ಅನ್‌ಲೈನ್ ಶಿಕ್ಷಣ ನೈಜತೆಯ ಅನಾವರಣ

ಆನ್‌ಲೈನ್ ಶಿಕ್ಷಣ ಬದಲಿ, ಪರ್ಯಾಯ ಶಿಕ್ಷಣ ವ್ಯವಸ್ಥೆ ಅಲ್ಲ. ಇದನ್ನು ಮುಖಾಮುಖಿ ಶಿಕ್ಷಣದ ಜೊತೆಗೆ ಪೂರಕವಾಗಿ ಬಳಸಿಕೊಳ್ಳಬಹುದು.

ಕೋವಿಡ್-19ರ ಕಾರಣದಿಂದ ಲಾಕ್‌ಡೌನ್ ಘೋಷಣೆಯಾಗಿದೆ. ದಿನನಿತ್ಯದ ಜೀವನದಲ್ಲಿ ಜನ ಸಮುದಾಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಮುಂದೇನು? ಎನ್ನುವ ಭಯ-ಆತಂಕಗಳು ಸಾಮಾನ್ಯವಾಗಿ ಎಲ್ಲಾ ಜನರಲ್ಲಿದೆ. ಅದರಲ್ಲೂ ವಿಶೇಷವಾಗಿ ಪಾಲಕರಿಗೆ ತಮ್ಮ ಮಕ್ಕಳ ಶಿಕ್ಷಣದ ಕುರಿತು ಬಹು ದೊಡ್ಡ ಆತಂಕ ಎದುರಾಗಿದೆ. ಮಕ್ಕಳ ಮುಂದಿನ ದಿನದ ಕಲಿಕೆಯ ಕುರಿತು ಸಾಕಷ್ಟು ಗೊಂದಲಗಳು ಅವರಲ್ಲಿವೆ. 2020-21ನೇ ಸಾಲಿನಲ್ಲಿ ಶಾಲೆಗಳು ಪ್ರತಿವರ್ಷದಂತೆ ನಿಗದಿತ ಅವಧಿಯಲ್ಲಿ ಆರಂಭವಾಗುವ ಸಾಧ್ಯತೆಗಳು ಬಹುತೇಕ ಇಲ್ಲ. ಒಂದು ಕಡೆ ಕರೋನಾ ವೈರಸ್‌ನ ಕುರಿತಾದ ಸುರಕ್ಷತಾ ಭಯ, ಮತ್ತೊಂದು ಕಡೆ ಯಾವಾಗ ಆರಂಭವಾಗುತ್ತವೆ ಎನ್ನುವ ಸಂದಿಗ್ಧ ಸನ್ನಿವೇಶ. ಈ ಸಾಲಿನಲ್ಲಿ ಎಲ್ಲವೂ ಸೂಸೂತ್ರವಾಗಿ ನಡೆಸಲು ಶಿಕ್ಷಣ ಇಲಾಖೆ ಚಿಂತನ-ಮಂಥನ ನಡೆಸುತ್ತಿದೆ. ಇದಕ್ಕೆ ಪರ್ಯಾಯ ಎನ್ನುವಂತೆ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ದೂರಶಿಕ್ಷಣ, ಔಟಿಟiಟಿe ಪಾಠಗಳನ್ನು ದಿನಪೂರ್ತಿ ಆರಂಭಿಸಿವೆ.

ಈ ಹಿಂದೆ ಮೊಬೈಲನ್ನು ಶಾಲೆಗೆ ತರಬಾರದು ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಇಂದು ಮೊಬೈಲೊಳಗೆ ಶಾಲೆ ತಂದಿರುವುದು ವಿಪರ್ಯಾಸವಲ್ಲವೇ? ಕೆಲವು ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಸದಾ ಮೊಬೈಲ್‌ನಲ್ಲಿ ಮತ್ತು ಅಂತರಜಾಲದಲ್ಲಿಯೇ ಸುತ್ತುವಂತೆ ಮಾಡಿವೆ. ಇದರಿಂದ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮಗಳೇ ಹೆಚ್ಚಾಗುತ್ತವೆ. ಇದೆಲ್ಲವೂ ಜಾಗತೀಕರಣದ ಫಲ ಎನ್ನಬಹುದು. ನಮ್ಮಲ್ಲಿ ಗುರುಕುಲದಿಂದ ಮತ್ತು ಪರಂಪರಾಗತವಾಗಿ ಸೇವಾರೂಪದಲ್ಲಿ ಬಂದಿದ್ದ ಶಿಕ್ಷಣ, ಜಾಗತೀಕರಣದ ಪ್ರಭಾವದಿಂದ ಪ್ರಸ್ತುತ ವ್ಯಾಪಾರೀಕರಣವಾಗಿದೆ. ಇದರ ಜೊತೆಗೆ ಬಹಳ ಮುಖ್ಯವಾಗಿ ಕಲಿಯಬೇಕು ಎಂಬುದು ಮಕ್ಕಳ ಸಹಜ ಪ್ರೀತಿ ಆಗಬೇಕೇ ವಿನಾ ಪಾಲಕರ ಆಸೆಯಾಗಬಾರದು. ಸಾಲಸೋಲ ಮಾಡಿಯಾದರೂ ಮಕ್ಕಳನ್ನು ಕಾನ್ವೆಂಟ್ ಶಾಲೆಗಳಲ್ಲಿ ಓದಿಸಬೇಕೆಂಬ ಹಂಬಲ ಪಾಲಕರಲ್ಲಿ ಇಂದು ತೀವ್ರವಾಗುತ್ತಿದೆ. ನಮ್ಮ ಪಾಲಕರು ದೊಡ್ಡ ದೊಡ್ಡ ಶಾಲೆಗಳ ಬಣ್ಣ ಬಣ್ಣದ ಕಟ್ಟಡ, ಜಾಹೀರಾತುಗಳ ಆಕರ್ಷಣೆಗೆ ಒಳಗಾಗಿ ಒಳಗಡೆ ಪ್ರವೇಶಿಸುತ್ತಾರೆ. ನಂತರ ಅಲ್ಲಿಂದ ಹೊರಬರಲು ಆಗದೇ ಒದ್ದಾಡುತ್ತಾರೆ. ಈ ಒದ್ದಾಟಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದೇ ಆನ್‌ಲೈನ್ ಪಾಠಗಳು.

ಹಲವು ಖಾಸಗಿ ಶಾಲೆಗಳು ಆನ್‌ಲೈನ್ ಪಾಠದ ಹೆಸರನ್ನು ಬಳಸಿಕೊಂಡು ದೊಡ್ಡ ಪ್ರಚಾರ ಮಾಡಿಕೊಳ್ಳುತ್ತಿವೆ. ಮಕ್ಕಳ ಒಳಿತಿಗಿಂತ ಅವರಿಗೆ ಪ್ರಚಾರ ಮತ್ತು ವ್ಯಾಪಾರೀಕರಣವೇ ಬಹಳ ಮಹತ್ವವಾಗುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ. ಇದು ಎಲ್.ಕೆ.ಜಿ-ಯು.ಕೆ.ಜಿ ಮಕ್ಕಳನ್ನೂ ಬಿಟ್ಟಿಲ್ಲ ಅಂದ ಮೇಲೆ ಎಷ್ಟು ವ್ಯಾಪಕವಾಗಿ ಆವರಿಸಿದೆ ಎಂಬುದನ್ನು ಗಮನಿಸಬಹುದು. ತರಗತಿಗಳ ಶಿಕ್ಷಕ-ಶಿಕ್ಷಕಿಯರು ತಮಗೆ ಸಂಬಂಧಿಸಿದ ಪಾಠಗಳನ್ನು ವಿಡಿಯೋ ಮಾಡಿ ಮಕ್ಕಳ ಮೊಬೈಲ್‌ಗೆ ಕಳಿಸುತ್ತಾರೆ. ಇನ್ನು ಕೆಲವು ಕಡೆ ಪಾಠಬೋಧನೆ ಅಂತರಜಾಲದ ನೆರವಿನಿಂದ ನೇರವಾಗಿ ನೋಡಬಹುದಾಗಿದೆ. ಯೂಟ್ಯೂಬ್ ಅಪ್‌ಲೋಡ್ ಮಾಡುವವರೂ ಇಲ್ಲದಿಲ್ಲ. ಅದನ್ನು ನೋಡಿ-ಕೇಳಿ ಮಕ್ಕಳು ತಮ್ಮ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು ಎನ್ನುವ ಆಶಯ ಇದರ ಹಿಂದಿದೆ.

ಆನ್‌ಲೈನ್ ಪಾಠದಿಂದ ಆಗುವ ಅನುಕೂಲಗಳನ್ನು ಗಮನಿಸಿದರೆ, ತರಗತಿಗಳಲ್ಲಿ ನೂತನ ತಂತ್ರಜ್ಞಾನ ಪ್ರವೇಶಿಸಬೇಕು ಎನ್ನುವ ನಿಲುವಿಗೆ ಇದು ಪೂರಕವಾಗಿದೆ. ಸಾಂಪ್ರದಾಯಿಕ ತರಗತಿಗಳಲ್ಲಿ ಭಾಗವಹಿಸುವ ಸಾಮರ್ಥ್ಯವನ್ನು ಹೊಂದಿರದ ವಿದ್ಯಾರ್ಥಿಗಳಿಗೆ ಅಂದರೆ ಅಂಗವೈಕಲ್ಯ ಹೊಂದಿರುವ ಅಥವಾ ಕೆಲಸ ನಿರ್ವಹಿಸುತ್ತಾ ಉನ್ನತ ಶಿಕ್ಷಣ ಪೂರೈಸುವವರಿಗೆ ಇದು ವರದಾನವಾಗಿದೆ. ಆನ್‌ಲೈನ್ ಪಾಠದ ಸಮಯದಲ್ಲಿ ಪ್ರಶ್ನೆಗಳನ್ನು ಕೇಳಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಬಯಸಿದಾಗಲೆಲ್ಲಾ ವರ್ಗ ಉಪನ್ಯಾಸಗಳ ವಿಡಿಯೋ ನೋಡಬಹುದು. ವೀಡಿಯೊ ಉಪನ್ಯಾಸಗಳನ್ನು ಅರ್ಥವಾಗುವವರೆಗೂ ಪದೇ ಪದೇ ವೀಕ್ಷಿಸುತ್ತಾ ಗೊಂದಲವನ್ನು ನಿವಾರಿಸಿಕೊಳ್ಳಬಹುದಾಗಿದೆ. ಅಲ್ಲಿಯೂ ಸಮಾಧಾನವಾಗದಿದ್ದರೆ, ಸ್ಪಷ್ಟೀಕರಣಕ್ಕಾಗಿ ಪುಸ್ತಕವನ್ನು ಓದಬಹುದು, ಗೂಗಲ್ ಬಳಸಿ ವಿವರಣೆಯನ್ನು ಹುಡುಕಬಹುದು. ಮಕ್ಕಳಲ್ಲಿ ಹುಡುಕುವ ಮನೋಭಾವ ಬೆಳೆಸುತ್ತದೆ. ವಿಜ್ಞಾನದಲ್ಲಿನ ಲ್ಯಾಬ್, ಸಮಾಜದ ಪ್ರದೇಶಗಳ ನೇರವಾಗಿ ವಿಡಿಯೋ ಮೂಲಕ ದರ್ಶನ ಮಾಡಿಸುವಂತಹ ಕೆಲವು ಉಪಯೋಗಗಳನ್ನು ಇಲ್ಲಿ ಕಾಣಬಹುದಾಗಿದೆ.

ಆನ್‌ಲೈನ್ ಪಾಠದಿಂದ ಸಾಕಷ್ಟು ತೊಂದರೆಗಳು ಇವೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಬಹಳ ಮುಖ್ಯವಾಗಿ ಮಕ್ಕಳ ಆರೋಗ್ಯದ ಮೆಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಆನ್‌ಲೈನ್ ತರಗತಿಗಳನ್ನು ಕಂಪ್ಯೂಟರ್ ಮೂಲಕ ಸಂಪೂರ್ಣವಾಗಿ ಮಾಡಲಾಗುವುದರಿಂದ, ತಾಂತ್ರಿಕವಾಗಿ ಹೆಚ್ಚು ಸಮಸ್ಯೆಗಳು ಕಾಡುತ್ತವೆ. ಆನ್‌ಲೈನ್ ತರಗತಿ ವ್ಯವಸ್ಥೆಗಳನ್ನು ನಿರ್ವಯಿಸಲು ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಮಾಹಿತಿ ಹೊಂದಿರಬೇಕು. ತಾಂತ್ರಿಕ ಸಮಸ್ಯೆಗಳಿದ್ದಾಗ, ತರಗತಿಯನ್ನು ಪ್ರವೇಶಿಸುವುದು ಅಥವಾ ಲೈವ್‌ನಲ್ಲಿ ಭಾಗವಹಿಸಲು ಆಗುವುದಿಲ್ಲ. ಆನ್‌ಲೈನ್ ಕಲಿಕಾ ಕೌಶಲ್ಯದ ಕೊರತೆಯಿರುವ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗುತ್ತಾರೆ. ಸ್ವಯಂ-ಶಿಸ್ತಿನ ಕೊರತೆಯಿರುವ ವಿದ್ಯಾರ್ಥಿಗಳು ಆನ್‌ಲೈನ್ ಪಾಠಗಳಲ್ಲಿ ಹಿಂದೆ ಬೀಳುತ್ತಾರೆ. ವೈಯಕ್ತಿಕ ಸಂಪರ್ಕದ ಕೊರತೆ ಮತ್ತು ಸಮಯ ನಿರ್ವಹಣಾ ಕೌಶಲ್ಯಗಳ ಅರಿಯದ ಮಕ್ಕಳ ಕೈಗೆ ಇದು ನಿಲುಕುವುದಿಲ್ಲ. ವಿದ್ಯಾರ್ಥಿಗಳು ಬೇಗನೇ ತಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಾರೆ.

ಕ್ಲಾಸ್ ರೂಂನಲ್ಲಿ ನಡೆಯುವ ಪ್ರಕ್ರಿಯೆಗಳಲ್ಲಿ ಅಧ್ಯಾಪಕರು ಪ್ರತಿಯೊಬ್ಬ ವಿದ್ಯಾರ್ಥಿ ಮೇಲೂ ನೇರವಾಗಿ ಗಮನವಿಡಬಹುದಾಗಿದೆ. ಆದರೆ ಅದು ಇಲ್ಲಿ ಸಾಧ್ಯವೇ ಇಲ್ಲ. ಪಾಠ ಬೋಧನೆಯನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸಲು ಸಾಧ್ಯವಿಲ್ಲ. ಸಾಂಪ್ರದಾಯಿಕ ಉಪನ್ಯಾಸವೊಂದರಲ್ಲಿ ವಿದ್ಯಾರ್ಥಿಗಳು ವಿಷಯವನ್ನು ಅನುಸರಿಸದಿದ್ದಾಗ ಪ್ರಾಧ್ಯಾಪಕರು ವೇಗ ಕಡಿಮೆ ಅಥವಾ ಬದಲು ಮಾಡಬಹುದು. ಆದರೆ ಆನ್‌ಲೈನ್ ಕೋರ್ಸಿನಲ್ಲಿ ಅದು ಸಾಧ್ಯವಾಗುವುದಿಲ್ಲ.

ಸಾಂಪ್ರದಾಯಿಕ ತರಗತಿಯಲ್ಲಿ ಮುಖಾಮುಖಿ ಅನುಭವಗಳನ್ನು ಇಲ್ಲಿ ಪುನರಾವರ್ತಿಸಲು ಸಾಧ್ಯವಿಲ್ಲ. ಶಿಕ್ಷಕರೊಂದಿಗೆ ನೇರ ಸಂಪರ್ಕವನ್ನು ಹೊಂದುವುದಿಲ್ಲ ಎನ್ನಬಹುದು. ವಿಷಯದ ಕುರಿತು ಒಳನೋಟಗಳನ್ನು ವಿಸ್ತರಿಸಲು ತರಗತಿಯ ಸಮಯದಲ್ಲಿ ಪ್ರಶ್ನೆಗಳನ್ನು ಕೇಳುವ ಸ್ವಾತಂತ್ರ್ಯ ಕಳೆದುಹೋಗುತ್ತದೆ. ಇ-ಮೇಲ್ ಅಥವಾ ಫೋನ್ ಮೂಲಕ ಬೋಧಕರನ್ನು ಪ್ರಶ್ನೆ ಕೇಳಬೇಕಾಗಿರುವುದರಿಂದ ಸಂಪರ್ಕ ಸಿಗದಿರುವ ಸಾಧ್ಯತೆಗಳೂ ಇವೆ. ಪ್ರಶ್ನೆಗಳಿಗೆ ತಕ್ಷಣ ಉತ್ತರ ಸಿಗದಿರಲೂಬಹುದು. ಬೋಧಕ ಮತ್ತು ಕಲಿಕಾರ್ಥಿ ನಡುವೆ ಸುಮಧುರ ಸಂಬಂಧ ಉಂಟಾಗುವುದಿಲ್ಲ.

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಅಗತ್ಯ

ವಿಶ್ವವನ್ನೇ ತಲ್ಲಣಗೊಳಿಸಿರುವ ಕರೋನ ಪಿಡುಗು ಜಗತ್ತಿನ ವಿದ್ಯಮಾನಗಳಲ್ಲಿ ಮತ್ತು ಕಾರ್ಯವಿಧಾನಗಳಲ್ಲಿ ಆಮೂಲಾಗ್ರ ಬದಲಾವಣೆಗಳಿಗೆ ನಾಂದಿಯಾಗಬಹುದಾದ ಸುಳಿವುಗಳು ಗೋಚರಿಸುತ್ತಿವೆ.  ಕಳೆದೆರಡು ವಾರಗಳಲ್ಲಿನ ಬೆಳವಣಿಗೆಗಳು ಶಿಕ್ಷಣ ಕ್ಷೇತ್ರದಲ್ಲಿ ತುರ್ತಾಗಿ ಆಗಬೇಕಾದ ಸುಧಾರಣೆಯ ಅಗತ್ಯವನ್ನು ಮನಗಾಣಿಸಿವೆ.

ಲಾಕ್ ಡೌನ್ ಆರಂಭದಲ್ಲಿ ಒಂದೆರಡು ವಾರಗಳು ಕಾದು ನೋಡಿದ ಹಲವಾರು ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್ ತರಗತಿಗಳನ್ನು ಆರಂಭಿಸಿವೆ. ಇದು ಒಳ್ಳೆಯ ಕ್ರಮ ಹೌದಾದರೂ, ಮೇಲ್ವರ್ಗದ ಪೋಷಕರೂ ಅಗತ್ಯ ಪರಿಕರಗಳನ್ನು ಹೊಂದಿಸಿಕೊಂಡು ಸಿದ್ಧರಾಗಲು ಪರದಾಡಿದ್ದು ಗಮನಾರ್ಹ. ಯಾವುದೇ ಒಂದು ಯೋಜನೆಯ ಯಶಸ್ಸಿಗೆ ಪೂರ್ವಸಿದ್ಧತೆ ಅಗತ್ಯವೆಂಬ ಪ್ರಥಮ ಪಾಠವನ್ನು ಇದು ಮತ್ತೆ ಸಾಬೀತುಗೊಳಿಸಿದೆ.

ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಲು ಶಕ್ಯವಾಗಿರುವ ಖಾಸಗಿ ಶಾಲೆಗಳು ಮುಂಬರುವ ದಿನಗಳಲ್ಲಿ ಇ-ಕಲಿಕೆಗೆ ಬೇಕಾದ ವೇದಿಕೆಯನ್ನು ಸಿದ್ಧಗೊಳಿಸಿಕೊಳ್ಳಬಹುದು. ಆದರೆ, ಮೊದಲೇ ಮೂಲಭೂತ ಸೌಲಭ್ಯಗಳಿಂದಲೂ ವಂಚಿತವಾಗಿರುವ ಸರ್ಕಾರಿ ಶಾಲೆಗಳು ಈ ನಿಟ್ಟಿನಲ್ಲಿ ಯೋಚಿಸುವುದೂ ಸಹ ಕಠಿಣವೇ ಸರಿ. ಈ ಪರಿಸ್ಥಿತಿಯು, ದೇಶದಲ್ಲಿನ ಖಾಸಗಿ ಹಾಗು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ನಡುವೆ ಈಗಾಗಲೇ ಇರುವ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.

ಲಂಡನ್‌ನ ಇನ್ ಸ್ಟಿಟ್ಯೂಟ್ ಆಫ್ ಎಜುಕೇಷನ್ ಸಂಸ್ಥೆಯ ಪ್ರೊಫೆಸರ್ ಗೀತಾ ಗಾಂಧಿ ಕಿಂಗ್ಡನ್ ಅವರು ಭಾರತದ 20 ರಾಜ್ಯಗಳಲ್ಲಿನ ಶಾಲೆಗಳ ಅಧ್ಯಯನ ನಡೆಸಿ ಮಾರ್ಚ್ 2017ರಲ್ಲಿ ಸುದೀರ್ಘ ಸಂಶೋಧನಾ ವರದಿಯನ್ನು ಸಿದ್ಧಪಡಿಸಿದ್ದಾರೆ. ಈ ವರದಿಯಂತೆ, 2010-11ರಲ್ಲಿ 126.20 ದಶಲಕ್ಷ ಇದ್ದ ಸರ್ಕಾರಿ ಶಾಲಾ ಮಕ್ಕಳ ಸಂಖ್ಯೆ 2015-16ರಲ್ಲಿ 113.08 ದಶಲಕ್ಷಕ್ಕೆ ಇಳಿಕೆಯಾಗಿದೆ. ಆದಾಗ್ಯೂ ಪ್ರತಿಶತ 65ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಈ ಅವಧಿಯಲ್ಲಿ ಖಾಸಗಿ ಶಾಲೆಗಳ ಸಂಖ್ಯೆಯಲ್ಲಿ 35% ಏರಿಕೆಯಾಗಿದೆ. 

ಐದು ವರ್ಷಗಳಲ್ಲಿ ಸರ್ವ ಶಿಕ್ಷಣ ಅಭಿಯಾನಕ್ಕೆಂದು ಸರ್ಕಾರ 1.16 ಲಕ್ಷ ಕೋಟಿ ರೂಪಾಯಿ ವ್ಯಯಿಸಿದ್ದರೂ ಶಿಕ್ಷಣದ ಗುಣಮಟ್ಟ ಕುಸಿದಿರುವುದಾಗಿ ಇಂಡಿಯಸ್ಪೆಂಡ್ ಸಂಸ್ಥೆ ದಾಖಲಿಸಿದೆ. ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ತರಬೇತಿ ಪಡೆದವರ ಸಂಖ್ಯೆ ಶೇಕಡಾ 20ಕ್ಕಿಂತಲೂ ಕಡಿಮೆ. 2019-20ನೆಯ ಸಾಲಿನ 36,322 ಕೋಟಿ ರೂಪಾಯಿಗಳ ಅನುದಾನದಲ್ಲಿ ಮೊದಲ ಮೂರು ತ್ರೆಮಾಸಿಕಗಳಲ್ಲಿ ಸರ್ವ ಶಿಕ್ಷಣ ಅಭಿಯಾನದ ಅನುಷ್ಠಾನಕ್ಕೆ ಕೇವಲ 57% ಹಣ ಬಿಡುಗಡೆಯಾಗಿರುವುದು ಆತಂಕದ ವಿಷಯ.

ಈ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದ ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿ ಮುಂದಿನ ಮಾರ್ಗದ ಬಗ್ಗೆ ಆಲೋಚಿಸಿದಾಗ, ಸರ್ವ ಶಿಕ್ಷಣ ಅಭಿಯಾನದ ಅನುದಾನವನ್ನು ಹೆಚ್ಚಿಸುವುದರೊಡನೆ ಸರ್ಕಾರಿ ಶಾಲೆಗಳನ್ನು ಮತ್ತು ಅಲ್ಲಿನ ಶಿಕ್ಷಕರನ್ನು ಹಾಗು ವಿದ್ಯಾರ್ಥಿಗಳನ್ನು ಇ-ಶಿಕ್ಷಣಕ್ಕೆ ಸಜ್ಜುಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಸ್ಪಷ್ಟವಾಗುತ್ತದೆ. ಸರ್ಕಾರ ಇದಕ್ಕೆ ಆದ್ಯತೆ ನೀಡಿದರೆ ಮಾತ್ರವೇ ಡಿಜಿಟಲ್ ಡಿವೈಡ್ ನಿಯಂತ್ರಣ ಸಾಧ್ಯವಾಗುತ್ತದೆ.

-ಮಂಜುನಾಥ ಡಿ.ಎಸ್.

ಮಕ್ಕಳ ಕಲಿಕೆಯಲ್ಲಿ ಗುಂಪು ಚಟುವಟಿಕೆಗಳನ್ನು ಮಾಡುವಾಗ ತನ್ನ ಸಹಪಾಠಿಗಳಿಂದಲೂ ಪ್ರೇರಣೆಗೆ ಒಳಗಾಗುತ್ತಿರುತ್ತಾರೆ. ಗೆಳೆಯರೊಂದಿಗೆ ಸಂವಹನಕ್ಕೆ ಇಲ್ಲಿ ಅವಕಾಶ ಇಲ್ಲದಂತಾಗುತ್ತದೆ. ತರಗತಿಗಳ ಮೊದಲು ಮತ್ತು ನಂತರ ಗೆಳೆಯರೊಂದಿಗೆ ಅನೌಪಚಾರಿಕ ಸಾಮಾಜಿಕ ಸಂವಹನವು ಇಲ್ಲಿ ಸಂಪೂರ್ಣ ಇಲ್ಲವೇಇಲ್ಲ. ವಿದ್ಯಾರ್ಥಿಗಳು ಗುಂಪುಗಳಲ್ಲಿ ಅಳವಡಿಸಿಕೊಳ್ಳಬೇಕಾದ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಸಮುದಾಯದ ಪ್ರಜ್ಞೆಯನ್ನು ಹೊಂದಿರುವುದಿಲ್ಲ ಮತ್ತು ಪ್ರತ್ಯೇಕತೆಯ ಭಾವನೆಗೆ ಕಾರಣವಾಗಬಹುದು. ಗ್ರಾಮೀಣ ಪ್ರದೇಶದ ಮಕ್ಕಳನ್ನು ಇದು ತಲುಪುವಲ್ಲಿಯೂ ಸಾಕಷ್ಟು ತೊಂದರೆಗಳಿವೆ. ಅಂದರೆ ಬಹಳ ಮುಖ್ಯವಾಗಿ ಉಳ್ಳವರು ಮತ್ತು ಇಲ್ಲದವರ ನಡುವಿನ ಅಸಮಾನತೆಯನ್ನು ಹೆಚ್ಚಿಸುತ್ತಾ, ಎರಡು ಹಂತದ ಶಿಕ್ಷಣ ವ್ಯವಸ್ಥೆಯನ್ನು ಸೃಷ್ಟಿಸುವ ಅಪಾಯವೂ ಹೆಚ್ಚಿದೆ.

ಆನ್‌ಲೈನ್ ಪಾಠದ ಲಾಭ-ನಷ್ಟವನ್ನು ಬದಿಗಿಟ್ಟು ನಮ್ಮ ವಾಸ್ತವದಲ್ಲಿ ನಡೆಯುತ್ತಿರುವುದನ್ನು ನಾವು ಅವಲೊಕಿಸೋಣ. ನಗರ ಪ್ರದೇಶದ ದೊಡ್ಡ ದೊಡ್ಡ ಶಾಲೆಗಳು ಮಕ್ಕಳನ್ನು ಸೆಳೆಯುವ ಸಲುವಾಗಿ ಈ ಶಿಕ್ಷಣವನ್ನು ತಮ್ಮ ಅಸ್ತçವಾಗಿ ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿಯೂ ಕೂಡಾ ಕೆಲವು ಶಾಲೆಗಳು ತಮ್ಮ ಶಾಲಾ ಶಿಕ್ಷಕರ ಬೊಧನೆಯನ್ನು ವಿಡಿಯೋ ಮಾಡಿ ಕಳಿಸುತ್ತಿದ್ದಾರೆ, ಕೆಲವರು ಆನ್‌ಲೈನ್ ಮೂಲಕ ಪಾಠ ಪ್ರವಚನ ಮಾಡುತ್ತಿದ್ದಾರೆ. ಈ ಪಾಠಗಳ ಬೋಧನೆಯನ್ನು ಮಕ್ಕಳ ಜೊತೆ ಬಹುತೇಕ ಪಾಲಕರೂ ವೀಕ್ಷಿಸುವ ಸುವರ್ಣ ಅವಕಾಶ ಸಿಕ್ಕಿದೆ ಎನ್ನುವುದು ಅಷ್ಟೇ ಸತ್ಯ. ಇದರಿಂದ ಶಾಲೆಗಳ ನಿಜವಾದ ಬಣ್ಣ ಬಯಲಾಗುತ್ತಿದೆ. ಆ ಶಾಲೆಗಳಲ್ಲಿ ಬೋಧಿಸುವ ಶಿಕ್ಷಕರ ಅರ್ಹತೆಗಳು, ಬೋಧನಾ ಶೈಲಿ, ಗುಣಮಟ್ಟ, ಮಕ್ಕಳಿಗೆ ಕಲಿಕೆಯನ್ನು ಮನನ ಮಾಡುವ ಪ್ರಕ್ರಿಯೆಗಳೆಲ್ಲವೂ ಪಾಲಕರಿಗೆ ಈಗ ನೇರವಾಗಿ ತಲುಪುವಂತಾಗಿದೆ. ಪಾಲಕರೂ ವಿದ್ಯಾವಂತರಿರುತ್ತಾರೆ. ಹಾಗಾಗಿ ಅವರು ತಮ್ಮ ಮಕ್ಕಳು ಓದುತ್ತಿರುವ ಶಾಲೆಯಲ್ಲಿ ಯಾವ ಯಾವ ಶಿಕ್ಷಕರಿದ್ದಾರೆ? ಯಾವ ವಿಷಯ ಬೋಧಿಸುತ್ತಿದ್ದಾರೆ? ಅವರ ಕಲಿಸುವ ಮಟ್ಟ ಎಲ್ಲಿದೆ? ಎಂಬುದು ಈಗ ಖಾಸಗಿ ಶಾಲೆಯಿಂದ ಹೊರಬರುವಂತಾಗಿದೆ.

ಈ ಸನ್ನಿವೇಶದಲ್ಲಿ ಆನ್‌ಲೈನ್ ಬೋಧನೆ ಒಮ್ಮಲೆ ಬೇಡಿಕೆ ಪಡೆದಿದೆ. ತಕ್ಷಣವೇ ಬದಲಾದ ಈ ಪ್ರಕ್ರಿಯೆಗೆ ಶಿಕ್ಷಕರು ಒಗ್ಗಿಕೊಳ್ಳುವುದು ಸುಲಭವಲ್ಲ. ವಿಡಿಯೋ ಅಥವಾ ಆನ್‌ಲೈನ್ ಪಾಠ ಮಾಡುವುದು ಹೆಚ್ಚಿನ ಶಿಕ್ಷಕರಿಗೆ ಹೊಸದು. ಬೋಧನೆ ಮಾಡುವುದು ಹೇಗೆ? ಅದಕ್ಕೆ ಅಗತ್ಯವಾದ ಸಿದ್ಧತೆಗಳೇನು? ಅದನ್ನು ಹೇಗೆ ನಿರ್ವಹಿಸಬೇಕು? ಅಲ್ಲಿ ಗಮನಿಸಬೇಕಾದ ಅಂಶಗಳಾವುವು? ತಂತ್ರಜ್ಞಾನ ಪರಿಣತಿ ಬಳಸಿ ಬೊಧನೆ ಮಾಡುವ ಶೈಲಿ ಎಷ್ಟು ಶಿಕ್ಷಕರಿಗೆ ಪರಿಚಯವಿದೆ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಮತ್ತೊಂದೆಡೆ ಇವೆಲ್ಲಕ್ಕಿಂತ ಮುಖ್ಯವಾಗಿ, ಖಾಸಗಿ ಶಾಲೆಗಳಲ್ಲಿ ಮೂಲಭೂತ ಶಿಕ್ಷಕ ತರಬೇತಿಯನ್ನು ಪಡೆದಿರುವವರ ಸಂಖ್ಯೆಗಿಂತ ತರಬೇತಿ ಹೊಂದಿರದ ಶಿಕ್ಷಕರ ಸಂಖ್ಯೆಯೇ ಹೆಚ್ಚು. ಅವರು ಬೋಧನೆಯನ್ನು ಶೈಕ್ಷಣಿಕ ಮನೋವಿಜ್ಞಾನದ ಆಧಾರದಲ್ಲಿ ಮಾಡಲು ಹೇಗೆ ಸಾಧ್ಯ? ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪಾಲಕರು ಇನ್ನಾದರೂ ಇಂತಹ ಸೂಕ್ಷö್ಮ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಇದಕ್ಕೆ ಪೂರಕವಾಗಿ ಬೆಂಗಳೂರಿನ ಮಕ್ಕಳ ವೈದ್ಯರೊಬ್ಬರ ಅಭಿಪ್ರಾಯದ ವಿಡಿಯೋ ಹೆಚ್ಚು ವೈರಲ್ ಆಗಿದೆ. ಅವರು ಅಲ್ಲಿ ಇಂತಹ ಶಿಕ್ಷಕರ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಪ್ರತಿಷ್ಠಿತ ಶಾಲೆಯ ಪಾಲಕರ ಗುಂಪಿಗೆ ಬಂದ ಶಿಕ್ಷಕರ ಕಳಪೆ ಮಟ್ಟದ ಪಾಠ ಬೊಧನೆಯ ವಿಡಿಯೋ ನೋಡಿ ಅತ್ಯಂತ ಆಘಾತ ವ್ಯಕ್ತಪಡಿಸುತ್ತಾರೆ. ಆ ಪಾಠದ ಗುಣಮಟ್ಟ ಕುರಿತು ತುಂಬಾ ಖೇದ ವ್ಯಕ್ತಪಡಿಸುತ್ತಾರೆ. ಅಲ್ಲಿ ಶಿಕ್ಷಕರ ದೋಷಪೂರಿತ ಉಚ್ಛಾರಣೆ,  ಪದೇ ಪದೇ ತಪ್ಪು ತಪ್ಪು ಶಬ್ದಗಳ ಬಳಕೆ, ಶಿಕ್ಷಕರ ವರ್ತನೆ, ಪಾಠ ಬೊಧನೆಗೆ ಬಳಸಿದ ಧ್ವನಿ, ಸರಿಯಾದ ಸಿದ್ಧತೆ ಇಲ್ಲದಿರುವುದರ ಜೊತೆ ಮಗುಸ್ನೇಹಿಯಾಗಿಲ್ಲದ ಬೋಧನೆಯ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾಲಕರು ತಮ್ಮ ಮನೆಯಲ್ಲಿರುವ ಒಂದೆರೆಡು ಮಕ್ಕಳಿಗೆ ಕಲಿಸಲು ಹರ ಸಾಹಸ ಪಡುತ್ತಿರುತ್ತಾರೆ. ಅಂತಹದರಲ್ಲಿ ತರಗತಿಯ 30ಕ್ಕಿಂತ ಹೆಚ್ಚಿನ ವೈವಿಧ್ಯಮಯ ಮಕ್ಕಳ ಕಲಿಕೆ ಮೂಡಿಸುವುದು ಶಿಕ್ಷಕರಿಗೆ ಬಹು ದೊಡ್ಡ ಸವಾಲಿನ ಕೆಲಸ. ಅದರಲ್ಲೂ ಶಿಕ್ಷಕರು ಹೇಳಿದ್ದನ್ನೂ ಬಹುತೇಕ ಮಕ್ಕಳು ಸಂಪೂರ್ಣ ಒಪ್ಪಿ ಅನುಸರಿಸುತ್ತಾರೆ. ಅದು ತಪ್ಪಿದ್ದಲ್ಲಿ ಪಾಲಕರು ಎಷ್ಟು ಹೇಳಿದರೂ ಒಪ್ಪುವ ಸ್ಥಿತಿಯಲ್ಲಿ ಮಕ್ಕಳು ಇರುವುದಿಲ್ಲ. ಹಾಗಾಗಿ ಶಿಕ್ಷಕರು ತರಬೇತಿ ಪಡೆಯದಿದ್ದರೆ ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಂತಹ ಅತ್ಯಂತ ಮುಲಭೂತ ಅಂಶಗಳ ಮೇಲೆ ಇನ್ನಾದರೂ ಪಾಲಕರು ಗಮನ ಹರಿಸಬೇಕು. ತಮ್ಮ ಮಕ್ಕಳನ್ನು ಸೇರಿಸುವ ಶಾಲೆಯ ಶಿಕ್ಷಕರ ಕುರಿತು ಒಂದಷ್ಟು ಮಾಹಿತಿ ತಿಳಿದುಕೊಳ್ಳಬೇಕು, ಅಲ್ಲವೇ?

ಉನ್ನತ ಹಂತದಲ್ಲಿ ಶಿಕ್ಷಣ ಪಡೆಯಲು ಅಥವಾ ಜ್ಞಾನವನ್ನು ವಿಸ್ತರಣೆ ಮಾಡಿಕೊಳ್ಳಲು ಆನ್‌ಲೈನ್ ಶಿಕ್ಷಣ ಉಪಯುಕ್ತ ಮಾರ್ಗವಾಗಿದೆ. ಅಲ್ಲಿಯೂ ಶಿಕ್ಷಕರನ್ನೇ ಅವಲಂಬಿಸಿದೆ ಎನ್ನುವುದನ್ನು ಮರೆಯುವಂತಿಲ್ಲ. 2020ರ ನೂತನ ಶಿಕ್ಷಣ ನೀತಿಯೂ ಆನ್‌ಲೈನ್ ಶಿಕ್ಷಣ ಪ್ರತಿಪಾದಿಸಿದೆ. ಆನ್‌ಲೈನ್ ಶಿಕ್ಷಣ ಬದಲಿ, ಪರ್ಯಾಯ ಶಿಕ್ಷಣ ವ್ಯವಸ್ಥೆ ಅಲ್ಲ. ಇದನ್ನು ಮುಖಾಮುಖಿ ಶಿಕ್ಷಣದ ಜೊತೆಗೆ ಪೂರಕವಾಗಿ ಬಳಸಿಕೊಳ್ಳಬಹುದು.

*ಲೇಖಕರು ಹಗರಿಬೊಮ್ಮನಹಳ್ಳಿಯಲ್ಲಿ ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು.

                                         

Leave a Reply

Your email address will not be published.