ಅಪ್ಪನಿಲ್ಲದ ಅನಾಥೆ!

ಡಾ.ಪಾಟೀಲ ಪುಟ್ಟಪ್ಪ ಅವರ ‘ಮಾನಸಪುತ್ರಿ’ ಎಂದೇ ಗುರುತಿಸಲ್ಪಟ್ಟ ಲೇಖಕಿಯ ಮನದಾಳದ ನೋವು, ಮುಗಿಯದ ನೆನಪು ಇಲ್ಲಿ ಸುರುಳಿ ಬಿಚ್ಚಿದೆ.

 ಸದಾ ಮಾತು, ಚರ್ಚೆಗಳಲ್ಲಿ ಮುಳುಗಿರುತ್ತಿದ್ದ ನಮ್ಮ ನೆಲದ ಚೇತನ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಮೌನಕ್ಕೆ ಶರಣಾಗಿದ್ದಾರೆ. ಏಕಕಾಲದಲ್ಲಿ ಪಂಚಪತ್ರಿಕೆಗಳನ್ನು ಸಂಪಾದಿಸಿದ ರಾಷ್ಟ್ರದಾಖಲೆ ಅವರದ್ದು. ತೊಟ್ಟಿದ್ದು ಖಾದಿ, ತುಳಿದದ್ದು ಗಾಂಧೀ-ಹಾದಿ. ಅವರ ಬೌದ್ಧಿಕ ನಾಯಕತ್ವ ರಾಜ್ಯ ಪರಿಧಿಯೊಳಗಷ್ಟೇ ಅಲ್ಲ, ರಾಷ್ಟ್ರಾದ್ಯಂತ ಪ್ರಸಿದ್ಧ.

ಹಾವೇರಿಯ ಕುರುಬಗೊಂಡ ಅವರ ತಾಯಿ ಮನೆ, ಹಲಗೇರಿ ತಂದೆಯ ಮನೆ. ಓದಿದ್ದು ಬ್ಯಾಡಗಿ ಮತ್ತು ಹಾವೇರಿಯಲ್ಲಿ. ಹೀಗೆ ಹಾವೇರಿ ಜಿಲ್ಲೆಯೊಂದಿಗೆ ಕರಳುಬಳ್ಳಿ ಕಟ್ಟಿಕೊಂಡ ಪಾಪು ಅವರದ್ದು ಹೂವಿನಂತ ಮನಸ್ಸು. ಬಾಲ್ಯಶಿಕ್ಷಣ ಬ್ಯಾಡಗಿಯಲ್ಲಿ ಸಿಗದೇಹೋಗಿದ್ದರೆ ನಾನೀ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದು ಸದಾ ಬ್ಯಾಡಗಿ ಬಗ್ಗೆ ಪ್ರೀತಿ ತೋರಿಸುತ್ತಿದ್ದರು. ಅವರೊಡನಾಡಿಗಳೆಲ್ಲ ಒಬ್ಬೊಬ್ಬರಾಗಿ ಅಗಲಿಹೋದಾಗ ದುಃಖಿತರಾಗುತ್ತಿದ್ದ ಅವರು ಬ್ಯಾಡಗಿಗೆ ಬರುವುದೆಂದರೆ ಹೆಣ್ಣುಮಕ್ಕಳು ತೌರಿಗೆ ಹೊರಟಂತೆ ಸಂಭ್ರಮಿಸುತ್ತಿದ್ದರು. ನಾನಿತ್ತಿತ್ತಲಾಗಿ ಅನೇಕ ಕಾರ್ಯಕ್ರಮಗಳಿಗೆ ಬ್ಯಾಡಗಿಗೆ ಎಳೆತರುತ್ತಿದ್ದೆ. ಹಂಸಭಾವಿಯ ಹಳೆಯ ಗೆಳೆಯ ಮೊಗಲಿ ಹೇಮಣ್ಣನ ಹತ್ತಿರ ಕರೆದೊಯ್ದಾಗ ಇಬ್ಬರೂ ಅಳುತ್ತ ನಮ್ಮನ್ನೆಲ್ಲ ಬೆಸೆಯುವ ಬ್ರಿಜ್ಡ್ ಆಗ್ಯಾಳ ಇವಳು ಎಂದು ಸಂತಸ ವ್ಯಕ್ತಪಡಿಸುತ್ತಿದ್ದರು.

ಅಪ್ಪನಿಲ್ಲದೇ ಬೆಳೆದು ನನ್ನೊಳಗೇ ನಾನು ಅನಾಥಳಾಗುತ್ತ ಹೊರಟವಳಿಗೆ ಅಪ್ಪನಾಗಿ ಹೃದಯದಾಳಕ್ಕಿಳಿಸಿಕೊಂಡರು. ಇಂದುಮತಿಯವರ ಮರಣದ ನಂತರವಂತೂ ವಾರಕ್ಕೊಮ್ಮೆ ಹುಬ್ಬಳ್ಳಿಗೆ ಬರಲು ಫೋನ್ ಹಚ್ಚುತ್ತಿದ್ದರು. ಸ್ವಲ್ಪ ಹೋಗೋದು ತಡವಾದರೂ ಯಾವ ದೇಶದಲ್ಲಿದ್ದಿರಿ ಹೇಳಿ ನಾನೇ ರ‍್ತೀನಿ ಅಂತ ಸಾತ್ವಿಕ ಕೋಪ ಮಾಡಿಕೊಳ್ಳೋರು.

ನಾನು ಅವರ ‘ಪ್ರಪಂಚ’ ಓದುತ್ತಲೇ ಬೆಳೆದವಳು. ಬಹುದೊಡ್ಡ ಶಬ್ದಸಂಪತ್ತು ಅವರಲ್ಲಿತ್ತು, ನೆನಪಂತೂ ಈ ವಯಸ್ಸಲ್ಲೂ ನಡೆದಾಡುವ ವಿಶ್ವಕೋಶವಾಗಿತ್ತು. ನಾನು ಚೇಷ್ಟೆ ಮಾಡುತ್ತಿದ್ದೆ, ‘ಅಪ್ಪಾ! ನಿಮ್ಮ ನಂತರಾನೂ ನಿಮ್ಮ ಮೆದುಳನ್ನು ಪ್ರೀಜರ್ವ್ ಮಾಡಿಯಿಡ್ತಾರೆ’ ಅಂತ.

ಮಹಾತ್ಮಾ ಗಾಂಧಿ ಬ್ಯಾಡಗಿಗೆ ಬಂದಾಗ ಶಾಲಾ ಬಾಲಕ ಪುಟ್ಟಪ್ಪನವರ ಬೆನ್ನು ಚಪ್ಪರಿಸಿದ್ದು ಅನ್ಯಾಯ, ಅಸತ್ಯಗಳಿಗೆ ಬಾಗದೇ ಸೆಟೆದು ಸಾಗುವಂತೆ ಮಾಡಿತು. ಅವರದು ಏಕಾಂತ-ಲೋಕಾಂತದೊಳಗೆ ಬೆಸೆದುಕೊಂಡ ಬದುಕು. ನ್ಯಾಯದ ಕಟ್ಟೆ ಬಿಟ್ಟುಕೊಡಲಾರದ್ದಕ್ಕೆ ನ್ಯಾಯಾಂಗದ ಕಟ್ಟೆ ಏರಬೇಕಾಯಿತು. ಹದಗೆಟ್ಟ ಹಣಕಾಸು ಸ್ಥಿತಿ, ಆದಾಯವಿಲ್ಲದ ಜೀವನಮಟ್ಟದಲ್ಲಿ ಪತ್ನಿ ಇಂದುಮತಿ ಬೆನ್ನಿಗೆ ನಿಂತಿದ್ದರು.

ಡಾ.ರಾಜಕುಮಾರ್ ಅವರನ್ನು ಹೋರಾಟದಲ್ಲಿ ತೊಡಗಿಸಲು ಯಶಸ್ವಿಯಾದ ಕಥೆ ಹೇಳುತ್ತಿದ್ದಾಗ ಅವರೆದುರು ಮೂಕಿಯಾಗಿ ಕುಳಿತುಕೊಳ್ಳುತ್ತಿದ್ದೆ. ಅವರು ನನ್ನ ಹೋರಾಟದ ಸ್ವಾಭಿಮಾನಿ ಬದುಕು, ಬರಹ, ಸಾಮಾಜಿಕ ಚಟುವಟಿಕೆಗಳನ್ನು ಕಂಡು ತುಂಬಾ ಮೆಚ್ಚಿಕೊಂಡಿದ್ದರು. ಅವರಿಂದಲೇ ನನ್ನಲ್ಲಿ ಧನಾತ್ಮಕ ಧೋರಣೆ ಬೆಳೆದುಬಂತು. ನೆನಪಾದಾಗಲೆಲ್ಲ ನನ್ನ ಮನೆಗೆ ಬಂದು ಪಾವನಗೊಳಿಸಿದರು. ಅವರ ಹಳೆಯ ಬಳಗವನ್ನೆಲ್ಲಾ ಕೂಡಿಸುತ್ತಿದ್ದೆ, ಅವರಿಗೆ ಖುಷಿಯೋ ಖುಷಿ. ಆಗೆಲ್ಲ ನನ್ನ ಬ್ಯಾಡಗಿಯ ಬಾಂಧ್ಯವದ ಬೆಸುಗೆ ಕಳಚದಂತೆ ಮಾಡಿದೆ ಎಂದು ಹರುಷಗೊಳ್ಳುತ್ತಿದ್ದರು.

ನನ್ನ ಮಕ್ಕಳಿಬ್ಬರ ಮದುವೆಗೆ ಅಜ್ಜನಾಗಿ ಬಂದು ಕುಂತು ಆಶೀರ್ವದಿಸಿದರು. ಮಗ ಭರತನ ಮದುವೆಗಂತೂ ವಾರದ ಮೊದಲೇ, ‘ನನ್ನ ಬ್ಯಾಡಗಿಗೆ ಬಿಟ್ಟುರ‍್ರಿ’ ಅಂತ ಹಟ ಹಿಡಿದಿದ್ದರೆಂದು ಸೊಸೆ ಶೋಭನಾ ಹೇಳಿದಾಗ ನನಗೆ ಕಣ್ಣೀರೆ ಬಂದಿತ್ತು.

ಧಾರವಾಡ ವಿದ್ಯಾವರ್ಧಕ ಸಂಘದಲ್ಲೊಂದು ಕಾರ್ಯಕ್ರಮವಿತ್ತು. ಅವರದೇ ಅಧ್ಯಕ್ಷತೆ. ನಾನು ಅತಿಥಿ ಉಪನ್ಯಾಸಕಿ. ಜಿಲ್ಲಾಧಿಕಾರಿಗಳು ಮುಖ್ಯ ಅತಿಥಿಗಳಾಗಿದ್ದರು. ಬೆಂಗಳೂರಿಗೆ ಹೋದ ಅವರಿಗೆ ಬರಲಾಗಲಿಲ್ಲ. ಆಗ ಸಂಘಟಕ ಗುತ್ತಲ ಅವರು ಫೋನ್ ಹಚ್ಚಿ, ನೀವಿಲ್ಲದೇ ಹೇಗೆ ಮಾಡೋದೆಂದು ಕೇಳಿದರು. ಆಗ, ‘ಹೆದರಬೇಡಿ ಸಂಕಮ್ಮ ಇದ್ದಾಳೆ, ನನ್ನ ಮಾತುಗಳನ್ನು ಮ್ಯಾನೇಜ್ ಮಾಡ್ತಾಳೆ’ ಎಂದು ಹೇಳಿದರು. ಅವರಿಗೆ ನನ್ನ ಮೇಲೆ ಅಷ್ಟೊಂದು ವಿಶ್ವಾಸ.

ನೃಪತುಂಗ ಪ್ರಶಸ್ತಿ ಬಂದಾಗ ಅವರ ಪತ್ನಿಯೊಂದಿಗೆ ನಾವೆಲ್ಲ ಬೆಂಗಳೂರಿಗೆ ಹೋಗಿ ಸಂಭ್ರಮಿಸಿದ್ದು ಮರೆಯಲಾಗದು. ಪತ್ನಿ ಇಂದುಮತಿ ಅವರ ನಿಧನದ ನಂತರ ತುಂಬಾ ದುಃಖಿತರಾಗಿದ್ದರು; ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿ ನೊವು ಮರೆಯುತ್ತಿದ್ದರು.

ನಿಜಲಿಂಗಪ್ಪನವರಿಂದ ‘ಪಾಪು’ ಎಂದು ಕರೆಸಿಕೊಂಡ ಪುಟ್ಟಪ್ಪನವರು ಕೊನೆಗಾಲದಲ್ಲಿ ಪಾಪುನೇ ಆದದ್ದೊಂದು ವಿಪರ್ಯಾಸ. ಮತ್ತೊಬ್ಬರನ್ನು ಅವಲಂಬಿಸಬೇಕಾಯಿತು. ವೀಲ್‌ಚೇರ್ ಮೇಲೆಯೇ ಹೊರರಾಜ್ಯಗಳಲ್ಲೆೆಲ್ಲಾ ಸುತ್ತಾಡಿ ಬರುವ ವಿಲ್‌ಪವರ್ ಅವರಲ್ಲಿತ್ತು. ಕೆ.ಎಮ್.ಸಿ. ಬೆಡ್ ಮೇಲೆ ಮಲಗಿದ್ದಾಗಲೂ ನರಳಲಿಲ್ಲ. ಆಪರೇಷನ್ನಿಗೆ ಹೋಗುವ ತನಕ ಬಾಯಲ್ಲಿ ಜ್ಯೂಸ್, ಗಂಜಿಯನ್ನು ಚಮಚದಿಂದ ಹಾಕುತ್ತ, ‘ಈಗ ಪಾಪು ಆದ್ರಿ ನೋಡಿ’ ಎಂದಾಗ ನಕ್ಕ ಆ ಮುಗ್ಧತೆಯನ್ನು ಮರೆಯಲಾಗದು.

ಹುಟ್ಟುಹಬ್ಬದಂದು ನನ್ನನ್ನು ಕರೆದು, ‘ಸಂಕಮ್ಮ ನನಗೆ ನಮ್ಮವ್ವ ಸತ್ತಾಳ ಅನಿಸುತ್ತಿಲ್ಲ, ಇಲ್ಲಿಯೇ ಇದ್ದಾಳೆನ್ನಿಸುತ್ತದೆ’ ಎಂದರು. ನಿಮ್ಮಂಥ ಮಗನನ್ನು ಪಡೆದ ಮಲ್ಲಮ್ಮ ಪುಣ್ಯವಂತೆ ಬಿಡ್ರಿ ಅಂದಾಗ ನಕ್ಕರು. ಅವರೊಂದಿಗೆ ಒಂದು ದಿನ ಮಾತನಾಡುತ್ತ ಕುಳಿತರೆ ಒಂದು ಪುಸ್ತಕ ಬರೆಯುವಷ್ಟು ವಿಷಯ ಸಂಗ್ರಹವಾಗುತ್ತಿತ್ತು. ‘ಎಲ್ಲಿಯೇ ಹೋದರೂ ಬೆಳಕಿನ ಒಂದು ಕಿಡಿಯನ್ನ ತೆಗೆದುಕೊಂಡೇ ಹೋಗುತ್ತೇನೆ. ಸಾಧ್ಯವಿದ್ದಲ್ಲಿ ಕತ್ತಲನ್ನು ಹರಿದು ಬೆಳಕನ್ನು ಬೆಳಗಿಸುತ್ತೇನೆ’ ಅನ್ನುತ್ತಿದ್ದರು.

1954ರಲ್ಲಿ ‘ಬಾರಿಸು ಕನ್ನಡ ಡಿಂಡಿಮ’ ಬರೆದವರು ಕುವೆಂಪು. ಅದನ್ನು ತಕ್ಷಣ ಮೆಚ್ಚಿ ಬರೆದವರು ಪಾಪು. ಮರಾಠಿಯ ಲೋಕಸತ್ತಾ ಪತ್ರಿಕೆಯಲ್ಲಿ ಹಿಂದೊಮ್ಮೆ ‘ನಮ್ಮಲ್ಲೂ ಒಬ್ಬ ಪಾಟೀಲ ಪುಟ್ಟಪ್ಪ ಹುಟ್ಟಬೇಕಾಗಿದೆ’ ಎಂದು ಬರೆದಿದ್ದು ಪಾಪು ಸಾಮರ್ಥ್ಯದ ದ್ಯೋತಕ.

ನಾನೆಂದೂ ಪ್ರಶಸ್ತಿ, ಪುರಸ್ಕಾರಗಳಿಂದ ಸಂತಸಪಟ್ಟವಳಲ್ಲ. ಆದರೆ ‘ಪುಟ್ಟಪ್ಪನವರ ಮಾನಸಪುತ್ರಿ’ ಎಂದು ಪರಿಚಯಿಸಲ್ಪಟ್ಟ ಕ್ಷಣ ರೋಮಾಂಚನಗೊಳ್ಳುತ್ತಿದ್ದೆ. ಈಗ ಅಪ್ಪನಿಲ್ಲದ ಅನಾಥೆ!

Leave a Reply

Your email address will not be published.