ಅನಿಸಿಕೆಗಳು

‘ಹಾಲಿವಾಣ’ದ ಎಲೆ ಮೇಲೆ ಗಣಿಯ ದೂಳು!

ಜೂನ್ ಸಂಚಿಕೆ ಚೆನ್ನಾಗಿದೆ. ಅಂದಹಾಗೆ ‘ಹಣವಿದೆ, ಅರಣ್ಯ ಬೆಳೆಸುವವರಿಲ್ಲ!’ (ಶ್ರೀಶೈಲ ಆಲದಹಳ್ಳಿ) ಕಿರುಲೇಖನ ಓದಿದೆ. ಈ ಸರ್ಕಾರಿ ವ್ಯವಸ್ಥೆಯ ಬೇಜವಾಬ್ದಾರಿ ಕುರಿತು ಮೈ ಎಲ್ಲಾ ಉರಿದು ಹೋಯ್ತು. ಏಕೆಂದರೆ ಈ ಸಂಡೂರು ಮತ್ತು ಹೊಸಪೇಟೆಯ ಅರಣ್ಯದಲ್ಲಿ ನಡೆದ ಅಕ್ರಮ-ಮಿತಿಮೀರಿದ ಗಣಿಗಾರಿಕೆಯಿಂದ ನಮಗಾಗಿರೋದು ಬರೀ ಆರ್ಥಿಕ ನಷ್ಟವಷ್ಟೇ ಅಲ್ಲ, ಪಾರಿಸರಿಕ ಹಾಗು ಸಾಂಸ್ಕೃತಿಕ ನಷ್ಟಗಳೂ ಅನೇಕ.

‘ಹಾಲಿವಾಣ’ ಎಂಬುದು ಒಂದು ಮರದ ಹೆಸರು. ಅದು ಚಳಿಗಾಲದಲ್ಲಿ ಸುಂದರವಾದ ಹೂಗಳನ್ನು ಬಿಡುತ್ತದೆ. ಕುವೆಂಪು ಅವರ ಮಹಾಕಾವ್ಯ ‘ಶ್ರೀ ರಾಮಾಯಣ ದರ್ಶನಂ’ ಗ್ರಂಥದಲ್ಲಿ ಈ ಹೂವಿನ ವರ್ಣನೆ ಮನಸೆಳೆಯುತ್ತದೆ; 1952ರಲ್ಲಿ ‘ಶ್ರೀ ಕುವೆಂಪು ಸಂದರ್ಶನ’ (ಸಂಪಾದಕರು: ಕೋ.ಚೆನ್ನಬಸಪ್ಪ) ಪ್ರಕಟವಾಯ್ತು. ಅದರಲ್ಲಿಯೂ ಈ ಮರ ಕುಪ್ಪಳಿಯ ತಮ್ಮ ಮನೆ ಮುಂದೆಯೇ ಇದ್ದುದನ್ನು ನೆನಪಿಸಿಕೊಂಡು ಸೊಗಸಾದ ವಿವರಣೆ ನೀಡಿದ್ದಾರೆ. ಇದನ್ನೆಲ್ಲ ಓದಿದ ನಾನು ನಮ್ಮ ಮನೆ ಮುಂದೆಯೂ ಈ ಮರ ಇರಲೆಂದು ನೆಟ್ಟು ಬೆಳೆಸಿದ್ದೆ. ಅದು ಸುಂದರವಾದ ಹೂಗಳನ್ನು ನೀಡುತ್ತಿತ್ತು ಕೂಡ.

ಆದರೆ ಯಾವಾಗ ಸಂಡೂರು ಹೊಸಪೇಟೆಗಳಲ್ಲಿ ಮಿತಿಮೀರಿದ ಅಕ್ರಮ ಗಣಿಗಾರಿcಶುರುವಾಯ್ತೋ ಆಗ ಈ ಮರ ಹೂ ಬಿಡುವುದನ್ನೇ ನಿಲ್ಲಿಸಿಬಿಟ್ಟಿತು! ಅದರ ಎಲೆಗಳೆಲ್ಲಾ ಮುರುಟಿ ಹೋಗತೊಡಗಿದವು. ನಾನು ಏಕೆಂದು ಚಿಂತಾಕ್ರಾತನಾದೆ. ಹೀಗೇ ಎರಡು ಮೂರು ವರ್ಷ ಕಳೆದರೂ ಹಾಲಿವಾಣದ ಮರ ಹೂಬಿಡಲೇ ಇಲ್ಲ! ಅಷ್ಟೇ ಅಲ್ಲ, ನಮ್ಮ ಊರಿನ ವೀಳ್ಯದೆಲೆ ತೋಟಗಳಲ್ಲಿಯ ಹಾಲಿವಾಣದ ಮರಗಳೂ ಹೂಬಿಡದೆ, ಕಾಯಿಯಾಗದೆ ಮುರುಟಿ ಹೋದವು. ಹೀಗಾಗಿ ನಮ್ಮಲ್ಲಿಯ ಮದುವೆ ಕಾರ್ಯಗಳಲ್ಲಿಯ ಒಂದು ಪ್ರಮುಖ ಕಾರ್ಯವಾದ ‘ಹಾಲುಗಂಬ-ಹಸಿರುಗಂಬ’ ನೆಡುವ ಕಾರ್ಯಕ್ಕೂ ಈ ಹಾಲಿವಾಣದ ಕೋಲು ಸಿಗದೆ ಪರದಾಡುವಂತಾಯ್ತು!

ನಮ್ಮ ಊರಿನ ಅನೇಕರು ನಮ್ಮ ಮನೆಮುಂದಿನ ಹಾಲಿವಾಣದ ಮರದ ರೆಂಬೆಕೊಬೆಗಳನ್ನೆಲ್ಲ ಮುರಿದುಕೊಂಡು ಹೋಗಿ ಮದುವೆ ಕಾರ್ಯ ನಡೆಸಿದರು. ಈ ಅವಾಂತರಕ್ಕೆ ಸಿಲುಕಿದ ನಮ್ಮ ಮರ ನಶಿಸಿಹೋಯ್ತು. ಈ ಅವಾಂತರಕ್ಕೆಲ್ಲ ಕಾರಣ ನಮ್ಮ ಸಂಡೂರು-ಹೊಸಪೇಟೆಯಲ್ಲಾದ ಮಿತಿಮೀರಿದ ಗಣಿಗಾರಿಕೆಯೇ ಆಗಿದೆ ಎಂಬ ಸತ್ಯ ನಮಗೆ ಗೋಚರವಾಗಲು ಬಹಳ ಸಮಯ ಬೇಕಾಗಲಿಲ್ಲ.

ಸಂಡೂರು-ಹೊಸಪೇಟೆಯ ಗಣಿ ಅರಣ್ಯ ಪ್ರದೇಶದಿಂದ ಪಶ್ಚಿಮ ದಿಕ್ಕಿಗೆ ಕೇವಲ ಮೂವತ್ತು ಕಿಲೋಮೀಟರ್ ದೂರದಲ್ಲಿ ನಮ್ಮ ಊರಿದೆ. ನಮ್ಮ ಊರಿನ ಎಲೆತೋಟದ ಹಾಲಿವಾಣದ ಮರದ ಮೇಲೆಲ್ಲಾ ಈ ಗಣಿಗಾರಿಕೆಯ ದೂಳು ಕೂತು ಹಾಲಿವಾಣದ ಎಲೆಗಳೆಲ್ಲಾ ಮುರುಟಿಹೋದವು. ಹಾಗೆಯೇ ಅದರ ಸುಂದರ ಹೂಗಳೂ ಕೂಡ! ಹಾಲಿವಾಣ ತುಂಬ ಗಟ್ಟಿಮರ. ಹೀಗಾಗಿ ಎಲೆತೋಟದ ಎಲೆಬಳ್ಳಿಯನ್ನು ಈ ಮರಕ್ಕೆ ಹಬ್ಬಿಸಿದರೆ ಮುಂಗಾರುಪೂರ್ವದ ಗಾಳಿಯ ಪ್ರಚಂಡ ಹೊಡೆತವನ್ನೂ ಸಹಿಸಿ ಎಲೆತೋಟ ಉಳಿಯಬಲ್ಲುದು. ಆದ್ದರಿಂದಲೇ ಎಲೆತೋಟದ ಬೆಳೆಗಾರರು ತಮ್ಮ ತೋಟದಲ್ಲಿ ಎಲೆಬಳ್ಳಿಗಳು ಹಬ್ಬಲು ನುಗ್ಗೆ, ಚೊಗಚಿ, ಹಾಲಿವಾಣದ ಮರಗಳನ್ನು ಬೆಳೆಸುತ್ತಾರೆ.

ನುಗ್ಗೆ ಮತ್ತು ಚೊಗಚಿ ಗಟ್ಟಿಮರಗಳಲ್ಲವಾದ್ದರಿಂದ, ಹಾಲಿವಾಣವೊಂದೇ ಎಲೆಬಳ್ಳಿಯ ತೋಟವನ್ನು ಉಳಿಸಬಲ್ಲದು. ಆದರೆ ಗಣಿಗಾರಿಕೆಯ ಹಾವಳಿಯಿಂದಾಗಿ ಈ ಹಾಲಿವಾಣವೂ ನಶಿಸಿಹೋಗಿ ಎಲೆತೋಟವನ್ನು ಕಾಪಾಡುವುದೇ ಕಷ್ಟವಾಗಿದೆ. ಇದರಿಂದಾಗಿ ಈಗ ಪ್ರತಿವರ್ಷವೂ ಏಪ್ರಿಲ್-ಮೇ ತಿಂಗಳಲ್ಲಿ ಬೀಸುವ ಮುಂಗಾರುಪೂರ್ವ ಗಾಳಿಯ ಹೊಡೆತಕ್ಕೆ ಎಲೆತೋಟಗಳೆಲ್ಲಾ ನೆಲಕಚ್ಚುತ್ತಿವೆ; ಎಲೆ ತೋಟದ ಬೆಳೆಗಾರರು ಥರಥರ ನಡುಗುವಂತಾಗಿದೆ. ವಿಪರ್ಯಾಸವೆಂದರೆ ಗಾಳಿಗುಂಟ ತೇಲಿಬರುವ ಗಣಿಗಾರಿಕೆಯ ದೂಳು ಈ ಹಾಲಿವಾಣ ಮರದ ಎಲೆಮೇಲೆ ಬಿದ್ದು ಅದರ ಸಂತತಿಯೇ ನಶಿಸಿಹೋಗುತ್ತಿರುವ ಕುರಿತು ಯಾವ ಕೃಷಿ ವಿಜ್ಞಾನಿಯೂ ಸಂಶೋಧನೆ ಮಾಡಲಿಲ್ಲ! ‘ಒಂದು ಮರದ ಎಲೆಯೇ ಅದರ ಅಡುಗೆಮನೆ’- ಎಂಬುದು ನಮಗೆಲ್ಲಾ ತಿಳಿದಿರುವುದರಿಂದ ಈ ಮಿತಿಮೀರಿದ ಗಣಿಗಾರಿಕೆಯ ದೂಳೇ ಹಾಲಿವಾಣದ ನಾಶಕ್ಕೆ ಕಾರಣವೆಂಬುದು ನನ್ನ ತರ್ಕವಷ್ಟೆ.

ವಿಪರ್ಯಾಸ ಹೀಗಿರುವಾಗ ಸಂಡೂರಿನ ಶ್ರೀಶೈಲ ಆಲದಹಳ್ಳಿ ನೀಡಿರುವ ಅಂಕಿಅAಶಗಳು ತುಂಬ ಸಂಕಟ ನೀಡಿದವು. ಗಣಿಗಾರಿಕೆಯಿಂದಾದ ಅರಣ್ಯನಾಶವನ್ನು ಸರಿಪಡಿಸಲು ಮೀಸಲಾದ ಹಣ ರೂ.54,000 ಕೋಟಿ ಸರ್ಕಾರಿ ಖಜಾನೆಯಲ್ಲಿಯೇ ಕೊಳೆಯುತ್ತಿದೆಯೆಂದು ಅವರು ಹೇಳಿದ್ದಾರೆ. ಸರ್ಕಾರ, ಅರಣ್ಯ ಇಲಾಖೆ, ಜಿಲ್ಲಾಧಿಕಾರಿಗಳು, ಶಾಸಕರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು… ಇವರೆಲ್ಲಾ ಏನು ಮಾಡುತ್ತಿದ್ದಾರೆ?

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ.


ವೈಚಾರಿಕತೆಯತ್ತ ಸೆಳೆದ ಲೇಖನ

‘ಪ್ರಾಚೀನ ವೈದ್ಯ ಗ್ರಂಥಗಳು ಪ್ರಸ್ತಾಪಿಸದ ಸಾಂಕ್ರಾಮಿಕ ರೋಗಗಳ’ ಬಗ್ಗೆ ಕೃಷ್ಣಮೂರ್ತಿ ಹನೂರು ಅವರು ಅನೇಕ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು, ಸವಿವರವಾದ ಮಾಹಿತಿ ನೀಡಿದ್ದಾರೆ. ಅಂತಹ ರೋಗಗಳ ಬಗ್ಗೆ, ಹೇಗೆ ರಾಜಾಡಳಿತ ಮತ್ತು ಪುರೋಹಿತಶಾಹಿ ಧಿಕ್ಕಾರ ತೋರಿಸಿ, ತಮ್ಮ ಲಾಭಕ್ಕೆ ಒತ್ತು ಕೊಡುವ ಇನ್ನಿತರೆ ರೋಗಗಳಾದ ಕುಷ್ಠರೋಗ, ತೊನ್ನಿನ ಬಗ್ಗೆ ನೀಡಿರುವ ವಿವರಣೆ, ನೋಡುವವರಿಗೆ ಭಯ ಹುಟ್ಟಿಸಿ, ದೇವರು ಧರ್ಮ ಕರ್ಮ ಪಾಪ ಪುಣ್ಯವನ್ನು ನಂಬುವAತೆ ಮಾಡಿ ತಮ್ಮ ಲಾಭಕ್ಕೆ ಮುಗ್ಧರನ್ನು ಬಳಸಿಕೊಂಡಿದ್ದಾರೆ ಎನ್ನುವುದನ್ನು ಅರ್ಥಪೂರ್ಣವಾಗಿ ವಿವರಿಸಿ, ಓದುಗರನ್ನು ವೈಚಾರಿಕತೆಯತ್ತ ಕೊಂಡೊಯ್ದಿದ್ದಾರೆ.

-ಜಿ.ಶರಣಪ್ಪ, ಬೆಂಗಳೂರು.


ಕೊರೊನಾ ಕಲಿಸಿದ ಪಾಠ

ಸಮಾಜಮುಖಿ ಮನೆಗೆ ಬಂದರೆ ವಿಶ್ವಕೋಶವೇ ಮನೆಗೆ ಬಂದAತೆ ಅನ್ನಿಸುತ್ತದೆ. ಜೂನ್ ಸಂಚಿಕೆ ಓದುತ್ತಾ ಹೋದಂತೆ ಒಂದಕ್ಕಿಂತ ಒಂದು ಉತ್ತಮ ಲೇಖನಗಳು ತೆರೆದುಕೊಂಡವು.

ಪ್ರೊ.ಎನ್.ಬೋರಲಿಂಗಯ್ಯನವರ ಕೊರೊನಾ ಲೇಖನ ಓದುತ್ತಿದ್ದಂತೆ ಮಹಾಕವಿ ಕುವೆಂಪು ಅವರು ತಮ್ಮ ‘ನೆನಪಿನ ದೋಣಿಯಲ್ಲಿ’ ಹೇಳಿದ ‘ವಿಪತ್ತುಗಳು ವರವಾಗಿ ಪರಿಣಮಿಸುತ್ತವೆ’ ಎಂಬ ಮಾತು ನೆನಪಾಯಿತು. ಕಾರಣ ಮಾನವ ತನ್ನ ಅವಿವೇಕಗಳಿಂದ ಪ್ರಕೃತಿಯನ್ನು ವಿಕೃತಗೊಳಿಸಿ ನಾನಾ ರೀತಿಯ ಸಮಸ್ಯೆಗಳಿಗೆ ಒಳಗಾಗಿದ್ದಾನೆ. ಕೊರೊನಾ ಜನರಿಗೆ ಸಾಕಷ್ಟು ಜೀವನ ಪಾಠಗಳನ್ನು ಕಲಿಸಿರುವುದರಿಂದ ಬೋರಲಿಂಗಯ್ಯನವರು ಪ್ರಶ್ನಿಸಿರುವಂತೆ ಭಗವಂತ ಕೊರೊನಾ ಅವತಾರ ಏಕೆ ಎತ್ತಿರಬಾರದು? ಎಂಬುದು ಸಮಂಜಸವಾಗಿದೆ.

ಈ ಅನಂತ ಸುಂದರ ಭೂಮಿಯ ಮೇಲೆ ಪರಸ್ಪರ ಹೊಂದಿಕೊಂಡು ಸುಖ ಶಾಂತಿಯಿAದ ಬದುಕುವುದಕ್ಕೆ ಇಷ್ಟೊಂದು ಭೌತಿಕ ಸಂಪತ್ತು ಮತ್ತು ಯುಕ್ತವಲ್ಲದ ತಂತ್ರಜ್ಞಾನ ಬೇಕಾಗಿಲ್ಲವೆಂದು ಅವರು ತಿಳಿಸಿರುವುದು ಸರಿಯಾಗಿದೆ. ಬೋರಲಿಂಗಯ್ಯನವರದು ಸರಳ ಜೀವನ ಋಷಿಸದೃಶ ಬದುಕು. ಪ್ರಕೃತಿಯಲ್ಲಿ ನಿರಾಯಾಸವಾಗಿ ದೊರೆಯುವ ಪದಾರ್ಥಗಳನ್ನು ವಿಕೃತಗೊಳಿಸದೆ ಅವುಗಳನ್ನು ಯುಕ್ತವಾಗಿ ಬಳಸಿಕೊಂಡು ಅವರ 81ನೆಯ ವಯಸ್ಸಿನಲ್ಲಿಯೂ ಯಾವುದೇ ಮಾತ್ರೆ ಮದ್ದುಗಳನ್ನು ನುಂಗದೆ ಅತ್ಯುತ್ತಮ ಆರೋಗ್ಯ ಹೊಂದಿದ್ದಾರೆ. ಅವರ ‘ಜವನಕ್ಕ’, ‘ಕಡಿವಾಣ’ ಕಾದಂಬರಿಗಳನ್ನು ಓದಿದರೆ ಹೇಗೆ ನಾವೆಲ್ಲಾ ಉತ್ತಮ ಜೀವನ ಮಾಡಬಹುದು ಮತ್ತು ಪ್ರಕೃತಿ ಸಂಪನ್ಮೂಲಗಳ ನಿರಂತರ ಅಭಿವೃದ್ಧಿ ಕಾಣಬಹುದು ಎಂಬುದು ತಿಳಿಯುತ್ತದೆ.

-ಡಾ.ಎಂ.ಜಿ.ಬಸವರಾಜ, ಮೈಸೂರು.


ಆನ್‌ಲೈನೋ… ಮುಖಾಮುಖಿಯೋ?

“ನಾನು ಕವಿಯಾಗಿರಬಹುದು, ಲೇಖಕನಾಗಿರಬಹುದು, ವಿಮರ್ಶಕನಾಗಿರಬಹುದು, ಆದರೆ ತರಗತಿಯಲ್ಲಿ ಪಾಠ ಮಾಡಿ ಹೊರಬರುವಾಗ ನನಗೆ ಆಗುವ ಆನಂದ ಮೇಲಿನ ಯಾವುದರಿಂದಲೂ ಆಗುವುದಿಲ್ಲ” ಎಂದು ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರು ಒಂದು ಕಡೆ ಹೇಳಿದ್ದಾರೆ. “ದಾವಣಗೆರೆ ಕಾಲೇಜಿನಲ್ಲಿ ನಾನು ಓದುತ್ತಿರುವಾಗ್ಗೆ ಉಪನ್ಯಾಸಕರಾದ ಜಿ.ಎಸ್.ಶಿವರುದ್ರಪ್ಪ ಅವರ ಕನ್ನಡ ಪಾಠವನ್ನು ಕೇಳಿ ವಿಜ್ಞಾನ ವಿಭಾಗದಿಂದ ಕಲಾ ವಿಭಾಗಕ್ಕೆ ಬದಲಾಯಿಸಿಕೊಂಡೆ” ಎಂದು ಡಾ.ಎಂ.ಚಿದಾನAದಮೂರ್ತಿ ಹೇಳಿಕೊಂಡಿದ್ದಾರೆ. ಎ.ಪಿ.ಜೆ.ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಪದವಿಯಿಂದ ನಿವೃತ್ತಿಯಾದ ಅನಂತರ ತಮಿಳು ನಾಡಿನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ಪಾಠ ಮಾಡಲು ಪ್ರಾರಂಭಿಸುತ್ತಾರೆ. ಅವರ ತರಗತಿಯಲ್ಲಿ 60 ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ಆದರೆ ಕಲಾಂ ಅವರ ಪಾಠ ಕೇಳಲು ಸುಮಾರು 360 ವಿದ್ಯಾರ್ಥಿಗಳು ಸೇರುತ್ತಿದ್ದರಂತೆ.

ಡಾ.ಎಂ.ಎಂ.ಕಲ್ಬುರ್ಗಿಯವರು ‘ಕವಿರಾಜ ಮಾರ್ಗ’ದಲ್ಲಿ ಬರುವ ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ’ ಪದ್ಯ ಮಾಡುವಾಗ ‘ಅ ಗೋದಾವರಿ’ ಎಂಬುದರಲ್ಲಿನ ‘ಆ’ ಅಕ್ಷರವನ್ನು ಎಳೆದು ಹೇಳುತ್ತಿದ್ದಾಗ ವಿದ್ಯಾರ್ಥಿಗಳೆಲ್ಲ ಹಿಂದೆ ನೋಡುತ್ತಿದ್ದರಂತೆ. “ಶಿಕ್ಷಕರು ‘ಸೀತಾ ಪರಿತ್ಯಾಗ’ ಪದ್ಯ ಮಾಡುತ್ತಿದ್ದಾಗ ಇಡೀ ತರಗತಿಯ ವಿದ್ಯಾರ್ಥಿಗಳು ಅಳುತ್ತಿದ್ದುದುಂಟು” ಎಂದು ಗುರುರಾಜ ಕರಜಗಿಯವರು ಜ್ಞಾಪಿಸಿಕೊಳ್ಳುತ್ತಾರೆ. ಇಂಥ ಪವಾಡಗಳೆಲ್ಲ ನಡೆಯುವುದು ಮುಖಾಮುಖಿ ಶಿಕ್ಷಣದಲ್ಲಿ ಮಾತ್ರ. ಇಂಥ ಶಿಕ್ಷಣ ಕ್ರಮದ ಸವಿ ಉಂಡ ಅದೃಷ್ಟವಂತ ಪೀಳಿಗೆ ನಮ್ಮದು.

ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕನ್ನಡ ಪಾಠ ಮಾಡುವ ಉಪನ್ಯಾಸಕನಾದ ನಾನು, ತರಗತಿಯಲ್ಲಿ ಮಕ್ಕಳನ್ನು ನೋಡಿಕೊಂಡು ಪಾಠ ಮಾಡುವಾಗ ದೊರೆಯುವ ಸುಖಕ್ಕಾಗಿಯೇ ಕಾಲೇಜಿಗೆ ಹೋಗುತ್ತಿದ್ದೇನೆ. ಈ ಕಾರಣಕ್ಕಾಗಿಯೇ ನಾನು ಒಂದು ಸರ್ಕಾರಿ ಪ್ರೌಢ ಶಾಲೆಯಲ್ಲಿ 3 ವರ್ಷ ಉಚಿತವಾಗಿ ಕನ್ನಡ ಶಿಕ್ಷಕನಾಗಿ ಕೆಲಸ ಮಾಡಿರುತ್ತೇನೆ. ಆನ್‌ಲೈನ್ ವ್ಯವಸ್ಥೆಯಲ್ಲಿ ಮಕ್ಕಳೇ ಇಲ್ಲದೆ, ಕೇವಲ ಕಂಪ್ಯೂಟರ್ ಮುಂದೆ ಕುಳಿತು ಪಾಠ ಮಾಡುವ ಶಿಕ್ಷಕನ ಪಾಡನ್ನು ಊಹಿಸಿಕೊಳ್ಳಿ.

ತರಗತಿಯ ಪಾಠ ಕೇವಲ ಪಠ್ಯಕ್ಕೆ ಸೀಮಿತವಾಗಿರುವುದಿಲ್ಲ, ಸೀಮಿತವಾಗಿರಲೂ ಬಾರದು. ಪಾಠದ ಜೊತೆ ಪಠ್ಯೇತರ ಚಟುವಟಿಕಟಗಳು ವಿದ್ಯಾರ್ಥಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಈಗಿನ ಸಾಂಪ್ರದಾಯಕ ಶಿಕ್ಷಣವೇ “ಮಾರ್ಕ್”ವಾದಿ ಶಿಕ್ಷಣವಾಗುವ ಅಪಾಯವಿರುವಾಗ, ಇನ್ನು ಆನ್‌ಲೈನ್ ಶಿಕ್ಷಣದ ಗುಣ ಮಟ್ಟ ಮತ್ತೂ ಕುಸಿಯುತ್ತದೆಂಬುದರಲ್ಲಿ ಅನುಮಾನವಿಲ್ಲ. ಆನ್‌ಲೈನ್ ಕಲಿಕೆಯಲ್ಲಿ ಮಾಹಿತಿಯನ್ನು ಬಲವಂತವಾಗಿ ತುರುಕುವುದನ್ನು ಬಿಟ್ಟರೆ ನೈಜ ಕಲಿಕೆ ಇರುವುದಿಲ್ಲ. ಮುಖಾಮುಖಿ ಶಿಕ್ಷಣದಲ್ಲಿ ಶಿಕ್ಷಕನ ಕಣ್ಗಾವಲಿನಲ್ಲಿಯೇ ಓದದ ಮಕ್ಕಳು ಆನ್‌ಲೈನ್ ವ್ಯವಸ್ಥೆಯಲ್ಲಿ ಮೊಬೈಲ್‌ಗೋ, ಕಂಪ್ಯೂಟರ್‌ಗೋ ಹೆದರಿ ಓದುತ್ತಾರೆಂದು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ. ಸಾಂಪ್ರದಾಯಕ ಶಿಕ್ಷಣದಲ್ಲಿ ವಿದ್ಯಾರ್ಥಿಯು ಗುರುಗಳ ವ್ಯಕ್ತಿತ್ವದಿಂದ, ಅವರ ಪಾಠ-ಪ್ರವಚನಗಳಿಂದ, ಸ್ನೇಹಿತರಿಂದ, ಶಾಲೆಯ ವಾತಾವರಣದಿಂದ ಪ್ರಭಾವಿತನಾಗುತ್ತಾನೆ ಮತ್ತು ಜ್ಞಾನ ಸಂಪಾದನೆ ಮಾಡುತ್ತಾನೆ. ಈ ಅವಕಾಶಗಳು ಆನ್‌ಲೈನ್ ಶಿಕ್ಷಣದಲ್ಲಿ ಸಾಧ್ಯವಿಲ್ಲ.

ಆನ್‌ಲೈನ್ ಶಿಕ್ಷಣ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸುಲಿಗೆಯ ಮಾರ್ಗವಾಗುವ ಅಪಾಯವಿದೆ. ಕರೋನಾ ಕಾರಣದಿಂದ ತಾತ್ಕಾಲಿಕ ವ್ಯವಸ್ಥೆಯಾಗಿ ಜಾರಿಗೆ ಬರುವ ಈ ಕ್ರಮ ಶಾಶ್ವತವಾಗಿಬಿಟ್ಟರೆ, ಸದ್ಯದ ಅಸಮಾನ ಶಿಕ್ಷಣ ವ್ಯವಸ್ಥೆಗೆ ಇದು ಹೊಸ ಸೇರ್ಪಡೆಯಾಗುತ್ತದೆ. ಸಾಂಪ್ರದಾಯಕ ಶಿಕ್ಷಣ ವ್ಯವಸ್ಥೆಯಲ್ಲಿ, ಶಾಲಾ-ಕಾಲೇಜುಗಳಲ್ಲಿ ಇರುವ ಸಮಯದಲ್ಲಾದರೂ, ಮಕ್ಕಳು ಜಾತಿ, ಧರ್ಮ, ಭಾಷೆ, ಪ್ರದೇಶ, ಆರ್ಥಿಕ ಪರಿಸ್ಥಿತಿ ಮುಂತಾದ ಭಿನ್ನತೆಗಳನ್ನು ಮರೆತು ಸಹಪಾಠಿಗಳ ಜೊತೆ ಬೆರೆಯುವ ಅವಕಾಶವಿರುತ್ತದೆ ಮತ್ತು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳಬಹುದಾಗಿರುತ್ತದೆ. ಆದರೆ ಆನ್‌ಲೈನ್ ಶಿಕ್ಷಣ ಆ ಅವಕಾಶವನ್ನೂ ಕಿತ್ತುಕೊಳ್ಳುತ್ತದೆ. ಮುಖಾಮುಖಿ ಶಿಕ್ಷಣ ವಿದ್ಯಾರ್ಥಿಯಲ್ಲಿ ಮಾನವೀಯ ಜವಾಬ್ದಾರಿಯನ್ನೂ, ಸಾಮಾಜಿಕ ಕಾಳಜಿಯನ್ನೂ ಬೆಳೆಸುತ್ತದೆ. ಆದರೆ ಆನ್‌ಲೈನ್ ಶಿಕ್ಷಣ ಇದರ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುತ್ತದೆ.

ಬದಲಾವಣೆ ಜಗದ ನಿಯಮ. ಈ ಬದಲಾವಣೆಗೆ ಹೊಂದಿಕೊಳ್ಳುವ ಗುಣ ಮನುಷ್ಯನಲ್ಲಿ ಅಂತರ್ಗತವಾಗಿದೆ. ಆದರೆ ಬದಲಾವಣೆಗಳನ್ನು ಸಮಾಜ ತಕ್ಷಣ ಬಾಚಿ ತಬ್ಬಿಕೊಳ್ಳುವುದಿಲ್ಲ. 50 ವರ್ಷಗಳ ಹಿಂದೆ ಮಹಿಳೆಯರಿಗೆ ಶಿಕ್ಷಣದ ಅಗತ್ಯವಿಲ್ಲ ಎಂದು ಪ್ರತಿಪಾದಿಸಲಾಗುತ್ತಿತ್ತು. ಅನಂತರ ಇವೆಲ್ಲಕ್ಕೂ ಸಮಾಜ ಒಗ್ಗಿಕೊಂಡಿರುವುದು ತಿಳಿದ ಸಂಗತಿಯಾಗಿದೆ. ಹಾಗೆಯೇ ಆನ್‌ಲೈನ್ ಶಿಕ್ಷಣ ಕೂಡ. ಇಂದು ಅಗತ್ಯವಿಲ್ಲ ಎನಿಸಿರುವ ಆನ್‌ಲೈನ್ ಶಿಕ್ಷಣ ಮುಂದಿನ ದಿನಗಳಲ್ಲಿ ಅನಿವಾರ್ಯವಾಗಬಹುದು.

ಒಂದು ಹೊಸ ವ್ಯವಸ್ಥೆಯ ಸಾಧಕ-ಬಾಧಕಗಳು ಗೋಚರಿಸಲು ಕಾಲ ಪಕ್ವವಾಗಬೇಕು. ಈ ವ್ಯವಸ್ಥೆ ಇನ್ನೂ ಪ್ರಯೋಗದ ಹಂತದಲ್ಲಿದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಅದರಿಂದ ಈ ಹಂತದಲ್ಲಿ, ಆನ್‌ಲೈನ್ ಶಿಕ್ಷಣವನ್ನು ಸಾರಾಸಗಟಾಗಿ ವಿರೋಧಿಸುವುದಾಗಲೀ ಅಥವಾ ಶಿಕ್ಷಣದ ಎಲ್ಲ ಸಮಸ್ಯೆಗಳಿಗೆ ಇದು ಸಂಜೀವಿನಿ ಎಂದು ಭಾವಿಸುವುದಾಗಲೀ ಸರಿಯಲ್ಲ.

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು.


ಪಾರಂಪರಿಕ ಶಿಕ್ಷಣಕ್ಕೆ ಪೈಪೋಟಿ

ಪ್ಲೇಗ್, ಕಾಲರಾ, ಭೀಕರ ಬರಗಾಲದ ಕುರಿತು ನಮ್ಮ ಅಜ್ಜ-ಅಜ್ಜಿ ಹಾಗೂ ಅಪ್ಪ-ಅಮ್ಮರಿಂದ ಬರೀ ಕೇಳಿದ್ದ ನಮ್ಮ ಯುವಪೀಳಿಗೆಗೆ ಪ್ರತ್ಯಕ್ಷವಾಗಿ ಸಾಂಕ್ರಾಮಿಕದ ಅನುಭವ ನೀಡಿದ ಶ್ರೇಯ ಈ ಕೋವಿಡ್‌ಗೆ ಸಲ್ಲುತ್ತದೆ. ಭವಿಷ್ಯದ ಕುರಿತು ಮಾನವಕುಲ ಮತ್ತೊಮ್ಮೆ ಕೂಲಂಕಷವಾಗಿ ಯೋಚಿಸಿ ಹೆಜ್ಜೆಯಿಡಲು ಮೊಳಗಿದ ಎಚ್ಚರಿಕೆಯ ಘಂಟೆ ಎಂದೇ ಇದನ್ನು ನಾವು ಪರಿಗಣಿಸಬಹುದು.

ಕೋವಿಡ್‌ನ ಪರಿಣಾಮ ಎಲ್ಲರಿಗೂ ಒಂದೇ ರೀತಿಯಲ್ಲಿ ಆಗದೇ ಇರಬಹುದು. ಶ್ರೀಮಂತ ಕುಟುಂಬದವರು ಹಲವಾರು ತಿಂಗಳುಗಟ್ಟಲೇ ಸಾಕಾಗುವಷ್ಟು ದಾಸ್ತಾನು ಇಟ್ಟುಕೊಂಡು ಇದರ ವಿರುದ್ಧ ತಯಾರಿ ನಡೆಸಿದರೆ, ದಿನ ಕೂಲಿ ಮಾಡಿ ಬದುಕುವ ಬಡವರು ಪಟ್ಟ ಪಾಡು ಹೇಳತೀರದು. ನೂರಾರು ಕಿಲೋಮಿಟರ್‌ಗಟ್ಟಲೆ ದೂರವಿರುವ ಮನೆಗೆ ಮಗಳನ್ನು ಹೆಗಲ ಮೇಲೆ ಹೊತ್ತು ಕೊಂಡೊಯ್ಯುವ ಅಪ್ಪ, ಹಸುಳೆ ಕಂದಮ್ಮನಿಗೆ ಮೊಲೆಯೂಡಿಸುತ್ತಲೇ ತನ್ನ ಹಸಿವ ತಡೆದುಕೊಳ್ಳುವ ತಾಯಿ, ನೂರಾರು ಮುಖಗಳು, ನೂರಾರು ಕಥೆಗಳು.

ಇಂತಹ ಬಿಕ್ಕಟ್ಟಿನ ಸಮಯದಲ್ಲೇ ಸಮುದಾಯಗಳು ಪ್ರತಿಕ್ರಿಯಿಸುವ ರೀತಿಯಲ್ಲಿ ಮನದೊಳಗೆ ಹುದುಗಿದ ಹಲವಾರು ನಿಜರೂಪಗಳ ದರ್ಶನ ಆಗುತ್ತದೆ. ಅವುಗಳಲ್ಲಿ ಕೆಲವೊಂದು ಭವಿಷ್ಯದ ಬೆಳಕಾಗಿ ಗೋಚರಿಸುತ್ತವೆ. ಈ ಹೊತ್ತಿನಲ್ಲಿ ಹೊಸಬೆಳಕು ಬೀರಿದ ವ್ಯವಸ್ಥೆಗಳಲ್ಲಿ ಅಂತರ್ಜಾಲ ಶಿಕ್ಷಣ ಅಥವಾ ಆನ್‌ಲೈನ್ ಶಿಕ್ಷಣವೂ ಒಂದು. ಶಾಲಾ ಕಾಲೇಜುಗಳನ್ನು, ಕೋಚಿಂಗ್ ಕ್ಲಾಸ್‌ಗಳನ್ನು ಮುಚ್ಚಿದ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಮಧ್ಯದ ಸಂಪರ್ಕಸೇತುವೆಯಾಗಿ ಕಾರ್ಯನಿರ್ವಹಿಸಿದ ಅಗ್ಗಳಿಕೆ ಇದರದ್ದು.

ಕಲಿಕೆ ಮೂಲವಾಗಿ ಪಂಚೇಂದ್ರಿಯಗಳ ಮೂಲಕ ಗ್ರಹಿಸುವುದರಿಂದಾಗಿ ನಡೆಯುವುದಾದರೂ ನಮ್ಮ ಶಿಕ್ಷಣ-ವ್ಯವಸ್ಥೆಯ ಬಹುತೇಕ ಪಾಲು ಕಣ್ಣು ಮತ್ತು ಕಿವಿಯ ಮೂಲಕವಾಗಿ ಮೆದುಳನ್ನು ಮುಟ್ಟುವುದನ್ನು ನಾವು ಗಮನಿಸುತ್ತೇವೆ. ಆನ್‌ಲೈನ್ ಶಿಕ್ಷಣದಲ್ಲಿ ಈ ಎರಡೂ ಗುಣಗಳನ್ನು ಉನ್ನತ ಮಟ್ಟದ ವಿಶುವಲ್ಸ್ ಮತ್ತು ಆಡಿಯೋ ಮೂಲಕವಾಗಿ ವಿದ್ಯಾರ್ಥಿಗಳಿಗೆ ಮುಟ್ಟಿಸಬಹುದು. ಅದಲ್ಲದೇ, ಕೆಲ ವೃತ್ತಿಪರ ಶಿಕ್ಷಣಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರದಲ್ಲಿ ಪ್ರತಿಷ್ಠಿತ ವಿದ್ಯಾಲಯಗಳಲ್ಲಿ ಕಂತೆಗಟ್ಟಲೇ ದುಡ್ಡುಸುರಿದು ಕೊಳ್ಳಬೇಕಾದ ಕೋರ್ಸ್ಗಳು ಕೂಡ ಕೈಬೆರಳಿನಂಚಿನಲ್ಲಿ ಉಚಿತವಾಗಿ ಅಥವಾ ಕಡಿಮೆ ಬೆಲೆಯಲ್ಲಿ ಎಟುಕುವುದು ಇದರ ಪ್ರಯೋಜನಗಳಲ್ಲೊಂದು. ಜೊತೆಜೊತೆಗೆ ತಮಗೆ ಇಷ್ಟವಾಗುವ ಅಧ್ಯಾಪಕರನ್ನು ವಿದ್ಯಾರ್ಥಿಗಳೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೂಡ ಇಲ್ಲಿದೆ.

ಬಡವ ಬಲ್ಲಿದರೆನ್ನದೇ ಎಲ್ಲರಿಗೂ ಒಂದೇ ರೀತಿಯಾದ, ಮುಕ್ತವಾದ ಶಿಕ್ಷಣದ ಕಾಲಘಟ್ಟಕ್ಕೆ ಹತ್ತಿರವಾಗುತ್ತಿದ್ದೇವೆಂದು ಭಾಸವಾಗುವ ಹೊತ್ತಿನಲ್ಲೇ, ಕೆಲ ಆನ್‌ಲೈನ್ ಶಿಕ್ಷಣ ಸಂಸ್ಥೆಗಳು ಬಂಡವಾಳಶಾಹಿತ್ವದ ಕಾರ್ಪೋರೇಟ್ ರೂಪವನ್ನು ಪಡೆಯುತ್ತಿರುವುದನ್ನು ನಾವು ಕಾಣಬಹುದು. ಅದೇ ರೀತಿಯಲ್ಲಿ ಮೊಬೈಲ್ ನೆಟ್‌ವರ್ಕ್ ಇರದೇ ಆನ್‌ಲೈನ್ ಶಿಕ್ಷಣವೆಂಬ ಕನ್ನಡಿಯ ಗಂಟನ್ನು ನೋಡುತ್ತಾ ಕುಳಿತಿರಬೇಕಾದ ಗ್ರಾಮೀಣ ಪ್ರತಿಭೆಗಳ ಹತಾಶೆಯನ್ನು ಕೂಡ ಕಾಣಬಹುದು. ಇಂತಹ ಪ್ರತಿಕೂಲತೆಯನ್ನು ಹೊಂದಿದ್ದರೂ ಆನ್‌ಲೈನ್ ಶಿಕ್ಷಣವು ಮುಂದಿನ ದಿನಗಳಲ್ಲಿ ಪಾರಂಪರಿಕ ಶಿಕ್ಷಣ ವ್ಯವಸ್ಥೆಗೆ ಬಲವಾದ ಪೈಪೋಟಿ ನೀಡುವುದನ್ನು ಅಲ್ಲಗಳೆಯಲಾಗುವುದಿಲ್ಲ.

-ಅಜೀತ್‌ಕುಮಾರ ಪ. ಮಡಿವಾಳ, ಬೆಂಗಳೂರು.


ಕೊರೊನಾ ಗಾದೆಗಳು

  • ಹಗ್ಗಿಂಗ್ ನಿಂದ ಅನಾಹುತ, ಬಗ್ಗಿಂಗ್ ನಿಂದ ಆಶೀರ್ವಾದ.
  • ಅಪ್ಪಿಕೊಂಡರೆ ನೀ ಕಳಿಸವೆ ಆಸ್ಪತ್ರೆಗೆ, ಕೈಮುಗಿದರೆ ನಾ ಕರೆದೊಯ್ಯುವೆ ಮನೆಗೆ.
  • ಕೈಕುಲುಕಿದರೆ ವೈರಸ್ ಗೆ ಬಾ ಬಾ ಎಂದAತೆ, ಕೈ ಮುಗಿದರೆ ವೈರಸ್ ಗೆ ಬೈ ಬೈ ಹೇಳಿದಂತೆ.
  • ನೀ ಸಕಾರಾತ್ಮಕವಾದರೆ ಸ್ಮಶಾನದತ್ತ ಪಯಣ, ನೀ ನಕಾರಾತ್ಮಕವಾದರೆ ಮನೆಯತ್ತ ಪಯಣ.

 -ಬಸವರಾಜ ಹುಡೇದಗಡ್ಡಿ, ಬೆಂಗಳೂರು.


ಕೊರೊನಾ ಜತೆಗಿರಲಿ!

ಕೊರೊನಾ ಬರಲಿ ಜತೆಗಿರಲಿ

ಆದರ ಅವಾಂತರದ ಅರಿವಿರಲಿ

ಜೀವ ಭಯ ಎಲ್ಲರಲ್ಲಿರಲಿ

ಲಾಕ್ ಡೌನ್ ಸಂಕಷ್ಟದ ನೆನಪಿರಲಿ

ನಮ್ಮೆಚ್ಚರ ನಮಗಿರಲಿ

ಪಾಲಿಸುವ ಗುಣವಿರಲಿ

ಯಾರಿಗೂ ಸೋಂಕು ತಟ್ಟದಿರಲಿ

ಯಾರೂ ಅದರ ತೆಕ್ಕೆಗೆ ಬೀಳದಿರಲಿ

ಜಗದ್ರಕ್ಷಕನ ದಯೆ ಜತೆಗಿರಲಿ

ದಿನನಿತ್ಯದ ಜೀವನ ಸಾಗಲಿ.

-ಸಲವಮ್ಮನಹಳ್ಳಿ ಸಿದ್ಧೇಶಗೌಡ, ಇಂಗ್ಲೆAಡ್.


‘ಬಿರಿಯಾನಿ’ ನಾಯಕಿ ಸಾಧಿಸಿದ್ದೇನು?

ಪ್ರೇಮಕುಮಾರ್ ಹರಿಯಬ್ಬೆ ಅವರು “ಬಿರಿಯಾನಿ” ಚಿತ್ರವನ್ನು ವಿಸ್ತöÈತವಾಗಿ ಚಿತ್ರಿಸಿದ್ದಾರೆ. ಮೆಚ್ಚುಗೆಯಾದ ಲೇಖನ. ಕಥಾನಾಯಕಿ ಖದೀಜಾ; ಸಿನಿಮಾದ ಕೊನೆಯಲ್ಲಿ ಅವಳ ಆತ್ಮಹತ್ಯೆಯ ಘಟನೆ ನಮ್ಮನ್ನ ವಿಷಾದಪೂರ್ಣ ಮನಸ್ಸಿನಿಂದ ಥಿಯೇಟರ್ನಿಂದ ಹೊರದಬ್ಬುತ್ತದೆ. ಚಿತ್ರದ ಆರಂಭ ಮತ್ತು ಕೊನೆಯಲ್ಲಿ ತೋರಿಸುವ ಅನಾವಶ್ಯಕ ಸಂಭೋಗದ ಹಾಗೂ ವಯಸ್ಸಾದ ಮಸೀದಿಯ ಮೇಲ್ವಿಚಾರಕನ ಹಸ್ತಮೈಥುನದ ದೃಶ್ಯಗಳು ಮನಸ್ಸಿಗೆ ಕಿರಿಕಿರಿ ಉಂಟು ಮಾಡುತ್ತವೆ.

ಪೊಲೀಸರು, ತನ್ನ ಗಂಡ ಇನ್ನಿತರರು ಕೊಟ್ಟ ಹಿಂಸೆಗಿAತ, ಬಿರಿಯಾನಿಯಲ್ಲಿ ಖದೀಜಾ ತನ್ನದೇ ಕೊಳೆತ ಭ್ರೂಣ ಹಾಗೂ ಮಲವನ್ನ ಬೆರೆಸುವ ದೃಶ್ಯವಂತೂ ಅತ್ಯಂತ ಹೇಸಿಗೆ ತರುವುದರ ಜೊತೆಗೆ ಅವಳು ಸಾಧಿಸಿದ್ದಾದರೂ ಏನು ಎನ್ನುವ ಪ್ರಶ್ನೆ ಬೃಹದಾಕಾರವಾಗಿ ನಿಲ್ಲುತ್ತೆ. ಇದಕ್ಕೆ ಉತ್ತರ ನಿರ್ದೇಶಕ ಸಾಜಿನ್ ಬಾಬು ಅವರ ಹತ್ತಿರವೂ ಇರಲಿಲ್ಲ.

ರೋಮ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಚಿತ್ರವಾದ್ದರಿಂದ, ನಾವು ಕೊಡದಿದ್ದರೆ ಹೇಗೆ ಎಂದು ಬೆಂಗಳೂರಿನ ಚಿತ್ರೋತ್ಸವದಲ್ಲಿ ನಮ್ಮ ಜೂರಿ ಬೃಹಸ್ಪತಿಗಳು ಪ್ರಶಸ್ತಿ ಕೊಡಮಾಡಿ ತಮ್ಮ ಬೆನ್ನನ್ನು ತಟ್ಟಿ ಕೊಂಡಿದ್ದಾರೆ.

-ನಾಗಭೂಷಣ ನಾಗಳ್ಳಿ, ಶಕ್ತಿನಗರ.

Leave a Reply

Your email address will not be published.