ಅನಿಸಿಕೆಗಳು

ವಲಸಿಗರಿಗೆ ನಗರವೇ ಗತಿ

ಪ್ರೊ.ಎಂ.ಎಸ್.ಶ್ರೀರಾಮ್ ಅವರು ವಲಸೆ ಕಾರ್ಮಿಕರ ಸಮಸ್ಯೆಗಳ ಕುರಿತು ಬರೆದಿರುವ ಲೇಖನ ಇಷ್ಟವಾಯಿತು. ಲೇಖಕರು ‘ಸಾಮಾಜಿಕ ಸುರಕ್ಷತೆ’ಯ ಮೇಲೆ ಹೆಚ್ಚು ಒತ್ತು ನೀಡಿದ್ದಾರೆ. ಹಳ್ಳಿಗಳಿಂದ ನಗರಗಳಿಗೆ ಅಥವಾ ನಗರಗಳಿಂದ ಹಳ್ಳಿಗಳಿಗೆ ಕಾರ್ಮಿಕರು ವಲಸೆ ಹೋಗುವುದಕ್ಕೆ ಈ ‘ಸಾಮಾಜಿಕ ಸುರಕ್ಷತೆ’ಯ ಪಾತ್ರ ದೊಡ್ಡದು ಎಂದು ಹೇಳಿದ್ದಾರೆ. ಮುಂದುವರಿದು ‘ಗ್ರಾಮೀಣ ಪ್ರದೇಶದಲ್ಲಿ ಊಟವಿಲ್ಲದಿದ್ದರೂ, ಬಡತನವಿದ್ದರೂ, ಸಾಮಾಜಿಕವಾಗಿ ಜನ ತಮ್ಮನ್ನು ನೋಡಿಕೊಳ್ಳುತ್ತಾರೆ ಎನ್ನುವ ಭರವಸೆಯಿಂದ ಜನ ಸ್ವಂತ ಊರುಗಳಿಗೆ ಮರಳುತ್ತಾರೆ’ ಎಂದು ಗುರುತಿಸಿದ್ದಾರೆ.

ಆದರೆ ಈ ‘ಸಾಮಾಜಿಕ ಭರವಸೆ’ ಕೇವಲ ಮೂರು ದಿನದ್ದು ಮಾತ್ರ. ಕಾರಣ ನಾವು ವಾಸ ಮಾಡುತ್ತಿರುವುದು ಸ್ವಾರ್ಥಪೂರಿತವಾದ ಸಮಾಜದಲ್ಲಿ. ಹಂಚಿ ಉಣ್ಣುವ ಸಮಾಜದಲ್ಲಿ ಅಲ್ಲ. ಜೊತೆಗೆ ಈ ಕಾರ್ಮಿಕರ ಬಂಧು-ಬಳಗ ಶ್ರೀಮಂತರಾಗಿರುವುದಿಲ್ಲ. ಅದರಿಂದ ಬಂಧು-ಬಳಗದ ಸಹಾಯ, ಸಾಂತ್ವನ ನಿರೀಕ್ಷಿಸಿ ಹೋದ ಕಾರ್ಮಿಕರಿಗೆ ಭ್ರಮನಿರಸನವಾಗುವುದು ಗ್ಯಾರಂಟಿ.

ಹಳ್ಳಿಗಳಲ್ಲಿ ಕೃಷಿ ಹೊರತುಪಡಿಸಿ, ಬೇರೆ ಯಾವುದೇ ರೀತಿಯ ಜೀವನ ನಿರ್ವಹಣೆಯ ಮಾರ್ಗಗಳಿಲ್ಲ. ಕೃಷಿ ಕೆಲಸ ಎಲ್ಲಾ ಕಾಲದಲ್ಲೂ, ಎಲ್ಲರಿಗೂ ಕೆಲಸ ಕೊಡುವುದಿಲ್ಲ ಮತ್ತು ಅದು ಲಾಭದಾಯಕವೂ ಅಲ್ಲ. ಅದರಿಂದ ಸ್ವಂತ ಊರುಗಳಿಗೆ ಹೋಗಿರುವ ಕಾರ್ಮಿಕರು, ಕೊರೊನಾ ಅಲೆ ತಗ್ಗಿದ ಮೇಲೆ ನಗರಗಳಿಗೆ ಮರಳುವುದು ತೀರಾ ಅನಿವಾರ್ಯ, ಬೇರೆ ಆಯ್ಕೆಯೇ ಇಲ್ಲ. ಈ ಗುಟ್ಟು ನಗರದ ಖಾಸಗಿ ಉದ್ಯೋಗದಾತರಿಗೆ ಗೊತ್ತಿರುವುದರಿಂದ, ಕಾರ್ಮಿಕರು ನಗರ ತೊರೆದು ಸ್ವಂತ ಹಳ್ಳಿಗಳಿಗೆ ಹೊರಟಾಗ ಅವರನ್ನು ತಡೆಯುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಒಟ್ಟಿನಲ್ಲಿ  ಪ್ರೊ.ಶ್ರೀರಾಮ್ ಅವರ ಲೇಖನ ವಲಸೆ ಕಾರ್ಮಿಕರ ಕುರಿತು ಯೋಚಿಸುವುದಕ್ಕೆ ಪ್ರೇರೇಪಿಸಿತು.

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು.


ಜ್ಞಾನ ದಾಸೋಹ

ನಿಮ್ಮ ಪತ್ರಿಕೆ ಸತ್ವಪರೀಕ್ಷೆಯ ಕಾಲದಲ್ಲೂ ಅತ್ಯಂತ ಸಮರ್ಥವಾಗಿ ಪ್ರಸ್ತುತ ವಿಷಯಗಳು ಮತ್ತು ವಿದ್ಯಮಾನಗಳನ್ನು ಕುರಿತು ಓದುಗರಿಗೆ ಅರ್ಥಪೂರ್ಣ ಜ್ಞಾನದಾಸೋಹ ನೀಡುತ್ತಿರುವುದಕ್ಕೆ ಅಭಿನಂದನೆಗಳು. ಪತ್ರಿಕೆಯ ವಾರ್ಷಿಕ ಚಂದಾ ಬಾಬ್ತು ರೂ.500 ಚೆಕ್ ಮೂಲಕ ಕಳುಹಿಸಿಕೊಡುತ್ತಿದ್ದೇನೆ. ಪ್ರಸ್ತುತ ಸಂದರ್ಭದಲ್ಲಿ ಬದಲಾದ ಆರ್ಥಿಕತೆ ಮತ್ತು ರಾಜಕಾರಣಗಳಿಂದ ಭಾರತದ ಬಹುತ್ವ ಸಂಸ್ಕೃತಿಗೆ ಅಪಾರ ಧಕ್ಕೆ ಉಂಟಾಗುತ್ತಿರುವ ಕಾರಣ ಮುಂದಿನ ಸಂಚಿಕೆಯಲ್ಲಿ ಈ ವಿಷಯವನ್ನು ಕುರಿತು ಮುಖ್ಯಚರ್ಚೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಅವಶ್ಯಕ ಬರಹಗಳು/ವಿಶ್ಲೇಷಣೆಗಳನ್ನು ಪ್ರಕಟಿಸಬೇಕೆಂದು ಕೋರುತ್ತೇನೆ.

ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು, ಮೈಸೂರು.


ಹೊಸ ಸೀರೆಯ ಮಡಿಕೆ

ಜುಲೈ ಸಂಚಿಕೆ ಕೋವಿಡ್-19 ಆಕ್ರಮಣದ ಸಂಕಟದ ಬಂಡೆಗಳನ್ನು ಪಕ್ಕಕ್ಕೆ ತಳ್ಳಿ ಮೈತುಂಬಿ ಹರಿವ ಹೊಳೆಯಂತೆ ಚಿಂತನ ವೈವಿಧ್ಯದ ತೆರೆ ಹೊಮ್ಮಿಸುತ್ತ ಕೈಸೇರಿದೆ. ಕೊರೊನಾ ಸಾಂಕ್ರಾಮಿಕ ರೋಗವು ಜಗತ್ತನ್ನಾವರಿಸಿದ್ದರಿಂದ ಉಂಟಾದ ಭಯಗ್ರಸ್ತ ವಾತಾವರಣದಲ್ಲೂ ಪತ್ರಿಕೆಯ ಕಳೆಗುಂದದ ಒಳಹೂರಣ, ಮುಖಪುಟ ಹಾಗೂ ಆಂತರಿಕ ವಿನ್ಯಾಸಗಳಿಂದಾಗಿ ಅಚ್ಚರಿ ಮೂಡಿಸಿವೆ. ಸಂಪಾದಕ ಮಂಡಳಿ, ಕೈ ಹಿಡಿದ ಸ್ನೇಹಿತರ ಧೈರ್ಯ, ಸ್ಥೈರ್ಯಗಳಿಗಾಗಿ ಓದುಗ ಬಳಗದ ಪರವಾಗಿ ಅಭಿನಂದಿಸುತ್ತೇನೆ.

ಪತ್ರಿಕೆ ಕೈಸೇರಿದ ಪ್ರತಿ ಸಲವೂ ಒಳಪುಟಗಳನ್ನು ಒಂದು ಹೊಸ ಸೀರೆಯ ಮಡಿಕೆ ಬಿಚ್ಚಿ ಅವಲೋಕಿಸುವಂತೆ ಕಣ್ಣಾಡಿಸುತ್ತೇನೆ. ನಂತರ ಕಣ್ಣಿಟ್ಟು ನೋಡುವುದು ಸೆರಗಿನಲ್ಲಿಯ ಸೊಬಗನ್ನು. ಅದರಂತೆಯೇ ಸಂಸ್ಕೃತಿ ಸಂಪದ ವಿಭಾಗದಲ್ಲಿಯ ಲೇಖನಗಳನ್ನು ಮೊದಲ ಓದಿಗೆ ಅಣಿಗೊಳಿಸಿಕೊಳ್ಳುತ್ತೇನೆ.

ಹಳಗನ್ನಡ, ಪ್ರಬಂಧ, ನಮ್ಮೂರು, ವಿಡಂಬನೆ, ಸಿನೆಮಾ, ನನ್ನಕ್ಲಿಕ್ ಮತ್ತು ಕವಿತೆ ಇವೆಲ್ಲವೂ ಬಾಳೆಯ ಎಲೆಯ ಮೇಲೆ ಬಡಿಸಿಟ್ಟ ವೈವಿದ್ಯಮಯ, ವರ್ಣಮಯ ಭೋಜನ ಸಾಮಗ್ರಿಯಂತೆ ಭಾಸವಾದವು. ಸಂಸ್ಕೃತಿ ಸಂಪದ ವಿಭಾಗವು ನನಗೆ ಯಾವಾಗಲೂ ಉಪ್ಪಿನಕಾಯಿಯಂತೆ ಇರುತ್ತದೆ. ವೈಚಾರಿಕತೆಯ ಊಟವು ನನ್ನಂಥವರಿಗೆ ಪಚನಕ್ಕೆ ತುಸು ಜಡವೆ!

ಡಾ.ಅನ್ನಪೂರ್ಣ ಎನ್.ಎಸ್. ಅವರು ಪರಿಚಯಿಸಿದ ಕೇಶಿರಾಜನ “ಶಬ್ದಮಣಿ ದರ್ಪಣ”ವನ್ನು ಆಸಕ್ತ ವಿದ್ಯಾರ್ಥಿನಿಯಂತೆ ಏಕಾಗ್ರತೆಯಿಂದ ಓದಿಕೊಂಡೆ. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಲ್ಲದವರಿಗೆ ಹಳಗನ್ನಡ ಗ್ರಂಥಪರಿಚಯವು ತುಂಬ ಪ್ರಯೋಜನಕಾರಿ.

ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಾಮನನ ಪಾದವು ಆಕ್ರಮಿಸಿದಂತೆ ರಬ್ಬರ್ ಪ್ಲಾಂಟೇಶನ್ನಿನ ಯೋಜನೆ ಕಾಲಿರಿಸಿದ್ದನ್ನು ಕಥನ ರೂಪದಲ್ಲಿ ಲೇಖಕರು ನೋವಿನಿಂದಲೇ ನಿರೂಪಿಸುತ್ತಾರೆ. ದಟ್ಟವಾಗಿ ಬೆಳೆದ ಅರಣ್ಯಗಳನ್ನು ಕೊಚ್ಚಿಹಾಕಿ ರಬ್ಬರ ಗಿಡಗಳನ್ನು ಬೆಳೆಸಿದ್ದು ದುಡ್ಡಿದ್ದವರ ಹುನ್ನಾರವೇ! ತಮಿಳು ಕೂಲಿಯಾಳುಗಳ ಒಂದು ದಂಡೇ ಒಳಹೊಕ್ಕು ಕನ್ನಡಿಗರ ತಟ್ಟೆಯಲ್ಲಿಯ ಅನ್ನವನ್ನು ದೋಚಿದ್ದು ಹೊಸ ವೃತ್ತಾಂತವೇನಲ್ಲ. ಲೇಖಕರು ಕಣ್ಣಾರೆ ಕಂಡ ವಾಸ್ತವದ ಸಂಗತಿಗಳ ಚಿತ್ರಣವು ಮನದಲ್ಲಿ ಅಚ್ಚೊತ್ತಿ ನಿಲ್ಲುತದೆ.

ನಟಸಾರ್ವಭೌಮ ಡಾ.ಗುಬ್ಬಿ ವೀರಣ್ಣನವರು ತುಮಕೂರು ಜಿಲ್ಲೆಯಲ್ಲಿ ಒಂದು ಕಾಲಕ್ಕೆ ನಾಟಕದ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಆಡುಗರಿಲ್ಲದೆ, ನೋಡುಗರಿಲ್ಲದೆ ರಂಗಕಲೆಯು ಮೂಲೆಗುಂಪಾದ ಇಂದಿನ ಪರಿಸ್ಥಿತಿಯಿಂದಾಗಿ ಪಸರಿಸಿದ ವಿಷಣ್ಣ ಭಾವವನ್ನು ನಿವೇದಿತಾ ನಿವೇದಿಸಿದ್ದಾರೆ.

ಖ್ಯಾತನಾಮರಾದ ಪ್ರೊ.ಕೃಷ್ಣೇಗೌಡರು ಮಹಿಷಪುರಿ ಎಂಬ ನಾಮಧ್ಯೇಯವು ಹಳೆಯ ಮೈಸೂರಿಗೆ ಹೇಗೆ ಬಂತು ಎಂದು ವಿವರಿಸಿದ್ದಾರೆ. ‘ಮೊದಲು ಹೆಚ್ಚಾಗಿ ಎಮ್ಮೆಗಳನ್ನೇ ಸಾಕಿಕೊಂಡಿದ್ದರು ಮೈಸೂರಿಗರು. ಆದರೀಗ ಮೈಸೂರು ವಿಶ್ವವಿದ್ಯಾಲಯವು ಲಕ್ಷೋಪಲಕ್ಷ ಎಮ್ಮೆಗಳನ್ನು ಸಲುಹಿ ಹೊರಗಟ್ಟುತ್ತಿದ್ದಾರೆ’ ಎಂಬ ವಿಡಂಬನೆ ನನ್ನನ್ನು ನಗೆಗಡಲಲ್ಲಿ ತೇಲಿಸಿದೆ.

ಸಿನೆಮಾದ ಆಕರ್ಷಣೆ ಜಗದ್ ವ್ಯಾಪಿ. ಯುವಕ, ಯುವತಿಯರು ನಟನಟಿಯರಾಗುವ ಕನಸು ಕಂಡು ಬೆನ್ನು ಹತ್ತಿ ಸೋತು ಹುಟ್ಟೂರಿಗೆ ಮರಳುವ ದುರಂತ ಕತೆಗಳು ಅನೇಕ. ಇಂಥವರ ಗುಂಪಿಗೆ ಪವನ್‌ಕುಮಾರ ಸೇರುವುದಿಲ್ಲ. ತಮ್ಮ ಅನುಭವದ ಆಧಾರದ ಮೇಲೆ ಸಿನೆಮಾ ಕಲಿಕೆಯ ಪಾಠಗಳನ್ನು ಸಿದ್ಧಪಡಿಸಿ ಯುಟ್ಯೂಬಿನಲ್ಲಿ ಸಿನೆಮಾ ಶಾಲೆಯನ್ನು ಪ್ರಾರಂಭಿಸಿದ್ದು ಒಂದು ಅದ್ಭುತ ಸಂಗತಿ. ಚಿತ್ರರಂಗದಲ್ಲಿ ದುಡಿಯುವ ಸಾಮಾನ್ಯ ಕೆಲಸಗಾರರಿಗೆ ಇವರು ಫಂಡನ್ನು ನಿರ್ಮಿಸಿ ಉಪಕರಿಸಿದ್ದಾರೆ. ಒಬ್ಬ ಯುವ ಕಲಾಕಾರನ ಪರಿಚಯವು ಪತ್ರಿಕೆಯಲ್ಲಿ ಮೂಡಿ ಬಂದದ್ದು ಸುಸಂಗತವಾಗಿದೆ.

ಹಾಸನದ ಡಾ.ವಿನೊದಕುಮಾರರ ಮೂರು ಫೋಟೋಗಳು ಮೂರು ಕವಿತೆಗಳಂತೆ ಮನಸ್ಸನ್ನು ತಣಿಸಿದವು. ಪಾಯಸದಲ್ಲಿಯ ಗೋಡಂಬಿಯಂತೆ ನಾಡಿನ ಸುಪ್ರಸಿದ್ಧ ಕವಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ ಮತ್ತು ಡಾ.ಎಚ್.ಎಸ್.ಶಿವಪ್ರಕಾಶರ ಎರಡು ಕವಿತೆಗಳು ನನ್ನ ಅಪೇಕ್ಷಿತ ಗೆರೆ ಮುಟ್ಟಲಿಲ್ಲ.

ಸಂಸ್ಕೃತಿ ಸಂಪದಕ್ಕೆ ಒಂದು ಪೇಜಿನ ಜೋಡಣೆಯು ಹೊರೆಯಾಗದು. ವರ್ತಮಾನದ ಕರ್ನಾಟಕದಲ್ಲಿ ಮೌನವಾಗಿದ್ದುಕೊಂಡು ತೆರೆಯ ಮರೆಯಲ್ಲಿ ಅದ್ಭುತ ಸೇವೆ ಸಲ್ಲಿಸುತ್ತಿರುವ ಅಪರಿಚಿತರ ಪರಿಚಯವು ನನ್ನಂಥ ಅನೇಕ ಓದುಗರಲ್ಲಿ ಧನ್ಯತಾಭಾವವನ್ನು ಮೂಡಿಸಬಲ್ಲದು.

ಮಾಲತಿ ಪಟ್ಟಣಶೆಟ್ಟಿ, ಧಾರವಾಡ.


ವೈವಿಧ್ಯಮಯ

ನೀವು ವಿಶ್ವಾಸವಿಟ್ಟು ಕಳುಹಿಸಿದ ಜುಲೈ ತಿಂಗಳ ‘ಸಮಾಜಮುಖಿ’ ಪತ್ರಿಕೆ ಇವತ್ತು ಬಂದಿತು. ಓದುತ್ತಿದ್ದೇನೆ. ವಸ್ತು ವಿಷಯಗಳು ವೈವಿಧ್ಯಮಯವಾಗಿ ವಿಶಿಷ್ಟವಾಗಿವೆ. ವಿನ್ಯಾಸ ಮುದ್ರಣ ಅಚ್ಚುಕಟ್ಟಾಗಿದೆ. ನೀವು ಕೋರಿದ ಲೇಖನವನ್ನು ನನ್ನ ಬರಹದ ಇತರ ಕೆಲಸಗಳಿಂದಾಗಿ ಬರೆಯಲು ಸಾಧ್ಯ ಆಗಲಿಲ್ಲ. ಪತ್ರಿಕೆಗೆ ಚಂದಾಹಣವನ್ನು ಪ್ರತ್ಯೇಕವಾಗಿ ಕಳುಹಿಸುತ್ತೇನೆ.

ಬಿ.ಎ.ವಿವೇಕ ರೈ, ಮಂಗಳೂರು.


ಬದಲಾವಣೆ ನಿರೀಕ್ಷಿಸಲು ಸಾಧ್ಯವೆ?

ಉತ್ತಮ ಸಂದೇಶ ಸಾರುವ ಸಂಪಾದಕೀಯ. ಅದರಲ್ಲೂ ಅತ್ತೆಯಾಗಿ ಅನ್ಯ ಜಾತಿಯ ಸೊಸೆಯನ್ನು ಮುಕ್ತ ಮನಸ್ಸಿನಿಂದ ಒಪ್ಪುವ ವೈದ್ಯೆಯ ನಿದರ್ಶನ ಜಡ್ಡುಗಟ್ಟಿದ ಸಮಾಜದಲ್ಲೊಂದು ಭರವಸೆಯ ಮಿಣುಕು ಬೆಳಕು. ಆಶಿಸೋಣ ಮನಸ್ಸುಗಳು ತುಡಿಯುತ್ತಿರಲಿ ಬೆಳಕಿನತ್ತ ಹೀಗೆಯೇ ಎಂದು.

ಎಲ್ಲದಕ್ಕೂ ನಾವು ವ್ಯವಸ್ಥೆಯನ್ನು ದೂರಿ ಉಪಯೋಗವಿಲ್ಲ. ಮೌಲ್ಯರಹಿತ ಮತದಾನದ ಪದ್ಧತಿಯು ಪ್ರಭುಗಳಾಗಬೇಕಿದ್ದ ಪ್ರಜೆಗಳನ್ನು ಚುನಾವಣೆ ಎಂಬ ಸಂತೆಯಲ್ಲಿ ಸರಕುಗಳಂತೆ ಖರೀದಿಸುತ್ತಿರುವ ಕಳವಳಕಾರಿ ಸಂಗತಿಯು ಯಾರ ಮನಸ್ಸನ್ನೂ ಮುಟ್ಟುತ್ತಿಲ್ಲ. ವಿದ್ಯಾವಂತರು ಎಂದು ಹೇಳಿಕೊಳ್ಳುವ ಜನರೆ ಜಾತಿ ಮತ ಧರ್ಮಗಳಿಗೆ ಕಟ್ಟುಬಿದ್ದು ತಮ್ಮ ಬುದ್ಧಿಯನ್ನು ರಾಜಕೀಯ ಪಕ್ಷಕ್ಕೋ, ವ್ಯಕ್ತಿಗೋ ‘ಒತ್ತೆ ಇಟ್ಟಿರುವಾಗ’ ಮುಗ್ಧ ಜನಸಾಮಾನ್ಯರಿಂದ ಬದಲಾವಣೆ ನಿರೀಕ್ಷಿಸಲು ಸಾಧ್ಯವೆ?

ರಾಜಕಾರಣ ಎನ್ನುವುದು ಷೇರು ಮಾರುಕಟ್ಟೆಯಾಗಿ ಒಂದು ಹೂಡಿ ಹತ್ತನ್ನು ತೆಗೆಯುವ ದಂಧೆಯಾಗಿರುವಾಗ ಮತ್ತು ಅನರ್ಹರು, ಅಯೋಗ್ಯರೇ ರಾಜಕಾರಣದಲ್ಲಿ ವಿಜೃಂಭಿಸುತ್ತಿರುವಾಗ ನಾವು ವ್ಯವಸ್ಥೆಯ ಸುಧಾರಣೆಗಾಗಿ ಹಂಬಲಿಸುವುದು ‘ಮೊಲದ ಕೋಡನ್ನು ಕಂಡಂತೆಯೆ!’ ಆದರೇನು ಮಾಡುವುದು ನಮ್ಮ ಹಿರಿಯರು ಮಾಡಿದ ಕೆಲವು ‘ಉದಾರ ನಿರ್ಧಾರಗಳ ಫಲ’ವನ್ನು ನಾವು ಅನುಭವಿಸಬೇಕಿದೆ ಪ್ರಜಾಪ್ರಭುತ್ವ ಭಾರತದಲ್ಲಿ.

ಮುಕ್ಕಣ್ಣ ಕರಿಗಾರ, ಯಾದಗಿರಿ.


ಚಂದಾ ಕಳಿಸುವೆ

ಸಮಾಜಮುಖಿ ತುಂಬ ಚೆನ್ನಾಗಿ ಬರುತ್ತಿದೆ. ನಿಮ್ಮದು ನಿಜಕ್ಕೂ ಸಾಹಸ. ಆದಷ್ಟು ಬೇಗ ಚಂದಾ ಕಳಿಸುವೆ; ಲೇಖನಗಳನ್ನೂ ಬರೆಯುವೆ.

ಎಸ್.ದಿವಾಕರ್, ಬೆಂಗಳೂರು.

 


ಉತ್ತರ ಸಿಕ್ಕಿತು

ಸಾಲಿಗ್ರಾಮ ಶಿಲೆಯಲ್ಲಿ ಅಡಕವಾಗಿರುವ ಮೃದ್ವಂಗಿಗಳ ಪಳೆಯುಳಿಕೆ ಕಂಡು ಸೋಜಿಗ ಪಟ್ಟಿದ್ದೆ. ಜುಲಾಯಿ 2020ರ ಸಮಾಜಮುಖಿಯಲ್ಲಿ ಪ್ರಕಟವಾದ ಪ್ರಣಯ ಲಾಲ್ ಅವರ ‘ಇಂಡಿಕಾ: ಎ ಡೀಪ್ ನ್ಯಾಚರಲ್ ಹಿಸ್ಟರಿ ಆಫ್ ದಿ ಇಂಡಿಯನ್ ಸಬ್ ಕಾಂಟಿನೆಂಟ್’ ಓದಿ ಉತ್ತರ ಪಡೆದೆ. ಉತ್ತಮ ಬರಹ.

ಇಂದಿರಾ ಹೆಗ್ಗಡೆ, ಬೆಂಗಳೂರು.

 

ಸಮಾಜಮುಖಿ consistently ತನ್ನ ಗುಣಮಟ್ಟ ಕಾಯ್ದಿಟ್ಟುಕೊಳ್ಳುತ್ತಿದೆ. ಇದು ಸುಲಭವಲ್ಲ! ಇದು ಅಚ್ಚರಿ, ಖುಷಿ, ಸಮಾಧಾನ, ಹೆಮ್ಮೆ ಎಲ್ಲವೂ ಒಟ್ಟಿಗೇ ಆಗುತ್ತಿರುವ ಭಾವ.

ಕರ್ಕಿ ಕೃಷ್ಣಮೂರ್ತಿ, ಬೆಂಗಳೂರು.


ಕಾವ್ಯ ಸ್ಪರ್ಧೆಗೆ ಹಸ್ತಪ್ರತಿ ಆಹ್ವಾನ

‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯು ‘ಚಿ.ಶ್ರೀನಿವಾಸರಾಜು ಕಾವ್ಯ ಸ್ಪರ್ಧೆ-2020’ ಆಯೋಜಿಸಿದ್ದು, ಹಸ್ತಪ್ರತಿ ಆಹ್ವಾನಿಸಿದೆ. 40 ವರ್ಷದೊಳಗಿನ ಕವಿಗಳು ಡಿಟಿಪಿ ಮಾಡಿದ ಹಸ್ತಪ್ರತಿ ಕಳುಹಿಸಬಹುದು. ಹೆಸರು ಮತ್ತು ವಿಳಾಸ ಪ್ರತ್ಯೇಕ ಪುಟದಲ್ಲಿರಲಿ. ತೀರ್ಪುಗಾರರಿಂದ ಆಯ್ಕೆಯಾದ ಕವನ ಸಂಕಲನವನ್ನು ‘ಸಂಗಾತ ಪುಸ್ತಕ’ವು ಚಿ.ಶ್ರೀನಿವಾಸರಾಜು ಅವರು ಗೆಳೆಯರೊಂದಿಗೆ ಆರಂಭಿಸಿದ್ದ ಪಿ.ಪಿ.ಗೆಳೆಯರ ಬಳಗದ ಸಹಯೋಗದಲ್ಲಿ ಪ್ರಕಟಿಸಲಿದೆ.

ಜಿ.ಪಿ.ರಾಜರತ್ನಂ ಜನ್ಮದಿನವಾದ ಡಿಸೆಂಬರ್ 5 ರಂದು ಕೃತಿ ಲೋಕಾರ್ಪಣೆ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. ಹಸ್ತಪ್ರತಿ ಕಳಿಸಲು ಆಗಸ್ಟ್ 25 ಕೊನೆಯ ದಿನಾಂಕವಾಗಿದ್ದು, ಟಿ.ಎಸ್.ಗೊರವರ, ಸಂಪಾದಕರು, ಸಂಗಾತ ಪತ್ರಿಕೆ, ಕೆಯುಡಿ ರಸ್ತೆ, ಜಯನಗರ ಕ್ರಾಸ್, ಸಪ್ತಾಪುರ, ಧಾರವಾಡ-580001, ಮೊ: 9341757653 ಈ ವಿಳಾಸಕ್ಕೆ ಆಸಕ್ತರು ಹಸ್ತಪ್ರತಿ ಕಳುಹಿಸಬಹುದು.

Leave a Reply

Your email address will not be published.