ಅಫಘಾನಿಸ್ತಾನದ ಸಮಾಜವಾದಿ ಕನಸು: ಭರವಸೆಯ ಬೇರು ಕಿತ್ತ ಅಮೆರಿಕ

ಮೆರಿಲಿನ್ ಬೆಚಿಲ್

ಅಮೆರಿಕದಪೀಪಲ್ಸ್ ವಲ್ರ್ಡ್ಆನ್ಲೈನ್ ಪತ್ರಿಕೆ 2001ರಲ್ಲಿ ಪ್ರಕಟಿಸಿದ ಒಂದು ಲೇಖನವನ್ನು ಈಗ ಮತ್ತೊಮ್ಮೆ ಪ್ರಕಟಿಸಿದೆ. ಅಮೆರಿಕದ ಸಿಟ್ಟು ಕೇವಲ 9/11 ಭಯೋತ್ಪಾದಕ ದಾಳಿಯಿಂದ ಹುಟ್ಟಿಕೊಂಡಿದ್ದಲ್ಲ. ಬದಲಾಗಿ ಅದರ ಯುದ್ಧದ ಬೇರು ಕಮ್ಯುನಿಸಮ್ ವಿರುದ್ಧದ ಶೀತಲ ಸಮರದ ತನಕವೂ ಚಾಚಿಕೊಂಡಿದೆ.

ಸುಮಾರು 83 ವರ್ಷಗಳ ಇತಿಹಾಸವನ್ನು ಹೊಂದಿರುವ ಅಮೆರಿಕದ ಪತ್ರಿಕೆ ಪೀಪಲ್ಸ್ ವಲ್ರ್ಡ್. ಸಮಾಜವಾದಿಗಳು, ಕಮ್ಯುನಿಸ್ಟ್ರು, ಕಾರ್ಮಿಕ ಚಳವಳಿಯಲ್ಲಿ ಸಕ್ರಿಯರಾಗಿದ್ದವರು ಪತ್ರಿಕೆಯ ಹಿನ್ನೆಲೆಯಲ್ಲಿದ್ದರು ಮತ್ತು ಈಗಲೂ ಇದ್ದಾರೆ. ಇದರ ಮೂಲ ಬೇರುಡೈಲಿ ವರ್ಕರ್ಆದರೂ ಅದಕ್ಕೆ ಕೆಲವು ಟೊಂಗೆರೆಂಬೆಗಳು ಬೆಳೆದು ಈಗ ಪೀಪಲ್ಸ್ ವಲ್ರ್ಡ್ ಆನ್ಲೈನ್ ಪತ್ರಿಕೆಯಾಗಿ ಪ್ರಸಾರವಾಗುತ್ತಿದೆ. ಈಗಲೂ ಜೀವಪರವಾದ ಕಳಕಳಿಯನ್ನು ಹೊಂದಿರುವ ಪತ್ರಿಕೆಗೆ ಅಮೆರಿಕದಲ್ಲಿ ದೊಡ್ಡ ಮಾನ್ಯತೆ ಇದೆ.

ಪತ್ರಿಕೆ 2001ರಲ್ಲಿ ಪ್ರಕಟಿಸಿದ ಒಂದು ಲೇಖನವನ್ನು ಈಗ ಮತ್ತೊಮ್ಮೆ ಪ್ರಕಟಿಸಿದೆ. ಅದು ಮೊದಲ ಬಾರಿ ಪ್ರಕಟವಾಗಿದ್ದು ಅಫಘಾನಿಸ್ತಾನದಲ್ಲಿ ಅಮೆರಿಕ ಯುದ್ಧವನ್ನು ಸಾರುವುದಕ್ಕೆ ಕೇವಲ ಒಂದು ದಿನ ಮುಂಚೆ. ಅಂದರೆ 2001 ಅಕ್ಟೋಬರ್ ಆರರಂದು. ದಾವಾನಲದಲ್ಲಿ ತಾಲಿಬಾನಿಗಳ ರಣಕೇಕೆ ಮುಗಿಲು ಮುಟ್ಟಿ, ಈಗ ಕದನಗ್ರಸ್ತ ಭೂಮಿಯಿಂದ ಅಮೆರಿಕದ ಪಡೆಗಳು ಮರಳಿ ಹೊರಟಾಗ ಮತ್ತೊಮ್ಮೆ ಇದೇ ಲೇಖನವನ್ನು ಪ್ರಕಟಪಡಿಸಿದೆ. ಲೇಖನವನ್ನು ಬರೆದವರು ಪೀಪಲ್ಸ್ ವಲ್ರ್ಡ್ ಈಗಿನ ವರದಿಗಾರರಾದ ಮೆರಿಲಿನ್ ಬೆಚಿಲ್. ಆಗ ನ್ಯೂ ವಲ್ರ್ಡ್ ರಿವ್ಯೂ ದ್ವೈಮಾಸಿಕದ ಸಂಪಾದಕರಾಗಿದ್ದ ಈಕೆ ಎರಡು ಬಾರಿ (1980-81) ಅಫಘಾನಿಸ್ತಾನಕ್ಕೆ ಭೇಟಿ ಕೊಟ್ಟವರು. ಅಮೆರಿಕದ ಸಿಟ್ಟು ಕೇವಲ 9/11 ಭಯೋತ್ಪಾದಕ ದಾಳಿಯಿಂದ ಹುಟ್ಟಿಕೊಂಡಿದ್ದಲ್ಲ. ಬದಲಾಗಿ ಅದರ ಯುದ್ಧದ ಬೇರು ಕಮ್ಯುನಿಸಮ್ ವಿರುದ್ಧದ ಶೀತಲ ಸಮರದ ತನಕವೂ ಚಾಚಿಕೊಂಡಿದೆ ಎಂದು ಲೇಖನ ವಿಶ್ಲೇಷಣೆ ಮಾಡುತ್ತದೆ.

*

ವಿಶ್ವದ ಎದೆಯನ್ನೇ ಸೀಳಿದಂತಹ ಸೆಪ್ಟೆಂಬರ್ 11 ಘಟನೆಯ ಬಳಿಕ ಅಫಘಾನಿ ಜನರ ಶೋಚನೀಯ ಸ್ಥಿತಿಯ ಬಗ್ಗೆ ಮಾತನಾಡಿದವರಿಗೆ ಲೆಕ್ಕವಿಲ್ಲ. ಈಗ ಇದೇ ಜನ ದೇವಪ್ರಭುತ್ವದ, ಸರ್ವಾಧಿಕಾರಿ ತಾಲಿಬಾನಿಗಳ ರಕ್ಕಸ ಪಾದದಡಿ ಸಿಕ್ಕು ಪುಡಿಪುಡಿಯಾದಾಗ ಉಗುಳು ನುಂಗಿಕೊಳ್ಳಬೇಕಾಗಿ ಬಂದಿದೆ.

ಇಂತಹ ದೈವಸೈನಿಕರ ನೆಲದ ಬಗ್ಗೆ ಮಾತು ಬಂದಾಗಲೆಲ್ಲ ಸೋವಿಯತ್ ಒಕ್ಕೂಟ 1978ರಿಂದ 1989 ತನಕ ನಿರ್ವಹಿಸಿದ ಪಾತ್ರದ ಬಗ್ಗೆ ನಾಲಿಗೆ ಹೊರಳುತ್ತದೆ. ಹಾಗೆ ಹೊರಟ ಮಾತು ಬಹುತೇಕ ವಿರೂಪವೂ, ವಿಕೃತಿಯೂ ಆಗಿರುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹಾಗಂತ ತಾಲಿಬಾನಿಗಳೂ ಸೇರಿದಂತೆ ಮುಜಾಹಿದ್ದೀನ್ ಪಡೆಗಳ ರಟ್ಟೆಗೆ ಕಸುವು ತುಂಬಿದ ಅಮೆರಿಕದ ಪಾತ್ರದ ಬಗ್ಗೆ ಮಾತನಾಡಲು ಶುರುಮಾಡಿ? ಧ್ವನಿ ಸಂಪೂರ್ಣ ಗಂಟಲಲ್ಲಿ ಕುಂದಿ ಹೋಗುತ್ತದೆ.

ಆದರೆ ಇಟ್ಟ ಕಾಲುಗಳನ್ನು ಎತ್ತಲಾರದಷ್ಟು ಉಸುಕು ತುಂಬಿಕೊಂಡಿರುವ ಅಫಘನಿಸ್ತಾನವು ಮೊದಲೂ ಹೀಗೇ ಇತ್ತಾ? ಇಲ್ಲ. ಹಾಗಿದ್ದರೆ ಇಂತಹ ಶಹರಿಯನ್ನು ಕಟ್ಟಿದವರು ಯಾರು? 1970 ದಶಕದ ಕೊನೆಯ ಭಾಗ ಮತ್ತು 80 ದಶಕದಲ್ಲಿ ನಾಡನ್ನು ಕಟ್ಟಲು ಅಫಘನ್ ಜನರು ಪಟ್ಟ ಪಾಡಿನ ಬಗ್ಗೆ ಯಾರೂ ಮಾತೇ ಆಡುವುದಿಲ್ಲ. ಅವಿಚ್ಛಿನ್ನವಾಗಿ ಹೋರಾಡುತ್ತಲೇ ಇದ್ದ ಬುಡಕಟ್ಟು ಮತ್ತು ಊಳಿಗಮಾನ್ಯ ಹಿಡಿತದಿಂದ ನಾಡನ್ನು ಮುಕ್ತಗೊಳಿಸಿ ಆಧುನಿಕ ಪ್ರಜಾಸತ್ತಾತ್ಮಕ ರಾಷ್ಟ್ರವನ್ನು ಕಟ್ಟಿದವರ ಪಾಡು ದೊಡ್ಡದು ಅಥವಾ 1978ಕ್ಕೂ ಮುನ್ನ ಸೋವಿಯತ್ ರಷಿಯಾ ನಿರ್ವಹಿಸಿದ ಪಾತ್ರದ ಬಗ್ಗೆ ಯಾರೂ ಸೊಲ್ಲೆತ್ತುವುದಿಲ್ಲ.

ಈಗಿನ ಬಿಕ್ಕಟ್ಟಿಗೆ ಕಾರಣ ತಿಳಿಯಲು ಇತಿಹಾಸದ ಪುಟಗಳನ್ನು ನಾವು ತೆರೆದು ನೋಡಬೇಕಾಗುತ್ತದೆ. 19ನೇ ಶತಮಾನದ ಸಾಮ್ರಾಜ್ಯ ನಿರ್ಮಾತೃಗಳಿಗೆ ಅಫಘಾನಿಸ್ತಾನವು ನೆಲೆಯಾಗಿತ್ತು. ಇದಕ್ಕಾಗಿ ಪೈಪೋಟಿಗೆ ಇಳಿದಿದ್ದು ರಷಿಯಾ ಮತ್ತು ಬ್ರಿಟಿಷ್ ಚಕ್ರಾಧಿಪತ್ಯ. ಅಂತಿಮವಾಗಿ ಅಲ್ಲಿ ಅಧಿಕಾರಕ್ಕೆ ಬಂದವರು ತಕ್ಕಮಟ್ಟಿಗೆ ಬ್ರಿಟಿಷರಿಗೆ ತಲೆಬಾಗಿದರು ಕೂಡ.

ಅಫಘಾನಿಸ್ತಾನದಲ್ಲಿ 1921ರಲ್ಲಿ ಅಧಿಕಾರಕ್ಕೆ ಬಂದಿದ್ದು ಅಮಾನುಲ್ಲಾ ಖಾನ್. ಆತ ಸಾರ್ವಭೌಮತೆಯನ್ನು ಮರುಸ್ಥಾಪಿಸಿ ಅಭಿವೃದ್ಧಿಯಲ್ಲಿ ಅತ್ಯಂತ ತಳಮಟ್ಟದಲ್ಲಿದ್ದ ರಾಷ್ಟ್ರವನ್ನು ಆಧುನಿಕ ಜಗತ್ತಿನ ಕಡೆಗೆ ಕೊಂಡೊಯ್ಯುವ ಪ್ರಯತ್ನವನ್ನು ಮಾಡಿದ. ಇದರ ಫಲವಾಗಿ ಆತ ಕೈಜೋಡಿಸಿದ್ದು ಮಾಸ್ಕೊದಲ್ಲಿದ್ದ ಕ್ರಾಂತಿಕಾರಿ ಸರ್ಕಾರವನ್ನು. ಅದು ಅಫಘಾನಿಸ್ತಾನದ ಸ್ವಾತಂತ್ರ್ಯದ ಕನಸನ್ನು ನನಸು ಮಾಡಿತು. ಎರಡೂ ಸರ್ಕಾರಗಳು ಮೊಟ್ಟ ಮೊದಲ ಒಪ್ಪಂದಕ್ಕೆ ಸಹಿ ಹಾಕಿದವು. ಒಪ್ಪಂದವೇ ಮೊದಲ ಅಫಘನ್ಸೋವಿಂiÀiತ್ ಸ್ನೇಹ ಒಪ್ಪಂದ.

1921ರಿಂದ 29 ತನಕ ಎಲ್ಲವೂ ಸರಿಯಿತ್ತು. ದೇಶ ಪ್ರಗತಿಯತ್ತ ತೆವಳುವ ಪ್ರಯತ್ನ ಮಾಡಿತ್ತು. ಸೋವಿಯತ್ ನೆರವಿನಿಂದ ವಿತ್ತೀಯ ಮೂಲಸೌಕರ್ಯದ ಯೋಜನೆಗಳು ಅರಳತೊಡಗಿದ್ದವು. ದೇಶಕ್ಕೆ ಅತ್ಯಗತ್ಯವಾಗಿ ಬೇಕಾಗಿದ್ದ ವಿದ್ಯುತ್ ಸ್ಥಾವರಗಳು, ಜಲ ಸಂಪನ್ಮೂಲಗಳು, ಸಾರಿಗೆ, ಸಂಪರ್ಕ ವ್ಯವಸ್ಥೆಗಳು ಸ್ಥಾಪನೆಯಾಗಲು ಶುರುವಿಟ್ಟುಕೊಂಡವು. ಅಫಘನಿ ಮಕ್ಕಳು ತಾವೂ ಉನ್ನತ ಶಿಕ್ಷಣ ಪಡೆಯಬಹುದು ಎಂಬ ಕನಸನ್ನು ಕಂಡವು. ಅಂತಹ ಕನಸಿನ ಸಾವಿರಾರು ಮಕ್ಕಳು ಸೋವಿಯತ್ ತಾಂತ್ರಿಕ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳ ಮೆಟ್ಟಿಲುಗಳನ್ನು ಹತ್ತಿದರು. ಅವರ ಕಣ್ಣುಗಳಲ್ಲಿ ಭವಿಷ್ಯದ ಬೆಳಕು ಪ್ರಜ್ವಲಿಸಲು ಆರಂಭಿಸಿತ್ತು.

ಆದರೆ ಅಂತಹ ಪ್ರಗತಿಯನ್ನು ವಿರೋಧಿಸುವ ಶಕ್ತಿಗಳು ಮೊದಲ ಬಾರಿಗೆ ಹುಟ್ಟಿಕೊಂಡವು. ಅಂತಹ ಪ್ರತಿಗಾಮಿಗಳಿಗೆ ಬ್ರಿಟಿಷರು ತುಪ್ಪ ಸುರಿದಿದ್ದರಿಂದ ಅಮಾನುಲ್ಲಾ ಖಾನ್ ಅಧಿಕಾರವನ್ನು ತ್ಯಜಿಸುವುದು ಅನಿವಾರ್ಯವಾಯಿತು. ಖಾನ್ ಖಾಂದಾನ್ ಮುಗಿಯುತ್ತಲೇ ದೇಶದಲ್ಲಿ ನೆಲೆ ಕಾಣಲು ಆರಂಭಿಸಿದ್ದ ಯೋಜನೆಗಳು ಹಳ್ಳ ಹಿಡಿದವು. ಸೋವಿಯತ್ ಮತ್ತು ಅಫಘನ್ನರ ನಡುವಿನ ಸಂಬಂಧ ಮರುಸ್ಥಾಪನೆಗೊಳ್ಳಲು ಸಾಕಷ್ಟು ವರ್ಷವೇ ಬೇಕಾಯಿತು. ಅಜಮಾಸು ನಲವತ್ತು ವರ್ಷಗಳಷ್ಟು ಅಫಘನ್ ಹಿಂದಕ್ಕೆ ಹೋಯಿತು. ಅಭಿವೃದ್ಧಿ ಕೆಲಸಗಳಿಗೆ ಸೋವಿಯತ್ ಸಹಾಯ ಅನಿವಾರ್ಯವೆಂದು ಗೊತ್ತಾಗಿದ್ದು 1960 ದಶಕದಲ್ಲಿ. ಆಗಲೇ ದೇಶದ ಹೆಗ್ಗುರುತಿನಂತೆ ತಲೆ ಎತ್ತಿದ್ದು ಕಾಬೂಲ್ ಪಾಲಿಟೆಕ್ನಿಕ್ ಸಂಸ್ಥೆ. ಶಿಕ್ಷಣಕ್ಕಾಗಿ ತಹತಹಿಸುತ್ತಿದ್ದ ಅಲ್ಲಿನ ಕೆಲ ಯುವಕರು ದೇಶದಲ್ಲಿ ಭದ್ರವಾಗಿ ನೆಲೆಕಾಣಲು ಶೈಕ್ಷಣಿಕ ಸಂಪನ್ಮೂಲದ ಪ್ರಯೋಜನ ಪಡೆಯಲು ಮುಂದಾದರು. ಇದರಿಂದಾಗಿ ಅನೇಕ ಮಂದಿ ಎಂಜಿನಿಯರ್ಗಳು, ಭೂವಿಜ್ಞಾನಿಗಳು ಮತ್ತು ಇತರ ವಿಷಯಗಳ ತಜ್ಞರು ಹುಟ್ಟಿಕೊಳ್ಳಲು ಸಾಧ್ಯವಾಯಿತು.

ಅಭಿವೃದ್ಧಿಯ ಜಗತ್ತಿನ ಕಡೆಗೆ ಕಣ್ಣು ಪಿಳಿಪಿಳಿ ಮಾಡುತ್ತಿದ್ದ ದೇಶದಲ್ಲಿ ರಾಜಕೀಯ ಮತ್ತು ಸಾಮಾಜಿಕ ತುಮುಲಗಳು ಸಂಪೂರ್ಣವಾಗಿ ಕಡಿಮೆಯಾದವು ಅಂತೇನೂ ಅಲ್ಲ. ಆದರೆ ಇಂತಹ ಅಭಿವೃದ್ಧಿ ಕೆಲಸಗಳು ಅಂತಹ ತುಮುಲಕ್ಕೆ ತೇಪೆ ಹಚ್ಚುವ, ಪ್ರತಿರಕ್ಷಣೆಯಾಗಿ ನಿಲ್ಲಲು ಸಾಧ್ಯ ಮಾಡಿದವು. ರಷ್ಯಾ ಸಾಮ್ರಾಜ್ಯಶಾಹಿಯ ನೆಲದಲ್ಲಿ ಸಮ ಸಮಾಜವನ್ನು ಕಟ್ಟುವ ಬಹುದೊಡ್ಡ ಅನುಭವ ಸೋವಿಯತ್ ರಷಿಯಾಗೆ ಇತ್ತಲ್ಲ? ಅಂತಹ ಅನುಭವದ ಮೂಸೆಯಲ್ಲಿ ಅನೇಕ ಪ್ರಗತಿಪರ ಸೆಳೆವುಗಳು ಇಲ್ಲಿಯೂ ಕಾಣಿಸಿಕೊಂಡವು. 60 ದಶಕದ ಮಧ್ಯಭಾಗದಲ್ಲಿ ಅಫಘನ್ನಿನಲ್ಲಿ ಭಿನ್ನ ಭಿನ್ನವಾಗಿದ್ದ ರಾಷ್ಟ್ರೀಯ ಪ್ರಗತಿಪರ ಪ್ರವಾಹಗಳೆಲ್ಲ ಏಕವಾದವು. ಅದರ ಫಲವಾಗಿ ಜನ್ಮ ತಳೆದಿದ್ದು ಜನ ಪ್ರಜಾಸತ್ತಾತ್ಮಕ ಪಾರ್ಟಿ (ಪಿಡಿಪಿ).

1933ರಿಂದ ಮೊದಲ್ಗೊಂಡು ಸುಮಾರು 39 ವರ್ಷಗಳ ಕಾಲ ಇವೆಲ್ಲಕ್ಕೆ ಸಾಕ್ಷಿಯಾಗಿದ್ದ ದೊರೆ ಎಂದರೆ ಮೊಹಮ್ಮದ್ ಝಹೀರ್ ಶಾ. 1973ರಲ್ಲಿ ಸ್ಥಳೀಯ ಬೂಜ್ರ್ವಾ ಶಕ್ತಿಗಳು ಕೆಲವು ಪಿಡಿಪಿ ಶಕ್ತಿಗಳ ಸಹಾಯದೊಂದಿಗೆ ಶಾನನ್ನು ಕಿತ್ತೆಸೆಯುವಲ್ಲಿ ಯಶಸ್ಸು ಕಂಡವು. ಝಹೀರ್ ಅಫಘನಿಸ್ತಾನ ಕಂಡ ಕೊನೆಯ ದೊರೆ. ಆತ ಜೀವಂತ ಇರುವ ತನಕವೂ ಅಮೆರಿಕದ ಬಲಪಂಥೀಯ ಗಣತಂತ್ರವಾದಿಗಳು ಅಫಘನ್ನರನ್ನು ಮುಪ್ಪರಿದ ಜೀವದ ಅಡಿಯಲ್ಲಿ ಒಂದುಗೂಡಿಸುವ ಪ್ರಯತ್ನವನ್ನು ಚಾಲ್ತಿಯಲ್ಲಿ ಇಟ್ಟಿದ್ದರು.

1978ರಲ್ಲಿ ಪಿಡಿಪಿ ಅಧಿಕಾರಕ್ಕೆ ಬರಲು ಯಶಸ್ವಿಯಾಯಿತು. ಅಲ್ಲಿಂದಾಚೆಗೆ ಆರ್ಥಿಕ ಹಾಗೂ ಸಾಮಾಜಿಕ ಸಂಪನ್ಮೂಲಗಳನ್ನು ಸಮಾನವಾಗಿ ವಿತರಣೆ ಮಾಡುವ ಕಾರ್ಯಕ್ಕೆ ಚಾಲನೆ ದೊರೆಯಿತು. ಮುಖ್ಯವಾಗಿ ಕಾಲಾನುಕಾಲದಿಂದ ಹಳೆಯ ಬುಡಕಟ್ಟು ಸಂಪ್ರದಾಯದಲ್ಲಿ ಬಂದಿಯಾಗಿದ್ದ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಮುಕ್ತಗೊಳಿಸುವ ಕೆಲಸ ಮಾಡಬೇಕಾಗಿತ್ತು. ಪ್ರಕ್ರಿಯೆಯು ದೊರೆ ಝಹೀರ್ ಕಾಲದಲ್ಲಿಯೇ ಆರಂಭವಾಗಿತ್ತು. ದೇಶದಲ್ಲಿಯೇ ಅತ್ಯಂತ ತುಳಿತಕ್ಕೆ, ದೌರ್ಜನ್ಯಕ್ಕೆ ಒಳಗಾದ ಸಮುದಾಯ ಎಂದರೆ ಹಝರಾ. ಅವರೂ ಸೇರಿದಂತೆ ಅಲ್ಪಸಂಖ್ಯಾತರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸಬೇಕಾಗಿತ್ತು. ಅವೆಲ್ಲವೂ ಪಿಡಿಪಿ ಸರ್ಕಾರದಲ್ಲಿ ಮುಂಚೂಣಿಗೆ ಬಂದವು. ಸಾಮಾನ್ಯ ಜನರಿಗೂ ಶಿಕ್ಷಣ, ವೈದ್ಯಕೀಯ ಸೌಲಭ್ಯ, ತಕ್ಕಮಟ್ಟಿನ ವಸತಿ ಮತ್ತು ನೈರ್ಮಲ್ಯ ಒದಗಿಸುವ ಕಾರ್ಯಗಳಿಗೂ ಆದ್ಯತೆ ನೀಡಲಾಯಿತು.

1980-81ರಲ್ಲಿ ಸತತ ಎರಡು ವರ್ಷ ಕಾಲ ನಾನು ರಾಷ್ಟ್ರಕ್ಕೆ ಭೇಟಿ ನೀಡಿದ್ದೆ. ಆಗೆಲ್ಲ ಪ್ರಗತಿಯ ಚಿತ್ರ ಕಣ್ಣಿಗೆ ಕಾಣುತ್ತಿತ್ತು. ಮಹಿಳೆಯರೆಲ್ಲ ಕರಕುಶಲ ಸಹಕಾರಿ ಸಂಘಗಳಲ್ಲಿ ಜೊತೆಯಾಗಿ ಕೆಲಸ ಮಾಡುವುದನ್ನು ನಾನು ಕಂಡೆ. ಅವರಿಗೆ ಗೌರವಯುತವಾದ ವೇತನವನ್ನು ನೀಡಲಾಗುತ್ತಿತ್ತು. ತಾವು ಗಳಿಸಿದ್ದನ್ನು ಬಳಸುವಉಳಿಸುವ ಆಸೆ ಅವರ ಕಣ್ಣಿನಲ್ಲಿ ತುಳುಕಾಡುವುದನ್ನು ಕಂಡಿದ್ದೆ. ಮಹಿಳೆಯರು ಮತ್ತು ಪುರುಷರನ್ನು ಒಳಗೊಂಡಂತೆ ಹಿರಿಯರು ಸಾಕ್ಷರರಾಗಲು, ಓದುವುದನ್ನು ಕಲಿಯುತ್ತಿದ್ದರು. ಯುವತಿಯರು ವೃತ್ತಿಪರತೆಯನ್ನು ರೂಢಿಸಿಕೊಳ್ಳುತ್ತಿದ್ದರು.

ಅನೇಕರು ಸರ್ಕಾರದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಶಿಕ್ಷಣ ಸಚಿವ ಹುದ್ದೆಯನ್ನೂ ನಿಭಾಯಿಸುತ್ತಿದ್ದರು. ತಳಸಮುದಾಯದ ಜನ ಡಾಕ್ಟರ್ನ್ನು ಕಾಣುವ, ವೈದ್ಯಕೀಯ ಸೌಲಭ್ಯವನ್ನು ಪಡೆಯುವ ಮತ್ತು ತಮ್ಮ ಗಂಡುಹೆಣ್ಣು ಮಕ್ಕಳಿಬ್ಬರನ್ನೂ ಶಾಲೆಗೆ ಕಳಿಸುವಷ್ಟು ಶಕ್ತರಾಗಿದ್ದರು. ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡುವ ಉದಾತ್ತತೆ ಹೊಂದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಭೂಸುಧಾರಣೆಗೆ ಚಾಲನೆ ದೊರಕಿತ್ತು. ರೈತ ಸಹಕಾರಿ ಸಂಘಗಳು ತಲೆ ಎತ್ತಿದ್ದವು. ಜನ ಸೇವಿಸುತ್ತಿದ್ದ ಕೆಲವು ಮುಖ್ಯ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸುವ, ತಗ್ಗಿಸುವ ಪ್ರಯತ್ನಗಳು ಅನೂಚಾನವಾಗಿ ನಡೆದವು. ಅಲೆಮಾರಿಗಳಿಗೆ ಸೂರು ಒದಗಿಸುವ ಕೆಲಸಗಳು ಅಲ್ಲಲ್ಲಿ ನಡೆದವು. ಒಟ್ಟಾರೆ ತನ್ನದೇ ಸಂಪ್ರದಾಯ, ಕಟ್ಟುಕಟ್ಟಳೆ, ಕಟ್ಟರ್ ಇಸ್ಲಾಮ್ವಾದದ ಉಸುಕಿನಲ್ಲಿ ಹೂತುಹೋಗಿದ್ದ ಅಫಘನ್ ಜಗತ್ತಿನೆಡೆಗೆ ಕಣ್ತೆರೆಯಲು ಶುರುವಿಟ್ಟುಕೊಂಡಿತ್ತು.

ತಮ್ಮ ಹಳೆಯ ದಿನಗಳೆಲ್ಲ ಕಳೆದು ಹೋದವು ಎನ್ನುವ ರೀತಿಯಲ್ಲಿ ಮರುಭೂಮಿಯಲ್ಲಿ ಹೊಸ ಚಿಗುರುಗಳನ್ನು ಜನ ಕಾಣತೊಡಗಿದರು. 1978 ಬಳಿಕ ಸೋವಿಯತ್ ರಷಿಯಾದ ನೆರವಿನಲ್ಲಿ ಬಹುದೊಡ್ಡ ದೊಡ್ಡ ಆರ್ಥಿಕ ಹಾಗೂ ಸಾಮಾಜಿಕ ಯೋಜನೆಗಳು ಅಫಘನ್ ಕಡೆಗೆ ಬರಲು ಆರಂಭವಾದವು. ಅಫಘನ್ಸೋವಿಯತ್ ನಡುವಿನ ಹೊಸ ಒಪ್ಪಂದ ಇದಕ್ಕೆಲ್ಲ ನಾಂದಿಯಾಗಿತ್ತು. ಯೋಜನೆಗಳ ದೆಸೆಯಿಂದಾಗಿ ದೇಶದ ಮೂಲಸೌಕರ್ಯಗಳು ಕ್ರಮೇಣ ಸುಧಾರಿಸಿಕೊಂಡವು. ಗಣಿಗಾರಿಕೆ, ಆರೋಗ್ಯ ಸೇವೆಗಳು, ಶಿಕ್ಷಣ ಮತ್ತು ಕೃಷಿ ಯೋಜನೆಗಳು ಕೂಡ ಮೈಕೊಡವಿಕೊಂಡು ಎದ್ದು ನಿಂತವು.

ದಟ್ಟ ದಾರಿದ್ರ್ಯದಲ್ಲೂ ಬದುಕುತ್ತಿದ್ದ ಹಳ್ಳಿಗಾಡಿಗೂ ಮೂಲಸೌಕರ್ಯಗಳು ವಿಸ್ತರಿಸಿದವು. ಸೋವಿಯತ್ ರಷಿಯಾದ ಕಾರ್ಯಗಳು ಶ್ಲಾಘನೆಗೆ ಒಳಗಾದವು. ಇಂತಹ ಬೆಳವಣಿಗೆಯನ್ನು ಅಮೆರಿಕ ಮತ್ತು ಪಾಕಿಸ್ತಾನ ಕಿರುಗಣ್ಣಿನಿಂದ ನೋಡುತ್ತಿದ್ದವೇ? ಅವುಗಳಿಗೆ ಮೈಪರಚಿಕೊಳ್ಳುವಂತೆ ಮಾಡಿತ್ತೇ? ಇರಬಹುದು ಅನಿಸುತ್ತದೆ. ಇದರ ಸುಳಿವು ಪಿಡಿಪಿ ಸರ್ಕಾರಕ್ಕೆ ಸಿಕ್ಕ ಕಾರಣಕ್ಕೇ, ಅದರ ಕೋರಿಕೆಯ ಮೇರೆಗೇ 1978 ಡಿಸೆಂಬರ್ನಲ್ಲಿ ಸೋವಿಯತ್ ಪಡೆಗಳು ಅಫಘನ್ ನೆಲದಲ್ಲಿ ಬಂದಿಳಿದವು. ಹೊತ್ತಿಗೆಲ್ಲ ಅತಂತ್ರ ಸ್ಥಿತಿಯಲ್ಲಿದ್ದ ಬುಡಕಟ್ಟುದೈವಸೈನಿಕರಿಗೆ ಅಮೆರಿಕ ಮತ್ತು ಪಾಕಿಸ್ತಾನ ಬೆಂಬಲವಾಗಿ ನಿಂತಿದ್ದವು. ಉದ್ದಾನುದ್ದನೆಯ ಬಂದೂಕುಗಳು ಪಾಕಿಸ್ತಾನದ ಗಡಿಯ ಕಳ್ಳಹಾದಿಯ ಮೂಲಕ ಒಳಬಂದವು. ಹೀಗೆ ಶಸ್ತ್ರಸಜ್ಜಿತರಾಗುತ್ತ ಘೇರಾಯಿಸಲು ಹೊರಟ ದೈವಸೈನಿಕರ ಎದುರಿಗೆ ಬಂದು ನಿಂತಿದ್ದು ಸೋವಿಯತ್ ಪಡೆಗಳು….

ಅಲ್ಲಿಂದ ಮುಂದೇನಾಯಿತು ಎಂಬುದು ಇತಿಹಾಸ. 1989 ತನಕವೂ ಸೋವಿಯತ್ ಪಡೆಗಳು ದೈವ ಸೈನಿಕರ ಎದೆಗೆ ಎದೆಕೊಟ್ಟು ನಿಂತವು ಎನ್ನುವುದು ಸತ್ಯ. ಪಿಡಿಪಿ ಸರ್ಕಾರಕ್ಕಂತೂ ಕೋಟೆಯಂತೆ ನಿಂತು ಬೆಂಬಲ ಕೊಟ್ಟವು. ಇಡೀ ಜಗತ್ತಿನಲ್ಲಿ ಎಂತಹ ಸವಾಲು ಬಂದರೂ ಅದನ್ನು ದಿಟ್ಟವಾಗಿ ಎದುರಿಸುವ ತಾಕತ್ತು ಇದ್ದಿದ್ದು ರಷಿಯಾದ ಪಡೆಗಳಿಗೆ ಮಾತ್ರ. ಅಮೆರಿಕದಂತಹ ಬಲಿಷ್ಠ ರಾಷ್ಟ್ರಕ್ಕೆ ಇದ್ದ ಅಂಜಿಕೆಯೂ ಅದೇ ಆಗಿತ್ತು. ಆದರೆ ರಷಿಯಾದ ಕಮ್ಯುನಿಸ್ಟ್ ಕೋಟೆಯಲ್ಲೂ ಕಾಣಿಸಿಕೊಂಡ ಸಣ್ಣ ಸಣ್ಣ ಬಿರುಕುಗಳು ದೊಡ್ಡದಾಗುತ್ತ ಹೋದಾಗ ಮುಸಿಮುಸಿ ನಕ್ಕಿದ್ದು ಅಮೆರಿಕ ಎನ್ನುವುದರಲ್ಲಿ ಯಾವ ಅನುಮಾನವೂ ಇರಲಿಲ್ಲ.

ಸೋವಿಯತ್ ಪಡೆಗಳ ನಿರ್ಗಮನದ ಬಳಿಕವೂ ಏಗಿಕೊಂಡು, ತೆವಳಿಕೊಂಡು, ಏದುಸಿರು ಬಿಡುತ್ತಾ ಪಿಡಿಪಿ ಸರ್ಕಾರ ನಡೆದಿತ್ತು. ಅದಾದ ಬಳಿಕವೂ ಮೂರು ವರ್ಷಗಳ ಕಾಲ ಹಾಗೂ ಹೀಗೂ ಅಧಿಕಾರ ನಡೆಸಿತು.

ಇಂದು ಛಿದ್ರವಾಗಿರುವ ಮತ್ತು ರಕ್ತಸಿಕ್ತವಾಗಿರುವ ಅಫಘಾನಿಸ್ತಾನದ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಮಾನವೀಯತೆಯ ಬೀಜಗಳು ಮತ್ತೆ ಮೊಳೆಯುತ್ತವೆ ಎಂಬ ಆಕಾಂಕ್ಷೆ ನಾಡಿನ ಜನರ ಹೃದಯಗಳಲ್ಲಿ ಈಗಲೂ ಸ್ಥಾಯಿಯಾಗಿದೆ. ಪ್ರತೀಕಾರವಲ್ಲ, ಆರ್ಥಿಕ ಮತ್ತು ಸಾಮಾಜಿಕ ನ್ಯಾಂಕ್ಕಾಗಿ ಹೋರಾಡುತ್ತಿರುವ ಜಗತ್ತಿನಲ್ಲಿ ಮಾನವೀಯ ಕಳಕಳಿಯ ಮೇಲೆ ಹೊದೆಸಿದ್ದ ಪರದೆಯೂ ಸರಿಯುತ್ತದೆ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

Leave a Reply

Your email address will not be published.