮೆಗಾರರಿದ್ದಾರೆ. ಇವರಲ್ಲಿ ಮುಕ್ಕಾಲು ಪಾಲು ಕಾರ್ಮಿಕರು ಅನೌಪಚಾರಿಕ ವಲಯದಲ್ಲಿದ್ದಾರೆ. ಅನೌಪಚಾರಿಕ ವಲಯ ಎನ್ನುವುದು ಸ್ವಯಂ ಉದ್ಯೋಗಿಗಳು, ಹಂಗಾಮಿ ಉದ್ಯೋಗಿಗಳು, ಗುತ್ತಿಗೆ-ಹೊರಗುತ್ತಿಗೆ ಉದ್ಯೋಗಿಗಳು, ಬೀದಿಬದಿ ವ್ಯಾಪಾರಗಾರರು, ತಲೆಮೇಲೆ ಹೊತ್ತು, ನೂಕುಗಾಡಿಯಲ್ಲಿ ಮಾರಾಟ ಮಾಡುವವರು ಮುಂತಾದವರಿಂದ ಕೂಡಿದ ವಲಯವಾಗಿದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿನ ಭೂರಹಿತ ಕೃಷಿ ದಿನಗೂಲಿ ದುಡಿಮೆಗಾರರಿದ್ದಾರೆ.

ಇವರಾರಿಗೂ ಉದ್ಯೋಗದ ಭದ್ರತೆಯಿಲ್ಲ, ಪ್ರಮಾಣಿತ ಕೂಲಿಯಿಲ್ಲ, ಕಾರ್ಮಿಕ ಕಲ್ಯಾಣ ಅನುಕೂಲಗಳಿಲ್ಲ, ನಿವೃತ್ತಿ ವೇತನವಿಲ್ಲ, ರಜೆಯ ಸೌಲಭ್ಯಗಳಿಲ್ಲ. ಇವರಾರಿಗೂ ಲೇಬರ್ ಕಾನೂನುಗಳು ಅಥವಾ ಲೇಬರ್ ಕೋಡ್ಸ್ ಅನ್ವಯವಾಗುವುದಿಲ್ಲ. ಹಾಗಾದರೆ ಎಫ್‌ಐಸಿಸಿಐ ಯಾವ ಕಾರ್ಮಿಕ ಕಾಯಿದೆಗಳ ರದ್ಧತಿಯನ್ನು ಒತ್ತಾಯಿಸುತ್ತಿದೆ? ಸರ್ಕಾರ ಏಕೆ ಈ ನತದೃಷ್ಟರ ವಿರುದ್ಧ ಕೆಂಡ ಕಾರುತ್ತಿದೆ? ಉಳಿದ ನಾಲ್ಕನೆಯ ಒಂದರಷ್ಟು ಕಾರ್ಮಿಕರು ಮಾತ್ರ ಖಾಯಂ ಉದ್ಯೋಗಿಗಳಾಗಿ ಸಂಘಟಿತ ವಲಯದಲ್ಲಿದ್ದಾರೆ.

ಕಾರ್ಮಿಕ ಸಂಘಟನೆಗಳ ಶಕ್ತಿಯನ್ನು ಮುರಿಯುವುದಕ್ಕಾಗಿಯೇ ಸರ್ಕಾರವು 1926ರ ಕಾರ್ಮಿಕ ಸಂಘಟನೆಗಳ ಕಾಯಿದೆಗೆ 2018ರಲ್ಲಿ ತಿದ್ದುಪಡಿ ತಂದು ಕಾರ್ಮಿಕ ಸಂಘಗಳ ನೋಂದಣಿಯ ಅಧಿಕಾರವನ್ನು ಸರ್ಕಾರಗಳ ವಿವೇಚನೆಗೆ ಬಿಡುವ ಕ್ರಮ ತೆಗೆದುಕೊಂಡಿದೆ. ಕಾರ್ಮಿಕ ಸಂಘಗಳ ನೋಂದಣಿಗೆ ಕಾಯಿದೆಯಲ್ಲಿ ಯಾವುದೇ ಕ್ರಮವನ್ನಾಗಲಿ ಅಥವಾ ಮಾನದಂಡಗಳನ್ನಾಗಲಿ ಗುರುತಿಸಿಲ್ಲ. ಇದರಿಂದ ಸರ್ಕಾರವು ಕಾರ್ಮಿಕರ ಮೇಲೆ ದಮನಕಾರಿ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಈ ಕಾಯಿದೆಯಲ್ಲಿ ತ್ರಿಪಕ್ಷೀಯ ಸಂಧಾನಕ್ಕೆ ಅವಕಾಶವನ್ನು ನೀಡಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಕಾಯಿದೆಯಲ್ಲಿ ಅನೌಪಚಾರಿಕ ವಲಯದಲ್ಲಿನ ಮನೆವಾರ್ತೆ ಕೆಲಸಗಾರರು, ಬೀಡಿ ಸುತ್ತುವವರು, ವಲಸೆ ಕಾರ್ಮಿಕರು, ಭೂರಹಿತ ದಿನಗೂಲಿ ದುಡಿಮೆಗಾರರು, ಗುತ್ತಿಗೆ ಕಾರ್ಮಿಕರು ಮುಂತಾದವರು ಕಾರ್ಮಿಕ ಸಂಘಗಳನ್ನು ಕಟ್ಟಿಕೊಳ್ಳಲು ಅಗತ್ಯವಾದ ಕ್ರಮಗಳಿಲ್ಲ.

ಸರ್ಕಾರ ಯಾರ ಪರವಾಗಿರಬೇಕು?

ಅರ್ಥಶಾಸ್ತçದ ಸಾಮಾನ್ಯ ವಿದ್ಯಾರ್ಥಿಗೂ ತಿಳಿದಿರುವಂತೆ ಸಮಾಜದಲ್ಲಿ ಬಂಡವಳಿಗರ/ ಬಂಡವಾಳದ ಬಾರ್ಗೈನಿಂಗ್ ಶಕ್ತಿ ಅಧಿಕವಾಗಿರುತ್ತದೆ. ಪ್ರಭುತ್ವದ ಅಧಿಕಾರದ ಮೇಲೆ ಅವರು ಪ್ರಭಾವ ಬೀರಬಲ್ಲರು. ಉದಾ: ಮುಖೇಶ್ ಅಂಬಾನಿ ಅವರ ಸಂಪತ್ತಿನ ಮೌಲ್ಯ 2020ರಲ್ಲಿ ರೂ.5.60 ಲಕ್ಷ ಕೋಟಿ (8000 ಕೋಟಿ ಡಾಲರ್). ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ 2019-2020ರ ಬಜೆಟ್‌ಗಳ ಗಾತ್ರಕ್ಕಿಂತ ಇವರ ಸಂಪತ್ತಿನ ಮೌಲ್ಯವು ಅಧಿಕವಾಗಿದೆ. ಆದರೆ ಅನೌಪಚಾರಿಕ ವಲಯದಲ್ಲಿನ ಕಾರ್ಮಿಕರ ಬಾರ್ಗೈನಿಂಗ ಪವರ್ ಕಡಿಮೆ. ಅವರ ಸರಾಸರಿ ಮಾಸಿಕ ದುಡಿಮೆ ರೂ 10000ಕ್ಕಿಂತ ಕಡಿಮೆ. ಹಾಗಾದರೆ ಸರ್ಕಾರ ಯಾರ ಪರವಾಗಿ ನಿಲ್ಲಬೇಕು?

ಬಾರ್ಗೈನಿಂಗ್ ಪವರ್ ಕೆಳಮಟ್ಟದಲ್ಲಿರುವವರ ಪರವಾಗಿ ಸರ್ಕಾರ ನಿಂತು ಬಂಡವಾಳ ಮತ್ತು ಕಾರ್ಮಿಕರ ನಡುವೆ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಬೇಕು. ಆದರೆ ಇಂದು ಇಂತಹ ಸಮತೋಲನದ ಧೋರಣೆ ಕಾಣುತ್ತಿಲ್ಲ. ಕಾರ್ಮಿಕ ಸಂಘಗಳು ಎಂದರೆ ಆಳುವ ಪಕ್ಷವು ಕೆಂಡ ಕಾರುತ್ತದೆ. ಈ ಬಂಡವಾಳ-ಶ್ರಮಶಕ್ತಿಗಳ ನಡುವೆ ಅಸಮತೋಲನವನ್ನು ಸರ್ಕಾರವೇ ಉಂಟು ಮಾಡಿದರೆ ಅಂತಹ ಆರ್ಥಿಕತೆಯು ಶಕ್ತಿಶಾಲಿಯಾಗಿ ಮತ್ತು ವೇಗದಿಂದ ಬೆಳೆÉಯುವುದು ಸಾಧ್ಯವಿಲ್ಲ.

ರೈತರ ವರಮಾನವನ್ನು 2022ರಲ್ಲಿ ದುಪ್ಪಟ್ಟು ಮಾಡುತ್ತೇವೆ, ಭಾರತದ ಜಿಡಿಪಿಯನ್ನು 2024ರಲ್ಲಿ 5 ಟ್ರಿಲಿಯನ್ ಡಾಲರ್ ಮಾಡುತ್ತೇವೆ ಎಂಬುದೆಲ್ಲ ಕೇವಲ ‘ಭಾಷಣದ ಸರಕು’ ಎಂಬುದು ಜನಕ್ಕೆ ಈಗ ತಿಳಿದಿದೆ. ಇದಕ್ಕೆ ಇರಬೇಕು 2019ರಲ್ಲಿ ಭಾರತದ ಕೇವಲ ಶೇ.37 ರಷ್ಟು ಮತದಾರರು ಸದ್ಯದ ಸರ್ಕಾರಕ್ಕೆ ಮತ ನೀಡಿದ್ದಾರೆ. ದುಡಿಮೆಗಾರರನ್ನು ಹೀಗಳೆದು ಆರ್ಥಿಕತೆಯನ್ನು ಬೆಳೆಸುವುದು ಸಾಧ್ಯವಿಲ್ಲ ಎಂಬ ಪಾಠವನ್ನು ನಾವು ಎಷ್ಟು ಬೇಗ ಕಲಿಯುತ್ತೇವೆಯೋ ಅಷ್ಟು ನಮ್ಮ ಆರ್ಥಿಕತೆಗೆ ಒಳ್ಳೆಯದು. 

ಆರ್ಥಿಕ ನೀತಿಗಳ ಮಹಾವೈಫಲ್ಯ!

  • ನಮ್ಮ ಆರ್ಥಿಕತೆಯಲ್ಲಿ ಇಂದು ಹಣಕಾಸು ವಲಯವು ದೊಡ್ಡ ಕ್ರೈಸಿಸ್ ನಲ್ಲಿದೆ. ಎನ್.ಪಿ.ಎ., ಬ್ಯಾಂಕುಗಳ ವಿಲೀನ, ಆರ್.ಬಿ.ಐ. ಗೌರ್ವನರುಗಳ ಬಗ್ಗೆ ಅವಿಶ್ವಾಸ, ಅವರ ಸಲಹೆಗೆ ಮನ್ನಣೆಯಿಲ್ಲದಿರುವುದು… ಇತ್ಯಾದಿಗಳಿಂದ ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗೇತರ ವಲಯ ಮುಳುಗುವ ಸ್ಥಿತಿಯಲ್ಲಿದೆ.
  • ಭ್ರಷ್ಟಾಚಾರದ ವಿರುದ್ಧ ಯುದ್ಧ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಸರ್ಕಾರವು ಎಲೆಕ್ಟೊರಲ್ ಬಾಂಡುಗಳನ್ನು ಜಾರಿಗೆ ತಂದು ಕಪ್ಪು ಹಣದ ಚಲಾವಣೆಗೆ ದಾರಿಮಾಡಿಕೊಟ್ಟಿದೆ.
  • ಬಜೆಟ್ ನಿರ್ವಹಣೆ ವೈಫಲ್ಯ: ವಿತ್ತೀಯ ಕೊರತೆಯನ್ನು ಮುಚ್ಚಿಡಲು ಸರ್ಕಾರವು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಹಾಗೂ ಇಲಾಖೆಗಳ ಮೂಲಕ ಹಣ ಸಂಗ್ರಹಿಸಿಕೊಳ್ಳುತ್ತಿದೆ. ನಿಜ ವಿತ್ತೀಯ ಕೊರತೆಯು 2019-2020ರಲ್ಲಿ ಶೇ. 9 ಎಂದು ಅಂದಾಜು ಮಾಡಲಾಗಿದೆ.
  • ನಿರುದ್ಯೋಗವು ಕಳೆದ 45 ವರ್ಷಗಳಲ್ಲಿಯೇ ಅತ್ಯಧಿಕ ಮಟ್ಟವನ್ನು (ಶೇ.6) 2019ರಲ್ಲಿಯೇ ತಲುಪಿತ್ತು. ಈಗ ಕೋವಿಡ್ ದುರಂತದಲ್ಲಿ ಇದು ಶೇ. 15ಕ್ಕಿಂತ ಅಧಿಕವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
  • ಆತ್ಮನಿರ್ಭರ ಭಾರತ್ ಅಭಿಯಾನದಲ್ಲಿ ಘೋಷಿಸಿರುವ ರೂ. 20 ಲಕ್ಷ ಕೋಟಿ ವೆಚ್ಚ 2020-21ರಲ್ಲಿ ಸಾಧ್ಯವಿಲ್ಲ. ನಿಜ ವೆಚ್ಚ ವಿತ್ತ ಮಂತ್ರಿ ಹೇಳಿರುವಂತೆ ಜಿಡಿಪಿಯ ಶೇ.10ಕ್ಕೆ ಪ್ರತಿಯಾಗಿ ಶೇ.1 ರಷ್ಟಾಗಬಹುದು ಎಂಬುದು ತಜ್ಞರ ಅಭಿಪ್ರಾಯ.
  • ಆರ್ಥಿಕತೆಯಲ್ಲಿ 2019-2020ರಲ್ಲಿ ರೆವಿನ್ಯೂ ಸ್ವೀಕೃತಿಯ ಬಜೆಟ್ ಅಂದಾಜು ರೂ.19.63 ಲಕ್ಷ ಕೋಟಿಗೆ ಪ್ರತಿಯಾಗಿ ವರ್ಷದ ಕೊನೆಯಲ್ಲಿ ಸಂಗ್ರಹವಾದದ್ದು ರೂ. 18.50 ಲಕ್ಷ ಕೋಟಿ ಮಾತ್ರ. ಪ್ರಸ್ತುತ 2020-2021ರಲ್ಲಿ ರೆವಿನ್ಯೂ ಸ್ವೀಕೃತಿಯ ಬಜೆಟ್ ಅಂದಾಜು ರೂ. 20.20 ಲಕ್ಷ ಕೋಟಿ. ಕೋವಿಡ್ ಹಿನ್ನೆಲೆಯಲ್ಲಿ 2020ರ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಆರ್ಥಿಕ ಚಟುವಟಿಕೆಗಳು ಸ್ತಬ್ಧಗೊಂಡ ಕಾರಣ ಮತ್ತು ಆರ್ಥಿಕತೆಯಲ್ಲಿ ಸಮಗ್ರ ಬೇಡಿಕೆ ಕುಸಿದಿರುವುದರಿಂದ ಇದರ ಸಾಧನೆ ಸಾಧ್ಯವಿಲ್ಲ.
  • ಆರ್ಥಿಕತೆಯಲ್ಲಿನ ಅಭಿವೃದ್ಧಿಯ ಚಾಲಕ ಶಕ್ತಿಗಳು ನಾಲ್ಕು: ಜನರು ಮಾಡುವ ವೆಚ್ಚ, ಸರ್ಕಾರದ ಸಾರ್ವಜನಿಕ ವೆಚ್ಚ, ಉದ್ದಿಮೆಗಾರರ ವೆಚ್ಚ ಮತ್ತು ರಫ್ತು ವ್ಯಾಪಾರ. ಈ ನಾಲ್ಕು ಎಂಜಿನ್ನುಗಳು ನೆಲಕಚ್ಚಿವೆ. ಇವುಗಳ ಪುನಶ್ಚೇತನದ ಬಗ್ಗೆ ಸರ್ಕಾರಕ್ಕೆ ಗಂಭೀರ ಆಸಕ್ತಿಯಲ್ಲ.
  • ಒಟ್ಟಾರೆ ಈ ಸರ್ಕಾರದ ಸಾಮಾಜಿಕ ನೀತಿ ಅಜೆಂಡ ಖಚಿತವಾಗಿದೆ (ಇದು ಅಯೋಧ್ಯೆಯಲ್ಲಿನ ಗುಡಿ ನಿರ್ಮಾಣದ ತೀರ್ಮಾನದಲ್ಲಿ ಸ್ಪಷ್ಟವಾಗಿದೆ). ಆದರೆ ಆರ್ಥಿಕ ನೀತಿ ಅಜೆಂಡ ಮಾತ್ರ ಅನಿಶ್ಚಿತತೆಯಿಂದ ನರಳುತ್ತಿದೆ. ಕಳೆದ ಆರು ವರ್ಷಗಳಿಗೆ ಮೀರಿದ ಆಡಳಿತದಲ್ಲಿ ಈ ಸರ್ಕಾರಕ್ಕೆ ತನ್ನ ಆರ್ಥಿಕ ನೀತಿಯನ್ನು ಖಚಿತವಾಗಿ ರೂಪಿಸುವುದು ಸಾಧ್ಯವಾಗಿಲ್ಲ (ಇದಕ್ಕೆ ಒಂದು ಕಾರಣ ಸರ್ಕಾರಕ್ಕೆ ಆರ್ಥಿಕ ತಜ್ಞರ ಮೇಲೆ ಭರವಸೆಯಿಲ್ಲ). ಅನೇಕರು ವಾದಿಸುವಂತೆ ಈ ಸರ್ಕಾರಕ್ಕೆ ಆರ್ಥಿಕ ನೀತಿಯೇ ಇಲ್ಲ ಅಥವಾ ಅದು ಬೇಕಾಗಿಲ್ಲ ಎಂದು ಕಾಣುತ್ತದೆ. ಇದು ರೆಟೆರಿಕ್ ಸರ್ಕಾರ ತಾನೆ!

*ಲೇಖಕರು ಸಮಾಜ ವಿಜ್ಞಾನಿ; ಮಾನವ ಅಭಿವೃದ್ಧಿ, ಬಜೆಟ್ ಅಧ್ಯಯನ, ಲಿಂಗ ಸಂಬಂಧಗಳು ಮತ್ತು ವಚನ ಸಂಸ್ಕೃತಿ ಕುರಿತಂತೆ ಸಂಶೋಧನೆ ನಡೆಸಿದ್ದಾರೆ. ನಿವೃತ್ತಿ ನಂತರ ನಾಲ್ಕನೇ ರಾಜ್ಯ ಹಣಕಾಸು ಆಯೋಗದಲ್ಲಿ ಸಮಾಲೋಚಕರಾಗಿದ್ದರು.

Leave a Reply

Your email address will not be published.