ಅಪ್ರತಿಮ ಕಾರ್ಪೊರೇಟ್ ಆಡಳಿತಗಾರ ಜ್ಯಾಕ್ ವೆಲ್ಚ್

ಷೇರುದಾರರ ಹಿತಕಾಯಲು ಕಟಿಬದ್ಧವಾಗಿದ್ದ ಇವರನ್ನು ಬಂಡವಾಳಶಾಹಿಯ ರಾಯಭಾರಿ ಎಂದು ಸಮಾಜವಾದಿಗಳು ಹೀಗಳೆದರೆ, ಕೆಲವರು ಕಮ್ಯುನಿಸ್ಟ್ ಸರ್ವಾಧಿಕಾರಿಯಂತೆ ವರ್ತಿಸುತ್ತಾನೆ ಎಂದೂ ಮೂದಲಿಸಿದ್ದರು. ಒಟ್ಟಾರೆ ತನ್ನ ವೃತ್ತಿಗೆ ಬದ್ಧನಾಗಿ ಅನ್ನ ಕೊಟ್ಟವರ ಹಿತಕಾಯುವುದು ತನ್ನ ಪರಮೋಚ್ಚ ಗುರಿ ಎಂದುಕೊಂಡಿದ್ದ ಆಡಳಿತಗಾರ ಒಬ್ಬ ರೈಲ್ವೆ ಕಂಡಕ್ಟರನ ಮಗ!

‘ಶತಮಾನದ ಆಡಳಿತದ ಗುರು’, ’ಶೇರುದಾರರ ರಕ್ಷಕ’ ಎಂದೆಲ್ಲಾ ಖ್ಯಾತರಾಗಿದ್ದ ಜಿಇ ಸಂಸ್ಥೆಯ ಮಾಜಿ ಮುಖ್ಯಸ್ಥ ಜ್ಯಾಕ್ ವೆಲ್ಚ್ ಇಂದು ಕುಸಿಯುತ್ತಿರುವ ಶೇರು ಮಾರುಕಟ್ಟೆ ಮತ್ತು ದಿಕ್ಕುತಪ್ಪಿದ ಜಾಗತಿಕ ಆಡಳಿತ ಯಂತ್ರಗಳ ದುರಿತ ಕಾಲದಲ್ಲಿ ಕಾಲವಾಗಿ ಹೋಗಿದ್ದಾರೆ! ಮಾರ್ಚ್ 1ರಂದು ಕಿಡ್ನಿವೈಫಲ್ಯದಿಂದ ನ್ಯೂಯಾರ್ಕಿನ ತಮ್ಮ ಮನೆಯಲ್ಲಿ ಜ್ಯಾಕ್ ತೀರಿಕೊಂಡರು.

1981ರಲ್ಲಿ ಜನರಲ್ ಎಲೆಕ್ಟ್ರಿಕಲ್ (ಜಿಇ) ಕಂಪೆನಿಯ ಮುಖ್ಯಸ್ಥರಾಗಿ ತಮ್ಮ ನಲವತ್ತೈದನೇ ವಯಸ್ಸಿಗೆ ಅಧಿಕಾರ ವಹಿಸಿಕೊಂಡ ಜ್ಯಾಕ್ ಅತ್ಯಂತ ಕಿರಿವಯಸ್ಸಿನ ಸಿಇಓ ಎಂಬ ಖ್ಯಾತಿಗೆ ಒಳಗಾಗಿದ್ದವರು. ಆ ಕಾಲದಲ್ಲಿ ಇಪ್ಪತ್ತೇಳು ಬಿಲಿಯನ್ ಡಾಲರುಗಳ ಆದಾಯದ ಜಿಇ 2000 ಇಸವಿಯ ಹೊತ್ತಿಗೆ 130 ಬಿಲಿಯನ್ ಡಾಲರ್ ವ್ಯವಹರಿಸುವಂತೆ ಕಂಪೆನಿಯನ್ನು ಹಿಗ್ಗಿಸಿದ ಹಿರಿಮೆ ಜ್ಯಾಕ್ ವೆಲ್ಚ್ ಅವರದು. ಹೀಗೆ ಕಂಪೆನಿಯನ್ನು ಹಿಗ್ಗಿಸಲು ಅವರು ಬಳಸಿದ ಮಾರ್ಗ “ಕುಗ್ಗಿಸುವುದು” ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಭಾರತದ ಟಾಟಾ ಕಂಪೆನಿಯಂತೆಯೇ ಅಮೆರಿಕಾದ ಜಿಇ ಕಂಪೆನಿ ಮೊಳೆಯಿಂದ ಏರೋಪ್ಲೇನಿನ ತನಕ ಉತ್ಪಾದನೆಯಲ್ಲಿ ತೊಡಗಿರುವ ಬಹುದೊಡ್ಡ ಕಂಪೆನಿ. ಈ ಕಂಪೆನಿಯ ಪ್ಲಾಸ್ಟಿಕ್ ಉತ್ಪಾದನಾ ವಿಭಾಗದ ನೌಕರಿಯಿಂದ ಮೇಲೇರಿ ಬಂದ ಜ್ಯಾಕ್, ಆ ಪ್ಲಾಸ್ಟಿಕ್ಕಿನಂತೆಯೇ ಬಳುಕುವ, ಬಗ್ಗುವ, ಹಿಗ್ಗುವ, ಕುಗ್ಗುವ ಫ್ಲೆಕ್ಸಿಬಿಲಿಟಿ, ಜಾಗತಿಕ ಕಂಪೆನಿಯಾಗಲಿ ಅಥವಾ ಏಕವ್ಯಕ್ತಿ ಒಡೆತನದ ಅಂಗಡಿ ಮುಂಗಟ್ಟು ವ್ಯವಹಾರಗಳಾಗಲಿ ಉಳಿದು ಬೆಳೆಯಲು ಅನಿವಾರ್ಯ ಎಂಬುದನ್ನು ಕಂಡುಕೊಂಡಿದ್ದರೇನೋ! ಹಾಗಾಗಿಯೇ ಬಗ್ಗದ/ಕುಗ್ಗದ/ಬಳುಕದ ಸಾಕಷ್ಟು ಕೊಬ್ಬಿನ ಜಿಇ ಉದ್ದಿಮೆಗಳನ್ನು “ರಿಪೇರಿ ಯಾ ಮಾರು ಯಾ ಮುಚ್ಚು” ತತ್ವಕ್ಕೆ ಅನ್ವಯಿಸುತ್ತ ‘ಲೀನ್ ಅಂಡ್ ಮೀನ್ ಬಟ್ ಸ್ಟಿಲ್ ಎ ಮರೀನ್’ ಎಂದು ಉದ್ಘೋಷಿಸುವ ಅಮೆರಿಕನ್ ಮರೀನ್ ಸೈನಿಕರಂತೆ ಮುನ್ನುಗ್ಗಿ ಗುರಿಯತ್ತ ಸಾಗುತ್ತಾ ಬಂದರು.

ಜಾಗತಿಕ ಮಾರುಕಟ್ಟೆಯನ್ನಷ್ಟೇ ಗಮನದಲ್ಲಿಟ್ಟುಕೊಳ್ಳದೇ ಅದಕ್ಕೆ ತಕ್ಕಂತೆ ಜಾಗತಿಕ ಉತ್ಪಾದನೆ ಕೂಡಾ ಅಮೆರಿಕನ್ ಕಂಪೆನಿಗಳ ಉತ್ಪಾದನೆಯ ಮೇಲೆ ಹೇಗೆ ದುಷ್ಪರಿಣಾಮವನ್ನುಂಟು ಮಾಡುತ್ತವೆ ಎಂಬ ಜ್ಯಾಕ್‌ರ ದೂರಾಲೋಚನೆ ಜಿಇ ಬೆಳೆಯಲು ಸಹಕಾರಿಯಾಯಿತು. ಅದರ ಫಲವಾಗಿಯೇ ಆತ ‘ರಿಪೇರಿ ಯಾ ಮಾರು, ಯಾ ಮುಚ್ಚು’ ತತ್ವದಡಿ ಸಾಕಷ್ಟು ಜಿಇ ಉದ್ದಿಮೆಗಳನ್ನು ಪುನರುಜ್ಜೀವಗೊಳಿಸಿ ಅಥವಾ ಮಾರಿ ಅಲ್ಪಕಾಲದಲ್ಲೇ ಹೆಚ್ಚಿನ ಲಾಭಾಂಶದೆಡೆಗೆ ತಂದರು. ಈ ತತ್ವವನ್ನು ಕೇವಲ ಉದ್ದಿಮೆಗಳಿಗಷ್ಟೇ ಅನ್ವಯಿಸದೆ ಸಂಸ್ಥೆಯ ಉದ್ಯೋಗಿಗಳಿಗೂ ಅನ್ವಯಿಸಿದರು. ಅನವಶ್ಯಕ ಅನುತ್ಪಾದಕ ಮಾನವ ಸಂಪನ್ಮೂಲವನ್ನು ಗುರುತಿಸಿ ಮುಲಾಜಿಲ್ಲದೇ ಕೆಲಸದಿಂದ ತೆಗೆದುಹಾಕಿದರು.

ಜ್ಯಾಕ್‌ರ ನಿಷ್ಠೆಯೇನಿದ್ದರೂ ಬಂಡವಾಳ ಹಾಕಿದ ಶೇರುದಾರರ ಹಿತಕಾಯುವುದಾಗಿತ್ತೇ ಹೊರತು ಅನುತ್ಪಾದಕ ಉದ್ಯೋಗಿಗಳನ್ನು ರಕ್ಷಿಸುವುದಲ್ಲ. ಇದಕ್ಕಾಗಿ ಅವರನ್ನು ಸಾಕಷ್ಟು ಜನ ದ್ವೇಷಿಸುವುದೂ ಉಂಟು. ಷೇರುದಾರರ ಹಿತಕಾಯಲು ಕಟಿಬದ್ಧವಾಗಿದ್ದ ಇವರನ್ನು ಬಂಡವಾಳಶಾಹಿತ್ವದ ರಾಯಭಾರಿ ಎಂದು ಸಮಾಜವಾದಿಗಳು ಹೀಗಳೆದರೆ, ಕೆಲವರು ಕಮ್ಯುನಿಸ್ಟ್ ಸರ್ವಾಧಿಕಾರಿಯಂತೆ ವರ್ತಿಸುತ್ತಾನೆ ಎಂದೂ ಮೂದಲಿಸಿದ್ದರು.  ಒಟ್ಟಾರೆ ತನ್ನ ವೃತ್ತಿಗೆ ಬದ್ಧನಾಗಿ ಅನ್ನ ಕೊಟ್ಟವರ ಹಿತಕಾಯುವುದು ತನ್ನ ಪರಮೋಚ್ಚ ಗುರಿ ಎಂದುಕೊಂಡಿದ್ದ ಈ ಸಾಂಪ್ರದಾಯಿಕ ಕ್ಯಾಥೋಲಿಕ್ ವ್ಯಕ್ತಿ ಒಬ್ಬ ರೈಲ್ವೆ ಕಂಡಕ್ಟರನ ಮಗ!

ಮೆಸಚುಸೆಟ್ಸ್ ರಾಜ್ಯದ ಪೀಬಡಿ ಎಂಬಲ್ಲಿ ರೋಮನ್ ಕ್ಯಾಥೊಲಿಕ್ ಕುಟುಂಬದಲ್ಲಿ ಹುಟ್ಟಿದ ಈತನ ತಂದೆ ಬಾಸ್ಟನ್-ಮೇನ್ ರೈಲಿನ ಕಂಡಕ್ಟರ್ ಆಗಿದ್ದರೆ ಈತನ ತಾಯಿ ಗೃಹಿಣಿ. ಸದಾ ಏನಾದರೂ ಹೊಸತನದ ಸಾಹಸಕ್ಕೆ ಕೈ ಹಾಕುವ ಐರಿಷ್ ಹಿನ್ನೆಲೆಯ ಈತ ಬೇಸ್ಬಾಲ್, ¥s಼ÀÄಟ್ಬಾಲ್ ಆಡುತ್ತ ಹಾಕಿ (ಐಸ್ ಹಾಕಿ)ಯತ್ತ ಗಮನ ಹರಿಸುತ್ತ ತನ್ನ ಶಾಲೆಯ ಹಾಕಿ ಟೀಮಿಗೆ ಕ್ಯಾಪ್ಟನ್ ಕೂಡ ಆಗಿದ್ದ. ಇತರೆಲ್ಲಾ ಅಮೆರಿಕನ್ನರಂತೆಯೇ ತನ್ನ ಬೇಸಿಗೆಯ ಶಾಲಾ ಬಿಡುವಿನಲ್ಲಿ ಪೇಪರ್ ಹಾಕುವ, ಗಾಲ್ಫ್ ಆಟಗಾರರ ಸಹಾಯಕ (ಕ್ಯಾಡಿ)ನಾಗಿ, ಶೂ ಅಂಗಡಿಗಳಲ್ಲಿ ಸೇಲ್ಸ್ಮನ್ ಆಗಿ ಕೆಲಸ ಮಾಡುತ್ತ ಪುಡಿಗಾಸು ಸಂಪಾದಿಸಿಕೊಳ್ಳುವುದಲ್ಲದೆ ಜೀವನಾನುಭವವನ್ನೂ ಗಳಿಸುತ್ತಿದ್ದನು.

ಹೈಸ್ಕೂಲ್ ಶಿಕ್ಷಣದ ನಂತರ ಕೆಮಿಕಲ್ ಇಂಜಿನಿಯರಿಂಗಿನಲ್ಲಿ ಡಿಗ್ರಿ ಪಡೆದ ಜ್ಯಾಕ್ ಮುಂದೆ ಅದೇ ವಿಷಯದಲ್ಲಿ ಸ್ನಾತಕೋತ್ತರ ಮತ್ತು ಪಿಹೆಚ್ಡಿ ಪಡೆದು ಜಿಇ ಸಂಸ್ಥೆಯ ಪ್ಲಾಸ್ಟಿಕ್ ವಿಭಾಗದಲ್ಲಿ ಜ್ಯೂನಿಯರ್ ಕೆಮಿಕಲ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡು ಮುಂದೆ ಅದೇ ಸಂಸ್ಥೆಯ ಮುಖ್ಯಸ್ಥರಾದದ್ದು ಒಂದು ಯಶೋಗಾಥೆ.

ಬಾಲ್ಯದಲ್ಲಿ ಉಗ್ಗುತ್ತಿದ್ದ ಜ್ಯಾಕ್‌ಗೆ ಅವನ ತಾಯಿ ಯಾವ ಕೀಳರಿಮೆಯುಂಟಾಗದಂತೆ ಪ್ರೊತ್ಸಾಹಿಸುತ್ತ, “ನಿನ್ನ ಬುದ್ಧಿವಂತ ಆಲೋಚನೆಗಳಿಗೆ ಜಗತ್ತಿನ ಯಾವುದೇ ನಾಲಿಗೆ ಸಾಟಿಯಾಗಲಾರದು. ಹಾಗಾಗಿಯೇ ನಿನ್ನ ನಾಲಿಗೆ ನಿನ್ನ ಆಲೋಚನೆಗಳಿಗೆ ಸಾಥ್ ನೀಡಲಾಗುತ್ತಿಲ್ಲ. ಹಾಗಾಗಿ ನೀನು ಉಗ್ಗುತ್ತಿರುವೆ. ಮುಂದೆ ನಿನ್ನ ನಾಲಿಗೆಗೆ ಇದು ಅಭ್ಯಾಸವಾಗಿ ನಿನ್ನ ಆಲೋಚನೆಗಳಿಗೆ ಅದು ಹೊಂದಿಕೊಂಡು ಈ ತೊಂದರೆ ಸರಿಹೋಗುತ್ತದೆ. ಅಲ್ಲಿಯವರೆಗೆ ಅದಕ್ಕೆ ಅಭ್ಯಾಸ ನೀಡುತ್ತಿರು” ಎನ್ನುತ್ತಿದ್ದಳು. ಆಕೆ ನೀಡಿದ ಪ್ರೋತ್ಸಾಹದಿಂದ ಆತನ ಉಗ್ಗುವಿಕೆ ಮುಂದೆ ನಿಂತೇಹೋಯಿತು. ಪ್ರಾಯಶಃ ಹಾಗಾಗಿಯೇ ಆತನ ಅನೇಕ ಉದ್ಘೋಷಗಳು ಆತನ ಆಲೋಚನೆಯಂತೆಯೇ ತೀಕ್ಷ್ಣವೂ, ಚೊಕ್ಕವೂ, ಮತ್ತು ಶುಭ್ರವೂ ಆಗಿ ಬಸವಣ್ಣನವರ ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕೆಂಬ ವಚನದಂತೆ, ಮ್ಯಾನೇಜ್ಮೆಂಟಿನವರು ಬಯಸುವಂತೆ ಕ್ರಿಸ್ಟಲ್ ಕ್ಲಿಯರ್ ಆಗಿರುತ್ತಿದ್ದವು.

ಬಾಲ್ಯದ ಹಾಕಿ ಮತ್ತು ಫುಟ್ಬಾಲ್ ಆಟಗಳು ಜ್ಯಾಕ್‌ರ ಆಕ್ರಮಣಕಾರಿ ಮತ್ತು ನೇರ ಕಟು ಮಾತುಗಳಾಡುವ ಸ್ವಭಾವಗಳನ್ನು ಪ್ರಭಾವಿಸಿರಬಹುದು. ಸಕ್ಕರೆ ಲೇಪನವಿಲ್ಲದ, ಕೊಬ್ಬಿನ ಗ್ರೀಸ್ ಇಲ್ಲದ, ನೇರ, ವಿಷಯಕ್ಕೆ ಸಂಬಂಧಿಸಿದ ಮಾತು, ಕ್ರಿಯೆ, ಮತ್ತು ಕೃತಿಗಷ್ಟೇ ಜ್ಯಾಕ್ ಬೆಲೆ ಕೊಡುತ್ತಿದ್ದುದು. ಇಂದು ಅಮೆರಿಕಾದಾದ್ಯಂತ ಹಲವಾರು ಮ್ಯಾನೇಜರುಗಳು “ಕಟ್ ದಿ ಫ್ಯಾಟ್, ಗಿವ್ ಇಟ್ ಸ್ಟೆçÃಟ್” ಎಂದು ನಾಣ್ಣುಡಿಯೆನಿಸಿರುವ ಜ್ಯಾಕ್‌ನ ತತ್ವವನ್ನೇ ಪಾಲಿಸುತ್ತಿರುವರು.

ಈತನ ಯಶಸ್ವಿಗೆ ಕಾರಣೀಭೂತವಾಗಿದ್ದುದು ಸಿಕ್ಸ್ಸಿಗ್ಮಾ ಎಂಬ ಒಂದು ತಾತ್ವಿಕ ಆಡಳಿತ ವ್ಯವಸ್ಥೆ. 1986ರಲ್ಲಿ ಮೋಟರೋಲಾ ಕಂಪೆನಿಯ ಬಿಲ್‌ಸ್ಮಿತ್ ಎಂಬ ಇಂಜಿನಿಯರ್ ಅಭಿವೃದ್ಧಿಪಡಿಸಿದ್ದ ಈ ವ್ಯವಸ್ಥೆಯು ಉತ್ಪಾದನಾ ಪ್ರಕ್ರಿಯೆಯನ್ನು ಅಳೆಯುವ, ಅಭಿವೃದ್ಧಿಗೊಳಿಸುವ, ಅನುತ್ಪಾದಕ ಕ್ರಿಯೆಗಳನ್ನು ಗುರುತಿಸುವ ಒಂದು ದಕ್ಷ ವ್ಯವಸ್ಥೆ. ಇದನ್ನು ಜಿಇ ಕಂಪೆನಿಯಾದ್ಯಂತ ಅಳವಡಿಸಿಕೊಂಡದ್ದು ಜ್ಯಾಕ್‌ರ ಯಶಸ್ಸಿಗೆ ಪ್ರಮುಖ ಕಾರಣ. ಹೀಗೆ ಒಂದು ವ್ಯವಸ್ಥೆಯಿರಲಿ, ತಂತ್ರಾಂಶವಿರಲಿ ಯಾವುದು ತನ್ನ ಗುರಿಸಾಧನೆಗೆ ಸಹಕಾರಿಯೋ ಅದನ್ನು ಅಭ್ಯಸಿಸಿ ಅಳವಡಿಸಿಕೊಳ್ಳುವ ತಾಳ್ಮೆ, ಜಾಣ್ಮೆ ಆತನಲ್ಲಿದ್ದಿತು.

ಇಂದು ಸಿಕ್ಸ್ ಸಿಗ್ಮಾ ತತ್ವಗಳನ್ನು ಬಹುತೇಕ ಎಲ್ಲಾ ಕಂಪೆನಿಗಳೂ ಅಳವಡಿಸಿಕೊಂಡಿವೆ. ಸಿಕ್ಸ್ ಸಿಗ್ಮಾದ ಪ್ರಮುಖ ಉದ್ದೇಶವೇ “ಕಟ್ ದಿ ಫ್ಯಾಟ್, ಗಿವ್ ಇಟ್ ಸ್ಟೆçÃಟ್” ಎಂಬುದಾಗಿದೆ. ಇದು ಒಂದು ಮೀಟಿಂಗ್ ಅನ್ನು ನಡೆಸುವ ಪ್ರಕ್ರಿಯೆಯಿಂದ ಹಿಡಿದು ಒಂದು ಪ್ರಾಜೆಕ್ಟ್ ಯಾ ಪ್ರಾಡಕ್ಟ್ ಉತ್ಪಾದನೆಯ ಎಲ್ಲಾ ಹಂತಗಳಿಗೂ ಅನ್ವಯಿಸುತ್ತ ಕೊಬ್ಬಿಲ್ಲದ, ಕಸವಿಲ್ಲದ, ಶುದ್ಧ ಉತ್ಪಾದಕತನವನ್ನು ಹೊಮ್ಮಿಸುವಲ್ಲಿ ಅತ್ಯಂತ ಪರಿಣಾಮಕಾರಿ. ಇಂದು ಸಿಕ್ಸ್ಸಿಗ್ಮಾ ಎಂದರೆ ಅದರ ಕರ್ತೃ ಬಿಲ್‌ಸ್ಮಿತ್‌ಗಿಂತಲೂ ಜ್ಯಾಕ್ ವೆಲ್ಚ್ರನ್ನೇ ಎಲ್ಲರೂ ನೆನೆಯುವುದು. ಅಷ್ಟರಮಟ್ಟಿಗೆ ಸಿಕ್ಸ್ಸಿಗ್ಮಾ, ಜ್ಯಾಕ್‌ರಿಂದ ಖ್ಯಾತವಾಗಿದೆ.

ಜ್ಯಾಕ್ ವೆಲ್ಚ್ ಉದ್ಘೋಷಗಳು

  • ಇಂದಿನ ವಾಸ್ತವವನ್ನು ಇಂದಿನಂತೆಯೇ ನೋಡು, ಅದನ್ನು ನೆನ್ನೆಯಂತಾಗಲೀ ಅಥವಾ ಅದು ಹೀಗಿರುತ್ತದೆ ಎಂಬ ನಿನ್ನ ಕಲ್ಪನೆಯಂತಲ್ಲ!
  • ‘ಉದ್ಯೋಗ-ಜೀವನ ಸಮತೋಲನ’ ಎಂಬುದಿಲ್ಲ. ಇರುವುದು ಉದ್ಯೋಗ ಮತ್ತು ಜೀವನವೆಂಬ ಆಯ್ಕೆ. ಆಯಾಯ ಆಯ್ಕೆಗಳು ತಮ್ಮದೇ ಆದ ಪರಿಣಾಮಗಳೊಂದಿಗೆ ಬರುತ್ತವೆ. ಆಯ್ಕೆ ನಿಮ್ಮದು.
  • ನಿನ್ನ ಗುರಿಯನ್ನು ನೀನು ನಿಯಂತ್ರಿಸು, ಇಲ್ಲದಿದ್ದರೆ ಬೇರೆಯವರು ಅದನ್ನು ನಿಯಂತ್ರಿಸುತ್ತಾರೆ!
  • ಯಾರೊಬ್ಬ ಒಂದು ದೂರದೃಷ್ಟಿ (ವಿಷನ್)ಯನ್ನು ಸೃಷ್ಟಿಸಿ, ಪೊರೆದು, ಎಲ್ಲರಿಗೂ ಅರ್ಥೈಸಿ ಅದನ್ನು ಸಾಕಾರಗೊಳಿಸಲು ಶ್ರಮಪಡುತ್ತಾನೆಯೋ ಅವನೇ ಉತ್ತಮ ನಾಯಕ!
  • ಜಗತ್ತು ನಮಗಿಂತ ಹೆಚ್ಚು ಬದಲಾಗುತ್ತಿದ್ದರೆ ನಮ್ಮ ಅಂತ್ಯ ಸನಿಹವಿದೆ ಎಂದರ್ಥ!
  • ಬದಲಾಗಲೇ ಬೇಕಾಗುವ ಮೊದಲೇ ಬದಲಾಗು!
  • ಸುದೀರ್ಘ ಕಾಯುವಿಕೆಗಿಂತ ಕ್ಷಿಪ್ರಕಾರ್ಯ ಸೂಕ್ತ!
  • ಇತರರಲ್ಲಿ ಆತ್ಮವಿಶ್ವಾಸವನ್ನು ತುಂಬುವವನೇ ನಾಯಕ!
  • ನಿನ್ನ ಆಯ್ಕೆಗಳಿಗೆ ಮತ್ತವುಗಳ ಪರಿಣಾಮಗಳಿಗೆ ನೀನೇ ಜವಾಬ್ದಾರ!

ಜ್ಯಾಕ್‌ರನ್ನು ‘ಶತಮಾನದ ಆಡಳಿತಗಾರ’ ಎಂದು ಬಹುಪಾಲು ಜನತೆ ಒಪ್ಪಿಕೊಂಡಿದ್ದರೂ ಅಲ್ಲಲ್ಲಿ ಅಪಸ್ವರಗಳೂ ಇವೆ. ಒಂದು ಲಾಭದಾಯಕ, ಅಭಿವೃದ್ಧಿಶೀಲ ಕಂಪೆನಿಯ ಮುಖ್ಯಸ್ಥನಾಗಿ ಅದನ್ನು ಯಥಾವತ್ತಾಗಿ ಅಭಿವೃದ್ಧಿ ಪಥದಲ್ಲಿ ಸಾಗಿಸುವುದು ಅಂತಹ ಕಷ್ಟದ ಕೆಲಸವಾಗಿರದೇ ಓಡುತ್ತಿರುವ ರೈಲಿಗೆ ರೈಟ್ ರೈಟ್ ಎನ್ನುವ ಕ್ಯಾಪ್ಟನ್ ಈತನಾಗಿದ್ದನು ಎಂದು ಮೂಗು ಮುರಿಯುವವರೂ ಇದ್ದಾರೆ. ಈತನ ಷೇರುದಾರರ ನಿಷ್ಠೆ, ಕಟುಮಾತುಗಳು, ಕಠಿಣ ಕ್ರಮಗಳು ಒಬ್ಬ ದುರಹಂಕಾರಿ ಡಿಕ್ಟೇಟರ್ ಎಂಬಂತೆ ಹಲವರು ಬಿಂಬಿಸಿದ್ದಾರೆ. ಅದೇನೇ ಇದ್ದರೂ ಈತ ಮೆರೆದದ್ದು ಸ್ವಾಮಿನಿಷ್ಠೆ, ವೈಜ್ಞಾನಿಕ ಉತ್ಪಾದನಾ ತಂತ್ರ, ತಂತ್ರಜ್ಞಾನದ ಅಳವಡಿಕೆ, ಅನುತ್ಪಾದಕ ಸಂಪನ್ಮೂಲಗಳನ್ನು ಉತ್ಪಾದಕಗೊಳಿಸುವುದು ಮುಂತಾದ ಕ್ರಮಗಳೆಲ್ಲಾ ಮಾನವ ಸಹಜ ನೈತಿಕತೆಯ ವಿಚಾರಗಳು.

ಇವು ಆತನ ಕ್ಯಾಥೋಲಿಕ್ ಧರ್ಮದ ಹಿನ್ನೆಲೆಯಲ್ಲಿ ಬಂದ ಮೌಲ್ಯಗಳೋ ಅಥವಾ ಮಾನವ ಸಹಜ ನೈತಿಕ ಮೌಲ್ಯಗಳು ಕಾರಣವೋ ಗೊತ್ತಿಲ್ಲ.  ಆದರೆ ಈ ವಿಚಾರವಾಗಿ ನಾವು ನೀವೆಲ್ಲರೂ ನಮ್ಮದೇ ಒಂದು ವ್ಯವಹಾರ ಉದ್ಯೋಗಗಳಲ್ಲಿ ನೈತಿಕವಾಗಿ ಏನು ಕ್ರಮಗಳನ್ನು ಕೈಗೊಳ್ಳುತ್ತೇವೆಯೋ ಅದೇ ಕ್ರಮಗಳನ್ನು ಜ್ಯಾಕ್ ಕೈಗೊಂಡಿದ್ದ. ಈ ತತ್ವಕ್ಕೆ ಅನುತ್ಪಾದಕ ನೌಕರರನ್ನು ಕೆಲಸದಿಂದ ತೆಗೆದದ್ದೂ ಹೊರತಲ್ಲವೆಂದೇ ನನ್ನ ಭಾವನೆ.

ರಾಜಕೀಯವಾಗಿ ಶ್ರೀಮಂತರ ಪರವೆಂದೇ ಗುರುತಿಸುವ ರಿಪಬ್ಲಿಕನ್ ಪಕ್ಷದ ಪರವಿದ್ದ ಜ್ಯಾಕ್, ಜಾಗತಿಕ ತಾಪಮಾನದ ಬಗ್ಗೆ “ಬಂಡವಾಳಶಾಹಿ ಮೇಲೆ ಸಮಾಜವಾದ ಮಾಡಲಾಗದ ತೀವ್ರ ಆಕ್ರಮಣವನ್ನು, ಜಾಗತಿಕ ತಾಪಮಾನವೆಂಬುದು ಸಮೂಹಸನ್ನಿಯನ್ನು ಸೃಷ್ಟಿಸಿ ಪರಿಣಾಮಕಾರಿಯಾಗಿ ಮಾಡುತ್ತಿದೆ” ಎಂದು ಹೇಳಿದ್ದುದು ಗಮನಾರ್ಹ! ಹಾಗಿದ್ದರೂ ಈತ ಹಸಿರು ಉತ್ಪಾದನೆಗೆ ಪ್ರಾಮುಖ್ಯ ಕೊಟ್ಟದ್ದೂ ಇದೆ.

ಎಲ್ಲಾ ಸೆಲೆಬ್ರಿಟಿಗಳಂತೆಯೇ ವಿವಾದಗಳು ಇವರನ್ನೂ ಸುತ್ತಿಕೊಂಡಿವೆ. ಜ್ಯಾಕ್ ನಿವೃತ್ತಿಯ ನಂತರ ಜಿಇ ಅಧೋಗತಿಯತ್ತ ಮುಖ ಮಾಡಲು ಜ್ಯಾಕ್ ತಂದ ಕೆಲವು ನೀತಿಗಳೇ ಕಾರಣ ಎನ್ನಲಾಗುತ್ತದೆ. ಆತನ ಕಾಲದಲ್ಲಿ ಉಚ್ಚಾçಯ ಸ್ಥಿತಿಯಲ್ಲಿದ್ದ ಜಿಇ ಇಂದು ಸಂಕಷ್ಟದಲ್ಲಿದೆ. ನಿವೃತ್ತಿಯ ನಂತರ ಲೇಖನ, ಪುಸ್ತಕ ಬರಹ, ಭಾಷಣ, ಬೋಧನೆಯಲ್ಲಿ ತೊಡಗಿಸಿಕೊಂಡ ಜ್ಯಾಕ್ ತನ್ನ ಪತ್ನಿ ಸೂಜಿ ವೆಲ್ಚ್ ಜೊತೆಗೂಡಿ ಸಾಕಷ್ಟು ಮ್ಯಾನೇಜ್ಮೆಂಟ್ ಕುರಿತಾದ ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮದೇ ಹೆಸರಿನ ಜ್ಯಾಕ್ ವೆಲ್ಚ್ ಮ್ಯಾನೇಜ್ಮೆಂಟ್ ಇನ್‌ಸ್ಟ್ಟಿಟ್ಯೂಟ್ ಮೂಲಕ ಎಮ್.ಬಿ.ಎ. ತರಗತಿಗಳನ್ನು ಕೂಡ ನಡೆಸಿದ್ದರು.

ಒಟ್ಟಿನಲ್ಲಿ ಜ್ಯಾಕ್ ವೆಲ್ಚ್ ಇತಿಹಾಸ ಕಂಡ ಒಬ್ಬ ಅಪ್ರತಿಮ ಕಾರ್ಪೋರೇಟ್ ಆಡಳಿತಗಾರ ಎಂಬುದರಲ್ಲಿ ಅನುಮಾನವಿಲ್ಲ ಎಂದು ನನ್ನ ವೈಯಕ್ತಿಕ ಅನುಭವದ ಹಿನ್ನೆಲೆಯಲ್ಲಿ ಹೇಳಬಲ್ಲೆ. ಆತನ ಸಾಕಷ್ಟು ತತ್ವಗಳು, ನನ್ನದೇ ದಾವಣಗೆರೆಯ ಯಾ ನಿಮ್ಮೂರಿನ ಸಣ್ಣ ಗೂಡಂಗಡಿಯವನು ಕಾಮನ್ ಸೆನ್ಸಿನಿಂದ ಅಳವಡಿಸಿಕೊಳ್ಳುವ ಸೂತ್ರಗಳೇ ಆಗಿದ್ದವು. ಇದು ಕೇವಲ ಅಂಗಡಿ ವ್ಯವಹಾರವಲ್ಲದೆ ನಮ್ಮದೇ ಮನೆ ನಡೆಸುವ ಬಾಬತ್ತಿನಿಂದಲೂ ಸತ್ಯ. ಕಾಮನ್‌ಸೆನ್ಸ್ ಎಂಬ ಸಾಮಾನ್ಯ ಜ್ಞಾನವನ್ನು ಸಾಮಾನ್ಯೀಕರಿಸುತ್ತ ಸಾಗಿದಷ್ಟೂ ನೀವು ನಾವೆಲ್ಲರೂ ಜ್ಯಾಕ್ ವೆಲ್ಚ್ ಆಗುತ್ತೇವೆ.

ಪ್ರಾಯಶಃ ಆತನನ್ನು ಟೀಕಿಸುವವರ ನಿಲುವೂ ಅವನ ಸಾಧನೆಯಲ್ಲಿ ಗಹನವಾದುದೇನೂ ಇಲ್ಲದೆ ಅದು ಕೇವಲ ಕಾಮನ್‌ಸೆನ್ಸ್ ಆಗಿತ್ತು ಎಂಬುದೇ ಆಗಿದೆಯೇನೋ! ಆದರೆ ಸಾಮಾನ್ಯ ಜ್ಞಾನವನ್ನು ಅಸಾಮಾನ್ಯವಾಗಿ ಬಳಸುವ ಛಾತಿ ಕೆಲವೇ ಕೆಲವು ಸಾಮಾನ್ಯರಲ್ಲಿರುವುದರಿಂದಲೇ ಹೈಸ್ಕೂಲಿಗೆ ಶರಣು ಹೊಡೆದ/ಹೊಡೆದಿದ್ದ ರಿಲೈಯನ್ಸ್ ನ ಧೀರೂಬಾಯಿ ಅಂಬಾನಿ, ಒರಾಕಲ್‌ನ ಲ್ಯಾರಿ ಎಲ್ಲಿಸನ್, ಮೈಕ್ರೊಸಾಫ್ಇನ ಬಿಲ್ ಗೇಟ್ಸ್ ಅಲ್ಲದೇ ನಮ್ಮ ನಿಮ್ಮೂರಿನ ಶೈಕ್ಷಣಿಕ ಸಾಧನೆಯಿರದ ಅನೇಕ ಉದ್ದಿಮೆದಾರರು ಯಶಸ್ವಿಯಾಗಿದ್ದಾರೆ ಎಂದೇ ನನ್ನ ಅನಿಸಿಕೆ.

ನಮ್ಮ ಮೆದುಳಿನ ಕಲ್ಪನೆಯ ಆಲೋಚನೆಗಳಿಗೆ ವಾಸ್ತವಿಕ ಹಿನ್ನೆಲೆಯಲ್ಲಿ ನಮ್ಮ ನಾಲಿಗೆ ಸ್ಪಂದಿಸುತ್ತಾ ಸಾಗಿದರೆ ಅದು ಸಂಯೋಜಿತ ಸಂಗೀತ (ಸಿಂಕ್ರೊನೈಸ್ಡ್ ಸಿಂಫೊನಿ); ಇಲ್ಲದಿದ್ದರೆ ಅದು ಉಗ್ಗುವಿಕೆ ಎಂಬ ಜ್ಯಾಕ್‌ನ ತಾಯಿಯ ಪ್ರೊತ್ಸಾಹದ ಮಾತಿನ ಅಂತರಾಳದ ಅಂತಃಸ್ಸತ್ವವೇನೋ!

Leave a Reply

Your email address will not be published.