ಅಬ್ಬಾ… ಮರೆಯಲಾಗದ ಆ ದಿನಗಳು!

ಅಜ್ಜಿ ಹೇಳಿದ ಪ್ಲೇಗಿನ ಕತೆ

ನನ್ನ ಭಾಗ್ಯದಲ್ಲೊಬ್ಬ ಅಜ್ಜಿ ಇದ್ದಳು. ಈ ಅಜ್ಜಿಯು ನನ್ನ ಅಜ್ಜಿಯ ತಂಗಿ. ನನ್ನ ತಾಯಿಯು ಬೇಗನೆ ತೀರಿಕೊಂಡಾಗ ಹಾಲೂಡಿದವಳು ಇದೇ ನನ್ನ ಅಜ್ಜಿ, ಇವಳನ್ನು ನಾನು ಯಾವಾಗಲು ‘ಅವ್ವ’ ಎಂದು ಕರೆದದ್ದು. ಆಕೆ ತನ್ನ ಬಾಳ ಭಗವದ್ಗೀತೆಯ ನೂರಾರು ಕತೆಗಳನ್ನು ಪ್ರತಿ ರಾತ್ರಿ ಕಂದೀಲಿನ ಬೆಳಕಿನಲ್ಲಿ ಹೇಳುತ್ತಿದ್ದಾಗ ನಾನು ಅವಳ ಹಚ್ಚಡದಲ್ಲಿ ಬೆಚ್ಚಗೆ ಮಲಗಿರುತ್ತಿದ್ದೆ ಅವಳ ಆ ಕತೆಗಳನ್ನು ಇಂದಿಗೂ ಪ್ರೀತಿಯಿಂದ ನೆನೆಯುತ್ತೇನೆ.  

‘20ನೇ ಶತಮಾನದ ಮೊದಲ ದಶಕದ ಭಾರತದಲ್ಲಿ ಪ್ಲೇಗಿನ ಹಾವಳಿ ಆಕ್ರಮಿಸಿ ಲಕ್ಷಗಟ್ಟಲೆ ಜನರನ್ನು ಕೊಂದುಹಾಕಿತು’ ಎಂದು ಹೇಳುವಾಗ ಅಜ್ಜಿಯ ಕಣ್ಣಲ್ಲಿ ನೀರು!

‘ಆಗಿನ ಸರ್ಕಾರವು ಎಲ್ಲರನ್ನು ಊರು ಬಿಡಿಸಿ ದೂರದಲ್ಲಿ ಟೆಂಟು ಹಾಕಿದ ಮನೆಗಳಲ್ಲಿ ಆಶ್ರಯ ನೀಡಿತ್ತು. ಪ್ಲೇಗ್ ರೋಗಿಗಳನ್ನು ಇನ್ನೂ ದೂರದಲ್ಲಿ ರಚಿಸಿದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಶುಶ್ರೂಷೆ ನೀಡಿದಾಗ ನೂರಕ್ಕೆ ನೂರು ಜನ ಕಣ್ಣು ಮುಚ್ಚಿಕೊಂಡರು. ನನಗಾಗ ಎಂಟು ವರ್ಷ. ಆಗಲೇ ನಿಮ್ಮ ಅಜ್ಜನೊಂದಿಗೆ ಮದುವೆ ಮಾಡಿದರು. ಅದೆಂಥ ದುರ್ಭಾಗ್ಯದ ಸಮಯವೋ! ನಾನು ಗಂಡನ ಮುಖವನ್ನೂ ನೋಡದ ಮುಗ್ಧೆ! ಒಂದು ವರ್ಷ ಕಳೆದಿರಬಹುದು ನನ್ನ ಅತ್ತೆಯ ಮನೆಯವರು ಬಂದು ಅಶುಭದ ಸಮಾಚಾರವನ್ನು ಮುಟ್ಟಿಸಿದರು. 18 ವರ್ಷದ ನನ್ನ ಗಂಡ ಪ್ಲೇಗಿನಿಂದ ತೀರಿಹೋಗಿದ್ದಾನೆಂದು. ಆ ಕ್ಷಣದಲ್ಲಿ ನನಗೇನೂ ಅನ್ನಿಸಲಿಲ್ಲ. ಏಕೆಂದರೆ ಮದುವೆ, ಗಂಡ, ಅತ್ತೀಮನೆ ಇವೆಲ್ಲದರ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ಆದರೀಗ ನೆನೆದರೆ ನನ್ನ ಹೃದಯ ಹಿಂಡಿಹೋಗುತ್ತದೆ!’

ನನ್ನ ಅಪ್ಪನ ತಾಯಿ ಮತ್ತು ತಂದೆ ಅಂದರೆ ನನ್ನ ದೊಡ್ಡ ಅಜ್ಜಿ, ಅಜ್ಜ ಈ ಬಾಲ ವಿಧವೆಗಾಗಿ ಉಪಾಯ ಮಾಡಿದರಂತೆ. ಇವಳು ಸ್ವಾವಲಂಬಿಯಾಗಿ, ಸ್ವಾಭಿಮಾನದಿಂದ ಬಾಳಿ ಬದುಕಬೇಕು ಎಂದು ಶಿಕ್ಷಣ ಕೊಟ್ಟರಂತೆ. ಹಾಗೆ ನನ್ನ ಚಿಕ್ಕ ಅಜ್ಜಿ ಮತ್ತು ದೊಡ್ಡ ಅಜ್ಜಿಯರು ತಮ್ಮ 16ನೇ ವರ್ಷಕ್ಕೆ ಮುಲ್ಕಿ ಪರೀಕ್ಷೆ ಪಾಸ್ ಅದರಂತೆ. ಆಮೇಲೆ ನನ್ನ ದೊಡ್ಡ ಅಜ್ಜಿ ಬಸುರಿಯಾದದ್ದರಿಂದ ಚಿಕ್ಕ ಅಜ್ಜಿಯು ಧಾರವಾಡದ ಹೆಣ್ಣುಮಕ್ಕಳ ಸರಕಾರಿ ಟ್ರೇನಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದು 3 ವರ್ಷದ ಅವಧಿಯಲ್ಲಿ ಶಿಕ್ಷಕಿಯರ ತರಬೇತಿ ಪಡೆದಳು. ನಂತರ 40ವರ್ಷಗಳ ಕಾಲ ಹೆಣ್ಣು ಮಕ್ಕಳಿಗಾಗಿ ಪ್ರಾಥಮಿಕ ಶಿಕ್ಷಣವನ್ನು ಅತ್ಯಂತ ನಿಷ್ಠೆಯಿಂದ ಸಲ್ಲಿಸಿ ನಿವೃತ್ತಿಯಾದಳು ಇಂಥ ಬದುಕಿನ ಅಜ್ಜಿಯೇ ನನ್ನ ಮೊದಲ ಗುರುವಾದಳು.

ಅಂದು ಅಜ್ಜಿ ಹೇಳಿದ ಪ್ಲೇಗಿನ ಕತೆಯನ್ನು ನೆನಸಿಕೊಂಡಾಗಲೆಲ್ಲ ಕಣ್ಣೀರು ಸುರಿಸುತ್ತೇನೆ. ಆಕೆ ತನ್ನ ಹದಿಹರೆಯವನ್ನು ಏಕಾಂಗಿಯಾಗಿ ಹೇಗೆ ಕಳೆದಳೋ ಎಂಬ ಯೋಚನೆ ನನ್ನಲ್ಲಿ ಅವಳಿಗಾಗಿ ಅಭಿಮಾನವನ್ನು ಉಂಟು ಮಾಡುತ್ತದೆ.

Leave a Reply

Your email address will not be published.