ಅಫ್ಗಾನಿಸ್ತಾನ: ತಾಲಿಬಾನ್ ತೆಕ್ಕೆಗೆ ಮರಳುವುದೇ?

ಸುಧೀಂದ್ರ ಬುಧ್ಯ

ಅಫ್ಗಾನಿಸ್ತಾನದಲ್ಲಿ ಸಂಘರ್ಷ ಹೊಸ ವಿದ್ಯಮಾನವೇನಲ್ಲ. ಅರಾಜಕತೆ ಮತ್ತು ಅಸ್ಥಿರತೆ ದೇಶದ ಮುಖ್ಯ ಚಹರೆ. ಅದಕ್ಕೆ ಕಾರಣಗಳು ಹಲವು.

ಅಫ್ಗಾನಿಸ್ತಾನ ಮತ್ತೊಮ್ಮೆ ಪ್ರಮುಖ ತಿರುವಿನ ಎದುರು ನಿಂತಿದೆ. ರಾಷ್ಟ್ರದ ಭವಿಷ್ಯ ಹೇಗಿದ್ದೀತು ಎಂಬ ಪ್ರಶ್ನೆಗೆ ನಾಲ್ಕಾರು ಉತ್ತರಗಳು ಕೇಳಿ ಬರುತ್ತಿವೆ. ಕುರಿತು ಅಲ್ಲಿನ ಸ್ಥಳೀಯರಿಗೂ ಸ್ಪಷ್ಟತೆಯಿಲ್ಲ. ಹಿರಿಯಣ್ಣ ಅಮೆರಿಕಕ್ಕೆ ತಾನು ಅಲ್ಲಿಂದ ಕಾಲ್ತೆಗೆದರೆ ಸಾಕಾಗಿದೆ. ನೆರೆಹೊರೆಯ ರಾಷ್ಟ್ರಗಳು ಗೊಂದಲಕ್ಕೀಡಾಗಿವೆ. ದಿನೇ ದಿನೇ ಸಂಘರ್ಷಗಳು ಹೆಚ್ಚುತ್ತಿವೆ. ಅಮೆರಿಕದ ಸೇನೆ ತೆರವು ಮಾಡಿದ ಸ್ಥಳಗಳಲ್ಲಿ ಮತೀಯವಾದಿಗಳು ತಮ್ಮ ಪತಾಕೆ ಹಾರಿಸುತ್ತಿದ್ದಾರೆ.

ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ಕಂದಹಾರ್ ರಾಯಭಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 50 ಸಿಬ್ಬಂದಿಯನ್ನು ಭದ್ರತೆಯ ಕಾರಣದಿಂದ ಭಾರತ ಇತ್ತೀಚೆಗೆ ವಾಪಾಸ್ಸು ಕರೆಸಿಕೊಂಡಿದೆ. `ಕಂದಹಾರ್ ಪಟ್ಟಣದ ಆಜುಬಾಜು ಘರ್ಷಣೆ ತೀವ್ರಗೊಂಡಿದೆ. ನಮ್ಮ ಜನರ ಭದ್ರತೆ ಮತ್ತು ಸುರಕ್ಷತೆ ನಮ್ಮ ಆದ್ಯತೆ. ಹಾಗಾಗಿ ಕ್ರಮ ಕೈಗೊಂಡಿದ್ದೇವೆ. ಪರಿಸ್ಥಿತಿ ತಹಬದಿಗೆ ಬಂದ ಬಳಿಕ ಪುನಃ ಪೂರ್ಣ ಪ್ರಮಾಣದಲ್ಲಿ ಕಚೇರಿ ಕಾರ್ಯನಿರ್ವಹಿಸಲಿದೆಎಂದು ಭಾರತದ ವಿದೇಶಾಂಗ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ ಅಲ್ಲಿ ಕೆಲಸ ಮಾಡುತ್ತಿರುವ ಭಾರತೀಯರಿಗೆ ಮತ್ತು ಭಾರತ ಮೂಲದ ಪ್ರವಾಸಿಗರಿಗೆ ಹೆಚ್ಚು ಜಾಗರೂಕವಾಗಿರುವಂತೆ ಮತ್ತು ಅನಗತ್ಯ ಪ್ರಯಾಣಗಳನ್ನು ರದ್ದು ಮಾಡುವಂತೆ ಎಚ್ಚರಿಸಿದೆ. ಬೆಳವಣಿಗೆಗಳು ಅಲ್ಲಿನ ಪರಿಸ್ಥಿತಿಯ ಬಗ್ಗೆ ದಿಗಿಲು ಹುಟ್ಟಿಸುತ್ತಿದೆ.

ಹಾಗಂತ, ಅಫ್ಗಾನಿಸ್ತಾನದಲ್ಲಿ ಸಂಘರ್ಷ ಹೊಸ ವಿದ್ಯಮಾನವೇನಲ್ಲ. ಅರಾಜಕತೆ ಮತ್ತು ಅಸ್ಥಿರತೆ ದೇಶದ ಮುಖ್ಯ ಚಹರೆ. ಅದಕ್ಕೆ ಕಾರಣಗಳು ಹಲವು ಇರಬಹುದು. ಐದು ದಶಕಗಳ ಹಿಂದೆ ಅಂದಿನ ಸೋವಿಯತ್ ಯೂನಿಯನ್ ಮಣಿಸಲು ಅಮೆರಿಕ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಡಾಲರ್ ಗಂಟಿನ ಜೊತೆ ಶಸ್ತ್ರಗಳ ಮೂಟೆ ಹೊತ್ತು ಅಫ್ಗಾನಿಸ್ತಾನಕ್ಕೆ ಕಾಲಿಟ್ಟಾಗಲೇ ಅದರ ಗ್ರಹಗತಿ ಕೆಟ್ಟಿತು. ಸೋವಿಯತ್ ಪಡೆಯ ವಿರುದ್ಧ ಹೋರಾಡಲು ಯುವಕರ ಕೈಗೆ ಬಂದೂಕನ್ನು ಕೊಟ್ಟು ಗೆರಿಲ್ಲಾ ಪಡೆಯನ್ನು ಅಮೆರಿಕ ಹುಟ್ಟುಹಾಕಿತು. ಸೋವಿಯತ್ ಅಲ್ಲಿಂದ ಕಾಲ್ತೆಗೆದ ಮೇಲೆ ಮತೀಯ ವಾದಿಗಳು ಆಡಳಿತದ ಚುಕ್ಕಾಣಿ ಹಿಡಿದರು. ಅಮೆರಿಕದಿಂದ ಸಾಮರಿಕ ತರಬೇತಿ ಪಡೆದವರು ಅಮೆರಿಕದ ವಿರುದ್ಧವೇ ತಿರುಗಿಬಿದ್ದರು. ಇದಕ್ಕೆ ಪಾಕಿಸ್ತಾನದ ಕುಮ್ಮಕ್ಕು ಇತ್ತು.

2001 ಸೆಪ್ಟೆಂಬರ್ 11ರಂದು ಲಾಡೆನ್ ಪಡೆ ಅಮೆರಿಕದ ಮೇಲೆ ನೇರವಾಗಿ ದಾಳಿ ನಡೆಸಿತು. ಇದರಿಂದ ಕೆರಳಿದ ಅಮೆರಿಕ, ಏಕಾಏಕಿ `ಭಯೋತ್ಪಾದನೆಯ ವಿರುದ್ಧ ಸಮರಸಾರಿತು. ಅಫ್ಗಾನಿಸ್ತಾನದ ಮೇಲೆ ದಾಳಿಯಾಯಿತು. ಕೆಲವು ವಾರಗಳಲ್ಲೇ ತಾಲಿಬಾನ್ ಆಡಳಿತವನ್ನು ಶರಣಾಗುವಂತೆ ಮಾಡುವಲ್ಲಿ ಅಮೆರಿಕ ಯಶಸ್ವಿಯಾಯಿತು. ಆದರೆ ಅಲ್ ಖೈದಾ ತನ್ನ ಕೇಂದ್ರವನ್ನು ನೆರೆಯ ಪಾಕಿಸ್ತಾನಕ್ಕೆ ಬದಲಿಸಿಕೊಂಡಿತು. ಇದರಿಂದ ಅಮೆರಿಕಕ್ಕೆ ಲಾಡೆನ್ ಹುಡುಕುವುದು ಸುಲಭವಾಗಲಿಲ್ಲ. ಹುಡುಕಾಟ ಬರೋಬ್ಬರಿ 10 ವರ್ಷಗಳವರೆಗೆ ನಡೆಯಿತು. ಕೊನೆಗೂ ಪಾಕಿಸ್ತಾನದಲ್ಲಿ ಆತ ಇದ್ದಾನೆ ಎಂಬ ಸುಳಿವನ್ನು ಪಡೆದ ಅಮೆರಿಕ ರಹಸ್ಯ ಯೋಜನೆಯೊಂದನ್ನು ರೂಪಿಸಿ ಆತನನ್ನು ಹತ್ಯೆ ಮಾಡಿತು. ಆದರೆ ಅಷ್ಟಕ್ಕೇ ಎಲ್ಲವೂ ಮುಗಿಯಲಿಲ್ಲ. ಅಫ್ಗಾನಿಸ್ತಾನದಲ್ಲಿ ದಂಗೆಗಳು ಆರಂಭವಾದವು. ಭಯೋತ್ಪಾದನೆಯ ಮೂಲೋತ್ಪಾಟನೆಯ ಜೊತೆಗೆ ಅಫ್ಗಾನಿಸ್ತಾನದಲ್ಲಿ ಸ್ಥಿರ ಸರ್ಕಾರ ಸ್ಥಾಪಿಸುವುದು ಅಮೆರಿಕದ ಆದ್ಯತೆಯಾಯಿತು. ಅಲ್ಲೂ ಅಮೆರಿಕ ತನ್ನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡಿತ್ತು. ಅಫ್ಗಾನಿಸ್ತಾನದಲ್ಲಿ ಸ್ಥಿರ ಸರ್ಕಾರ ಸ್ಥಾಪಿಸಿ ತನ್ನ ಪ್ರಭಾವ ಉಳಿಸಿಕೊಂಡರೆ ರಷ್ಯಾ ಮತ್ತು ಚೀನಾವನ್ನು ಕಟ್ಟಿಹಾಕಿದಂತೆ ಎಂಬ ಲೆಕ್ಕಾಚಾರ ಅಮೆರಿಕಕ್ಕಿತ್ತು.

ಹಾಗಾಗಿ ಲಾಡೆನ್ ಹತ್ಯೆಯ ಬಳಿಕವೂ ಅಫ್ಗಾನಿಸ್ತಾನದಲ್ಲಿ ಉಳಿದ ಅಮೆರಿಕದ ಸೇನೆ, ಅಫ್ಗಾನ್ ಸರ್ಕಾರಕ್ಕೆ ಆರ್ಥಿಕ ಶಕ್ತಿ ತುಂಬಿ, ಸೈನಿಕರನ್ನು ನೀಡಿ ತಾಲಿಬಾನ್ ದಂಗೆಕೋರರ ವಿರುದ್ಧ ಕಾರ್ಯಾಚರಣೆಗೆ ಪ್ರಚೋದಿಸಿತು. ಆದರೆ ಅಮೆರಿಕದಿಂದ ಹೆಚ್ಚಿನ ಹಣ ಬರುತ್ತಿದ್ದಂತೆ ಅಫ್ಗಾನ್ ಆಡಳಿತದ ಭ್ರಷ್ಟಾಚಾರ ಹೆಚ್ಚಿತು. ತಳವಿಲ್ಲದ ಪಾತ್ರೆಗೆ ಮೊಗೆಮೊಗೆದು ಅಮೆರಿಕ ಹಣವನ್ನು ಸುರಿಯುತ್ತಾ ನಿಡುಸುಯ್ದಿತು. ಉಗ್ರ ಸಂಘಟನೆಗಳು ಪಾಕಿಸ್ತಾನದ ಐಎಸ್ ತಾಳಕ್ಕೆ ಹೆಜ್ಜೆ ಹಾಕಿದವು. ಒಂದು ಹಂತದವರೆಗೆ ಅಲ್ ಖೈದಾ ನಿರ್ಮೂಲನೆ ಸಾಧ್ಯವಾಯಿತಾದರೂ, ರಕ್ತ ಬೀಜಾಸುರನಂತೆ ಇತರ ಹತ್ತಾರು ಸಂಘಟನೆಗಳು ಜನ್ಮ ತಳೆದವು. ಹಖಾನಿ ಉಗ್ರ ಜಾಲ ಉತ್ತರ ಪಾಕಿಸ್ತಾನದಲ್ಲಿ ನೆಲೆಯೂರಿ ನ್ಯಾಟೋ ಪಡೆಗಳ ಮೇಲೆ ದಾಳಿ ನಡೆಸಲು ಆರಂಭಿಸಿತು. ಇಷ್ಟಾಗುವ ಹೊತ್ತಿಗೆ ಅಮೆರಿಕದ ಆಡಳಿತಕ್ಕೆ ಅಫ್ಗಾನಿಸ್ತಾನದ ವಿಷಯ, ಇರುವೆ ಗೂಡಿನ ಮೇಲೆ ಕಾಲೂರಿ ಸಂಡಾಸಿಗೆ ಕೂತಂತೆ ಆಗಿತ್ತು. ಎದ್ದು ಓಡಲಾಗದು, ಕಚ್ಚಿಸಿಕೊಂಡು ಕೂರಲೂ ಆಗದು ಎನ್ನುವ ಪರಿಸ್ಥಿತಿ!

2016 ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹೊತ್ತಿಗೆ, ಅಮೆರಿಕದ ಅಫ್ಗಾನಿಸ್ತಾನ ನೀತಿ ಚರ್ಚೆಗೆ ಬಂತು. ಅದು ಚುನಾವಣೆಯ ವಿಷಯವೂ ಆಯಿತು. `ಅಮೆರಿಕ ಮೊದಲುಎಂಬ ತತ್ವವನ್ನು ಎತ್ತಿಹಿಡಿದಿದ್ದ ಟ್ರಂಪ್, ‘ಜಗತ್ತಿನ ಉಸಾಬರಿಯನ್ನು ಅಮೆರಿಕ ತಲೆಗೆಕಟ್ಟಿಕೊಂಡು ಸಾಕಷ್ಟು ಹಣ ಖರ್ಚು ಮಾಡುತ್ತಿದೆ, ಅದನ್ನು ತನ್ನ ದೇಶದಲ್ಲೇ ಉದ್ಯೋಗ, ಮೂಲಸೌಕರ್ಯ ಅಭಿವೃದ್ಧಿಗೆ ಬಳಸಬೇಕುಎಂದು ವಾದಿಸಿದರು. ಅಧಿಕಾರಕ್ಕೆ ಬಂದೊಡನೆ ಅಫ್ಗಾನಿಸ್ತಾನದಿಂದ ಅಮೆರಿಕದ ಸೇನೆಯನ್ನು ವಾಪಾಸ್ಸು ಕರೆಸಿಕೊಳ್ಳುವ ಆಶ್ವಾಸನೆಯನ್ನು ಟ್ರಂಪ್ ನೀಡಿದ್ದರು. ಆದರೆ ಅವರು ಶ್ವೇತಭವನ ಪ್ರವೇಶಿಸಿದ ಮೇಲೆ, ಅಫ್ಗಾನಿಸ್ತಾನ ತೊರೆಯುವುದು ಸುಲಭವಲ್ಲ ಎಂಬ ಸಂಗತಿ ಅರಿವಾಯಿತು. ಆದರೆ ತಮ್ಮ ಮಾತಿಗೆ ಜೋತುಬಿದ್ದಿದ್ದ ಟ್ರಂಪ್. ಅಫ್ಗಾನಿಸ್ತಾನದಿಂದ ಸೇನೆಯನ್ನು ವಾಪಾಸ್ಸು ಕರೆಸಿಕೊಳ್ಳುವ ಪ್ರಕ್ರಿಯೆಗೆ ಸಿದ್ಧತೆ ಆರಂಭಿಸಿದರು. ಎರಡು ದಶಕಗಳ ಬಳಿಕವೂ ಅಫ್ಗಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸಲು ಸಾಧ್ಯವಾಗದ್ದು ಏಕೆ ಎಂಬ ಕುರಿತ ಅವಲೋಕನ ಆರಂಭವಾಯಿತು.

ಅಫ್ಗಾನಿಸ್ತಾನದಲ್ಲಿ ಅಮೆರಿಕ ಸೇನೆಯ ನೇತೃತ್ವ ವಹಿಸಿದ್ದ ಜನರಲ್ ಜಾನ್ ನಿಕೋಲ್ಸನ್, `ಭಯೋತ್ಪಾದನೆಯ ವಿರುದ್ಧದ ಸಮರ ಇಷ್ಟುವರ್ಷಗಳ ಮೇಲೂ ತಾರ್ಕಿಕ ಅಂತ್ಯ ಕಾಣದಿರುವುದಕ್ಕೆ ಪಾಕಿಸ್ತಾನದ ಕಪಟ ನೀತಿಯೇ ಕಾರಣಎಂದು ನೇರವಾಗಿ ಹೇಳಿದ್ದರು. 2018ರಲ್ಲಿ ಅಫ್ಗಾನಿಸ್ತಾನದ ಕುರಿತಾಗಿ ವಿಶ್ವಸಂಸ್ಥೆಯಲ್ಲಿ ಚರ್ಚೆ ನಡೆದಾಗ, ಅಮೆರಿಕ ಪಾಕಿಸ್ತಾನದ ವಿರುದ್ಧ ಮಾತನಾಡಿತು. ಅಮೆರಿಕ ಮತ್ತು ಅಫ್ಗಾನಿಸ್ತಾನದ ರಾಯಭಾರಿಗಳು `ಭಯೋತ್ಪಾದನೆಯ ವಿಷಯದಲ್ಲಿ ಪಾಕಿಸ್ತಾನ ಕಠಿಣ ನಿಲುವು ಕೈಗೊಳ್ಳಬೇಕು ಮತ್ತು ದ್ವಿಮುಖ ನೀತಿಯನ್ನು ಕೈಬಿಡಬೇಕುಎಂದು ಒಕ್ಕೊರಲಿನಿಂದ ಆಗ್ರಹಿಸಿದ್ದರು. ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ಧೀನ್ ಕೂಡ ತಮ್ಮ ಮಾತು ಜೋಡಿಸಿದ್ದರು. `ಕಳೆದ 15 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಬರೋಬ್ಬರಿ 2.1 ಲಕ್ಷ ಕೋಟಿ ರೂಗಳನ್ನು ನೀಡಿದೆ. ಅದಕ್ಕೆ ಪ್ರತಿಯಾಗಿ ಅಮೆರಿಕಕ್ಕೆ ದೊರೆತಿರುವುದು ಕೇವಲ ವಂಚನೆ ಮತ್ತು ಸುಳ್ಳಿನ ಬಳುವಳಿ ಮಾತ್ರ. ಪಾಕಿಸ್ತಾನ ಉಗ್ರರ ಸ್ವರ್ಗವಾಗಿ ಮಾರ್ಪಟ್ಟಿದೆ. ಅಮೆರಿಕದ ನಾಯಕರನ್ನು ಮೂರ್ಖರು ಎಂದು ಪಾಕಿಸ್ತಾನ ಭಾವಿಸಿರುವಂತಿದೆ. ಇನ್ನು ಮುಂದೆ ಇದು ನಡೆಯದುಎಂಬ ಮಾತನ್ನು ಟ್ರಂಪ್ ಆಡಿದರು. ಇದಕ್ಕೆ ಅಮೆರಿಕದ ಹಲವು ಸಂಸದರು, ಡೆಮಾಕ್ರಟಿಕ್ ಪಕ್ಷದ ಮುಖಂಡರು ದನಿಗೂಡಿಸಿದ್ದರು.

ಮಾತಿಗೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ರಕ್ಷಣಾ ಮಂತ್ರಿ ಖ್ವಾಜಾ ಅಸೀಫ್ `ಮಿತ್ರ ರಾಷ್ಟ್ರದ ಕುರಿತು ಆಡುವ ಮಾತು ಇದಲ್ಲ. ಹಾಗಾಗಿ ಅಮೆರಿಕ ಮತ್ತು ಪಾಕಿಸ್ತಾನ ಮಿತ್ರ ರಾಷ್ಟ್ರಗಳಲ್ಲಎಂಬ ಹೇಳಿಕೆ ನೀಡಿದ್ದರು. ಒಂದು ಕಾಲದ ಮಿತ್ರರಾಷ್ಟ್ರಗಳ ನಡುವೆ ಅಫ್ಗಾನಿಸ್ತಾನದ ವಿಷಯ ವೈಮನಸ್ಯ ಮೂಡಿಸಿತ್ತು. ಅಫ್ಗಾನಿಸ್ತಾನದಲ್ಲಿ ರಾಜಕೀಯ ಸ್ಥಿರತೆ ಸ್ಥಾಪಿಸುವ ತನ್ನ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತಿರುವುದು ಪಾಕಿಸ್ತಾನದ ದ್ವಿಮುಖ ನೀತಿಯಿಂದ ಎಂಬುದು ಅಮೆರಿಕಕ್ಕೆ ಮನವರಿಕೆಯಾಯಿತು. ಆದರೆ ಪಾಕಿಸ್ತಾನದ ವಿಷಯದಲ್ಲಿ ಅಮೆರಿಕಕ್ಕೆ ಒಂದು ಅಸಹಾಯಕತೆ ಕಾಡುತ್ತಿತ್ತು. ಅಮೆರಿಕ ಮತ್ತು ನ್ಯಾಟೋ ಪಡೆ, ಅಫ್ಗಾನಿಸ್ತಾನದಲ್ಲಿ ಬೀಡು ಬಿಟ್ಟ ತನ್ನ ಸೈನಿಕರಿಗೆ ಅಗತ್ಯ ಸಾಮಾನು, ಸಲಕರಣೆ ಒದಗಿಸಲು ಪಾಕಿಸ್ತಾನದ ಮೂಲಕವೇ ಹಾದು ಹೋಗಬೇಕಿತ್ತು. ಅವಲಂಬನೆ ಅಮೆರಿಕ ತುಟಿಕಚ್ಚುವಂತೆ ಮಾಡಿತ್ತು.

`ಅಮೆರಿಕ ಮೊದಲುನೀತಿಗೆ ಆದ್ಯತೆ ನೀಡಿದ ಟ್ರಂಪ್, ಇನ್ನು ಅಫ್ಗಾನಿಸ್ತಾನದಲ್ಲಿರಲು ಯಾವುದೇ ಕಾರಣಗಳಿಲ್ಲ ಎಂದು ಘೋಷಿಸಿ, ಅಲ್ಲಿಂದ ಹೊರಬರುವ ಮಾರ್ಗ ಹುಡುಕಿದರು. 2018ರಲ್ಲಿ ತಾಲಿಬಾನ್ ಜೊತೆಗಿನ ಮಾತುಕತೆಗೆ ಚಾಲನೆಕೊಟ್ಟರು. 2020 ಫೆಬ್ರವರಿಯಲ್ಲಿ ಅಮೆರಿಕ ತಾಲಿಬಾನ್ ಜೊತೆ ಒಪ್ಪಂದ ಮಾಡಿಕೊಂಡಿತು. `ಅಮೆರಿಕವನ್ನು ಗುರಿಯಾಗಿಸಿಕೊಂಡ ಯಾವುದೇ ಬಗೆಯ ಭಯೋತ್ಪಾದನೆ ಚಟುವಟಿಕೆಗೆ ತಾಲಿಬಾನ್ ಬೆಂಬಲ ನೀಡದಿದ್ದರೆ, ಅಮೆರಿಕ ಅಫ್ಗಾನಿಸ್ತಾನವನ್ನು ಮೇ 1, 2021 ವೇಳೆಗೆ ಸಂಪೂರ್ಣವಾಗಿ ತೊರೆಯಲಿದೆಎಂಬುದು ಒಪ್ಪಂದದ ಸಾರಾಂಶ. ಕೊನೆಗೂ ಅಮೆರಿಕ ಯಾರೊಂದಿಗೆ ಕದನಕ್ಕೆ ಇಳಿದಿತ್ತೋ ಅವರೊಂದಿಗೆ ಕೈಕುಲುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು!

ಹಾಗಾದರೆ, ಅಮೆರಿಕ ತನಗೆ ಯಾವ ರೀತಿಯಲ್ಲೂ ಸಮಾನವಲ್ಲದ ತಾಲಿಬಾನ್ ಪಡೆಯನ್ನು ಎದುರಿಸಲು ಸಾಧ್ಯವಾಗಲಿಲ್ಲವೇ? ಅದಕ್ಕೆ ಕಾರಣಗಳು ಹಲವು. ಗೆರಿಲ್ಲಾ ಪಡೆಗಳ ವಿರುದ್ಧದ ಯುದ್ಧ, ರೂಢಿಗತ ಯುದ್ಧದಷ್ಟು ನೇರವಾಗಿ ಇರುವುದಿಲ್ಲ ಮತ್ತು ಸೋಲು ಗೆಲುವುಗಳ ಲೆಕ್ಕಾಚಾರ ಸುಲಭ ಅಲ್ಲ. ಸ್ಥಳೀಯರ ಮನಗೆಲ್ಲದೇ ತಾಲಿಬಾನ್ ನಂತಹ ಸಂಘಟನೆಯನ್ನು ಎದುರಿಸಲು ಯಾವುದೇ ವಿದೇಶಿ ಸೇನೆಗೆ ಸಾಧ್ಯವಿಲ್ಲ. ಅಲ್ಲಿನ ಜನ ತಾಲಿಬಾನ್ ಧೋರಣೆ, ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊಂದಿದ್ದರೂ, ಅಮೆರಿಕ ಮತ್ತು ಮಿತ್ರ ಪಡೆಗಳನ್ನು `ಹೊರಗಿನವರುಎಂದೇ ನೋಡಿದರು. ಇದು ಅಮೆರಿಕಕ್ಕೆ ಮನವರಿಕೆಯಾಗಲು ಬಹಳ ಸಮಯ ಹಿಡಿಯಿತು. ಜೊತೆಗೆ ತಾಲಿಬಾನಿಗೆ ಪಾಕಿಸ್ತಾನ ಬೆಂಬಲವಾಗಿ ನಿಂತಿದ್ದು, ಅಡಗುತಾಣ ಕಲ್ಪಿಸಿಕೊಟ್ಟಿದ್ದು ಮತ್ತು ಐಎಸ್ ಮೂಲಕ ತಾಲಿಬಾನ್ ಅಗತ್ಯಗಳನ್ನು ಪೂರೈಸಿದ್ದು ಅಮೆರಿಕದ ಯೋಜನೆಯನ್ನು ವಿಫಲಗೊಳಿಸಿತು.

ಮೊದಮೊದಲು ಟ್ರಂಪ್ ಅವರ ಅಫ್ಗಾನಿಸ್ತಾನ ನೀತಿಯನ್ನು ಮತ್ತು ಅಲ್ಲಿಂದ ಸೇನೆಯನ್ನು ಕರೆಸಿಕೊಳ್ಳುವ ನಿರ್ಧಾರವನ್ನು ವಿರೋಧಿಸಿದ್ದ ಹಾಲಿ ಅಧ್ಯಕ್ಷ ಜೋ ಬೈಡೆನ್, 2021 ಏಪ್ರಿಲ್ 14ರಂದು `ನರಕದ ಬಾಗಿಲಿನವೆರೆಗೂ ಲಾಡೆನ್ ಬೆನ್ನತ್ತದೇ ಬಿಡುವುದಿಲ್ಲ ಎಂದು ನಾವು 2001ರಲ್ಲಿ ಹೇಳಿದ್ದೆವು. ಅದನ್ನೇ ಮಾಡಿದೆವು. ಲಾಡೆನ್ ಹತ್ಯೆ ನಡೆದು ಇದೀಗ ಹತ್ತು ವರ್ಷ ಕಳೆದಿದೆ. ಅಫ್ಗಾನಿಸ್ತಾನದಲ್ಲಿ ಉಳಿಯಲು ನಮಗೆ ಸ್ಪಷ್ಟ ಕಾರಣಗಳು ಉಳಿದಿಲ್ಲ. ಯುದ್ಧಕ್ಕೆ ಅಂತ್ಯ ಹಾಡುತ್ತಿದ್ದೇವೆ. 9/11 ಘಟನೆಗೆ ವರ್ಷ 20 ತುಂಬುವುದರಿಂದ ಹೊತ್ತಿಗೆ ಅಮೆರಿಕದ ಸೇನೆ ಅಫ್ಗಾನಿಸ್ತಾನದಿಂದ ಹೊರಬೀಳಲಿದೆಎಂದು ಘೋಷಿಸಿದರು ಮತ್ತು ಪ್ರಕ್ರಿಯೆಗೆ ಚಾಲನೆಕೊಟ್ಟರು.

ಬಳಿಕ ಎಲ್ಲವೂ ಅಂದುಕೊಂಡಂತೆಯೇ ಆಗುತ್ತಿದೆ. ಅಮೆರಿಕದ ಸೇನೆ ಹಂತ ಹಂತವಾಗಿ ಹೊರಹೋಗುತ್ತಿದ್ದಂತೇ ಜಾಗವನ್ನು ತಾಲಿಬಾನ್ ಆಕ್ರಮಿಸಿಕೊಳ್ಳುತ್ತಿದೆ. ವಾಷಿಂಗ್ಟನ್ ಶೇಕಡ 90ರಷ್ಟು ಸೇನೆಯನ್ನು ಈಗಾಗಲೇ ವಾಪಾಸು ಕರೆಸಿಕೊಂಡಿರುವುದಾಗಿ ಹೇಳಿದೆ. ಅಫ್ಗಾನಿಸ್ತಾನದ ಶೇಕಡ 85ರಷ್ಟು ಪ್ರದೇಶ ತನ್ನ ಹಿಡಿತಕ್ಕೆ ಮರಳಿದೆ ಎಂದು ತಾಲಿಬಾನ್ ಹೇಳಿದೆ. ಹಾಗಾಗಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಅಮೆರಿಕದ ಸೇನೆ ಸಂಪೂರ್ಣವಾಗಿ ಅಫ್ಗಾನಿಸ್ತಾನ ತೊರೆದ ಮೇಲೆ, ತಾಲಿಬಾನ್ ಮತ್ತೊಮ್ಮೆ ಅಫ್ಗಾನಿಸ್ತಾನದ ಚುಕ್ಕಾಣಿ ಹಿಡಿಯುವ ಕುರಿತು ಅನುಮಾನಗಳು ಉಳಿದಿಲ್ಲ. ತಾಲಿಬಾನ್ ನಾಯಕರು ಕೂಡ ಬಗ್ಗೆ ಆಶಾವಾದದಿಂದ ಇದ್ದಾರೆ. ನಮ್ಮ ಆಡಳಿತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುತ್ತೇವೆ. ಭಯೋತ್ಪಾದಕ ಸಂಘಟನೆಗಳಿಗೆ ಆಸ್ಪದ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ಮತ್ತೊಬ್ಬರ ಕೈಗೊಂಬೆಯಾಗುವುದಿಲ್ಲ. ನಮ್ಮದೇ ಆದ ಸ್ವತಂತ್ರ ನೀತಿಯನ್ನು ಹೊಂದಿರುತ್ತೇವೆ ಪ್ರಾಂತೀಯ ಮತ್ತು ಅಂತರರಾಷ್ಟ್ರೀಯ ಆರ್ಥಿಕ ಸಹಭಾಗಿತ್ವಕ್ಕೆ ಎದುರು ನೋಡುತ್ತೇವೆ ಎಂಬ ಮಾತನ್ನು ತಾಲಿಬಾನ್ ನಾಯಕರು ಹೇಳಿರುವುದು ವರದಿಯಾಗಿದೆ. ಮಾತಿಗೆ ತಾಲಿಬಾನ್ ಬದ್ಧವಾದರೆ ಒಳಿತೇ, ಆದರೆ ತಾಲಿಬಾನ್ ತಾನು ಹೇಳಿದ್ದನ್ನು ಅನುಸರಿಸುತ್ತದೆ ಎಂದು ನಂಬುವುದು ಕಠಿಣವೇ.

ಅಫ್ಗಾನಿಸ್ತಾನ ತೊರೆಯುವ ಅಮೆರಿಕದ ನಿರ್ಧಾರ ಕುರಿತು ಬೀಜಿಂಗ್ ಮತ್ತು ಮಾಸ್ಕೊ ಇದುವರೆಗೆ ನೇರ ಪ್ರತಿಕ್ರಿಯೆ ನೀಡದಿದ್ದರೂ ತಮ್ಮ ಹಿತಾಸಕ್ತಿಗೆ ಪೂರಕವಾಗಿ ಕಾಯಿ ನಡೆಸಲು ಸಜ್ಜಾಗಿವೆ. 80 ದಶಕದಲ್ಲಿ ತನ್ನ ವಿರುದ್ಧ ಬಂಡುಕೋರರನ್ನು ಅಮೆರಿಕ ಬೆಳೆಸಿತ್ತು ಎಂಬುದು ರಷ್ಯಾಕ್ಕೆ ನೆನಪಿದೆ. ಬಂಡುಕೋರರು ಅಮೆರಿಕದ ಮೇಲೆರಗಿದಾಗ, ರಷ್ಯಾ ತಟಸ್ಥ ನೀತಿಗೆ ಶರಣಾಗಿತ್ತು. ಈಗ ತಾನು ಅಂದುಕೊಂಡದ್ದನ್ನು ಸಾಧಿಸಲು ಆಗದೇ, ಅಮೆರಿಕ ಕಾಲ್ತೆಗೆಯುತ್ತಿರುವ ಹೊತ್ತಿನಲ್ಲಿ ರಷ್ಯಾ ಒಳಗೊಳಗೇ ಸಂತಸ ಪಡುತ್ತಿರಬಹುದು. ಇನ್ನು, ಅಮೆರಿಕಕ್ಕೆ ಎಲ್ಲ ಅರ್ಥದಲ್ಲೂ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುತ್ತಿರುವ ಚೀನಾ, ಅಫ್ಗಾನಿಸ್ತಾನದ ವಿಷಯದಲ್ಲಿ ಅಮೆರಿಕದ ಅಸಹಾಯಕತೆ ಪರೋಕ್ಷವಾಗಿ ಕಾರಣವಾಗಿತ್ತು. ಈಗ ಪಾಕಿಸ್ತಾನದ ಜೊತೆ ಸೇರಿ ಅಫ್ಗಾನಿಸ್ತಾನದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದರೆ ಅಚ್ಚರಿಯಿಲ್ಲ.

ಅಮೆರಿಕದ ಸೇನೆ ಅಫ್ಗಾನಿಸ್ತಾನದಲ್ಲಿದ್ದಷ್ಟು ದಿನ, ಆರೋಗ್ಯ, ಶಿಕ್ಷಣ ಮತ್ತು ಮಹಿಳಾ ಹಕ್ಕುಗಳ ವಿಷಯದಲ್ಲಿ ಅಫ್ಗಾನಿಸ್ತಾನ ಮುಂದಡಿ ಇಟ್ಟಿತ್ತು. ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿತ್ತು. ಅಮೆರಿಕ ಸೇನೆ ಹೊರಹೋದ ಮೇಲೆ ಪರಿಸ್ಥಿತಿ ಬದಲಾಗಬಹುದು. ಅಫ್ಗಾನಿಸ್ತಾನ ಎರಡು ದಶಕಗಳಷ್ಟು ಹಿಂದಕ್ಕೆ ಮರಳಬಹುದು. ಇದು ಸ್ಥಳೀಯರ ದಿಗಿಲು.

ಭಾರತದ ದೃಷ್ಟಿಯಿಂದ ನೋಡಿದರೂ ಆತಂಕಕ್ಕೆ ಹಲವು ಕಾರಣಗಳಿವೆ. ಕಳೆದ ಒಂದು ದಶಕದ ಅವಧಿಯಲ್ಲಿ ಭಾರತ ಅಫ್ಗಾನಿಸ್ತಾನದ ಅಭಿವೃದ್ಧಿ ಯೋಜನೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿತ್ತು. ಶಾಲೆ, ಆಸ್ಪತ್ರೆ, ರಸ್ತೆ, ಸೇತುವೆ, ಅಣೆಕಟ್ಟು, ವಿದ್ಯುತ್ ಸರಬರಾಜು ಘಟಕಗಳು ಹೀಗೆ ಸುಮಾರು 400 ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ಭಾರತ ತೊಡಗಿಸಿಕೊಂಡಿತ್ತು. ಅಫ್ಗಾನಿಸ್ತಾನದ ಸಂಸತ್ ಭವನದ ನಿರ್ಮಾಣವನ್ನು ಭಾರತ ನಿರ್ವಹಿಸಿತ್ತು ಮತ್ತು ಅದರ ಉದ್ಘಾಟನೆಯನ್ನು ಪ್ರಧಾನಿ ಮೋದಿ ಮಾಡಿದ್ದರು. ಉಭಯ ರಾಷ್ಟ್ರಗಳ ನಡುವಿನ ವಾಣಿಜ್ಯ ಚಟುವಟಿಕೆಗಳು ಏರುಗತಿ ಕಂಡಿದ್ದವು. ತಾಲಿಬಾನ್ ಅವಧಿಯಲ್ಲಿ ಅಂತಹ ಪಾಲುದಾರಿಕೆಗೆ ತೊಡಕಾಗಬಹುದು.

ತಾಲಿಬಾನ್ ಅವಧಿಯಲ್ಲಿ ಭಾರತ ವಿರೋಧಿ ಉಗ್ರ ಸಂಘಟನೆಗಳು ತಮ್ಮ ಚಟುವಟಿಕೆಯನ್ನು ತೀವ್ರಗೊಳಿಸಬಹುದು. `ಭಾರತವನ್ನು ಎದುರಿಸುವ ಸಲುವಾಗಿಯೇ ತಾಲಿಬಾನನ್ನು ಐಎಸ್ ಪೆÇೀಷಿಸುತ್ತಿದೆಎಂದು ಹಿಂದೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದರು. ಪಾಕಿಸ್ತಾನ ಭಾಗದಿಂದಷ್ಟೇ ಅಲ್ಲದೇ ಅಫ್ಗಾನಿಸ್ತಾನವನ್ನು ನೆಲೆಯಾಗಿಸಿಕೊಂಡು ಉಗ್ರ ಸಂಘಟನೆಗಳು ಭಾರತದ ಮೇಲೆ ದಾಳಿಗೆ ಸಂಚು ರೂಪಿಸಬಹುದು. ನಿಟ್ಟಿನಲ್ಲಿ ಭಾರತ ಹೆಚ್ಚಿನ ಜಾಗರೂಕತೆ ವಹಿಸಬೇಕಾಗಬಹುದು. ಮುಖ್ಯವಾಗಿ, ಚೀನಾ ಮತ್ತು ಪಾಕಿಸ್ತಾನವನ್ನು ಗಮನದಲ್ಲಿಟ್ಟುಕೊಂಡು, ತನ್ನ ಸ್ವಹಿತಾಸಕ್ತಿಗೆ ಪೂರಕವಾಗಿ ನೂತನ ಅಫ್ಗಾನಿಸ್ತಾನ ನೀತಿಯನ್ನು ಭಾರತ ರೂಪಿಸಿಕೊಳ್ಳಲು ಇದು ಸಕಾಲ.

Leave a Reply

Your email address will not be published.