ಅಪೌಷ್ಟಿಕತೆ – ಅಜೀರ್ಣ: ಎರಡೂ ವಜ್ರ್ಯ

ಪ್ರಾಧ್ಯಾಪಕರಾದ ರಾಜಾರಾಮ ತೋಳ್ಪಾಡಿ ಸೂಚಿಸಿರುವಂತೆ ಇಂದಿನ ಅಗತ್ಯವು ಸಿದ್ಧಾಂತದ ಪರಿಷ್ಕರಣೆಯಲ್ಲ, ಬದಲಾಗಿ ಪ್ರಸ್ತುತ ಸಂದರ್ಭದ ಕಾರ್ಯವಿಧಾನದಲ್ಲಿ ಅಳವಡಿಸಿಕೊಳ್ಳಬೇಕಾದ ಒಳಗೊಳ್ಳುವಿಕೆ. ಆ ದೃಷ್ಟಿಯಿಂದ ಪ್ರಜಾಪ್ರಭುತ್ವಾತ್ಮಕ ಚರ್ಚೆಗಳು ಸ್ವಾಗತಾರ್ಹ.

ಯಾವುದೇ ಜೀವಂತ ವಾದದಂತೆ ಮಾಕ್ರ್ಸ್‍ವಾದವೂ ನಿರಂತರವಾಗಿ ವಿಕಾಸ ಹೊಂದುತ್ತಿರುತ್ತದೆ. ಹೊಸ ಸನ್ನಿವೇಶ, ಅನಿರೀಕ್ಷಿತ ಮುಗ್ಗಟ್ಟು, ಮಧ್ಯಪ್ರವೇಶದ ಸಾಧ್ಯತೆ ಅಥವಾ ಅದರ ಅಭಾವ, ಮುಂತಾದವು ವಿಕಾಸವನ್ನು ಮುನ್ನಡೆಸುತ್ತವೆ ಇಲ್ಲವೇ ಪ್ರತಿಬಂಧಿಸುತ್ತವೆ. ಅಂದಿನ ಆಂಟೋನಿಯೊ ಗ್ರಾಂಶಿಯಾಗಲಿ, ಇಂದಿನ ಇಸ್ತ್ವಾನ್ ಮೆಜೆರೋಸ್ ಆಗಲಿ, ಪ್ರಸ್ತುತವಾಗುವುದು ಆ ಹಿನ್ನೆಲೆಯಲ್ಲಿಯೇ. ಪರಂಪರೆಯನ್ನು ಮಾಕ್ರ್ಸ್‍ವಾದವು ಎಂದೂ ಪುರಸ್ಕರಿಸಿದೆಯೇ ಹೊರತು ನಿರಾಕರಿಸಿಲ್ಲ. ಆದರೆ “ಮಾ ಗೃಧಃ ಕಸ್ಯಸ್ವಿದ್ಧನಂ” (ಬೇರೆಯವರ ಸಂಪತ್ತನ್ನು ಕಸಿದುಕೊಳ್ಳುವ ಆಕಾಂಕ್ಷೆ ಬೇಡ) ಎಂಬ ಈಶಾವಾಸ್ಯ ಉಪನಿಷತ್ತಿನ ವಾಕ್ಯವನ್ನು ಪದೇಪದೇ ಉದ್ಧರಿಸುತ್ತಿದ್ದರೆ ಸುಭಾಷಿತವೊಂದರ ಪಠಣವಾಗುತ್ತದೆಯೇ ವಿನಾ ಶೋಷಣೆಯಿಂದ ಮುಕ್ತವಾದ ವ್ಯವಸ್ಥೆಯು ತಾನಾಗಿಯೇ ಅಸ್ತಿತ್ವಕ್ಕೆ ಬರುವುದಿಲ್ಲ.

ಅಂತೆಯೇ, ಅಂತಹ ಆಶಯವು ನೀಡಬಹುದಾದ ಪುಷ್ಟಿಯ ಬಗೆಗೆ ಅನಾದರವು ಸಲ್ಲದೆಂಬುದೂ ಅಷ್ಟೇ ಸತ್ಯ. ಪರಂಪರೆಗಳಲ್ಲಿ ಕಾಳು ಮತ್ತು ಜೊಳ್ಳು, ಎರಡೂ ಇರುತ್ತವೆಯಾದ್ದರಿಂದ ಒಂದನ್ನು ಆಯ್ದುಕೊಂಡು ಒಳ್ಳೆಯ ಫಸಲು ಪಡೆಯಬೇಕು ಮತ್ತು ಇನ್ನೊಂದನ್ನು ಅನಗತ್ಯ ಹೊರೆಯೆಂದು ಪಕ್ಕಕ್ಕೆ ಸರಿಸಬೇಕು. ಇಂದಿನ ದೆಹಲಿಯ ಬೌದ್ಧಿಕ ವಾತಾವರಣದಲ್ಲಿ ಜೊಳ್ಳಿಗೆ ಪ್ರಾಮುಖ್ಯ ವಿಪರೀತವಾಗಿ ಹೆಚ್ಚಿದೆಯಾದ್ದರಿಂದ ಯಾವ ಅಂಜಿಕೆಯೂ ಇಲ್ಲದೆ ರಾಜಕೀಯ ನಾಯಕರು ‘ಹಸುವಿನ ಹಾಲಿನಲ್ಲಿ ಚಿನ್ನದ ಅಂಶವಿದೆ’ ಎಂದೋ, ‘ಹಸುವಿನ ಗಂಜಳದಿಂದ ಅರ್ಬುದ ರೋಗವನ್ನು ಗುಣಪಡಿಸಬಹುದು’ ಎಂದೋ, ಯಾವ ಕನಿಷ್ಠಮಟ್ಟದ ವೈಜ್ಞಾನಿಕ ಪ್ರಯೋಗವೂ ಇಲ್ಲದೆ ಘೋಷಿಸಬಹುದು. ಆದರೆ ಮಾಕ್ರ್ಸ್‍ವಾದದಿಂದ ಪ್ರೇರಣೆ ಹೊಂದಿ ಕಾಳನ್ನು ಅರಸುತ್ತಾ ಹೋದ ವಿದ್ವಾಂಸರನೇಕರು ನಮ್ಮ ದೇಶದ ಇತಿಹಾಸ, ತತ್ತ್ವಶಾಸ್ತ್ರ, ಸಂಸ್ಕೃತಿ, ಸಾಹಿತ್ಯ, ಪುರಾಣ, ಇತ್ಯಾದಿಗಳನ್ನು ಗಂಭೀರವಾದ ನೆಲೆಗಳಲ್ಲಿ ವ್ಯಾಖ್ಯಾನಿಸಿದ್ದಾರೆ.

ಡಿ.ಡಿ.ಕೋಸಾಂಬಿ, ಆರ್.ಎಸ್.ಶರ್ಮ, ದೇವಿಪ್ರಸಾದ ಚಟ್ಟೋಪಾಧ್ಯಾಯ, ರೋಮಿಲ ಥಾಪರ್, ವಾಲ್ಟರ್ ರೂಬೆನ್ ಮುಂತಾದವರು ಅದಕ್ಕೆ ಕೆಲವು ಉದಾಹರಣೆಗಳನ್ನು ಒದಗಿಸುತ್ತಾರೆ. ಅಧಿಕೃತ ಕಮ್ಯುನಿಸ್ಟ್ ಪಕ್ಷಗಳು ಕೆಲವೊಮ್ಮೆ ಇಂತಹ ವಿದ್ವಾಂಸರ ಅಧ್ಯಯನ ವಿಧಾನ ಮತ್ತು ಕಾಣ್ಕೆಗಳನ್ನು ಆಕ್ಷೇಪಿಸಿರುವುದುಂಟು, ಆದರೆ ಅವನ್ನು ಆಮೂಲಾಗ್ರವಾಗಿ ತಿರಸ್ಕರಿಸಲು ಸಾಧ್ಯವಾಗಿಲ್ಲ.

ಸಂಸ್ಕೃತಿಯೆಂದರೆ ಮನೆಯ ಮುಂದೆ ನೀರು ಹಾಕಿ ರಂಗೋಲಿ ಇಡುವುದು ಮತ್ತು ಒಳಗೆ ಪೂಜೆ ಮಾಡಿ ಕಡುಬು ತಿನ್ನುವುದು ಎಂಬುದಷ್ಟೇ ಅಲ್ಲ. ಸಂಸ್ಕೃತಿಯಲ್ಲಿ ಜೀವನ ಕ್ರಮ, ಮೌಲ್ಯಗಳು, ಪರಸ್ಪರ ಸಂಬಂಧಗಳು, ಚಿಂತನಾ ಪ್ರಭೇದಗಳು, ರಸಾಸ್ವಾದನೆ, ಆಳವಾದ ಮುಕ್ತ ಅಭಿವ್ಯಕ್ತಿ, ಸಾಮೂಹಿಕ ಆಚರಣೆ, ಹೀಗೆ ಎಲ್ಲವೂ ಅಡಕವಾಗಿವೆ.

ಸಾಮಾಜಿಕ ಮತ್ತು ರಾಜಕೀಯ ಅನ್ಯಾಯಗಳನ್ನು ಸಹಿಸಲಾಗದೆಂಬ ಭಾವನೆಯು ನಮ್ಮ ಪುರಾಣ, ಸಾಹಿತ್ಯ, ಸಂಸ್ಕೃತಿ ಮತ್ತು ಚಿಂತನೆಗಳಲ್ಲಿ ಪುಷ್ಕಳವಾಗಿ ಅಭಿವ್ಯಕ್ತವಾಗಿದೆ. ಅದಕ್ಕೆ ಪರ್ಯಾಯವಾಗಿ, ಇರುವುದನ್ನೆಲ್ಲಾ ಪರಮಾತ್ಮನ ಪ್ರಸಾದವೆಂದು ಸಹನೆಯಿಂದ ಸ್ವೀಕರಿಸಬೇಕೆಂಬ ಉಪದೇಶಗಳೂ ಉಂಟು. ಆಯ್ಕೆ ನಮ್ಮದು, ಅಷ್ಟೆ. ಸಂಸ್ಕೃತಿಯೆಂದರೆ ಮನೆಯ ಮುಂದೆ ನೀರು ಹಾಕಿ ರಂಗೋಲಿ ಇಡುವುದು ಮತ್ತು ಒಳಗೆ ಪೂಜೆ ಮಾಡಿ ಕಡುಬು ತಿನ್ನುವುದು ಎಂಬುದಷ್ಟೇ ಅಲ್ಲ. ಸಂಸ್ಕೃತಿಯಲ್ಲಿ ಜೀವನ ಕ್ರಮ, ಮೌಲ್ಯಗಳು, ಪರಸ್ಪರ ಸಂಬಂಧಗಳು, ಚಿಂತನಾ ಪ್ರಭೇದಗಳು, ರಸಾಸ್ವಾದನೆ, ಆಳವಾದ ಮುಕ್ತ ಅಭಿವ್ಯಕ್ತಿ, ಸಾಮೂಹಿಕ ಆಚರಣೆ, ಹೀಗೆ ಎಲ್ಲವೂ ಅಡಕವಾಗಿವೆ. ಮೌಲ್ಯಗಳ ಅನುಸಂಧಾನವು ಅವುಗಳಲ್ಲಿ ಬಹಳ ಪ್ರಮುಖವಾದುದು.

ನಿಜ ಜೀವನದಲ್ಲಿ ಇದನ್ನು ಸಾರವತ್ತಾಗಿ ಮತ್ತು ಪ್ರಾಯೋಗಿಕವಾಗಿ ಆಗುಮಾಡಿಕೊಳ್ಳುವುದು ಪೂರ್ಣಪ್ರಮಾಣದಲ್ಲಿ ಸಾಧ್ಯವಾಗಿಲ್ಲದೆ ಹೋದರೂ ಆ ದಿಕ್ಕಿನಲ್ಲಿ ಪಯಣವು ಸ್ಥಗಿತಗೊಂಡಿಲ್ಲ. ನ್ಯೂನತೆಗಳು ಹಾಗೂ ಸೀಮಿತತೆ ಢಾಳಾಗಿ ಗೋಚರಿಸುತ್ತವೆ; ಹಾಗೆಂದು ಪರಿಣಾಮಕಾರಿ ಸಕಾರಾತ್ಮಕ ಸಾಫಲ್ಯಗಳನ್ನು ನಗಣ್ಯವೆಂದು ತಳ್ಳಿಹಾಕಲಾಗದು. 19 ಮತ್ತು 20ನೆಯ ಶತಮಾನಗಳಲ್ಲಿ ಮಾಕ್ರ್ಸ್‍ವಾದದ ಸಾಧನೆಯು ಅಪೂರ್ವವಾದ್ದು; ಜಗತ್ತಿನಾದ್ಯಂತ ಅದರ ಪ್ತಭಾವ ಮತ್ತು ಫಲ ಸಂಶಯಾತೀತವಾದ್ದು. ಯಾವ ಹಿಂದೆಗೆತವೂ ಅದನ್ನು ಚರಿತ್ರೆಯ ಪುಟಗಳಿಂದ ಅಳಿಸಿಹಾಕುವುದಿಲ್ಲ. ಇಂದು ಸಹ ಭಾರತದಲ್ಲಿ ಪ್ಯಾಸಿಸ್ಟ್ ದುರಾಕ್ರಮಣವನ್ನು ಹಿಮ್ಮೆಟ್ಟಿಸಲು ಕಮ್ಯುನಿಸ್ಟರು ಮತ್ತು ಇತರ ಪುರೋಗಾಮಿಗಳು ಮುಂಚೂಣಿಯಲ್ಲಿದ್ದಾರೆಂಬುದು ಗಮನಾರ್ಹವಾಗಿದೆ.

ಜಾತ್ಯತೀತ ಪ್ರಜಾಪ್ರಭುತ್ವವಾದಿ ಆಶಯಗಳಿಗೆ ಪ್ರತಿರೋಧ ಒಡ್ಡುವುದರಲ್ಲಿನ ಮುಗ್ಗಟ್ಟು ಎಡಚಿಂತನೆಯ ಲೋಪದಿಂದ ಮಾತ್ರವೇ ಉಂಟಾಗುವಂಥದಲ್ಲ. ಸಂಘಟನೆಯ ದೃಷ್ಟಿಯಿಂದ ಎಡಪಕ್ಷಗಳು ಸಾಕಷ್ಟು ಪ್ರಬಲವಾಗಿಲ್ಲದಿರುವುದು ನಿಜ, ಆದರೆ ಆಳುವ ವರ್ಗವು ಪ್ರಗತಿ ಹೊಂದಿರುವ ಬಂಡವಾಳಶಾಹಿ ರಾಷ್ಟ್ರಗಳ ವ್ಯವಸ್ಥೆಯನ್ನು ಮಾದರಿಯನ್ನಾಗಿ ಮಾಡಿಕೊಂಡು ಆ ದಿಕ್ಕಿನಲ್ಲಿ ಎಗ್ಗಿಲ್ಲದೆ ಸಾಗಲು ಹೊರಟಿರುವುದು ಮುಗ್ಗಟ್ಟನ್ನು ಇಮ್ಮಡಿಗೊಳಿಸಿದೆ. ನಮ್ಮ ದೇಶದಲ್ಲಿ ವಸಾಹತುಶಾಹಿ ವಿರುದ್ಧ ಜರುಗಿದ್ದ ಸ್ವಾತಂತ್ರ್ಯ ಹೋರಾಟದ ಪುನರಾವರ್ತನೆಯು ಇಂದಿನ ದೈತ್ಯಶಕ್ತಿಯೆದುರು ಏನೇನೂ ಸಾಲದೆಂಬಂತೆ ಗೋಚರವಾಗುತ್ತಿದೆ. ಹಾಗೆಂದಾಗ ಗಾಂಧೀಜಿ, ನೆಹರು, ಸರ್ದಾರ್ ಪಟೇಲ್, ಭಗತ್ ಸಿಂಗ್, ಮುಂತಾದವರನ್ನೆಲ್ಲಾ ಹೀಗಳೆದಂತಾಗುವುದಿಲ್ಲ; ಘೋಷಣೆಗಳಲ್ಲಿ ಮತ್ತು ಚಳವಳಿಗಳಲ್ಲಿ ಅವರ ಹೆಸರುಗಳನ್ನು ಮುಂದುಮಾಡುವುದು ಹೋರಾಟದ ವೈಶಾಲ್ಯ ಹಾಗೂ ಸಾಫಲ್ಯಕ್ಕೆ ತಕ್ಷಣದ ಸಾಮಗ್ರಿಯಲ್ಲವೆಂಬುದಷ್ಟೇ ಅದರ ಇಂಗಿತ.

ದೃಷ್ಟಾಂತವೊಂದನ್ನು ಪರಾಮರ್ಶೆ ಮಾಡಿಕೊಳ್ಳೋಣ: ಶೋಷಣೆಯ ಆಗರವಾದ ಬಂಡವಾಳಶಾಹಿ ವ್ಯವಸ್ಥೆಯನ್ನು ಗಾಂಧೀಜಿ ಬಹಳ ಹಗುರಗೊಳಿಸಿ ಬಂಡವಳಿಗರು ಧರ್ಮದರ್ಶಿಗಳಾಗಬೇಕೆಂದು ನಿರೀಕ್ಷಿಸಿದ್ದರು.

ಗಾಂಧೀಜಿ, ಅಂಬೇಡ್ಕರ್, ಲೋಹಿಯಾ, ಮುಂತಾದ ಧೀಮಂತರ ಚಿಂತನೆ ಮತ್ತು ಕ್ರಿಯೆಗಳನ್ನು ಉಪೇಕ್ಷಿಸಿರುವುದರಿಂದಾಗಿ ಎಡಪಕ್ಷಗಳು ಸೊರಗಿವೆಯೆಂಬುದು ಒಂದು ಮಿಥ್ಯೆ; ಏಕೆಂದರೆ ಅಂತಹ ಉಪೇಕ್ಷೆಯು ಮೂಲಭೂತ ಅಂಶವಾಗಿ ಎಂದೂ ಪ್ರಕಟವಾಗಿಲ್ಲ. ಮಾಕ್ರ್ಸ್‍ವಾದಿಗಳು ಯಾವುದನ್ನೂ ಚಾರಿತ್ರಿಕ ನೆಲೆಯಿಂದ ಬೇರ್ಪಡಿಸುವುದಿಲ್ಲ ಮತ್ತು ವಿಮರ್ಶಾತ್ಮಕವಾಗಿಯಲ್ಲದೆ ಯಾವ ನಿಲುವನ್ನೂ ಸಂಪೂರ್ಣವಾಗಿ ಸ್ವೀಕರಿಸುವುದೂ ಇಲ್ಲ. ಅದನ್ನು ಒಂದು ಲೋಪವೆಂದು ಪರಿಗಣಿಸುವುದು ಅಬದ್ಧ. ಮಾಕ್ರ್ಸ್‍ವಾದದ ವಿಮರ್ಶಕರೂ ಅಂಥದೇ ಶಿಸ್ತನ್ನು ಪಾಲಿಸುತ್ತಾರೆಂಬುದನ್ನು ನಿಚ್ಚಳವಾಗಿ ಹೇಳಬರುವುದಿಲ್ಲ, ಆದರೆ ಅವರಿಂದಲೂ ಅಂತಹ ಅಪೇಕ್ಷೆಯನ್ನು ಬಯಸುತ್ತೇವೆ.

ವಿಮರ್ಶೆಗೂ ತಿರಸ್ಕಾರಕ್ಕೂ ಸೂಕ್ಷ್ಮವಾದ ವ್ಯತ್ಯಾಸವಿದೆ. ವಿಮರ್ಶೆ ಇಲ್ಲದೆ ಎಲ್ಲವನ್ನೂ ಅಂಗೀಕರಿಸುವುದಾದರೆ ಸೈದ್ಧಾಂತಿಕ ಚೌಕಟ್ಟು ಎಂಬುದು ಅಪ್ರಸ್ತುತ, ತಾರ್ಕಿಕ ಭಿನ್ನತೆ ಎಂಬುದು ಅರ್ಥರಹಿತ. ದೃಷ್ಟಾಂತವೊಂದನ್ನು ಪರಾಮರ್ಶೆ ಮಾಡಿಕೊಳ್ಳೋಣ: ಶೋಷಣೆಯ ಆಗರವಾದ ಬಂಡವಾಳಶಾಹಿ ವ್ಯವಸ್ಥೆಯನ್ನು ಗಾಂಧೀಜಿ ಬಹಳ ಹಗುರಗೊಳಿಸಿ ಬಂಡವಳಿಗರು ಧರ್ಮದರ್ಶಿಗಳಾಗಬೇಕೆಂದು ನಿರೀಕ್ಷಿಸಿದ್ದರು. ಅದನ್ನು ಒಪ್ಪದಿರುವುದು ಮೂದಲಿಕೆಯಲ್ಲ; ಅದು ಅಪ್ರಾಯೋಗಿಕ ಮತ್ತು ಅನಗತ್ಯವೆಂಬ ಕಾರಣದಿಂದ ಅಭಿಪ್ರಾಯಭಿನ್ನತೆ, ಅಷ್ಟೆ. ಬಂಡವಳಿಗರು ಧರ್ಮದರ್ಶಿಗಳಾಗಿ ಸಮಾಜಕ್ಕೆ ಪೋಷಣೆ ನೀಡುವುದರ ಬದಲು ಸಮಾಜವೇ ಉತ್ಪಾದನಾ ಸಾಮಗ್ರಿಗಳನ್ನು ನೇರವಾಗಿ ಮತ್ತು ಯೋಜನಾಬದ್ಧವಾಗಿ ನಿಯಂತ್ರಿಸುವುದು ಹೆಚ್ಚು ಆರೋಗ್ಯಕರ ಮತ್ತು ಸಹಜವಾದ ಪ್ರಕ್ರಿಯೆ. ಅಹಿಂಸಾತತ್ವಕ್ಕೆ ಅನುಗುಣವಾಗುತ್ತದೆಂಬ ಕಾರಣಕ್ಕೆ ಗಾಂಧೀಜಿ ತಮ್ಮ ಪ್ರಮೇಯವನ್ನು ಮಂಡಿಸಿದ್ದರು, ಆದರೆ ಅವರ ಪರಿಧಿಗೆ ಬಂದ ಯಾವ ಬಂಡವಳಿಗನನ್ನೂ ಅವರು ಧರ್ಮದರ್ಶಿಯನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲವೆಂಬುದು ಇತಿಹಾಸ.

ಪ್ರಾಯೋಗಿಕವಾಗಿ ಅದನ್ನು ಅಸ್ತಿತ್ವಕ್ಕೆ ತರಲು ಗಾಂಧೀಜಿ ಯಾವ ಯೋಜನೆಯನ್ನೂ ರೂಪಿಸಲಿಲ್ಲ. ಚಾರಿತ್ರಿಕವಾಗಿ ಬಂಡವಾಳಶಾಹಿಯು ಅಸಂಗತವೆನಿಸಿ ತಂತಾನೆ ಲುಪ್ತವಾಗಿಹೋಗುತ್ತದೆಂದು ಫೆಬಿಯನ್ನರು ಭಾವಿಸಿದ್ದರು. ಅದರ ಸೂಚನೆ ಈವರೆಗೆ ಸಿಕ್ಕಿಲ್ಲದಿರುವುದು ವಾಸ್ತವ. ಸಾಮಾಜಿಕ ಸಂರಚನೆಗಳು ಮಾನವನ ಇತಿಹಾಸದಲ್ಲಿ ಬದಲಾಗಿವೆ ಎನ್ನುವುದಕ್ಕಿಂತಲೂ ಅವನ್ನು ಬದಲಿಸಲಾಗಿವೆ ಎಂಬುದು ತಥ್ಯ. ಬಂಡವಾಳಶಾಹಿಯು ಅದಕ್ಕೆ ಹೊರತಾಗಿರಬೇಕೆಂದು ಪಟ್ಟುಹಿಡಿಯುವುದೇಕೆ? ಹೀಗೆ ವಾದಿಸಿದರೆ ಗಾಂಧೀಜಿಗೆ ಅಪಚಾರ ಬಗೆದಂತೇನೂ ಅಲ್ಲ; ಏಕೆಂದರೆ ಅದು ಅವರ ಅವಾಸ್ತವ ದೃಷ್ಟಿಯನ್ನು ಹೊರಗೆಡಹಿದಂತೆ, ಅಷ್ಟೆ. ಗಾಂಧೀಜಿಯನ್ನು ಅತ್ಯಂತ ಗೌರವದಿಂದ ನಮಿಸುತ್ತಲೇ ಅವರು ಪ್ರಜಾಪ್ರಭುತ್ವ ನೀತಿಗೆ ಎಷ್ಟೋವೇಳೆ ಬದ್ಧರಾಗಿ ಉಳಿಯಲಿಲ್ಲವೆಂದು ಹೇಳುವುದು ತಪ್ಪೇ? ಅದು ಸುಳ್ಳಾದರೆ ಹಾಗೆ ಹೇಳಬಾರದೇ ವಿನಾ, ಸತ್ಯವಾದರೆ ಹೇಳಲಡ್ಡಿಯಿಲ್ಲ.

ಸುಭಾಸ್ ಚಂದ್ರ ಬೋಸ್‍ರನ್ನು ಬೆಂಬಲಿಸಬಾರದೆಂಬ ಸಂದೇಶ ಅದಾಗಿತ್ತು. 1938ರ ಹರಿಪುರ ಕಾಂಗ್ರೆಸ್ ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಸುಭಾಸ್ ಚುನಾಯಿತರಾದಾಗ ಪ್ರಜಾಪ್ರಭುತ್ವವಾದಿ ದೃಷ್ಟಿಯಿಂದ ಗಾಂಧೀಜಿ ಅವರನ್ನು ಪುರಸ್ಕರಿಸಲಿಲ್ಲ.

ಆಚಾರ್ಯ ನರೇಂದ್ರ ದೇವ ಮತ್ತು ಯೂಸು ಮೆಹೆರಾಲಿ ಕಾಂಗ್ರೆಸ್ ಸಮಾಜವಾದಿ ಸಮುದಾಯದ ನೇತಾರರು. “ನೀವು ಭಾರತಕ್ಕೆ ಪ್ರಾಯೋಗಿಕ ಸಮಾಜವಾದ ನೀಡಬೇಕು, ಅದು ಭಾರತದ ಸನ್ನಿವೇಶಕ್ಕೆ ಒಗ್ಗಿಕೊಳ್ಳುವಂತಿರಬೇಕು. ನಿಮ್ಮ ವೈಜ್ಞಾನಿಕ ಸಮಾಜವಾದದ ಮಾತನ್ನು ದೂರವಿಡಿ… ಬರುವ ದಿನಗಳಲ್ಲಿ ಸಮಾಜವಾದದಲ್ಲಿ ಆಸಕ್ತಿ ಇರುವವರೊಡನೆ ಸಂಬಂಧ ಬೆಳೆಸಿ ಮತ್ತು ವಾಸ್ತವ ಸನ್ನಿವೇಶ ತಿಳಿದವರ ಸಹಯೋಗ ಪಡೆಯಿರಿ” ಎಂದು ಗಾಂಧೀಜಿ ಒಮ್ಮೆ ನರೇಂದ್ರ ದೇವ ಅವರಿಗೆ ಪತ್ರ ಬರೆದಿದ್ದರು. ಸುಭಾಸ್ ಚಂದ್ರ ಬೋಸ್‍ರನ್ನು ಬೆಂಬಲಿಸಬಾರದೆಂಬ ಸಂದೇಶ ಅದಾಗಿತ್ತು. 1938ರ ಹರಿಪುರ ಕಾಂಗ್ರೆಸ್ ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಸುಭಾಸ್ ಚುನಾಯಿತರಾದಾಗ ಪ್ರಜಾಪ್ರಭುತ್ವವಾದಿ ದೃಷ್ಟಿಯಿಂದ ಗಾಂಧೀಜಿ ಅವರನ್ನು ಪುರಸ್ಕರಿಸಲಿಲ್ಲ. ಅಷ್ಟೇ ಅಲ್ಲ, ಮುಂದಿನ ತ್ರಿಪುರಿ ಅಧಿವೇಶನದಲ್ಲಿ ಪಟ್ಟಾಭಿ ಸೀತಾರಾಮಯ್ಯ ಅವರನ್ನು ಚುನಾವಣೆಯಲ್ಲಿ ಸುಭಾಸ್ ಸೋಲಿಸಿದಾಗ “ಅವರ ಸೋಲು ನನ್ನ ಸೋಲೇ ಆಗಿದೆ” ಎಂದು ಗಾಂಧೀಜಿ ಉದ್ಗರಿಸಿದರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲಾ ರಾಜಿನಾಮೆ ನೀಡುವಂತೆ ಮಾಡಿದರು.

ನರೇಂದ್ರ ದೇವ ಆಗಲಿ, ಕಮ್ಯುನಿಸ್ಟರಾಗಲಿ ಗಾಂಧೀಜಿಯ ಈ ಧೋರಣೆಯನ್ನು ಸರ್ವಥಾ ಒಪ್ಪಲಿಲ್ಲ. ಇದನ್ನು ಇಂದು ನೆನಪಿಸಿಕೊಂಡರೆ ಗಾಂಧೀಜಿಯೊಡನೆ ವೈರತ್ವ ಬೆಳೆಸಿಕೊಂಡಂತೇನೂ ಅಲ್ಲ. ಅಂದರೆ, ಗಾಂಧೀಜಿಯ ವಿಮರ್ಶೆ ಮಾಡುತ್ತಲೇ ಅವರ ಬೇರೆಷ್ಟೋ ನೀತಿಗಳನ್ನೂ ಕ್ರಿಯಾಶೀಲತೆಯನ್ನೂ ಉತ್ಸಾಹದಿಂದ ಗೌರವಿಸಬಹುದು. ಉಪ್ಪಿನ ಸತ್ಯಾಗ್ರಹ ಮತ್ತು ನೌಖಾಲಿ ಪ್ರಸಂಗಗಳನ್ನು ಎಂದಾದರೂ ಮರೆಯುವುದುಂಟೆ? ಮಾನ್ಯ ತೋಳ್ಪಾಡಿ ಮತ್ತು ಶೆಟ್ಟಿ ಅವರು ಭಾವಿಸುವಂತೆ “ಸಾಂಸ್ಕೃತಿಕ ಅಪೌಷ್ಟಿಕತೆ” ಏನೂ ಇದರಿಂದ ಉಂಟಾಗುವುದಿಲ್ಲ.

ಡಾ.ರಾಮ ಮನೋಹರ ಲೋಹಿಯ ಅವರನ್ನು ಅತಿಯಾಗಿ ವಿಜೃಂಭಿಸುವ ಅಗತ್ಯವಿಲ್ಲ. ಪ್ರಭುತ್ವದ ಚುಕ್ಕಾಣಿ ಹಿಡಿಯುವವರು ಜಾತಿ, ಆಂಗ್ಲಭಾಷೆ ಮತ್ತು ಸಂಪತ್ತು, ಇವುಗಳ ಆಧಾರದ ಮೇಲೆ ಮೇಲೇರುತ್ತಾರೆಂಬುದು ಅವರ ಮೂಲಭೂತ ಗ್ರಹಿಕೆ. ಜಾತಿಯ ಶ್ರೇಣೀಕರಣದ ವಿರುದ್ಧ ಸೊಲ್ಲೆತ್ತಿ ಸೆಣಸುವುದೆಂದರೆ ಮೂರ್ತರೂಪದಲ್ಲಿ ಸಂಪತ್ತು ಅಥವಾ ಬಂಡವಾಳದ ವಿರುದ್ಧದ ಹೋರಾಟವೇ ಆಗುತ್ತದೆ; ಏಕೆಂದರೆ ಅಮೂರ್ತವಾದ ಜಾತಿಯು ಮೂರ್ತವಾಗಿ ಧರಿಸುವ ರೂಪವೆಂದರೆ ಬಂಡವಾಳ ಮತ್ತು ಭೂಮಿಯ ಒಡೆತನ. ಕಮ್ಯುನಿಸ್ಟರ ಚಳವಳಿಯು ಅಮೂರ್ತವಾದುದನ್ನು ನಗಣ್ಯವೆಂದು ಭಾವಿಸಬಾರದು ಮತ್ತು ಮೂರ್ತವಾದುದನ್ನು ಕೇಂದ್ರೀಕರಿಸಬೇಕು ಎಂಬ ನಿಲುವನ್ನು ಹೊಂದಿರುತ್ತದೆ.

ಆಚಾರ್ಯ ನರೇಂದ್ರ ದೇವ ಅವರೊಡನೆ ಕಮ್ಯುನಿಸ್ಟರು ಎಂತಹ ‘ಸಾಂಸ್ಕೃತಿಕ ಅನುಸಂಧಾನ’ ನಡೆಸಲು ಮುಂದಾಗಬೇಕೆಂದು ಶ್ರೀಯುತರಾದ ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಶೆಟ್ಟಿ ಬಯಸುತ್ತಾರೋ ತಿಳಿಯದಾಗಿದೆ.

ಲೋಹಿಯಾ ಅವರ ಅನುಯಾಯಿಗಳು ಭಾರತೀಯ ಜನತಾ ಪಕ್ಷದೊಡನೆ ಬಾಂಧವ್ಯ ಬೆಳೆಸಿರುವುದು ಇಂದಿನ ವಿದ್ಯಮಾನವಲ್ಲ; ಜಾರ್ಜ್ ಪರ್ನಾಂಡಿಸ್ ಅವರ ಕಾಲಕ್ಕೇ ಅದು ಘಟಿಸಿತ್ತು. ಮೆಹೆರಾಲಿ ಮತ್ತು ನರೇಂದ್ರ ದೇವ ಅವರ ಪರಂಪರೆಯನ್ನು ಕಾಂಗ್ರೆಸ್ಸಿಗರು ಎಂದೂ ಪುರಸ್ಕರಿಸಲಿಲ್ಲ ಮತ್ತು ಲೋಹಿಯಾವಾದಿಗಳು ಅವರ ಹೆಸರು ಉಚ್ಚರಿಸುವುದನ್ನುಳಿದು ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳಿಗೆ ಅವರನ್ನು ಬಳಸಿಕೊಂಡಿರುವುದು ವಿರಳ. ಆಚಾರ್ಯ ನರೇಂದ್ರ ದೇವ ಅವರೊಡನೆ ಕಮ್ಯುನಿಸ್ಟರು ಎಂತಹ ‘ಸಾಂಸ್ಕೃತಿಕ ಅನುಸಂಧಾನ’ ನಡೆಸಲು ಮುಂದಾಗಬೇಕೆಂದು ಶ್ರೀಯುತರಾದ ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಶೆಟ್ಟಿ ಬಯಸುತ್ತಾರೋ ತಿಳಿಯದಾಗಿದೆ. ನರೇಂದ್ರ ದೇವ ಅವರು ಬೇರೆ ಸಮಾಜವಾದಿಗಳಿಗಿಂತಲೂ ತೀರಾ ಭಿನ್ನರಾಗಿದ್ದರೆಂಬುದು ಶ್ಲಾಘನೀಯ, ಆದರೆ ಚಳವಳಿಯ ದೃಷ್ಟಿಯಿಂದ ಅವರು ನೆನಪಾಗಿ ಮಾತ್ರ ಉಳಿದಿದ್ದಾರೆ.

1920ರ ದಶಕದಲ್ಲಿ ಮುಂಬೈನ ಕಾರ್ಮಿಕ ಸಂಘಟನೆಗಳು ಡಾ.ಅಂಬೇಡ್ಕರರೊಡನೆ ಕೈಜೋಡಿಸದಿದ್ದುದು ನಿಜಕ್ಕೂ ಒಂದು ಚಾರಿತ್ರಿಕ ಪ್ರಮಾದವೆಂಬುದರಲ್ಲಿ ಎರಡು ಮಾತಿಲ್ಲ. 1930ರ ದಶಕದಲ್ಲಾಗಲೇ ಆ ಪ್ರಮಾದವನ್ನು ಹಿಂದಿಕ್ಕಿ ಕಮ್ಯುನಿಸ್ಟ್ ಚಳವಳಿಯು ಅವರೊಡನೆ ಸಾಹಚರ್ಯ ಸಾಧಿಸಿತ್ತು ಮತ್ತು ಡಾ.ಬಾಬಾಸಾಹೇಬರು ಅದನ್ನು ಸ್ವಾಗತಿಸಿ ಸಹಯೋಗಕ್ಕೆ ಸಿದ್ಧವಾಗಿದ್ದರು. 1936ರಲ್ಲಿ ಡಾ.ಅಂಬೇಡ್ಕರ್ ಅವರು ತಮ್ಮ ಮೊದಲ ರಾಜಕೀಯ ಪಕ್ಷವಾದ ‘ಸ್ವತಂತ್ರ ಲೇಬರ್ ಪಕ್ಷ’ವನ್ನು ಸ್ಥಾಪಿಸಿದರು. ಅದರ ಅನೇಕ ಕಾರ್ಯಕ್ರಮಗಳಲ್ಲಿ ಕಮ್ಯುನಿಸ್ಟರು ನೇರವಾಗಿ ಭಾಗವಹಿಸಿದ್ದಾರೆ. ಇಂಡಿಪೆಂಡೆಂಟ್ ಲೇಬರ್ ಪಾರ್ಟಿಯ ಪ್ರಮುಖ ಕಾರ್ಯದರ್ಶಿ ಅನಂತ ಚಿತ್ರೆ ಅಂಬೇಡ್ಕರ್ ಅವರಿಗೆ ಬಲಗೈನಂತಿದ್ದ ಕಾರ್ಯಕರ್ತ. ಐಎಲ್‍ಪಿ ವಿಸರ್ಜನೆಗೊಂಡಾಗ ಚಿತ್ರೆ ಕಮ್ಯುನಿಸ್ಟ್ ಪಕ್ಷವನ್ನು ಸೇರಿದರು ಮತ್ತು ಬಾಬಾಸಾಹೇಬರೊಡನ ಚಟುವಟಿಕೆಗಳನ್ನು ಮೊದಲಿನಂತೆಯೇ ಮುಂದುವರಿಸಿದರು.

ಅಂಬೇಡ್ಕರರ ಖಾಸಾ ಯುವಮಿತ್ರ ಮತ್ತು ಕಾರ್ಯಕರ್ತ ಶ್ರೀಮೋರೆ ಇನ್ನೂ ಮೊದಲೇ ಕಮ್ಯುನಿಸ್ಟ್ ಪಕ್ಷವನ್ನು ಸೇರಿದರೂ ಬಾಬಾಸಾಹೇಬರ ಕೊನೆಯುಸಿರಿನವರೆಗೂ ಅವರಿಗೆ ಆಪ್ತರಾಗಿದ್ದರು, ಅವರ ಸಹ-ಕಾರ್ಯಕರ್ತರಾಗಿದ್ದರು. ಅಂತೆಯೇ ಎಸ್.ಜಿ.ಸರ್ದೇಸಾಯಿ, ಬಿ.ಟಿ.ರಣದಿವೆ ಮತ್ತು ಶಾಮರಾವ್ ಪರುಲೇಕರ್ ಕಮ್ಯುನಿಸ್ಟ್ ಪಕ್ಷದಲ್ಲಿದ್ದುಕೊಂಡು ಡಾ.ಅಂಬೇಡ್ಕರ್ ಅವರ ನೇತೃತ್ವದ ಅನೇಕ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗಿಗಳಾಗುತ್ತಿದ್ದರು. ಚಾರಿತ್ರಿಕ ‘ಖೋತಿ ವಿರುದ್ಧದ ಹೋರಾಟ’ದಲ್ಲಂತೂ ಕಮ್ಯುನಿಸ್ಟರು ಡಾ.ಅಂಬೇಡ್ಕರರ ಜೊತೆ ಅಪೂರ್ವ ಬಾಂಧವ್ಯ ಬೆಳೆಸಿಕೊಂಡಿದ್ದರು. 1938ರ ಜನವರಿ 10ರಂದು ಮುಂಬೈನಲ್ಲಿ ನಡೆಸಲಾದ ಬೃಹತ್ ಮೆರವಣಿಗೆ ಮತ್ತು ಸಭೆಯಲ್ಲಿ ಡಾ.ಅಂಬೇಡ್ಕರರ ಜೊತೆ ಅನೇಕ ಕಮ್ಯುನಿಸ್ಟರು ಹೆಜ್ಜೆ ಹಾಕಿದ್ದರು, ಸಂಘಟಕರಾಗಿ ದುಡಿದಿದ್ದರು.

ಅದೇ ಜನವರಿ 14ರಂದು ಡಾ.ಬಾಬಾಸಾಹೇಬ್ ಮುಂಬೈನಲ್ಲಿ ಕೃಷಿಕರ ಬೃಹತ್ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದರು. ಜನವರಿ 17ರ “ಕೊಂಕಣ್ ಕೃಷೀವಲ್” ಪತ್ರಿಕೆ ಅದನ್ನು ದೀರ್ಘವಾಗಿ ವರದಿ ಮಾಡಿತ್ತು.

ಮೆರವಣಿಗೆಯಲ್ಲಿ ಒಂದು ಘೋಷಣೆ ಪ್ರಧಾನವಾಗಿತ್ತು: “ಖೋತಾಶಾಹೀ ನಷ್ಟ್ ಕರಾ, ಸಾವ್ಕಾರ್‍ಶಾಹೀ ನಷ್ಟ್ ಕರಾ; ಡಾವೀ ಬಾಜೂ ಸೋಡೂ ನಕಾ, ಉಜ್ವೀ ಬಾಜೂ ಧರೂ ನಕಾ.” ಅಂದರೆ, “ಖೋತ್‍ಗಳ ಉಪಟಳವನ್ನು ಅಂತ್ಯಗೊಳಿಸಿ ಮತ್ತು ಬಂಡವಳಿಗರ ಹಿಡಿತವನ್ನು ನಾಶ ಮಾಡಿ; ಎಡದ ಹಾದಿಯನ್ನೆಂದೂ ಬಿಡಬೇಡಿ, ಬಲದ ಹಾದಿಯನ್ನೆಂದೂ ತುಳಿಯಬೇಡಿ.” ಅದೇ ಜನವರಿ 14ರಂದು ಡಾ.ಬಾಬಾಸಾಹೇಬ್ ಮುಂಬೈನಲ್ಲಿ ಕೃಷಿಕರ ಬೃಹತ್ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದರು. ಜನವರಿ 17ರ “ಕೊಂಕಣ್ ಕೃಷೀವಲ್” ಪತ್ರಿಕೆ ಅದನ್ನು ದೀರ್ಘವಾಗಿ ವರದಿ ಮಾಡಿತ್ತು.

ಅಂದು ಡಾ.ಅಂಬೇಡ್ಕರ್ ನುಡಿದಿದ್ದ ಕೆಲವು ಅವಿಸ್ಮರಣೀಯ ಮಾತುಗಳಿವು: “…ಹೊಲದಲ್ಲಿ ಕೆಲಸ ಮಾಡುವ ನೀವು ಕೃಷಿ ಕಾರ್ಮಿಕರು ಒಂದು ಲಕ್ಷಕ್ಕಿಂತ ಹೆಚ್ಚು ಸಂಖ್ಯೆಯಲ್ಲಿದ್ದೀರ. ಪರಿಸ್ಥಿತಿ ಹೀಗಿರುವಾಗ ನೀವೇಕೆ ದುರ್ಬಲರಾಗುತ್ತೀರಿ? ಇದೇ ನನಗೆ ಆಶ್ಚರ್ಯ ಹುಟ್ಟಿಸುತ್ತದೆ. …ಇಲ್ಲಿ ಸೇರಿರುವ ನೀವೆಲ್ಲರೂ ವಿವಿಧ ಜಾತಿಗಳಿಗೆ ಸೇರಿದ್ದೀರ ಮತ್ತು ನೀವು ನಿಮ್ಮದೇ ಜಾತಿ ಸಂಘಟನೆಗಳನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೀರಿ. ಆದ್ದರಿಂದಲೇ ಕಾರ್ಮಿಕರ ಐಕ್ಯ ವೇದಿಕೆಯೊಂದು ರೂಪುಗೊಳ್ಳಲು ಅಸಾಧ್ಯವಾಗಿದೆ. ಆದರೆ ಅಂತಹದೊಂದು ಐಕ್ಯ ಸಂಘಟನೆಯು ಮುಂದಿನ ದಿನಗಳಲ್ಲಿ ರೂಪುತಾಳುವುದು ವಾಸ್ತವವಾಗುತ್ತದೆ ಎಂದು ನಾನು ಎದುರುನೋಡುತ್ತೇನೆ. ಇದು ಅತ್ಯಂತ ಸಂತಸ ನೀಡುವ ವಿಷಯವಾಗುತ್ತದೆ. ಈ ಸಂದರ್ಭದಲ್ಲಿ ನನ್ನ ಕಮ್ಯುನಿಸ್ಟ್ ಮಿತ್ರರಿಗೆ ಒಂದೆರಡು ಆರೋಗ್ಯಕರ ಮಾತುಗಳನ್ನು ಹೇಳಿದರೆ ಅದು ಅಪ್ರಾಸಂಗಿಕವಾಗುವುದಿಲ್ಲವೆಂದು ನಾನು ಭಾವಿಸುತ್ತೇನೆ. ಕಮ್ಯುನಿಸ್ಟ್ ತತ್ವವನ್ನು ಕುರಿತು ಹೇಳುವುದಾದರೆ, ಇಲ್ಲಿ ನೆರೆದಿರುವ ಯಾವುದೇ ನಾಯಕರಿಗಿಂತ ಹೆಚ್ಚಾಗಿ ಮತ್ತು ಕೂಲಂಕಷವಾಗಿ ನಾನು ಕಮ್ಯುನಿಸ್ಟ್ ಸಿದ್ಧಾಂತವನ್ನು ಓದಿಕೊಂಡಿದ್ದೇನೆ ಎಂದು ಹೇಳಬಲ್ಲೆ. ಅದೂ ಬಹಳ ನಿಷ್ಠೆಯಿಂದ ಓದಿಕೊಂಡಿದ್ದೇನೆ. ಆ ಸಾಹಿತ್ಯವನ್ನೆಲ್ಲಾ ಓದಿಕೊಂಡರೆ, ಅದೆಷ್ಟು ಆಕರ್ಷಕವಾದದ್ದು ಎನಿಸುತ್ತದೆ. ಆದರೆ ಅದನ್ನು ಎಷ್ಟರಮಟ್ಟಿಗೆ ಮತ್ತು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದನ್ನು ನಾವು ನೋಡಬೇಕಿದೆ. ನನಗನ್ನಿಸತ್ತೆ, ನಾವು ಕಮ್ಯುನಿಸ್ಟ್ ಎಳೆಯನ್ನು ಹಿಡಿದುಕೊಂಡು ಹೋದರೆ, ನಾವು ಇಂಡಿಯಾದಲ್ಲಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಯಶಸ್ಸನ್ನು ಕಾಣಬಹುದಾಗಿದೆ. ಅದೇ ಬೇರೆ ದೇಶಗಳಲ್ಲಿನ ಜನರು ಈ ಯಶಸ್ಸನ್ನು ಪಡೆಯಲು ದೀರ್ಘ ಅವಧಿಯಲ್ಲಿ ಹೆಚ್ಚು ಪರಿಶ್ರಮ ಪಡಬೇಕಿತ್ತು. ಆದ್ದರಿಂದಲೆ ಕಾರ್ಮಿಕ ಚಳವಳಿಯ ಎಲ್ಲ ಹೋರಾಟಗಳಿಗೆ ಎಂದೂ ಕಮ್ಯುನಿಸ್ಟ್ ತತ್ವವು ಹತ್ತಿರವಾಗಿದೆ. ಆದ್ದರಿಂದ ನಾನು ಮತ್ತೊಮ್ಮೆ ಹೇಳಬಯಸುವುದೇನೆಂದರೆ ನಮ್ಮ ಸ್ವತಂತ್ರವಾದ ಮತ್ತು ಸಂಘಟಿತ ಹೋರಾಟವು ಐಕ್ಯತೆಯ ಹೋರಾಟದ ಘಟಕಗಳನ್ನು ರಚಿಸಬೇಕು. ನಮ್ಮ ಎಲ್ಲ ಹೋರಾಟಗಳೂ ಯಾವುದೇ ರೀತಿಯ ವೈಮನಸ್ಸುಗಳಿಂದ ಕೂಡಿರಕೂಡದು ಮತ್ತು ನಾವು ಧೈರ್ಯದಿಂದ ಹೋರಾಡಲು ಸಿದ್ಧರಾಗಬೇಕು.”

ದಲಿತರ ಭಾಗವಹಿಸುವಿಕೆಯಿಲ್ಲದೆ ಕಮ್ಯುನಿಸ್ಟ್ ಚಳವಳಿಗೆ ಭವಿಷ್ಯವಿಲ್ಲ ಮತ್ತು ಕಮ್ಯುನಿಸ್ಟ್ ತತ್ವವಿಲ್ಲದೆ ದಲಿತ ಚಳವಳಿಗೆ ಯಶಸ್ಸಿಲ್ಲ. ಡಾ.ಅಂಬೇಡ್ಕರ್ ಅವರು ತಮ್ಮ ‘ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ ಪಕ್ಷ’ದ ಪರವಾಗಿ 15.3.1947ರಂದು ಮುಂದೆ ರಚನೆಗೊಳ್ಳಲಿದ್ದ ಸಂವಿಧಾನ ರಚನಾ ಸಮಿತಿಗೆ ಸಲ್ಲಿಸಲು ಒಂದು ಜ್ಞಾಪನಪತ್ರವನ್ನು ಸಿದ್ಧಗೊಳಿಸಿದ್ದರು. ಅದರ ಕೆಲವು ಅಂಶಗಳು ಇಂತಿವೆ:

ಭಾರತದ ಕಮ್ಯುನಿಸ್ಟರು ಡಾ.ಬಾಬಾಸಾಹೇಬ ಅಂಬೇಡ್ಕರರೊಂದಿಗೆ ಅನುಸಂಧಾನ ನಡೆಸುವುದೆಂದರೆ ಅವರ ಈ ಕರೆಯನ್ನು ಕಾರ್ಯರೂಪಕ್ಕೆ ತರುವುದು. ದಲಿತರ ಭಾಗವಹಿಸುವಿಕೆಯಿಲ್ಲದೆ ಕಮ್ಯುನಿಸ್ಟ್ ಚಳವಳಿಗೆ ಭವಿಷ್ಯವಿಲ್ಲ ಮತ್ತು ಕಮ್ಯುನಿಸ್ಟ್ ತತ್ವವಿಲ್ಲದೆ ದಲಿತ ಚಳವಳಿಗೆ ಯಶಸ್ಸಿಲ್ಲ. ಡಾ.ಅಂಬೇಡ್ಕರ್ ಅವರು ತಮ್ಮ ‘ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ ಪಕ್ಷ’ದ ಪರವಾಗಿ 15.3.1947ರಂದು ಮುಂದೆ ರಚನೆಗೊಳ್ಳಲಿದ್ದ ಸಂವಿಧಾನ ರಚನಾ ಸಮಿತಿಗೆ ಸಲ್ಲಿಸಲು ಒಂದು ಜ್ಞಾಪನಪತ್ರವನ್ನು ಸಿದ್ಧಗೊಳಿಸಿದ್ದರು. ಅದರ ಕೆಲವು ಅಂಶಗಳು ಇಂತಿವೆ:

1 ಭಾರತ ಸರ್ಕಾರವು ಸಂವಿಧಾನವನ್ನು ರೂಪಿಸುವಾಗ ಈ ಕೆಳಕಂಡ ಅಂಶಗಳನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು:

ಅ). ಸರ್ಕಾರವು ಪ್ರಮುಖವೆಂದು ಭಾವಿಸುವ ದೇಶದ ಕಾರ್ಖಾನೆಗಳನ್ನು ದೇಶದ ಮೂಲ ಕಾರ್ಖಾನೆಗಳೆಂದು ಘೋಷಿಸಬೇಕು.

ಆ). ಮೂಲ ಕಾರ್ಖಾನೆಗಳೆನಿಸಿಕೊಳ್ಳದೆ, ಮೂಲಭೂತ ಕಾರ್ಖಾನೆಗಳೆನಿಸಿಕೊಂಡವನ್ನು ಸರ್ಕಾರದ ನಿಯಂತ್ರಣದಲ್ಲಿರುವ ಉದ್ಯಮಗಳೆಂದು ಘೋಷಿಸಬೇಕು ಮತ್ತು ಅವನ್ನು ಸರ್ಕಾರವೇ ನಿಯಮಾವಳಿಗಳನ್ನು ಮಾಡಿ ನಡೆಸುವಂತಾಗಬೇಕು.

ಈ). ಇಡೀ ಕೃಷಿ ಉದ್ಯಮವು ಸರ್ಕಾರದ ಆಧಿಪತ್ಯದಲ್ಲಿರಬೇಕು.

ಉ). ಖಾಸಗಿ ಸ್ವಾಮ್ಯದಲ್ಲಿರುವ ಉದ್ದಿಮೆಗಳನ್ನು, ವಿಮೆ ವ್ಯವಹಾರವನ್ನು …. ಗೇಣಿದಾರರ ವಶದಲ್ಲಿರುವ ಕೃಷಿಯೋಗ್ಯ ಭೂಮಿಯನ್ನು ಅವುಗಳಿಗೆ ನ್ಯಾಯಯುತ ಬೆಲೆಯನ್ನು … ಕೊಟ್ಟು ಸರ್ಕಾರವು ಅವರಿಂದ ವಶಪಡಿಸಿಕೊಳ್ಳಬೇಕು. …

2.
ಆ). ಕೃಷಿಯನ್ನು ಸಾಮೂಹಿಕ ಕೃಷಿಯಾಗಿ ಸಂಘಟಿಸಬೇಕು.

ಈ). ಕೃಷಿಗೆ ಸಂಬಂಧಿಸಿದಂತೆ ಖರ್ಚಾದ ವೆಚ್ಚವನ್ನು ಕಳೆದುಕೊಂಡು, ಸಾಮೂಹಿಕ ಕೃಷಿಯಲ್ಲಿ ಉತ್ಪಾದಿತವಾದ ಕೃಷಿ ಉತ್ಪನ್ನಗಳನ್ನು ರೈತರ ನಡುವೆ ಹಂಚಬೇಕು… ಇತ್ಯಾದಿ.

ಡಾ.ಬಾಬಾಸಾಹೇಬ್ ಅಂಬೇಡ್ಕರರ ಭಾರತ ಸಂವಿಧಾನ ಇದು. ನಂತರ ಸಂವಿಧಾನ ರಚನಾ ಸಮಿತಿಗಾಗಿ ಅವರು ರಚಿಸಿದ ಸಂವಿಧಾನದಲ್ಲಿ ಇವೆಲ್ಲಾ ಅಡಕವಾಗಿಲ್ಲ. ಅಲ್ಲಿದ್ದ ಕೆಲವು ಸದಸ್ಯರಲ್ಲಿ ಇಂತಹ ಜನಪರ ದೃಷ್ಟಿಯ ಕೊರತೆ ಇದ್ದಿತು. ಇಂದಿನ ಕಮ್ಯುನಿಸ್ಟ್ ಚಳವಳಿಯು ಅಂಬೇಡ್ಕರರ ಅನುಯಾಯಿಗಳೊಡನೆ ಜಂಟಿಯಾಗಿ ಕಾರ್ಯವೆಸಗಿ ಅಂಬೇಡ್ಕರರ ಆಶಯವನ್ನು ಪೂರೈಸಬೇಕು.

ಮಾಕ್ರ್ಸ್‍ನ ವಾದವನ್ನು ಪೇಲವಗೊಳಿಸಲು ಎಂತೆಂಥವೋ ಹೊಸ ವಾದಗಳನ್ನು ಉತ್ಪತ್ತಿ ಮಾಡುತ್ತಲೇ ಇರುವ ಪಂಡಿತರ ವರ್ಗಗಳು ವಿಶ್ವದ ವಿವಿಧ ಭಾಗಗಳಲ್ಲಿ ಭರದಿಂದ ಕೆಲಸ ಮಾಡುತ್ತಿರುತ್ತವೆ: ಆಧುನಿಕೋತ್ತರ, ಫೋಕೊ ಮಾದರಿ, ಮಾರ್ಕೂಸ್ ಮಾದರಿ, ಜೆಜೆಕ್ ಮಾದರಿ, ಇತ್ಯಾದಿ. ಸಮಾಜದಲ್ಲಿ ಗುಣಾತ್ಮಕ ಬದಲಾವಣೆಗಳನ್ನು ತರುವ ಆಶಯ ಅವುಗಳಿಗಿಲ್ಲ. ಒಂದು ಉದಾಹರಣೆಯನ್ನು ಮಾತ್ರವೇ ಇಲ್ಲಿ ದಾಖಲಿಸಲು ಸಾಧ್ಯ:

ಇರಾನಿನಲ್ಲಿ ಖೊಮೇನಿ ಅಧಿಕಾರಕ್ಕೆ ಬಂದಾಗ ಫೋಕೊ ಅದನ್ನು ಮಹಾಕ್ರಾಂತಿಯೆಂದು ಸ್ವಾಗತಿಸಿದ, ‘ವರ್ಗ ಸಮರಕ್ಕೆ ಪರ್ಯಾಯ’ ಎಂದು ಘೋಷಿಸಿದ. ಖೊಮೇನಿಯ ಮತಧರ್ಮದ ಪಾಶಕ್ಕೆ ಅಲ್ಲಿಯ ಇಡೀ ಮಹಿಳಾಲೋಕ ಪೂರ್ತಿಯಾಗಿ ಸಿಲುಕಿಕೊಂಡಿತು! ಅದು ವರ್ಗ ಸಮರಕ್ಕೆ ಎಂದೂ ಪರ್ಯಾಯವಲ್ಲ. ಇಂತಹ ವಿಪರ್ಯಾಸಗಳು ಒಂದೇ, ಎರಡೇ! ಕಮ್ಯುನಿಸ್ಟರು ಅಂತಹ ಎಲ್ಲ ದಮನಿತರ ಜೊತೆ ಅನುಸಂಧಾನ ನಡೆಸಬೇಕು, ಹೋರಾಟದಲ್ಲಿ ಕೈಜೋಡಿಸಬೇಕು. ನೂತನ ಸಂಸ್ಕೃತಿಯ ಆವಿಷ್ಕಾರಕ್ಕೆ ಅದು ಸಾಧನ.

*ಲೇಖಕರು ಮೂಲತಃ ತುಮಕೂರು ಜಿಲ್ಲೆಯ ಹಳೇನಹಳ್ಳಿಯವರು; ಭಾರತದ ಬಹುಮುಖ್ಯ ಮಾಕ್ರ್ಸ್‍ವಾದಿ ಚಿಂತಕರು, ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಪ್ರಸ್ತುತ ಹೊಸತು ಮಾಸಿಕದ ಗೌರವ ಸಂಪಾದಕರು.

Leave a Reply

Your email address will not be published.