ಅಬ್ಬಾ… ಮರೆಯಲಾಗದ ಆ ದಿನಗಳು!

-ಜಿ.ಕೆ.ಕಾಡಪ್ಪ (85ವರ್ಷ), ಹಿರೇಹೆಗಡೆಹಾಳು, ಬಳ್ಳಾರಿ ಜಿಲ್ಲೆ.

ಆ ಕಾಲದಲ್ಲಿ ಭಯಾನಕ ರೋಗರುಜಿನಗಳು ಬರುತ್ತಿದ್ದವು. ಮನೆಯಲ್ಲಿ ಮಲಗಿದಾಗ ಜಂತೆಯಿಂದ ಇಲಿಗಳು ಸತ್ತುಸತ್ತು ಬೀಳುತ್ತಿದ್ದವು. ಆ ಇಲಿಗಳ ಕಳೇಬರ ಹಚ್ಚಹಸರೇರಿರುತ್ತಿತ್ತು. ಇದೇ ರೋಗದ ತೀವ್ರತೆಯೆಂದು ಮನೆ-ಮಾರು ಬಿಟ್ಟು ಎಲ್ಲರೂ ಊರಿಂದ ತುಂಬ ದೂರ ಹೋಗಿ ವಾಸಮಾಡುತ್ತಿದ್ದರು. ಹೀಗೆ

ಒಮ್ಮೆ ಕಾಲರಾ ಬಂತು. ಊರಿಗೆಊರೇ ವಾಂತಿಬೇಧಿಯಿಂದ ನರಳುತ್ತಿತ್ತು. ಆಗ ದವಸಧಾನ್ಯ ಎಲ್ಲ ಕಟ್ಟಿಕೊಂಡು ಜೊತೆಗೆ ಬೀಸುವಕಲ್ಲೂ ಹೊತ್ತುಕೊಂಡು ನೀರು ಇದ್ದ ಕಡೆ ಅಡವಿಯಲ್ಲಿ ಠಾಣೆ ಹೂಡಿಕೊಂಡು ಇರುತ್ತಿದ್ದೆವು. ವಾಂತಿ ಬೇಧಿಯಿಂದ ನರಳುತ್ತಿದ್ದವರನ್ನು ಒಂದು ವಾರದ ತನಕ ಪ್ರತ್ಯೇಕವಾಸಕ್ಕೆ ಕಳಿಸುತ್ತಿದ್ದೆವು. ಅಂದರೆ ಅಲ್ಲೆ ಗುಡ್ಡದ ಬಂಡೆ, ಗವಿ ದೂರದಲ್ಲಿ ವಾಸ. ಇದಕ್ಕೆ ಯಾವ ಮದ್ದಿಲ್ಲ. ಊರಮ್ಮ ದ್ಯಾವಮ್ಮಗ ಕಂಬ್ರು (ಹೋಳಿಗೆ ಎಡೆ) ಮಾಡಿಕೊಂಡು ಬರುತ್ತಿದ್ದೆವು. ಆ ದೇವತೇನೆ ನಮ್ಮನ್ನ ಕಾಪಾಡಬೇಕಲ್ಲವೇ?

ಈ ಭಯಾನಕ ರೋಗಗಳು ಬಂದ್ರೆ ಒಂದೊಂದು ಊರೇ ಮುಳುಗಿಹೋಗುತ್ತಿದ್ದವು. ಮಕ್ಕಳುಮರಿ, ವಯಸ್ಸಾದೋರನ್ನ ದೇವತೇನೆ ಕಾಪಾಡಬೇಕು, ಬೇರೆ ದಾರಿಯಿದ್ದಿಲ್ಲ. ರೋಗ ಬಂದ ದಿನವನ್ನೇ ನೆನಪಿಟ್ಟುಕೊಂಡು ಪ್ರತಿವರ್ಷ ಅದೇ ದಿನ ಊರು ಬಿಡುವ ಸಂಪ್ರದಾಯ ನಮ್ಮೂರಾಗ ಬಂದಿದೆ. ಗುಳೇ ಲಕ್ಕಮ್ಮನ ಜಾತ್ರೆ ಮಾಡೋದು ಅದಕ್ಕೆ. ಊರಾಗಿನ ದನಕರು ಸಮೇತ ಎಲ್ಲರೂ ಮನೆಗೆ ಬೀಗ ಜಡೆದು ಊರಹೊರಗೆ ಹೋಗಿ ಗುಳೇಲಕ್ಕಮ್ಮಗ ಎಡೆ ಸಲ್ಲಿಸಿ, ಊಟ ಮಾಡಿ ಮರುದಿನ ಬರುತ್ತೇವೆ. ಈಗ ಕೊರೋನಾ ಬಂದಿದೆ. ಇಂಥಾ ರೋಗ ನಾವು ಎಂದೂ ಕಂಡಿಲ್ಲ ಬಿಡ್ರಿ ಇದು ಎಲ್ಲಾ ದೇಶಕ್ಕ ಹಬ್ಬಿದೆಯಂತೆ.


-ಹಂಪಮ್ಮ (75 ವರ್ಷ), ಚಿಕ್ಕಡಂಕನಕಲ್, ಕೊಪ್ಪಳ ಜಿಲ್ಲೆ.

ನಮ್ಮ ನೆನಪೀಲಿ ಎರಡು-ಮೂರು ರೋಗ ಬಂದಿದ್ದವು. ಕಾಲರಾ ಬಂದಿತ್ತು. ವಾಂತಿಬೇಧಿ ಕಾಡಿಕಾಡಿ ಜನರನ್ನು ಸಾಯಿಸುತ್ತಿತ್ತು. ಅದಕ್ಕಾಗಿ ಜನ ಇದ್ದ ಊರುಬಿಟ್ಟು ಬೇರೆಕಡೆ ಹೋಗಿ ಬದುಕುತ್ತಿದ್ದರು. ಪ್ಲೇಗ್ ಅಂತ ಬಂತು. ಇದು ಕೂಡ ಊರೂರು ನುಂಗೋ ಮಾರೆಮ್ಮ. ಯಾವ ಮದ್ದುಗಿಡ, ಸೂಜಿ ಇರಲಿಲ್ಲ. ಪುಣ್ಯ ಮಾಡಿದೋರು ಬದುಕುತ್ತಿದ್ದರು. ಪಾಪ ಮಾಡಿದೋರು ಮಾರೆಮ್ಮನ ಬಾಯಿಗೆ ಹಾರವಾಗುತ್ತಿದ್ದರು.

ಜನ ಪ್ಲೇಗ್ ಮಾರೆಮ್ಮನ ಗುಡಿ ಕಟ್ಟಿದರು. ಬಳ್ಳಾರಿಯ ಬೆಂಗಳೂರು ರೋಡಿನಲ್ಲಿ ಈ ಗುಡಿ ಇದೆ. ಅದು ಪ್ಲೇಗ್ ಮಾರೆಮ್ಮ ಅಂತ ಪ್ರಸಿದ್ಧಿ. ಮತ್ತೆ ಇಂಥಾ ಪ್ಲೇಗ್, ಕಾಲರಾ ರೋಗ ಬಂದರೆ ಊರಾಗಿನ ಹಳೇ ಸಾಮಾನು, ಸಟ್ರೆ ಎಲ್ಲ ಒಂದು ಕಡೆ ಗುಡ್ಡೆಹಾಕಿ ಮಾರೆಮ್ಮನ ಮೂರ್ತಿ ಮಾಡಿ, ಪೂಜೆ ಮಾಡಿ ಮುಂದಿನ ಊರಿಗೆ ಅಂದರೆ ಹೊಲಮೇರೆಗೆ ಬಿಟ್ಟು ಬರೋದು ಸಂಪ್ರದಾಯ. ಆ ಊರಿನೋರು ಮತ್ತೆ ತಮ್ಮೂರಿನ ಹಳೇ ವಸ್ತುಗಳನ್ನೆಲ್ಲಾ ಸೇರಿಸಿ ಮುಂದಿನ ಊರಿಗೆ ಬಿಡೋರು. ಕೊನೆಗೆ ಹೊಳಿಸಾಲಿಗೆ ದೇವಿಯನ್ನ ಬಿಡುತ್ತಿದ್ದರು. ರೋಗ ಇದರಿಂದ ಹೋಗೇ ಬಿಡುತ್ತಿತ್ತು ಅಂತ ಹಿರಿಯರು ಹೇಳುತ್ತಿದ್ದರು.

ಈ ಮಾರೆಮ್ಮ ಬಂದಾಗ ಊರಿಗೆ ಊರೇ ದಿನಾ ಮಡಿಮೈಲಿಗೆಯಿಂದ ಸ್ವಚ್ಛವಾಗಿ ಇರುತ್ತಿದ್ದರು. ಎತ್ತು, ಎಮ್ಮೆ, ಕರುಗಳಿಗೂ ಮೈತೊಳೆದು ಪೂಜಿ ಮಾಡುತ್ತಿದ್ದರು. ನಮ್ಮೂರಾಗ ಒಂದು ಗಾದೇನೇ ಇದೆ. “ನಿನ್ನ ಮಾರೆಮ್ಮ ಹೊತ್ತುಗೊಂಡು ಹೋಗಲಿ”, “ನಿನಗೆ ಮಾರೆಮ್ಮ ಬರ”, ಎಂಬ ಬೈಗುಳದ ಶಾಪ ಇಂಥಾ ರೋಗದ ಸಂದರ್ಭಕ್ಕೆ ಹುಟ್ಟಿಕೊಂಡಿದೆ. ಪ್ಲೇಗ್ ಮಾರೆಮ್ಮ, ಉರಿಮಾರೆಮ್ಮ, ಕರಿಮಾರೆಮ್ಮ, ದ್ಯಾವಮ್ಮ ಇವರೆಲ್ಲ ಸಿಟ್ಟಾದರೆ ಪಾಪಿಗಳನ್ನು ನಾಶಮಾಡಲು ರೋಗದ ರೂಪತಾಳಿ ಬರುತ್ತಾರಂತೆ… ನಮ್ಮಜ್ಜ ಹೇಳುತ್ತಿದ್ದನು.


ಹುಲಿಗೆಮ್ಮ (85 ವರ್ಷ), ಹಿರೇಜಂತಕಲ್, ಗಂಗಾವತಿ.

ನನ್ನ ನೆನಪೀಲಿ ಎರಡು ಮೂರು ಸಲ ರೋಗ ಬಂದಾವ. ಒಂದ್ಸಲ ಮೈಲಿರೋಗ ಬಂದಿತ್ತು. ಇದು ಕುರಿಗಳಿಗೆ ಬಂದು ಒದ್ದಾಡಿ ಒದ್ದಾಡಿ ಸಾಯುತ್ತಿದ್ದವು. ಯಾವ ಮದ್ದು ಇದ್ದಿಲ್ಲ. ಸತ್ತ ಕುರಿ, ಆಡು ತೆಗೆದುಕೊಂಡು ಊರಹೊರಗ ಗಿಡಕ್ಕೆ ಕಾಲಿಗೆ ಹಗ್ಗಕಟ್ಟಿ ಮಾರೆಮ್ಮಗ ಮೀಸಲು ಅಂತ ನೇತಾಕುತ್ತಿದ್ದರು. ಒಂದುಸಲ ಒಬ್ಬ ಗೌಡನವು 180 ಕುರಿ ಸತ್ತೋದವು. ಅವಾಗ ಕುರಿಹಟ್ಟಿ ಜಾಗೆ ಬದಲಾಯಿಸುತ್ತಿದ್ದರು. ಬೇವಿನ ತಪ್ಪಲನ್ನು ರುಬ್ಬಿ ನೀರು ಸಿಂಪಡಿಸಿ ಮೂರುದಿನ ಬಿಡುತ್ತಿದ್ದರು.

ನಮ್ಮೂರಾಗ ಸಣ್ಣ ಮಕ್ಕಳಿಗೆ ‘ಅಮ್ಮ’ (ತಟ್ಟು) ಬರುತ್ತಿದ್ದವು. ಊರಾಗಿನ ಸಣ್ಣಮಕ್ಕಳಿಗೆ ಮೈತುಂಬ ಗಾದರಿ ಗುಳ್ಳೆ ಬಂದು ಕೂಸುಗಳು ಒದ್ದಾಡಿ ಸಾಯುತ್ತಿದ್ದವು. ಚರ್ಮ ಸುಟ್ಟೋಗುತ್ತಿತ್ತು. ಇದು ದೇವತೆ ಕಾಟನೇ. ಹಂಗಾಗಿ ಸುಂಕಲಮ್ಮ ತಾಯಿಗೆ (ಸೋಂಕು+ಅಮ್ಮ= ಸುಂಕಲಮ್ಮ) ಏಳುದಿನ ನಡಕೋಬೇಕಿತ್ತು. ಏಳುದಿನ ಬೇವಿನ ತಪ್ಪಲಿನ ರಸಹಚ್ಚಿ ಕೂಸಿಗೆ ನೀರೆರೆದು ಹೋಳಿಗೆ ಎಡೆ ಮಾಡಿ ಸುಂಕಲಮ್ಮಗ ಪೂಜೆ ಮಾಡಬೇಕು. ಕೆಲವರು ಮೂರುದಿನ ಎಣ್ಣೆನೀರು ಹಾಕುತ್ತಿದ್ದರು.

ಬೇಸಿಗೆ ದಿನದಲ್ಲಿ ಅಮ್ಮ ಜಾಸ್ತಿ ಬರುತ್ತಿತ್ತು. ಏಳುದಿನ ಮಕ್ಕಳನ್ನು ಬರೀಮೈಲೆ ಮಲಗಿಸಬೇಕಿತ್ತು. ಅಷ್ಟು ಸಂಕಟ. ಐದನೇ ದಿನ ಗುಗ್ಗರಿ ಮಾಡಿ ಎಲ್ಲಾ ಮಕ್ಕಳಿಗೆ ಹಂಚುತ್ತಿದ್ದರು. ಒಂಭತ್ತನೇ ದಿನದ ಸುಂಕಲಮ್ಮನ ಹೋಳಿಗೆ ಎಡೆ ಯಾರೂ ಮುಟ್ಟೋ ಹಾಗಿಲ್ಲ. ಅದು ತಟ್ಟುಬಂದ ಕೂಸಿನ ಮನೆಯವರೇ ಊಟ ಮಾಡಬೇಕು. ಈ ರೋಗ ಮನುಷ್ಯರಿಗೆ (ತಟ್ಟುಗುಳ್ಳೆ) ಜೀವನದಲ್ಲಿ ಒಮ್ಮೆಯಾದರೂ ಬಂದರೆ ಒಳ್ಳೆಯದು. ಈಗ ಮಕ್ಕಳಿಗೆ ಸೂಜಿ ಬಂದಾವ. ಈ ಗುಳ್ಳೆ ಬರೋದಿಲ್ಲ ಬಿಡರಿ. ಈಕೆ ಸುಂಕಲಮ್ಮ ದೊಡ್ಡತಾಯಿ. ಯಾವಾಗಲೂ ಈ ರೋಗ ಮೇಲ್‌ಗಡೆ ಪ್ರದೇಶದಿಂದ ಕೆಳಗಡೆಗೆ ಬರುತ್ತಿತ್ತು. ಕೊನೆಗೆ ಸಿರುಗುಪ್ಪದ ದೇಶನೂರಾಗ ತಾಯಿ ನೆಲೆನಿಂದರತಾಳ. ಅಲ್ಲಿ ಹೊಳೆ ಇದೆಯೆಲ್ಲಾ! ಎಲ್ಲಾ ಹಾರ ತಗೊಂಡು ನದಿ ನೀರಿನಾಗ ಶಾಂತವಾಗತಾಳ. ನಮ್ಮ ಕಡೆ ಬಾಳ ಊರಾಗ ಸುಂಕಲಮ್ಮನ ಗುಡಿ ಇದಾವೆ.

ನನ್ನ ನೆನಪೀಲಿ ಎಪ್ಪತ್ತುರಾಯನ ಕೆಮ್ಮು ಅಂತ ಬಂದಿತ್ತು. ಒಬ್ಬೋನಿಗೆ ಕೆಮ್ಮು ಹತ್ತಿದರೆ ಆಯಿತು. ಊರಿಗೆ ಊರೇ ನಾಯಿತರ ಕೆಮ್ಮುತ್ತಿದ್ದರು. ಇದು ನಾಲ್ಕುಐದು ತಿಂಗಳಾದರೂ ಹೋಗುತ್ತಿರಲಿಲ್ಲ. ಯಾವ ಗಿಡ ಔಷಧಿ ಕೆಲಸ ಮಾಡುತ್ತಿದ್ದಿಲ್ಲ. ಇದೂ ಕೂಡ ಸುಂಕಲಮ್ಮನ ಕಾಟ. ಸುಂಕಲಮ್ಮನ ಗುಡಿ ಮುಂದೆ ಕೆಮ್ಮು ಬಂದವರನ್ನ ನಿಲ್ಲಿಸಿ 70 ಊರಿನ ಹೆಸರು ಚೀಟಿಯಲ್ಲಿ, ಇಲ್ಲವಾದರೆ ತಾಮ್ರದ ತಾಯತದ ಪತ್ರದ ಮೇಲೆ ಬರೆದು, ಹರಿಶಿಣ ದಾರದಲ್ಲಿ ಕೊರಳಿಗೆ ಕಟ್ಟುತ್ತಿದ್ದರು. ಹೇಗೋ ದೇವಿಯ ಶಕ್ತಿಯಿಂದ ಕಮ್ಮಿಯಾಗುತ್ತಿತ್ತು. ಪಾಪ ಮಾಡಿದವರು ಕೆಮ್ಮಿಕೆಮ್ಮಿ ಉಸುರು ಆಡದಂಗ ಸಾಯುತ್ತಿದ್ದರು.

ಹೀಗೆ ಕೆಮ್ಮು ಬಂದೋರು ಮನೆಯಲ್ಲಿರುತ್ತಿರಲಿಲ್ಲ. ಹೊಲ, ಅಡವಿಯಲ್ಲಿ ಗುಡಿಸಲು ಹಾಕಿ ದೂರ ಇಡುತ್ತಿದ್ದರು. ನಾಯಿ ತುಳಸಿ (ಕಾಡುತುಳಸಿ, ಕೃಷ್ಣತುಳಸಿ) ಹರಿಶಿಣ ಸೇರಿಸಿ ಮದ್ದುಮಾಡಿ ತಾಯಮ್ಮವ್ವನಿಗೆ ಪೂಜಿಸಿ ದಿನವೂ ಕುಡಿಸಿದರೆ ಎಪ್ಪತ್ತುರಾಯನ ಕೆಮ್ಮು ಹೋಗುತ್ತಿತ್ತು. ಆವಾಗ ಯಾವ ಡಾಕ್ಟುç ಇದನ್ನು ಕಡಿಮೆ ಮಾಡುತ್ತಿದ್ದಿಲ್ಲ. ಇವಾಗೇನೋ ಚೀನಾದಿಂದ ಬಂದಿದೆಯಲ್ಲಾ ಇಂಥದ್ದೇ ಕೆಮ್ಮು ನೆಗಡಿ ಇರಬೇಕು.

Leave a Reply

Your email address will not be published.