ಅಬ್ಬಾ… ಮರೆಯಲಾಗದ ಆ ದಿನಗಳು!

ಮಾದರ ಮರಿಯಪ್ಪ

ಈತನ ಹೆಸರು ಮಾದರ ಮರಿಯಪ್ಪ; ನಮ್ಮ ಮನೆಯ ಒಕ್ಕಲು ಮಾದ. ಈಗ ಸರಿಸುಮಾರಾಗಿ 89 ವರ್ಷ ವಯಸ್ಸಾಗಿರಬಹುದು. ಆತನನ್ನು ಮಾತನಾಡಿಸಿದಾಗ…

ಅಯ್ಯೋ ಮಾರಾಯ ಆಗಿನ ಪಡಿಪಾಟಲೇನು ಕೇಳುತ್ತೀಯಾ. ಆಗ ಒಂದೂ ದಾವಾಖಾನೆ ಇರಲಿಲ್ಲ. ನಮ್ಮೂರ ಪಂಡಿತರು ಗಿಡಮೂಲಿಕೆಗಳಿಂದ ತಯಾರಿಸಿದ ಗಾವುಟಿ ಔಷಧವೇ ನಮಗೆ ಗತಿಯಾಗಿತ್ತು. ಈ ಔಷಧದಿಂದ ರೋಗ ಗುಣವಾದರೆ ಗುಣ, ಇಲ್ಲದಿದ್ದರೆ ಇಲ್ಲ. ಅಂತೂ ಅದ್ಹೇಗೋ ಆ ಕಾಲದಲ್ಲಿ ಸಾಕಷ್ಟು ರೋಗ ರುಜಿನಗಳನ್ನು ಮೆಟ್ಟಿ ಬದುಕುಳಿದೆವು. ಇಂತಹ ಸಂದರ್ಭದಲ್ಲಿ ಊರಿಗೆ ಪ್ಲೇಗ್ ಬಂದಿತು ನೋಡು.

ಆಗ ದಿನಕ್ಕೆ ಎರಡೋ ಮೂರೋ ಹೆಣಗಳು ನಮ್ಮ 400 ಮನೆಗಳ ಊರಿನಲ್ಲಿ ಉರುಳುತ್ತಿದ್ದವು. ನಾವು ಅದ್ಹೇಗೋ ಆ ತಾಯಿ ದುರಗವ್ವಳ ದಯೆಯಿಂದ ಬದುಕುಳಿದೆವು ನೋಡು.

ಆಗ ಕಾಲಾರಾ, ಪ್ಲೇಗ್ ನಂತೆಯೇ ಇನ್ನೇನೋ ಮಾರಿಗಳು ಕಾಡಿದವು. ಆಗೆಲ್ಲಾ ನಾವು, ನಾವಷ್ಟೇಯಲ್ಲ, ಇಡೀ ಊರಿಗೆ ಊರೇ ಬಿಟ್ಟು ಜನರು ಮತ್ತೆಲ್ಲಿಗೋ ಹೋದರು. ಅವರು ಬದುಕುಳಿದರೋ ಇಲ್ಲವೋ ನನಗಂತೂ ಗೊತ್ತೇ ಆಗಲಿಲ್ಲ.


ಬ್ರಾಹ್ಮಣರ ಹವಳಾಚಾರಿ

ಆತನ ಹೆಸರು ಹವಳಾಚಾರಿ. ಆ ಊರಿಗೆ ಇವನೊಬ್ಬನೇ ಕಲಿತವನು ಆಗ. ಈತನು ನೋಡುವಾಗ ಮತ್ತು ನಡೆಯುವಾಗ ತಡವರಿಸುತ್ತಿದ್ದರಿಂದ ಜನರು ಈತನನ್ನು ಕುಲ್ಡ್ ಹವಳಾಚಾರಿ ಅಂತಲೇ ಕರೆಯುತ್ತಿದ್ದರು. ಈತ ಹೇಳುತ್ತಾನೆ ಕೇಳಿ… ಕಾಲರಾದ ಕಥೆಯ:

ಈಗ ನನಗೆ 96 ಅಥವಾ 97 ವರ್ಷ ವಯಸ್ಸಿರಬಹುದು. ನಮ್ಮೂರು ಗದಗ ಜಿಲ್ಲೆಯ ಬೆಳವಣಿಕಿ ಎಂಬ ಗ್ರಾಮ. ಅಲ್ಲಿಂದ ಕಬ್ಬೂರಿಗೆ ವರ್ಗವಾಗಿ ಬಂದೆನು. ಇಲ್ಲಿಂದ ನಜೀಕಲಕಮಾಪುರ, ಕುಳೇನೂರು, ಬೆನಕನಹಳ್ಳಿ ಮತ್ತೆಲ್ಲೆಲ್ಲಿಗೋ ವರ್ಗವಾಗಿ ಹೋದೆ. ಅದು ಇರಲಿ.

ಮಾರಾಯರೇ ನಾನು ಬೆನಕನಹಳ್ಳಿಗೆ ವರ್ಗಾವಣೆಯಾದಾಗ ಒಂದೊಂದು ಚಿತ್ರ-ವಿಚಿತ್ರ ಘಟನೆಗಳು ಸಂಭವಿಸಿದವು. ಆಗ ‘ಕಾಲರಾ’ ಹಬ್ಬಿತ್ತು. ಸಿಗುವ ಔಷಧವಂತೂ ದೇವರಿಗೇ ಪ್ರೀತಿ, ಹಾಗಿತ್ತು ಆಗಿನ ಔಷಧಿ. ಅಂತಹ ಸಂದರ್ಭದಲ್ಲಿ ಕಾಲರಾ ಹಬ್ಬಿ ಗ್ರಾಮಕ್ಕೆ ಗ್ರಾಮವೇ ತಬ್ಬಿಬ್ಬು ಆಗಿತ್ತು. ಗ್ರಾಮದಲ್ಲಿ ದಿನವೊಂದಕ್ಕೆ ಮೂರ್ನಾಲ್ಕು ಹೆಣಗಳು ಉರುಳುತ್ತಿದ್ದವು. ಆಗ ಆ ಊರಿನಲ್ಲಿ ನಮ್ಮ ಕುಲಕರ್ಣಿ ತಮ್ಮಣ್ಣನೇ ಆಯುರ್ವೇದಿಕ್ ಔಷಧ ಕೊಡುತ್ತಿದ್ದನು. ಆಗ ಆತನೇ ಕಾಲರಾಕ್ಕೂ ಕೊಡಲಾರಂಭಿಸಿದನು. ನಾನಂತೂ ಈತ ಕೊಟ್ಟ ಔಷಧದಿಂದಲೇ ಏನೋ ಹೇಗೋ, ಅಂತೂ ಬದುಕುಳಿದೆ. ನನಗೆ ಆಗ 17-18 ವರ್ಷ ವಯಸ್ಸು ಇರಬಹುದು.


ಹೊಸಮನಿ ಫಕ್ಕೀರಪ್ಪ

ಫಕ್ಕೀರಪ್ಪನೂ ಊರಿನ ರೈತಾಪಿ. ಈತನಿಗೀಗ 79 ಅಥವಾ 80 ವರ್ಷ ವಯಸ್ಸು. ಈತನೂ ಸ್ವಲ್ಪ ಓದಿದವನು. ಅಂದರೆ ಒಂಬತ್ತು ಮುಗಿಯುತ್ತಿದ್ದಂತೆ ‘ಕಮತ’ ಅಂದರೆ ಹೊಲ ಉಳಲು ಹತ್ತಿದವನು.  ಈತನನ್ನು ಮಾತಾಡಿಸಿದಾಗ ಹೇಳಿದ, ಆ ಕಾಲದ ರೋಗಗಳ ಬಗೆಗೆ…

ಆ ಸಮಯದಲ್ಲಿಯೂ ನೆಗಡಿ, ಕೆಮ್ಮು, ಜ್ವರ ಇತ್ಯಾದಿ ರೋಗಗಳು ಸಾಮಾನ್ಯವಾಗಿದ್ದವು. ಇಂತಹ ಸಂದರ್ಭದಲ್ಲಿ ಜನರು ಅದೆಷ್ಟು ಮೂಢನಂಬಿಕೆಯಲ್ಲಿ ಇದ್ದರೆಂದರೆ ಕೆಮ್ಮು, ಜ್ವರ ಇತ್ಯಾದಿ ಜಡ್ಡುಗಳು ಬಂದರೆ ಗಾಳೆವ್ವ, ದುರುಗವ್ವ, ಕೆಂಪವ್ವ, ಮಾರೆವ್ವನಿಗೆ ಉಪ್ಪು, ಹುಣಸೆ ಇತ್ಯಾದಿ ಅರ್ಪಿಸುತ್ತಿದ್ದರು. ಇದರಿಂದ ಆ ಜಡ್ಡು ವಾಸಿಯಾಗುತ್ತದೆ ಅಂತ ತಿಳಿದಿದ್ದರು. ಸಿರ್ಸಿ ಮಾರೆವ್ವ, ಕೆಂಗೊಂಡ ದುರುಗವ್ವ, ಮಲ್ಲರು ಮಾದೇವಿಗೆ ವರ್ಷಕ್ಕೊಮ್ಮೆ ಹೋಗಿ ನಮಗ್ಯಾವ ಈ ಜಡ್ಡುಗಳು ಬಾರದಿರಲಿ ಎಂದು ಬೇಡಿಕೊಂಡು ಬರುತ್ತಿದ್ದರು.

ಹೀಗೆಯೇ ಒಮ್ಮೆ ಪ್ಲೇಗ್ ಬಂದಿತು ನೋಡಿ. ಆಗ ಊರಲ್ಲಿ ಸಾಯುವವರಿಗೆ ಲೆಕ್ಕವಿರಲಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಜನರು ಬೇಡಿಕೊಳ್ಳದೇ ಇರದ ದೇವರಿರಲಿಲ್ಲ. ಈಗ ಬಂದಂತಹ ರೋಗ ನಮ್ಮನ್ನು ಕಾಡದಿರಲಿ ಅಂತ ಪರಿಪರಿಯಾಗಿ ವಿವಿಧ ದೇವರ ಮೊರೆ ಹೋದರು, ಕಾಡಿಬೇಡಿಕೊಂಡರು. ಆದರೂ ಈ ಪ್ಲೇಗ್ ನಿಯಂತ್ರಣಕ್ಕೆ ಬರಲಿಲ್ಲ. ಅಷ್ಟೊಂದು ದೇವರಿಗೆ ಸೇವೆ ಸಲ್ಲಿಸಿದರೂ ಈ ಪ್ಲೇಗ್ ಹಾವಳಿ ತಪ್ಪಲಿಲ್ಲ.

ಪ್ಲೇಗ್ ನಂತೆಯೇ ಕಣ್ಣುಬೇನೆ ಬಂದರೆ (ಕಣ್ಣಿನಲ್ಲಿ ಕೀವುದಂತ ಬೇನೆ) ಅವರನ್ನು ಹಿತ್ತಲಲ್ಲಿ ಕೂಡಿಸುತ್ತಿದ್ದರು. ಒಂದಿಷ್ಟು ಹುಲ್ಲುಕಡ್ಡಿಯನ್ನು ಕೈಯಲ್ಲಿ ಹಿಡಿದು ಜರಡಿಯನ್ನು ಕಣ್ಣುಬೇನೆ ಬಂದವರ ಕಣ್ಣಿನ ಎದುರು ಹಿಡಿದು ದೀಪ ಹಚ್ಚುತ್ತಿದ್ದರು. ಆ ದೀಪದಲ್ಲಿ ಹುಲ್ಲುಕಡ್ಡಿ ಸುಟ್ಟು ಅದರ ಜ್ವಾಲೆಯನ್ನು ಕಣ್ಣುಬೇನೆ ಬಂದವರ ಕಣ್ಣಿನ ಎದುರು ಹಿಡಿದ ಜರಡಿ ಮೇಲೆ ಸಾವಕಾಶವಾಗಿ ಸವರುತ್ತಿದ್ದರು. ಹೀಗೆಯೇ ಐದಾರು ಸಾರಿ ಮಾಡಿ, ‘ಆಯಿತು ನಿನ್ನ ಕಣ್ಣುಬೇನೆ ಹೋಗುತ್ತದೆ’ ಎಂದು ಹೇಳಿ ಕಳಿಸುತ್ತಿದ್ದರು. ಇದರಂತೆಯೇ ಪ್ಲೇಗೂ ಸಹ ದೇವರಿಗೆ ನಡೆದುಕೊಂಡರೆ ಮಾಯವಾಗಿ ಹೋಗುತ್ತದೆ ಎಂದು ತಿಳಿದಿದ್ದರು. ಇದರಿಂದ ವಿನಾಕಾರಣ ಪ್ರಾಣ ಕಳೆದುಕೊಂಡರು.

Leave a Reply

Your email address will not be published.