ಅನಿಸಿಕೆಗಳು

-ಎನ್.ಬೋರಲಿಂಗಯ್ಯ, ಮೈಸೂರು.

ಸಹನೆ – ಇಂದಿನ ಅಗತ್ಯ

1) ಸೆಪ್ಟೆಂಬರ್ ತಿಂಗಳ ಸಮಕಾಲೀನದ ಆರೂ ಲೇಖನಗಳು ಪತ್ರಿಕೆಯ ಮುಖ್ಯ ಚರ್ಚೆಯಷ್ಟೇ ಆಕರ್ಷಕವಾಗಿರುವುದು ವಿಶೇಷ ಎನಿಸುತ್ತದೆ. ಮಂದಿರ ನಿರ್ಮಾಣದ ರಾಜಕೀಯ ಔಚಿತ್ಯವನ್ನು ಕುರಿತ ಮೂರೂ ಲೇಖನಗಳು ತಮ್ಮಷ್ಟಕ್ಕೆ ತಾವು ಅರ್ಥವತ್ತಾಗಿ ಕಂಡರೂ ಚಾರಿತ್ರಿಕ ಸನ್ನಿವೇಶದ ದೃಷ್ಟಿಯಿಂದ ಆರೋಗ್ಯಕರ ಚರ್ಚೆಯನ್ನು ಆಹ್ವಾನಿಸುವಂತಿರುವುದೂ ಗಮನಾರ್ಹ. ಸರಳವಾಗಿ ಹೇಳಬೇಕೆಂದರೆ, ಆಧುನಿಕಪೂರ್ವ ರಾಜಕೀಯ ಮತ್ತು ದೇವಮಂದಿರಗಳ ನಿರ್ಮಾಣದ ಒಡನಾಟ ಒಂದು ಬಗೆಯ ಮುಗ್ಧತೆಯ ಲೋಕಕ್ಕೆ ಸೇರಿದಂತಿದ್ದರೆ ಈಗ ಪ್ರಜಾಪ್ರಭುತ್ವ ಮತ್ತು ವೈಜ್ಞಾನಿಕ ಜಾಗೃತಿಯ ಸಂದರ್ಭದಲ್ಲಿ ಈ ಒಡನಾಟ ಜನಾಂಗ ಜನಾಂಗಗಳ ನಡುವಣ ತೀಕ್ಷ್ಣ ವೈಮನಸ್ಯಕ್ಕೆ ಕಾರಣವಾಗಿ ಬಗೆಹರಿಸಲಾಗದ ದ್ವೇಷಾಸೂಯೆಗಳಿಗೆ ದಾರಿ ಮಾಡಿಕೊಟ್ಟು ಅಗತ್ಯವಾಗಿದ್ದ ಸಾಮಾಜಿಕ ಶಾಂತಿ ನೆಮ್ಮದಿಗಳು ಮುಗಿಲ ಮಲ್ಲಿಗೆಯಾಗುತ್ತಿರುವುದನ್ನು ಯಾರೂ ತಪ್ಪಿಸಲಾಗುವುದಿಲ್ಲ.

ಈ ಮೂಲಕ ನಾನು ಹೇಳಬೇಕೆಂದಿರುವುದಿಷ್ಟೇ- ಸರ್ವೋಚ್ಚ ನ್ಯಾಯಾಲಯ `ಮಸೀದಿ ಕೆಡವಿದ್ದು ತಪ್ಪು, ಮಂದಿರ ಕಟ್ಟಬಹುದು’ ಎಂಬ ತೀರ್ಪಿನಲ್ಲಿಯೆ ಅಡಕವಾಗಿರುವ `ತಪ್ಪನ್ನು ಸರಿಪಡಿಸಿಕೊಂಡು ಮಂದಿರಕ್ಕೂ ಮುಂದುವರಿಯಿರಿ’ ಎಂಬುದನ್ನು ಮುಖ್ಯವಾಗಿ ಗಮನಹರಿಸಬೇಕಿತ್ತು. ಅಂದರೆ ಪುರಾಣ ಪುರುಷನಾದ ರಾಮ ಹುಟ್ಟಿದ ಜಾಗವೆಂದು ಹಾರೆಯೆ ಮೊನೆಯಲ್ಲಿ ನಿರ್ದಿಷ್ಟವಾಗಿ ಗುರುತಿಸುವುದರ ಮೂಲಕ ಅಡಿಪಾಯಕ್ಕೆ ಕಲ್ಲುಹಾಕಿದ ದಿನವೇ ಪ್ರಧಾನಿ ನರೇಂದ್ರ ಮೋದಿಯವರು ಮಸೀದಿ ನಿರ್ಮಾಣಕ್ಕೂ ಸೂಕ್ತ ಜಾಗ ಗುರುತಿಸಿ ಗುದ್ದಲಿ ಪೂಜೆ ಮಾಡಬೇಕಿತ್ತು. ಅದು ಆಧುನಿಕ ವೈಚಾರಿಕ ದೃಷ್ಟಿಕೋನದ ಪ್ರಜಾಪ್ರಭುತ್ವಕ್ಕೆ ಸಲ್ಲುವ ನ್ಯಾಯವಾಗುತ್ತಿತ್ತು.

ರಾಜಕೀಯ ಮತ್ತು ಸಂಸ್ಕೃತಿಯನ್ನು ಕುರಿತು ಕುವೆಂಪು ಅವರ ಈ ಕೆಳಗಣ ಮಾತು ಈ ಸಮಯಕ್ಕೆ ಚಿಂತನಯೋಗ್ಯ.

ರಾಜ್ಯಗಳೆದ್ದು
ಪ್ರಳಯ ಜಿಹ್ವಾಗ್ರದಲಿ ಸಂಸ್ಕೃತಿಗಳ ಕಟ್ಟಿ
ಬಣ್ಣಗುಳ್ಳೆಗಳಂತೆ ಬರಿದಾಗುತಿವೆ..

ಇದು ನಾಲಗೆ ಬಲದ ಸಂಸ್ಕೃತಿಯೇ ಹೊರತು ನಿಜವಾದ ಭಕ್ತಿಯ ನಿರ್ಮಿತಿಯಲ್ಲ. ಹೃದಯ ಧರ್ಮಗಳು ಮನಸ್ಸುಗಳನ್ನು ಬೆಸೆಯುತ್ತವೆ. ರಾಜಕೀಯ, ಸ್ವಾರ್ಥಕ್ಕಾಗಿ ಅವುಗಳನ್ನು ಒಡೆಯುತ್ತದೆ. ಈಗ ನಮಗೆ ಬೇಕಿರುವುದು ಜನಾಂಗಗಳನ್ನು ಕೂಡಿಸುವ ಸೇತುವೆ.

2) ನಮ್ಮ ಸನಾತನ ಚಿಂತಕರಾದ ಎ.ಎನ್.ಮೂರ್ತಿರಾಯರು ವೈದಿಕ ಮತ್ತು ಶೈವನೆಲೆಯ ಎಲ್ಲ ಪುರಾಣಾಗಮಗಳನ್ನು ಶ್ರದ್ಧೆ ಮತ್ತು ಗೌರವಪೂರ್ವಕವಾಗಿ ಪರಿಶೀಲಿಸಿ ಅಂತಿಮವಾಗಿ ತಮ್ಮ `ದೇವರು’ ಎಂಬ ಕೃತಿಯಲ್ಲಿ ದೇವರು ಅಸ್ತಿತ್ವದಲ್ಲಿ `ಇಲ್ಲ’ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆಂಗ್ಲಭಾಷಾ ಪ್ರಾಧ್ಯಾಪಕರಾದ ರಾಯರು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಮೇಲೆ ಬಿಗಿಯಾದ ಹಿಡಿತವಿದ್ದವರು. ಈಗ ನನ್ನ ಕೈಯಲ್ಲಿರುವ `ದೇವರು’ 2009ರ 16ನೆಯ ಮುದ್ರಣ. ಗಮನಿಸಿ, 18 ವರ್ಷಗಳಲ್ಲಿ 16 ಮುದ್ರಣಗಳನ್ನು ಕಂಡಿರುವ ಈ ಕೃತಿಗೆ ಕನ್ನಡ ಜನತೆ `ಪಂಪ ಪ್ರಶಸ್ತಿ’ಯನ್ನು ಕೊಟ್ಟು ಗೌರವಿಸಿದೆ. ನಂತರ ಇನ್ನೂ ಎಷ್ಟೋ ಮುದ್ರಣಗಳನ್ನು ಕಂಡಿರಬಹುದಾದ ಈ ಕೃತಿಯನ್ನು ಒಂದು ಲಕ್ಷಕ್ಕಿಂತ ಹೆಚ್ಚು ಜನ ಓದಿದ್ದಾರೆಂಬುದು ನನ್ನ ಖಚಿತ ನಂಬಿಕೆ. ಹಾಗೆ ಓದಿದವರಲ್ಲಿ ಬಹುತೇಕರು ದೇವರಲ್ಲಿ ಅಚಲವಾದ ನಂಬಿಕೆಯಿದ್ದ ಶೈವ, ವೈದಿಕ ಮತೀಯರೇ ಎಂಬುದರಲ್ಲಿ ಅನುಮಾನವಿಲ್ಲ. ಟೀಕೆ ಟಿಪ್ಪಣಿಗಳಿಗೆ ಎಡೆಯೇ ಇಲ್ಲದಂತೆ ಕೃತಿಯನ್ನು ರಚಿಸಿದ್ದ ಮೂರ್ತಿರಾಯರು ಬಯಸಿದ್ದು ಭೂಮಿಯ ಮೇಲಿನ `ಸರ್ವಜನರೂ ಸುಖವಾಗಿರಲಿ’ ಎಂಬ ಪ್ರಸಿದ್ಧ ಆರ್ಷೇಯ ಆಶಯವನ್ನೆ.

ಕೃತಿಯ ಕಡೆಯಲ್ಲಿ “ದೇವರು ಪರಲೋಕ ಇತ್ಯಾದಿಗಳನ್ನು ಕುರಿತು -ನಾವು ಪರಿಶೀಲಿಸಿರುವ- ನಂಬಿಕೆಗಳಿಗೆ ಬದಲಾಗಿ ನಾವು ತಂದುಕೊಳ್ಳುವ ನಂಬಿಕೆ ಇಹಲೋಕವನ್ನು ಕುರಿತದ್ದೆ ಆಗಬೇಕು, ಇಲ್ಲಿಯ ಬದುಕನ್ನು ಕುರಿತದ್ದೆ ಆಗಬೇಕು, ಬದುಕಿಗೆ ಉದ್ದೇಶವನ್ನು, ಸಾರ್ಥಕ್ಯವನ್ನೂ ಕೊಟ್ಟು ಅದನ್ನು ನಿಂತು ನಡೆಸುವ ಈ ಮತದಲ್ಲೂ ಸೇವೆಗೆ ಮುಖ್ಯಸ್ಥಾನವುಂಟು, ಆದರೆ ಅದು ಮಾನವ ಕುಲದ ಸೇವೆ. ಈ ಮತವನ್ನು ಶೈವಮತ, ವೈಷ್ಣವಮತ ಇತ್ಯಾದಿಗಳಿಗೆ ಬದಲಾಗಿ ನಾವು ತಂದುಕೊಂಡಿರುವ ಮತವನ್ನು – ಮಾನವ ಮತ ಎಂದು ಕರೆಯೋಣ” ಎಂದು ಘೋಷಿಸಿದ್ದಾರೆ. ಮುಂದುವರಿದು ಶ್ರೀಯುತರು ಹೇಳುತ್ತಿರುವುದನ್ನು ಕೇಳಿ “ಈಗ ಸಲ್ಲಿಸುತ್ತಿರುವ ಸೇವೆ – ಅಭಿಷೇಕ, ವಸ್ತ್ರಾರ್ಪಣ, ನೀಲಾಂಜನ, ನೈವೇದ್ಯ -ಸಮಸ್ತ ಉಪಚಾರವೂ ಮಾನವನಿಗೆ ಸಲ್ಲಬೇಕು. …ಎಲ್ಲ ಮಾನವರಿಗೂ”  ಇದಕ್ಕಿಂತ ಬೇಕೆ ಉಪದೇಶ? ಅಥವಾ ಛೀಮಾರಿ? ಸುಮಾರು 2000 ವರ್ಷಗಳಿಂದಲೂ ಪೋಷಿಸಿಕೊಂಡು ಬಂದಿರುವ ಒಂದು ದೊಡ್ಡ ಮೌಢ್ಯದ ಈ ಪರಿಗೆ ಏನೆನ್ನಬೇಕು!

3) ಇನ್ನು ಆಗಸ್ಟ್ ತಿಂಗಳ ವಸಂತ ಬನ್ನಾಡಿಯವರ ಅಡಿಗ-ಅನಂತಮೂರ್ತಿಗಳನ್ನು ಕುರಿತ ‘ಮಂಪರು ಕವಿಸುವ’ ಲೇಖನ ಕುರಿತು ಒಂದೆರಡು ಮಾತು. 1970ರ ದಶಕದ ಆರಂಭದಿಂದಲೇ ಈ ಬಗೆಯ ಲೇಖನಗಳು ಪ್ರಕಟವಾಗಿವೆ. 1974ರ ಅಖಿಲ ಕರ್ನಾಟಕ ಸಾಹಿತಿ ಮತ್ತು ಕಲಾವಿದರ ಒಕ್ಕೂಟವನ್ನು ಉದ್ಘಾಟಿಸಿ ಕುವೆಂಪು ಅವರು ಮಾಡಿದ್ದ ಭಾಷಣ ತುಂಬ ಗಮನಾರ್ಹ. ಒಕ್ಕೂಟದ ಆ ಉದ್ಘಾಟನಾ ಸಮಾರಂಭಕ್ಕೆ `ಬ್ರಾಹ್ಮಣರಿಗೆ ಪ್ರವೇಶವಿಲ್ಲ’ ಎಂಬರ್ಥದ ಹೇಳಿಕೆಗಳೂ ಪ್ರಕಟವಾಗಿದ್ದವು. ಕುವೆಂಪು ಸಾಹಿತ್ಯದ ಮೇಲೆ ಇನ್ನಿಲ್ಲದ ಪರಿಯಲ್ಲಿ ಗದಾಪ್ರಹಾರ ನಡೆಸಿದ ಬ್ರಾಹ್ಮಣ (ನವ್ಯದ ಹೆಸರಿನಲ್ಲಿ) ವಿಮರ್ಶಕರ ಮೇಲೆ – ಅದರಲ್ಲಿಯೂ ಮಾಧ್ವರ ಮೇಲೆ ತೇಜಸ್ವಿ ಹರಿಹಾಯ್ದ ಮಾದರಿ ಈಗ ಇತಿಹಾಸ.

1971-72ರಷ್ಟು ಹಿಂದೆಯೇ ಕೊಂಚ ಮುಗ್ಧ ಉತ್ಸಾಹದಿಂದಲೇ ಬರೆದು ಪ್ರಕಟಿಸಿದ `ಕಾನೂರು ಹೆಗ್ಗಡತಿ: ವಿವೇಚನೆ’ ಎಂಬ ಕೃತಿಯನ್ನು ಓದಿ ಸಂತೋಷಪಟ್ಟ ಕುವೆಂಪು ಲೇಖಕನನ್ನು “ವಿಮರ್ಶಕ ಮುರಧ್ವಂಸಿ” ಎಂದು ಕರೆದು ಹರಸಿ ಪ್ರೋತ್ಸಾಹಿಸಿದ್ದರು. ನನಗೆ ಈಗ ತಿಳಿವಳಿಕೆಯಾಗುತ್ತಿರುವಂತೆ ಕುವೆಂಪು ಅವರ ಒಟ್ಟು ಸಾಹಿತ್ಯದ ಮೇಲೆ ನವ್ಯ ವಿಮರ್ಶಕರ ನೇರ ದಾಳಿಯಿಂದ ತುಸು ತುಮುಲಕ್ಕೆ ಒಳಗಾಗಿದ್ದ ಕುವೆಂಪು ಅವರ ಮನಸ್ಸು ಪಟ್ಟ ಸಂತೋಷ, ಈ ಬಗೆಯ ಬಿರುದು ರೂಪದ ನುಡಿಗಟ್ಟನ್ನು ರೂಪಿಸಿತ್ತೇ ಹೊರತು, ಆ ನನ್ನ ಮೊದಲ ಕೃತಿ ಸರ್ವಾಂಗ ಸುಂದರ ಎಂದಾಗಲಿ, ಆಗ ತಾನೆ ವಿಮರ್ಶಾಲೋಕಕ್ಕೆ ಕಾಲಿಟ್ಟಿದ್ದ ನಾನು ಅಂಥದೊಂದು ಬಿರುದಿಗೆ ಅರ್ಹನೆಂದಾಗಲಿ ಅಲ್ಲ. ಆದರೆ `ಕಾನೂರು ಹೆಗ್ಗಡತಿ: ವಿವೇಚನೆ’ ನವ್ಯರ ವಿರುದ್ಧ ಕುವೆಂಪು ಪರ ಸ್ವಲ್ಪ ಮಟ್ಟಿನ ತಡೆಗೋಡೆಯಂತೆ ಕೆಲಸ ಮಾಡಿದ್ದು ಮಾತ್ರ ನಿಜ. ಅದೂ ಕೂಡಾ ಈಗ ಇತಿಹಾಸ.

ಈ ಮೂಲಕ ಬನ್ನಾಡಿಯವರಿಗೆ ನಾನು ಹೇಳಬೇಕೆಂದಿರುವುದಿಷ್ಟೆ; 50 ವರ್ಷಗಳಷ್ಟು ಹಳೆಯ `ಗುದ್ದು’ಗಳನ್ನು ಬಗೆಯುವ, ಅಲ್ಲಿಯ ವಿಕಾರಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವ ಸಮಯ ಇದಲ್ಲ. ಈ ಕಾಲದ ಸಾಹಿತ್ಯಿಕ ದಿಕ್ಕು ದೆಸೆಗಳನ್ನು ಕಂಡುಕೊಳ್ಳುವ ಒಂದು ಸಮನ್ವಯ ಮಾದರಿಯ ಚಾರಿತ್ರಿಕ ಅಧ್ಯಯನ ನಡೆಯಬೇಕೇ ಹೊರತು ಮಂದಿರ-ಮಸೀದಿ ಬಗೆಯ ದ್ವೇಷದ ಸಂದರ್ಭಗಳನ್ನು ಸೃಷ್ಟಿಸಿ ಮನಸ್ಸುಗಳನ್ನು ಛಿದ್ರಗೊಳಿಸುವ ರೀತಿಯದ್ದಲ್ಲ. 20ನೆಯ ಶತಕದ ಸಾಹಿತ್ಯದ ಗಂಭೀರ ಚಾರಿತ್ರಿಕ ಅಧ್ಯಯನ ಯಾಕೆ ಮುಖ್ಯವಾಗುತ್ತದೆಂದರೆ, ವಸಂತ ಬನ್ನಾಡಿಯವರು ಎತ್ತಿರುವ ಮಂಪರು ಸಮಸ್ಯೆಯ ಹಿಂದೆ ಇದ್ದವರು ಅಡಿಗರು, ಅನಂತಮೂರ್ತಿಗಳು ಮಾತ್ರ ಅಲ್ಲ, ಅವರನ್ನು ಆಳವಾಗಿ ಪ್ರಭಾವಿಸಿರುವ ಮಾಸ್ತಿ ಮತ್ತು ಬೇಂದ್ರೆಯವರೂ ಇದ್ದಾರೆ. ಹಾಗೆ ನೋಡಿದರೆ ಕುವೆಂಪು ಅವರ ಆಧುನಿಕ ಪ್ರಜ್ಞೆಯ ಎಲ್ಲ ಬಗೆಯ ನಿಲುವುಗಳನ್ನು ಕಟುವಾಗಿ ವಿರೋಧಿಸಿರುವವರು ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು. ಇದನ್ನು ವಿಸ್ತರಿಸುವುದಕ್ಕೆ ಇದು ಸೂಕ್ತ ಸನ್ನಿವೇಶವಲ್ಲ. ಬೇಂದ್ರೆಯವರ ನೃತ್ಯಯಜ್ಞ, ಅಪಾತ್ರ ಸಮೀಕ್ಷಕರಿಗೆ, ಮಧುವಾತಾ ಋತಾಯತೆ ಮೊದಲಾದ ಪದ್ಯಗಳನ್ನು ಓದಿ ನೋಡಿ ಎಂದಷ್ಟೆ ಹೇಳಬಹುದು.

ಒಂದು ವೇಳೆ ಅಡಿಗರು, ಅನಂತಮೂರ್ತಿಗಳಂತೆ, ಮಾಸ್ತಿ, ಬೇಂದ್ರೆಯವರನ್ನೂ ನಾವು ಕಳೆದುಕೊಂಡರೆ 20ನೆಯ ಶತಕದ ಕನ್ನಡ ಸಾಹಿತ್ಯವನ್ನು ಕಲ್ಪಿಸಿಕೊಳ್ಳಲೂ ಹೆದರಿಕೆಯಾಗುವುದಿಲ್ಲವೇ? ಈಗ ನಮಗೆ ಬೇಕಾಗಿರುವುದು ಉತ್ತಮ ಸಹನೆಯ ಸಂಸ್ಕೃತಿ, ಉದಾತ್ತ ಪರಂಪರೆ ಮತ್ತು ಬೇಂದ್ರೆ ಅಡಿಗರು ಯಾಕೆ `ಹಾಗೆ’ ಬರೆಯಬೇಕಾಯ್ತು, ಕುವೆಂಪು ಯಾಕೆ `ಹೀಗೆ’ ಬರೆಯಬೇಕಾಯ್ತು ಎಂಬಂಥ ಪ್ರಶ್ನೆಗಳಿಗೆ ಮುಖಾಮುಖಿಯಾಗಿ ಸಾಮರಸ್ಯದ ಉತ್ತರಗಳನ್ನು ಕಂಡುಕೊಳ್ಳುವುದು.

ಮಾರಕ ಜಾಗತೀಕರಣ!

ಜಾಗತೀಕರಣ ಹುಟ್ಟಿದ್ದೇ ಸ್ವಾರ್ಥ ದೃಷ್ಟಿಯಿಂದ. ಗ್ಯಾಟ್ ಒಪ್ಪಂದ ಬಡಪೆಟ್ಟಿಗೆ ಪ್ರಪಂಚ ಅಂಗೀಕರಿಸಲಿಲ್ಲ. 10-15 ವರ್ಷಗಳ ಹಿಂದೆ ಅದು ಜನ್ಮ ತಾಳಿತು. ಅದು ಕೆಲವೇ  ರಾಷ್ಟ್ರಗಳ ಮೇಲ್ಮೆಗೋಸ್ಕರ ಹುಟ್ಟಿದೆ ಎಂದು ವಿಶ್ವದ ಎಲ್ಲ ರಾಷ್ಟ್ರಗಳು ತಿಳಿದಿದ್ದರಿಂದಲೇ ಗ್ಯಾಟ್ ಒಪ್ಪಂದ ಅಂಗೀಕಾರವಾಗಲು ಅಷ್ಟೊಂದು ಕಾಲ ಹಿಡಿಯಿತು. ಕೊನೆಗೂ ಹೇಗೋ ಅದು ಅಂಗೀಕಾರವಾಯಿತು. ಗ್ಯಾಟ್ ಒಪ್ಪಂದದ ಮೂಲ ಉದ್ದೇಶ ಜಿ-7  ರಾಷ್ಟ್ರಗಳಿಗೆ (ಗ್ಯಾಂಗ್‌ಸ್ಟರ್ಸ್ ಇಲ್ಲವೇ ಗ್ಯಾಂಗ್ ಆಫ್ ಸೆವೆನ್ ಅನ್ನೋಣವೇ) ಪ್ರಪಂಚದ ಎಲ್ಲಾ  ರಾಷ್ಟ್ರಗಳೂ ತಮ್ಮ ಮಾರುಕಟ್ಟೆಯನ್ನು ತೆರೆದಿಡಬೇಕು ಎಂಬುದೇ ಆಗಿದೆ.

ಜಿ-7  ರಾಷ್ಟ್ರಗಳು ಎಂದರೆ ಅಮೆರಿಕ, ಫ್ರಾನ್ಸ್, ಬ್ರಿಟನ್, ಜರ್ಮನಿ, ಜಪಾನ್, ಚೀನಾ, ರಷ್ಯಾ. ಪ್ರಪಂಚದಲ್ಲೆಲ್ಲ ತಯಾರಾಗುವ ಸೂಜಿಯಿಂದ ಮೊದಲುಗೊಂಡು ಸ್ಪುಟ್ನಿಕ್‌ವರೆಗಿನ ವಸ್ತುಗಳಲ್ಲಿ ಶೇ.90ರಷ್ಟನ್ನು ಈ ಜಿ-7 ರಾಷ್ಟ್ರಗಳೇ ಉತ್ಪಾದನೆ ಮಾಡುತ್ತವೆ. ಅವುಗಳ ಅಬಾಧಿತ ಮಾರಾಟಕ್ಕೆ ರಹದಾರಿ ಈ ಗ್ಯಾಟ್ ಒಪ್ಪಂದ. ಕೊಳ್ಳುವ ಶಕ್ತಿ ಇಲ್ಲದ ಪ್ರಜೆಗಳಿಂದ ಕೂಡಿದ ಬಡ ರಾಷ್ಟ್ರಗಳೂ ಕೂಡ ತಮ್ಮ ಮಾರುಕಟ್ಟೆಯನ್ನು ಈ ಪಟ್ಟಭದ್ರರಿಗಾಗಿ ತೆರೆದಿಡಬೇಕೆಂಬುದು ಒಂದು ಕ್ರೂರ ನಿರ್ಣಯ. ಪಿ.ವಿ.ನರಸಿಂಹರಾಯರು ಭಾರತದ ಪ್ರಧಾನಿಯಾಗಿರುವಾಗ ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿ ಬಂದರು. ಪಾರ್ಲಿಮೆಂಟಿಗೆ ತಾವು ಸಹಿ ಹಾಕಿ ಬಂದಿರುವುದಾಗಿ ಹೇಳಿದರು. ಒಬ್ಬ ಸದಸ್ಯನೂ ‘ಪಾರ್ಲಿಮೆಂಟಿನ ಒಪ್ಪಿಗೆ ಪಡೆಯದೆ ನೀವು ಹೇಗೆ ಸಹಿ ಮಾಡಿ ಬಂದಿರಿ’ ಎಂದು ಅವರನ್ನು ಪ್ರಶ್ನಿಸಲಿಲ್ಲ. ಇದು ನಮ್ಮ ಪಾರ್ಲಿಮೆಂಟ್! ನಮ್ಮ ಪ್ರಜಾಪ್ರಭುತ್ವದ ವೈಖರಿ!

ಸೆಪ್ಟೆಂಬರ್ ಸಂಚಿಕೆಯಲ್ಲಿ ಸ್ವಾವಲಂಬನೆ ವರ್ಸಸ್ ಜಾಗತೀಕರಣ ಎಂಬ ಲೇಖನವನ್ನು ರಮಾನಂದ ಶರ್ಮಾ ಬರೆದಿದ್ದಾರೆ. ಜಾಗತೀಕರಣ ಭಾರತಕ್ಕೆ ಮಾರಕವಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದು ಮಾರಕ ಎನ್ನುವುದಕ್ಕೆ ಕೆಲವು ಉದಾಹರಣೆಗಳನ್ನು ಕೊಡುತ್ತೇನೆ. ಜಾಗತೀಕರಣದ ಭಾಗವಾಗಿ ಬಹುರಾಷ್ಟ್ರೀಯ ಕಂಪೆನಿಗಳು ಭಾರತಕ್ಕೆ ನುಗ್ಗಿ ಬರುತ್ತಿವೆ, ಬಂದಿವೆ. ಭಾರತ ಸರ್ಕಾರ ಅವರಿಗೆಲ್ಲ ಉದಾರವಾಗಿ ನಮ್ಮ ನೆಲ, ಜಲ ಹಾಗೂ ಸಂಪನ್ಮೂಲಗಳನ್ನು ಒದಗಿಸಿ ಕೊಡುತ್ತಿದೆ. 5 ವರ್ಷಗಳ ಕಾಲ ತೆರಿಗೆಯ ರಿಯಾಯ್ತಿಯನ್ನು ಘೋಷಿಸಿದೆ.

ಆ ಬಹುರಾಷ್ಟ್ರೀಯ ಕಂಪೆನಿಗಳಿಂದ ಭಾರತಕ್ಕೆ ಆಗುತ್ತಿರುವ ಪ್ರಯೋಜನವೇನು? ಪೆಪ್ಸಿ ಕಂಪೆನಿ ಬಂತು. ಭಾರತದಲ್ಲಿ ನೀರಿನ ಸಮಸ್ಯೆ ಕಾಡುತ್ತಿರುವಾಗ ಆ ಕಂಪೆನಿಗೆ ವಿವಿಧ ಕಡೆ ನದಿ ನೀರನ್ನು ಒದಗಿಸಲಾಗುತ್ತದೆ. ಪೆಪ್ಸಿ ಕಂಪೆನಿ ನಮ್ಮ ಹಳ್ಳಿ ಪಟ್ಟಣಗಳಲ್ಲಿದ್ದ ಎಲ್ಲಾ ಸೋಡಾ ಫ್ಯಾಕ್ಟರಿಗಳನ್ನು, ತಂಪು ಪಾನೀಯ ಫ್ಯಾಕ್ಟರಿಗಳನ್ನು ಮುಚ್ಚುವಂತೆ ಮಾಡಿತು. ಸಾಮಾನ್ಯ ಜನ, ಹತ್ತಾರು ಸಾವಿರ ಸಂಖ್ಯೆಯಲ್ಲಿ ಈ ಉದ್ಯಮದಲ್ಲಿ ತೊಡಗಿದ್ದರು. ಅವರೆಲ್ಲ ಬೀದಿ ಪಾಲಾದರು. ದೈತ್ಯ ಹಣಕಾಸಿನ ಬಲವಿರುವ ಕಂಪೆನಿಗಳ ಜೊತೆಗೆ ಪೈಪೋಟಿ ಮಾಡಿ, ಅದರ ಎದುರು ನಿಲ್ಲುವುದು ಸಾಧ್ಯವಿಲ್ಲದ ಮಾತು.

ಚಾಕಲೇಟ್ ತಯಾರುಮಾಡುವ ಕ್ಯಾಡ್‌ಬರಿ ಕಂಪೆನಿ ಕರ್ನಾಟಕಕ್ಕೆ ಬಂತು. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೋಕೋ ಬೆಳೆಯಲು ಆರ್ಥಿಕ ನೆರವು ನೀಡುವುದಾಗಿ ಹೇಳಿತು. ಬಹಳ ರೈತರು ಕೋಕೋ ಬೆಳೆದರು. ಸ್ವಲ್ಪ ದಿನ ಕೆ.ಜಿ.ಗೆ 8 ರೂ.ನಂತೆ ಕೊಂಡ ಕ್ಯಾಡ್‌ಬರಿ ಕಂಪೆನಿ ಮುಂದೆ ಅದರ ಬೆಲೆಯನ್ನು ಕೆಜಿಗೆ 6ಕ್ಕೆ ಇಳಿಸಿತು. ಮುಂದೆ ಕೋಕೋ ಕೊಳ್ಳುವುದನ್ನು ನಿಲ್ಲಿಸಿತು. ದಕ್ಷಿಣ ಕನ್ನಡದಲ್ಲಿ ಮೊದಲಿನಿಂದ ಕೋಕೋ ಚಾಕಲೇಟ್ ತಯಾರಿಸುತ್ತಿದ್ದ ಒಂದು ಸಹಕಾರ ಸಂಸ್ಥೆ ಇತ್ತು. ಕ್ಯಾಡಬರಿ ಕಂಪನಿಯ ಪೈಪೋಟಿಯಿಂದ ತನ್ನ ಫ್ಯಾಕ್ಟರಿ ಮುಚ್ಚಬೇಕಾಯಿತು. ಕ್ಯಾಡ್‌ಬರಿ ಕಂಪೆನಿಯಿಂದ ವಂಚಿತರಾದ ರೈತರು ಕೋಕೋ ಬೆಳೆಯುವುದನ್ನೇ ಕೈ ಬಿಟ್ಟರು.

ಮಾಲ್‌ಗಳು ಬಂದವು. ಹೋಲ್‌ಸೇಲ್, ರಿಟೇಲ್ ಎರಡಕ್ಕೂ ಕೈ ಹಾಕಿದವು. ಎಲ್ಲ ಪದಾರ್ಥವೂ ಒಂದೇ ಕಡೆ ಸಿಗುತ್ತದೆ ಎಂಬುದು ಇದರ ವೈಶಿಷ್ಟ್ಯ. ಸಾವಿರ ರೂ. ಗಳಿಗೆ ಕಡಿಮೆ ಇಲ್ಲದೆ ಕೊಳ್ಳುವವರು ಇಲ್ಲಿಗೆ ಬರುತ್ತಾರೆ. ಈ ಮಾಲ್‌ಗಳು ಬರುವುದಕ್ಕೆ ಮುಂಚೆ ಪ್ರತಿ ಬಡಾವಣೆಯಲ್ಲೂ 2-3 ಚಿಲ್ಲರೆ ಅಂಗಡಿಗಳು ಬೆಂಗಳೂರು ಮುಂತಾದ ಜಿಲ್ಲೆಗಳ ಮುಖ್ಯ ಸ್ಥಳಗಳಲ್ಲಿ ಇದ್ದವು. ಜನಸಾಮಾನ್ಯರು ತಮ್ಮಲ್ಲಿದ್ದಷ್ಟು ಹಣದಲ್ಲಿ ತಮಗೆ ಬೇಕಾದ ಎಲ್ಲ ಪದಾರ್ಥಗಳನ್ನೂ ಸ್ವಲ್ಪ ಸ್ವಲ್ಪ ಕೊಳ್ಳುತ್ತಿದ್ದರು. ಈ ಚಿಲ್ಲರೆ ಅಂಗಡಿಗಳವರು ಮಾರ್ಟ್ಗಳ ಜೊತೆ ಪೈಪೋಟಿ ಮಾಡಲು ಸಾಧ್ಯವಾಗದೆ ಮುಚ್ಚಿಕೊಂಡವು. ಸಣ್ಣ ಬಂಡವಾಳ ಹೊಂದಿದ್ದ ಹತ್ತಾರು ಸಾವಿರ ಅಂಗಡಿ ಮಾಲೀಕರು ಬೀದಿ ಪಾಲಾಗಿರುವುದನ್ನು ನಾವು ಕಂಡಿದ್ದೇವೆ.

ಇವು ಕೆಲವು ಉದಾಹರಣೆಗಳಷ್ಟೇ. ಗ್ಯಾಟ್ ಒಪ್ಪಂದಕ್ಕೆ ಮೊದಲು ಭಾರತದಲ್ಲಿ ಔಷಧಿ ತಯಾರಕರು ಬೇರೆ ಬೇರೆ ವಿಧಾನಗಳಿಂದ ಔಷಧಿಗಳನ್ನು ತಯಾರಿಸುವ ಅವಕಾಶವಿತ್ತು. ಈಗ ಇಂಟೆಲೆಕ್ಚುವಲ್ ಪ್ರಾಪರ್ಟಿ ರೈಟ್ ಜಾರಿಗೆ ಬಂದಿರುವ ಕಾರಣದಿಂದ ಬೇರೆ ಬೇರೆ ಪ್ರಾಸೆಸ್ ಮೂಲಕ ಒಂದೇ ಔಷಧಿ ತಯಾರಿಸುವುದು ಅಪರಾಧವೆನಿಸಿದೆ. ಇದೆಲ್ಲ ಜಾಗತೀಕರಣದ ಪರಿಣಾಮಗಳು.

ನಮ್ಮ ತುಳಸಿ, ಬೇವು, ಮುಂತಾದವುಗಳೂ ಈಗ ಯಾವುದೋ ಕಂಪನಿಯ ಸ್ವಾಮ್ಯಕ್ಕೆ ಒಳಗಾಗಿವೆ. ಈ ಬಗೆಯ ಶೋಷಣೆಗೆ ಅವಕಾಶವಿಲ್ಲದ ಜಾಗತೀಕರಣ ನಮಗೆ ಬೇಕು. ಬಂಡವಾಳ ತರುತ್ತಾರೆ ಎಂಬ ಏಕೈಕ ಕಾರಣಕ್ಕೆ ಬಹುರಾಷ್ಟ್ರೀಯ ಕಂಪೆನಿಗಳನ್ನು ಬರಮಾಡಿಕೊಳ್ಳುವುದು ಅನೈತಿಕ ಆರ್ಥಿಕ ನೀತಿ.

ನಮ್ಮಲ್ಲಿ ಇಲ್ಲದ ತಂತ್ರಜ್ಞಾನವನ್ನು ಹೊಂದಿರುವ ಬಹುರಾಷ್ಟ್ರೀಯರನ್ನು ನಾವು ಬರಮಾಡಿಕೊಳ್ಳೋಣ. ಆದರೆ ಒಂದು ಷರತ್ತಿನ ಮೇಲೆ. ಅವರು ನಮ್ಮ ಜನರಿಗೆ ಆ ತಂತ್ರಜ್ಞಾನವನ್ನು ಬಳಸುವ ಸಾಮರ್ಥ್ಯವನ್ನು ಕಡ್ಡಾಯವಾಗಿ ಕಲಿಸಬೇಕು. ನಮ್ಮ ಸರ್ಕಾರ ನಮ್ಮ ಜನರಿಗೆ ಮುಳುವಾಗುವ ವಿದೇಶಿ ಕಂಪೆನಿಗಳನ್ನೆಲ್ಲ ಕರೆದು ನಮ್ಮ ಜನರ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಮಾಡುವ ಹುನ್ನಾರ ಮಾಡುವುದು ಎಷ್ಟು ಸರಿ?

ರಮಾನಂದ ಶರ್ಮರು ನಾನು ಎತ್ತಿಡುವ ಅನೇಕ ಸಮಸ್ಯೆಗಳ ಬಗೆಗೆ ಸಹಮತ ಹೊಂದಿದ್ದಾರೆ. ಆದರೆ, ಅವರು ಜಾಗತೀಕರಣದ ಪ್ರತಿಪಾದಕರಿದ್ದಾರೆ. ಜಾಗತೀಕರಣ ಭಾರತಕ್ಕೆ ಮಾರಕ ಎನ್ನುವುದನ್ನು ಅವರು ಒಪ್ಪುವುದಿಲ್ಲ. ಆದರೆ, ಅದರ ದುರುಪಯೋಗವಾಗಿದೆ ಎಂಬುದನ್ನು ಒಪ್ಪುತ್ತೇನೆ ಎನ್ನುತ್ತಾರೆ. the proof of the pudding is in the eating. ಈಗ ನಾವು ಜಾಗತೀಕರಣವೆಂಬ puddingಅನ್ನು ತಿಂದು ಹಾಳಾಗಿಲ್ಲವೇ ಎಂಬುದೇ ನನ್ನ ಪ್ರಶ್ನೆ.

-ಎಚ್.ಎಸ್.ದೊರೆಸ್ವಾಮಿ, ಬೆಂಗಳೂರು.

ಕೋವಿಡ್: ಎಚ್ಚರಿಕೆ ಇರಲಿ

ಕೋವಿಡ್ 19 ಕುರಿತು, ಪರಿಣತ ವೈದ್ಯರು ಬರೆದಿರುವ ಲೇಖನಗಳು, ಓದುಗರ ಅನಗತ್ಯ ಭಯ  ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಶಕ್ತವಾಗಿವೆ. “ಈ ಹಾಳು ಕೊರೋನಾ ವೈರಸ್ ಖಾಯಿಲೆ ಯಾವಾಗ ಕೊನೆಯಾಗುತ್ತದೋ” ಎಂಬ ಜನರ ಆತಂಕಕ್ಕೆ ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನಗಳು ಸಮಾಧಾನ ಹೇಳುತ್ತವೆ ಮತ್ತು ಜನರು ವಹಿಸಲೇಬೇಕಾದ ಮುಂಜಾಗ್ರತಾ ಕ್ರಮಗಳ ಕಡೆ ಗಮನ ಸೆಳೆಯುತ್ತವೆ.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು.

ಪೆಂಡಮಿಕ್ ರಗಳೆ

ಲಾಕ್ ಡೌನ್ 1.0 ಅವಧಿಯಲ್ಲಿ ಕೊರೋನಾ ವಿರುದ್ಧ ಹೋರಾಡಲು ಮಾಸ್ಕ್ ಬಳಕೆಯ ಅನಿವಾರ್ಯತೆ ಮತ್ತಷ್ಟು ಉಸಿರುಗಟ್ಟಿಸಿತು. ಮನೆಯ ಸದಸ್ಯರು ದಿನಸಿಗೊ, ವ್ಯವಹಾರಕ್ಕೊ, ಸ್ನೇಹಿತರ ಭೆಟ್ಟಿಗೋ ಕೊಂಚ ಹೊರಹೋಗಿಬಂದರೆ ಅವರನ್ನು ಭಯೋತ್ಪಾದಕರಂತೆ ಕಾಣುವಂತಾಗುತ್ತಿತ್ತು. ಬಿಸಿಲಿನಲ್ಲಿ ಅವರನ್ನು ನಿಲ್ಲಿಸಿ ಸ್ನಾನದ ನಂತರವೇ ಒಳಪ್ರವೇಶ. ರಣಬಿಸಿಲಿಗೆ ಬಟ್ಟೆ ಒಣಹಾಕುವುದು, ತಂದ ವಸ್ತುಗಳನ್ನು ತೊಳೆಯುವುದು, ಕೈತೊಳೆಯುವುದು ನಿರಂತರ ಕಾಯಕವಾದವು.

ಮಹಿಳಾ ಉದ್ಯೋಗಿಗಳಿಗೆ ಈ ಲಾಕ್‌ಡೌನ್ ವಿಶ್ರಾಂತಿಗಿಂತ ಎರಡು ಪಟ್ಟು ಕೆಲಸ ಹೆಚ್ಚಿಸಿತು. ಇಡೀ ದಿನ ಮನೆಯೊಳಗೆ ಗಂಡಸನ್ನು ಕೂಡಿಸುವುದು ಸವಾಲಾಗಿತ್ತು. ಅದೂ, ಇದೂ ಹೊಸಬಗೆಯ ತಿನಿಸುಗಳನ್ನು ಮಾಡಿ ಮಾಡಿ ಸರಬರಾಜು ಮಾಡುವುದಾಗಿತ್ತು. ಹೊರಗೆ ತಿಂದು ಅಭ್ಯಾಸವಾದವರ ನಾಲಿಗೆಯನ್ನು ಸಂತೃಪ್ತಪಡಿಸಲೇ ಇಡೀ ದಿನ ಪೂರ್ಣಗೊಳ್ಳುತ್ತಿತ್ತು. ಈ ಅವಧಿಯಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾದವೆಂಬ ಸಮೀಕ್ಷೆಯಿದೆ. ವಿಚ್ಛೇದನದ ಅರ್ಜಿಗಳು ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾಖಲಾದ ವರದಿಯಿದೆ. ಯಜಮಾನನಿಂದ ಅಷ್ಟೋ ಇಷ್ಟೋ ಮನೆಗೆಲಸ ಮಾಡಿಸಲು ಪ್ರಯತ್ನಿಸಿದ ಮಹಿಳೆಯರು ಅವರ ಪಾಲಿಗೆ ದುಃಸ್ವಪ್ನವಾಗಿ ಕಂಡು ಹೆಂಡತಿಯರ ಹೆಸರನ್ನು ಅವರ ಮೊಬೈಲ್ಗಳಲ್ಲಿ ಕೊರೋನಾ ವೈರಸ್ ಎಂದು ಬದಲಾಯಿಸಿಕೊಂಡ ನಿದರ್ಶನಗಳಿವೆ.

ಮನೆಗೆ ಖರೀದಿಸುವ ದಿನಸಿಪಟ್ಟಿಯಲ್ಲಿ ಸ್ಯಾನಿಟೈಸರ್ ಮೊದಲಸ್ಥಾನ ಪಡೆಯಿತು. ಇದು ಪ್ರತಿ ತಿಂಗಳ ಖಾಯಂ ಮೆಡಿಸನ್ ಆಯ್ತು. ಕಾರು, ಸೈಟು, ಮನೆ, ಒಳ್ಳೆಯ ಬ್ಯಾಂಕ್ ಬ್ಯಾಲೆನ್ಸ್ ಈ ಯಾವುದೂ ಮೆದುಳಿನಲ್ಲಿ ಸುಳಿಯದೆ ಆರ್ಥಿಕಾಂಶಗಳು ನಗಣ್ಯವೆನಿಸಿದ್ದಿದೆ. ಬದುಕಿದರೆ ಸಾಕು, ಕೊರೊನಾ ಮುಕ್ತರಾದರೆ ಸಾಕೆಂಬ ಆತಂಕ ದಿನೇ ದಿನೆ ಹೆಚ್ಚಾಗುತ್ತಿತ್ತು. ಮೂಗು ಸೋರದಂತೆ, ಗಂಟಲು ಕೆರೆಯದಂತೆ ಜಾಗ್ರತೆ ವಹಿಸುವುದೇ ಆದ್ಯತೆಯಾಗಿ ಈ ಎರಡು ಅಂಗಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಗಮನಿಸುವುದೇ ಅಗಿತ್ತು. ಒಂದಿಷ್ಡು ವ್ಯತ್ಯಾಸವಾದರೂ ವೈರಾಣುವಿದ್ದರೆ ಬೇಗ ಸಾಯಲೆಂದು ಬಿಸಿನೀರನ್ನು ಗಂಟಲಿಗೆ ಒಮ್ಮೆಲೇ ಸುರಿದುಕೊಂಡು ಪರಿತಪಿಸಿದ್ದು ಅಪ್ಪಟಸತ್ಯ.

ಒಮ್ಮೆ ಅಡುಗೆಮನೆಯಲ್ಲಿ ಎರಡುಬಾರಿ ಸೀನು ಬರಬೇಕೇ? ಕಾಲೆಳೆಯುವುದಕ್ಕೆ ಎಲ್ಲಿದ್ದರೊ ಮನೆಯವರು ಬಂದು ಇನ್ನೊಂದು ಸೀನು ಬಂದರೆ ಗ್ಯಾರಂಟಿ ಕೋವಿಡ್ ಕೇಂದ್ರಕ್ಕೆ ಕರೆಮಾಡುತ್ತೇನೆಂದು ಹಾಸ್ಯಮಾಡಿದ ಕೂಡಲೇ ಸೀನೂ ನಿಂತಿತು. ಎಷ್ಟು ಶೀತ, ಕೆಮ್ಮು ಬಂದರೂ ತಲೆಕೆಡಿಸಿಕೊಳ್ಳದೆ ನಿತ್ಯ ಬದುಕಿನ ಜಂಜಡಗಳಲ್ಲೇ ಮುಳುಗಿ ಆರೋಗ್ಯವನ್ನು ಎರಡನೆ ದರ್ಜೆಯಲ್ಲಿಟ್ಟಿದ್ದ ನಮಗೆ ಆರೋಗ್ಯವೇ ಭಾಗ್ಯ ಎಂಬ ಮಹಾ ಅರಿವನ್ನು ಮೂಡಿಸಿದ ದುರಿತಕಾಲವಿದು. ಹೀಗೊಮ್ಮೆ ಮಧ್ಯರಾತ್ರಿಯಲ್ಲಿ ಎರಡು ಬಾರಿ ಕೆಮ್ಮುವಂತಾಯಿತು. ಹೊರಗೆಲ್ಲಾ ಸುತ್ತಾಡಿ ಬರುವ ಪಕ್ಕದಲ್ಲಿದ್ದವರ ದುರುಗುಟ್ಟಿ ನೋಡಿ ಅಡುಗೆ ಮನೆಗೆ ಹೋಗಿ ನೀರು ಕಾಯಿಸಿ, ಅರಿಶಿನ, ಉಪ್ಪು ಬೆರೆಸಿ, ತುಳಸಿ, ಶುಂಠಿ, ಬೆಲ್ಲ ಹಾಕಿ ಕುದಿಸಿ ಕುಡಿದು ಮಲಗಿದರೆ ಗಂಟಲಲ್ಲಿ ಕಿಚ್ ಕಿಚ್ ಮಾಯ. ಸ್ವಲ್ಪ ಆರೋಗ್ಯ ಏರುಪೇರಾದಾಗಲೇ ಸಣ್ಣ ಕಾಳಜಿಯನ್ನು ಮಾಡಿಕೊಳ್ಳದೆ, ಮಾತ್ರೆ, ಸಿರಪ್‌ಗಳ ಮೊರೆ ಹೋಗಿ ಆಸ್ಪತ್ರೆ ಬಿಲ್ ಕಟ್ಟುವ ನಾವು ಮೂರ್ಖರೆಂಬ ಜ್ಞಾನೋದಯವಾದದ್ದು ಈ ಸಂದರ್ಭದಲ್ಲೇ.

ನೋಟಿನ ಮೂಲಕ ಸೋಂಕು ತಗುಲುವ ಸುದ್ದಿ ಪ್ರಚಾರವಾಗುವಾಗಂತೂ ನೆರೆಮನೆಯವರು ಹಣವನ್ನು ಗೇಟಿನ ಮೇಲಿಟ್ಟು ಹಾಲಿನವವರು, ಪೇಪರಿನವರನ್ನು ಅಸ್ಪೃಶ್ಯರಂತೆ ನೋಡಿದ್ದಿದೆ. ಸ್ನೇಹಿತರ ಮನೆಯಲ್ಲಿ ದಿನಪತ್ರಿಕೆಯನ್ನು ಐರನ್ ಮಾಡಿ, ಬಿಸಿಲಲ್ಲಿ ಒಣಗಿಸಿ ಓದುತ್ತಿದ್ದದ್ದನ್ನು ನೋಡಿದ್ದೇನೆ. ರೈತರು ಬೆಳೆದ ತರಕಾರಿ, ಹಣ್ಣನ್ನು ತೊಳೆತೊಳೆದು ಸಾಕುಸಾಕಾಯಿತು. ಈ ಎಲ್ಲದರ ಆತಂಕಗಳು ಸೃಷ್ಟಿಸಿದ ಫೋಬಿಯಾದಿಂದ ಒಮ್ಮೆ ಕನಸಿನಲ್ಲಿ ಕೊರೋನಾ ಸೋಂಕಿತಳಾಗಬೇಕೇ? ದಡದಡ ಎದ್ದು ಕೂತು ಪಕ್ಕದಲ್ಲಿದ್ದವರಿಗೆ ಕಂಡಕನಸ ವಿಸ್ತರಿಸಿದರೆ, ‘ನಿನಗೆ ಬರಲು ಸಾಧ್ಯವಿಲ್ಲ. ನಿನ್ನ ಹೆಸರು ಕೇಳಿದರೆ ಅದೆ ಓಡಿಹೋಗುತ್ತೆ’ ಎನ್ನುವ ಹೀಯಾಳಿಕೆ ಕೇಳಿ ಮಲಗಿದ್ದಾಯಿತು.

ವೃತ್ತಿಧರ್ಮದ ನಾನಾ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಿ ಸೋಂಕು ಅನಿವಾರ್ಯವಾದರೆ ಎದುರಿಸುವ ಛಲ ಮೂಡಿಸಿಕೊಳ್ಳುವಷ್ಟರ ಮಟ್ಟಿಗೆ ಒಗ್ಗಿಕೊಂಡಿದ್ದೇವೆ. ಎಷ್ಟೆಂದರೆ ಅದು ನಮ್ಮೊಡನಿದ್ದಂತೆ, ಅಥವಾ ಅದರೊಡನೆ ನಾವಿದ್ದಂತೆ.

-ಡಾ.ಚಂದ್ರಕಲಾ ಹೆಚ್.ಆರ್., ಮೈಸೂರು.

ಈ ಪತ್ರಿಕೆ ಗೊತ್ತೇ ಇರಲಿಲ್ಲ!

ಪತ್ರಿಕೆಯ ಮುಖಪುಟ, ಸಂಪಾದಕೀಯ ಚೆನ್ನಾಗಿ ಮೂಡಿಬಂದಿದೆ. `ಸಮಕಾಲೀನ’ದಲ್ಲಿನ `ಬೆಂಗಳೂರು ಗಲಭೆಯಲ್ಲಿ ಬೆಂಕಿ ಹಚ್ಚಿಸಿ ಜಂತಿ ಎಣಿಸಿದ ರಾಜಕಾರಣಿಗಳು’, ಡಾ.ಟಿ.ಆರ್.ಚಂದ್ರಶೇಖರ ಅವರ `ಅನಿಶ್ಚಿತ ಆರ್ಥಿಕ ನೀತಿ ಅಭಿವೃದ್ಧಿಗೆ ಕಾಡುವ ಭೀತಿ’, ರಾಜೇಂದ್ರ ಚೆನ್ನಿ ಅವರ `ಧರ್ಮ ಮತ್ತು ರಾಜಕಾರಣ’ ಇವು ಸಕಾಲದಲ್ಲಿ ಮೂಡಿಬಂದ ಲೇಖನಗಳು.

ನನಗೆ ಹೆಚ್ಚು ಮೆಚ್ಚಿಗೆಯಾಗಿದ್ದು `ಪುಸ್ತಕ ಪ್ರಪಂಚ’. ಪುಸ್ತಕಗಳ ಪರಿಚಯದ ಜೊತೆಗೆ ಪುಸ್ತಕ ವಿಮರ್ಶೆಯ ಲೇಖನಗಳು ತುಂಬಾ ಹಿಡಿಸಿದವು. ವಿಜಯಶಂಕರ ಅವರ `ಎಚ್ಚೆಸ್ವಿ ಕಾವ್ಯ ಸಾತತ್ಯ’ ಕುರಿತು ಡಾ.ಸುಭಾಸ್ ರಾಜಮಾನೆ ಬರೆದ ಅವಲೋಕನ ಅತ್ಯಂತ ಕಟುವಿಮರ್ಶೆಯಿಂದ ಕೂಡಿದೆ ಎನಿಸಿತು. ರಾಜಮಾನೆಯವರು `ಕವಿಪರ ವಕೀಲನಾದ ವಿಮರ್ಶಕ’ ಎನ್ನುತ್ತ ಪ್ರತಿವಾದಿ ವಕೀಲರಾದರೇನೋ! ಏಕೆಂದರೆ ಒಂದು ಕೃತಿಯನ್ನು ವಿಮರ್ಶಾತ್ಮಕವಾಗಿ ನೋಡಬೇಕೆ ವಿನಾ ವಿರೋಧಿಸುವ ದೃಷ್ಟಿಯಿಂದಲ್ಲ.

ಒಟ್ಟಾರೆ ಸಂಚಿಕೆ ಗಟ್ಟಿತನವನ್ನು ಉಳಿಸಿಕೊಂಡಿದ್ದು, ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇಂಥದೊಂದು ಪತ್ರಿಕೆ ಇದೆ ಎಂದು ಗೊತ್ತೇ ಇರದಿದ್ದ ನನಗೆ ಈ ಪತ್ರಿಕೆಯನ್ನು ಒಂದು ವರ್ಷದ ಉಡುಗೊರೆಯಾಗಿ ನೀಡಿ ನನ್ನನ್ನು ಇನ್ನಷ್ಟು ಓದಲು ಪ್ರೇರೇಪಿಸಿದ ದಾವಣಗೆರೆಯ ಕೆ.ಎಂ.ವೀರಮ್ಮ ಅವರಿಗೆ ತುಂಬಾ ಆಭಾರಿಯಾಗಿದ್ದೇನೆ.

-ಡಾ.ಬಿ.ಎಂ.ಬೇವಿನಮರದ, ರಾಣೇಬೆನ್ನೂರು.

ಬುದ್ಧ ರೂಪಿಸಿದ್ದಲ್ಲ!

ಲೋಕೇಶ್ ಮೊಸಳೆ ಅವರ ಪಿ.ಎಚ್.ಡಿ. ಪ್ರಬಂಧದ ಸಾರಾಂಶ ಓದಿದೆ. ಭಾರತವು ಬುದ್ಧನ ನೇತೃತ್ವದಲ್ಲಿ ಮತ್ತು ಮಾರ್ಗದರ್ಶನದಲ್ಲಿ ಪ್ರಬುದ್ಧರಾಷ್ಟ್ರವಾಗಿ ಗುರುತಿಸಿಕೊಂಡಿದೆ ಎನ್ನುವ ಪ್ರಬಂಧಕಾರರ ನಿಲುವು ಸರಿಯಲ್ಲ, ಸಮರ್ಥನೀಯವೂ ಅಲ್ಲ. ಬುದ್ಧನಿಗಿಂತ ಸಾವಿರಾರು ವರ್ಷಗಳ ಪೂರ್ವದಲ್ಲಿಯೇ ಭಾರತ ಮತ್ತು ಭಾರತೀಯ ಸಂಸ್ಕೃತಿ ಅಸ್ತಿತ್ವದಲ್ಲಿತ್ತು ಮಾತ್ರವಲ್ಲ, ಪ್ರಬುದ್ಧಮಾನವಾಗಿತ್ತು.

ಭಾರತೀಯ ಪರಂಪರೆಯನ್ನು ರೂಪಿಸಿದ್ದು ಋಷಿಗಳು; ಬುದ್ಧ ಅಲ್ಲ. ಭಾರತವು ಋಷಿಪರಂಪರೆಯ ದೇಶ. ವೇದಗಳು ಮತ್ತು ಉಪನಿಷತ್ತುಗಳು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೃತಿಗಳು. ವೇದ ಮತ್ತು ಉಪನಿಷತ್ತುಗಳು ಉದಾತ್ತ ಮೌಲ್ಯಗಳನ್ನು, ಮಾನವೀಯತೆಯನ್ನು ಎತ್ತಿ ಹಿಡಿಯುವ ಪುರಾತನ ಗ್ರಂಥಗಳು. ಬುದ್ಧನು ಕೂಡ ವೇದ ಮತ್ತು ಉಪನಿಷತ್ತುಗಳಿಂದ ಪ್ರಭಾವಿತನಾಗಿದ್ದಾನೆ.

-ಮುಕ್ಕಣ್ಣ ಕಾರಿಗಾರ, ಯಾದಗಿರಿ.

ಚೂಟಿ ಚಿದಾನಂದ ಅವರ “ಅವನೌವ್ನ ಏನ ಸಿಂಗಾಪೂರ…!” ಅತ್ಯುತ್ತಮ ವಿಡಂಬನೆ ಲೇಖನ. ನಕ್ಕು ನಕ್ಕು ಕಣ್ಣಲ್ಲಿ ನೀರು ಬಂತು.

-ಅನಂತಪದ್ಮನಾಭನ್, ಬೆಂಗಳೂರು.

 

Leave a Reply

Your email address will not be published.