ಅಪ್ಪನಿಗೆ ವಯಸ್ಸಾಗಲ್ಲ

 

 

 

ಕೆ ಬಿ ವೀರೇಶ

 

 

 

ಕೆಸರು ಮೈಗೆ ಮೆತ್ತಿಕೊಂಡು

ನೇಗಿಲ ಮೇಳಿ ಹಿಡಿದುಕೊಂಡು

ಬೆವರ ಹನಿಯ ಭೂಮಿಗಿಳಿಸಿ

ದಿನದ ಸೂರ್ಯನಂತೆ ಹೊಳೆದು

ಹಗಲೆಲ್ಲಾ ದುಡಿಯುತ್ತಿದ್ದೆ

ಕೆಸರ ಗದ್ದೆಯಲ್ಲಿ ಅಪ್ಪಾ ನೀನಂದು

ನನಗದು ಅರಗುವುದರೊಳಗೆ

ನೀ ಮುದುಕನಾಗಿದ್ದೆ

ನಾ ಅಪ್ಪನಾಗಿದ್ದೆ

ಅಪ್ಪನಿಗೆ ವಯಸ್ಸಾಗಲ್ಲವೆಂಬುದು

ನನ್ನ ಹಣೆ ಬೆವರಿನಿಂದ

ಇಂದು ನಾನದನರಿತಿದ್ದೆ

ಹೊಂಡು ನೀರಿನಲಿ ಮುಖ ತೊಳೆದು

ಹೊಲದ ಬದುವಿನಲಿ ಬಾಗಿ ಕುಳಿತು

ರೊಟ್ಟಿ ಮುರಿಯಲು ನೀ ಕೈಚಾಚಿದಾಗ

ನಿನ್ನ ಅಂಗೈ ಬೊಬ್ಬೆಗೆ

ಕನ್ನಡಿ ಬೇಕಿರಲಿಲ್ಲ

ಅಮ್ಮ ನೋವಲಿ ವಟಗುಟ್ಟುವಾಗ

ಸುಮ್ಮನೆ ನೀ ಚಂದ್ರನಂತೆ ನಕ್ಕೆಯಲ್ಲ

ಆಗದು ನನಗೊಂದು ತಿಳಿಯಲಿಲ್ಲ

ಬೆಪ್ಪನಾಗಿ ನೋಡುವುದರ ಹೊರತು

ಅಪ್ಪನಿಗೆ ವಯಸ್ಸಾಗಲ್ಲವೆಂಬುದು

ನನ್ನ ಮರುಗಟ್ಟಿದ ಕೈಗಳ ನೋಡಿದಾಗ

ಈಗದು ನಿಜವೆನಿಸುತ್ತಿದೆ

ಅಪ್ಪ ನೀನಾಗ ನೋವು ಸಹಿಸಿದ್ದು

ಈಗೀಗ ನನ್ನ ಕಾಡಲಾರಂಭಿಸಿದೆ

ಮರಕೊರಕ ಹುಳುವಿನಂತೆ

ಅದು ನಮ್ಮ ಹೊಟ್ಟೆ ತುಂಬಿಸುವ

ಛಲದ ಹೊರಾಟವೆಂದು

ಬಾಳಿನರ್ಥದ ಗುಟ್ಟೆಂದು

ಅಪ್ಪನಿಗೆ ವಯಸ್ಸಾಗಲ್ಲವೆಂಬುದು

ನಿನ್ನ ತ್ಯಾಗದ ದುಡಿಮೆ

ಗರಿಮೆಯಿಂದ ಸಹ್ಯವಾಗುತ್ತಿದೆ

ನಾನು ಎಳೆಯರ ಕೆಳೆಯ

ನೀನು ಎತ್ತುಗಳ ಗೆಳೆಯ

ಎರರಿಗಾಗಿ ನಿನ್ನದೆ ಕಳೆದುಕೊಂಡ

ನೀನು ಪರರುಪಕಾರಿ

ಜೀವನ ಕಲೆಯ ಚೇತೋಹಾರಿ

ಕುಡುಗೋಲು ಬಾರುಕೋಲು ಹಾರೆ ಬುಟ್ಟಿ

ನೀನಿವುಗಳ ಒಡನಾಡಿ

ನಾನು ಬಾನಾಡಿ

ಅಪ್ಪನಿಗೆ ವಯಸ್ಸಾಗಲ್ಲವೆಂಬುದು

ಸ್ಪಷ್ಟ ಪಡಿಸಿದ್ದೆ ನೀನು

ಈ ಇಳೆಯ ದಂದುಗದಲ್ಲಿ

ತುತ್ತು ಕಲಸುವ ಕೈಯಿಗೆ

ಸತ್ವ ಒದಗಿಸುವ ಅಪ್ಪ

ನೀನಾಗಿದ್ದೆ ಅಂದು

ಅಂಬೆಗಾಲಿಗೆ ಹಿಂಬುಗಾಲಾಗಿ ನಿಂತು

ಸಂಸಾರದ ರಥ ಎಳೆಯಲು

ಹೆಣಗುತ್ತಿರುವೆ ನಾನಿಂದು

ಅಪ್ಪನಿಗೆ ವಯಸ್ಸಾಗಲ್ಲವೆಂಬುದು

ನಾನೂ ಸಾಧಾರ ಪಡಿಸಿದ್ದೆ

ಮಗನ ಅಪ್ಪನಾಗಿ

ಕೆ ಬಿ ವೀರೇಶ

Leave a Reply

Your email address will not be published.