ಅಪ್ಪನ ಮಟ್ಟದಲ್ಲಿ ಮಠಗಳು ಮಗನ ಸ್ಥಾನದಲ್ಲಿ ಜಾತಿಗಳು!

-ಅರವಿಂದ ಮಾಲಗತ್ತಿ

`ಜಾತಿ’ ಎಂದರೆ ಬಂಗಾರದ ಮೊಟ್ಟೆ ಇಡುವ ಕೋಳಿಯೆನಿಸಿದೆ. ಅಷ್ಟೇ ಅಲ್ಲ; ಅಧಿಕಾರ ಇತರೆ ಸೌಲತ್ತುಗಳಿಗಾಗಿ ದಲಿತ ಜಾತಿಯನ್ನು ಮಾರುವವರಿರುವಂತೆ ಕೊಳ್ಳುವವರಿದ್ದಾರೆ; ಕದಿಯುವವರೂ ಇದ್ದಾರೆ. ಇದರಲ್ಲಿ ಆಡಳಿತ ವ್ಯವಸ್ಥೆ ದಲ್ಲಾಳಿಯಂತೆ ಕೆಲಸಮಾಡುತ್ತದೆ.

`ಜಾತಿ’ ಸಮಾಜದ ಕೊನೆಯ ಚಿಕ್ಕದಾದ ಘಟಕ ಎಂದು ಹೇಳಲಾಗುತ್ತದೆ. ಆದರೆ ಇಂದು ಆ ಮಾತನ್ನು ಹೇಳಲಾಗದು. ವೃತ್ತಿ ಹಾಗೂ ರಕ್ತ ಸಂಬAಧಗಳ ಸ್ವರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಾತಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನ ವ್ಯಾಪ್ತಿಯನ್ನು ನಿಧಾನವಾಗಿ ವಿಸ್ತರಿಸಿಕೊಂಡಿದೆ ಹಾಗೂ ವಿಸ್ತರಿಸಿಕೊಳ್ಳುತ್ತಿದೆ.

ಜಾತಿ ಎಂಬುದು ಸಿದ್ಧ ಸಾಂಪ್ರದಾಯಿಕ ಶಕ್ತಿಯಾಗಿತ್ತು. ಆದರೆ ಇಂದು ಸಾಮಾಜಿಕ ರಾಜಕೀಯ ಧಾರ್ಮಿಕ ಶಕ್ತಿಗಳ ಆಡಂಬೋಲದ ಸಂಘಟನಾತ್ಮಕ ಶಕ್ತಿಯಾಗಿ ಎದ್ದು ನಿಂತಿದೆ. ಅದಕ್ಕೆ ರಾಜಕೀಯದ ಮತ ಬ್ಯಾಂಕ್ ಮೂಲ ಕಾರಣವಾದರೂ, ಇದರೊಂದಿಗೆ ಮೀಸಲಾತಿ ಹಾಗೂ ಆರ್ಥಿಕ ಆಯಾಮಗಳು ಕೊಂಡಿಯಾಗಿವೆ. ಹೀಗಾಗಿ ತಟಸ್ಥವಾಗಿದ್ದ ಜಾತಿ ಚಲನಶೀಲತೆಯ ಗುಣವನ್ನು ಧಾರಣ ಮಾಡಿಕೊಂಡು ಅಮೀಬಾದಂತೆ ಅನಾಕಾರವಾಗಿ ಬೆಳೆಯುತ್ತಿದೆ.

ಮೇಲಿನ ವಿಚಾರಗಳಿಂದಾಗಿ `ಜಾತಿ’ ಎಂದರೆ ಬಂಗಾರದ ಮೊಟ್ಟೆ ಇಡುವ ಕೋಳಿಯೆನಿಸಿದೆ. ಅಷ್ಟೇ ಅಲ್ಲ; ಅಧಿಕಾರ ಇತರೆ ಸೌಲತ್ತುಗಳಿಗಾಗಿ ದಲಿತ ಜಾತಿಯನ್ನು ಮಾರುವವರಿರುವಂತೆ ಕೊಳ್ಳುವವರಿದ್ದಾರೆ; ಕದಿಯುವವರೂ ಇದ್ದಾರೆ. ಇದರಲ್ಲಿ ಆಡಳಿತ ವ್ಯವಸ್ಥೆ ದಲ್ಲಾಳಿಯಂತೆ ಕೆಲಸಮಾಡುತ್ತದೆ. ಹೀಗಾಗಿ ಜಾತಿಯ ಅಪರಾವತಾರಗಳೆಲ್ಲ ದರ್ಶನ ಕೊಡುತ್ತಿವೆ. ಅಂಕಿ ಸಂಖ್ಯೆ ತಿಳಿದರೆ ಕಣ್ಣು ಕೆಂಪಾಗಬಹುದು.

ಜಾತಿ ಮೀಸಲಾತಿಯ ಗುದ್ದಾಟ

ಜಾತಿಗಳು ಜೀವಂತವಾಗಲು ಮೀಸಲಾತಿಯೇ ಕಾರಣವೆಂಬ ಗ್ರಹಿಕೆ ಇದೆ. ಇದು ಮೇಲ್ಪದರಿನ ಚಿಂತನೆಯ ಗ್ರಹಿಕೆಯಾಗಿದೆ. ಇದಕ್ಕಿಂತಲೂ ಬಲಿಷ್ಠ ಕಾರಣಗಳು ರಾಜಕೀಯ ಶಕ್ತಿಯೊಂದಿಗೆ ತಳಕು ಹಾಕಿಕೊಂಡಿವೆ. ಒಂದು; ಮತಗಳಿಕೆಯ ಮಾರ್ಗಕ್ಕೆ ಬೀಜ ಮಂತ್ರವಾದರೆ ಎರಡು; ತಳದಿಂದ ತುದಿಯವರೆಗೆ ಅಧಿಕಾರ ಕಬಳಿಸುವ ಅಸ್ತçವಾಗಿದೆ. ಮೂರು; ಅರ್ಥ ಗಳಿಕೆಯ ಆಡಂಬೋಲದ ಮಾರ್ಗವಾಗಿದೆ. ನಾಲ್ಕು; ನೈತಿಕತೆ ಇಲ್ಲದ ರಾಜಕಾರಣ ಮತ್ತು ಆಡಳಿತ ವ್ಯವಸ್ಥೆಗೆ ಜಾತಿಯ ಕಾವಲಿದೆ. ಐದು: ಮೆರಿಟ್‌ಗೆ ಇಲ್ಲದ- ಅಧಿಕಾರದ ಮೇಲಿಲ್ಲದ ನಂಬಿಕೆ ಜಾತಿ ಪಡೆದುಕೊಂಡಿದೆ. ಈ ಕಾರಣಗಳಿಂದಾಗಿ ನಾಡಿನ-ದೇಶದ ಆಭಿವೃದ್ಧಿಗಿಂತ ಅರಾಜಕತೆಯ ಅಭಿವೃದ್ಧಿಯೇ ರಾರಾಜಿಸುವಂತಾಗಿದೆ.

`ಮೀಸಲಾತಿ’ ಕೇವಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ತಳಸಮುದಾಯಗಳಿಗೆ ಮಾತ್ರ ಇದೆ ಎಂಬ ನಂಬಿಕೆಯಿAದಾಗಿ ನಮಗಿಲ್ಲದ ಸವಲತ್ತು ಅವರಿಗೇಕೆ? ಎಂಬ ಅಸಹನೆಯ ಪರಿಣಾಮಗಳೇ ಅಧಿಕ. ಮೀಸಲಾತಿ ಎಲ್ಲ ಸಮುದಾಯಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ನಿಗದಿಯಾಗಿದೆ. ಬಲಿಷ್ಠಜಾತಿಯವರಿಂದ ಹೆಚ್ಚಿನ ಮೀಸಲು/ ಗುಂಪಿಗೆ ಸೇರಿಸಬೇಕೆಂಬ ಬೇಡಿಕೆ ನಮ್ಮ ನಾಡಲ್ಲಷ್ಟೇ ಅಲ್ಲ ಹೊರರಾಜ್ಯದವರಲ್ಲಿಯೂ ಸಾಮಾನ್ಯವಾಗಿದೆ. ರಾಜಕಾರಣಿಗಳೂ ಇದಕ್ಕೆ ಬೆಂಬಲ ತುಂಬುತ್ತಿದ್ದಾರೆ. ಇದರಿಂದಾಗಿ ಸಮಾನತೆಯ ಸಾಧನೆಯೊಂದಿಗೆ ಜಾತಿ ನಿರ್ಮೂಲನ ಮಾರ್ಗಕ್ಕೆ ಹಿನ್ನಡೆಯಾಗಿ ಜಾತಿಯ ಸಂರಕ್ಷಣ ವಿಧಾನದ ಮಾರ್ಗವೇ ಮುನ್ನೆಲೆ ಸಾಧಿಸಿದಂತಾಗುತ್ತದೆ.

ಮೀಸಲಾತಿಯ ಅಸಹನೆಯ ಧೋರಣೆ ಕೇವಲ ಸಾಮಾನ್ಯರಲ್ಲಿದೆ ಎಂದಲ್ಲ. ಅದು ರಾಜಕೀಯ ಹಾಗೂ ಸಾಮಾಜಿಕ ನಾಯಕರಲ್ಲಿರುವುದೂ ದುರಂತವೇ ಆಗಿದೆ. ಕಷ್ಟಜಾತಿಗಳಿಗೆ ಮೀಸಲಾತಿ ಏಕಿದೆಯೆಂದು ಮನನಮಾಡುವಲ್ಲಿ ನಮ್ಮ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ಸೋತಿವೆ. ಸಮಸಮಾಜದ ಕನಸು ಕಾಣುವ ಮನುಷ್ಯರ ಸಂಖ್ಯೆ ಕಡಿಮೆಯಾಗಿದೆ. ಆದರ್ಶದ ಮೌಲ್ಯಗಳು ಪಲ್ಲಟವಾಗಿವೆ. ಸ್ವಾರ್ಥದ ಬದುಕು ವಿಜೃಂಭಿಸಿದೆ. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮತ್ತು ತಳಸಮುದಾಯಗಳಲ್ಲಿ ಒಗ್ಗಟ್ಟಿಲ್ಲದೆ, ಆಂತರಿಕವಾಗಿ ಕಚ್ಚಾಡುತ್ತಿದ್ದಾರೆ. ಮೀಸಲಾತಿಯ ಹೆಸರಲ್ಲಿ `ಇವರೆ ಎಲ್ಲವನ್ನೂ ಕಬಳಿಸುತ್ತಿದ್ದಾರೆ’ ಎನ್ನುವ ಹುಸಿ ಆವೇಶಕ್ಕೆ ಇದು ಪೂರಕವಾಗಿದೆ. ಸಾಮಾಜಿಕ ನ್ಯಾಯದ ಮೀಸಲಾತಿ ಬಗ್ಗೆ ಮೇಲುಜಾತಿಯವರು ತಾಳ್ಮೆಯನ್ನು ಕಳೆದುಕೊಂಡಿದ್ದರೆ, ಕಷ್ಟಜಾತಿಯವರು ವಿನಯ ಮೀರಿದ ಹಕ್ಕುಗಾರಿಕೆಯನ್ನು ಪ್ರತಿಪಾದಿಸುತ್ತಿದ್ದಾರೆ. ಈ ನಡುವೆ ಪತಿತ ಜನತೆಗಿಂತ ಜಾತಿಯೇ ತಾಂಡವ ನೃತ್ಯ ಮಾಡುತ್ತಿರುವಂತಿದೆ.

ಜಾತಿ ಬೇರು ಸಡಿಲಿಸಿದ ಚಳವಳಿ

ಕರ್ನಾಟಕದಲ್ಲಿ ದಲಿತ-ಬಂಡಾಯ ಸಂಘಟನೆಗಳು ಬಲಿಷ್ಠವಾಗಿದ್ದಾಗ ಸಾಂಪ್ರದಾಯಿಕ ಶಕ್ತಿಗಳು ನಿದ್ದೆ ಹೋದವರಂತಿದ್ದವು. ಅನಂತರ ಇವರಲ್ಲಿಯ ಒಡಕು ಹಾಗೂ ನಿಷ್ಕಿçಯತೆ ಸಾಂಪ್ರದಾಯಿಕ ಸಂಘಟನೆಗಳು ಎಚ್ಚರಗೊಳ್ಳಲು ಕಾರಣವಾದವು. ಪ್ರಗತಿಪರರ ಚಿಂತನಾ ಕ್ರಮದಿಂದ ಎದ್ದ ಜೇನು ಹುಳುಗಳು ರ‍್ಯಾಯದ ಸಾಮಾಜಿಕ ಹುಟ್ಟುಗಳನ್ನು ಸೃಷ್ಟಿಸಿಕೊಳ್ಳದೆ ಹೋದುದು ಹಿನ್ನಡೆಯಾಗಿತ್ತು. ಹೀಗಾಗಿ ಎದ್ದ ಜೇನು ಹುಳುಗಳು ಸಾಂಪ್ರದಾಯಿಕ ಜಾತಿ ಸಂಘಟನೆಗಳನ್ನೇ ಜೇನು ಹುಟ್ಟುಗಳನ್ನಾಗಿ ಮಾಡಿಕೊಂಡವು. ಇದಕ್ಕೆ ಪ್ರಗತಿಪರರ ಸ್ವಹಿತಾಸಕ್ತಿ, ಪರಸ್ಪರ ಸಂದೇಹ ನೀತಿ, ಅಧಿಕಾರ ಮೋಹ, ಇವು ಪ್ರಧಾನ ಕಾರಣವಾದರೂ; ಚಳವಳಿಯ ಹೆಚ್ಚಿನ ಅನುಯಾಯಿಗಳು ಜಾತಿ ಸಂಘಟನೆಗಳಲ್ಲಿ ಲೀನವಾಗುವಂತಾಯಿತು. ಆರೆಸ್ಸೆಸ್-ಬಿಜೆಪಿಯಂಥವು ಈ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಂಡವು.

ಚಳವಳಿಯಲ್ಲಿ ದಲಿತರು ಮಹಿಳೆಯರು ಇಸ್ಲಾಮರು ಪ್ರಗತಿಪರರು ಸೇರಿದ್ದರ ಪರಿಣಾಮದಿಂದ ಆದ ಮಹತ್ವದ ತಾತ್ವಿಕ ಬೆಳವಣಿಗೆಗಳಲ್ಲಿ ಅಂತರ್ಜಾತೀಯ ಮತ್ತು ಅಂತರ್‌ಧರ್ಮೀಯ ವಿವಾಹಗಳಿಂದಾಗಿ `ಜಾತಿ’ಯ ಹಾಗೂ `ಕೋಮುಗಾರಿಕೆ’ಯ ಬೇರುಗಳು ಹೆಚ್ಚು ಸಡಿಲವಾಗಿ ಒಂದು ಹಂತದಲ್ಲಿ ಬಂಧುತ್ವದ ಭಾವಕ್ಕೆ ನೆಲೆ ಒದಗಿಸಿತು. ಆಶ್ಚರ್ಯವೆಂದರೆ ಹೊಸ ತಲೆಮಾರಿನ ದಲಿತರು ಅಂತರ್ಜಾತೀಯ ವಿವಾಹದ ಬಗ್ಗೆ ನೇತ್ಯಾತ್ಮಕ ಧೋರಣೆ ತಾಳಿದ್ದು.

ಸಂಘಟನೆಗಳು ಮತ್ತು ಪ್ರಗತಿಪರತೆ

ಎಲ್ಲ ಮತದ ಮಠಗಳು ಇಂದು ಪ್ರಾಧಾನ್ಯ ಪಡೆದುಕೊಳ್ಳಲು ಮುಖ್ಯ ಕಾರಣಗಳನ್ನು ಹೀಗೆ ಗುರುತಿಸಬಹುದು. ಚಳವಳಿಯಲ್ಲಿ ಪ್ರಗತಿಪರರು ಮೊದಲು ಮಠೀಯ ವ್ಯವಸ್ಥೆ ವಿರುದ್ಧವೇ ಬಂಡೆದ್ದರೂ ನಿಧಾನವಾಗಿ ಪ್ರಗತಿಪರ ಮಠಾಧೀಶರು ಪಾದಾರ್ಪಣಮಾಡಿದರು. ಪ್ರಗತಿಪರ ಮಠಾಧೀಶರಿಗಿಂತ ಹೆಚ್ಚು ಕ್ರಿಯಾಶೀಲರಾದದ್ದು ಸಾಂಪ್ರದಾಯಿಕ ಮಠಾಧೀಶರೇ. `ಜಾತಿಯ ಮುಖವಾಣಿಯಾದ ಮಠೀಯ ವ್ಯವಸ್ಥೆ ಮಠೀಯವೇ ಆಗಿರುತ್ತದೆ’ ಅದನ್ನು ಮರೆತು ಅದರಲ್ಲಿ ಪ್ರಗತಿಪರತೆ ಹುಡುಕಲು ಹೋಗಿದ್ದು ದೌಬಲ್ಯವೇ ಸರಿ. ಚಳವಳಿಯ ಸಂಘಟನಾ ಶಕ್ತಿ ಕ್ಷೀಣವಾದಾಗ ನೀರು ಹರಿದತ್ತ ಹರಿಯುವುದು ಅನಿವಾರ್ಯ ಎಂದು ಅನುಯಾಯಿಗಳು ಗ್ರಹಿಸಿದರು.

ಮಠ ಮತ್ತು ಜಾತಿಗಳು ಪರಸ್ಪರ ಸುಸಜ್ಜಿತ ಸಾಂಪ್ರದಾಯಿಕ ಸಂಘಟನೆಗಳಾಗಿವೆ. ಮಠಗಳು ಜಾತಿಯ ಸಬಲೀಕರಣಕ್ಕಾಗಿಯೇ ಬಂದಿದ್ದು, ಅವು ವಾಣಿಜ್ಯ ಸಂಸ್ಥೆಯAತೆ ಕೆಲಸ ಮಾಡುತ್ತಿವೆ. ಹಾಗೂ ಜಾತಿಗಳಿಗೆ ಚಲನಶೀಲತೆಯನ್ನು ತಂದು ಕೊಟ್ಟಿವೆ. ಹೀಗಾಗಿ ಸಂಘಟಿತವಲ್ಲದ ಜಾತಿಗಳು ಸಂಘಟಿತಗೊಳ್ಳುತ್ತಿವೆ ಹಾಗೂ ಮಠಮುಖಿಯಾಗುತ್ತಿವೆ. ಮಠ ಕಟ್ಟುವುದು ಎಂದರೆ; ಧರ್ಮದ ಮೂಲ ಧ್ಯೇಯಗಳ ಮರೆತು `ಜಾತಿಯ ಉದ್ಧಾರಕ್ಕಾಗಿ ವಿಧಾನಸೌಧದೆದುರು `ಜೋಳಿಗೆ ಹಿಡಿಯುವುದು’ ಎನ್ನುವ ಅರ್ಥವ್ಯಾಪ್ತಿಗೆ ತಲುಪಿದೆ ಮತ್ತು ಅದು ತಮ್ಮ ಹಕ್ಕುಗಾರಿಕೆ ಎನ್ನುವಂತೆÀ ಮಂಡಿಸುವಲ್ಲಿಗೆ ತಲುಪಿದೆ.

ಜಾತಿಕೇಂದ್ರಿತ ಚಿಂತನೆಯ ಜನತೆಯಲ್ಲಿ ಈ ಧೋರಣೆ ನೆಲೆಯೂರಲು ಕಾರಣಗಳು ಹೀಗಿವೆ: ಸಾಮಾಜಿಕ ಸಂಘಟನೆ ಕಟ್ಟಲಾಗದ ದುರ್ಬಲ ರಾಜಕೀಯ ನಾಯಕರಿಗೆ ಜಾತಿಯ ಸಿದ್ಧ ಮಾದರಿಯ ಸಂಘಟನೆಯನ್ನು ಪ್ರವೇಶಮಾಡಿ ಆಕ್ರಮಿಸಿಕೊಳ್ಳುವುದು ಸುಲಭವೆನಿಸಿತು. ಹುಟ್ಟು-ಸಾವು ಮದುವೆಯಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತ ಭಾವನಾತ್ಮಕ ಸಂಬAಧಗಳನ್ನು ಬಂಡವಾಳ ಮಾಡಿಕೊಂಡು ಮತ ಬ್ಯಾಂಕಿನ ಮಾರ್ಗ ಮಾಡಿಕೊಂಡರು. ಶಂಕರಾಚಾರ್ಯ ಮಧ್ವಾಚಾರ್ಯ ರಾಮಾನುಜಾಚಾರ್ಯ ಹೆಸರಿನಲ್ಲಿ ಮತೀಯ ಸಂಸ್ಥೆಗಳು ಹಾಗೂ ಬಸವಣ್ಣ ಕನಕದಾಸ ಅಂಬೇಡ್ಕರ್ ಕುವೆಂಪು ಅಂಥವರ ಹೆಸರಲ್ಲಿ ಪರೋಕ್ಷವಾಗಿ ಜಾತಿ ಸಂಘಟನೆಗಳು ಬೆಳೆದವು.

ಬಿಜೆಪಿ ಅಧಿಕಾರಕ್ಕೆ ಬಂದನAತರ ಇದೇ ಮಾದರಿಯನ್ನು ಪ್ರಧಾನ ಅಸ್ತçವನ್ನಾಗಿ ಬಳಸಿಕೊಂಡಿತು. ಸಂಸ್ಕೃತಿ ಇಲಾಖೆಯ ಮೂಲಕ ಜಾತಿ ಸಂಘಟನೆಗಳನ್ನು ಮಾಡಿ `ಜಯಂತಿಗಳ ಆಚರಣೆ’ಗೆ ಮುಂದಾಯಿತು. ಯಾವ ಶರಣರು-ಸಂತರು ಜಾತಿಯನ್ನ ಮೆಟ್ಟಿನಿಂತಿದ್ದರೊ, ಹಾಯಗಾರಿಕೆ ಮೇಲು-ಕೀಳು ಭಾವನೆಗಳನ್ನು ಮುರಿದಿದ್ದರೊ, ಅಂಥವರನ್ನೂ ಆಯಾ ಜಾತಿ ಪಡೆಯ ವಕ್ತಾರರಂತೆ ಬಿಂಬಿಸಿ `ಪೆಪ್ಪರ್‌ಮೆಂಟ್ ಚೀಪಿಸುವ ಕಾಯಕ’ಕ್ಕೆ ಮುಂದುಮಾಡಿದರು. ಈಗ ಜಾತಿಗಳು ಮಕ್ಕಳಾಗಿ ಮಠಗಳು ಅಪ್ಪನ ಸ್ಥಾನದಲ್ಲಿ ನಿಂತು ಕಾರ್ಯನಿರ್ವಹಿಸುತ್ತಿವೆ. ಇತರ ರಾಜಕೀಯ ಪಕ್ಷಗಳು ಅದನ್ನು ಅನುಸರಿಸಿದವು. ಆರ್ಥಿಕ ಸಾಮಾಜಿಕ ರಾಜಕೀಯ ನಂಟಿAದ ಮಠ-ಜಾತಿಗಳು ತೀವ್ರ ಚಲನಶೀಲನತೆಗೆ ತಿರುಗಿದ್ದರೂ ಅವು ಮೇಲ್ಪದರಿನದ್ದಾಗಿವೆ. ಇದರಿಂದ ಬುಡಮಟ್ಟದ ಯಾವುದೇ ಸಂರಚನೆ ಬದಲಾಗದೆ, ಸನಾತನೀಯ ಕರ್ಮಠÀ ಮಾರ್ಗದೆಡೆಗೆ ಎಳೆದೊಯ್ಯುವ ಅಪಾಯಗಳೇ ಅಧಿಕವಾಗಿವೆ.

ಜಾತಿಗಳ ತಾಂಡವ

ಮಂಡಳಿ ನಿಗಮ ಪ್ರಾಧಿಕಾರದ ಕುರ್ಚಿಗಳು ಮಠೀಯ-ಜಾತೀಯ ಮಾರ್ಗದಿಂದ ಬಂದ ಅತೃಪ್ತ ಪುಡಿನಾಯಕರ ಓಲೈಕೆಗಿರುವ ನಿಲ್ದಾಣಗಳಾಗಿವೆ. ಜಾತಿ ನೀತಿಯ ಉಲ್ಬಣದ ತಾಂಡವ ನೃತ್ಯ, ಪ್ರಜಾಪ್ರಭುತ್ವದ ಜಾತ್ಯಾತೀತತೆಯ ಅವಸಾನದ ಪ್ರತೀಕ ಎಂಬAತೆ ನಿಗಮ-ಪ್ರಾಧಿಕಾರಗಳೂ ಜಾತಿ ಹೆಸರಲ್ಲೇ ಪ್ರತಿಷ್ಠಾಪನೆಯಾಗಿವೆ. ಬ್ರಾಹ್ಮಣ ಜಾತಿಯ ಹೆಸರಲ್ಲಿ ಮೊದಲ ಅಡಿಯಿಟ್ಟರೂ, ಈಗ ಲಿಂಗಾಯತ ಹೆಸರಿನಿಂದ ಸ್ಥಾಪನೆಯಾಗಿದೆ. ಒಕ್ಕಲಿಗರ ಹೆಸರಿಂದಲೂ ಪ್ರಾಧಿಕಾರ ಮಾಡಿ ಎನ್ನುವ ಧ್ವನಿ ಟೇಬಲ್ ಎದುರು ಬಂದು ನಿಂತಿದೆ. ಮರಾಠಿಗರ ಹೆಸರಲ್ಲಿಯ ಪ್ರಾಧಿಕಾರ-ನಿಗಮವಾಗಿ ಎದ್ದು ನಿಂತಿದೆ. ಈ ಜಾತಿಪೋಷಕತ್ವದ ಉಲ್ಬಣ ತಾಂಡವ ಸ್ಥಿತಿಗೆ ತಲುಪಲು ಕೇವಲ ಬಿಜೆಪಿಯೇ ಕಾರಣವೆಂದರೆ ಅತಿಶಯೋಕ್ತಿಯ ಮಾತಾಗುತ್ತದೆ. ಇದರಲ್ಲಿ ಜೆಡಿಎಸ್ ಕಾಂಗ್ರೆಸ್ಸಿನ ಪಾಲೂ ಇಲ್ಲದಿಲ್ಲ. ರಾಷ್ಟçರಾಜಕಾರಣದಲ್ಲಿಯೂ ಇದರ ಇನ್ನೊಂದು ಮುಖವಿದೆ ಅಷ್ಟೇ.

ಪ್ರಾಧಿಕಾರಗಳು ಸಾರ್ವತ್ರಿಕ ನೆಲೆಯ ಮೇಲೆ ರೂಪುಗೊಳ್ಳಬೇಕು. ಆರಂಭದಲ್ಲಿ ಪತಿತ ಸಮುದಾಯದ ಪ್ರಾಧಿಕಾರಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರಾಧಿಕಾರಗಳು ಹಾಗೆಯೇ ರೂಪುಗೊಂಡವು. ನೈತಿಕತೆ ಜೀವಂತವಾಗಿತ್ತು. ಈಗ `ಜಾತಿ’ ವಿವೇಚನೆಯ ಸಂಗತಿಯೇ ಅಲ್ಲಾ ಎನ್ನುವಂತೆ ಬಲಿಷ್ಠ ಜಾತಿಗಳ ಹೆಸರಲ್ಲಿ ಪ್ರಾಧಿಕಾರಗಳು ಹುತ್ತಗಟ್ಟುತ್ತಿವೆ. ಬ್ರಾಹ್ಮಣ ಲಿಂಗಾಯತ ಒಕ್ಕಲಿಗ ಜಾತಿಯಲ್ಲಿಯ ಬಡವರಿಗೆ ಸೌಲತ್ತುಗಳು ಸಲ್ಲ ಎಂದು ಹೇಳಲಾಗದು. ಆದರೆ ಆರ್ಥಿಕವಾಗಿ ಬಲಿಷ್ಠವಾಗಿರುವವರು ಬಡವರನ್ನು ಕೈಹಿಡಿದೆತ್ತಲಾಗದ ಸ್ಥಿತಿಗೆ ತಲುಪಿದವರಾಗಿದ್ದಾರೆ ಎಂದೇನಿಲ್ಲ. ಈ ಎಚ್ಚರ ಅಲ್ಲಿಯ ಬಲಿಷ್ಠರಿಗೂ ಬರಬೇಕಿದೆ.

ಜಾತಿ ರಾಜಕಾರಣ ಮಾಡುವ ನಿರ್ಲಜ್ಜತನಕ್ಕೆ ನಾವು ಪಕ್ಕಾಗಿದ್ದೇವೇನೋ ಎನಿಸುವ ಕಾಲವಿದು. ಇಂಥ ಸ್ಥಿತಿಯಲ್ಲಿಯೂ ಕೆಲ ಪ್ರಗತಿಪರ ಮಠಾಧೀಶರು `ಜಾತಿ ಹೆಸರಲ್ಲಿ ಪ್ರಾಧಿಕಾರ ಸರಿಯಲ್ಲ’ ಎಂದು ಹೇಳಿದ್ದು ಜಾತಿ ಹೊಳೆಯಲ್ಲಿ ಹರಿದು ಹೋಗುವ ಜಾತ್ಯಾತೀತತೆಗೆ ಹುಲ್ಲಿನ ಆಸರೆ ಸಿಕ್ಕಂತೆ ಕಾಣುತ್ತಿತ್ತು. ಸರಕಾರದ ನಡೆ ಮಧ್ಯಮ ವರ್ಗದ ಬೂರ್ಜ್ವಾ ನೀತಿಯಂತಾಗಬಾರದು. `ನಾವು ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ’ ಎನ್ನುವ ಹೆಸರಲ್ಲಿ ಕಣ್ಣು ಕಾಣುವವನಿಗೂ, ಅರೆಬರೆ ಕಣ್ಣು ಕಾಣುವವನಿಗೂ, ಕುರುಡನಿಗೂ ಎಲ್ಲರಿಗೂ ನಾವು `ಕೂಲಿಂಗ್ ಗ್ಲಾಸ್’ ಕೊಡುತ್ತೇವೆ ಎನ್ನುವುದು ಸಮರ್ಥನೀಯವಲ್ಲ. ಪತಿತರ ಹೆಸರಲ್ಲಿ ಸಂದಾಯವಾಗುತ್ತಿರುವ ಮೀಸಲಾತಿಯಲ್ಲಿಯೂ ಇಂಥದೇ ಸ್ಥಿತಿ ಇದ್ದು; ಅದೂ ಶಸ್ತçಚಿಕಿತ್ಸೆಯನ್ನು ನಿರೀಕ್ಷಿಸುತ್ತದೆ.

ಜಾತಿ ನೀತಿಯ ಸಮರ್ಥನೆಯ ನಿರ್ಲಜ್ಜ ಭಾವ ಮಡುಗಟ್ಟುವಲ್ಲಿ ಟಿವಿಯ ಸುದ್ದಿ ಮಾಧ್ಯಮಗಳು ಪುರೋಹಿತನಾಗಿ ಜಾತಿ ಮೌಢ್ಯವನ್ನ ಬಿತ್ತುತ್ತ ವಿವೇಚನಾರಹಿತವಾಗಿ ಸಂಭ್ರಮಿಸುತ್ತಿರುವುದೂ ಕಾರಣವಾಗಿದೆ. ಜಾತಿ ಕೇಂದ್ರಿತ ವರದಿಗಳಿಂದ ಆರಂಭವಾಗಿ ಚುನಾವಣೆಯ ವಿಶ್ಲೇಷಣೆಗಳವರೆಗೂ ಜಾತಿ-ಕೋಮು ಮುಖಿಯಾಗಿಯೇ ನಿರ್ಲಜ್ಜತನದ ಕ್ರಿಕೆಟ್ ಕಾಮೆಂಟ್ರಿಯAತೆ ನಿರೂಪಿಸುವ ಗುಣ, ಜನತೆಯಲ್ಲಿಯ ವಿಮಶಾತ್ಮಕ ಶಕ್ತಿಯೇ ಕಳೆದು ಇದು ಸಹಜ ಎಂಬ ಮನೋಭಾವಕ್ಕೆ ತಂದುನಿಲ್ಲಿಸಿವೆ. ಕೆಲಸಕ್ಕೆ ಬಾರದ ವಿಷಯಗಳಿಗೆ ಕಂಠ ಶೋಷಣೆ ಮಾಡಿಕೊಳ್ಳುತ್ತವೆ.

ಮರಾಠಿ ಭಾಷಿಕರಿಗೆ ಯಾವುದೇ ರೀತಿಯ ಮಣೆ ಹಾಕಿದರೂ ಅವರನ್ನು ಒಲಿಸಿಕೊಳ್ಳಲಾಗದು. ಕನ್ನಾಡಿನಲ್ಲಿ ತೆರಿಗೆ ಕಟ್ಟುವ ಅವರಿಗ್ಯಾವ ಸವಲತ್ತು ಕೊಡಬಾರದು ಎನ್ನಲಾಗದು. ಕಾಲಿಕ ಯೋಜನೆ ರೂಪಿಸಿ ಸೌಲತ್ತುಗಳನ್ನು ಕೊಡಿ. ಆದರೆ ಪ್ರಾಧಿಕಾರದ ಮಟ್ಟಕ್ಕೆ ಏರಿಸುವ ಅಗತ್ಯವಿರಲಿಲ್ಲ. ಅವರಿಗೂ ಕನ್ನಾಡಿನ ಬಗ್ಗೆ ನಿಯತ್ತು ಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ತೆರಿಗೆ ಕಟ್ಟುತ್ತ ಬದುಕುವ ಕನ್ನಡಿಗರೂ ಇದ್ದಾರೆ. ಅಲ್ಲಿ ಇವರು ಪಡೆದುಕೊಂಡ ಸೌಲತ್ತುಗಳು ಎಷ್ಟು? ಇಂತಹ ಹಲವು ಪ್ರಶ್ನೆಗಳನ್ನೆತ್ತಬಹುದು. ಅದಕ್ಕಿಂತ ಮುಖ್ಯವಾಗಿ ನಾವು ನಮ್ಮ ನಾಡಿನ ಸ್ಥಳೀಯ ಕನ್ನಡೇತರ ಭಾಷೆಗಳಿಗೆ-ಭಾಷಿಕರಿಗೆ ಆದ್ಯತೆ ನೀಡುವ ಅಗತ್ಯವಿದೆ. ಅಳಿವಿನ ಅಂಚಿನಲ್ಲಿರುವ ಭಾಷೆಗಳನ್ನು ಉಳಿಸಿಕೊಂಡಲ್ಲಿ ಅದು ಕನ್ನಾಡಿನ ಶ್ರೇಯೋಭಿವೃದ್ಧಿಗೆ ಕಾರಣವಾಗಲಿದೆ.

`ಜಾತಿಕಟ್ಟಿ ದೇಶ ಆಳು’ ಎನ್ನುವ ನೀತಿ ಅನುಸರಿಸಿ ಒಕ್ಕಲಿಗರು ಮತ್ತು ವೀರಶೈವ/ಲಿಂಗಾಯತರು ಜಾತಿಕಟ್ಟಿ ನಮ್ಮ ನಾಡನ್ನು ಆಳಿದ್ದು ಇತಿಹಾಸ. ತಳಸಮುದಾಯದ ಅಕ್ಷರಸ್ಥರು ಜಾತಿ ಹೇವರಿಕೆಯಿಂದ `ಜಾತಿಬಿಟ್ಟು ದೇಶಕಟ್ಟು’ ಎಂದು ಹೊರಟು ಸೋತರು. ಒಬ್ಬರಿಗೆ `ಜಾತಿ’ ಬಲಿಷ್ಠ ಹಾಗೂ ಲಾಭದ ಅಂಗಡಿಯಾದರೆ, ಇನ್ನೊಬ್ಬರಿಗೆ ಅವಮಾನದ ಅಂಗಳ. ಈ ವೈರುಧ್ಯದ ನಡುವೆಯೂ ಜಾತಿ ಸಂರಚನೆಯ ಆಂತರಿಕ ಬೇರುಗಳು ಬದಲಾವಣೆಗೆ ಒಳಗಾಗಿವೆ. ತಳಸಮುದಾಯದವರಿಗೆ ತಮ್ಮ ನೀತಿ ತಮಗೆ ಮುಳುವಾಗಿ ಯಥಾಸ್ಥಿತಿಯ ಇರುವಿಕೆಗೆ ದಾರಿಯಾದಂತಾಗಿದೆ.

ಜಾತಿ ದೃಢೀಕರಣದ ಉಲ್ಬಣಕ್ಕೆ ಮೀಸಲಾತಿಯೇ ಕಾರಣವೆಂದು ಗ್ರಹಿಸಿದರೆ ಅದು ಅಪ್ರಬುದ್ಧ ಗ್ರಹಿಕೆಯ ಚಿಂತನೆಯಾಗುತ್ತದೆ. ಆದರೆ ಜಾತಿಕೇಂದ್ರಿತ ಚಿಂತನೆ ರಾಜಕೀಯವಾಗಿ ಹಾಗೂ ಸಾಂಪ್ರದಾಯಿಕವಾಗಿ ಲಾಭದಾಯಕವಾಗಿರುವುದರಿಂದ ಆಯಾ ಕ್ಷೇತ್ರದ ನಾಯಕರು ಪ್ರಗತಿಯ ಮಾತಿನ ಬಿಸಿಲ್ಗುದುರೆ ಏರಿದ್ದಾರೆ. ಇದೇ ಪ್ರಗತಿಯ ಸುಲಭಮಾರ್ಗ ಎಂದುಕೊAಡಿದ್ದಾರೆ. ಇದರಿಂದ ಹೊರಬರಲು ಮೂರು ಮಾರ್ಗಗಳಿವೆ. ಒಂದು; ಪ್ರಗತಿಪರರು ಸಂರಚನೆಯ ಒಳಹೊಕ್ಕು ಒಡೆಯುವುದು. ಎರಡು; ರ‍್ಯಾಯವನ್ನ ರೂಪಿಸುವುದು. ಮೂರು; ಇರುವವರನ್ನೇ ಪರಿವರ್ತನೆಗೆ ಒಳಗುಮಾಡುವುದು. ದಲಿತ-ಬಂಡಾಯವು ನಿಸ್ತೇಜ ಸ್ಥಿತಿಯಲ್ಲಿದ್ದು ಅದರಿಂದ ಈ ಕಾರ್ಯಗಳು ಅಷ್ಟು ಸರಳ ಸಾಧ್ಯವಲ್ಲ. ಬಾವಿಯಲ್ಲಿ ಬರಿ ಕೊಳಕು ನೀರಿದ್ದಲ್ಲಿ ಸ್ವಚ್ಛಮಾಡಬಹುದು. ಆದರೆ ಬಾವಿಯ ಸೆಲೆಗಳಿಂದಲೇ ಕೊಳಕು ನೀರು ಬರುವಂತಿದ್ದರೆ, ಆ ಬಾವಿ ಮುಚ್ಚಿ ಹೊಸ ಬಾವಿಯನ್ನು ತೋಡಬೇಕಾಗುತ್ತದೆ. ಅದು ಹೆಚ್ಚಿನ ಕಾಲವನ್ನು ನಿರೀಕ್ಷಿಸುತ್ತದೆ.

ಜಾತಿಕೇಂದ್ರಿತ ಅಭಿವೃದ್ಧಿ ಎಂದರೆ ಬೇರಿಲ್ಲದ ಗಿಡಕ್ಕೆ ನೀರೆರೆದಂತೆ, ಇದು `ಫಾಸ್ಟ್ಫುಡ್’ ಮಾದರಿಯದ್ದು. ಇದರಿಂದ ತಾತ್ಕಾಲಿಕವಾಗಿ ಕೆಲ ಜನಸಮುದಾಯಗಳನ್ನು ತೃಪ್ತಿಪಡಿಸಬಹುದೆ ವಿನಾ, ನಾಡಿನ-ರಾಷ್ಟçದ ಅಥವಾ ಜನತೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ. ಸಂವಿಧಾನದ ನಿಯಮಗಳನ್ನು ಪಾಲಿಸುತ್ತಿದ್ದೇವೆ ಎಂದು ತೋರ್ಪಡಿಸುವಿಕೆಯ ಮೂಲಕ, ಅಸಾಂವಿಧಾನಿಕ ಮಾರ್ಗದಲ್ಲಿ ಜಾತಿಯತೆಯನ್ನು ದೃಢಪಡಿಸುವ ಚಾಣಾಕ್ಷತನದಲ್ಲಿಯೇ ಎಲ್ಲಾ ರಾಜಕೀಯ ಪಕ್ಷಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿವೆ. ಇದರ ಪರಿಣಾಮದಿಂದಾಗಿಯೇ, ಇಂದು ಜಾತಿ ಚಿಂತನೆಯ ರೋಗ ತಾಂಡವವಾಡುವAತಾಗಿದೆ.

ಬಲಿಷ್ಠಜಾತಿಗಳ ಮೀಸಲಾತಿ ಪಡೆವ ಹೋರಾಟಗಳು ತಮ್ಮ ಸಮುದಾಯಕ್ಕೆ ಲಾಭಪಡೆದುಕೊಳ್ಳುವು ದಕ್ಕಿಂತ ತಳಸಮುದಾಯಗಳಿಗೆ ಮೀಸಲಾತಿ ಇಲ್ಲದಂತೆ ಮಾಡುವ ವಿಧಾನ ಎನ್ನಲಾಗುತ್ತಿದೆ. ಇದಕ್ಕೆ ರ‍್ಯಾಯ ಚಿಂತನೆ ಎನ್ನುವಂತೆ `ಮೀಸಲಾತಿಯನ್ನು ಎಲ್ಲ ಜಾತಿಗರಿಗೂ ಆಯಾಜಾತಿಯ ಜನಸಂಖ್ಯಾವಾರು ವಿಭಜಿಸಿ ಕೊಡಿ’ ಎನ್ನುವ ಚಂಡು ಓಡಾಡುತ್ತಿದೆ. ಇದೇ `ಸಮಪಾಲು ಸಮಬಾಳು’ ಎಂಬ ಭ್ರಮೆಯ ಸ್ಪಶÀðವನ್ನು ಅದಕ್ಕೆ ಕೊಡಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ಮಾರ್ಗ. ಇದು ಸನಾತನೀಯ ವ್ಯವಸ್ಥೆಗೆ ರತ್ನಗಂಬಳಿ ಹಾಸಿದಂತೆ. ಈ ಚಿಂತನೆಯ ಹರಿವು ಕೇವಲ ಕರ್ನಾಟಕದಲ್ಲಿದೆ ಎಂದಲ್ಲ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿಯೂ ಇದು ತೀವ್ರವಾಗಿ ಹರಿದಾಡುತ್ತಿದೆ. ಈ ಚಿಂತನೆಯಿAದಾಗಿ ಜನಸಮುದಾಯಗಳಲ್ಲಿ ಆಂತರಿಕ ತಲ್ಲಣ, ಚಿಂತನೆಯ ಕ್ಷೆÆÃಭೆ, ಜಡತ್ವವೇ ಅಧಿಕವಾಗಿ ಮನೆಮಾಡಲಿವೆ.

ಮುಗಿಸುವ ಮುನ್ನ…

ಮೊದಲು ಜಾತಿಕೇಂದ್ರಿತ ಸರಕಾರಿ ಪ್ರಾಯೋಜಿತ ಜಯಂತಿಗಳನ್ನು ರದ್ದುಗೊಳಿಸಬೇಕಿದೆ. ಸಮಾಜಮುಖಿಯಾಗಿ ಸಂಘಟನೆಗಳನ್ನು ಕಟ್ಟುವುದಕ್ಕೆ ಸರಕಾರ ಪರೋಕ್ಷವಾಗಿ ಪ್ರೋತ್ಸಾಹಿಸಬೇಕಿದೆ. ಸರಕಾರಿ ಸಂಸ್ಥೆಗಳನ್ನು ಕಟ್ಟುವಾಗಲೂ ಸಾಂವಿಧಾನಿಕವಾದ ನೆಲೆಯಲ್ಲಿಯೇ ಜಾತ್ಯತೀತವಾಗಿ ಕಟ್ಟುವ ಧ್ಯೇಯವನ್ನು ಪಾಲಿಸಬೇಕಿದೆ. ನವೋದಯೋತ್ತರ ಕಾಲದಲ್ಲಿ ಸಾಮಾನ್ಯ ಪ್ರಜೆಗಳು ನಾಚಿಕೆಯಿಂದ `ಬ್ರಾಹ್ಮಣರ ಹೊಟೇಲ್’ `ಲಿಂಗಾಯಿತರ ಖಾನಾವಳಿ’ಯಂತಹ ಬೋರ್ಡುಗಳನ್ನು ಕೆಳಗಿಳಿಸಿದಂತೆ, ಜಾತಿ ಕೇಂದ್ರಿತ ಅಭಿವೃದ್ಧಿ ಸಂಸ್ಥೆಗಳ ಬೋರ್ಡುಗಳನ್ನು ಕೆಳಗಿಳಿಸಿ ನೈತಿಕತೆಯನ್ನು ತೋರಬೇಕಿದೆ.

ಬಲಿಷ್ಠ ಜಾತಿಗಳಲ್ಲಿರುವ ಬಡವರಿಗೂ ತಕ್ಕುದಾದ ಮೀಸಲು ಯೋಜನೆಗಳನ್ನು ಕೊಟ್ಟು ಕಾಯುವ ಅಗತ್ಯವೂ ಇದೆ. ಇದಾಗದೆ ಹೋದರೆ ಜಾತಿಗೊಂದರAತೆ ಪ್ರಾಧಿಕಾರಗಳನ್ನು ಕಟ್ಟುವ ಅನಿವಾರ್ಯತೆ ಬರುತ್ತದೆ. ಆಗ ಅವು ಹೊಟೇಲ್ ಮುಂದಿನ ಬೀಡಾಡಬ್ಬಿ ಅಂಗಡಿಗಳAತಾಗಿ, ಜಾತ್ಯತೀತ ಮೌಲ್ಯ ನಾಶವಾಗುವ ಕಾಲಕ್ಕೆ ಕಾರಣಕರ್ತರಾದ ನಾಯಕರನ್ನು ಇತಿಹಾಸ ಕ್ಷಮಿಸದು. ನಮ್ಮ ನಾಯಕರು ನಾಡನ್ನು ಆ ಸ್ಥಿತಿಗೆ ತರಲಾರರು ಎನ್ನುವ ನಂಬಿಕೆ ನನ್ನದು.

*ಲೇಖಕರು ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದವರು; ಅವರ ‘ಗೌರ್ಮೆಂಟ್ ಬ್ರಾಹ್ಮಣ’ ಕನ್ನಡದ ಮೊದಲ ದಲಿತ ಆತ್ಮಕಥನ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು.

Leave a Reply

Your email address will not be published.