ಅಪ್ಪನೆಂಬ ಆಲ್ರೌಂಡ್ ಮೆಕ್ಯಾನಿಕ್

ಮನೆಯಲ್ಲಿ ಒಬ್ಬನೇ ಇದ್ದ ಬಾಲಕ ಆಲ್ರೌಂಡ್ ಅಪ್ಪನಿಂದ ಭೇಷ್ ಎನ್ನಿಸಿಕೊಳ್ಳುವ ಆಸೆ ನೀಗೀಸಿಕೊಳ್ಳಲು ಟಿವಿ ಕಾಂಪೆÇೀನೆಂಟುಗಳನ್ನು ತೆಗೆದ. ಹೀಟರ್ ಮಾಡಲು ಹೊರಟ. ಎಲ್ಲಾ ಜೋಡಿಸಿದ ಮೇಲೆ ಸ್ವಲ್ಪ ದೂರದಲ್ಲಿಯೇ ನಿಂತು ಸ್ವಿಚ್ಚು ಅದುಮಿದಾಗಢಂ ಢಮಾರ್!” ಕಾಯಿಲ್ ಬ್ಲಾಸ್ಟ್ ಆಗಿ ಮನೆ ತುಂಬಾ ಹೊಗೆ!

-ಹೇಮಂತ್ ಎಲ್

ನಾವು ಚಿಕ್ಕ ಮಕ್ಕಳಿದ್ದಾಗ ಅಪ್ಪ ಆಗಾಗ ತಮ್ಮ ಬಾಲ್ಯದ ಕಥೆಯನ್ನು ಹೇಳುತ್ತಿದ್ದರು. ಹತ್ತನೆಯ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು ಮಧುಗಿರಿ ಜಿಲ್ಲೆ, ತವಕದಹಳ್ಳಿಯ ಅಜ್ಜನ ಮನೆಯಲ್ಲಿ ಬೆಳೆದವರು. ಓದಿದ್ದು ಸಿದ್ಧಾರ್ಥ ಹೈಸ್ಕೂಲು. ಆಗಿನ ಕಾಲಕ್ಕೆ ಇಂಗ್ಲಿಷ್ ಮೀಡಿಯಂ ಜಸ್ಟ್ ಪಾಸು. ವಿಜ್ಞಾನದಲ್ಲಿದ್ದ ಅಪಾರ ಆಸಕ್ತಿಯಿಂದ ಅವರ ಶಾಲೆಯಲ್ಲಿ ನಡೆದ ವಿಜ್ಞಾನ ಪ್ರದರ್ಶನಕ್ಕೆಂದು ನ್ಯೂಕ್ಲಿಯರ್ ವಿಭಜನೆಯ ವಿದಳನ ಕ್ರಿಯೆಯನ್ನು (Nuclear Fission Reaction) ತೋರ್ಪಡಿಸುವ ಒಂದು ಪ್ರಾತ್ಯಕ್ಷಿಕೆ ಮಾಡಿದ್ದರಂತೆ. ಅದಕ್ಕೆ ಪ್ರಥಮ ಬಹುಮಾನ ಬಂದಿತ್ತಂತೆ.

ಐದನೆಯ ಕ್ಲಾಸಿನಲ್ಲಿದ್ದ ನನ್ನ ತಲೆಗೆ ಯುರೇನಿಯಂ ವಿಭಜನೆ ಹೇಗೆ ಅರ್ಥವಾಗಬೇಕು. ಆದರೆ ನನ್ನ ಕುತೂಹಲವೇನಿದ್ದರೂ ಅಪ್ಪನಿಗೆ ಬಂದಿದ್ದ ಬಹುಮಾನದ ಬಗ್ಗೆ ಮಾತ್ರ ಇತ್ತು. ಅದು ಟ್ರೋಫಿಯೋ? ಶೀಲ್ಡೋ? ಅಥವಾ ನಮ್ಮ ಶಾಲೆಗಳಲ್ಲಿ ಕೊಡುತ್ತಿದ್ದ ಆಗಿನ ಜಾಮೂನಿನ ಸ್ಟೀಲ್ ಬಟ್ಟಲುಗಳೋ? ಎಂಬ ಪ್ರಶ್ನೆ. ಆದರೆ ಪ್ರಶಸ್ತಿಯನ್ನು ಆ ಶಾಲೆಯಲ್ಲಿಯೇ ಇಟ್ಟಕೊಂಡಿದ್ದರಿಂದ ಆ ಕುತೂಹಲ ಹಾಗೇ ಇತ್ತು. ಒಮ್ಮೊಮ್ಮೆ ಅಪ್ಪ ಬೂಸಿ ಬಿಡುತ್ತಿರಬಹುದಾ? ಎಂಬ ಅನುಮಾನವೂ ಬರುತ್ತಿತ್ತು. ನಮ್ಮೂರು ಚಿಕ್ಕಬೆಳವಂಗಲಕ್ಕೆ ಬಂದು ನೆಲೆಸಿ 15 ವರ್ಷಗಳಾಗಿದ್ದರೂ ಅವರ ಯಾವ ರಕ್ತಸಂಬಂಧಿಗಳೂ, ನೆಂಟರಿಷ್ಟರೂ, ಬಾಲ್ಯದ ಗೆಳೆಯರೂ ಬಂದಿರದಿದ್ದ ಕಾರಣ ನನ್ನ ಅನುಮಾನವೂ ಬಗೆಹರಿದಿರಲಿಲ್ಲ. ಅವರ್ಯಾರೂ ಇರದೆ ಒಬ್ಬಂಟಿಯಾಗಿದ್ದ ಅಪ್ಪನಿಗೆ, ಹೀಗೆ ತನ್ನ ಬಾಲ್ಯದ ಕಥೆಗಳನ್ನು ಹೇಳುವುದು ತನ್ನ ಒಂಟಿತನದಿಂದ ಹೊರಬರುವ ದಾರಿಯಾಗಿತ್ತೆನಿಸುತ್ತದೆ. 

ಕೋಲಿಗೆರೆಯ ಶಾಲೆಯಲ್ಲಿ ತೋಟಗಾರಿಕೆ ಶಿಕ್ಷಕರಾಗಿದ್ದ ಅಪ್ಪನ ಬಳಿ, ಸ್ಕೂಲಿಗೆ ಹೋಗಿ ಬರಲು ಒಂದು ಹಸಿರು ಬಣ್ಣದ ‘ಹೀರೋ’ ಸೈಕಲ್ ಇತ್ತು. ವಾರಕ್ಕೊಮ್ಮೆ ಅದಕ್ಕೆ ಸರ್ಪು ನೀರಿನ (ನಿರ್ಮಾ ವಾಷಿಂಗ್ ಪೌಡರ್ ಕಲೆಸಿದ ನೀರು) ಸ್ನಾನ. ಪಂಕ್ಚರ್ ಹಾಕಿಸುವುದೊಂದನ್ನು ಬಿಟ್ಟರೆ ಸೈಕಲ್ಲಿಗೆ ಬೇಕಾದ ಸಾಮಾನುಗಳೆಲ್ಲವನ್ನು ಅಪ್ಪ ಕೊಂಡು ತಂದು ತಾನೇ ಸರಿಮಾಡಿಕೊಳ್ಳುತ್ತಿದ್ದರು. ಎರಡು ಮೂರು ತಿಂಗಳಿಗೊಮ್ಮೆ ಸೈಕಲ್ಲಿನ ಓರಾಯಿಲ್ (overhaul ಅನ್ನು ನಾವು ಹೀಗೇ ಕರೆಯುವುದು) ಅವರೇ ಮಾಡಿಕೊಳ್ಳುತ್ತಿದ್ದರು.

ಊರಿಗೆ ಬಂದು ಅಷ್ಟು ವರ್ಷಗಳಾದರೂ ಜಮೀನು ಅಥವ ಮನೆ ಕೊಂಡುಕೊಳ್ಳುವಷ್ಟು ಹಣವಿರದ ಕಾರಣ ಬಾಡಿಗೆ ಮನೆಯಲ್ಲೇ ವಾಸ್ತವ್ಯ. ಈಗಲೂ ನಮ್ಮದು ಬಾಡಿಗೆ ಮನೆಯೇ ಬಿಡಿ. ಅಲ್ಲಿ ಬಾಡಿಗೆ ಹೆಚ್ಚಾದಾಗಲೋ, ಹಳೆಯ ಮನೆಗಳು ಬೀಳುವಂತಾದಾಗಲೋ ಬೇರೇನೋ ಕಾರಣದಿಂದ ಮನೆಯ ಬದಲಾವಣೆ. ಆಗಿನ ಕಾಲಕ್ಕೆ ಟಿವಿಯಲ್ಲಿ ಬರುತ್ತಿದ್ದ `ಎತ್ತಂಗಡಿ ಎಂಕಟಪ್ಪ’ನ ಹಾಗೆ ನಮ್ಮ ಕುಟುಂಬ. ಟಿವಿ ಎಂದಾಗ ನೆನಪಾಗುವುದು ಅಂದಿನ ಮನೆಗಳ ಭೂಷಣವಾಗಿದ್ದ ಕ್ರೌನ್ ಟಿವಿ. ಅಪ್ಪ ಯಾರ ಬಳಿಯೋ ಇದ್ದ ಈ ಸೆಕೆಂಡ್ ಹ್ಯಾಂಡಲ್ ಟಿವಿಯನ್ನು ಚೌಕಾಸಿ ಮಾಡಿ ತಂದಿದ್ದರು.

ದೊಡ್ಡ ಮರದ ಪೆಟ್ಟಿಗೆಯ ಮಧ್ಯದಲ್ಲಿ ಕಪ್ಪು ಬಿಳುಪು ಟ್ಯೂಬು. ಪಕ್ಕದಲ್ಲಿನ ಪಟ್ಟಿಯಲ್ಲಿ ಚಾನೆಲ್ ಬದಲಿಸಲು ತಿರುಗಿಸುವ ಒಂದು ದೊಡ್ಡ ತಿರುಗಣಿ. ಅದರ ಕೆಳಗೆ ಬೆಳಕಿನ ನಿಯಂತ್ರಣ, ಧ್ವನಿ ನಿಯಂತ್ರಣ ಮಾಡುವ ಸಣ್ಣ ಸಣ್ಣ ತಿರುಗಣಿಗಳು. ತೆಳ್ಳಗಿನ ಟೇಪಿನಂತಹ ಆಂಟೆನಾ ವೈರನ್ನು ಹಿಂದಕ್ಕೆ ಸಿಕ್ಕಿಸಿ ಆಂಟೆನಾವನ್ನು ಬೆಂಗಳೂರಿನ ದಿಕ್ಕಿಗೆ ತಿರುಗಿಸುವ ಕೆಲಸ ನನ್ನದು. ತಿಂಗಳಿಗೊಮ್ಮೆ ಇದ್ದಕ್ಕಿದ್ದಂತೆ ಸೋಂಡು (sound) ಜೋರಾಗುವುದೋ, ಸೊರ್ರೋ ಎಂದು ಶಬ್ದ ಬರುವುದೋ, ಚಿತ್ರ ಸೊಟ್ಟ ಸೊಟ್ಟಗೆ ಕುಣಿಯಲು ಶುರು ಮಾಡುವುದೋ ಮಾಡಿ ತಾನು ಸೆಕೆಂಡ್ ಹ್ಯಾಂಡಲ್ ಎಂಬುದನ್ನು ಸಾಬೀತು ಪಡಿಸುತ್ತಿತ್ತು.

ಆಗ ಅಪ್ಪ ಡಬ್ಬದ ಹಿಂದಿನ ಪ್ಲೇಟನ್ನು ಬಿಚ್ಚಿ ಒಳಗೆ ವಾಸಮಾಡಿಕೊಂಡಿದ್ದ ಜಿರಳೆಗಳನ್ನೆಲ್ಲ ಅವುಗಳ ಪಿಚ್ಚಿಗೆಯ ಸಮೇತ ಕೊಡವಿ, ಕಟ್ಟಿದ್ದ ಜೇಡರ ಬಲೆಯನ್ನೆಲ್ಲ ಕಿತ್ತು ನೀಟು ಮಾಡಿ, ಅದೇನೇನೋ ವಿಚಿತ್ರವಾಗಿ ಚಾಕಲೇಟುಗಳಂತಿದ್ದ ಕಾಂಪೆÇೀನೆಂಟುಗಳನ್ನು (ಈ ಪದ ಗೊತ್ತಾದದ್ದು ಇಂಜಿನಿಯರಿಂಗ್ ಮಾಡಿದಾಗ) ಕಿತ್ತು, ಅದೇ ಥರದ ಸಾಮಾನುಗಳನ್ನು ತಂದು ಸಾಲ್ಡರ್ ಗನ್ನಿನಿಂದ ಸಾಲ್ಡರ್ ಮಾಡಿ ಸರಿಪಡಿಸುತ್ತಿದ್ದರು. ಕಾಯ್ದಿದ್ದ ಸಾಲ್ಡರ್ ಗನ್ನಿಗೆ ತಂತಿಯನ್ನು ತಾಗಿಸುವುದು ಮಾತ್ರ ನನ್ನ ಕೆಲಸ. ಒಂದೆರೆಡು ಬಾರಿ ಟ್ಯೂಬು, ಮೈನ್ ಬೋರ್ಡು ಎಲ್ಲವನ್ನೂ ಅವರೇ ಬದಲಾಯಿಸಿದ್ದರು.

ಅಕ್ಕಜಜ್ಜಿ (ಅವರ ಹೆಸರು ಅಕ್ಕಾಜಮ್ಮ)ಯ ಮನೆಗೆ ಬರುವವರೆಗೂ ಸುಮಾರು ಹತ್ತು ವರ್ಷ ನಮಗೆ ಅದೇ ದೊಡ್ಡದು. ಕಾಲಕ್ರಮೇಣ ಟೀವಿಗಳ ಗಾತ್ರ, ರೂಪ ಎಲ್ಲವೂ ಬದಲಾಗಿ, ಕಲರ್ ಟೀವಿಗಳು ಬಂದು ಇದು ಔಟ್ ಡೇಟೆಡ್ ಆದಮೇಲೆ ಮೂಲೆಗುಂಪಾಯಿತು. ಅಕ್ಕಜಜ್ಜಿಯ ಮನೆ ಎಂದರೆ ಮೊದಲ ಅಂತಸ್ತಿನಲ್ಲಿದ್ದ ಒಂದು ವಿಶಾಲವಾದ ಕೋಣೆ ಮಾತ್ರ. ಅಡುಗೆ ಮನೆ, ಒಳಕೋಣೆ, ನಡುಮನೆ ಇಂತಹ ಎಲ್ಲ ಸವಲತ್ತುಗಳು ಕಲ್ಪನೆ ಅಷ್ಟೇ. ಆದರೇನಂತೆ? ಟೈಲರ್ ಆಗಿದ್ದ ಅಮ್ಮನಿಂದ ಎತ್ತರದ ಕರ್ಟೇನುಗಳನ್ನು ಹೊಲೆಸಿ ಶೀಟಿಗೆ ಕಟ್ಟಿ ಹಜಾರವನ್ನು ಮೂರು ಭಾಗಗಳನ್ನಾಗಿ ಮಾಡಿದರು. Room Partition ಆಗಿಹೋಯಿತು. ಕೆಳಗೆ ಹಿತ್ತಲಿನಲ್ಲಿ ಮನೆಯ ಹೊರಗೆ ಅಮ್ಮ ಒಂದು ಒಲೆ ಹಾಕಿಕೊಂಡಿದ್ದರು. ಅಡುಗೆ; ಬೇಸಿಗೆ ಮತ್ತು ಚಳಿಗಾಲದಲ್ಲಿ ಒಲೆಯಲ್ಲಿ, ಮಳೆಗಾಲದಲ್ಲಿ ಒಳಗೆ ಸೀಮೆಣ್ಣೆ ಬತ್ತಿಯ `ಅಶೋಕ’ ಸ್ಟೋವಿನಲ್ಲಿ. ಶೀಟಿನ ಎತ್ತರ ಕಡಿಮೆಯಿದ್ದ ಕಾರಣ ಚಳಿಗಾಲಕ್ಕೆ ಸುರಿಯುತ್ತಿದ್ದ ಮಂಜು ಮತ್ತು ಬೇಸಿಗೆಯ ಶೆಖೆ ಎರಡೂ ಮಿತಿ ಮೀರುತ್ತಿದ್ದವು. ಅದಕ್ಕಾಗಿ ಶೀಟಿನ ಮೇಲೆ ತೆಂಗಿನ ಗರಿಗಳ ಹೊದಿಕೆ, ಒಳಗೆ ಅವರ ಗಿಡಬೆಳೆಸುವ ಪಾಲಿಥೀನ್ ಶೀಟಿನ ಚಾದರ. ಇದು insulation ಮಾಡುವ ವಿಧಾನ ಎಂದು ನನಗೆ ಆಗ ತಿಳಿದಿರಲೇ ಇಲ್ಲ.

ಒಮ್ಮೆ ತಾಲ್ಲೂಕು ಮಟ್ಟದ ವಿಜ್ಞಾನ ಸಮಾವೇಶಕ್ಕೆ ನಮ್ಮ ಶಾಲೆಯಿಂದ ನನ್ನನ್ನು ಆಯ್ಕೆ ಮಾಡಿ ಪ್ರಾತ್ಯಕ್ಷಿಕೆಯೊಂದನ್ನು ತಯಾರು ಮಾಡಿಕೊಂಡು ಬರುವಂತೆ ತಿಳಿಸಿದರು. ಬಂದು ಅಪ್ಪನಿಗೆ ಹೇಳಿದೆ. ಏನಾದರೊಂದು ಹೊಸದು ಮಾಡುವ ಆಲೋಚನೆ ಅವರ ತಲೆಯಲ್ಲಿ. ನಮ್ಮ ಶಾಲಾ ವಿಜ್ಞಾನ ಪ್ರಶ್ನೆಗಳನ್ನೇ ಆಯ್ದುಕೊಂಡು ಒಂದು ಸರಿ-ತಪ್ಪು ಹಲಗೆ (TRUE/ FALSE BOARD) ಮಾಡಲು ನಿರ್ಧರಿಸಿದರು. ಒಂದು ಪ್ರಶ್ನೆಗೆ ಮೂರು ಆಯ್ಕೆಗಳನ್ನು ಕೊಟ್ಟರು. ಉತ್ತರ ಸರಿಯಾದರೆ ಹಸಿರು ಬಣ್ಣದ ಬಲ್ಪು ಬೆಳಗುತ್ತದೆ. ತಪ್ಪಾದರೆ ಕೆಂಪು ಬಣ್ಣದ ಬಲ್ಬಿನ ಜೊತೆಗೆ ಒಂದು ಬಜûರ್ ಪೀ ಎಂದು ಹೊಡೆದುಕೊಳ್ಳುತ್ತದೆ. ಅದಕ್ಕೆ ಬೇಕಾದ ವೈರು, ಬಜûರು, ಬಲ್ಪು, ಕರೆಂಟಿಲ್ಲದಿದ್ದರೂ ಕೆಲಸ ಮಾಡುವಂತಾಗಲು ಸಣ್ಣದೊಂದು ಬ್ಯಾಟರಿ ಎಲ್ಲವನ್ನೂ ತಂದರು.

ಮೊದಲು ಹತ್ತು ಪ್ರಶ್ನೆ ಮತ್ತು ಮೂವತ್ತು ಉತ್ತರಗಳನ್ನು ಮುಂದೆ ಬರೆದು, ಹಲಗೆಯ ಹಿಂದೆ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ವೈರಿಂಗ್ ಮಾಡಿದರು. ಹಳೆಯ ಪೆನ್ನೊಂದಕ್ಕೆ ತೂತು ಕೊರೆದು ವೈರನ್ನು ಒಳಗಿಟ್ಟು ಪಕ್ಕಕ್ಕೆ ನೇತುಹಾಕಿದರು. ಪ್ರಶ್ನೆಗಳಿಗೆ ಉತ್ತರವನ್ನು ಮೊದಲು ನನ್ನ ಹತ್ತಿರ ಕೇಳಿಸಿ ಪರೀಕ್ಷಿಸಿದರು. ಹಲವು ತಪ್ಪು, ಕೆಲವು ಸರಿ ಉತ್ತರ ಕೊಟ್ಟೆ. ಕಂಪ್ಯೂಟರ್ ಇನ್ನೂ ದೊಡ್ಡ ದೊಡ್ಡ ಸ್ಕೂಲು ಕಾಲೇಜುಗಳಲ್ಲಿ ಇದ್ದ ಕಾಲ. ಅಪ್ಪ ಮಾಡಿದ್ದು ಕೂಡಾ ಒಂದು ಸಣ್ಣ ಕಂಪ್ಯೂಟರ್ ತರಹದ್ದೇ. ಪ್ರದರ್ಶನದಲ್ಲಿ ನನ್ನ ಪ್ರಾತ್ಯಕ್ಷಿಕೆಯನ್ನು ಎಲ್ಲರೂ ಹೊಗಳಿದರೂ ಪ್ರಶಸ್ತಿ ಮಾತ್ರ ಬರಲಿಲ್ಲ. ಯಾವುದೇ ಸಕ್ರ್ಯೂಟ್ ಡಯಾಗ್ರಂ ಬರೆಯದೆ, ತಲೆಯಲ್ಲಿಯೇ ಎಲ್ಲವನ್ನೂ ಇಟ್ಟುಕೊಂಡು ತಯಾರಿಸಿದ್ದ ಆ ಬೋರ್ಡ್, ನನಗೆ ಅಪ್ಪ ಹೇಳಿದ್ದ ತನ್ನ ಶಾಲಾ ದಿನದ ಕಥೆಯ ಬಗ್ಗೆ ನಂಬಿಕೆ ಹುಟ್ಟಿಸಿತ್ತು. ಇಂದಿಗೂ ಅದು ನನಗೆ ವಿಸ್ಮಯವೇ. ಆ ಬೋರ್ಡನ್ನು ಜೋಪಾನವಾಗಿ ಕಾಪಿಟ್ಟುಕೊಳ್ಳಬೇಕಿತ್ತೆಂದು ಹಲವಾರು ಬಾರಿ ಅನ್ನಿಸಿದೆ.

ಅಲ್ಲಿಂದ ಅನುಸೂಯಮ್ಮನವರ ಹಳೆಯ ಮನೆಗೆ ಬಾಡಿಗೆಗೆ ಬಂದಾಗ, ಕಾರ್ಪೆಂಟರಿಯೊಬ್ಬ ನಮ್ಮ ಹಾಗೆ ಊರಿಗೆ ಹೊಸದಾಗಿ ಬಾಡಿಗೆಗೆ ಬಂದ. ಶಾಲೆಯಲ್ಲಿ ಕೊಟ್ಟ ಪ್ರಶಸ್ತಿಗಳು, ತಂಗಿಯ ಸಾಧನೆಗೆ ಸಂದ ಸನ್ಮಾನದ ಮೆಮೆಂಟೋಗಳ ಮೇಲೆ ಜಂತೆಯ ದೂಳು ಕೂರುತ್ತಿತ್ತು. ಅದರಿಂದ ಶೀಲ್ಡುಗಳನ್ನು ಕಾಪಾಡಲು ಆತನಿಗೊಂದು ಕಪಾಟು/ಶೋಕೇಸು ಮಾಡಿಕೊಡುವಂತೆ ಕೇಳಿದ್ದರು. ಆ ಪುಣ್ಯಾತ್ಮ ಮಂಚ, ಚೇರು ಮಾಡುತ್ತಿದ್ದು ಬಿಟ್ಟರೆ ಇಂಥವನ್ನು ಮಾಡಿರಲಿಲ್ಲ. ಹ್ಞೂಂಗುಟ್ಟಿ ವರ್ಷದ ಹತ್ತಿರಕ್ಕೆ ಬಂದರೂ ಶೋಕೇಸು ಮಾಡಿರಲಿಲ್ಲ. ಒಮ್ಮೆ ದಬಾಯಿಸಿದಾಗ “ಚೋಕೇಸು ಗೋಡೆಯಲ್ಲಿ ಇರಬೇಕು ಸಾರ್ ಚೆಪ್ರೇಟಾಗಿ ಅಗಲ್ಲ” ಎಂದ.

ಇವರೇ ಅವನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಬೇಕಾಗಿದ್ದ ಪ್ಲೇವುಡ್ ಶೀಟು, ಗಾಜುಗಳನ್ನು ತಂದರು. ಮುಂದೆ ನಿಂತು ಹೇಗೆ ಮಾಡಬೇಕೆಂದು ನಿರ್ದೇಶಿಸಿದರು. ಉಳಿದ ಸಾಮಾನಿನಲ್ಲಿ ಬುಕ್ ರ್ಯಾಕ್ ಒಂದನ್ನು ಮಾಡಿದರು. ಮೂಲೆಗೆ ಬಿದ್ದಿದ್ದ ಕ್ರೌನ್ ಟಿವಿಯ ಡಬ್ಬದ ಒಳಗೆ ಹಲಗೆಗಳನ್ನು ಹೊಡೆದು, ಬಾಗಿಲನ್ನಿಟ್ಟು ಅದನ್ನೂ ಉಪಯೋಗಿ ಆಗಿಸಿದರು. ತಂಗಿ ಮತ್ತು ಇವರು ಸೇರಿ ಮಾಡುತ್ತಿದ್ದ ಔಷಧಿಯ ಡಬ್ಬಿಗಳನ್ನು ಇಡಲು ಅಂಗಡಿಯಲ್ಲಿ ಸಿಗುವ ಜೋಡಿಸುವ ಕಬ್ಬಿಣದ ಶೆಲ್ಪುಗಳನ್ನು ತಂದು, ಅದಕ್ಕೆ ಹಿಂದೆ ಮುಂದೆ ತೆಳ್ಳಗಿನ ಪ್ಲೈವುಡ್ ಶೀಟು ಹೊಡೆದು ಅಲ್ಮೆರಾ ಮಾಡಿದರು. ಈಗಲೂ ನಾವು ಅವುಗಳಲ್ಲಿಯೇ ನಮ್ಮ ಬಟ್ಟೆಗಳನ್ನು ಜೋಡಿಸಿಟ್ಟಿರುವುದು. ನಮ್ಮಪ್ಪನ ‘ದೇಸಿ ಜುಗಾಡ್ wardrobe’.

ಅಲ್ಲಿಂದ ವೀರೇಗೌಡರ ಹಳೆಯ ಮನೆಗೆ ಬಂದಾಗ ಹಾಲು (Hall), ರೂಮಿನ ಸಮಸ್ಯೆ ಬರಲಿಲ್ಲ. ಕಕ್ಕಸುಮನೆಯೂ ಒಳಗಡೆಯೇ ಇದ್ದು ಸುಭಿಕ್ಷವಾಗಿತ್ತು. ಕೆಲ ವರ್ಷಗಳ ನಂತರ ಸಂಪು ಕೂಡಾ ಮಾಡಿದರು. ಆದರೆ ಒಳಗಡೆ ನಲ್ಲಿಯ ವ್ಯವಸ್ಥೆ ಇರಲಿಲ್ಲ.  ದೇಶಕ್ಕೆಲ್ಲ ಬಂದ ಹಾಗೆ ಆಗ ಅಮ್ಮನಿಗೂ ಚಿಕುನ್ ಗುನ್ಯಾ ರೋಗ ತಗುಲಿ ಕಾಲಿನ ಕೀಲುಗಳ ನೋವು ಶುರುವಾಯಿತು. ಇಂಡಿಯನ್ ಟಾಯ್ಲೆಟ್ಟಿನಲ್ಲಿ ಕೂತು ಏಳುವಾಗ ಆಗುತ್ತಿದ್ದ ನೋವು ಅಸಾಧ್ಯವಾಗಿತ್ತು. ಹಳೆಯ ಕಬ್ಬಿಣದ ಚೇರನ್ನು ರೌಂಡಾಗಿ ಕತ್ತರಿಸಿ ತೂತು ಮಾಡಿದರು. ಇಕ್ಕಟ್ಟಾದ ಕೋಣೆಯಲ್ಲಿ ಇದನ್ನು ಹಾಕಿಕೊಂಡು ಕೂರುವುದು ಮತ್ತಷ್ಟು ಇಕ್ಕಟ್ಟಾಯಿತು.

ಊರಿಗೆ ಬಂದ ನಾನು ತಡೆಯಲಾರದೆ ಕಮೋಡು ತಂದು ಮನೆಗಿಟ್ಟೆ. ಸಿಂಟೆಕ್ಸು, ನಲ್ಲಿ ಇಲ್ಲದೆ ಕಮೋಡಿಗೆ ನೀರು ಬರುವುದು ಹೇಗೆ? ಟಾಯ್ಲೆಟ್ ಇರುವ ಜಾಗದಲ್ಲಿ ಶೀಟಿನ ತಾರಸಿಯಿದ್ದ ಕಾರಣ ಸಿಂಟೆಕ್ಸು ಇಡಲೂ ಆಗುತ್ತಿರಲಿಲ್ಲ. ನಮ್ಮ ಸಾಹೇಬರು ತಲೆಕೆಡಿಸಿಕೊಳ್ಳಲಿಲ್ಲ. ಸಣ್ಣ ಡ್ರಮ್ಮೊಂದನ್ನು ತಂದು ಅಟ್ಟದ ಮೇಲಿಟ್ಟು ಅಲ್ಲಿಂದ ಕಮೋಡಿಗೊಂದು ಪೈಪ್ ಲೈನ್ ಮಾಡಿಕೊಟ್ಟು ಮಡದಿಯ ಸಂಕಟ ನೀಗಿದರು. ಕುಡಿಯುವ ನೀರಿಗೆ ಎದುರಿಗಿದ್ದ ಗೌಡನೋರ ತೋಟವನ್ನೇ ನೆಚ್ಚಿಕೊಂಡಿದ್ದೆವು. ಕಾಲಕ್ರಮೇಣ ಅವರಿಗೂ ನೀರು ಕಡಿಮೆಯಾದ್ದರರಿಂದ `ಕುಡಿಯಲು ನೀರು ಬಿಡುವುದನ್ನು’ ನಿಲ್ಲಿಸಿದ್ದರು. ಮೇಷ್ಟ್ರು ಒಂದು ಸಣ್ಣ UV/RO ತಂದುಕೊಂಡರು, ಅಮ್ಮ ನೀರು ಹೊರುವುದು ತಪ್ಪಿತು. ಆನಂತರ ವಾಷಿಂಗ್ ಮಿಷೀನು ಬಂತು, ಅಮ್ಮನ ಭುಜಕ್ಕೆ ವಿಶ್ರಾಂತಿ ದೊರಕಿತು. ಇವೆಲ್ಲವುಗಳ ಪ್ಲಂಬಿಂಗ್ ಕೆಲಸ ಅಪ್ಪನದೇ.

ಅಪ್ಪ ಇಷ್ಟು ಬುದ್ಧಿವಂತರಾದರೆ ಮಗ ಇನ್ನೆಷ್ಟಿರಬೇಕೆಂದು ಕೇಳಿಕೊಂಡರೆ ನನ್ನ ಹತ್ತಿರ ಉತ್ತರವಿಲ್ಲ. ಒಮ್ಮೆ ಆದ ಘಟನೆಗೆ ತಿಂದ ಒದೇಲುಗಳಿಂದ, ನನ್ನನ್ನು ನಾನು ಮತ್ತಾವುದೇ ಸಾಹಸ ಮಾಡದಂತೆ ನಿಗ್ರಹಿಸಿಕೊಂಡೆ. ಅದು ನಡೆದದ್ದು ಹೀಗೆ..

ಕೆಟ್ಟು ಮೂಲೆ ಸೇರಿದ್ದ ಹಳೆಯ ಕ್ರೌನ್ ಟಿವಿಯ ಕೆಲ ಸಾಮಗ್ರಿಗಳು ಒಂದು ಕವರಿನಲ್ಲಿದ್ದವು. ಅವುಗಳನ್ನು ಉಪಯೋಗಿಸಿ ಏನಾದರೊಂದು ವಿಶೇಷ ಸಾಧನೆ ಮಾಡಿ ಅಪ್ಪನಿಂದ ಭೇಷ್ ಎನ್ನಿಸಿಕೊಳ್ಳಬೇಕೆಂಬ ಹುಕಿ ಅಗಾಧವಾಗಿತ್ತು. ಹೀಗಿದ್ದಾಗ ಒಮ್ಮೆ ಅಪ್ಪ ಅಮ್ಮ ಮತ್ತು ತಂಗಿ ಸೌದೆ ತರಲು ಯಾರದೋ ಹೊಲಕ್ಕೆ ಹೋಗಿದ್ದರು. ಮನೆಯಲ್ಲಿ ಒಬ್ಬನೇ ಇದ್ದ ನಾನು ಭೇಷೆನ್ನಿಸಿಕೊಳ್ಳುವ ಆಸೆ ನೀಗೀಸಿಕೊಳ್ಳಲು ಟಿವಿ ಕಾಂಪೋನೆಂಟುಗಳನ್ನು ತೆಗೆದೆ. ಅವುಗಳ ಹೆಸರೇನು? ಅವುಗಳ ಕೆಲಸವೇನು? ಯಾವುದೂ ತಿಳಿದಿರಲಿಲ್ಲ. ಆದರೂ ಏನಾದರೊಂದನ್ನು ಮಾಡಬೇಕು, ಸಾಧಿಸಿ ತೋರಿಸಬೇಕು. ಅಷ್ಟೇ.

ಮನೆಯಲ್ಲಿ ನೀರೊಲೆಗೆ ಸೌದೆ ತಂದು ಗುಡ್ಡೆ ಹಾಕುವುದು ವಾರದ ಕಾಯಂ ಕೆಲಸ. ಮಳೆ ಬಂದರೆ ಒದ್ದೆಯಾದ ಸೌದೆ ಇಟ್ಟು, ಹೊಗೆಯನ್ನು ಕುಡಿಯುತ್ತಾ ಒಲೆ ಹಚ್ಚಲು, ನೀರು ಕಾಯಿಸಲು ಹೆಣಗಾಟ. ಇದನ್ನು ತಪ್ಪಿಸಲು ಒಂದು ಹೀಟರ್ ಮಾಡುವ ಯೋಚನೆ ಬಂತು. ಬೆಂಗಳೂರಿಗೆ ಹೋಗಿದ್ದಾಗ ದೊಡ್ಡಮ್ಮನ ಮನೆಯಲ್ಲಿ ಬಿಂದಿಗೆಗೆ ಮುಳುಗಿಸಿ ಹಾಕುವ ಕಾಯಿಲ್ ನೋಡಿದ್ದೆ. ಅದು ಟಂಗ್ಸ್ಟನ್ ಎಂಬುದು ಗೊತ್ತಿತ್ತು. ಟಿವಿಯಲ್ಲೂ ಅಂಥದೊಂದು ಇರಬಹುದೆಂದು ಹುಡುಕಿದೆ. ಎರಡು ವೈರುಗಳಿದ್ದ ಪುಟ್ಟ ಕಾಯಿಲೊಂದು ಸಿಕ್ಕಿತು. ಅದು ಸಾಲದಾಗಬಹುದು ಎಂದು ಮತ್ತೆ ಹುಡುಕಿದೆ. ಅಂಥದೇ ಇನ್ನೊಂದು ದೊಡ್ಡ ಕಾಯಿಲ್ ಸಿಕ್ಕಿತು. ಇದನ್ನು ಹಾಕಿದರೆ ನೀರು ಬೇಗ ಕಾಯುತ್ತದೆ ಎಂದುಕೊಂಡು ದೊಡ್ಡ ಸ್ಟೀಲ್ ಚೊಂಬಿನೊಳಗೆ ನೀರು ತುಂಬಿಸಿ ಮುಳುಗಿಸಿಟ್ಟೆ.

ಕರೆಂಟು ಕೊಟ್ಟು ನೀರು ಕಾಯಿಸುವುದಷ್ಟೇ ಬಾಕಿ. ಆದರೆ ವೈರುಗಳನ್ನು ಪ್ಲಗ್ಗಿಗೆ ಸಿಲುಕಿಸಲು ಎಟಕುತ್ತಿರಲಿಲ್ಲ. ಅದಕ್ಕೆ ತುಂಡಾದ ವೈರುಗಳನ್ನು ಪೋಣಿಸಿ ಪ್ಲಗ್ಗಿಗೆ ಕಡ್ಡಿ ಚುಚ್ಚಿದೆ. ಹೀಗೆ ಪ್ಲಗ್ ಮಾಡುವಾಗ ಅಪ್ಪ ಅದೆಷ್ಟೋ ಬಾರಿ ಕರೆಂಟು ಹೊಡೆಸಿಕೊಂಡಿದ್ದರು. ಆ ಭಯದಿಂದಲೇ ಸ್ವಲ್ಪ ದೂರದಲ್ಲಿಯೇ ನಿಂತು ಸ್ವಿಚ್ಚು ಅದುಮಿದೆ. “ಢಂ ಢಮಾರ್!” ಎಂದು ಜೋರಾಗಿ ಶಬ್ದವಾಯಿತು. ಕಾಯಿಲ್ ಬ್ಲಾಸ್ಟ್ ಆಗಿ ಮನೆ ತುಂಬಾ ಹೊಗೆ. ಭಯಕ್ಕೆ ಜೋರಾಗಿ ಕಿರುಚಿಕೊಂಡೆ. ಕಣ್ಣೆಲ್ಲ ಮಂಜಾದಂತಾಯಿತು. ಸ್ವಲ್ಪ ಹೊತ್ತಿನ ನಂತರ ಎಲ್ಲವೂ ಸಹಜಸ್ಥಿತಿಗೆ ಬಂತು. ಗಾಬರಿಯಲ್ಲಿಯೇ ಆ ಕಾಯಿಲನ್ನು ದೂರಕ್ಕೆಸೆದು, ಮಸಿಯಾಗಿದ್ದ ಚೊಂಬನ್ನು ಸಬೀನಾ ಹಾಕಿ ತೊಳೆದು ಕಿಟಕಿಗಳನ್ನು ತೆಗೆದಿಟ್ಟೆ. ಸಂಜೆ ಎಲ್ಲರೂ ಮನೆಗೆ ಬಂದರು. ನಾನು ಹಿಂದೆಂದಿಗಿಂತಲೂ ವಿಧೇಯನಾಗಿ ಓದುತ್ತಾ ಕುಳಿತೆ. ಕತ್ತಲಾದ ಮೇಲೆ ಲೈಟು ಹಾಕಿದರು. ಹತ್ತಿಕೊಳ್ಳಲಿಲ್ಲ. ನನಗೆ ದಿಗಿಲು ಶುರುವಾಯಿತು. ಅಕ್ಕ ಪಕ್ಕದ ಮನೆಯಲ್ಲೆಲ್ಲ ಕರೆಂಟಿತ್ತು. ಹೊರಗೆ ಹೋಗಿ ಕಂಬದಿಂದ ಬಂದಿದ್ದ ವೈರನ್ನು ಕಡ್ಡಿಯಲ್ಲಿ ಅಲ್ಲಾಡಿಸಿದರು. ಬರಲಿಲ್ಲ. ಮೀಟರ್ ಹತ್ತಿರ ನೋಡಿದರು. ಡಿಪಿ ಮಿಣುಕುತ್ತಿತ್ತು. ಒಳಗೆ ಏನೋ ಆಗಿದೆ ಎಂದುಕೊಂಡು ಬಂದರು. ಪ್ಲಗ್ಗನ್ನು ಬಿಚ್ಚಿದರು. ಕಮುಟು ವಾಸನೆ ಬಂತು.

“ವೈರು ಸುಟ್ಟೋಗೈತಲ್ಲಾ.. ಪಾಪಾ.. ಏನ್ಮಾಡ್ದೋ?” ನನ್ನನ್ನು ಪಾಪಾ ಎಂದೇ ಅಪ್ಪ ಕರೆಯುವುದು.

ನಾನೂ ಅಮಾಯಕ ಪಾಪುವಿನ ಹಾಗೆ

“ಏನೂ ಇಲ್ಲಪ್ಪ.. ಏನಾಗೈತೆ ಅಂದೆ?”

ಶಾರ್ಟ್ ಆಗಿ ಮನೆಯೊಳಗಿನ ಸಂಪೂರ್ಣ ವೈರಿಂಗ್ ಸುಟ್ಟುಹೋಗಿತ್ತು.

“ಏನೋ ಕಂತ್ರಿ ಕೆಲ್ಸ ಮಾಡಿರ್ತನೆ. ಏನ್ ಮಾಡ್ದೆ ಹೇಳೋ?” ಅಮ್ಮ ಶುರುವಿಟ್ಟುಕೊಂಡರು.

ಅಪ್ಪ ಕಪಾಳಕ್ಕೆ ಬಿಗಿದು, ಬೆನ್ನಿಗೆ ಗುದ್ದಿ, ಜುಟ್ಟುಹಿಡಿದೆತ್ತಿ ನೆಲಕ್ಕೆ ಕುಕ್ಕಿದರು. ಈ ದಂಡಕ್ಕೆ ದಶಗುಣಗಳೂ ಮೂಡಿಬಂದು ಸತ್ಯವಂತನಾಗಿ ನಡೆದದ್ದನ್ನೆಲ್ಲ ನಡೆದಂತೆಯೇ ಹೇಳಿದೆ. ಯಾವ ಕಾಯಿಲ್ ಹಾಕಿದ್ದೆ ತೋರಿಸು ಎಂದರು. ಕಿಟಕಿಯಿಂದ ಎಸೆದದ್ದನ್ನು ಹುಡುಕಿ ತರಲು ಹೇಳಿದರು. ಮೊದಲು ತಗೆದುಕೊಂಡಿದ್ದ ಸಣ್ಣ ಕಾಯಿಲನ್ನು ತೋರಿಸಿ ಇಂಥದ್ದು ಎಂದೆ.

“ಅದು ಕೆಪಾಸಿಟರ್ ಕಣೋ..” ಅಂತ ಇನ್ನೊಂದು ಬಿಗಿದರು. ವಿದ್ಯುತ್ತನ್ನು ಹಿಡಿದಿಟ್ಟುಕೊಂಡು ಶೇಖರಿಸಲು ಬಳಸುವ ವಸ್ತುವನ್ನು ನಾನು ಸ್ಟೀಲ್ ಚೊಂಬಿನೊಳಗೆ ನೀರಿನಲ್ಲಿ ಇಟ್ಟಿದ್ದರಿಂದ ವಿದ್ಯುತ್ ಶಾರ್ಟ್ ಆಗಿ ಬ್ಲಾಸ್ಟ್ ಆಗಿತ್ತು.

“ಹೆಂಗೆ ಬೆಳ್ಸಿದೀಯ ನೋಡೇ. ನಿನ್ನಿಂದಾನೇ ಅವ್ನು ಹಾಳಾಗಿದ್ದು” ಅಂತ ಅಮ್ಮನಿಗೂ ಹೊಡೆದರು.

ಅವತ್ತು ಕತ್ತಲಲ್ಲೇ ಕಾಲ ಕಳೆದೆವು. ಆಮೇಲೆ ಯಾರ ಹತ್ತಿರವೋ ಸಾಲ ಮಾಡಿ ಮತ್ತೆ ಹೊಸದಾಗಿ ಮನೆಯ ವಯರಿಂಗ್ ಅನ್ನು ಸ್ವತಃ ಮಾಡಿಕೊಂಡರು. ಅದಕ್ಕೆ ಖರ್ಚಾದ ಹಣವೆಷ್ಟೋ, ಸಾಲಕ್ಕೆ ಕಟ್ಟಿದ ಬಡ್ಡಿ ಎಷ್ಟೋ ಇವತ್ತಿಗೂ ನನಗೆ ಗೊತ್ತಿಲ್ಲ.

ಹೀಗೆ ತನ್ನ ಸೀಮಿತ ಸಂಪನ್ಮೂಲಗಳಲ್ಲೇ ಅಪರಿಮಿತ ಬುದ್ಧಿ ಉಪಯೋಗಿಸಿ, ಅವಶ್ಯಕತೆಯನ್ನು ಪೂರೈಸಿಕೊಂಡು, ನಮಗೆಲ್ಲ ತಕ್ಕ ಮಟ್ಟಿಗಿನ luxury ಸೃಷ್ಟಿಸಿಕೊಟ್ಟ ಅಪ್ಪ.

*ಲೇಖಕರು ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಬೆಳವಂಗಲ ಗ್ರಾಮದವರು; ಎಲೆಕ್ಟ್ರಿಕಲ್ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರು. ವಿಜ್ಞಾನ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಕನ್ನಡದ ಭರವಸೆಯ ವಿಜ್ಞಾನ ಲೇಖಕರು.

Leave a Reply

Your email address will not be published.