ಅನಿಸಿಕೆಗಳು

ಬದಲಾಗಲಿದೆ ಪ್ರಪಂಚ!

ಈ ಬಾರಿಯ ಸಮಾಜಮುಖಿ ಪತ್ರಿಕೆ ಎಂದಿನಂತೆ ವಿವಿಧ ವಿಷಯಗಳನ್ನಾಧರಿತವಾದ ಲೇಖನಗಳನ್ನು ಹೊಂದಿದೆ. ಉತ್ತಮವಾದ ಲೇಖನಗಳು. ಕೋವಿಡ್ ವೈರಸ್ ವಿಷಯಗಳ ಸುತ್ತಮುತ್ತ ಬರೆದ ಲೇಖನಗಳು ನಿಜಕ್ಕೂ ಆಸಕ್ತಿಪೂರ್ಣವಾಗಿವೆ. ಇಡೀ ಪ್ರಪಂಚವನ್ನೇ ತನ್ನ ಕಪಿಮುಷ್ಟಿಯಲ್ಲಿ ಬಂಧಿಸಿ ಹಿಡಿಟ್ಟಿರುವ ಈ ಸೂಕ್ಷ್ಮಾಣು ಜೀವಿಯ ಬಗ್ಗೆ ಎಷ್ಟೇ ಬರೆದರೂ ಸಾಲದು. ಹಲವೇ ವಾರಗಳಲ್ಲಿ ಇಡೀ ಪ್ರಪಂಚದ ಜನಜೀವನವನ್ನು ಅಲ್ಲೋಕಲ್ಲೋಲ ಮಾಡಿ ಅಟ್ಟಹಾಸದಿಂದ ಮೆರೆಯುತ್ತಿರುವ ಈ ವೈರಸ್ ಮುಂದೆಯೂ ತನ್ನ ಪ್ರಭಾವವನ್ನು ಬೀರುತ್ತಲೇ ಇರುತ್ತದೆ ಎನ್ನುವ ವಿಜ್ಞಾನಿಗಳ ಎಚ್ಚರಿಕೆ ಸ್ವಲ್ಪ ಆತಂಕದ ವಿಷಯ.

ಎರಡನೇ ಮಹಾಯುದ್ಧವಾದ ನಂತರ, ಮಾನವ ಸಂತತಿ ಇದುವರೆಗೂ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತ ಹೆಚ್ಚು ಕಡಿಮೆ ಶಾಂತ ಸ್ಥಿತಿಯಲ್ಲಿತ್ತು. ಅಲ್ಲಲ್ಲಿ ಘರ್ಷಣೆಗಳು, ಯುದ್ಧಗಳು ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದರೂ, ಅದರ ನೇರ ಪ್ರಭಾವ ಮತ್ತು ಪರಿಣಾಮ ಅಷ್ಟೊಂದು ಕಂಡುಬರಲಿಲ್ಲ. ಜಗತ್ತಿನ ವಿಜ್ಞಾನಿಗಳು ಇಂತಹದೊಂದು ಮಹಾಮಾರಿ ಬಡಿಯುವ ನಿರೀಕ್ಷೆ ಇದೆ ಎನ್ನುವ ಭವಿಷ್ಯವಾಣಿ ನುಡಿದಿದ್ದೇನೋ ಸತ್ಯ. ಆದರೆ ಅದರ ಪರಿಣಾಮ ಹೀಗಿರಬಹುದು ಎನ್ನುವ ಕಲ್ಪನೆ ಯಾರಿಗೂ ಇದ್ದಂತಿರಲಿಲ್ಲ.

ಕಡೆಗೆ ಈ ವೈರಾಣುವಿಗೆ ಲಸಿಕೆ ತಯಾರಾಗುತ್ತದೆ ನಿಜ. ಆದರೆ ಈ ಮಹಾಮಾರಿ ಇಲ್ಲಿಯವರೆಗೆ ತಂದೊಡ್ಡಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ದೊರಕಲು ಅನೇಕ ವರ್ಷಗಳೇ ಬೇಕಾಗಬಹುದು. ಜೊತೆಗೆ ಈ ಜಾಗತಿಕ ಸಮಾಜದ ನಡವಳಿಕೆಗಳೂ ಖಂಡಿತವಾಗಿ ಬದಲಾಯಿಸುತ್ತದೆ ಎಂದು ನನ್ನ ಅಭಿಪ್ರಾಯ. ಎಲ್ಲ ದೇಶದ ರಾಜಕೀಯ ವ್ಯವಸ್ಥೆಯಲ್ಲೂ ಬಹಳ ಮಟ್ಟಿನ ಮಾರ್ಪಾಡುಗಳನ್ನು ನೋಡಬಹುದೇನೋ! ಜನರ ನಡವಳಿಕೆಗಳೂ ಬದಲಾಯಿಸುತ್ತದೆ.

ಪ್ರತಿ ದೇಶವು ಇನ್ನೊಂದು ದೇಶವನ್ನು ಸಂಶಯಾತ್ಮಕ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದರೆ ಆಶ್ಚರ್ಯವೇನಿಲ್ಲ. ಜಾಗತಿಕ ಪ್ರಯಾಣ, ಪ್ರವಾಸೋದ್ಯಮ, ಹೀಗೆ ಹಲವು ಹತ್ತು ರಂಗಗಳಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಒಟ್ಟಿನಲ್ಲಿ ಮಾನವ ಸಂತತಿಯ ಇತಿಹಾಸದಲ್ಲಿ ಕೋವಿಡ್ ವೈರಸ್ ಪ್ರಕರಣ ಒಂದು ಮೈಲುಗಲ್ಲಾಗಿ ಉಳಿಯುವುದರಲ್ಲಿ ಸಂಶಯವೇ ಇಲ್ಲ. ಇಂತಹ ಸಮಸ್ಯೆಗಳಿಗೆ ಕೇವಲ ವೈಜ್ಞಾನಿಕ ಸಮುದಾಯವೇ ಪರಿಹಾರ ಹುಡುಕಬೇಕಾಗಿದೆ. ವಿಜ್ಞಾನವಲ್ಲದೆ ಮತ್ತಾವ ರಂಗದ ಸಮುದಾಯವು ಇಂತಹ ಜಾಗತಿಕ ಸಮಸ್ಯೆಯನ್ನು ಪರಿಹರಿಸಲಾಗದು. ಮೂಢ ನಂಬಿಕೆಗಳನ್ನೂ ಕೈಬಿಟ್ಟು, ಜ್ಞಾನದ ಹಾದಿಯಲ್ಲಿ ನಡೆದರೆ ಕ್ಷೇಮ. ಈ ಸಂಚಿಕೆಯನ್ನು ಹಂಚಿಕೊಂಡಿದ್ದಕ್ಕಾಗಿ ಬಹಳ ಧನ್ಯವಾದಗಳು.

-ಉಮಾ ವೆಂಕಟೇಶ್, ಅಮೆರಿಕಾ.


ಪಿಡಿಎಫ್‌ನಲ್ಲಿ ಓದಲು ಕಿರಿಕಿರಿ

ಎಪ್ರಿಲ್-ಮೇ 2020ರ “ಸಮಾಜಮುಖಿ” ಸಂಚಿಕೆಯಲ್ಲಿನ ಕೆಲವು ಲೇಖನಗಳನ್ನು ಓದುತ್ತಿದ್ದೇನೆ. ಸಾಕಷ್ಟು ಉತ್ತಮ ಲೇಖನಗಳಿವೆ. ಆದರೆ, ಪಿಡಿಎಫ್‌ನಲ್ಲಿ ಓದಲು ಕಿರಿಕಿರಿ ಎನಿಸುತ್ತಿದೆ. ದಯವಿಟ್ಟು ಶೀಘ್ರದಲ್ಲಿಯೇ ಈ ಸಂಚಿಕೆಯನ್ನು ಮುದ್ರಿಸಿ, ಕಡೇಪಕ್ಷ ಚಂದಾದಾರರಿಗಾದರೂ ಕಳುಹಿಸಿ ಕೊಡಬೇಕಾಗಿ ವಿನಂತಿ. ಹೆಚ್ಚಿನ ವೆಚ್ಚವನ್ನು ಚಂದಾದಾರರಾದ ನಾವು ಭರಿಸುತ್ತೇವೆ. ಒಮ್ಮೆಲೇ ಜೂನ್ ಸಂಚಿಕೆಯನ್ನು ಮುದ್ರಿಸಿದರೆ ಮಧ್ಯದಲ್ಲಿನ ಈ ಸಂಚಿಕೆಯು ಉಳಿದಂತಾಗಿ ನನ್ನಂತೆ ಈ ಸಂಚಿಕೆಯನ್ನು ಸಂಗ್ರಹಿಸುವ ಅನೇಕ ಓದುಗರಿಗೆ ತುಂಬಾ ಅನುಕೂಲವಾಗುತ್ತದೆ.

-ಶಂಕರಗೌಡ. ವೈ. ಪಾಟೀಲ, ಬಾದಾಮಿ.


ಆಳಕ್ಕೆ ಇಳಿಯುವುದಿಲ್ಲ!

ಸಮಾಜಮುಖಿ ಪತ್ರಿಕೆ ಕನ್ನಡದಲ್ಲಿ ವಿಚಾರಪೂರಿತ ಪತ್ರಿಕೆಗಳ ಕೊರತೆಯನ್ನು ತುಂಬಲು ಪ್ರಯತ್ನಿಸುತ್ತಿರುವುದು ಸ್ವಾಗತಾರ್ಹವಾದುದು. ಸಮಾಜ, ಪರಿಸರ, ಸಾಹಿತ್ಯ, ವಿಜ್ಞಾನ, ಸಿನಿಮಾ, ಪುಸ್ತಕ ಹೀಗೆ ಹಲವು ವೈವಿಧ್ಯಗಳನ್ನಿಟ್ಟುಕೊಂಡು ಅದರಲ್ಲಿ ಜನಪರ ಕಾಳಜಿಯ ಬರಹಗಳನ್ನು ಪ್ರಕಟಿಸುತ್ತಿದೆ. ಕನ್ನಡ ಮಾಧ್ಯಮಲೋಕದಲ್ಲಿರುವ ಶೂನ್ಯವನ್ನು ಸರಿದೂಗಿಸುವ ಅವಶ್ಯಕತೆ ಬಹಳ ಇದೆ. ಆ ನಿಟ್ಟಿನಲ್ಲಿ ಸಮಾಜಮುಖಿಯ ಕಾರ್ಯ ಗಮನಾರ್ಹವಾದುದು.

ಪತ್ರಿಕೆಯಲ್ಲಿನ ಸಾಮಾಜಿಕ ಬರಹಗಳಲ್ಲಿ ರಾಜಕೀಯ ಗ್ರಹಿಕೆಯ ಕೊರತೆಯಿದೆ. ಉದಾಹರಣೆಗೆ ಪರಿಸರ ನಾಶದ ಕುರಿತಾದ ಲೇಖನಗಳಲ್ಲಿ ಬಹುತೇಕವು ಪಾರಿಸರಿಕ ಸಮಸ್ಯೆಗೆ ಜನಸಂಖ್ಯೆಯೇ ಕಾರಣ ಎಂಬಂತಹ ಸರ್ಕಾರಿ ವಾದಗಳನ್ನೇ ಮುಂದಿಡುತ್ತವೆ. ಪರಿಹಾರ ಸೂಚಿಸುವಾಗಲೂ ಸ್ಪಷ್ಟತೆಯಿಲ್ಲದೆ ಸರ್ಕಾರ ಬದ್ಧತೆಯಿಂದ ಮಾಡಬೇಕು, ಜನರು ಸೇರಿಕೊಳ್ಳಬೇಕು… ಹೀಗೆ ಡಾಳಾಗಿ ಮುಕ್ತಾಯವಾಗುತ್ತವೆ. ಕೊರೊನಾ ನಂತರದ ಪರಿಸ್ಥಿತಿಯ ಲೇಖನಗಳೂ ಸಮಸ್ಯೆಯ ವಾಸ್ತವತೆಯ ಆಳಕ್ಕೆ ಇಳಿಯುವುದಿಲ್ಲ.

ಆ ಲೇಖನಗಳು ದೇಶದ ಬಹುಸಂಖ್ಯಾತ ಜನಸಾಮಾನ್ಯರನ್ನು ಗಮನಕ್ಕೆ ತೆಗೆದುಕೊಂಡಿರುವುದು ಕಡಿಮೆ. ಮಧ್ಯಮ ಮೇಲ್ಮಧ್ಯಮ ವರ್ಗದ ದೃಷ್ಟಿಕೋನ ಅವುಗಳಲ್ಲಿ ಹೆಚ್ಚಾಗಿದೆ. ನನಗೆ ಏಪ್ರಿಲ್- ಮೇ ತಿಂಗಳ ಸಂಚಿಕೆಯಲ್ಲಿ ಕಂಡುಬಂದ ಪ್ರಮುಖ ವಿಚಾರಗಳಿವು.

-ನಂದಕುಮಾರ್ ಕೆ.ಎನ್., ಕೊಪ್ಪ.


ಧನ್ಯವಾದಗಳು, ತುಂಬ ಸುಂದರವಾಗಿ, ಸಮಗ್ರವಾಗಿ ಸಮಾಜಮುಖಿ ಡಿಜಿಟಲ್ ಪತ್ರಿಕೆ ಮೂಡಿಬಂದಿದೆ (ಎಂದಿನಂತೆ!). ಮಹತ್ವದ್ದೆನಿಸಿದ ಕೆಲವು ಲೇಖನಗಳನ್ನೂ, ಚಿತ್ರವಿಮರ್ಶೆ, ಕವನಗಳನ್ನೂ ಓದಿದೆ. ಆದರೆ ಪೂರ್ತಿ ಮುಗಿಸಲು ವಾರವೇ ಬೇಕು. ನಿಧಾನ ಓದುತ್ತೇನೆ. ಧನ್ಯವಾದಗಳು.

-ನಾಗೇಶ ಹೆಗಡೆ, ಬೆಂಗಳೂರು.


ಈ ಸಂಚಿಕೆ ನಿಜಕ್ಕೂ ಅದ್ಭುತ. ಪಿಡಿಎಫ್ ಮೇಲೆ ಕ್ಲಿಕ್ ಮಾಡಿದರೆ ಯೂಟ್ಯೂಬ್ ಬರುತ್ತೆ. ಪರಿಸರ ಕುರಿತ ಲೇಖನಗಳಿವೆ. ಬೆರಗು ಮೂಡಿಸಿದೆ. ಕಂಟನಕುಂಟೆಯವರ ಬರಹ ಚೆನ್ನಾಗಿದೆ.

-ರವಿ ಎಂ. ಸಿದ್ಲಿಪುರ, ಶಿವಮೊಗ್ಗ.


Great in the middle of all this.

-ಎಸ್.ಆರ್.ವಿಜಯಶಂಕರ್, ಬೆಂಗಳೂರು.


ನೀವು ಕಳುಹಿಸಿಕೊಟ್ಟ ಸಮಾಜಮುಖಿ ಸಂಚಿಕೆ ಓದಿದೆ. ಥೀಮ್ ಕೇಂದ್ರಿತ ಬರಹಗಳ ಗುಚ್ಛದಲ್ಲಿಯೂ ನೀವು ಮಂಡಿಸಿದ ವೈವಿಧ್ಯ ಖುಷಿಕೊಟ್ಟಿತು.

-ಅವಿನಾಶ ಜಿ., ಜರ್ಮನಿ.


ವೈವಿಧ್ಯಮಯ ಹಾಗೂ ಸಮೃದ್ಧ ಸಂಚಿಕೆ. ಈ ಬೃಹತ್ ಸಂಚಿಕೆ ರೂಪಿಸುವ ಹಿಂದಿರುವ ಅಪಾರ ಶ್ರಮ, ಕಾಳಜಿ ಎದ್ದು ಕಾಣುತ್ತಿವೆ. ಧನ್ಯವಾದಗಳು.

-ಎಸ್.ಎಂ.ಶಶಿಧರ, ಹೊಸಪೇಟೆ.


Very good issue. Your editorial as usual very strong piece.

-ಎನ್.ಎಸ್.ಗುಂಡೂರ, ದಾವಣಗೆರೆ.


ಮೊಟ್ಟ ಮೊದಲಿಗೆ ಇಷ್ಟೊಂದು ಪಿ.ಡಿ.ಎಫ್. ಮೃಷ್ಟಾನ್ನದ ಜ್ಞಾನಭೋಜನವನ್ನು ಬಲಗೈಗೆ ತಿಳಿಯದಂತೆ ಎಡಗೈಲಿ ನೀಡಿದ ಸಮಾಜಮುಖಿಗೆ ಧನ್ಯವಾದಗಳು. ಪಿ.ಬಿ.ಕೋಟೂರ ಅವರು ಕುಶಲತೆ ಹಾಗೂ ತಂತ್ರಜ್ಞಾನದ ಮಾಹಿತಿ ನೀಡಿದ್ದಾರೆ. ಉತ್ತಮ ಲೇಖನ. No compromise in articles…Super samajamukhi.

-ಎಚ್.ಕೆ.ಭಾರ್ಗವ, ಗದಗ.


ಎರಡು ತಿಂಗಳ ಈ ಸಂಚಿಕೆಯಲ್ಲಿ ಉತ್ತಮ ಮಾಹಿತಿಯುಳ್ಳ ಲೇಖನಗಳ ಸರಮಾಲೆಯೇ ಇದೆ. ನಿಧಾನಕ್ಕೆ ಓದುತ್ತಿರುವೆ. ಸಂಗ್ರಹಯೋಗ್ಯ ಸಂಚಿಕೆಯಿದು. ಥ್ಯಾಂಕ್ಸ್.

-ಅಖಿಲೇಶ್ ಚಿಪ್ಪಳಿ, ಸಾಗರ.


Probably for the first time a Kannada periodical has covered Corona this extensively and comprehensively from a reader perspective. Great reading. Thanks.

-ರಾಜಾರಾಮ ತಲ್ಲೂರ, ಬೆಂಗಳೂರು.


ಪ್ರಕಾಶ ಕಂದಕೂರ ಅವರ ಚಿತ್ರಗಳು ಕತೆ ಸಾರುತ್ತವೆ. ಅವರ ಅನೇಕ ಚಿತ್ರಗಳು ಬಹುಮಾನ ಪಡೆದಿವೆ.    ಸಮಾಜಮುಖಿ photo display ವೃತ್ತಿಪರತೆ ತೊರಿಸುತ್ತೆ.

-ಸಾಗ್ಗೆರೆ ರಾಮಸ್ವಾಮಿ, ಬೆಂಗಳೂರು.


The photos (‘Nanna Click’) bring out the plight of children of poor parents particularly of migrant labourers. The second photo is particularly powerful. To me It portrays a situation where children’s self-respect is sacrificed. It looks like they are made to collect the free food which is being distributed (in the background). When things get tough for people it gets more tougher for the children.

-ಮಹಾದೇವ ಡಂಬಳ, ಕೊಪ್ಪಳ.


ಕೊರೊನದ ಕರಾಳ ಪರಿಣಾಮದ ಪೂರ್ಣ ಚಿತ್ರವೇ ಇಲ್ಲಿದೆ. ಅಭಿವೃದ್ಧಿ ಹೊಂದಿದ ದೇಶಗಳೂ 8-10 ತಿಂಗಳ ಮುಂದಿನದನ್ನು ಯೋಚಿಸದ, ಯೋಜಿಸದ ನೀತಿಗಳು ಮತ್ತಷ್ಟು ಭೀಕರತೆ ಉಂಟು ಮಾಡಿರುವುದನ್ನು ಸೂಕ್ಷ್ಮವಾಗಿ ಗಮನಿಸಿ ತಿಳಿಸಲಾಗಿದೆ. ಮುಂದಿನ ಕಷ್ಟತಮ ಬದುಕನ್ನು ಹಸನುಗೊಳಿಸಿಕೊಳ್ಳುವ ಮಾರ್ಗದರ್ಶನವೂ ಇದೆ.

-ಬಸವರಾಜು ಡಿ.ಎಸ್. ವಿಪ್ರೋ, ಬೆಂಗಳೂರು.


ಕೊರಾನೋತ್ತರ ಪ್ರಪಂಚ ಎಲ್ಲ ಕ್ಷೇತ್ರಗಳಲ್ಲಿಯೂ ಹೊಸ ಹೊಸ ಆಯಾಮಗಳನ್ನು ಕಂಡುಕೊಳ್ಳಬಹುದು, ಹೊಸ ಅವಕಾಶಗಳು ತೆರೆದುಕೊಳ್ಳಬಹುದು ಎಂಬುದು ಚೆನ್ನಾಗಿ ಮೂಡಿಬಂದಿದೆ. ಈ ಪತ್ರಿಕೆಯು ಚೆನ್ನಾಗಿರುವ ಹಾಗಿದೆ. ಪೂರ್ತಿ ಓದಬೇಕು. ಷೇರ್ ಮಾಡಿದ್ದಕ್ಕೆ ಧನ್ಯವಾದಗಳು.

-ಡಾ.ಸುಧೀಂದ್ರ ಗರ್ಗೇಶ, ಬೆಂಗಳೂರು.


ವ್ಯಕ್ತಿಗಳು ನಿರಂತರವಾಗಿ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಪ್ರಸ್ತುತ ಪರಿಸ್ಥಿತಿಯನ್ನು ಹೇಗೆ ಚೆನ್ನಾಗಿ ನಿರ್ವಹಿಸಬಹುದು ಎಂಬುದರ ಒಳನೋಟ ದೊರಕಿತು. ಇದು ವಿವೇಕಯುತವಾಗಿದ್ದು ಮತ್ತು ಪರಿಸ್ಥಿತಿಯನ್ನು ಎದುರಿಸುವ ಧೈರ್ಯ ನಮ್ಮಲ್ಲಿದ್ದರೆ ನಾವು ವಿಜೇತರಾಗಿ ಹೊರಬರಬಹುದು ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೊಸ ತಂತ್ರಜ್ಞಾನ ಕೌಶಲ ಕಲಿಯಲು ಸಿದ್ಧರಾಗುವಂತೆ ಯುವ ಐಟಿ ಎಂಜಿನಿಯರ್‌ಗಳಿಗೆ ಲೇಖನವು ಮಾರ್ಗದರ್ಶನ ನೀಡುತ್ತದೆ.

-ಸುನೀಲ್ ಕಾಳಾಚಾರ್, ಬೆಂಗಳೂರು.


ಪಿ.ಬಿ.ಕೋಟೂರ ಅವರು ಕೊರೊನಾ ಪಿಡುಗು ಎಂತಹ ಸಾಮಾಜಿಕ ಬವಣೆ, ವೃತ್ತಿ ಜೀವನದಲ್ಲಿ ಕಳವಳ,  ಔದ್ಯೋಗಿಕವಾಗಿ ದುಷ್ಪರಿಣಾಮ ಬೀರುತ್ತಿದೆ ಎಂದು ವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ. ಈ ದುಷ್ಪರಿಣಾಮದಲ್ಲಿ ಎಲ್ಲಾ ಜೀವಿಗಳಿಗೂ ಅವಕಾಶದ ಬಾಗಿಲು ತೆರೆದೇ ಇರುತ್ತದೆ. ಪ್ರತಿಯೊಬ್ಬರೂ ಜೀವನದ ಉನ್ನತಿಗಾಗಿ ನೈಪುಣ್ಯ ಬೆಳೆಸಿಕೊಳ್ಳುವ ಬಗ್ಗೆ ಬಲು ಉಪಯುಕ್ತ ಮಾಹಿತಿ ನೀಡಿರುತ್ತಾರೆ.

-ದತ್ತಪ್ರಕಾಶ್ ಪಿ. ಏಕಬೋಟೆ, ಬೆಂಗಳೂರು.

Leave a Reply

Your email address will not be published.