ಅಭಿಯಾನ

ಮಾಧ್ಯಮಗಳ ಭ್ರಷ್ಟಾಚಾರ ವಿರೋಧಿಸಿ!

ಏಕೆ ಮಾತನಾಡುತ್ತಿಲ್ಲ?

ಮಾಧ್ಯಮಗಳಲ್ಲಿ ಭ್ರಷ್ಟಾಚಾರ ಇದೆ. ಹಾಗೆಂದು ಎಲ್ಲರೂ ಭ್ರಷ್ಟರಲ್ಲ. ಪ್ರಮಾಣಿಕರೂ ಇದ್ದಾರೆ. ಆದರೆ ಅವರು ಭ್ರಷ್ಟ ಪತ್ರಕರ್ತರ ಬಗ್ಗೆ ಮಾತನಾಡುವುದಿಲ್ಲ. ನಮಗೇಕೆ ಇವರ ವಿಚಾರ ಎಂದು ಸುಮ್ಮನಾಗುತ್ತಾರೆ. ಭ್ರಷ್ಟ ಪತ್ರಕರ್ತರ ನಿಯಂತ್ರಣಕ್ಕೆ ಯಾವುದೇ ಕಾನೂನಿಲ್ಲ. ಆದಾಯ ತೆರಿಗೆ ಇಲಾಖೆ ಭ್ರಷ್ಟ ಪತ್ರಕರ್ತರ ಮೇಲೆ ದಾಳಿ ಮಾಡಿ ಆದಾಯದ ಮೂಲದ ಬಗ್ಗೆ ತನಿಖೆ ಮಾಡುವುದಿಲ್ಲ. ಕಾನೂನು ರೂಪಿಸುವ ಶಾಸಕಾಂಗ ಪತ್ರಕರ್ತರ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ಪತ್ರಕರ್ತರ ಉಸಾಬರಿ ನಮಗೆ ಬೇಡ ಎಂದು ಎಲ್ಲರೂ ಸುಮ್ಮನಾಗುತ್ತಾರೆ ಇದೇ ಭ್ರಷ್ಟಾಚಾರಕ್ಕೆ ಮೂಲ ಕಾರಣ.

ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಗಳಾದ ಮಾಧ್ಯಮ ಅಕಾಡೆಮಿ, ಕಾರ್ಯನಿರತ ಪತ್ರಕರ್ತರ ಸಂಘ ಮುಂತಾದವು ಪತ್ರಕರ್ತರ ಭ್ರಷ್ಟಾಚಾರದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಮಾಧ್ಯಮ ಅಕಾಡೆಮಿ ಈ ಬಗ್ಗೆ ಅರಿವು ಮೂಡಿಸಲು ವಿಚಾರಸಂಕಿರಣ ನಡೆಸಬಹುದು.

-ಬಾಲಕೃಷ್ಣ ಹೊಳ್ಳ
ಸಂಪಾದಕರು, ಉದಯವಾಣಿ ದಿನಪತ್ರಿಕೆ, ಬೆಂಗಳೂರು.


ಯುವ ಪತ್ರಕರ್ತರಿಗೆ ತರಬೇತಿ ಬೇಕು

ಪತ್ರಿಕಾರಂಗವನ್ನು ರಾಜ್ಯಾಂಗದ ನಾಲ್ಕನೇ ಅಂಗವೆಂದು ಕರೆಯಲಾಗುತ್ತದೆ. ರಾಜ್ಯಾಂಗದ ನಾಲ್ಕೂ ಅಂಗಗಳು ಭ್ರಷ್ಟಾಚಾರಕ್ಕೊಳಗಾಗಿವೆ. ಪತ್ರಿಕಾರಂಗವೇನೂ ಅದರಿಂದ ಹೊರತಾಗಿಲ್ಲ. ಯಾರೇ ಭ್ರಷ್ಟರಾದರೂ ಪತ್ರಿಕಾರಂಗ ಪ್ರಮಾಣಿಕವಾಗಿರಬೇಕು ಎಂದು ಹೇಳುತ್ತಾರೆ. ಯಾಕೆಂದರೆ ಮೂರು ಅಂಗಗಳ ಹೊಲಸನ್ನು ಪತ್ರಕರ್ತರು ಹೊರಹಾಕಿ ತೊಳೆಯಬಹುದಾಗಿದೆ. ಆದರೆ ಪತ್ರಕರ್ತರೇ ಇಂದು ಭ್ರಷ್ಟರಾಗಿರುವುದರಿಂದ ಸಮಾಜದ ಕೊಳೆ ತೊಳೆಯುವವರು ಯಾರು?

ಈ ವಿಷಯವಾಗಿ 2001ರಲ್ಲಿ 24 ಪತ್ರಕರ್ತರ ವಿರುದ್ಧ ನಾನು ಕೋರ್ಟಿನಲ್ಲಿ ಪ್ರಕರಣ ಹೂಡಿದ್ದೆ. ಅದರಲ್ಲಿ 8 ಪತ್ರಕರ್ತರು ಬಿಡಿಎ ನಿಂದ ಪಡೆದ ನಿವೇಶನಗಳು ರದ್ದಾಗಿವೆ. ಈ ಬಗ್ಗೆ ನಾನು ಒಂದು ಪುಸ್ತಕವನ್ನೂ ಬರೆದಿದ್ದೇನೆ. ಕಡುಭ್ರಷ್ಟರೇ ಭ್ರಷ್ಟಾಚಾರದ ಬಗ್ಗೆ ಜೋರಾಗಿ ಮಾತನಾಡುತ್ತಾರೆ. ಪ್ರಾಮಾಣಿಕ ಪತ್ರಕರ್ತರು ಆ ಬಗ್ಗೆ ಮಾತೇ ಆಡುವುದಿಲ್ಲ. ಈ ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಯುವ ಪತ್ರಕರ್ತರಿಗೆ ಪತ್ರಿಕೋದ್ಯಮದ ಮೌಲ್ಯಗಳ ಬಗ್ಗೆ ತರಬೇತಿ ನೀಡಬೇಕು. ಆದರೆ ಹಾಗಾಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ.

-ನಾಗಲಕ್ಷ್ಮೀಬಾಯಿ
ಪತ್ರಕರ್ತೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು, ಬೆಂಗಳೂರು.


ಸಂಪಾದಕೀಯ ಮಂಡಳಿಯ ಹೊಣೆ

ಭಾರತೀಯ ಪತ್ರಿಕೋದ್ಯಮದಲ್ಲಿ ಭ್ರಷ್ಟ್ರಾಚಾರ ಇದೆ ಎಂಬುದನ್ನು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರು ದಾಖಲೆ ಸಹಿತ ನಿರೂಪಿಸಿದ್ದಾರೆ. ಅವರು ನೀಡಿದ ವರದಿ ಆಧಾರದಲ್ಲೇ ಇಂದು ಚುನಾವಣೆ ಸಂಬಂಧಿತ ಅನೇಕ ಬದಲಾವಣೆಗಳು ಆಗಿವೆ. ಮಾಧ್ಯಮಗಳು ಸ್ವಯಂ ನೀತಿಸಂಹಿತೆಯನ್ನು ಪಾಲಿಸಬೇಕು. ಆದರೆ ಹಾಗೆ ಮಾಡದೇ ಜಾಹೀರಾತುಗಳನ್ನೂ ಸುದ್ದಿರೂಪದಲ್ಲಿ ಕೆಲವು ಪತ್ರಿಕೆಗಳು ಪ್ರಕಟಿಸುತ್ತವೆ. ಇದೂ ಕೂಡ ಒಂದು ಭ್ರಷ್ಟಾಚಾರ. ಉದಾಹರಣೆಗೆ ಹೇಳುವುದಾದರೆ ಚುನಾವಣೆ ಸಂದರ್ಭದಲ್ಲಿ ಕೆಲವು ಪತ್ರಿಕೆಗಳು ರಾಜಕೀಯ ಪಕ್ಷಗಳಿಂದ ಹಣ ಪಡೆದು ಜಾಹೀರಾತನ್ನು ಸುದ್ದಿ ರೂಪದಲ್ಲಿ ಪ್ರಕಟಿಸುವ ಪದ್ಧತಿ ಇದೆ. ಇದು ಕಾನೂನು ಬಾಹಿರ ಕ್ರಮ ಹಾಗೂ ಓದುಗ ರಿಗೆ ಮಾಡುವ ಮೋಸ. ಇದನ್ನು ಪಿ.ಸಾಯಿನಾಥ್ ಅವರು ಪುರಾವೆ ಸಮೇತ ಬಹಿರಂಗಪಡಿಸಿದ ನಂತರ ಈ ಅಕ್ರಮವನ್ನು ನಿಯಂತ್ರಿಸಲು ಚುನಾವಣೆ ಆಯೋಗ ಸಮಿತಿಯೊಂದನ್ನು ನೇಮಿಸುತ್ತಿದೆ.

ಮಾಧ್ಯಮಗಳು ಯಾವುದೇ ಹಂತದಲ್ಲಿ ಭ್ರಷ್ಟಾಚಾರ ಮಾಡಿದರೂ ಅದು ಆತಂಕದ ವಿಚಾರ. ಯಾಕೆಂದರೆ
ಸಮಾಜದ ಹಿತವನ್ನು ರಕ್ಷಿಸಬೇಕಾದವರೇ ಭ್ರಷ್ಟಾಚಾರದಲ್ಲಿ ತೊಡಗಿದರೆ ಸಮಾಜದ ಹಿತವನ್ನು ರಕ್ಷಿಸುವವರು ಯಾರು? ಪತ್ರಿಕೆಗಳಲ್ಲಿ ಭ್ರಷ್ಟರು ಇದ್ದಾರೆ ಎಂದಾದರೆ ಇಂಥ ವಿಚಾರಗಳನ್ನು ಸಂಪಾದಕೀಯ ಮಂಡಳಿಯಲ್ಲಿ ಚರ್ಚಿಸಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಕಾನೂನು ಕ್ರಮಕೈಗೊಳ್ಳುವುದಕ್ಕಿಂತ ಸಂಪಾದಕೀಯ ಮಂಡಳಿ ನೀತಿಸಂಹಿತೆಯಡಿ ಶಿಸ್ತುಕ್ರಮ ಕೈಗೊಳ್ಳುವುದು ಸೂಕ್ತ. ಪತ್ರಿಕೆಗಳು ಜಾಹೀರಾತು ಪಡೆದು ಹಣ ಗಳಿಸಲಿ, ಆದರೆ ಅಕ್ರಮವಾಗಿ ಸುದ್ದಿ ಪ್ರಕಟಿಸಿ ಅಥವಾ ಇನ್ನಾವುದೇ ಅಕ್ರಮ ಮಾರ್ಗದಿಂದ ಹಣ ಮಾಡುವುದು ಸರಿಯಲ್ಲ.

ಸಂಪಾದಕೀಯ ಮಂಡಳಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುವ ಯುವ ಪತ್ರಕರ್ತರಿಗೆ ಭ್ರಷ್ಟ್ರಾಚಾರದಿಂದ ದೂರ ಇರುವ ಕುರಿತು ಸೂಕ್ತ ತರಬೇತಿ ನೀಡಬೇಕು. ಬಹಳಷ್ಟು ಯುವಕರು ಈ ವೃತ್ತಿಯಲ್ಲೂ ದುಡ್ಡು ಮಾಡಬಹುದು ಎಂಬ ತಪ್ಪು ಕಲ್ಪನೆ ಹೊಂದಿರುತ್ತಾರೆ. ಸಂಪಾದಕೀಯ ಮಂಡಳಿ ಅಂತಹವರಿಗೆ ಪತ್ರಿಕೋದ್ಯಮದ ಜವಾಬ್ದಾರಿಗಳ ಕುರಿತು ಮನವರಿಕೆ ಮಾಡಬೇಕು. ಅಂದಾಗ ಪತ್ರಿಕೋದ್ಯಮದ ಘನತೆ ಮತ್ತು ಪಾವಿತ್ರ್ಯ ಉಳಿಯುತ್ತದೆ.

-ಉಷಾರಾಣಿ ನಾರಾಯಣ
ನಿವೃತ್ತ ಪ್ರಾಧ್ಯಾಪಕರು, ಪತ್ರಿಕೋದ್ಯಮ ವಿಭಾಗ,
ಮೈಸೂರು ವಿವಿ.


ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಮಾದರಿ

ಕೆಲವೇ ಕೆಲವು ಮಾಧ್ಯಮ ಸಂಸ್ಥೆಗಳನ್ನು ಹೊರತುಪಡಿಸಿದರೆ, ಉಳಿದ ಎಲ್ಲ ಸಂಸ್ಥೆಗಳು ಒಂದಿಲ್ಲ ಒಂದು ರೀತಿಯಿಂದ ಲಂಚದ ಆಮಿಷಕ್ಕೆ ಬಲಿಯಾದವುಗಳೇ. ಕೆಲವು ಉದ್ದೇಶಪೂರ್ವಕವಾಗಿ ಕೆಸರಲ್ಲಿ ಕೈ ಹಾಕಿದ್ದರೆ, ಇನ್ನು ಕೆಲವು ಯಾರದೋ ದುರಾಸೆಗೆ ಬಲಿಯಾದ ಉದಾಹರಣೆಗಳಿವೆ. ಭ್ರಷ್ಟಾಚಾರವೆಂದರೆ ಬರೀ ಸುದ್ದಿ ಮುದ್ರಕ (ಇಡೀ ಸಂಪಾದಕೀಯ ಬಳಗ) ಮತ್ತು ಆ ಸುದ್ದಿಯನ್ನು ಮುದ್ರಿಸಲು ಅಥವಾ ಮುದ್ರಿಸದೇ ಇರಲು ಲಂಚಕೊಡುವ ವ್ಯಕ್ತಿಯ ನಡುವೆ ನಡೆಯುವ ಹಣದ ವಿನಿಮಯ ಮಾತ್ರವಲ್ಲ. ಒಂದು ಸಿದ್ಧಾಂತ, ಅಥವಾ ಓರ್ವ ವ್ಯಕ್ತಿಯ ಬಗೆಗೆ ಒಲವು ಇಟ್ಟುಕೊಂಡು ಆ ಸಿದ್ಧಾಂತ (ಎಷ್ಟೇ ಆತಂಕಕಾರಿ ಇದ್ದರೂ) ಅಥವಾ ಆ ವ್ಯಕ್ತಿಯನ್ನು (ಎಷ್ಟೇ ದುಷ್ಟನಿದ್ದರೂ) ಹೊಗಳುವ, ಉತ್ತೇಜಿಸುವ ಬರವಣಿಗೆ ಕೂಡಾ ಮಾಧ್ಯಮದೊಳಗಿನ ಭ್ರಷ್ಟಾಚಾರದ ಒಂದು ಭಾಗವೇ.

ಟಿ.ವಿ. ಮಾಧ್ಯಮ ಬರುವ ಮುನ್ನ ಮುದ್ರಣ ಮಾಧ್ಯಮದಲ್ಲಿ ಭ್ರಷ್ಟಾಚಾರ ಇರಲಿಲ್ಲವೆಂದಲ್ಲ. ಆಗಲೂ ಕೆಲವು ಕರಿ ಕುರಿಗಳು ಇದ್ದವು. ಆದರೆ, ಟಿ.ವಿ. ಮಾಧ್ಯಮ ಬಂದನಂತರ ಭ್ರಷ್ಟಾಚಾರ ಕಣ್ಣಿಗೆ ಕಾಣುವಷ್ಟು, ಕಿವಿಗೆ ಕೇಳುವಷ್ಟು ಹೆಚ್ಚಿದೆ. ಒಂದು ಹಂತದಲ್ಲಿ ಅದು ರೇಜಿಗೆ ಹುಟ್ಟಿಸುವಷ್ಟು ಚರ್ಚೆಗೆ ಒಳಗಾಗಿ, ಎಷ್ಟೋ ಸಾರಿ ನಮಗೆ ತೀರ ಪರಿಚಿತರೂ ಆ ಭ್ರಷ್ಟಾಚಾರದ ಸುಳಿಗೆ ಸಿಲುಕಿದ ಉದಾಹರಣೆಗಳೂ ಇವೆ. ಇದು ಅತ್ಯಂತ ಅಪಾಯಕಾರಿ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೋದ್ಯಮಕ್ಕೆ ಅಂಟಿಕೊಳ್ಳುತ್ತಿರುವ ಭಯಂಕರ ರೋಗ. ಇದನ್ನು ನಿವಾರಿಸುವ ತುರ್ತು ಆರೋಗ್ಯವಂತ ಪತ್ರಿಕೋದ್ಯಮದಲ್ಲಿ ನಂಬಿಕೆ ಇಟ್ಟುಕೊಂಡಿರುವ ಎಲ್ಲರ ಮೇಲಿದೆ.

ಇಲ್ಲಿ ಮುಖ್ಯವಾಗಿ ಆಗಬೇಕಾಗಿರುವುದು, ಹೊಸದಾಗಿ ವೃತ್ತಿಗೆ ಸೇರುವ ಯುವ ಪತ್ರಕರ್ತರಿಗೆ ಪತ್ರಿಕಾ ಧರ್ಮದ ಬಗೆಗೆ, ಪತ್ರಿಕಾ ಮೌಲ್ಯಗಳ ಬಗೆಗೆ ಸರಿಯಾದ ಸಂಸ್ಕಾರ, ತರಬೇತಿ ನೀಡುವ ಕೆಲಸ. ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ `ಪತ್ರಿಕಾ ಮೌಲ್ಯಗಳು’ ಎನ್ನುವ ಒಂದು ವಿಷಯ ಇದೆಯಾದರೂ, ಅಲ್ಲಿ ಕಲಿಸುವ ಮಾಸ್ತರುಗಳಿಗೇ ಅವುಗಳನ್ನು ಆಳವಾಗಿ ಅಥ್ರ್ಯೆಯಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಅವುಗಳ ಮಹತ್ವವನ್ನು ಪರಿಣಾಮಕಾರಿಯಾಗಿ
ಕಲಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಇಲ್ಲದಿದ್ದರೆ, ವಿವಿಗಳಿಂದ ಹೊರಬರುವ ಭಾಗಶಃ ವಿದ್ಯಾರ್ಥಿಗಳು ಮೌಲ್ಯಗಳ ಬಗೆಗೆ ಅಷ್ಟೊಂದು ಹಗುರವಾಗಿ ಮಾತನಾಡುತ್ತಿರಲಿಲ್ಲ; ‘ಮಾಧ್ಯಮದಲ್ಲಿನ ಭ್ರಷ್ಟಾಚಾರ’ವನ್ನು ಒಂದು ‘ಒಪ್ಪಿತ ಕ್ರಿಯೆ’ ಎಂದು ಭಾವಿಸುತ್ತಿರಲಿಲ್ಲ.

ನನ್ನ ಪ್ರಕಾರ, ಒಬ್ಬ ಪತ್ರಕರ್ತ ಭ್ರಷ್ಟನಾಗಲು ಆತ ಕೆಲಸ ಮಾಡುವ ಸಂಸ್ಥೆ, ಅಲ್ಲಿನ ಹಿರಿಯ ಸಹೋದ್ಯೋಗಿಗಳೂ ಕಾರಣವಾಗುತ್ತಾರೆ. ಏಕೆಂದರೆ, ಅವರ ‘ಸಹಕಾರ’ ಇರದಿದ್ದರೆ. ಆತ ಭ್ರಷ್ಟನಾಗಲು ಸಾಧ್ಯವೇ ಇಲ್ಲ. ಕೆಲಸ ಮಾಡುವ ಸಂಸ್ಥೆ, ಅಲ್ಲಿನ ಹಿರಿಯ ಸಹೋದ್ಯೋಗಿಗಳು ಉದ್ದೇಶಪೂರ್ವಕವಾಗಿಯೇ ಅವನಿಗೆ ಸಹಕಾರ ಕೊಡಬೇಕೆಂದಿಲ್ಲ. ಅವರ ಮುಗ್ಧತೆ, ನಿರ್ಲಕ್ಷ್ಯವನ್ನು ಭ್ರಷ್ಟ ಪತ್ರಕರ್ತರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಒಬ್ಬ ಪತ್ರಕರ್ತ ಭ್ರಷ್ಟನಾಗಬಲ್ಲ ಎನ್ನುವ ಸೂಚನೆಗಳು ಆತನ ನಡವಳಿಕೆ, ಮಾತು, ಇಷ್ಟ, ಬದುಕಿನ ರೀತಿ, ಆತ ಬರೆಯುವ ವಿಷಯಗಳ ಮೇಲೆ ಸುಲಭವಾಗಿ ಆತನ ಸಹೋದ್ಯೋಗಿಗಳು ಗುರುತಿಸಬಲ್ಲರು. ಅಂತಹ ಭ್ರಷ್ಟರ ಮೇಲೆ ಆ ಸಂಸ್ಥೆಯಲ್ಲಿನ ಹಿರಿಯ ಸಹೋದ್ಯೋಗಿಗಳು, ಸಂಪಾದಕರು ಒಂದು ಕಣ್ಣಿಟ್ಟರೆ ಭ್ರಷ್ಟಾಚಾರವನ್ನು ಮೂಲದಲ್ಲೇ ಚಿವುಟಬಹುದು.

ಮಾಧ್ಯಮದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಮಾಡುವಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ ಮಾಡುತ್ತಿರುವ ಪ್ರಯತ್ನ ಇಲ್ಲಿ ಉಲ್ಲೇಖಾರ್ಹ. ಪ್ರತೀ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆ ಸಮಯದಲ್ಲಿ ಅವರು ತಮ್ಮ ಪತ್ರಿಕೆಗಳಲ್ಲಿ ದಪ್ಪಕ್ಷರಗಳಲ್ಲಿ, ಎಲ್ಲರಿಗೂ ಸುಲಭವಾಗಿ ಹಾಗೂ ತಕ್ಷಣ ಕಾಣುವ ಸ್ಥಳದಲ್ಲಿ ‘ನಾವು ಕಾಸಿಗಾಗಿ ಸುದ್ದಿ ಪ್ರಕಟಿಸುವುದಿಲ್ಲ’ ಎಂದು ಪ್ರಕಟಿಸುತ್ತಾರೆ, ಹಾಗೆ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಯಾವುದಾದರೂ ದೂರುಗಳಿದ್ದರೆ ತಿಳಿಸಲು ಹಿರಿಯ ಸಿಬ್ಬಂದಿಗಳ ದೂರವಾಣಿ ಸಂಖ್ಯೆಗಳನ್ನು ಕೊಟ್ಟಿರುತ್ತಾರೆ. ತಮ್ಮ ಪತ್ರಿಕೆಗಳಲ್ಲಿ ‘ಕಾಸಿಗಾಗಿ ಸುದ್ದಿ’ ನುಸುಳದಂತೆ ಎಚ್ಚರಿಕೆವಹಿಸಿ, ತಮ್ಮ ಪತ್ರಿಕೆಗಳ ಪ್ರಾಮಾಣಿಕತೆ, ಐಕ್ಯತೆ, ಘನತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದನ್ನು ಎಲ್ಲರೂ ಅನುಕರಿಸಿದರೆ, ಚುನಾವಣೆ ಸಂದರ್ಭಗಳಲ್ಲಿ (ಮಾಧ್ಯಮದಲ್ಲಿ) ನಡೆಯಬಹುದಾದ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.

-ರಾಜು ಎಸ್. ವಿಜಾಪುರ
ಹಿರಿಯ ಪತ್ರಕರ್ತರು, ಡೆಕ್ಕನ್ ಹೆರಾಲ್ಡ್, ಹುಬ್ಬಳ್ಳಿ.


ಹಿಂದೆ ಇತ್ತು, ಇಷ್ಟಿರಲಿಲ್ಲ!

ಚುನಾವಣಾ ಸಮಯದಲ್ಲಿ ಹಲವಾರು ಖಾಸಗಿ ಚಾನಲ್‍ಗಳು ಹೇಗಾದರೂ ಮಾಡಿ ಒಳ್ಳೆಯ ಫಸಲು ತೆಗೆಯಬೇಕು ಎಂಬ ಧ್ಯೇಯೋದ್ದೇಶದಿಂದ ಕಣ್ಣುಬಿಟ್ಟು, ಚುನಾವಣೆ ಮುಗಿದ ಬಳಿಕ ಕಣ್ಮುಚ್ಚಿದ್ದನ್ನು ನೋಡಿದ್ದೇವೆ. ಸ್ಯಾಟಲೈಟ್ ಚಾನಲ್ ಸಹವಾಸ ಬೇಡ, ಯುಟ್ಯೂಬ್ ಚಾನೆಲ್ ಸಾಕು, ಸುಮಾರಾಗಿ ಕಲೆಕ್ಷನ್ ಮಾಡಿಕೊಳ್ಳೋಣ ಎಂಬುವವರೂ ಇದ್ದಾರೆ. ಕೆಲವು ಸುದ್ದಿ ವಾಹಿನಿಗಳು ಹಣ ಮಾಡುವ ಕಾಯಕಕ್ಕೆ ಇಳಿದಿವೆ. ಬೆದರಿಕೆ ಹಾಕಿ ವಸೂಲಿ ಮಾಡುತ್ತಾರೆ ಎಂದು ಚಾನೆಲುಗಳಲ್ಲಿ ಇರುವವರೇ ಒಬ್ಬರ ಮೇಲೊಬ್ಬರು ಕೆಸರು ಎರಚುವುದಕ್ಕೆ ನಾನು ಸ್ವತಃ ಸಾಕ್ಷಿ.

ಮಾಧ್ಯಮರಂಗದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುದು ರಾಜಕಾರಣಿಗಳು, ಅಧಿಕಾರಿವರ್ಗ ಹಾಗೂ ಜನಸಾಮಾನ್ಯರ ಅನುಭವಕ್ಕೆ
ಬಂದುಬಿಟ್ಟಿದೆ. ಇತ್ತೀಚೆಗಿನ ಕೆಲ ವರ್ಷಗಳಲ್ಲಿ ನಡೆದ ಘಟನೆಗಳು ಸಾರ್ವತ್ರಿಕ ಅಭಿಪ್ರಾಯವನ್ನು ಪುಷ್ಠೀಕರಿಸಿವೆ. ಇಂತಹ ಘಟನೆಗಳು, ಮಾಧ್ಯಮದವರನ್ನು ಅಪನಂಬಿಕೆಯಿಂದ ನೋಡುತ್ತಿದ್ದ ಕಣ್ಣುಗಳಿಗೆ ಮತ್ತು ನಾಲಿಗೆಗೆ ಸ್ವಾದಿಷ್ಟ ಅಹಾರ ನೀಡಿವೆ.

ಸುದ್ದಿ ವಾಹಿನಿಗಳು ಹುಟ್ಟಿಕೊಳ್ಳುವ ಮೊದಲು, ಮುದ್ರಣ ಮಾಧ್ಯಮದಲ್ಲಿ ಭ್ರಷ್ಟಾಚಾರ ಇರಲಿಲ್ಲವೆ? ಇತ್ತು, ಆದ ರೆ ಇಷ್ಟು ಅಗಾದ ಪ್ರಮಾಣದಲ್ಲಿ ಇರಲಿಲ್ಲ. ಇದು ನನ್ನ ನಲವತ್ತು ವರ್ಷಗಳ ವೃತ್ತಿ ಅನುಭವದ ಮಾತು. ನಾನು ಕಂಡಂತೆ, ಮುದ್ರಣ ಮಾಧ್ಯಮದಲ್ಲಿದ್ದ ಕೆಲ ಪತ್ರಕರ್ತರು ಗುಟ್ಟಾಗಿ ರಾಜಕಾರಣಿಗಳಿಂದ, ಅಧಿಕಾರಿಗಳಿಂದ ಸಹಾಯ ಪಡೆಯುತ್ತಿದ್ದರು. ಇಂದು ರಾಜಕಾರಣಿಗಳು ತಾವು ಯಾರ್ಯಾರಿಗೆ ಹಣ ನೀಡಿದ್ದೇವೆ ಎಂಬುದನ್ನು ಹೇಳಿಕೊಂಡುಬಿಡುತ್ತಾರೆ; ಹಿಂದಿನ ಕಾಲದಲ್ಲಿ ಯಾವ ರಾಜಕಾರಣಿಯೂ ಅದನ್ನು ಹೇಳುತ್ತಿರಲಿಲ್ಲ. ಹಾಗಾಗಿ ಆಗಿನ ಕಾಲದ ಪತ್ರಕರ್ತರು ಶುಧ್ಧಹಸ್ತರೆಂದು ಸ್ವಯಂ ಘೋಷಿಸಿಕೊಳ್ಳಲು ಅಡ್ಡಿಯಿಲ್ಲ!

ಪತ್ರಕರ್ತರೆಂದರೆ, ಗಡ್ಡ ಬಿಟ್ಟು, ಜುಬ್ಬ ಹಾಕಿ ಕಂಕಳಿಗೊಂದು ಚೀಲ ನೇತಾಕಿಕೊಂಡವ ಎಂದು ಗುರುತಿಸುವ ಕಾಲವಿತ್ತು. ಈಗ, ಕೆಲ ಪತ್ರಕರ್ತರು ಕೆಲಸಕ್ಕೆ ಸೇರಿದ ಐದಾರು ವರ್ಷದಲ್ಲೇ ಸ್ವಂತ ಮನೆ, ಓಡಾಡಲು ಕಾರು ಸಂಪಾದಿಸಿರುತ್ತಾರೆ. ಕನ್ನಡ ಬರೆಯಲೂ ಬಾರದ ಕೆಲವರು, ಸುದ್ದಿ ವಾಹಿನಿಗಳನ್ನು ಸೇರಿ ಕೋಟಿಕೋಟಿ ಸಂಪಾದಿಸಿಬಿಟ್ಟಿದ್ದಾರೆ; ಹೀಗೆ ಸಂಪಾದಿಸಲು ಹೋಗಿ ತಗಲಾಕೊಂಡು ನರಳಿದವರೂ ಇದ್ದಾರೆ. ನನ್ನ ಗೆಳೆಯರೊಬ್ಬರು ಹೇಳಿದ ಮಾತನ್ನು ಕೇಳಿ ಹೌಹಾರಿದೆ: ಇಂದು ಕೆಲವು ಚಾನೆಲ್ ಗಳಲ್ಲಿ ಕೆಲಸಕ್ಕೆ ಹೋದರೆ, ತಮ್ಮ ಸಂಸ್ಥೆಗೆ ಎಷ್ಟು ವರಮಾನ ತರಬಲ್ಲೆ ಎಂದು ಕೇಳುತ್ತಾರೆ, ಯಾವ ಸುದ್ದಿ ತರುವೆ ಎಂದು ಕೇಳುವುದಿಲ್ಲ.

ಮತ್ತೊಂದು ಅಪಾಯಕಾರಿ ಬೆಳವಣಿಗೆ ಪತ್ರಿಕಾರಂಗವನ್ನು ಆವರಿಸಿ ಕೊಂಡಿದೆ; ಅದು ದರಿದ್ರ ಜಾತಿ ವ್ಯವಸ್ಥೆ. ಇಂದಿನ ಕಾಲದಲ್ಲೂ ಪತ್ರಕರ್ತರು ಜಾತಿ ಮೂಲಕ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಪ್ರಾಮಾಣಿಕರಿಗೆ, ಪ್ರತಿಭಾವಂತರಿಗೆ ಅವಕಾಶವೇ ಇಲ್ಲ. ಎಲ್ಲಾ ಪತ್ರಿಕೆಗಳೂ, ಸುದ್ದಿ ವಾಹಿನಿಗಳೂ ಒಂದೇ ಜಾತಿಗೆ ಸೇರಿದವರ ಕೈಯಲ್ಲಿ ಸಿಕ್ಕಿ ನರಳುತ್ತಿವೆ. ಜನರು ಪತ್ರಿಕಾರಂಗ, ಪತ್ರಕರ್ತರ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಅದನ್ನು ಮರಳಿ ಗಳಿಸಲು, ಪತ್ರಿಕಾರಂಗದ ಪಾವಿತ್ರ್ಯ ಉಳಿಸಲು ಪ್ರಯತ್ನ ಮಾಡೋಣ.

-ಎಂ.ಸಿದ್ಧರಾಜು

ಅಧ್ಯಕ್ಷರು, ಕರ್ನಾಟಕ ಮಾಧ್ಯಮ ಅಕಾಡೆಮಿ, ಬೆಂಗಳೂರು.


ಚಿಂತಿಸಲು ಇದು ಸಕಾಲ

ಮಾಧ್ಯಮವನ್ನು ಪ್ರಜಾಪ್ರಭುತ್ವದ ಕಾವಲು ನಾಯಿ ಎಂದು ಕರೆಯುತ್ತಾರೆ. ಆದರೆ ನಾಯಿಗೆ ಒಂದು ದುರಭ್ಯಾಸ ಇದೆ. ಅದು ಪರಿಚಯಸ್ಥರನ್ನು ಕಂಡರೆ ಬೊಗಳುವುದೂ ಇಲ್ಲ, ಕಚ್ಚುವುದೂ ಇಲ್ಲ. ಅದಕ್ಕೆ ಕಳ್ಳನನ್ನು ಗುರುತಿಸುವ ಸಾಮಥ್ರ್ಯಇಲ್ಲ. ಅದಕ್ಕೆ ಗೊತ್ತಾಗುವುದು ಪರಿಚಯ ಅಥವಾ ಅಪರಿಚಿತ ಎನ್ನುವುದಷ್ಟೆ. ಇದೇ ಮಾಧ್ಯಮ ಭ್ರಷ್ಟಾಚಾರಕ್ಕೆ ಕಾರಣ. ಈ ಬಗ್ಗೆ ಚಿಂತಿಸಲು ಇದು ಸಕಾಲ.

-ರವೀಂದ್ರ ಭಟ್ಟ,

ಸಂಪಾದಕರು, ಪ್ರಜಾವಾಣಿ, ಬೆಂಗಳೂರು.

 


ಆತ್ಮ ವಿಮರ್ಶೆಯ ಕಾಲ

ಯಾರೂ, ಯಾವ ಕಾಲಕ್ಕೂ ಒಪ್ಪಲಾಗದ ಸಂಗತಿ ಭ್ರಷ್ಟಾಚಾರ. ಸಮಾಜದ ಸ್ವಾಸ್ಥ್ಯ ಕೆಡಿಸುವ ಈ ಪಿಡುಗು ತೊಡೆದುಹಾಕುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ಮಾಧ್ಯಮದೊಳಗೆ ಈ ಭ್ರಷ್ಟಾಚಾರ ಪಿಡುಗು ಆವರಸಿಕೊಳ್ಳುತ್ತಿರುವುದು ನೋವಿನ ಮತ್ತು ವಿಷಾದದ ಸಂಗತಿ. ಈ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಘಟನಾವಳಿಗಳ ನೆಪ ಇಟ್ಟುಕೊಂಡು ಸಮಾಜಮುಖಿ ಸಂಚಿಕೆ ಅಭಿಯಾನ ರೂಪಿಸಿರುವುದು ಅಭಿನಂದನೀಯ.

ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದೇ ಬಿಂಬಿತವಾಗಿರುವ ಮಾಧ್ಯಮ ತನ್ನ ಜವಾಬ್ದಾರಿಯನ್ನು ಹೊತ್ತು ಕಾರ್ಯ ನಿರ್ವಹಣೆ ಮಾಡಬೇಕೆಂಬುದು ಸಮಾಜದ ನಿರೀಕ್ಷೆ. ಆ ದೆಸೆಯಲ್ಲಿ ಹೆಜ್ಜೆ ಇಟ್ಟಿದ್ದೇವೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲು ಸಕಾಲ. ಎಲ್ಲದಕ್ಕೂ ಒಂದು ಕಾಲ ಬಂದೇ ಬರುತ್ತದೆ; ಹಾಗೆ ಮಾಧ್ಯಮ ಭ್ರಷ್ಟಾಚಾರ ಕಳಚುವ ಕಾಲ ಈಗ ಶುರುವಾಗಿದೆ ಎಂದು ನಿರೀಕ್ಷಿಸೋಣ. ನಮ್ಮ ನೈತಿಕತೆಯನ್ನು ಉಳಿಸಿಕೊಂಡಾಗ ಮಾತ್ರ ಸಮಾಜ ನಮ್ಮತ್ತ ವಿಶ್ವಾಸಪೂರ್ವಕವಾಗಿ ನೋಡಲು ಸಾಧ್ಯ. ಅದಕ್ಕಾಗಿ ನಾವು ಕಂಕಣಬದ್ಧರಾಗೋಣ.

-ಶಿವಾನಂದ ತಗಡೂರು

ಅಧ್ಯಕ್ಷರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಬೆಂಗಳೂರು.


ಮಾಲೀಕರು ಗಮನಿಸಬೇಕು

ಸಮಾಜದ ಚಿಕಿತ್ಸಕ ಸ್ಥಾನದಲ್ಲಿರಬೇಕಿದ್ದ ಮಾಧ್ಯಮ ರಂಗಕ್ಕೇ ಚಿಕಿತ್ಸೆಅಗತ್ಯವೆನ್ನುವ  ವಾತಾವರಣ ಸೃಷ್ಟಿ ಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.  ನಾನು 34 ವರ್ಷಗಳಿಂದ ಮಾಧ್ಯಮವನ್ನು ಹತ್ತಿರದಿಂದ ನೋಡಿಕೊಂಡು ಅದರೊಟ್ಟಿಗೆ ಬೆಳೆದವನು. ಸುದ್ದಿ ಗೋಷ್ಠಿಯಲ್ಲಿ ತಿಂಡಿತಿಂದರೆ, ಕಾಫಿ ಕುಡಿದರೆ ಹಂಗಾಗುವುದು ಎನ್ನುವ ಕಾರಣಕ್ಕೆ ನಿರಾಕರಿಸುತ್ತಿದ್ದ ಪತ್ರಕರ್ತರನ್ನು ನಾನು ನೋಡಿದ್ದೇನೆ. ಮಾಧ್ಯಮ ಸಂಸ್ಥೆಯ ಮಾಲೀಕರು ಕೊಡುತ್ತಿದ್ದ ಅತೀಕಡಿಮೆ ಸಂಬಳ ಪಡೆದು, ಬದುಕನ್ನು ಕಷ್ಟದಲ್ಲೇ ನಡೆಸಿ, ತಮ್ಮ ವೃತ್ತಿ ಪಾವಿತ್ರ್ಯವನ್ನು ಉಳಿಸಿಕೊಂಡು ಜೀವಿಸಿರುವ ಅದೆಷ್ಟೋ ನಿದರ್ಶನಗಳು ನಮ್ಮ ಮುಂದೆ ಇದೆ. ಅಂತ ವರಿಂದಾಗಿಯೇ ಪತ್ರಕರ್ತನೆಂದರೆ ಸಮಾಜದಲ್ಲಿ ಅಪಾರ ಗೌರವವಿತ್ತು.

ಆದರೆ ಇತ್ತೀಚೆಗೆ ಸಮಾಜದಲ್ಲಿ ಪತ್ರಕರ್ತರೆಂದರೆ ಮೂಗು ಮುರಿಯುವವರೇ  ಹೆಚ್ಚು. ಅದಕ್ಕೆ ಕಾರಣ ವೃತ್ತಿಧರ್ಮ  ಪಕ್ಕಕ್ಕಿಟ್ಟು, ಲಾಭ ಗಳಿಕೆಗೆ ಮಾಧ್ಯಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು. ಪತ್ರಕರ್ತರು ಬೆದರಿಸಿ ಹಣ ಮಾಡುತ್ತಿರುವುದು ಬಹುಚರ್ಚಿತ ವಿಷಯವಾಗಿದೆ. ಪತ್ರಕರ್ತ ವೃತ್ತಿ ಒಂದು ಸೇವೆ ಎಂಬ ಭಾವ ಕಳಚಿದೆ. ಅದು ಒಂದು ನೌಕರಿ ಎನ್ನುವಷ್ಟರ ಮಟ್ಟಿಗೆ ಬದಲಾಗಿದೆ.  ಸರ್ಕಾರಿ ನೌಕರರು ಭ್ರಷ್ಟಾಚಾರಕ್ಕೆ ಬಲಿಯಾದಂತೆ ನಮ್ಮ ಪತ್ರಕರ್ತರು ಸಹ ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಒಂದು ಸತ್ಯವನ್ನು ನಾನು ಇಲ್ಲಿ ಹೇಳಲೇ ಬೇಕು. ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ನ್ಯಾಯೋಚಿತವಾಗಿ ಸಂಬಳ ಸೌಲತ್ತುಗಳು ಸಿಗುತ್ತಿಲ್ಲ. ಕಾರಣ ಮಾಲೀಕರು ಪತ್ರಕರ್ತರನ್ನುಕಡಿಮೆ ಸಂಬಳ ಸೌಲತ್ತು ನೀಡಿ ದುಡಿಸಿಕೊಳ್ಳುವ ಪ್ರವೃತ್ತಿ ಏರುಗತಿಯಲ್ಲಿದೆ. ಸಂಬಳ ಕಡಿಮೆ ಸಿಗುವುದರಿಂದ ಬದುಕು ನಡೆಸಲು ಕಷ್ಟವಾಯಿತೆಂದು ಅನೇಕರು ಭ್ರಷ್ಟಾಚಾರದ ಆಸರೆಗೊಳಪಟ್ಟಿದ್ದಾರೆ. ಇದು ಸರಿಯಾದ ಮಾರ್ಗವಲ್ಲ. ಪತ್ರಕರ್ತನಾದವನು  ಸಮಾಜಮುಖಿಯಾಗಿ, ಸಮಾಜದ ಚಿಕಿತ್ಸಕನಾಗಿ, ಮಾರ್ಗದರ್ಶಿಯಾಗಿ, ಆದರ್ಶ ವ್ಯಕ್ತಿಯಾಗಿ ಮಾದರಿಯಾಗಿರಬೇಕು. ತನ್ನಿಂದ ಇದು ಸಾಧ್ಯವಿಲ್ಲವೆನಿಸಿದಲ್ಲಿ ಪತ್ರಕರ್ತ ವೃತ್ತಿಗೆ ಬರಬಾರದು. ಅಂತೆಯೇ ಮಾಧ್ಯಮ ಸಂಸ್ಥೆಯ ಮಾಲೀಕರು ತಾವು ನೇಮಿಸಿಕೊಳ್ಳುವ ಪತ್ರಕರ್ತನಿಗೆ ಈ ದಿನಮಾನದಲ್ಲಿ ಸಾದಾರಣ ಬದುಕು ಸಾಗಿಸುವಷ್ಟಾದರೂ ಸಂಬಳ ಸೌಲತ್ತುಗಳನ್ನು ನೀಡಿ, ಆತಗೌರವದಿಂದ ಬದುಕುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸುವ ಅಗತ್ಯಇದೆ.

-ಎ.ಎಸ್.ನಾಗರಾಜಸ್ವಾಮಿ,

ಕಾರ್ಯದರ್ಶಿ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಬೆಂಗಳೂರು.


ವ್ಯಕ್ತಿಗತ ನಿಲುವು

ಮಾಧ್ಯಮದಲ್ಲಿ ಭ್ರಷ್ಟಾಚಾರ ಎನ್ನುವುದು ಮುಖ್ಯವಾಗಿ ವ್ಯಕ್ತಿಗತವಾಗಿರುತ್ತದೆ. ಮಾಧ್ಯಮದ ಘನತೆ ಹೆಚ್ಚಿಸುವುದು ಮತ್ತು ಕುಗ್ಗಿಸುವುದು ಜರ್ನಲಿಸ್ಟ್ ಒಬ್ಬನ ವ್ಯಕ್ತಿಗತ ನಿಲುವನ್ನು ಅವಲಂಬಿಸಿರುತ್ತದೆ. ಸುಲಭವಾಗಿ ದುಡ್ಡು ಮಾಡುವುದೊಂದೇ ಜೀವನದ ಗುರಿ ಎಂದು ನಿರ್ಧರಿಸಿರು ವವ್ಯಕ್ತಿಗಳು ಯಾವುದೇ ರಂಗದಲ್ಲಿದ್ದರೂ ಭ್ರಷ್ಟಾಚಾರದ ಹಾದಿಯನ್ನು ಸುಲಭವಾಗಿ ತುಳಿಯುತ್ತಾರೆ. ಇಂಥವರು ಮಾಧ್ಯಮಕ್ಕೆ ಸೇರಿದಾಗ, ಸಾಫ್ಟ್ ಟಾರ್ಗೆಟ್‍ಗಳನ್ನು ಹುಡುಕಿ ಅಂತಹವರಿಂದ ಹಣ ಕೀಳುವ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಮಾಧ್ಯಮಸಂಸ್ಥೆಗಳು `ನಮ್ಮಹೆಸರು ದುರ್ಬಳಕೆ ಮಾಡಿಕೊಂಡು ಹಣ ಕೀಳುವ ಪ್ರಯತ್ನ ನಡೆಸುವವರ ವಿರುದ್ಧ ದೂರು ದಾಖಲಿಸಿ’ ಎಂಬ ಜಾಗೃತಿ ಮೂಡಿಸುತ್ತಿರುವುದರಿಂದ ಒಂದಷ್ಟು ಭ್ರಷ್ಟರು ಸಿಕ್ಕಿ ಬೀಳುತ್ತಿದ್ದಾರೆ.

-ಎಚ್.ವಿ.ಕಿರಣ್,

ಪ್ರಧಾನ ಕಾರ್ಯದರ್ಶಿ, ಪ್ರೆಸ್‍ಕ್ಲಬ್, ಬೆಂಗಳೂರು.


ಇಂದ್ರ, ಚಂದ್ರ, ನಂಬರ್ ಒನ್ !

ಮಾಧ್ಯಮ ಕ್ಷೇತ್ರವು ಭ್ರಷ್ಟಾಚಾರದಲ್ಲಿ ಎತ್ತಿದ ಕೈ ಎಂದು ಜನರು ಇತ್ತೀಚೆಗೆ ಮಾತನಾಡುತ್ತಿದ್ದಾರೆ. ಇದರಲ್ಲಿ ಸತ್ಯಾಂಶ ಇದೆ ಎನ್ನುವದರಲ್ಲಿ ಯಾವುದೇ ಅನುಮಾನ ಬೇಡ. ಒಂದು ಕಾರ್ಯಕ್ರಮದ ವರದಿ ಪ್ರಸಾರವಾಗಬೇಕೆಂದರೆ ಸಂಬಂಧ ಪಟ್ಟ ಮಾಧ್ಯಮದ ವರದಿಗಾರನಿಗೆ ಇಂತ್ತಿಷ್ಟು ಹಣಕೊಡಲೇಬೇಕು. ಅಧಿಕಾರಿಗಳನ್ನು, ರಾಜಕೀಯ ವ್ಯಕ್ತಿಗಳನ್ನು, ಶ್ರೀಮಂತ ವರ್ಗದವರನ್ನು ಬ್ಲಾಕಮೇಲ್ ಮಾಡುವ ಮಾಧ್ಯಮ ರಂಗದವರು ತಾವೇ ಇಂದ್ರ, ಚಂದ್ರ, ನಂಬರ್ ಒನ್‍ ಎಂದು ಪುಂಗಿ ಊದುತ್ತಾರೆ.

ಇವರ ಕೈಗೆಒಂದು ವರದಿ ಸಿಕ್ಕಾಗ ಅದರ ನೈಜತೆಯನ್ನು ಒರೆಗೆ ಹಚ್ಚಿ ಸತ್ಯಾಂಶ ಕಂಡು ಹಿಡಿಯಲು ಪ್ರಯತ್ನಿಸುವುದಿಲ್ಲ. ಬದಲಾಗಿ ಬ್ರೇಕಿಂಗ್ ನ್ಯೂಸ್‍ ಅಂತ ಹಾಕುವ ಮೂಲಕ ಸತ್ಯವನ್ನು ಮಣ್ಣು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಆ ವರದಿ ಪ್ರಸಾರ ಮಾಡಿ ಭೇಷ್ ಎನಿಸಿಕೊಳ್ಳುವುದರಲ್ಲಿ ಪೈಪೋಟೊಗಿಳಿದು ಸುಳ್ಳನ್ನೇ ಸತ್ಯವೆಂದು ಸಾರುತ್ತಾರೆ.

ಇಂತಹ ಸಂದರ್ಭದಲ್ಲಿ ಶ್ರೀಮಂತ ವರ್ಗದ ಮಾಹಾನುಭಾವರು ತಪ್ಪು ಮಾಡಿ ಅವರಲ್ಲಿ ತಗಲಿಹಾಕಿಕೊಂಡರೆ ಮುಗಿದೇ ಹೋಯಿತು ಆ ವ್ಯಕ್ತಿಯ ಕಥೆ. ಮಾಧ್ಯಮದವರಿಗೆ/ವರದಿಗಾರನಿಗೆ ಹಣ ನೀಡಿದರೆ ಅವರ ಮಾನ, ಮರ್ಯಾದೆ, ಗೌರವ ಉಳಿಯುತ್ತದೆ, ಉಳಿಸುತ್ತಾರೆ. ಹಣ ನೀಡದಿದ್ದರೆ ಅವರು ಆ ದಿನವಿಡೀ ಬ್ರೇಕಿಂಗ್ ನ್ಯೂಸ್ ಆಗುವ ಮೂಲಕ ರಾಜ್ಯಾದ್ಯಂತ ಕಳಂಕಿತ ವ್ಯಕ್ತಿಯಾಗಿ ಫೇಮಸ್ ಆಗಬೇಕು.ಇಂತಹ ಸಂಕಷ್ಟದ ಸಹವಾಸ ಬೇಡವೇ ಬೇಡ ಎಂದು ಅನೇಕ ಜನರು ಹಣವನ್ನುತೆತ್ತು ಸುಮ್ಮನಾಗುತ್ತಾರೆ. ಈ ರೀತಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಇಂದಿನ ಮಾಧ್ಯಮಗಳ ಬಗ್ಗೆ ಜನರಲ್ಲಿ ರೋಷ, ಆವೇಶಗಳು ಮನೆ ಮಾಡಿವೆ. ಈ ಮಾತು ಎಲ್ಲರಿಗೂ ಸಮಾನವಾಗಿ ಅನ್ವಯಿಸದು. ಈ ಕ್ಷೇತ್ರದಲ್ಲಿರುವ ಪ್ರಾಮಾಣಿಕರೇ ದಿಟ್ಟ ನಿಲುವು ತಾಳಿ ಭ್ರಷ್ಟರ ವಿರುದ್ಧ ಗಟ್ಟಿದನಿ ಎತ್ತಬೇಕಿದೆ.

ಸತ್ಯ, ಶುದ್ಧ, ಕಾಯಕ ಮಾಡುವ ದೆಸೆಯಲ್ಲಿ ಕನಿಷ್ಠ 6 ತಿಂಗಳಿಗೊಮ್ಮೆ ಮಾಧ್ಯಮ ಪ್ರತಿನಿಧಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳುವ ಬಗ್ಗೆ ಯೋಚನೆ ಮಾಡಬೇಕಾಗಿದೆ.

-ಸಂಗಮೇಶ ಎನ್. ಜವಾದಿ, ಬೀದರ.


ಪ್ರಾಮಾಣಿಕರ ದನಿ ಕ್ಷೀಣ

ಸಮಾಜದ ನಾಲ್ಕನೆ ಅಂಗ ಅನ್ನುವುದು ಕ್ಲೀಷೆ ಅಗಿಬಿಟ್ಟಿದೆ. ಯಾವಾಗ ದೃಶ್ಯ ಮಾಧ್ಯಮದ ಭರಾಟೆ ಹೆಚ್ಚಿತೋ, ಅರೆ ಬೆಂದಮಿದುಳುಗಳು ಪತ್ರಕರ್ತರಾದರೋ, ರಾಜಕಾರಣಿಗಳ ಹೂಡಿಕೆ ಅದರಲ್ಲಾಯಿತೋ ಅಂದೇ ಅವನತಿ ಪ್ರಾರಂಭವಾಯಿತು. ಪತ್ರಕರ್ತರನ್ನು ನೋಡುವ ನೋಟವೇ ಬದಲಾಯಿತು. ಎಲ್ಲರೂ ಗೋಬೆಲ್ಲನ ತಾತನಂತೆ ಕಾಣತೊಡಗಿದರು. ಪ್ರಾಮಾಣಿಕರ ದನಿಯಾವಾಗಲೂ ಕ್ಷೀಣ, ಅಬ್ಬರ ಆಡಂಬರದ ನಡುವೆ ಅಸ್ತಿತ್ವಕ್ಕೆ ಧಕ್ಕೆ. ಎದ್ದದೂಳು ನಿಂತಮೇಲೆ, ಕೋಲಾಹಲದ ದನಿ ಅಡಗಿದ ಮೇಲೆ ಅವು ಕಾಣಬಹುದು, ಕೇಳಿಸ ಬಹುದು ಎಂಬುದು ಆಶಯ.

-ಭಾಸ್ಕರ ಹೆಬ್ಬಾರ್, ಕುಂದಾಪುರ.

ಖಂಡನಾರ್ಹ

ಹೌದು ಇಂಥ ಭ್ರಷ್ಟ ಪತ್ರ ಕರ್ತರಿಂದಾಗಿ ಸತ್ಯ ಸಂಧ ಪತ್ರಕರ್ತರಿಗೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಎಲ್ಲ ಪತ್ರಿಕಾ ಬಳಗದವರು ಇದನ್ನು ಒಕ್ಕೊರಲಿನಿಂದ ಖಂಡಿಸಬೇಕು.  ಮತ್ತು ನಾನಿದನ್ನು ಬಲವಾಗಿ ಖಂಡಿಸುತ್ತೇನೆ.

-ತನುಜಾಆರ್.ಎನ್.,

ಹಿರಿಯ ಉಪ ಸಂಪಾದಕಿ, ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ.

ಸರಿಯಾದ ಪಾಠ

ಪ್ರಸ್ತುತ ಮಾಧ್ಯಮರಂಗದ ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರದ ಸ್ವರೂಪಗಳಲ್ಲಿ ಹೋಳಿ ಹುಣ್ಣಿಮೆಯ ರಂಗು ಮೀರಿಸುವ ಅದೆಷ್ಟು ಬಣ್ಣಗಳು…! (ಸಮಾಜಮುಖಿ ಸಂಪಾದಕೀಯ). ನನ್ನಮನಸ್ಸಿನ ಮಾತುಗಳನ್ನೇ ಹೇಳಿದಂತಿರುವ ಈ ಸಾಲುಗಳು ಬಹಳ ಇಷ್ಟವಾದವು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಕರೆಯಲ್ಪಡುವ ಮಾಧ್ಯಮಗಳು ಇನ್ನಿಲ್ಲದಂತೆ ಕೆಟ್ಟುಹೋಗಿ,ತಮ್ಮದೇ ಲಾಜಿಕ್‍ನಿಂದ ಸಮರ್ಥನೆಗೂ ಇಳಿದಿರುವ ಭ್ರಷ್ಟರ ವಿರುದ್ಧ ದನಿ ಎತ್ತಿರುವುದು (ಅದೇ ಮಾಧ್ಯಮದಲ್ಲಿ ಇದ್ದುಕೊಂಡೇ) ದಿಟ್ಟ ಹೆಜ್ಜೆ. ಬೆಕ್ಕಿಗೆ ಗಂಟೆ ಕಟ್ಟುವರಾರು ಎನ್ನುವ ರೀತಿಯಲ್ಲಿ ಬಿಲ ಸೇರಿಕೊಳ್ಳುವ ಸುದ್ದಿ ಮಾಧ್ಯಮಗಳಿಗೆ ಸರಿಯಾದ ಪಾಠವನ್ನೇ ಹೇಳಿದ್ದೀರಿ.

ಕೆ.ಎಸ್.ಚಂದ್ರಶೇಖರ, ಬಳ್ಳಾರಿ.

ನಾವೂ ನಿಮ್ಮೊಡನೆ

ಸಮಾಜಮುಖಿ ಚಿಂತನೆಗಳ ಹರವು ವಿಸ್ತಾರವಾಗಿದೆ. ತಾವು ಹೇಳಿದಂತೆ ಪತ್ರಿಕಾ ಮಾಧ್ಯಮದಲ್ಲಿ ಪವಿತ್ರತೆ ಉಳಿದಿಲ್ಲ; ಉದ್ಯಮವಾಗಿದೆ. ಇಂಥದ್ದರ ವಿರುದ್ಧದ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ. ಸದಾ ನಿಮ್ಮೊಡನೆ ನಾವೂ…

-ಸಂಕಮ್ಮ, ಬ್ಯಾಡಗಿ.

ತುರ್ತು ಅಗತ್ಯ

ಇಂದಿನ ತುರ್ತು ಅಗತ್ಯದ ಬಗ್ಗೆ ಬರೆದಿದ್ದೀರಿ. ಅಪ್ಪಾಜಿಯನ್ನು ಇಂಥ ಒಂದು ಉತ್ಕೃಷ್ಟ ಸಂದರ್ಭದಲ್ಲಿ ನೆನಪಿಸಿಕೊಂಡದ್ದಕ್ಕೆ ಧನ್ಯವಾದಗಳು.

-ರವಿ ಕೋಟಿ, ಸಂಪಾದಕರು, ಆಂದೋಲನ, ಮೈಸೂರು.

ಆಂದೋಲನದ ಬದ್ಧತೆ

ತುಂಬಾ ಸಮಯೋಚಿತ ಮತ್ತು ಅಗತ್ಯವಿದ್ದ ವಿಷಯವಿದು. ‘ಬೆಂಝ್‍ಕಾರು’ ಒಡೆಯರಾದರೂ, ಪತ್ರಿಕೆಯ ಒಡಲಾಳದಲ್ಲಿ ಹಲವಾರು ಅಸಮಾಧಾನಗಳಿದ್ದರೂ ‘ಆಂದೋಲನ ಪತ್ರಿಕೆ’ ತನ್ನ ಸಮಾಜವಾದಕ್ಕೆ ಬಧ್ಧವಾಗಿತ್ತು. ಆ ಕೆಲ ಹಂತಗಳನ್ನು ಹತ್ತಿರದಿಂದ ನೋಡಿದ ಅದೃಷ್ಟ ನನ್ನದು.

-ವಿನತೆ ಶರ್ಮ,ಆಸ್ಟ್ರೇಲಿಯಾ.

ನಿಯಮ!

ಮಾಧ್ಯಮ ರಂಗದ ಭ್ರಷ್ಟಾಚಾರ ಎಂಬುದು ಅಪವಾದವಾಗಿ ಉಳಿದಿಲ್ಲ; ನಿಯಮ… ನಿಯಮ ಆಗಿ ಚಲಾವಣೆಯಲ್ಲಿದೆ!

-ಡಾ.ಟಿ.ಆರ್.ಚಂದ್ರಶೇಖರ, ಹೊಸಪೇಟೆ.

Leave a Reply

Your email address will not be published.