ಅಪರಿಚಿತ ಅನುಭವದ ಜೊತೆಗೆ ಅಸ್ಪಷ್ಟ ಗುರಿಯೆಡೆಗೆ!

ಅಂತರ್ಜಾಲದ ಗುರುವನ್ನು ಬಲವಂತವಾಗಿ ನಮ್ಮ ಮೇಲೆ ಹೇರಿಕೊಂಡು ಅಪರಿಚಿತ ಅನುಭವಕ್ಕೆ ಈಡಾದ ಸಂದಿಗ್ಧ ಕಾಲದಲ್ಲಿ ನಾವಿದ್ದೇವೆ. ಯಾವ ದಾರಿಯ ಕಡೆ ಹೊರಳಬೇಕು, ಹೊಸದಾರಿಗಳು ಎಲ್ಲಿಗೆ ಮುಟ್ಟಿಸುತ್ತವೆ ಎಂಬುದು ನಮಗಿನ್ನೂ ಸ್ಪಷ್ಟವಾಗಿಲ್ಲ. ನಮಗೇ ದಾರಿ ಅಸ್ಪಷ್ಟವಾಗಿರುವಾಗ ನಮ್ಮ ಮಕ್ಕಳಿಗೆ ಇಗೋ ಈ ದಾರಿಯಲ್ಲಿ ಹೋಗೋಣ, ನಮ್ಮ ಗಮ್ಯಸ್ಥಾನ ಅಲ್ಲಿದೆ ಎಂದು ಹೇಳಲು ಹೇಗೆ ಸಾಧ್ಯ?

ಆಫ್ರಿಕಾ ಖಂಡದಲ್ಲೊಂದು ಆಡುಮಾತಿದೆ -ಮಗುವೊಂದನ್ನು ಬೆಳೆಸಲು ಇಡೀ ಹಳ್ಳಿಯೇ ಒಗ್ಗಟ್ಟಾಗಿ ಶ್ರಮಿಸುತ್ತದೆ. ಈ ಮಾತು ಅಕ್ಷರಶಃ ನಿಜವೇ ಅನ್ನುವ ಪ್ರಶ್ನೆ ನಮ್ಮಲ್ಲೇಳಬಹುದು. ಪೂರ್ತಿಯಾಗಿ ಆ ಮಾತು ಅನ್ವಯವಾಗುವುದು ಚಿಕ್ಕಚಿಕ್ಕ ಸಮುದಾಯಗಳ ಜನರಿಗೆ. ಅವರು ವಾಸಿಸುತ್ತಿದ್ದ ನಿರ್ದಿಷ್ಟ ಭೌಗೋಳಿಕ ಪ್ರದೇಶದ ಬಗೆಗಿನ ಜ್ಞಾನ, ಅವರದ್ದೇ ಆದ ಸಾಮುದಾಯಿಕ ಭಾಷೆ, ಸಂಸ್ಕೃತಿ, ಆಹಾರಗಳ ಬಗ್ಗೆ ಕಾಲಾನುಕ್ರಮವಾಗಿ ಬೆಳೆದುಬಂದು ರೂಢಿಸಿಕೊಂಡಿದ್ದ ತಿಳಿವಳಿಕೆಗಳನ್ನು ಒಬ್ಬರಿಂದ ಒಬ್ಬರಿಗೆ ಪರಿಚಯಿಸುವ, ಕಲಿಸುವ ಜವಾಬ್ದಾರಿ ಆ ಒಂದು ಚಿಕ್ಕ ಸಮುದಾಯದ ಹೊಣೆಯಾಗಿತ್ತು.

ಸಾವಿರಾರು ವರ್ಷಗಳಿಂದ ಬೆಳೆದ, ಸ್ಥಳೀಯವಾಗಿದ್ದ, ಸ್ವಂತಿಕೆಯಿದ್ದ, ವಿಶಿಷ್ಟವಾಗಿದ್ದ ಅವರ ನಂಬಿಕೆಗಳನ್ನು, ಆಚಾರ-ವಿಚಾರಗಳನ್ನು, ಪದ್ಧತಿಗಳನ್ನು ಹಿರಿಯರು ಮುಂದಿನ ಪೀಳಿಗೆಗೆ ದಾಟಿಸಬೇಕಿದ್ದ ಬಹು ಮಹತ್ವದ ಹೊಣೆ ಇಡೀ ಸಮುದಾಯದ ಮೇಲಿರುತ್ತಿತ್ತು. ಕಲಿಯಬೇಕೆಂಬ ನಿರೀಕ್ಷೆ ಮತ್ತು ಜವಾಬ್ದಾರಿ ಮಕ್ಕಳ ಮೇಲಿತ್ತು. ತಮ್ಮ ಸುತ್ತಮುತ್ತಲೂ ಜೀವಂತವಾಗಿದ್ದ ಸಮುದಾಯ ಸ್ಥಿತಿಗತಿಗಳನ್ನು ಮಕ್ಕಳು ಅವಲೋಕಿಸುತ್ತಾ ಜೀವನಪಾಠಗಳನ್ನು ಕಲಿಯಬೇಕಿತ್ತು. ಚೆನ್ನಾಗಿ ಕಲಿತರೆ ಅವರು ಮುಂದಿನ ತಮ್ಮ ಜೀವನವನ್ನು ಸಮರ್ಥರಾಗಿ ಮತ್ತು ಸ್ವತಂತ್ರರಾಗಿ ಬದುಕಲು ಸಾದ್ಯವಾಗುತ್ತಿತ್ತೇನೋ. ಪೀಳಿಗೆಯಿಂದ ಪೀಳಿಗೆಗೆ ಇಂತಹ ಜೀವನಪಾಠಗಳು ಅನುಭವಕಲಿಕೆಯಿಂದ ಸಾಧ್ಯವಾಗಿತ್ತು. ಹಿರಿಯರು ತಮ್ಮ ಪಕ್ವ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಆ ಮೂಲಕ ಕಿರಿಯರಿಗೆ ಬದುಕನ್ನು ಹೇಗೆ ಬಾಳಬೇಕು ಎಂದು ಹೇಳಿಕೊಡುತ್ತಿದ್ದ ಕಾಲದ ಆಡುಮಾತು ಅದು.

ಅದೇ ಆಡುಮಾತಿನ ತಾತ್ಪರ್ಯ ಪ್ರಪಂಚದ ಪೂರ್ತಿ ಹರಡಿಕೊಂಡಿದ್ದ ಇತರೆ ಸಮುದಾಯಗಳಿಗೆ ಅನ್ವಯವಾಗುತ್ತಿತ್ತು. ಬಹುಶಃ ಎಲ್ಲಿಯವರೆಗೆ ಚಿಕ್ಕಸಮುದಾಯಗಳ ರಚನೆ ಮತ್ತು ಸ್ವರೂಪ ಚಾಲ್ತಿಯಲ್ಲಿತ್ತೋ ಅಲ್ಲಿಯವರೆಗೆ ಅಂತಹ ಆಡುಮಾತು ಸುಸ್ಥಿರವಾಗಿ ಜೀವನದಲ್ಲಿ ಅನ್ವಯವಾಗಿತ್ತೆಂದು ನಾವು ಅರ್ಥೈಸಿಕೊಳ್ಳಬಹುದು. ಸಮುದಾಯಗಳು ದೊಡ್ಡ ಸಮಾಜಗಳಾದಾಗ ಸಾಮಾಜಿಕ ಜೀವನದ ರೂಪು-ರಚನೆ ಬದಲಾಯಿಸಿ ಅನುಭವಕಲಿಕೆಯ ಉದ್ದೇಶ, ಜೀವನಪಾಠದ ವ್ಯಾಪ್ತಿ, ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಭಾಗವಹಿಸುವವರ ಪಾತ್ರಸ್ವರೂಪವೂ ಪಲ್ಲಟವಾಯಿತು ಎಂದುಕೊಳ್ಳಬಹುದು.

ಅಂತಹ ಒಂದು ಸಾರ್ವತ್ರಿಕ ಆಡುಮಾತಿನ ಹಿನ್ನೆಲೆಯಲ್ಲಿ ಇಂದಿನ, ಅಂದರೆ ಇಪ್ಪತ್ತೊಂದನೇ ಶತಮಾನದ, ಮಕ್ಕಳ ಬೆಳವಣಿಗೆಯ ವಿಷಯವನ್ನಿಟ್ಟು ನೋಡೋಣ. ಈಗಿನ ಸಹಸ್ರಮಾನ ಕಾಲದ ಮಕ್ಕಳ ಬೆಳವಣಿಗೆಯಲ್ಲಿರುವ ಪಾತ್ರಧಾರಿಗಳು ಯಾರು? ಅವರು ಎಂತಹ ಪಾತ್ರ ವಹಿಸುತ್ತಿದ್ದಾರೆ, ಆ ಪಾತ್ರಗಳ ವ್ಯಾಪ್ತಿ ಮತ್ತು ಪರಿಮಿತಿಗಳು ಹೇಗಿವೆ? ಜೀವನಪಾಠಗಳು ಯಾವುವು? ಅವನ್ನು ಕಲಿಸುವವರು ಯಾರು? ದಿನನಿತ್ಯವೂ ಅನೇಕ ರೀತಿಯ ಹೊಸತನಗಳು ಧುತ್ತೆಂದು ನಮ್ಮ ಮುಂದೆ ಪ್ರತ್ಯಕ್ಷವಾಗುವ ಈ ಕಾಲಘಟ್ಟದಲ್ಲಿ ಮಾರ್ಗದರ್ಶನ ಅನ್ನುವ ಪರಿಕಲ್ಪನೆ ಹೇಗಿದೆ? ಯಾರು ಯಾರಿಗೆ ಮಾರ್ಗದರ್ಶನವನ್ನು ಕೊಡುತ್ತಿದ್ದಾರೆ ಮತ್ತು ಹೇಗೆ?

ತಾವು ನೇರವಾಗಿ ಅನುಭವಿಸಿ ಕಲಿಯದಿದ್ದ ತಮಗೆ ಅಪರಿಚಿತವಾದ ಹೊಸ ಬದಲಾವಣೆ ಒಳ್ಳೆಯದೋ ಇಲ್ಲವೋ, ಕಿರಿಯರ ಮೇಲೆ ಆ ಬದಲಾವಣೆಗಳು ಸಾಧಿಸುವ ಮೇಲುಗೈ ಮತ್ತು ಪ್ರಭಾವವನ್ನ ತಾವು ಒಪ್ಪುವುದೋ ಬೇಡವೋ ಎಂಬ ತಲ್ಲಣಗಳಿರುತ್ತವೆ.

ಕಿರಿಯರು ತಮ್ಮಂತೆ ತಾವೇ ಸುಲಭವಾಗಿ ಒಪ್ಪಿಕೊಂಡುಬಿಡುವ ಹೊಸತನಗಳನ್ನು ತಿಣುಕುತ್ತಲೇ ಅರ್ಥಮಾಡಿಕೊಂಡು ಅವಕ್ಕೆ ಸಮರ್ಥವಾಗಿ ಸ್ಪಂದಿಸುವ ಕಷ್ಟದ ಪ್ರಯತ್ನವನ್ನು ಹಿರಿಯ ಪೀಳಿಗೆ ನಡೆಸುತ್ತದೆ. ಆದರೆ ಅಂತಹ ಪ್ರಯತ್ನದಲ್ಲಿ ಆತಂಕವಿರುತ್ತದೆ, ಅಸಮಾಧಾನವಿರುತ್ತದೆ ಮತ್ತು ತಿಕ್ಕಾಟವಿರುತ್ತದೆ. ತಾವು ನೇರವಾಗಿ ಅನುಭವಿಸಿ ಕಲಿಯದಿದ್ದ ತಮಗೆ ಅಪರಿಚಿತವಾದ ಹೊಸ ಬದಲಾವಣೆ ಒಳ್ಳೆಯದೋ ಇಲ್ಲವೋ, ಕಿರಿಯರ ಮೇಲೆ ಆ ಬದಲಾವಣೆಗಳು ಸಾಧಿಸುವ ಮೇಲುಗೈ ಮತ್ತು ಪ್ರಭಾವವನ್ನ ತಾವು ಒಪ್ಪುವುದೋ ಬೇಡವೋ ಎಂಬ ತಲ್ಲಣಗಳಿರುತ್ತವೆ. ಆಗಾಗ ಈ ಪ್ರಶ್ನೆಗಳು ಏಳುವುದೂ ಅವಕ್ಕೆ ಸಮಂಜಸ ಉತ್ತರ ಕೊಡಲು ಬಹುಮುಖಿ ಸಮಾಜ ಒಳನೋಟವನ್ನು ಹರಿಸುವುದು, ಭಿನ್ನಾಭಿಪ್ರಾಯಗಳು ಏಳುವುದು ಎಲ್ಲವೂ ಸಹಜವೇ.

ಇಪ್ಪತ್ತೊಂದನೇ ಶತಮಾನದಿಂದ ಆರಂಭವಾದ ಹೊಸ ಬದಲಾವಣೆಗಳು, ಸವಾಲುಗಳೆಂದರೆ ಜಾಗತೀಕರಣ, ತಾಂತ್ರಿಕ ಮತ್ತು ಮಾಹಿತಿಜ್ಞಾನ ಸ್ಫೋಟ, ಹೊಸ ತರಹದ ಔದ್ಯೋಗಿಕ ಕ್ರಾಂತಿ ಮತ್ತು ಆ ಕ್ರಾಂತಿ ಉದ್ಯೋಗರಂಗದಲ್ಲಿ, ಸಾಮಾನ್ಯರ ಜನಜೀವನದಲ್ಲಿ ಉಂಟುಮಾಡಿದ ಹೊಸ ಅಲೆಗಳು. ಇವು ಬಹುಮಂದಿಗೆ ಅಪರಿಚಿತವಾಗಿದ್ದವು. ಆದರೆ ಆ ಬದಲಾವಣೆಗಳು ನಮ್ಮನ್ನು ವಿಮರ್ಶಾತ್ಮಕ ಜೀವಿಗಳನ್ನಾಗಿ ಅಣಿಗೊಳಿಸುವಲ್ಲಿ ಹೆಚ್ಚಿನ ಮಟ್ಟದಲ್ಲಿ ವಿಫಲವಾಗಿವೆ ಎಂದೆನ್ನಬಹುದು. ಇದು ಹಿರಿಯ ಮತ್ತು ಕಿರಿಯ ಎರಡೂ ಪೀಳಿಗೆಗಳಿಗೆ ಅನ್ವಯಿಸುತ್ತದೆ.

ಮುಖ್ಯ ಕಾರಣ ಅದು ಒಂದು ಚಿಕ್ಕ ಸಮುದಾಯ ಚಿಂತಿಸಿ, ಅನುಭವಗಳನ್ನು ಮಥಿಸಿ, ಪರೀಕ್ಷಿಸಿ ನೋಡುವ ಅನುಭವಕಲಿಕೆಯಿಂದ ಹೊರಹೊಮ್ಮಿದ್ದಲ್ಲ. ಅಪರಿಚಿತ ಗುರುವೊಂದನ್ನು ಬಲವಂತವಾಗಿ ನಮ್ಮ ಮೇಲೆ ಹೇರಿಕೊಂಡು ಸುಪರಿಚಿತವಾಗಿಬಿಟ್ಟ ಸಂದಿಗ್ಧ ಕಾಲದಲ್ಲಿ ನಾವು ಇನ್ನೂ ಇದ್ದೇವೆ. ಹಾಗಾಗಿ ಯಾವ ದಾರಿಯ ಕಡೆ ಹೊರಳಬೇಕು, ನಮ್ಮ ಮುಂದೆ ತೆರೆದುಕೊಂಡಿರುವ ಹೊಸದಾರಿಗಳು ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತವೆ, ಎಲ್ಲಿಗೆ ಮುಟ್ಟಿಸುತ್ತವೆ ಎಂಬುದು ನಮಗಿನ್ನೂ ಪೂರ್ತಿಯಾಗಿ ಸ್ಪಷ್ಟವಾಗಿರದ ಕಾಲದಲ್ಲಿ ನಾವಿದ್ದೀವಿ. ನಮಗೇ ದಾರಿ ಅಸ್ಪಷ್ಟವಾಗಿರುವಾಗ ನಮ್ಮ ಮಕ್ಕಳಿಗೆ ಇಗೋ ಈ ದಾರಿಯಲ್ಲಿ ಹೋಗೋಣ, ತಲುಪಬೇಕಾದ ನಮ್ಮ ಗಮ್ಯಸ್ಥಾನ ಅಲ್ಲಿದೆ, ಎಂದು ಹೇಳಲು ಹೇಗೆ ಸಾಧ್ಯ? ಆದರೂ ನಾವು ಸರಿ ದಾರಿ ಹುಡುಕುತ್ತಿರುವ ಪೀಳಿಗೆಯವರು.

ಹೊಸ ಬದಲಾವಣೆಗಳು ಸಮಾಜದ ಬಲು ಮುಖ್ಯ ಅಂಶವಾದ ಶಿಕ್ಷಣ ಕ್ಷೇತ್ರದ ಮೇಲೆ ಸಾಕಷ್ಟು ಪರಿಣಾಮ ಮತ್ತು ಪ್ರಭಾವ ಬೀರಿದವೇ ಹೊರತು ಅಷ್ಟೇ ತೀವ್ರವಾಗಿ ಸಮಾಜದ ಇತರ ಮುಖ್ಯ ಅಂಗಗಳಾದ ಆರೋಗ್ಯ, ಪರಿಸರ, ಬದುಕಲು ಬೇಕಿರುವ ಮೂಲಭೂತ ಸೌಲಭ್ಯಗಳು ಮತ್ತು ಆಡಳಿತ ನಿರ್ವಹಣೆಗಳನ್ನು ತಾಕಲಿಲ್ಲ. ಹೀಗಾಗಿ ಪರಿಣಾಮಗಳು ಮತ್ತು ಪ್ರಭಾವಗಳಿಗೆ ನೇರವಾಗಿ ಸಿಲುಕಿದವರು ಕಿರಿಯರು. ಹಿರಿಯರು ಇನ್ನೂ ತಮ್ಮದೇ ಆದ ಜಂಜಾಟಗಳಲ್ಲಿ, ತಮ್ಮದೇ ಹಿಂದಿನ ಕಾಲದ ಗುಣಗಾನದಲ್ಲಿ ಮುಳುಗಿದ್ದರೆ ಅವರ ಕಿರಿಯರು ಅದಾಗಲೇ ವಿಶ್ವವ್ಯಾಪಿಯಾಗಿರುವ ತಾಂತ್ರಿಕ ಮತ್ತು ಮಾಹಿತಿಜ್ಞಾನ ಸ್ಫೋಟದ ಸುಂಟರಗಾಳಿಯಲ್ಲಿ ಸಿಕ್ಕಿಕೊಂಡು ಸುತ್ತುತ್ತಿದ್ದಾರೆ.

ತಾಂತ್ರಿಕ ಕ್ಷೇತ್ರದಲ್ಲಿ ವಿವಿಧ ಹೊಸಸಾಧನಗಳು ಮತ್ತು ತಂತ್ರಜ್ಞಾನ ಹೊರಬರುತ್ತಿರುವುದರಿಂದ ಅವುಗಳನ್ನು ತಕ್ಷಣಕ್ಕೆ ಕೊಳ್ಳಬೇಕು, ಅವನ್ನು ಆಗಿಂದಾಗ್ಗೆ ಬಳಸಿಬಿಡಬೇಕು ಎನ್ನುವ ಚಪಲ, ಚಡಪಡಿಕೆ ಕಿರಿಯವರಲ್ಲಿ ಹೆಚ್ಚಾಗುತ್ತಿದೆ. ಅವರನ್ನು ಹುರಿದುಂಬಿಸುವ, ಅವರನ್ನು ಆಕರ್ಷಿಸುವ ದಿಕ್ಕಿನಲ್ಲಿ ಬೇಕಾದಷ್ಟು ಜಾಹೀರಾತುಗಳ ಸರಣಿಯೇ ಇರುತ್ತದೆ.

ಇಲ್ಲಿ ಗಮನಿಸಬೇಕಾದ್ದು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಯಾಗುತ್ತಿರುವ ದೇಶಗಳೆರಡರಲ್ಲೂ ಮಕ್ಕಳು ತಮ್ಮ ಬಾಲ್ಯದ ಹೆಚ್ಚಿನ ಭಾಗವನ್ನು ಒಳಾಂಗಣ ಪರಿಸರದಲ್ಲಿ ಕಳೆಯುತ್ತಿದ್ದಾರೆ. ಮಕ್ಕಳು, ದೊಡ್ಡವರು, ಯುವಕಯುವತಿಯರು ಇಲೆಕ್ಟ್ರಾನಿಕ್ ಪರದೆಯ (ಮೊಬೈಲ್ ಫೋನು, ಐಪ್ಯಾಡ್, ಟ್ಯಾಬ್ಲೆಟ್ಟುಗಳು, ಇಲೆಕ್ಟ್ರಾನಿಕ್ ಗೇಮ್ಸ್ ಸಾಧನಗಳು) ಮುಂದೆ ಕೂತು ಅಥವಾ ಅದನ್ನು ಹಿಡಿದು ಕಣ್ಣನ್ನು ಅದರೊಳಗೆ ಅಂಟಿಸಿಕೊಂಡಿದ್ದಾರೆ. ಈ-ಪರದೆಯಿಂದ ಕಣ್ಣನ್ನು ಕಿತ್ತು ಕುಟುಂಬ, ಸ್ನೇಹಿತರು, ಆಪ್ತರು, ಬಂಧುಬಳಗದವರನ್ನ ನೋಡಿ ಎಂದು ಯಾರು ಯಾರಿಗೆ ಹೇಳಬೇಕು?

ಈ ಪರಿಸ್ಥಿತಿ ಹೇಗುಂಟಾಯಿತು? ಉತ್ತರ ಹುಡುಕಲು ನಾನಾ ವಲಯಗಳಲ್ಲಿ, ಕ್ಷೇತ್ರಗಳಲ್ಲಿ (ಉದಾ, ವಿಶ್ವವಿದ್ಯಾನಿಲಯಗಳು, ಸರಕಾರಗಳು) ವಿಶ್ಲೇಷಣೆ ನಡೆಯುತ್ತಿದೆ. ಅಂತರ್ಜಾಲದ ಸುಲಭತೆ, ನಮ್ಮ ಜೀವನದಲ್ಲಿ ಅಂತರ್ಜಾಲ ಹಾಸುಹೊಕ್ಕಾಗಿರುವ ಪರಿ, ಎಲ್ಲರನ್ನೂ, ಎಲ್ಲವನ್ನೂ ಚಿಟಿಕೆಮಾತ್ರದಲ್ಲಿ ಲಿಂಕ್ ಮಾಡಿಬಿಡುವ ಸಾಮಾಜಿಕ ತಾಣಗಳು ನಮ್ಮನ್ನು ಮಂತ್ರಮುಗ್ಧವಾಗಿಸಿವೆ. ನಮ್ಮ ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನೇ ನಿರ್ಬಲಗೊಳಿಸುವ ಶಕ್ತಿ ಅಂತರ್ಜಾಲವೆಂಬ ಅಗಾಧ ಕಪ್ಪುರಂಧ್ರದೊಳಗಿರುವ ಅನೇಕಾನೇಕ ಸಾಫ್ಟ್ವೇರ್ ಗಳಿಗಿವೆ. ಈ ಸಾಫ್ಟ್ವೇರ್ ಮಾಂತ್ರಿಕದಂಡ ಇಲ್ಲದೆ ನಾವು ಬದುಕುವಂತೆಯೇ ಇಲ್ಲ ಎನ್ನುವ ಸನ್ನಿವೇಶದಲ್ಲಿ ನಾವಿಂದು ಇದ್ದೇವೆ. ತಾಂತ್ರಿಕ ಕ್ಷೇತ್ರದಲ್ಲಿ ವಿವಿಧ ಹೊಸಸಾಧನಗಳು ಮತ್ತು ತಂತ್ರಜ್ಞಾನ ಹೊರಬರುತ್ತಿರುವುದರಿಂದ ಅವುಗಳನ್ನು ತಕ್ಷಣಕ್ಕೆ ಕೊಳ್ಳಬೇಕು, ಅವನ್ನು ಆಗಿಂದಾಗ್ಗೆ ಬಳಸಿಬಿಡಬೇಕು ಎನ್ನುವ ಚಪಲ, ಚಡಪಡಿಕೆ ಕಿರಿಯವರಲ್ಲಿ ಹೆಚ್ಚಾಗುತ್ತಿದೆ. ಅವರನ್ನು ಹುರಿದುಂಬಿಸುವ, ಅವರನ್ನು ಆಕರ್ಷಿಸುವ ದಿಕ್ಕಿನಲ್ಲಿ ಬೇಕಾದಷ್ಟು ಜಾಹೀರಾತುಗಳ ಸರಣಿಯೇ ಇರುತ್ತದೆ.

ಈ ಪರಿಸ್ಥಿತಿಗೆ ಕಾರಣವೇನು ಎಂದು ಪ್ರಶ್ನೆ ಎತ್ತಿದರೆ ಒಂದು ಅಥವಾ ಎರಡು ಉತ್ತರಗಳು ಸಾಕಾಗುವುದಿಲ್ಲ. ಆಧುನಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪಾಶ್ಚಿಮಾತ್ಯ ದೇಶಗಳಿಗೆ ಶತಮಾನಗಳೇ ಹಿಡಿಸಿತು. ಆದರೆ ತಂತ್ರಜ್ಞಾನ ಸ್ಫೋಟ ಮತ್ತು ಜಾಗತೀಕರಣ ತಂದ ಆಧುನಿಕತೆ -ಈ ಎರಡೂ ಪ್ರಕ್ರಿಯೆಗಳು ಒಟ್ಟೊಟ್ಟಿಗೆ ಆದ್ದರಿಂದ ಭಾರತವು ದಾಪುಗಾಲು ಹಾಕಿ ಎರಡು ದಶಕಗಳಿಗೂ ಕಡಿಮೆ ಸಮಯದಲ್ಲಿ ಮಹತ್ತರ ಬದಲಾವಣೆಗಳನ್ನು ಸ್ವಾಗತಿಸಬೇಕಾಯ್ತು. ಇಡೀ ಸಮಾಜವೇ ಅಲುಗಾಡಿ ಅಸ್ಥಿರವಾಯ್ತು. ಸಾವಿರಾರು ವರ್ಷಗಳಿಂದ ರೂಪಿಸಿದ್ದ ಸಮುದಾಯ ಜೀವನಶೈಲಿ ಇದ್ದಕ್ಕಿದ್ದಂತೆ ಪಲ್ಲಟಗೊಂಡು ಉದ್ಯೋಗ, ವರಮಾನ, ಆಧುನಿಕ ಜೀವನಶೈಲಿ, ಅತ್ಯಾಧುನಿಕ ಸಾಧನ-ಪರಿಕರಗಳು, ಇವೆಲ್ಲವನ್ನೂ ಅಳವಡಿಸಿಕೊಂಡ ಜನಜೀವನ ನಾವಾದೆವು. ಕುಳಿತಲ್ಲೇ ಊಟ, ಬಟ್ಟೆಗಳನ್ನು ಆರ್ಡರ್ ಮಾಡುವ ತಂತ್ರಜ್ಞಾನಕ್ಕೆ ನಮ್ಮನ್ನು ಒಪ್ಪಿಸಿಕೊಂಡೆವು.

ತಾವು ಮೊಬೈಲ್ ಫೋನ್, ಐಪ್ಯಾಡ್, ಲ್ಯಾಪ್ಟಾಪ್, ಮತ್ತು ಸಾಮಾಜಿಕತಾಣಗಳನ್ನು ಉಪಯೋಗಿಸಲು ಕಲಿಯುತ್ತಾ, ಬೇಕಿತ್ತೋ ಬೇಡವೋ ಅವಕ್ಕೆ ಮಾರುಹೋಗಿ ತಮ್ಮ ಮಕ್ಕಳನ್ನು ಕೂಡ ಈ ವರ್ತುಲಕ್ಕೆ ತಂದ ಹೆಗ್ಗಳಿಕೆ ಹಿರಿಯರಿಗೆ ಸಲ್ಲಬೇಕು.

ಇಂದು ನಮ್ಮ ಮಕ್ಕಳು ಅತ್ಯಾಧುನಿಕ ತಂತ್ರಜ್ಞಾನ ಸಾಧನವಿಲ್ಲದೆ, ಇಂಟರ್ನೆಟ್ ಇಲ್ಲದೆ, ಅಥವಾ ಪ್ರತಿನಿಮಿಷವೂ ಸಾಮಾಜಿಕ ತಾಣದಲ್ಲಿ ವ್ಯವಹರಿಸದೆಯೇ ಬದುಕುವುದಕ್ಕೇ ಸಾಧ್ಯವಿಲ್ಲ ಅನ್ನುವ ಸನ್ನಿವೇಶವಿದೆ. ಅವರ ಮೈಮನಸ್ಸನ್ನು ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾ ಎನ್ನುವ ಕಬಂಧಬಾಹು ರಾಕ್ಷಸರು ಆಕ್ರಮಿಸಿಕೊಂಡಿದ್ದಾರೆ ಎನ್ನುವ ಗಾಬರಿಯಿದೆ. ಇದು ನಿಜವೇ?

ಈ ಸನ್ನಿವೇಶ ಅರ್ಧಸತ್ಯ ಮಾತ್ರ ಎಂದೆನಿಸುತ್ತದೆ. ಹೊಸ ಸಹಸ್ರಮಾನ ಬೇಡಿದಂತೆ ಜೀವನಶೈಲಿಯನ್ನು ಬದಲಿಸಿಕೊಂಡ ಹಿರಿಯರು ತಮ್ಮ ಕಿರಿಯರಿಗೆ ಅಗತ್ಯವಿದ್ದ ಬೆಳವಣಿಗೆ ಪರಿಸರವನ್ನು ನೀಡುವಲ್ಲಿ ಎಡವಿದರೇನೋ. ತಾವು ಮೊಬೈಲ್ ಫೋನ್, ಐಪ್ಯಾಡ್, ಲ್ಯಾಪ್ಟಾಪ್, ಮತ್ತು ಸಾಮಾಜಿಕತಾಣಗಳನ್ನು ಉಪಯೋಗಿಸಲು ಕಲಿಯುತ್ತಾ, ಬೇಕಿತ್ತೋ ಬೇಡವೋ ಅವಕ್ಕೆ ಮಾರುಹೋಗಿ ತಮ್ಮ ಮಕ್ಕಳನ್ನು ಕೂಡ ಈ ವರ್ತುಲಕ್ಕೆ ತಂದ ಹೆಗ್ಗಳಿಕೆ ಹಿರಿಯರಿಗೆ ಸಲ್ಲಬೇಕು. ಬದಲಾದ ಜೀವನಶೈಲಿಗೆ ತಾವೇ ಒಂದು ಚೌಕಟ್ಟನ್ನು ನಿರ್ಮಿಸಿ, ತಮಗೆ ತಾವೇ ನಿಬಂಧನೆಗಳನ್ನು, ಕರಾರುಗಳನ್ನು ಹಾಕಿಕೊಂಡು ಬದುಕುವ ಉದಾಹರಣೆಯನ್ನು ನಮ್ಮ ಮಕ್ಕಳಿಗೆ ಕೊಡಬೇಕಿತ್ತು.

ಉದಾಹರಣೆಗೆ, ಉದ್ಯೋಗ ಸಂಬಂಧಿಸಿದ ಕೆಲಸವನ್ನು ಮುಗಿಸಿ ಮನೆಗೆ ಬಂದು ಮಕ್ಕಳೊಡನೆ ಸಮಯ ಕಳೆಯುತ್ತಾ ಸಮುದಾಯ ಕುಟುಂಬ ವ್ಯವಸ್ಥೆಯ ಆಪ್ಯಾಯತನವನ್ನು ಮಕ್ಕಳಿಗೆ ತಿಳಿಹೇಳಬೇಕಿತ್ತು. ಮಕ್ಕಳು ಆದಷ್ಟೂ ಸಮಯ ಹೊರಾಂಗಣ ಆಟಗಳಲ್ಲಿ, ಚಟುವಟಿಕೆಗಳಲ್ಲಿ ತೊಡಗಿರುವಂತೆ ಜಾಗ್ರತೆ ವಹಿಸಬೇಕಿತ್ತು. ಹಬ್ಬಹರಿದಿನಗಳು, ಸಮುದಾಯ ಆಚರಣೆಗಳನ್ನು ತಪ್ಪದೆ ಆಚರಿಸುತ್ತಾ ಆ ಸನ್ನಿವೇಶಗಳಲ್ಲಿ ತಂತ್ರಜ್ಞಾನವಿಲ್ಲದೆ ಇರುವ ಕಟ್ಟುನಿಟ್ಟಿನ ಕ್ರಮವನ್ನು ಆಚರಿಸಬಹುದಿತ್ತು. ನಮ್ಮಲ್ಲಿ ಕೆಲವರು ಇವೆಲ್ಲವನ್ನೂ ಮಾಡುತ್ತಿರಬಹುದು, ಆದರೆ ಅದು ಸಾಲದೇನೋ.

ಆ ಸಮಯದಲ್ಲಿ (ಎರಡರಿಂದ ಮೂರು ಗಂಟೆಗಳ ಕಾಲ) ಯಾವುದೇ ತಂತ್ರಜ್ಞಾನ ಸಾಧನದಿಂದ ದೂರವಿರಬೇಕು. ತಂತ್ರಜ್ಞಾನವನ್ನು, ಇಂಟರ್ನೆಟ್ ಮತ್ತು ಸಾಮಾಜಿಕ ತಾಣಗಳನ್ನು ದೂರುವುದರ ಬದಲು ಅವನ್ನು ಹೇಗೆ, ಎಷ್ಟು ಮತ್ತು ಯಾತಕ್ಕಾಗಿ ಉಪಯೋಗಿಸಬೇಕು ಎನ್ನುವುದನ್ನು ಮನೆಯವರೆಲ್ಲ ಚರ್ಚಿಸಬೇಕು.

ಕಾಲ ಮಿಂಚಿಲ್ಲ. ಈಗ ಅತಿಯಾದ ತಂತ್ರಜ್ಞಾನ ಸಾಧನಗಳ ಬಳಕೆಯಿಂದ ಮತ್ತು ಸಾಮಾಜಿಕ ತಾಣಗಳಿಂದ ಆಗುವ ದುಷ್ಪರಿಣಾಮಗಳನ್ನು ಕುರಿತು ಆಗಾಗ್ಗೆ ಚರ್ಚಿಸುತ್ತ ಅವನ್ನು ತಡೆಗಟ್ಟುವ ಕ್ರಮವನ್ನು ಮನೆಯವರೆಲ್ಲರೂ ಕೂಡಿ ತೆಗೆದುಕೊಳ್ಳುವ ಅಗತ್ಯವಿದೆ. ಉದಾಹರಣೆಗೆ, ಕಾಲೇಜಿನ ಯುವಕ/ಯುವತಿ ಕೈಯಲ್ಲಿ ಸದಾ ಫೋನಿಟ್ಟುಕೊಂಡು ಫೇಸ್ ಬುಕ್ ಪೋಸ್ಟಿಂಗ್, ಇನ್ಸ್ಟಾಗ್ರಾಮ್, ವಾಟ್ಸಾಪ್ ನೋಡುವುದಿದ್ದರೆ ಅವಳಿಗೆ/ಅವನಿಗೆ ಪ್ರತಿದಿನವೂ ಕಡ್ಡಾಯವಾಗಿ ಒಂದು ಹವ್ಯಾಸವನ್ನು (ಸಂಗೀತ, ಸಾಹಿತ್ಯ ಓದು, ಬರೆಹ, ನಡಿಗೆ, ಓಡುವುದು, ವ್ಯಾಯಾಮ, ಮನೆಯವರೊಡನೆ ಮಾತುಕತೆ) ಬೆಳೆಸಿಕೊಂಡು ಅದನ್ನು ಬಳಸುವಂತೆ ಪ್ರೋತ್ಸಾಹಿಸಿ ಜೊತೆಗೆ ನಾವೂ ಕೂಡ ಪಾಲ್ಗೊಳ್ಳಬೇಕು. ಆ ಸಮಯದಲ್ಲಿ (ಎರಡರಿಂದ ಮೂರು ಗಂಟೆಗಳ ಕಾಲ) ಯಾವುದೇ ತಂತ್ರಜ್ಞಾನ ಸಾಧನದಿಂದ ದೂರವಿರಬೇಕು. ತಂತ್ರಜ್ಞಾನವನ್ನು, ಇಂಟರ್ನೆಟ್ ಮತ್ತು ಸಾಮಾಜಿಕ ತಾಣಗಳನ್ನು ದೂರುವುದರ ಬದಲು ಅವನ್ನು ಹೇಗೆ, ಎಷ್ಟು ಮತ್ತು ಯಾತಕ್ಕಾಗಿ ಉಪಯೋಗಿಸಬೇಕು ಎನ್ನುವುದನ್ನು ಮನೆಯವರೆಲ್ಲ ಚರ್ಚಿಸಬೇಕು.

ಸಮುದಾಯದಲ್ಲಿನ ನಿಕಟ ಸಂಬಂಧಗಳು ಸಡಿಲವಾಗಿ ಅವು ಬಿಟ್ಟುಹೋಗುತ್ತಿವೆ, ನಮ್ಮ ಕಿರಿಯ ಪೀಳಿಗೆಯವರು ನಮ್ಮಂತಿಲ್ಲ, ಅವರು ಇನ್ಯಾವುದೋ ಅಗೋಚರ ಪ್ರಭಾವಗಳಿಗೆ ತೆರೆದುಕೊಂಡು ಅಪರಿಚಿತರಾಗಿದ್ದಾರೆ ಅಂದರೆ ಅದು ನಮ್ಮ ಒಟ್ಟಾರೆ ಸಮಾಜದ ಆರೋಗ್ಯವನ್ನೂ ಕೂಡ ಪ್ರತಿಬಿಂಬಿಸುತ್ತದೆ. ಎಲೆಕ್ಟ್ರಾನಿಕ್ ಸಾಧನಗಳನ್ನು ಸದಾ ದೇಹಕ್ಕೆ ತಾಕಿಸಿಕೊಂಡಿದ್ದರೆ ಅದರಿಂದ ಬರುವ ಕ್ಯಾನ್ಸರ್ ರೋಗದ ಬಗ್ಗೆ ಹೇಳುವುದಿದೆ, ಅವುಗಳಿಂದ ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯ ಸ್ಥಿತಿ ಕುಂಠಿತವಾಗುವುದು ಈಗ ಜನಜನಿತ ವಿಷಯ.

ನಮ್ಮ ದೈನಂದಿಕ ಕೆಲಸದ ಆಚೆಗೆ ಈ ಇಲೆಕ್ಟ್ರಾನಿಕ್ ಸ್ಕ್ರೀನ್ ಸಮಯವನ್ನು ಕಡಿತ ಮಾಡಿದರೆ ಅದೊಂದು ಸಾಧನೆಯೇ ಹೌದು ಎನ್ನುವ ಸಮಾಜದಲ್ಲಿ ನಾವಿದ್ದೇವೆ. ಎಷ್ಟು ಬೇಕು, ಯಾವುದು ಸಮ್ಮತ, ಇಲೆಕ್ಟ್ರಾನಿಕ್ ಉಪಕರಣಗಳ, ಸೌಲಭ್ಯಗಳ, ಸೇವೆ ಮತ್ತು ಸವಲತ್ತುಗಳ ಉಪಯೋಗದ ಮಿತಿಮೇರೆಗಳ ಬಗ್ಗೆ ಪಾಶ್ಚಾತ್ಯ ದೇಶಗಳಲ್ಲಿ ಬಿಸಿ ಚರ್ಚೆ ನಡೆಯುತ್ತಿದೆ. ಶಾಲೆಗಳಲ್ಲಿ ಮಕ್ಕಳಿಗೆ ಇಂಟರ್ನೆಟ್ ಬಳಕೆ ಮಿತಿಯ ಅಗತ್ಯ ಮತ್ತು ದುರ್ಬಳಕೆ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ನಡೆದೇ ಇದೆ. ಇದರಿಂದ ಮಕ್ಕಳಲ್ಲಿ ಸ್ವತಃ ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುವ, ತಮ್ಮ ವರ್ತನೆಯನ್ನ ತಾವೇ ನಿಭಾಯಿಸುವ ಸ್ವ-ಸಾಮಥ್ರ್ಯ ಮತ್ತು ಸ್ವಯಂಶಿಸ್ತಿನ ಬೆಳವಣಿಗೆ ಸಾಧ್ಯವಾಗುತ್ತದೆ. ಇವೆಲ್ಲವೂ ಭಾರತದಲ್ಲೂ ಆಗಬೇಕಿದೆ.

ಯಾವುದೇ ಒಂದು ಪ್ರಗತಿಯನ್ನು ತುಲನೆ ಮಾಡಿ ಅದರಿಂದ ಎಷ್ಟು, ಹೇಗೆ ಮತ್ತು ಏನನ್ನು ಪಡೆದು ನಮ್ಮ ಕಿರಿಯರಿಗೆ ಅದನ್ನು ದಾಟಿಸಬೇಕು ಎಂಬ ವಿವೇಚನೆ ಹಿರಿಯರಿಗೆ ಸದಾ ಇರಲೇಬೇಕು. ಅಂತಹ ವಿವೇಕ ಕೂಡ ಜೀವನಕಲಿಕೆ ಪಾಠವೇ ಹೌದು. ಈ ಸಹಸ್ರಮಾನದಲ್ಲಿ ಕಿರಿಯರಿಗೆ ಮಾರ್ಗದರ್ಶನ ಕೊಡುವ ಮೊದಲು ನಾವು ದೊಡ್ಡವರು ಹೊಸ ಜೀವನಪಾಠಗಳನ್ನ ನವೀನ ರೀತಿಗಳಿಂದ ಹೇಳುವ ಕಲೆಯನ್ನು ಬೆಳೆಸಿಕೊಳ್ಳಬೇಕಿದೆ.

*ಲೇಖಕಿ ಬೆಂಗಳೂರಿನವರು, ಈಗ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ; ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ, ಸಾಮಾನ್ಯ ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ದಿಕ್ಕುಗಳಲ್ಲಿ ಕೆಲಸ ಮಾಡುತ್ತಾರೆ. ಬರವಣಿಗೆ, ಊರು ಸುತ್ತಾಟ, ಅಧ್ಯಯನ ಇತ್ಯಾದಿಗಳು ಇಷ್ಟ.

Leave a Reply

Your email address will not be published.