ಅನಿಸಿಕೆಗಳು

ನೇರ ಸತ್ಯ ಬರಹ

ಕಿ.ರಂ.ನಾಗರಾಜ್ ಅವರ ‘ಮತ್ತೆ ಮತ್ತೆ ಬೇಂದ್ರೆ’ ಕೃತಿಯನ್ನು ಎನ್.ಬೋರಲಿಂಗಯ್ಯ ಅವರು ವಿಮರ್ಶಿಸಿರುವ ರೀತಿ (ಪುಸ್ತಕ ಪ್ರಪಂಚ) ಅಧ್ಯಯನಶೀಲ ನಡೆಯಾಗಿದೆ. ‘ಒಲು’ ಪ್ರತ್ಯಯದಿಂದ ‘ಒಲುಮೆ’ ಎಂಬ ನಾಮಪದ ಮೂಡಿಸಿಕೊಳ್ಳುತ್ತಿರುವುದು ಆಶಾಸ್ತ್ರೀಯವಾಗಿದೆ ಎಂಬ ಎನ್.ಬೋರಲಿಂಗಯ್ಯ ಅವರ ಮಾತನ್ನು ಅರಿತು ಬೇಂದ್ರೆಕಾವ್ಯದ ಪದಪದದ ಆಂತರ್ಯ ಮಿಡಿಯಬೇಕು.

‘ಸಾಹಿತ್ಯ ಚರ್ಚೆ’ಯಲ್ಲಿ ವಸಂತ ಬನ್ನಾಡಿ ಅವರ ‘ಅಡಿಗ ಮತ್ತು ಅನಂತಮೂರ್ತಿ ಹಬ್ಬಿಸಿದ ಸಾಂಸ್ಕೃತಿಕ ಮಂಪರು’ ಲೇಖನ ಬೇಂದ್ರೆ ನುಡಿಯಂತೆ ‘ಉರಿಯ ನಾಲಗೆ’ಯಿಂದ ನಿಜವನ್ನು ತಣ್ಣನೆ ಹೇಳಿದೆ. ಇಂತಹ ಸ್ಪಷ್ಟ ನೇರ ಸತ್ಯ ಬರಹ ಮಾತ್ರ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು.

ಇನ್ನು, ಮುಖಪುಟದಲ್ಲಿ ‘ಅನ್ನದ ಭಾಷೆಯ ಚಿನದ ಮಾಸಿಕ’ ಎಂದಾಗಿದೆ. ಅದನ್ನು ‘ಚಿನ್ನದ’ ಎಂದು ಸರಿಪಡಿಸಿ. ಮುಂದಿನ ಮೂರು ವರ್ಷದ ಚಂದಾ ರೂ.1400 ಬ್ಯಾಂಕ್ ಮೂಲಕ ಕಳುಹಿಸುವೆ.

-ಡಾ.ಜಿ.ಕೃಷ್ಣಪ್ಪ, ಬೆಂಗಳೂರು.

ವಿಮರ್ಶಾ ವಾತಾವರಣ ಸೃಷ್ಟಿಸಿ

ಆಗಸ್ಟ್ ತಿಂಗಳ ಸಂಚಿಕೆಯಲ್ಲಿ ನೀವು ಪ್ರಕಟಿಸಿದ ಎರಡು ಲೇಖನಗಳು, ಬೇಂದ್ರೆ ಹಾಗೂ ಅಡಿಗ, ಅನಂತಮೂರ್ತಿಯವರ ಕುರಿತದ್ದು ಬಹಳ ಮೆಚ್ಚಿಗೆಯಾಯಿತು. ಇದು ವಸ್ತುನಿಷ್ಠ ವಿಮರ್ಶೆ ಮತ್ತು ಅನುಭವದ ಸಾಕ್ಷಿಯಾಧಾರಗಳಿಂದ ಕೂಡಿದ್ದು, ಹಾಗೂ ಸೂಕ್ಷ್ಮ ವಿಶ್ಲೇಷಣೆಯಿಂದಾಗಿ ಓದುಗರೂ ಸಕ್ರಿಯವಾಗಿ ಪಾಲ್ಗೊಳ್ಳಲು ಸಹಾಯವಾಗಿರುವುದು. ಸಮಾಜಮುಖಿ ಈ ರೀತಿಯ ಕ್ರಿಯೆಯನ್ನು ನಿರಂತರವಾಗಿ ಮಾಡಿ ಕನ್ನಡ ಸಾಹಿತ್ಯವನ್ನು ಕೀರ್ತಿ ಸಾಹಿತ್ಯದಿಂದ ಬೇರ್ಪಡಿಸಿ ಶ್ರೀಮಂತಗೊಳಿಸುವ ಕರ‍್ಯ ಮಾಡಲಿ ಎಂದು ಆಶಿಸುತ್ತೇನೆ. ಈ ದೆಸೆಯಲ್ಲಿ ನೀವು ಒಂದು ಇಡೀ ಅಂಕಣವನ್ನೇ ಆಗಲಿ ವೇದಿಕೆಯನ್ನಾಗಲಿ ಯೋಜಿಸಿ ‘ಪುನರ್ಮಾಪನ’ ಎಂದು ಹೆಸರಿಟ್ಟು ನಮ್ಮ ಅನೇಕ ಕೃತಿಗಳು, ಲೇಖಕರನ್ನು ವಿಮರ್ಶೆಯ ಮೂಸೆಯಲ್ಲಿಟ್ಟು ಒಂದು ನವ ಚೈತನ್ಯದ ವಿಮರ್ಶಾ ವಾತಾವರಣ ಸೃಷ್ಟಿ ಮಾಡಬಹುದು. ಆಗಲೇ ಸಾಹಿತ್ಯ ಪತ್ರಿಕೆಗಳ ಗುರುತರವಾದ ಜವಾಬ್ದಾರಿಯನ್ನು ಪೂರೈಸಲು ಅನುವಾಗುವುದು.

-ಸಿ.ಎನ್.ಶ್ರಿನಾಥ್, ಮೈಸೂರು.

ಅಶುದ್ಧಿಯ ಗರ್ಭದಿಂದ…

ಸಮಾಜಮುಖಿಯ ಸಾಹಿತ್ಯ ಚರ್ಚೆಯಲ್ಲಿ ವಸಂತ ಬನ್ನಾಡಿಯವರ “ಅಡಿಗ ಮತ್ತು ಅನಂತಮೂರ್ತಿ ಹಬ್ಬಿಸಿದ ಸಾಂಸ್ಕೃತಿಕ ಮಂಪರು” ಓದಿದೆ. ಬಹುದಿನಗಳ ನಂತರ ಅಪರೂಪದ ಲೇಖನ ಓದಿದಂತಾಯಿತು. ಏಕಮುಖಿಯಾಗಿರುವ ಕನ್ನಡ ಸಾಹಿತ್ಯಕ್ಕೆ, ಚಿಂತನಶೀಲ ಸಮಾಜಕ್ಕೆ ಇಂತಹ ಚರ್ಚೆಗಳು ಆರೋಗ್ಯಕರ. ಹೊಸ ಬರಹಗಾರರು ಮೀರಬೇಕಾಗಿರುವ ಆಮಿಷಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. ಕ್ರಾಂತಿ, ಚಳವಳಿಗಳೂ ಮುಗ್ಗರಿಸಿದುದರ ಅಥವಾ ಸಾಹಿತ್ಯಕ್ಕೆ ಸೀಮಿತಗೊಂಡ ಬುದ್ಧಿಜೀವಿಗಳ ಕಾಯಿಲೆಗಳಿಗೆ ಔಷಧಿಯಂತಿದೆ ಲೇಖನ.

ಒಟ್ಟಾರೆ ಅಡಿಗ, ಅನಂತಮೂರ್ತಿಗಳ ಅನಂತಬಣಗಳಿಗೆ ಲೇಖನ ಕಹಿಯಾದರೂ ಹಾಗಲಕಾಯಿ ಪಲ್ಯದಂತೆ ಅವರ ಆರೋಗ್ಯಕ್ಕೂ ಒಳ್ಳೆಯದೇ ಆಗುತ್ತದೆ. ಕಥೆ, ಕಾವ್ಯ, ಕಾದಂಬರಿಗಳಾಗಲೀ ಅಥವಾ ಸಾಹಿತ್ಯದ ಯಾವುದೇ ಪ್ರಕಾರಗಳೇ ಆಗಲಿ, ಅವು ಅಶುದ್ಧಿಯ ಗರ್ಭದಿಂದ ಹುಟ್ಟಿ, ಶುದ್ಧತೆಯೆಡೆಗೆ ಚಲಿಸಬೇಕು ಎಂಬುದನ್ನು ಮತ್ತೆ ಮತ್ತೆ ನೆನಪಿಸುವಂತೆ ಬರೆದ ಬನ್ನಾಡಿಯವರಿಗೆ, ಸಮಾಜಮುಖಿ ಬಳಗಕ್ಕೆ ಧನ್ಯವಾದ.

-ಬಿ.ಶ್ರೀನಿವಾಸ, ರಾಣೆಬೆನ್ನೂರು.

ಮೌಲ್ಯಯುತ ಮತ್ತು ಸಕಾಲಿಕ

ಪ್ರಸ್ತುತ ಭಾರತ-ಚೀನಾ ಗಡಿ ಸಂಘರ್ಷದ ಪ್ರಕ್ಷುಬ್ದ ವಾತಾವರಣದ ಸಂದರ್ಭದಲ್ಲಿ, ಪಾಕಿಸ್ತಾನ ಮತ್ತು ಚೀನಾದೊಂದಿಗೆ ಭಾರತದ ಶಾಂತಿ-ಮೈತ್ರಿ ಬೆಳೆಸಲು ಶ್ರಮಿಸುತ್ತಿರುವ, “ಫೋರಂ ಫಾರ್ ಎ ನ್ಯೂ ಸೌತ್ ಏಶಿಯಾ” ಸಂಸ್ಥೆಯ ಸ್ಥಾಪಕರೂ, ಮಾಜಿ ಪ್ರಧಾನಿ ಅಟಲ್‌ಬಿಹಾರಿಯವರ ನಿಕಟವರ್ತಿಯೂ ಆದ ಸುಧೀಂದ್ರ ಕುಲಕರ್ಣಿಯವರ “ಸಂಧಾನವೆಂದರೆ ಶರಣಾಗತಿಯಲ್ಲ” ಎಂಬ ಲೇಖನ ಅತ್ಯಂತ ಉತ್ಕೃಷ್ಟವೂ, ಉಪಯುಕ್ತವೂ ಆಗಿದೆ.

ಇಂದಿನ ರಾಜಕೀಯ ನಾಯಕರಿಗೆ ತಮ್ಮ ಉದ್ರೇಕಕಾರಿ ಭಾಷಣಗಳ ಮೂಲಕ ಜನರ ಭಾವನೆಗಳನ್ನು ಕೆರಳಿಸುವುದು, ನೆರೆಯ ರಾಷ್ಟ್ರಗಳೊಂದಿಗೆ ದ್ವೇಷ ಪ್ರಚೋದಿಸುವುದು ಗೊತ್ತು. ಆದರೆ ಅವರಿಗೆ ಬೇಕಿರುವುದು ಸಮಸ್ಯೆಯ ಮೂಲಕ್ಕಿಳಿದು ಅದನ್ನು ಪರಿಹರಿಸುವ ಛಾತಿ, ಮುತ್ಸದ್ದಿತನ, ಮುಂಗಾಣ್ಕೆ.

ಭಾರತ-ಚೀನಾದ ಇತ್ತೀಚಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ, ಆ ಸಂಘರ್ಷದ ಹಿಂದಿನ ಪೂರ್ವಚರಿತ್ರೆಯನ್ನು ಲೇಖಕರು ನಿರ್ಭಾವುಕರಾಗಿ, ವಸ್ತುನಿಷ್ಠವಾಗಿ ವಿವರಿಸಿದ್ದಾರೆ. ಯಾವ ದೇಶದ ಪರವೂ ಇಲ್ಲ, ಯಾವ ದೇಶದ ವಿರುದ್ಧವೂ ಇಲ್ಲ. ಆದರೆ ಅವರು ಶಾಂತಿಯ ಪರವಾಗಿದ್ದಾರೆ, ಸಹಬಾಳ್ವೆಯ ಪರವಾಗಿದ್ದಾರೆ ಹಾಗೂ ಅಹಿಂಸೆಯ ಪರವಾಗಿದ್ದಾರೆ.

ಚೀನಾದೊಂದಿಗಿನ ಗಡಿ ಸಮಸ್ಯೆ ಪರಿಹರಿಸಿಕೊಳ್ಳುವ ಸದವಕಾಶ 1964ರಲ್ಲಿ, ನೆಹರೂ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಒದಗಿ ಬಂದಿತ್ತು. ಆದರೆ ಪ್ರಧಾನಿ ನೆಹರೂ ಅವರ ಗಟ್ಟಿತನದ ಕೊರತೆಯಿಂದ ಅದು ಕೈ ತಪ್ಪಿ ಹೋಗಿ, 1962ರಲ್ಲಿ ಯುದ್ಧಕ್ಕೆ ದಾರಿಯಾಗಿದ್ದಕ್ಕೆ ಲೇಖಕರು ಅಲವತ್ತುಕೊಳ್ಳುತ್ತಾರೆ. ಎರಡನೇ ಬಾರಿ, 1979ರಲ್ಲಿ, ಪ್ರಧಾನಿ ಮೊರಾರ್ಜಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಹಿರಿಯ ಮುತ್ಸದ್ದಿ, ಚಾಣಾಕ್ಷ ರಾಜತಾಂತ್ರಿಕ ಅಟಲ್‌ಬಿಹಾರಿಯವರ ಗಡಿ ಸಮಸ್ಯೆಯ ಪರಿಹಾರ ಪ್ರಯತ್ನವು ಫಲ ಕೊಡುವಷ್ಟರಲ್ಲಿ, ಮೊರಾರ್ಜಿ ಸರ್ಕಾರ ಕುಸಿಯುವುದರೊಂದಿಗೆ ಆ ಪ್ರಯತ್ನವೂ ವಿಫಲವಾಯಿತು. ಮೂರನೇ ಬಾರಿ, 1983ರಲ್ಲಿ, ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ, ಗಡಿ ಸಮಸ್ಯೆಯ ಪರಿಹಾರಾರ್ಥ ಅವರು 1985ರಲ್ಲಿ, ಚೀನಾಕ್ಕೆ ಭೇಟಿ ಕೊಡುವ ಕಾರ್ಯಕ್ರಮವಿತ್ತು. ಆದರೆ 1984ರಲ್ಲಿ ಇಂದಿರಾಗಾಂಧಿಯವರ ಹತ್ಯೆಯಿಂದಾಗಿ ಆ ಅವಕಾಶವೂ ತಪ್ಪಿ ಹೋಯಿತು. ಇಂಥ ಬಹಳ ಮುಖ್ಯ ವಿಷಯಗಳ ಮೇಲೆ ಲೇಖಕರು ತಮ್ಮ ಲೇಖನದಲ್ಲಿ ಬೆಳಕು ಚೆಲ್ಲಿದ್ದಾರೆ.

ಹೀಗೆ ಭಾರತ-ಚೀನಾ ಗಡಿ ವಿವಾದ ಜೀವಂತವಾಗಿರುವುದರ ಫಲವನ್ನು ಇಂದಿನ ಪೀಳಿಗೆ ಉಣ್ಣುವಂತಾಗಿದೆ. 2020 ಜೂನ್ 15ರ ತಡರಾತ್ರಿ, ಗಾಲ್ವನ್ ಕಣಿವೆಯ ವಾಸ್ತವ ಗಡಿರೇಖೆಯ ಬಳಿ ಭಾರತ-ಚೀನಾ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ಭಾರತೀಯ ಸೇನೆಯ ತುಕಡಿಯೊಂದರ ಕಮಾಂಡಿಂಗ್ ಅಧಿಕಾರಿ ಸೇರಿ 20 ಯೋಧರು ಮೃತಪಟ್ಟಿದ್ದಾರೆ. ಹಾಗೆಯೇ ಈ ಸಂಘರ್ಷದಲ್ಲಿ ಚೀನಾದ ಹಿರಿಯ ಅಧಿಕಾರಿ ಸೇರಿ 35 ಸೈನಿಕರು ಮೃತಪಟ್ಟಿದ್ದಾರೆ ಎಂದು ಅಮೆರಿಕಾದ ಗುಪ್ತಚರ ಮಾಹಿತಿಯನ್ನು ಆಧರಿಸಿ ಅಲ್ಲಿನ ಪತ್ರಿಕೆಗಳು ವರದಿ ಮಾಡಿವೆ. ಜೂನ್ 22ರ ಪತ್ರಿಕಾ ವರದಿಯ ಪ್ರಕಾರ, 3500 ಕಿ.ಮೀ. ಗಡಿಯುದ್ದಕ್ಕೂ ಭಾರತೀಯ ಸೈನಿಕರು ನಿಯೋಜಿಸಲ್ಪಟ್ಟರೆ, ಜೂನ್ 25ರ ಪತ್ರಿಕಾ ವರದಿಯ ಪ್ರಕಾರ, ಗಾಲ್ವಾನ್ ಕಣಿವೆಯ ಉತ್ತರಕ್ಕಿರುವ ದೆಪ್ಸಾಂಗ್ ಪ್ರದೇಶ ಮತ್ತು ಪಂಗಾಂಗ್ ಸರೋವರದ ದಂಡೆಯಲ್ಲಿಯೂ ಚೀನಾದ ಸೈನಿಕರು ಭಾರಿ ಸಂಖ್ಯೆಯಲ್ಲಿ ಬೀಡುಬಿಟ್ಟಿದ್ದಾರೆ.

ಇಂಥ ಜ್ವಲಂತ ಸಮಸ್ಯೆಗೆ ಪರಿಹಾರಾರ್ಥವಾಗಿ ಲೇಖಕರು “ಇಂದಿನ ಐತಿಹಾಸಿಕ ಅಗತ್ಯವೆಂದರೆ ಚೀನಾ- ಭಾರತದ ಮೂಲ ರಾಷ್ಟ್ರೀಯ ಹಿತಗಳನ್ನು ಗೌರವಿಸಬೇಕು ಹಾಗೂ ಭಾರತ-ಚೀನಾದ ರಾಷ್ಟ್ರೀಯ ಹಿತಗಳನ್ನು ಗೌರವಿಸಬೇಕು” ಎಂದು ಅಭಿಪ್ರಾಯಪಡುತ್ತಾರೆ. ಜೊತೆಗೆ ಲೇಖನದ ಕೊನೆಯಲ್ಲಿ ಮಹಾತ್ಮಾ ಗಾಂಧಿಯವರ 1942ರಲ್ಲಿ ಬರೆದ ಒಂದು ಸೂಕ್ತಿಯನ್ನು ಉದ್ಧರಿಸುವುದರ ಮೂಲಕ, ಗಡಿ ಸಮಸ್ಯೆಗೆ ಲೇಖಕರು ಅಹಿಂಸಾತ್ಮಕ ಮುಕ್ತಾಯ ಹೇಳುತ್ತಾರೆ.

ಈ ಲೇಖನ ನನಗೆ ಬಹಳ ಮೆಚ್ಚಿಗೆಯಾಯಿತು. ಇಂಥ ಮೌಲ್ಯಯುತ ಮತ್ತು ಸಕಾಲಿಕ ಲೇಖನ ಬರೆದ ಲೇಖಕರಿಗೂ ಹಾಗೂ ಅದನ್ನು ಪ್ರಕಟಿಸಿದ ‘ಸಮಾಜಮಖಿ’ ಬಳಗಕ್ಕೂ ನನ್ನ ಪ್ರೀತಿಪೂರ್ವಕ ನಮನಗಳು.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು.

ಸೂಕ್ತ ಸ್ಥಳಾವಕಾಶ

ಆಗಸ್ಟ್ ಸಂಚಿಕೆ ಈಗ ತಾನೇ ಕೈಸೇರಿದೆ. ಕುತೂಹಲದಿಂದ ಪುಟಗಳನ್ನು ತಿರುವಿದೆ. ನಮ್ಮ ಸಮಕಾಲೀನ ಸಮಾಜ ಮತ್ತು ದೇಶದ ವಿದ್ಯಮಾನಗಳಿಗೆ ಮಿಡಿಯುವ ವೈವಿಧ್ಯಮಯ ಬರೆಹಗಳು, ಕವಿತೆ, ಫೋಟೋಗಳಿಗಾಗಿ ಮೀಸಲಾದ ಅಂಕಣ… ಎಲ್ಲವುಗಳಿಗೂ ಸೂಕ್ತ ಸ್ಥಳಾವಕಾಶ ಕಲ್ಪಿಸಿದ್ದೀರಿ. ಎಲ್ಲಕ್ಕೂ ಮೊದಲು ಅಂದವಾದ ಮುದ್ರಣ, ವಿನ್ಯಾಸ ಗಮನ ಸೆಳೆದವು. ಕನ್ನಡದ ಸಾಂಸ್ಕೃತಿಕ-ವೈಚಾರಿಕ ಪತ್ರಿಕೆಯೊಂದು ಇಷ್ಟೊಂದು ಸೊಗಸಾಗಿ ಬಂದಿರುವುದನ್ನು ಕಂಡು ಸಂತೋಷವಾಯಿತು. ನನ್ನ ಚಂದಾ ಹಣವನ್ನು ಚೆಕ್ ಮೂಲಕ ಕಳುಹಿಸಿದ್ದೇನೆ.

-ಜಿ.ವಿ.ಆನಂದಮೂರ್ತಿ, ತುಮಕೂರು.

ಖಡಕ್ಕಾಗಿದೆ ಸಂಪಾದಕೀಯ

‘ನೀಚ ನಾಲಿಗೆಗಳು ರುಚಿಯಿದ್ದಲ್ಲಿಗೆ ನಿರಾಯಾಸ ಚಲಿಸಿ ಚಪ್ಪರಿಸುವ’ ಪ್ರವೃತ್ತಿಯನ್ನು ಸರಿಯಾಗಿ ಎತ್ತಿ ಹೇಳಿದ್ದೀರಿ. ಅನ್ಲಾಕ್ ಆಗುತ್ತಿರುವುದು ಮಕಾಡೆ ಬಿದ್ದ ಆರ್ಥಿಕ ರಂಗವಲ್ಲ, ಇವರ 2024ರ ಚುನಾವಣೆಯ ಬಾವುಟಗಳು ಅಷ್ಟೆ. ರಾಮಮಂದಿರದ ಶಂಖನಾದ, ಯುದ್ಧವಿಮಾನಗಳ ಗದ್ದಲದಲ್ಲಿ ಕೋವಿಡ್ ಸಂತ್ರಸ್ತರ ಆಕ್ರಂದನಗಳು ಮುಚ್ಚಿಹೋಗಲಿವೆ.

-ನಾಗೇಶ ಹೆಗಡೆ, ಬೆಂಗಳೂರು.

ನಿಮ್ಮ ಮಾತುಗಳು ಬಹಳ ಸರಿಯಾಗಿವೆ. ಇಂತಹ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ವಿರೋಧಪಕ್ಷ ಅಂತ ಇರುವುದಿಲ್ಲ. ಎಲ್ಲವೂ ಶೋಷಕ ಪಕ್ಷಗಳೇ.

-ಎಚ್.ಎಸ್.ರಾಘವೇಂದ್ರರಾವ್, ಬೆಂಗಳೂರು.

ಸಂಪಾದಕೀಯ ಪ್ರಸ್ತುತ ಕೊರೋನಾದ ಸಂದಿಗ್ಧ ಪರಿಸ್ಥಿತಿಯನ್ನು ಅರ್ಥಪೂರ್ಣವಾಗಿ ಬಿಂಬಿಸಿದೆ. ಅಸಮರ್ಥ ಆಡಳಿತ ವ್ಯವಸ್ಥೆ, ವಿರೋಧ ಪಕ್ಷದ ದ್ವಂದ್ವ ನಿಲುವುಗಳು, ಜನಸಾಮಾನ್ಯರ ಸ್ವಾರ್ಥ, ದುರಾಸೆ ಸಮಗ್ರವಾಗಿ ಎಲ್ಲಾ ಚಿತ್ರಣಗಳನ್ನು ತಾವು ಉಲ್ಲೇಖಿಸಿದ್ದೀರಿ.

-ಡಾ.ಮಹಾಂತೇಶ ಚರಂತಿಮಠ, ಬೆಳಗಾವಿ.

ವೀರೇಂದ್ರ ಪಾಟೀಲ ಮತ್ತು ರಾಜಶೇಖರಮೂರ್ತಿ ಅವರ ಆಡಳಿತ ವ್ಯವಸ್ಥೆಯನ್ನು ನಾನು ತುಂಬಾ ಮೆಚ್ಚಿಕೊಂಡಿರುತ್ತೇನೆ.

-ಎಂ.ಸಿ.ಚಿಕ್ಕಣ್ಣ, ಮೈಸೂರು.

ಸಮಾಜಮುಖಿ ಇದೀಗ ತಲ್ಪಿದೆ. ಚಂದಾ ಸದ್ಯದಲ್ಲಿ ಕಳಿಸುವೆ. ಚೆಂದ ಮತ್ತು ಅರ್ಥಪೂರ್ಣ ಸಂಚಿಕೆ. ನಿಜಕ್ಕೂ ನಿರೀಕ್ಷಿಸುತ್ತಿದ್ದ ಕನಸಿನ ಪತ್ರಿಕೆ ಕೈಗೆಟುಕಿದಂತಾಯಿತು. ಪತ್ರಿಕಾ ತಂಡಕ್ಕೆ ಅಭಿನಂದನೆ.

-ವಿಜಯಕಾಂತ ಪಾಟೀಲ, ಹಾನಗಲ್.

ಸಾವು ಕೇವಲ ಸಂಖ್ಯೆಯಲ್ಲ!

ಮೋದಿ ಬೇಕಾ ಮನಮೋಹನ್ ಸಿಂಗ್ ಬೇಕಾ ಎಂದು ಕೇಳಿ, ಒಂದನ್ನು ಒತ್ತಿ ಎರಡನ್ನು ಒತ್ತಿ ಎನ್ನುತ್ತಾ, ಮುಂದಿನ ಪ್ರಧಾನಿ ಯಾರೆಂಬ ದೊಡ್ಡ ಸಮೀಕ್ಷೆಯನ್ನು ಸರಳವಾಗಿ ಸದ್ದಿಲ್ಲದೇ ನಡೆಸಿ ನಿಂತ ಗಳಿಗೆಯಲ್ಲಿಯೇ ಮುಂದಿನ ಪ್ರಧಾನಿ ಯಾರೆಂದು ನಿಖರವಾಗಿ ಸಾರುತ್ತವೆ ಆಪ್‌ಗಳು. ಆದರೆ ಕೇವಲ ಒಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳು ಉಳಿದಿವೆ, ಕೋವಿಡೇತರ ರೋಗಿಗಳು ಯಾವ ಆಸ್ಪತ್ರೆಯನ್ನು ಎಡತಾಕಬೇಕು ಎಂಬ ವಿವರ ಒದಗಿಸುವುದನ್ನು ಏಕೆ ನಿರಾಕರಿಸುತ್ತಿವೆ? ಪ್ರಮಾದಗಳನ್ನು ತಡೆಯಲಾಗದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕೊರೊನಾದಿಂದ ದಿಢೀರನೆ ವ್ಯಕ್ತಿಯನ್ನು ಕಳೆದುಕೊಂಡ ದುಃಖ, ಮುಂದೇನು ಎಂದು ದಿಕ್ಕುತೋರದೆ ಚಿಂತೆಗೊಳಗಾದ ಕುಟುಂಬಸ್ಥರಿಗೆ, ಕೊನೆಯಪಕ್ಷ ಮೃತರ “ಮರ್ಯಾದಾ ಶವಸಂಸ್ಕಾರ”ದ ಭರವಸೆ ನೀಡುವಲ್ಲಿ ವ್ಯವಸ್ಥೆ ವಿಫಲವಾಯಿತು.

ಸಾರ್ವಜನಿಕರಾದ ನಾವು ಅರಿತಿರಲೇಬೇಕಾದ ವಿಷಯವೆಂದರೆ ಯಾವುದೇ ಪಕ್ಷವಾಗಲಿ ಪ್ರಜಾಪ್ರಭುತ್ವದಲ್ಲಿ ಹಲವರು ಆಶಿಸಿದಂತೆ ಆಳಲು ಬರುವ ಜನನಾಯಕರ ಪ್ರಭುತ್ವವನ್ನೇ, ಆಯ್ಕೆ ಮಾಡದವರು ಸಹಾ ಒಪ್ಪಿಕೊಳ್ಳಬೇಕಾಗುತ್ತದೆ. ನಾವು ಆರಿಸಿದ ವ್ಯಕ್ತಿಯು ನಮ್ಮನ್ನು ಅವರಾಯ್ಕೆಯ ಹಲವರ ಅಧೀನಕ್ಕೆ ತಳ್ಳಿಬಿಡುವ ಸತ್ಯವನ್ನು ನಾವು ಅರಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ.

ಎಲ್ಲಕ್ಕಿಂತ ಮಿಗಿಲಾಗಿ, ಕೊರೊನಾದಂತಹ ಲೋಕವ್ಯಾಪಿ ಸಮಸ್ಯೆಯ ಸನ್ನಿವೇಶವನ್ನೆದುರಿಸಿದ ಯಾವುದೇ ಜನರು ನಮ್ಮ ಮಧ್ಯೆ ಇಲ್ಲ. ನಮ್ಮ ದೇಶದ್ದಲ್ಲದ ಹಂತಕ ವೈರಸ್ಸಿನ ದಮನ ಮಾಡುವ ಔಷಧ ಬರುವ ತನಕ ಸಾರ್ವಜನಿಕರಾದ ನಮ್ಮ ಜವಾಬ್ದಾರಿಯೂ ದೊಡ್ಡದಿದೆ. ಆದರೆ ಅದನ್ನು ಸರಳಗೊಳಿಸಿಕೊಂಡು, ಆದಷ್ಟು ಮನೆಯಲ್ಲಿರುವುದು, ಹೊರಹೋಗುವಾಗ ಮೂಗುಬಾಯಿ ಮುಚ್ಚುವ ಮಾಸ್ಕ್ ಧರಿಸುವುದು, ಸೋಪಿನಿಂದ ಆಗಾಗ ಕೈಗಳನ್ನು ತೊಳೆಯುವುದರಿಂದ ಕೊರೊನ ತಡೆಯಬಹುದೆಂದಾದರೆ, ಇವೆಲ್ಲವನ್ನು ಅನುಸರಿಸಿ ಹೊಸ ಔಷಧಕ್ಕೆ ಪ್ರಯೋಗ ಶಿಶುವಾಗುವುದನ್ನು ಹಾಗೂ ಸರ್ಕಾರೀ ಲೆಕ್ಕ ಪುಸ್ತಕದ ಖಾಯಿಲೆಗೋ ಅಥವಾ ಸಾವಿಗೋ ನಾವು ಒಂದು ಸಂಖ್ಯೆಯಾಗುವುದನ್ನು ತಪ್ಪಿಸಬಹುದು.

-ಶಾಂತಿವಾಸು, ಬೆಂಗಳೂರು.


ಜಾಗತೀಕರಣದ ಹಾವಳಿಯಲ್ಲಿ ರೈತರ ಆತ್ಮಹತ್ಯೆ

‘ಸಮಾಜಮುಖಿ’ ಆಗಸ್ಟ್ ಸಂಚಿಕೆಯ ಮುಖ್ಯಚರ್ಚೆಯ ಎಲ್ಲ ಲೇಖನಗಳನ್ನೂ ಓದಿದೆ. ಆದರೆ ಯಾರೂ ಕೂಡ ಜಾಗತೀಕರಣದ ಹಾವಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನಮ್ಮ ರೈತರ ಪರಿಸ್ಥಿತಿ ಕುರಿತು ಚರ್ಚಿಸದಿದ್ದುದು ಆಶ್ಚರ್ಯವೆನಿಸಿತು. ಹೆಸರಾಂತ ಆತ್ಮಹತ್ಯೆ ಕುರಿತು ಪುಸ್ತಕಗಳನ್ನೇ ಬರೆದಿದ್ದಾರಲ್ಲ! ಆ ಕಡೆ ಈ ಎಲ್ಲಾ ತಜ್ಞರು ಯಾಕೆ ಗಮನ ಹರಿಸಲಿಲ್ಲ?

ಅಂದಾಜು ಹತ್ತು ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ರೈತಾಪಿ ಬದುಕಿನಲ್ಲಿ ಆತ್ಮಹತ್ಯೆಗಳು ಶುರುವಾದದ್ದು ಜಾಗತೀಕರಣ ಆರಂಭ ತಾನಷ್ಟೇ ಅಲ್ಲ ತನ್ನ ಹೆಂಡತಿ ಮಕ್ಕಳೊಂದಿಗೆ ವಿಷ ಕುಡಿದು ಸತ್ತ ನಮ್ಮ ರೈತರ ಸಾವುಗಳು ಲೆಕ್ಕಕ್ಕೇ ಇಲ್ಲವೇ? ‘ಸಮಾಜಮುಖಿ’ಯ ಈ ಎಂಟು ಜನ ತಜ್ಞರು ಈ ಕುರಿತು ಬರೆಯಬೇಕಿತ್ತು. ಅಂದ ಹಾಗೆ ಒಬ್ಬಿಬ್ಬರು ರೈತಾಪಿ ಬದುಕನ್ನು ಪ್ರಸ್ತಾಪಿಸಿದ್ದಾರೆ; ಆದರೆ ಗಂಭೀರ ಚರ್ಚೆಗೆ ಒಳಪಡಿಸಿಲ್ಲ! ಜಾಗತೀಕರಣ ಆರಂಭವಾಗುವ ಮುಂಚೆ ಶೇಕಡ ಎಪ್ಪತ್ತೈದರಷ್ಟಿದ್ದ ನಮ್ಮ ದೇಶದ ಬೇಸಾಯ ಇದೀಗ ಶೇಕಡ ಐವತ್ತೈದಕ್ಕೆ ಕುಸಿಯುವಲ್ಲಿ ಜಾಗತೀಕರಣದ ಪ್ರಭಾವವಿಲ್ಲವೇ?. ರೈತಾಪಿ ಬದುಕೆಂದರೆ ಅದು ಬರೀ ಯಾಂತ್ರಿಕ ಉತ್ಪಾದನೆಯಲ್ಲ. ಅದೊಂದು ಸಂಸ್ಕೃತಿ. ಅಲ್ಲಿಂದಲೇ ನಮ್ಮೆಲ್ಲ ಜಾನಪದ ಮತ್ತು ಅಭಿಜಾತ ಕಲೆ, ಸಂಸ್ಕೃತಿ ವಿಕಾಸವಾಗಿದೆ. ಅಂದರೆ ರೈತರ ನಾಶವೆಂದರೆ ಅದು ಕಲೆ, ಸಾಹಿತ್ಯ, ಸಂಸ್ಕೃತಿಯ ನಾಶವೂ ಆಗಿದೆ. ಅಲ್ಲವೇ? ಒಂದು ಕಿಲೋಗ್ರಾಮ್ ಸಕ್ಕರೆಯಿಂದ ಪೆಪ್ಪರಮೆಂಟು ತಯಾರಿಸಿ ಲಾಭ ಮಾಡಿಕೊಳ್ಳುವ ಉದ್ಯಮಿಯ ಆದಾಯಕ್ಕೂ ಟನ್‌ಗಟ್ಟಲೆ ಕಬ್ಬು ಬೆಳೆದು ನಷ್ಟ ಅನುಭವಿಸುವ ರೈತರ ಉದ್ಯಮಕ್ಕೂ ಸಂಬಂಧವೇ ಇಲ್ಲವೇ?.

ಇರಲಿ ಹತ್ತು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು (ಈಗಲೂ ಅವರೇ ಮುಖ್ಯಮಂತ್ರಿ) ‘ನಿಮಗೆ ಬೇಸಾಯ ಗಿಟ್ಟದಿದ್ದರೆ ಬಿಡಿ; ಅದೇ ಭೂಮಿಯನ್ನು ನಮಗೆ ಕೊಡಿ; ಅಲ್ಲಿ ಕಾರ್ಖಾನೆ ಹಾಕೋಣ’ ಎನ್ನುತ್ತಿದ್ದರು. ಇದರ ಹಿಂದಿನ ಲೆಕ್ಕಾಚಾರಗಳನ್ನು ಯಾರೂ ವಿವರಿಸಬೇಕಿಲ್ಲ!! ಅಂದರೆ ರೈತಾಪಿ ಬದುಕು ಕಸಕ್ಕಿಂತ ಕಡೆಯಾಗಿ ಮೂರಾಬಟ್ಟೆಯಾಗುತ್ತಿದೆ. ಈಗ ನರೇಂದ್ರ ಮೋದಿಯವರು ಹೇಳುತ್ತಿರುವ ‘ಆತ್ಮನಿರ್ಭರತೆ’ಯ ಮಾತುಗಳು ಕೂಡ ಯಡಿಯೂರಪ್ಪನವರು ಈ ಹಿಂದೆ ಹೇಳಿದ ಮಾತುಗಳ ಮುಂದುವರಿಕೆಯಾಗಿದೆ. 1996ರಲ್ಲಿ ಆರಂಭವಾದ ರೈತರ ಆತ್ಮಹತ್ಯೆಗಳು ಈಗಾಗಲೆ ಎಂಟು ಲಕ್ಷಕ್ಕೂ ಮೀರಿದೆ. 1996ರ ಹಿಂದೆ ರೈತರ ಆತ್ಮಹತ್ಯೆಗಳು ಇರಲಿಲ್ಲವೆಂಬುದೂ ಕೂಡ ಗಮನಾರ್ಹವಲ್ಲವೇ? ಪರಿಸ್ಥಿತಿ ಹೀಗಿರುವಾಗ ಮೋದಿ ಮತ್ತು ಯಡಿಯೂರಪ್ಪನವರು ರೈತರಿಗೆ ನ್ಯಾಯವಾದ ಬೆಲೆ ನೀಡಬೇಕೆಂದು ಶಿಫಾರಸು ಮಾಡಿರುವ ಡಾ.ಸ್ವಾಮಿನಾಥನ್ ಆಯೋಗದ ವರದಿ ಬಗ್ಗೆ ಯಾಕೆ ಮಾತಾಡುವುದಿಲ್ಲ?! ಯಡಿಯೂರಪ್ಪನವರು ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸಿ ನಂತರ ಆ ಹಸಿರು ಶಾಲನ್ನು ಮೂಲೆಗೆ ಬೀಸಿ ಎಸೆಯುತ್ತಾರೆ. ಈ ನಾಟಕವನ್ನು ತಜ್ಞರು ಕೂಡ ಅರ್ಥಮಾಡಿಕೊಳ್ಳುತ್ತಿಲ್ಲ!

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ.

Leave a Reply

Your email address will not be published.